More

    ಉತ್ತಮ ಯೋಜನೆ; ಪರಿಣಾಮಕಾರಿ ಅನುಷ್ಠಾನ ಮುಖ್ಯ..

    ಕೇಂದ್ರದಲ್ಲಿ ಸಚಿವರಾದ ನಂತರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್, ಎ.ನಾರಾಯಣಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಅವರು ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ಈಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದ ಬಹುಪಾಲು ಸಮಯ ಗದ್ದಲದಲ್ಲೇ ಕಳೆದುಹೋದದ್ದರಿಂದ, ಹೊಸ ಸಚಿವರನ್ನು ಸದನಕ್ಕೆ ಖುದ್ದಾಗಿ ಪರಿಚಯಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶ ಈಡೇರಲಿಲ್ಲ. ಈ ಕಾರಣಕ್ಕಾಗಿ ನೂತನ ಸಚಿವರಿಗೆ ವಿಭಿನ್ನ ಸ್ವಾಗತ ನೀಡುವ ಹಾಗೂ ಜನರ ನಡುವೆ ಅವರನ್ನು ಕರೆದುಕೊಂಡು ಹೋಗುವ ಉದ್ದೇಶದಿಂದ ಬಿಜೆಪಿ ಈ ಜನಾಶೀರ್ವಾದ ಯಾತ್ರೆಯನ್ನು ಆಯೋಜಿಸಿದೆ. ಈ ಯಾತ್ರೆಗೆ ಭರ್ಜರಿ ಸ್ಪಂದನೆಯೂ ವ್ಯಕ್ತವಾಗುತ್ತಿರುವುದರಿಂದ ಆಯೋಜಕರು ಸಹಜವಾಗಿಯೇ ಖುಷಿಯಾಗಿರಬಹುದು. ಇದರ ಜತೆಗೆ, ಸಚಿವರು ಪ್ರಸ್ತಾಪಿಸುತ್ತಿರುವ ಕೆಲ ವಿಷಯಗಳು, ಅದರಲ್ಲೂ ವಿಶೇಷವಾಗಿ ಕೃಷಿಸಂಬಂಧಿ ವಿಚಾರಗಳು ಗಮನಾರ್ಹವಾಗಿವೆ.

    ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಬಲನೀಡುವ ಉದ್ದೇಶದಿಂದ 10 ಸಾವಿರ ಕೃಷಿ ಉತ್ಪಾದಕರ ಸಂಘಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ರಫ್ತಿನ ಬೇಡಿಕೆ ಆಧರಿಸಿ ಸ್ವಸಹಾಯ ಸಂಘಗಳು ಮತ್ತು ಸಹಕಾರ ಸಂಘಗಳ ಮೂಲಕ ಈ ಉತ್ಪಾದಕರ ಸಂಘಗಳನ್ನು ರಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇಂಥ ಸಂಘಗಳಿಂದ ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಹಾಗೂ ಸೂಕ್ತ ಬೆಲೆ ದೊರೆಯುವ ಆಶಾಭಾವನೆ ಇದೆ. ಕರ್ನಾಟಕದಲ್ಲಿ ರೈತರ ಬೆಳೆ ಸಮೀಕ್ಷೆಗಾಗಿ ಮೊಬೈಲ್ ಆಪ್ ಬಳಸಲಾಗುತ್ತಿದ್ದು, ಈ ಕ್ರಮವನ್ನು ದೇಶದ ಇತರ ರಾಜ್ಯಗಳಿಗೂ ವಿಸ್ತರಿಸಲಾಗುವುದೆಂದು ಸಚಿವೆ ಶೋಭಾ ಹೇಳಿದ್ದಾರೆ. ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ ಅವರು ಇನ್ನೊಂದು ಆಲೋಚನೆ ಮುಂದಿಟ್ಟಿದ್ದಾರೆ. ಇನ್ನುಮುಂದೆ ಯೂರಿಯಾ ರಸಗೊಬ್ಬರದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು; ಒಂದು ಗ್ರಾಂ ಯೂರಿಯಾವನ್ನು ಸಹ ಹೊರಗಿನಿಂದ ತರಿಸುವುದಿಲ್ಲ. ಆತ್ಮನಿರ್ಭರ ಯೋಜನೆಯಡಿ, ದೇಶದ ರೈತರಿಗೆ ಬೇಕಾಗುವಷ್ಟು ಗೊಬ್ಬರ ಉತ್ಪಾದಿಸಿ ವಿತರಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ದೇಶದ ನಾಲ್ಕು ಕಡೆಗಳಲ್ಲಿ ಗೊಬ್ಬರ ತಯಾರಿಕಾ ಕಾರ್ಖಾನೆಗಳು ಕಾರ್ಯಾರಂಭಿಸಲಿವೆ ಎಂದು ಅವರು ತಿಳಿಸಿದ್ದಾರೆ. ಈ ಭರವಸೆ ಕಾರ್ಯರೂಪಕ್ಕೆ ಬಂದಲ್ಲಿ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ಉಳಿತಾಯವಾಗಲಿದೆ.

    ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಮೋದಿ ಸರ್ಕಾರ ಪುನರುಚ್ಚರಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಸಹ ಪ್ರಕಟಿಸಿದೆ. ಆದರೆ ಕರೊನಾ ಕಾರಣದಿಂದಾಗಿ ಎಲ್ಲ ರಂಗಗಳಂತೆ ಕೃಷಿ ಕ್ಷೇತ್ರದಲ್ಲಿಯೂ ಹಲವು ಬದಲಾವಣೆಗಳು, ಏರಿಳಿತಗಳು ಆಗಿವೆ. ಹೀಗಾಗಿ, ಅಂದುಕೊಂಡಂತೆ ಕೆಲಸಗಳು ನಡೆಯುತ್ತಿಲ್ಲ. ಹೀಗಿದ್ದರೂ, ಕೃಷಿ ರಂಗದ ಬಗ್ಗೆ ಜನರು ಭ್ರಮನಿರಸನಗೊಳ್ಳದಂತೆ, ಉತ್ಸಾಹ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ. ಜತೆಗೆ, ಪ್ರಕಟಿಸಿದ ಯೋಜನೆಗಳು ಬರಿ ಬಾಯಿಮಾತಿನದಾಗದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಕಾಳಜಿವಹಿಸಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts