More

    ಶಾಂತಿ ಸ್ಥಾಪನೆಯಾದೀತೆ?; ತಾಲಿಬಾನ್ ಉಪಟಳದಿಂದ ಭಾರತಕ್ಕೂ ಆತಂಕ

    ಕಳೆದ ಇಪ್ಪತ್ತು ವರ್ಷಗಳಲ್ಲಿ ವಿವಿಧ ತಿರುವುಗಳನ್ನು, ಹಿಂಸೆಯ ಕರಾಳ ಮುಖಗಳನ್ನು ಕಂಡ ಅಫ್ಘಾನಿಸ್ತಾನ ಈಗ ಮಹತ್ವದ ಹಂತಕ್ಕೆ ಹೊರಳಿ ನಿಂತಿದೆ. ಆಫ್ಘನ್​ನಿಂದ ಅಮೆರಿಕ ಮತ್ತು ನ್ಯಾಟೊ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿವೆ. ಈ ಸೆಪ್ಟೆಂಬರ್ 11ರೊಳಗೆ ಅಮೆರಿಕ ಪಡೆಗಳು ವಾಪಸ್ ಆಗಲಿವೆ. 2001 ಸೆಪ್ಟೆಂಬರ್ 11ರಂದು ನ್ಯೂಯಾರ್ಕ್​ನ ವಿಶ್ವ ವ್ಯಾಪಾರ ಕೇಂದ್ರ ಮತ್ತು ವಾಷಿಂಗ್ಟನ್​ನಲ್ಲಿರುವ ಅಮೆರಿಕದ ರಕ್ಷಣಾ ಇಲಾಖೆಯ ಕಾರ್ಯಾಲಯವಾದ ಪೆಂಟಗನ್ ಮೇಲೆ ಅಲ್-ಕೈದಾ ಭಯೋತ್ಪಾದಕರು ದಾಳಿಯೆಸಗಿದ ನಂತರ ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ಸಮರ ಘೊಷಿಸಿದ ಅಮೆರಿಕ ಆಫ್ಘಾನ್​ನಲ್ಲಿ ಸೇನೆ ನಿಯೋಜಿಸಿತ್ತು. ಉಗ್ರ ಒಸಾಮಾ ಬಿನ್ ಲಾಡೆನ್ ಹತನಾದ ಬಳಿಕ ಶಾಂತಿಸ್ಥಾಪನೆ ನಿಟ್ಟಿನಲ್ಲಿ ಆಫ್ಘಾನ್ ಸರ್ಕಾರಕ್ಕೆ ಸೇನಾಪಡೆಗಳು ನೆರವಾದವು. 2020ರ ಫೆಬ್ರವರಿ 20ರಂದು ಅಮೆರಿಕ ಮತ್ತು ತಾಲಿಬಾನ್ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿತು. 14 ತಿಂಗಳ ಒಳಗಾಗಿ ಪಡೆಗಳನ್ನು ಪೂರ್ಣಪ್ರಮಾಣದಲ್ಲಿ ಹಿಂದಕ್ಕೆ ಪಡೆಯುವುದಾಗಿ ಅಮೆರಿಕ ವಾಗ್ದಾನ ಮಾಡಿದರೆ, ಹಿಂಸೆಯಿಂದ ಹಿಂದೆ ಸರಿಯುವುದಾಗಿ ತಾಲಿಬಾನ್ ಉಗ್ರರು ಮಾತು ಕೊಟ್ಟರು. ಅಮೆರಿಕವೇನೋ ತನ್ನ ಮಾತಿನಂತೆ ನಡೆದುಕೊಳ್ಳುತ್ತಿದೆ, ಆದರೆ ತಾಲಿಬಾನ್ ಹಿಂಸೆ ತ್ಯಜಿಸಬಹುದೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಲಭ್ಯವಿಲ್ಲ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1 ಲಕ್ಷಕ್ಕೂ ಅಧಿಕ ಪಡೆಗಳು ಆಫ್ಘನ್​ನಲ್ಲಿ ಕಾರ್ಯಾಚರಿಸುತ್ತಿದ್ದವು. ಪ್ರಸಕ್ತ ಈ ಸಂಖ್ಯೆ 2500ರ ಆಸುಪಾಸಿನಲ್ಲಿದೆ.

    ಪಾಕಿಸ್ತಾನ ಪೋಷಿತ ಭಯೋತ್ಪಾದಕ ಸಂಘಟನೆಗಳಿಗೆ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ತರಬೇತಿ, ಶಸ್ತ್ರಾಸ್ತ್ರ ಮತ್ತು ಆಶ್ರಯ ನೀಡುತ್ತಿತ್ತು. ಮತ್ತು ಈ ಪಾಕ್ ಪೋಷಿತ ಉಗ್ರ ಸಂಘಟನೆಗಳು ಭಾರತದ ವಿರುದ್ಧ ಕಾರ್ಯಾಚರಿಸುತ್ತ, ಹಿಂಸೆ ಹರಡಲು ಯತ್ನಿಸುತ್ತಿದ್ದವು ಎಂಬುದು ರಹಸ್ಯವೇನಲ್ಲ. ಇಷ್ಟು ವರ್ಷಗಳವರೆಗೆ ಅಮೆರಿಕ ಮತ್ತು ನ್ಯಾಟೊ ಪಡೆಗಳ ಉಪಸ್ಥಿತಿಯಿಂದಾಗಿ ತಾಲಿಬಾನಿಗಳ ಹಾವಳಿ ನಿಯಂತ್ರಣದಲ್ಲಿತ್ತು. ಆದರೆ, ಮುಂದಿನ ಪರಿಸ್ಥಿತಿಯ ಬಗ್ಗೆ ಹಲವು ಪ್ರಶ್ನೆ, ಅನುಮಾನಗಳಿದ್ದು, ತಾಲಿಬಾನ್ ಮತ್ತೆ ತಲೆ ಎತ್ತಿದರೆ ಅದರಿಂದ ಹಲವು ರಾಷ್ಟ್ರಗಳಿಗೆ ಕಂಟಕ. ಈ ಹಿಂದೆ ತಾಲಿಬಾನ್ ಏನೆಲ್ಲ ಕೃತ್ಯಗಳನ್ನು ಮಾಡಿದೆ, ಉಗ್ರ ಸಂಘಟನೆಗಳನ್ನು ಹೇಗೆ ಪೋಷಿಸಿದೆ ಎಂಬುದನ್ನು ಜಾಗತಿಕ ವಲಯ ಸ್ಪಷ್ಟವಾಗಿ ನೋಡಿದೆ. ಅಪ್ಘಾನಿಸ್ತಾನದಲ್ಲಿ ಶಾಂತಿಸ್ಥಾಪನೆಯ ಪ್ರಕ್ರಿಯೆಯನ್ನು ಮುಂದುವರಿಸಲು ಸಹಕರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ ಹಾಗೂ ಟರ್ಕಿಗೆ ವಿನಂತಿಸಿದ್ದಾರೆ. ಆದರೆ, ಅಲ್ಲಿ ಶಾಂತಿಸ್ಥಾಪನೆಯ ಯತ್ನಕ್ಕೆ ಕೆಲ ದೇಶಗಳು ಅಡ್ಡಿಯಾಗುವ ಆತಂಕವಿದೆ. ತಾಲಿಬಾನ್​ನ್ನು ಪ್ರೋತ್ಸಾಹಿಸಲು ಪಾಕ್ ಸದಾ ಹವಣಿಸುತ್ತಿರುತ್ತದೆ. ಇವೆಲ್ಲವೂ ಕಳವಳದ ಸಂಗತಿಗಳೇ. ನಿಜಾರ್ಥದಲ್ಲಿ ಆಫ್ಘಾನ್ ನೆಲದಲ್ಲಿ ಶಾಂತಿಸ್ಥಾಪನೆಯಾದರೆ ಅದು ಮಹತ್ವದ ವಿಜಯವೇ. ಆದರೆ, ಹಿಂಸೆಯನ್ನೇ ಉಸಿರಾಡುವ ತಾಲಿಬಾನಿಗಳು ಅದಕ್ಕೆ ಅವಕಾಶ ಕೊಡುವರೇ? ಈ ಎಲ್ಲ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುವ ಜತೆಗೆ, ಭವಿಷ್ಯದ ಆತಂಕಕ್ಕೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಬಲವಾದ ಕಾರ್ಯಯೋಜನೆ ರೂಪಿಸಿಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts