Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ದುರುಪಯೋಗ ತಡೆಗಟ್ಟಿ

Wednesday, 17.05.2017, 3:00 AM       No Comments

ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಅಡಿಯಲ್ಲಿ ಮೀಸಲಿರಿಸಲಾದ ಸೀಟುಗಳಲ್ಲಿ ಭರ್ತಿಯಾಗದೆ ಉಳಿದಂಥವುಗಳನ್ನು ಮಾರಿಕೊಳ್ಳುತ್ತಿರುವ ಖಾಸಗಿ ಶಾಲೆಗಳ ಮೇಲೆ ಹದ್ದಿನಕಣ್ಣು ಇರಿಸಿ, ಅವುಗಳ ಮೇಲೆ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಸೂಚನೆ ನೀಡಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯದ ಈಡೇರಿಕೆಗೆ ಈ ಸೂಚನೆ ಮತ್ತಷ್ಟು ಬಲ ತುಂಬಲಿದೆ ಎನ್ನಲಡ್ಡಿಯಿಲ್ಲ. ಆರ್​ಟಿಇ ಮೀಸಲು ಸೀಟುಗಳನ್ನು ನೀಡಲು ಒಪ್ಪದ ಅಥವಾ ನಿರಾಕರಣೆಗೆ ಕುಂಟುನೆಪ ಒಡ್ಡುವ ಕೆಲ ಸಿಬಿಎಸ್​ಇ ಮತ್ತು ಐಸಿಎಸ್​ಇ ಶಾಲೆಗಳ ಮೇಲೆ ಈ ಹಿಂದೆ ಕೆಂಗಣ್ಣು ಬೀರಿದ್ದ ಸರ್ಕಾರ, ಹೀಗೆ ನಿಯಮ ಉಲ್ಲಂಘಿಸಿದ ಪಕ್ಷದಲ್ಲಿ ಶಾಲೆಗಳ ಮಾನ್ಯತೆಯನ್ನೇ ರದ್ದುಮಾಡುವುದಾಗಿ ಎಚ್ಚರಿಸಿತ್ತು ಎಂಬುದಿಲ್ಲಿ ಉಲ್ಲೇಖಾರ್ಹ. ಇಷ್ಟಾಗಿಯೂ, ರಂಗೋಲಿ ಕೆಳಗೆ ನುಸುಳಲು ಯತ್ನಿಸಿರುವ ಕೆಲ ಶಾಲೆಗಳು ಸೀಟು ಮಾರಾಟದ ದುಸ್ಸಾಹಸಕ್ಕೆ ಮುಂದಾದ ಕಾರಣ ಸಾರ್ವಜನಿಕರಿಂದ ಲೋಕಾಯುಕ್ತ ಕಚೇರಿಗೆ ದೂರುಗಳು ಬಂದಿದ್ದವು. ಈ ಸಂಬಂಧವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ರ್ಚಚಿಸಿ ಸಮಗ್ರ ಮಾಹಿತಿ ಪಡೆದ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂಥ ಅಕ್ರಮದಲ್ಲಿ ತೊಡಗುವ ಶಿಕ್ಷಣಸಂಸ್ಥೆಗಳಿಗೆ ಬಿಸಿಮುಟ್ಟಿಸುವಂತೆ ಆದೇಶಿಸಿದ್ದಾರೆ.

ಗುಣಮಟ್ಟದ ಶಿಕ್ಷಣವು ಸಮಾಜದ ಕೆಲವರ್ಗಗಳಿಗೆ ಗಗನಕುಸುಮವಾಗಬಾರದು, ಎಲ್ಲ ವರ್ಗಗಳಿಗೂ ಅದು ದಕ್ಕುವಂತಾಗಬೇಕು ಎಂಬ ಸದಾಶಯದೊಂದಿಗೆ ರೂಪುಗೊಂಡಿರುವಂಥದ್ದು ಶಿಕ್ಷಣ ಹಕ್ಕು ಕಾಯ್ದೆ. ಇದರ ಅನುಸಾರ, ಬಡತನರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳಿಗೆ ಪ್ರತಿ ಶಾಲೆಯಲ್ಲೂ ಶೇ. 25ರಷ್ಟು ಸೀಟುಗಳನ್ನು ನೀಡಬೇಕು ಹಾಗೂ ಶಾಲೆಯಿರುವ ಸ್ಥಳದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ನಿಯಮ. ಈ ವಿಷಯದಲ್ಲಿ ಸಂಬಂಧಪಟ್ಟ ಶಿಕ್ಷಣಸಂಸ್ಥೆಗಳು ಮತ್ತಾವುದಾದರೂ ನೆಪವೊಡ್ಡಬಹುದು ಎಂದು ಮುನ್ನಂದಾಜಿಸಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು, ಮಕ್ಕಳ ಲಭ್ಯತೆಯಲ್ಲಿ ಕೊರತೆ ಎದುರಾದ ಪಕ್ಷದಲ್ಲಿ ಪಕ್ಕದ ಪ್ರದೇಶದ ಮಕ್ಕಳನ್ನು ಪರಿಗಣಿಸಬೇಕು ಎಂದು ಸೂಚಿಸಿರುವುದು ನಿಜಕ್ಕೂ ಶ್ಲಾಘನೀಯ.

ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಾಗಿನಿಂದ (ಅಂದರೆ 2010ರ ವರ್ಷದಿಂದ), ಸಿಬಿಎಸ್​ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಬೋಧಿಸುವ ಎಲ್ಲ ಖಾಸಗಿ ಶಾಲೆಗಳೂ, ಆರ್ಥಿಕವಾಗಿ ಸಬಲರಲ್ಲದ ವರ್ಗಕ್ಕೆ ಸೇರಿದ 6ರಿಂದ 14 ವರ್ಷದವರೆಗಿನ ಮಕ್ಕಳಿಗೆ ಶೇ. 25ರಷ್ಟು ಸೀಟನ್ನು ಮೀಸಲಿರಿಸಬೇಕಾದ್ದು ಕಡ್ಡಾಯ. ಆದರೆ ಈ ನಿಯಮಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವ ಕೆಲ ಶಾಲೆಗಳ ನಡೆ ಸ್ವೀಕಾರಾರ್ಹವಲ್ಲ. ಕಾರಣ, ಶಾಲೆ ಆರಂಭಿಸುವುದಕ್ಕೂ ಮುನ್ನ ಆಯಾ ರಾಜ್ಯ ಸರ್ಕಾರಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಬೇಕಾಗಿ ಬರುವ ಇಂಥ ಶಿಕ್ಷಣಸಂಸ್ಥೆಗಳು, ಕಾಲಾನುಕಾಲಕ್ಕೆ ಸರ್ಕಾರ ಹೊರಡಿಸುವ ಆದೇಶಗಳನ್ನು ಪಾಲಿಸುವುದಕ್ಕೆ ಮತ್ತು ಷರತ್ತುಗಳನ್ನು ಅನುಸರಿಸುವುದಕ್ಕೆ ಸಮ್ಮತಿಸಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದರೆ, ಸರ್ಕಾರದಿಂದ ಅನುಮತಿ ದೊರೆಯುತ್ತಿದ್ದಂತೆ ಆದೇಶ/ನಿಯಮ/ಷರತ್ತುಗಳನ್ನು ಅನುಸರಿಸದೆ ಗಾಳಿಗೆ ತೂರುವವರಿಗೆ, ಅವರ ಧಾರ್ಷ್ಯrಕ್ಕೆ ಇಂಥ ಚುಚ್ಚುಮದ್ದು ನೀಡುವುದು ಅನಿವಾರ್ಯವಾಗುತ್ತದೆ. ಶಿಕ್ಷಣ ಹಕ್ಕು ಕಾಯ್ದೆಯ ದುರುಪಯೋಗ ತಡೆಗಟ್ಟುವುದರ ಜತೆಗೆ ಕಾಯ್ದೆಯ ಮೂಲೋದ್ದೇಶದ ಈಡೇರಿಕೆಗೆ ಈ ಆದೇಶ ಬಲತುಂಬಿದೆಯೆನ್ನಬೇಕು.

Leave a Reply

Your email address will not be published. Required fields are marked *

Back To Top