More

    ಎಚ್ಚರಿಕೆಯ ಗಂಟೆ; ಸುಸ್ಥಿರ ಅಭಿವೃದ್ಧಿಯೆಡೆಗೆ ಸಾಗುವುದೇ ಪರಿಹಾರ

    ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಎರಡೂ ಪೂರಕವಾಗಿ ಸಾಗಬೇಕು ಎಂಬ ಆಶಯಕ್ಕೆ ಜಗತ್ತು ಕಿವಿಯಾದರೂ, ಅದನ್ನು ಸೂಕ್ತವಾಗಿ ಅನುಷ್ಠಾನಕ್ಕೆ ತರುವಲ್ಲಿ ಸೋತಿದೆ. ಇದರ ಪರಿಣಾಮ ಭೀಕರ ಎಂಬಂತೆ ಗೋಚರಿಸುತ್ತಿದೆ. ವಿಶ್ವಸಂಸ್ಥೆಯ ಅಂತರ್-ಸರ್ಕಾರಿ ತಾಪಮಾನ ಬದಲಾವಣೆ ಸಮಿತಿ (ಐಪಿಸಿಸಿ) 6ನೇ ವರದಿಯನ್ನು ವಿಸõತವಾಗಿ ಸಲ್ಲಿಸಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಹೆಚ್ಚು ಹದಗೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಜಗತ್ತಿನ 195 ದೇಶಗಳ ಸರ್ಕಾರಗಳೊಂದಿಗೆ ಸಮಾಲೋಚಿಸಿ ವಿಜ್ಞಾನಿಗಳು ಈ ವರದಿಯನ್ನು ಅಂತಿಮಗೊಳಿಸಿರುವುದು ಗಮನಾರ್ಹ. ಭೂಮಿಯ ತಾಪಮಾನ 2023ರ ಹೊತ್ತಿಗೆ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಲಿದೆ. ಇದು ಈ ಮುಂಚೆ ಅಂದಾಜಿಸಿದ್ದಕ್ಕಿಂತ ಒಂದು ದಶಕ ಮುಂಚಿತವೇ ಸಂಭವಿಸುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಸಮುದ್ರ ಮಟ್ಟವೂ ವೇಗವಾಗಿ ಹೆಚ್ಚುತ್ತಿದೆ. ಭೂಮಿಯ ತಾಪಮಾನದ ತೀವ್ರ ಏರಿಕೆಯಿಂದಾಗಿ ಮುಂದಿನ ಕೆಲವು ದಶಕಗಳಲ್ಲಿ ಭಾರತದಲ್ಲಿ ಉಷ್ಣ ಮಾರುತಗಳು ಹೆಚ್ಚಲಿದ್ದು ಚಂಡಮಾರುತದ ಪ್ರಕೋಪವೂ ಅಧಿಕವಾಗಲಿದೆ ಎಂದು ವರದಿ ಬೊಟ್ಟು ಮಾಡಿದೆ.

    ಇಳೆಯ ತಾಪಮಾನದ ಏರಿಕೆಯ ಮಟ್ಟ ಗರಿಷ್ಠ ಮಿತಿ ತಲುಪುತ್ತಿರುವುದರಿಂದ ಜನರಿಗೆ ಬೇರೆಲ್ಲೂ ಹೋಗಲು ಆಗದಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಜಾಗತಿಕ ನಾಯಕರು ಈ ವಿಚಾರದಲ್ಲಿ ಗಂಭೀರ ಚಿಂತನೆ ಮಾಡಿ ತಾಪಮಾನ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಐಪಿಸಿಸಿ ವರದಿ ಕರೆ ನೀಡಿದೆ. ಇದು ಮನುಕುಲಕ್ಕೆ ‘ಕೋಡ್ ರೆಡ್’ (ಎಚ್ಚರಿಕೆಯ ಗಂಟೆ) ಆಗಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ. ಭೂಮಿಯ ತಾಪಮಾನ ಏರಿಕೆ ಮಾನವ ನಿರ್ವಿುತ ಎಂದು ಸ್ಪಷ್ಟವಾಗಿ ನಮೂದಿಸಿದ್ದು, ಅಭಿವೃದ್ಧಿ ಹೆಸರಲ್ಲಿ ದಿಕ್ಕು ತಪ್ಪಿರುವುದಕ್ಕೆ ನಿದರ್ಶನ. ಇಂಗಾಲ ಸೂಸುವಿಕೆ ಪ್ರಮಾಣ ಕಡಿಮೆಗೊಳಿಸಬೇಕು ಎಂದು ಸಮ್ಮತಿ ಏರ್ಪಟ್ಟಿದ್ದರೂ, ಹಲವು ದೇಶಗಳು ಈ ನಿಟ್ಟಿನಲ್ಲಿ ಯಾವುದೇ ಗಟ್ಟಿ ಹೆಜ್ಜೆ ಇರಿಸಿಲ್ಲ. ಪ್ಯಾರಿಸ್ ಹವಾಮಾನ ಒಪ್ಪಂದದಿಂದಲೇ ಹಿಂದೆ ಸರಿದಿದ್ದ ಅಮೆರಿಕ, ಮತ್ತೆ ಸೇರಿಕೊಂಡಿದೆ. ಆದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪರಿಸರಹಿತವನ್ನು ನಿರ್ಲಕ್ಷಿಸಿದರೆ ದೊಡ್ಡ ಅಪಾಯವೇ ಎದುರಾಗಬಹುದು.

    ಮೇಲಿಂದ ಮೇಲೆ ಬಂದೇರಗುತ್ತಿರುವ ಬರ ಮತ್ತು ಪ್ರವಾಹದಂಥ ಪ್ರಾಕೃತಿಕ ವಿಕೋಪಗಳು ತಾಪಮಾನ ಏರಿಕೆಯನ್ನು ಸೂಚಿಸುತ್ತಲೇ ಬಂದಿವೆ. ಆದರೆ, ಮನುಷ್ಯನ ಅತಿಯಾದ ಚಟುವಟಿಕೆ, ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ಶೋಷಣೆ ಹೆಚ್ಚುತ್ತಲೇ ಇರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಹಾಗಾಗಿ, ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ಹೆಚ್ಚು ಸಶಕ್ತವಾಗಿ ಅಳವಡಿಸಿಕೊಳ್ಳಲು ಮತ್ತು ನಿಸರ್ಗಸ್ನೇಹಿ ಜೀವನಶೈಲಿಯತ್ತ ಹೊರಳಲು ಇದು ಸಕಾಲ. ಅಭಿವೃದ್ಧಿಯ ಚಕ್ರ ಮುಂದೆ ಸಾಗಬೇಕು ಎಂಬುದು ನಿಜ, ಆದರೆ ಅದು ಪ್ರಕೃತಿಯನ್ನು ಶೋಷಿಸಿಯಲ್ಲ. ಪರಿಸರ ಮತ್ತು ಅಭಿವೃದ್ಧಿ ಇವೆರಡರ ಮಧ್ಯೆ ಸಮತೋಲನ ಕಾಯ್ದುಕೊಂಡು ಮುಂದಡಿ ಇಡುವುದೇ ನಿಜವಾದ ವಿವೇಕ ಎನಿಸಬಲ್ಲದು. ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ಗಂಟೆ ಮೊಳಗಿಸಿದೆ. ಈಗಲಾದರೂ ಅಪಾಯದ ತೀವ್ರತೆ ಅರಿತುಕೊಂಡು, ಪ್ರಕೃತಿಗೆ ಪೂರಕವಾಗಿ ಬದುಕುವಂಥ ವಾತಾವರಣ ರೂಪುಗೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts