More

    ಅಪರಾಧ ನಿಯಂತ್ರಿಸಿ: ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಬೇಕು

    ದೇಶದಲ್ಲಿ ವಿವಿಧ ಬಗೆಯ ಅಪರಾಧ ಪ್ರಕರಣಗಳು ತಲ್ಲಣ ಮೂಡಿಸಿವೆ. ಪೊಲೀಸ್ ಇಲಾಖೆ, ಇತರ ತನಿಖಾ ಸಂಸ್ಥೆಗಳು ಆರೋಪಿಗಳ ಬೆನ್ನುಹತ್ತಿ, ಕಾರ್ಯಾಚರಣೆ ನಡೆಸುತ್ತವೆ ಎಂಬುದೇನೋ ನಿಜ. ಆದರೆ, ಅಪರಾಧದ ಬದಲಾಗುತ್ತಿರುವ ಸ್ವರೂಪಗಳು ಮತ್ತು ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಪೊಲೀಸ್ ಇಲಾಖೆಗೆ ಹೊಸ ತಲೆನೋವು ಸೃಷ್ಟಿಸಿದೆ. ಇಂಥ ಕೃತ್ಯಗಳ ಹಿಂದೆ ಯಾರಿದ್ದಾರೆ ಎಂದು ಶೋಧಿಸ ಹೊರಟಾಗ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳಲ್ಲಿ ವಿದೇಶಿ ಪ್ರಜೆಗಳ ಕೈವಾಡ ಸಾಬೀತಾಗಿತ್ತು ಎಂಬುದು ಗೊತ್ತಿರುವಂಥದ್ದೇ. ಅಷ್ಟೇ ಅಲ್ಲ ಅವರು ಸ್ಥಳೀಯರಿಗೆ ಹಲವು ಬಗೆಯಲ್ಲಿ ತೊಂದರೆ ನೀಡುತ್ತಿರುವುದು ಆತಂಕ ಮೂಡಿಸಿದೆ. ಅದು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿರುವುದು ಕಳವಳದ ಸಂಗತಿ. ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಬಗ್ಗೆ ಜನಪ್ರತಿನಿಧಿಗಳಿಗೆ, ಇತರ ರಾಜಕಾರಣಿಗಳಿಗೆ ಮಾಹಿತಿ ಇಲ್ಲವೆಂದೇನಲ್ಲ. ಆದರೆ, ಕೆಲವರು ಅವರನ್ನೂ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿರುವುದರಿಂದ, ಸಮಸ್ಯೆಗೆ ರ್ತಾಕ ಅಂತ್ಯ ಸಿಗುತ್ತಿಲ್ಲ.

    ಸೈಬರ್ ಅಪರಾಧ, ವೇಶ್ಯಾವಾಟಿಕೆ, ಡ್ರಗ್ಸ್ ಪೂರೈಕೆ, ಮಾನವ ಕಳ್ಳಸಾಗಣೆಯ ಗಂಭೀರ ಪ್ರಕರಣಗಳಲ್ಲಿ ವಿದೇಶಿ ಪ್ರಜೆಗಳ ಕೈವಾಡ ಇರುವುದನ್ನು ತನಿಖಾ ಸಂಸ್ಥೆಗಳು ದೃಢಪಡಿಸಿವೆ. ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದ ಜೈಲುಗಳಲ್ಲಿ 4926 ವಿದೇಶಿ ಪ್ರಜೆಗಳು ಸೆರೆಯಾಗಿದ್ದಾರೆ. ವಿಚಾರಣಾ ಕೈದಿಗಳಾಗಿ ಹಾಗೂ ಸಜಾಬಂಧಿಗಳಾಗಿ ಬಂಧಿಯಾಗಿರುವ ಇವರಲ್ಲಿ ಬಾಂಗ್ಲಾದೇಶ, ನೈಜೀರಿಯಾ, ಆಫ್ರಿಕಾ ಹಾಗೂ ನೇಪಾಳಿಗರೇ ಹೆಚ್ಚಿದ್ದಾರೆ ಎಂಬ ವಿಚಾರ ಬಯಲಾಗಿದೆ. ಪಶ್ಚಿಮ ಬಂಗಾಳದಲ್ಲಿ 1295, ಮಹಾರಾಷ್ಟ್ರ 380, ಕರ್ನಾಟಕದಲ್ಲಿ 155, ಉತ್ತರಪ್ರದೇಶದ ಜೈಲುಗಳಲ್ಲಿ 290 ಆರೋಪಿಗಳಿದ್ದಾರೆ. ಪಾಕಿಸ್ತಾನದ 107 ಪ್ರಜೆಗಳು ವಿಚಾರಣಾ ಕೈದಿಗಳಾಗಿದ್ದಾರೆ ಎಂಬುದು ಗಮನಾರ್ಹ. ಈ ಅಪರಾಧದ ಜಾಲಗಳು ಎಷ್ಟು ಆಳವಾಗಿ ಬೇರೂರಿವೆ ಮತ್ತು ಹೇಗೆ ಎಲ್ಲ ರಾಜ್ಯಗಳಲ್ಲೂ ಹರಡಿವೆ ಎಂಬುದಕ್ಕೆ ಈ ಅಂಕಿಸಂಖ್ಯೆಗಳೇ ಸಾಕ್ಷಿ.

    ಕರ್ನಾಟಕದಲ್ಲೂ ಈ ಸಮಸ್ಯೆ ಗಂಭೀರವಾಗಿದೆ. ನೈಜೀರಿಯಾ ದೇಶದ ಪ್ರಜೆಗಳು ಇಲ್ಲಿನ ಕಾನೂನನ್ನು ಉಲ್ಲಂಘಿಸುತ್ತಿರುವುದು, ಡ್ರಗ್ಸ್ ಜಾಲವನ್ನು ಹರಡುತ್ತಿರುವುದು ರಹಸ್ಯವೇನಲ್ಲ. ಹಲವೆಡೆ, ಇವರಿಂದ ಶಾಂತಿಗೆ ಭಂಗವಾದ ಘಟನೆಗಳೂ ಸಂಭವಿಸಿದ್ದುಂಟು. ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಗಡಿಪಾರು ಕಾರ್ಯಾಚರಣೆ ನನೆಗುದಿಗೆ ಬಿದ್ದಿದೆ. ಬಾಂಗ್ಲಾದೇಶದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ‘ಅಕ್ರಮ ವಿದೇಶಿ ಪ್ರಜೆಗಳನ್ನು ಮುಲಾಜಿಲ್ಲದೆ ಗಡಿಪಾರು ಮಾಡಲಾಗುವುದು’ ಎಂಬ ಗೃಹ ಸಚಿವರ ಭರವಸೆ ಈಡೇರಿಲ್ಲ. ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥವರಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮಾಡಿಕೊಡಲು ಸಹಕರಿಸುತ್ತಿರುವವರನ್ನೂ ಪತ್ತೆ ಹಚ್ಚಿ, ಶಿಕ್ಷೆಗೆ ಒಳಪಡಿಸಬೇಕು. ಇಂಥ ಸೂಕ್ಷ್ಮ ವಿಷಯಗಳಲ್ಲಿ ರಾಜಕೀಯವನ್ನು ಬೆರೆಸದೆ ದೇಶದ ಹಿತವನ್ನು ಕಾಯುವುದು ಅಗತ್ಯ.

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts