More

    ಸಂಪಾದಕೀಯ | ಉತ್ತಮ ಉಪಕ್ರಮ; ಅಡೆತಡೆ ಎದುರಿಸಿ ಅನುಷ್ಠಾನದ ಸವಾಲು

    ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ನಮ್ಮವರೇ ಆಡಳಿತ ನಡೆಸುತ್ತಿದ್ದರೂ ಜನಸಾಮಾನ್ಯರು ಕೆಲ ಪ್ರಾಥಮಿಕ ಸವಲತ್ತುಗಳಿಗಾಗಿ ಸಹ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಇನ್ನೂ ಇರುವುದು ದುರದೃಷ್ಟಕರವೆಂದೇ ಹೇಳಬೇಕು. ಕಾಲಕಾಲಕ್ಕೆ ಬಂದ ಸರ್ಕಾರಗಳು ಏನೂ ಕೆಲಸಕಾರ್ಯ ಮಾಡಿಲ್ಲ ಎಂದು ಷರಾ ಬರೆಯಲಾಗದಿದ್ದರೂ, ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಾಗಬೇಕಾದ ದಾರಿ ಇನ್ನೂ ದೂರವಿದೆ ಎಂಬುದು ಸಹ ವಾಸ್ತವ. ಅದರಲ್ಲಿಯೂ ಜನರ ಕುಂದುಕೊರತೆಗಳು, ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದು ಕಂದಾಯ ಇಲಾಖೆಯಲ್ಲಿ; ಇದು ಸಹಜ ಕೂಡಾ. ಈಗ ಇಲಾಖೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಿರುವ ಕಂದಾಯ ಸಚಿವ ಆರ್.ಅಶೋಕ್ ನಡೆಗಳನ್ನು ಜನರು ಕುತೂಹಲದಿಂದ ಗಮನಿಸುತ್ತಿದ್ದಾರೆ. ‘ಫೋನ್ ಮೂಲಕ ಪೆನ್ಶನ್’ ಎಂಬ ವಿನೂತನ ಕಾರ್ಯಕ್ರಮಕ್ಕೆ 10 ದಿನದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.

    ಫೋನ್​ನಲ್ಲಿ ‘ಹಲೋ ಕಂದಾಯ ಸಚಿವರೆ’ ಎಂದು ಹೇಳಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್ ನಂಬರ್ ಕೊಟ್ಟರೆ ಪಿಂಚಣಿ ಸಿಗುವಂತೆ ಮಾಡುವ ಯೋಜನೆ ಇದು. ಸರ್ಕಾರದ ವತಿಯಿಂದ ಸ್ಥಾಪಿಸಲಾಗುವ ಸಹಾಯವಾಣಿಗೆ ಕರೆಮಾಡಿ, ಅಗತ್ಯ ಮಾಹಿತಿ ನೀಡಿದರೆ ಮೂರು ದಿನದಲ್ಲಿ ಪಿಂಚಣಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ‘ಜನರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಬೇಕು ಎಂಬುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಜನರಿಗಾಗಿ, ಜನರಿದ್ದಲ್ಲೇ ಸರ್ಕಾರ ಎಂಬ ಯೋಚನೆಗೆ ಅಡಿಯಿಟ್ಟಿದ್ದೇವೆ. ಅದರ ಭಾಗವಾಗಿ ಗ್ರಾಮ ಒನ್ ಕೇಂದ್ರ ತೆರೆಯಲಾಗಿದೆ’ ಎಂದು ಅವರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ, ಜನರ ಮನೆಬಾಗಿಲಿಗೆ ಸರ್ಕಾರಿ ಸವಲತ್ತುಗಳನ್ನು ತಲುಪಿಸುವ ಯೋಜನೆಗೆ ಕಂದಾಯ ಇಲಾಖೆ ಚಾಲನೆ ನೀಡಿರುವುದು ಉಲ್ಲೇಖನೀಯ. ಜಮೀನು ಇತ್ಯಾದಿ ಹಲವು ದಾಖಲೆಗಳನ್ನು ತಲುಪಿಸುವ ಯೋಜನೆ ಇದಾಗಿದೆ. ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡಿ, ಸ್ಥಳೀಯ ಕುಂದುಕೊರತೆಗಳನ್ನು ಖುದ್ದಾಗಿ ತಿಳಿಯುವ ಮತ್ತು ಆದಷ್ಟು ಮಟ್ಟಿಗೆ ಅಲ್ಲೇ ಪರಿಹಾರ ನೀಡುವ ಉಪಕ್ರಮವನ್ನು ಕೈಗೆತ್ತಿಕೊಂಡಿದ್ದು, ಈವರೆಗೆ ಆರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಈವರೆಗಿನ ಗ್ರಾಮ ವಾಸ್ತವ್ಯಗಳಲ್ಲಿ 99,170 ಅರ್ಜಿ ಬಂದಿವೆ. ಕಂದಾಯ ಇಲಾಖಗೆ ಸೇರಿದ ಸುಮಾರು 87 ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಜನರು ಸರ್ಕಾರಿ ಕಚೇರಿಗೆ ಅಲೆಯುವ ಮತ್ತು ಸಣ್ಣ ಕೆಲಸಕ್ಕೂ ಅನೇಕ ದಿನ ಎಡತಾಕಬೇಕಾದ ಪರಿಪಾಠ ತಪ್ಪಿಸಬೇಕಾದ್ದು ಇಂದಿನ ತುರ್ತು ಅಗತ್ಯ. ಗ್ರಾಮೀಣ ಪ್ರದೇಶದ ಜನರು ಹತ್ತಾರು ಕಿಮೀ ದೂರದಿಂದ ಪೇಟೆಗೆ ಬಂದು, ಅಲ್ಲಿ ಆ ದಿನ ಕೆಲಸ ಆಗದಿದ್ದರೆ ಮತ್ತೆ ಬರಬೇಕಾಗುತ್ತದೆ. ಇದರಿಂದ ಸಮಯ ಹಾಗೂ ಹಣದ ನಷ್ಟ. ಈಗ ತಂತ್ರಜ್ಞಾನ ವ್ಯಾಪಕವಾಗಿ ಬೆಳೆದಿರುವುದರಿಂದ, ಸರ್ಕಾರಿ ಕೆಲಸಗಳಲ್ಲಿ ಸಾಧ್ಯವಿದ್ದಷ್ಟು ಅಳವಡಿಕೆ ಮಾಡಿಕೊಳ್ಳಬೇಕು: ಈ ಕೆಲಸ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆಯೂ ಸಾಧ್ಯವಾಗುತ್ತದೆ. ಆದರೆ, ಸುಧಾರಣೆಗಳನ್ನು ವಿರೋಧಿಸುವ ಮನಸ್ಥಿತಿಯವರ ಜತೆಗೆ ಇನ್ನೂ ಅನೇಕ ಅಡೆತಡೆಗಳು ಇದ್ದೇ ಇರುತ್ತವೆ. ಅವನ್ನೆಲ್ಲ ಮೀರುವ ಇಚ್ಛಾಶಕ್ತಿಯನ್ನು ಆಳುಗರು ಪ್ರದರ್ಶಿಸಿದರೆ ಜನಪರ ಆಡಳಿತದತ್ತ ಸಾಗಬಹುದು.

    ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

    ಕರೊನಾ ಪ್ರಕರಣ ಹೆಚ್ಚಳ, ಶಾಲೆಗಳನ್ನು ಮುಚ್ಚುವುದೇ ಕೊನೆಯ ಆಯ್ಕೆ!; ಎಲ್ಲಿ ಈ ಚಿಂತನೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts