More

    ಡಿಜಿಟಲ್ ಜಾಗೃತಿ ಅಗತ್ಯ; ವಂಚನೆಗೆ ನಾನಾ ವಿಧ, ಎಚ್ಚರವೇ ಪರಿಹಾರ..

    ಜಾಗತಿಕ ಆರ್ಥಿಕ ವ್ಯವಸ್ಥೆ ಈಗ ಹೆಚ್ಚೆಚ್ಚು ಡಿಜಿಟಲ್​ವುಯವಾಗುತ್ತಿದೆ. ಮಾರುಕಟ್ಟೆಯಲ್ಲಿ ನಗದಿನ ಹರಿವು ಕಡಿಮೆಯಾಗಿ, ಮೊಬೈಲ್ ಮುಖಾಂತರವೇ ಹಣಕಾಸು ವ್ಯವಹಾರಗಳನ್ನು ನಡೆಸುವ ಪದ್ಧತಿ ಜನಪ್ರಿಯವಾಗುತ್ತಿದೆ. ಅದರಲ್ಲೂ ಕರೊನೊತ್ತರ ದಿನಗಳಲ್ಲಿ ಈ ವಿಧಾನ ಇನ್ನಷ್ಟು ಪ್ರಚಲಿತಕ್ಕೆ ಬರುತ್ತಿದೆ. ಅನೇಕ ಖಾಸಗಿ ಕಂಪನಿಗಳು ಡಿಜಿಟಲ್ ವೇದಿಕೆಗಳನ್ನು ಸೃಷ್ಟಿಸಿದ್ದು, ವ್ಯವಹಾರದ ವ್ಯಾಕರಣವನ್ನೇ ಬದಲಿಸಿವೆ. ಭಾರತ ಸರ್ಕಾರ ಸಹ ಭೀಮ್ ಆಪ್ ಅನ್ನು ಈಗಾಗಲೇ ಬಳಕೆಗೆ ತಂದಿದೆ.

    ತ್ವರಿತ ಮತ್ತು ಪಾರದರ್ಶಕ ವ್ಯವಹಾರಕ್ಕೆ ಇದರಿಂದ ಅನುಕೂಲ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಇದು ಸಕಾರಾತ್ಮಕ ಬೆಳವಣಿಗೆಯೇ ಸರಿ. ಹೀಗಿದ್ದರೂ, ಇಲ್ಲಿ ಎಚ್ಚರವಹಿಸಲೇಬೇಕಾದ ಅನೇಕ ಸಂಗತಿಗಳಿರುವುದನ್ನು ಜನರು ಮರೆಯಬಾರದು. ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನೂರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಶೇರ್​ಹ್ಯಾಶ್ ಸಂಸ್ಥೆಯ ನಿರ್ದೇಶಕರು ಸೇರಿ ನಾಲ್ವರನ್ನು ಬಂಧಿಸಿರುವದು ಈ ನಿಟ್ಟಿನಲ್ಲಿನ ಲೇಟೆಸ್ಟ್ ಪ್ರಕರಣ. ಆರೋಪಿಗಳು 44 ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದ 15 ಕೋಟಿ ರೂ.ನ್ನು ಸ್ತಂಭನಗೊಳಿಸಲಾಗಿದೆ. 1.650 ಕೆಜಿ ಚಿನ್ನ, 78 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.

    2021ರ ಲಾಕ್​ಡೌನ್ ಸಮಯದಲಿ ್ಲ ಶೇರ್​ಹ್ಯಾಶ್ ಗ್ರೂಪ್​ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಶೇರ್​ಹ್ಯಾಶ್ ಆಪನ್ನು ಇನ್​ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ ಹೆಲಿಯಮ್ ಕ್ರಿಪ್ಟೋ ಟೋಕನ್ (ಎಚ್​ಎನ್​ಟಿ) ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದರು. ಅಲ್ಲದೆ, ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡುವ ಭರವಸೆ ಕೊಟ್ಟಿದ್ದರು. ಆದರೆ ಕಂಪನಿ ಹೇಳಿದ ಮಾತಿನಂತೆ ನಡೆದುಕೊಂಡಿಲ್ಲ ಎಂದು ಕೆಲವರು ಪೊಲೀಸ್ ದೂರು ನೀಡಿದಾಗ ಜಾಲ ಬಯಲಾಗಿದೆ. ಈ ಪ್ರಕರಣದ ಪ್ರಮುಖ ಸೂತ್ರಧಾರ ವಿದೇಶಿ ಪ್ರಜೆ ಎಂಬ ಸುಳಿವು ಸಿಕ್ಕಿದೆ. ವಿಸõತ ಪೊಲೀಸ್ ತನಿಖೆಯಿಂದ ಈ ಪ್ರಕರಣದ ಆಳಅಗಲ ಹೊರಬರಬೇಕಿದೆ. ಆದರೆ ಹಣ ಹೂಡಿಕೆ ಮಾಡಿರುವವರು ಸದ್ಯಕ್ಕಂತೂ ತಲೆಮೇಲೆ ಕೈಹೊತ್ತು ಕೂರುವ ಸನ್ನಿವೇಶ ಉದ್ಭವಿಸಿದೆ.

    ಈಚಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಎಂಬುದು ಆಕರ್ಷಕ ಪದಪುಂಜವಾಗಿದ್ದು, ವಿಶೇಷವಾಗಿ ಯುವಜನರನ್ನು ಹೆಚ್ಚು ಸೆಳೆಯುತ್ತಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಅಗಾಧವಾಗಿ ಬೆಳೆಯುವ ಸಾಧ್ಯತೆಯನ್ನು ತಜ್ಞರು ಅಂದಾಜಿಸಿದ್ದಾರೆ. ಭಾರತ ಸರ್ಕಾರ ಕ್ರಿಪ್ಟೊ ಕರೆನ್ಸಿಯನ್ನು ನಿಷೇಧಿಸಿಲ್ಲ; ಆದರೆ ಅದರ ಮೇಲಿನ ಆದಾಯಕ್ಕೆ ತೆರಿಗೆ ವಿಧಿಸುವುದಾಗಿ ಹೇಳಿದೆ. ಈ ವ್ಯವಹಾರಕ್ಕೆ ಅಡಿಯಿಡುವವರು ಸಮಗ್ರ ಮಾಹಿತಿ ಹೊಂದಿರಬೇಕಲ್ಲದೆ ಹೆಚ್ಚಿನ ಜಾಗರೂಕತೆಯನ್ನೂ ವಹಿಸಬೇಕಾಗುತ್ತದೆ. ಏಕೆಂದರೆ ಡಿಜಿಟಲ್ ವೇದಿಕೆಯಲ್ಲಿ ಜಗತ್ತಿನ ಎಲ್ಲಿ ಬೇಕಾದರೂ ಕುಳಿತು ವಂಚನೆಯ ಜಾಲವನ್ನು ಬೀಸಬಹುದು. ವಿದೇಶಿ ಉಡುಗೊರೆ ಆಮಿಷ, ಬ್ಯಾಂಕ್ ಮಾಹಿತಿ ಅಪ್ಡೇಟ್… ಹೀಗೆ ನಾನಾ ವಿಧದಲ್ಲಿ ಜನರು ವಂಚನೆಗೀಡಾಗುತ್ತಲೇ ಇದ್ದಾರೆ. ಹೀಗಾಗಿ ಡಿಜಿಟಲ್ ಸಾಕ್ಷರತೆಯತ್ತ ಹೆಚ್ಚು ಗಮನಹರಿಸಬೇಕಾದ ಅಗತ್ಯವಿದೆ. ಇದರ ಜತೆಗೆ, ಸೈಬರ್ ಅಪರಾಧಗಳನ್ನು ತ್ವರಿತವಾಗಿ ಪತ್ತೆಹಚ್ಚಿ, ಜನರಿಗೆ ನ್ಯಾಯ ಒದಗಿಸಲು ಸೈಬರ್ ಪೊಲೀಸ್ ವಿಭಾಗವನ್ನೂ ಬಲಪಡಿಸಬೇಕಾದುದು ಈಗಿನ ತುರ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts