Wednesday, 15th August 2018  

Vijayavani

ಹೊರಗೆ ದೋಸ್ತಿ, ಒಳಗೆ ಕುಸ್ತಿ - ದೂರವಾಗದ ಸಿದ್ದು, ಕುಮಾರ ಮುನಿಸು - ರಾಯಣ್ಣನ ಪ್ರತಿಮೆ ಬಳಿ ಬಯಲಾಯ್ತು ಮೈತ್ರಿ ಹುಳುಕು        ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ - ಕೆಆರ್‌ಎಸ್‌ಗೆ ಭಾರಿ ಪ್ರಮಾಣದ ನೀರು- ಶ್ರೀರಂಗಪಟ್ಟಣ ಬಳಿ ಪ್ರವಾಹ ಪರಿಸ್ಥಿತಿ        ಮನೆ, ಮಠ , ಶಾಲೆ ಎಲ್ಲವೂ ಜಲಾವೃತ - ಹೊನ್ನಾಳಿಯಲ್ಲಿ ಸ್ಕೂಲ್‌ಗೆ ನುಗ್ಗಿದ ತುಂಗಭದ್ರ - ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳ ಆಟ        ಕರಾವಳಿಯಲ್ಲಿ ಬಿಡುವುಕೊಡದ ವರುಣ - ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ - ಅತ್ತ ಹಾಸನದಲ್ಲಿ ರಸ್ತೆ ಕುಸಿತ        ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ - ನಾಲ್ಕು ವರ್ಷಗಳ ಬಳಿಕ ಲಿಂಗನಮಕ್ಕಿ ಭರ್ತಿ - ಜೋಗ ಜಲಾಪಾತದಲ್ಲಿ ಜಲ ವೈಭವ        ಕೇರಳದಲ್ಲಿ ತಗ್ಗದ ಪ್ರವಾಹ - ನೀರಿನಲ್ಲಿ ಸಿಲುಕೊಂಡ ರಾಜ್ಯ ಸಾರಿಗೆ ಬಸ್‌ - ಅಯ್ಯಪ್ಪನಿಗೂ ತಟ್ಟಿದ ನೆರೆಹಾವಳಿ       
Breaking News

ತೀರ್ಥಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ

Tuesday, 12.06.2018, 5:24 PM       No Comments

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮಂಗಳವಾರವೂ ಮುಂದುವರಿದಿದೆ. ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಜಲಾಶಯಗಳ ನೀರಿನ ಸಂಗ್ರಹ ಗಣನೀಯವಾಗಿ ಏರಿಕೆಯಾಗುತ್ತಿದೆ.

ತೀರ್ಥಹಳ್ಳಿ ತಾಲೂಕು ಭಾರತೀಪುರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ಭೂಮಿ ಕುಸಿತವಾಗಿದ್ದು ಟಾರ್ ರಸ್ತೆ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಹೆದ್ದಾರಿಯ ಒಂದು ಮಗ್ಗಲಿನಲ್ಲಿ ಸುಮಾರು 50-60 ಅಡಿ ಆಳವಿದ್ದು ಗಿಡಮರಗಳು ಇಲ್ಲದ ಕಾರಣ ಈಚೆಗೆ ಸುರಿದ ಭಾರಿ ಮಳೆಗೆ ಸುಮಾರು 25 ಮೀಟರ್​ನಷ್ಟು ಉದ್ದದ ರಸ್ತೆಬದಿಯ ಮಣ್ಣು ಕೊರೆದು ಹೋಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಎತ್ತರದ ಧರೆ ಕೂಡಾ ಕುಸಿಯುತ್ತಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಹೆದ್ದಾರಿಗೆ ಹೆಚ್ಚಿನ ಹಾನಿ ಸಂಭವಿಸಿ ಶಿವಮೊಗ್ಗ-ತೀರ್ಥಹಳ್ಳಿ ಮಾರ್ಗ ಬಂದ್ ಆಗಿ ವಾಹನಗಳ ಸಂಚಾರ ಸ್ಥಗಿತವಾಗುವ ಆತಂಕ ಎದುರಾಗಿದೆ. ಹೊಸನಗರ ತಾಲೂಕಿನ ಶರಾವತಿ ಹಿನ್ನೀರಲ್ಲಿ ನೀರಿನ ರಭಸಕ್ಕೆ ಲಾಂಚ್ ಕೊಚ್ಚಿ ಹೋಗಿದೆ.

ಅಪಾಯ ಮಟ್ಟದಲ್ಲಿ ನದಿಗಳು: ತಾಲೂಕಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ನದಿಗಳಾದ ತುಂಗಾ, ಮಾಲತಿ, ಕುಶಾವತಿ ನದಿಗಳು ಸೇರಿದಂತೆ ಹಳ್ಳ ಕೊಳ್ಳಗಳೂ ಅಪಾಯದ ಮಟ್ಟಕ್ಕೆ ತುಂಬಿ ಹರಿಯುತ್ತಿವೆ. ಮುಂಗಾರು ಆರಂಭದಲ್ಲೆ ಈ ನದಿಗಳು ಪ್ರವಾಹದ ಹಂತ ತಲುಪಿರುವುದು ವಿಶೇಷ.

ಹೆದ್ದೂರು ಸಮೀಪದ ಕೆರೆಯೊಂದರ ಕೋಡಿ ಬಿದ್ದ ಪರಿಣಾಮ ಕೆರೆಯ ಕೆಳಭಾಗದ ತೋಟಗಳಿಗೆ ನೀರು ನುಗ್ಗಿದೆ. ಗದ್ದೆ ನಾಟಿ ಮಾಡಿರದ ಕಾರಣ ಹೆಚ್ಚಿನ ಹಾನಿ ಸಂಭವಿಸಲಿಲ್ಲ ಎನ್ನಲಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿರುವ ಪಟ್ಟಣದ ಶೀಬಿನಕೆರೆಯ ದಂಡೆ ಕೂಡ ಒಡೆದಿದೆ. ಕೋಣಂದೂರು ಬಳಿಯ ಮನೆಯೊಂದರಲ್ಲಿ ಸಿಡಿಲಿನ ಹೊಡೆತದಿಂದ ಎಲೆಕ್ಟ್ರಿಕಲ್ ಉಪಕರಣಗಳು ಸುಟ್ಟು ಹೋಗಿವೆ. ಮಳೆಯ ಕಾರಣ ತಾಲೂಕಿನಲ್ಲಿ ಮಂಗಳವಾರ ಕೆಲವು ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಭದ್ರಾಕ್ಕೆ ನಾಲ್ಕು ಅಡಿ ನೀರು: 24 ತಾಸಿನಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ಒಂದೂವರೆ ಅಡಿ, ಭದ್ರಾದಲ್ಲಿ ನಾಲ್ಕು ಅಡಿ ನೀರು ಸಂಗ್ರಹವಾಗಿದೆ. ಮಂಗಳವಾರ ಲಿಂಗನಮಕ್ಕಿಗೆ 18,973 ಕ್ಯೂಸೆಕ್ ಹಾಗೂ ಭದ್ರಾಕ್ಕೆ 22 ಸಾವಿರ ಕ್ಯೂಸೆಕ್ ನೀರು ಹರಿದುಬಂದಿದೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಗಾಜನೂರಿನ ತುಂಗಾ ಅಣೆಕಟ್ಟೆಗೆ 47 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣ ನೀರನ್ನು ನದಿಗೆ ಬಿಡಲಾಗುತ್ತಿದೆ.

ಒಂದೇ ದಿನದಲ್ಲಿ 340.60 ಮಿಮೀ ಮಳೆ ದಾಖಲಾಗಿದೆ. ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು 231.80 ಮಿಮೀ ಮಳೆ ಬಿದ್ದಿದೆ. ಹೊಸನಗರದಲ್ಲಿ 34.40, ಸಾಗರ 38.80, ಭದ್ರಾವತಿ 16.60, ಸೊರಬ 12, ಶಿವಮೊಗ್ಗ 5.60 ಹಾಗೂ ಶಿಕಾರಿಪುರ ತಾಲೂಕಿನಲ್ಲಿ 1.80 ಮಿಮೀ ಮಳೆಯಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.

Leave a Reply

Your email address will not be published. Required fields are marked *

Back To Top