More

    ಸಂಪಾದಕೀಯ | ಕೌಟುಂಬಿಕ ಬಂಧ ಮುಖ್ಯ; ಕ್ಷುಲ್ಲಕ ಕಾರಣಕ್ಕೂ ಹೆಚ್ಚುತ್ತಿರುವ ವಿಚ್ಛೇದನ

    ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸುವಂತೆ ಪತ್ನಿ ಬಲವಂತ ಮಾಡಿದರೆ ಅಂಥ ಸಂದರ್ಭದಲ್ಲಿ ಪತಿಗೆ ವಿಚ್ಛೇದನ ಕೇಳುವ ಹಕ್ಕು ಇರುತ್ತದೆ ಎಂದು ಕೊಲ್ಕತಾ ಹೈಕೋರ್ಟ್ ಈಚೆಗೆ ಪ್ರಕರಣವೊಂದರಲ್ಲಿ ತೀರ್ಪಿತ್ತಿರುವುದು ಕೌಟುಂಬಿಕ ಸಂಬಂಧದ ವಿಷಯದಲ್ಲಿ ಮಹತ್ವವಾದುದು. ‘ಹೆತ್ತವರನ್ನು ನೋಡಿಕೊಳ್ಳುವುದು ಮಗನ ಪವಿತ್ರ ಕರ್ತವ್ಯವಾಗಿರುತ್ತದೆ. ಪತಿಯನ್ನು ತಂದೆತಾಯಿಯಿಂದ ದೂರಮಾಡಲು ಹೆಂಡತಿ ಪೀಡಿಸಿದರೆ ಪತಿ ಡಿವೋರ್ಸ್ ಕೇಳಲು ಸಕಾರಣವಾಗಬಹುದು. ಹೆತ್ತವರು ಮಗನೊಂದಿಗೆ ವಾಸಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಸಹಜವಾದುದಾಗಿದೆ’ ಎಂದು ಕೋರ್ಟ್ ಹೇಳಿರುವುದು ಗಮನಾರ್ಹ.

    ವಿಚ್ಛೇದನಕ್ಕೆ ಪತಿಗೆ ಅವಕಾಶ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯ ಈ ತೀರ್ಪು ನೀಡಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ದೇಶಗಳಲ್ಲಿರುವಂತೆ ಸಣ್ಣಪುಟ್ಟ ಕಾರಣಗಳಿಗೂ ಬೇರೆಯಾಗುವ ರೂಢಿ ಭಾರತದಲ್ಲಿಯೂ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಪ್ರತಿ ವ್ಯಕ್ತಿಯೂ ವಿಭಿನ್ನ. ಹಾಗೇ, ಹಲವು ವ್ಯಕ್ತಿಗಳ ಒಕ್ಕೂಟವಾದ ಕುಟುಂಬದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅದನ್ನು ಮುಕ್ತ ಮನಸ್ಸಿನಿಂದ ರ್ಚಚಿಸಿ ಬಗೆಹರಿಸಿಕೊಂಡಲ್ಲಿ ಒಗ್ಗಟ್ಟು ಬಲವಾಗುತ್ತದೆ. ಇಂಥ ಸನ್ನಿವೇಶದಲ್ಲಿ ಸ್ವಲ್ಪಮಟ್ಟಿನ ತ್ಯಾಗ ಅನಿವಾರ್ಯ. ಇದರ ಬದಲು, ಅಹಂ ಮತ್ತು ಪ್ರತಿಷ್ಠೆಗೆ ಕಟ್ಟುಬಿದ್ದರೆ ತಾಳಮೇಳ ತಪ್ಪುತ್ತದೆ.

    ಹೆಚ್ಚುತ್ತಿರುವ ಆರ್ಥಿಕ ಸ್ವಾವಲಂಬನೆ, ವ್ಯಕ್ತಿಗತ ಸ್ವಾತಂತ್ರ್ಯದ ಹಂಬಲ, ವಿಶ್ವಾಸದ್ರೋಹ, ಮನೆ ವ್ಯವಹಾರದಲ್ಲಿ ಸಂಬಂಧಿಕರು ಅಥವಾ ಸ್ನೇಹಿತ ವಲಯದ ಹಸ್ತಕ್ಷೇಪ ಮತ್ತಿತರ ಕಾರಣಗಳಿಂದಾಗಿ ಕುಟುಂಬದಲ್ಲಿ ಉಂಟಾಗುವ ಅಭಿಪ್ರಾಯಭೇದ ವಿಚ್ಛೇದನ ಹಂತಕ್ಕೆ ತಲುಪುತ್ತಿರುವ ವಿಷಮ ಸನ್ನಿವೇಶವನ್ನು ಈಗ ಕಾಣುತ್ತಿದ್ದೇವೆ. ಪತಿ/ಪತ್ನಿ ಗೊರಕೆ ಹೊಡೆಯುತ್ತಾನೆ/ಳೆ ಎಂಬ ಕಾರಣಕ್ಕೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಿದರ್ಶನಗಳಿವೆ! ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳಿಂದಾಗಿ, ಒಂಟಿತನ, ಕಷ್ಟಕ್ಕೆ ಹೆಗಲಾಗುವವರಿಲ್ಲದಿರುವುದು, ಸಂವಹನ ಕೊರತೆ ಮುಂತಾದ ಸಂಕೀರ್ಣ ಸಮಸ್ಯೆಗಳನ್ನು ಆಧುನಿಕ ಸಮಾಜ ಎದುರಿಸುತ್ತಿದೆ.

    ವಿಶೇಷವಾಗಿ, ಮಕ್ಕಳು ಮತ್ತು ಹದಿಹರೆಯದವರು ಇದರಿಂದ ಬಾಧಿತರಾಗಿದ್ದಾರೆ. ಕುಟುಂಬ ವ್ಯವಸ್ಥೆ ಎಂಬುದು ಭಾರತ ವಿಶ್ವಕ್ಕೆ ನೀಡಿದ ವಿಶಿಷ್ಟ ಕೊಡುಗೆ. ಇಲ್ಲಿಯೇ ಈ ವ್ಯವಸ್ಥೆಗೆ ಪೆಟ್ಟುಬೀಳುವುದು ಅಪೇಕ್ಷಣೀಯವಲ್ಲ. ತಳಹಂತದಿಂದ ಹಿಡಿದು ಸವೋಚ್ಚ ನ್ಯಾಯಾಲಯದವರೆಗೆ ನಮ್ಮ ನ್ಯಾಯಾಂಗ ಕೂಡ, ಕಾಲಕಾಲಕ್ಕೆ ಕೌಟುಂಬಿಕ ಪದ್ಧತಿಯ ಮಹತ್ವವನ್ನು ಉಲ್ಲೇಖಿಸುತ್ತ, ಇದಕ್ಕೆ ಅನುಗುಣವಾಗಿ ತೀರ್ಪಗಳನ್ನು ನೀಡುತ್ತ ಬಂದಿದೆ. ಜಾಗತಿಕವಾಗಿ ಭಾರತದಲ್ಲಿ ವಿಚ್ಛೇದನ ದರ ಕಡಿಮೆ (ಶೇ.1.1) ಎಂಬುದು ಸ್ವಲ್ಪ ಸಮಾಧಾನದ ವಿಷಯವಾದರೂ, ಈಚಿನ ವರ್ಷಗಳಲ್ಲಿ ಭಾರತದಲ್ಲಿ ಸಹ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಿಚ್ಛೇದನ ಪ್ರಮಾಣ ಶೇ.56-60ರಷ್ಟು ಹೆಚ್ಚಳ ಕಾಣುತ್ತಿದೆ ಎಂಬ ವರದಿ ಕಳವಳ ಮೂಡಿಸುವಂಥದು. ನಮ್ಮ ದೇಶದಲ್ಲಿ ಕೇರಳದಲ್ಲಿ ವಿಚ್ಛೇದನ ಪ್ರಮಾಣ ಜಾಸ್ತಿ ಇದೆ. ಇನ್ನೇನು ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ವಿಚ್ಛೇದನ ಪರಿಹಾರವಾಗಬಹುದು. ಹೊಂದಾಣಿಕೆ ಮನೋಭಾವನೆಯನ್ನು ಹೆಚ್ಚಿಸಿಕೊಂಡು, ಅಹಂಕಾರ-ಸ್ವಪ್ರತಿಷ್ಠೆಗಳನ್ನು ಬದಿಗಿಡುವ ಮೂಲಕ, ಕುಟುಂಬ ವ್ಯವಸ್ಥೆಯ ಸ್ವರೂಪವನ್ನು ಕಾಪಾಡಿಕೊಂಡು ಹೋಗಬೇಕಾದುದು ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯ ಎಂಬ ವಿವೇಚನೆ ಎಲ್ಲರಿಗೂ ಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts