Wednesday, 19th September 2018  

Vijayavani

ಹವಾಲಾ ಕೇಸ್​ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿಕೆಶಿಗೆ ಮತ್ತೊಂದು ಕಡೆ ಅನಾರೋಗ್ಯ        ಬಂಧನದಿಂದ ತಪ್ಪಿಸಿಕೊಳ್ಳಲು‌ ಸಚಿವ ಡಿಕೆಶಿ ಶತಪ್ರಯತ್ನ; ವಕೀಲರೊಂದಿಗೆ ಸತತ ಚರ್ಚೆ        ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿ ಪಡೆದ ಸಿಎಂ ಎಚ್ಡಿಕೆ; ಅಧಿಕಾರಿಗಳೊಂದಿಗೆ ಚರ್ಚೆ        ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಸಿಎಂ ಜತೆ ಚರ್ಚೆಯನ್ನೇ ನಡೆಸಿಲ್ಲ ಎಂದ ಸತೀಶ್​ ಜಾರಿಕಿಹೊಳಿ        ಜೆಡಿಎಸ್​ ಸೇರುವಂತೆ ಆಳಂದ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಎಚ್​ಡಿಕೆ ಆಹ್ವಾನ       
Breaking News

ಮುಳುಗಡೆ ಹಣೆಪಟ್ಟಿಯೇ ಮುಳುವು

Thursday, 14.06.2018, 3:19 AM       No Comments

ಬೆಳಗಾವಿ: ಪ್ರತಿವರ್ಷ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಾಗ ಭೀತಿ ಎದುರಿಸುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 22 ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ 4 ಹಳ್ಳಿಗಳಿಗೆ ಪುನರ್ವಸತಿ ಭಾಗ್ಯ ಈವರೆಗೆ ದೊರೆತಿಲ್ಲ.
ಇತ್ತ ಮುಳುಗಡೆ ಹಣೆಪಟ್ಟಿ ಇರುವ ಕಾರಣ ವಸತಿ ಯೋಜನೆಯಡಿ ಮನೆಗಳು ಸರ್ಕಾರದಿಂದ ಸಿಗುತ್ತಿಲ್ಲ. ಹಾಗಾಗಿ, ವಸತಿರಹಿತ ಸಾವಿರಾರು ಕುಟುಂಬಗಳು ಸ್ವಂತಕ್ಕೊಂದು ಸೂರಿಲ್ಲದೇ ತಗಡಿನ ಶೆಡ್, ಗುಡಿಸಲಲ್ಲೇ ವಾಸಿಸುತ್ತಿವೆ.

2006ರಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಿತ್ತು. ಆಗ, ಅಥಣಿ ತಾಲೂಕಿನ 22 ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ 4 ಹಳ್ಳಿಗಳು ಮುಳುಗಡೆಯಾಗಿದ್ದವು. ಆಗ, ಇವೆಲ್ಲ ಗ್ರಾಮಗಳ ಜನತೆಗೆ ತಾತ್ಕಾಲಿಕವಾಗಿ ತಿಂಗಳವರೆಗೆ ರಡ್ಡೇರಹಟ್ಟಿ ಬಳಿ ಪುನರ್ವಸತಿ ಕಲ್ಪಿಸಲಾಗಿತ್ತು. ಪ್ರವಾಹ ಇಳಿದ ಮೇಲೆ ಜನ ತಮ್ಮೂರಿಗೆ ಮರಳಿದ್ದರು.

ಆಗ, ಸರ್ಕಾರವು ಕೃಷ್ಣಾ ನದಿಪಾತ್ರದ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ಕೊಟ್ಟಿತ್ತು. ಆದರೆ, ಪ್ರವಾಹ ಬಂದು 12 ವರ್ಷಗಳಾದರೂ ಪುನರ್ವಸತಿ ಭಾಗ್ಯ ದೊರೆತಿಲ್ಲ.

ಸೂರೇ ಇಲ್ಲ: ಸರ್ಕಾರವು ವಸತಿ ರಹಿತರಿಗೆ ಪ್ರತಿವರ್ಷ ಆಶ್ರಯ ಯೋಜನೆಯಡಿ ಮನೆಗಳನ್ನು ಮಂಜೂರುಗೊಳಿಸುತ್ತಿದೆ. ಆದರೆ, ಕೃಷ್ಣಾ ನದಿಪಾತ್ರದ ಗ್ರಾಮಗಳಿಗೆ ಮುಳುಗಡೆ ಹಣೆಪಟ್ಟಿ ಇದೆ. ಹಾಗಾಗಿ, ಸರ್ಕಾರವು ಆಶ್ರಯ ಯೋಜನೆಯಡಿ ಮನೆ ಮಂಜೂರುಗೊಳಿಸುತ್ತಿಲ್ಲ. ಅತ್ತ ಪುನರ್ವಸತಿಯೂ ಇಲ್ಲ. ಹಾಗಾಗಿ, ಬಡ ಜನರು ತಗಡಿನ ಶೆಡ್‌ಗಳು, ಗುಡಿಸಲು ಮತ್ತು ಕೃಷಿಭೂಮಿಯಲ್ಲೇ ಹುಲ್ಲಿನ ಗುಡಿಸಲು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ.

ಯಾವ್ಯಾವ ಗ್ರಾಮಗಳು?: ಅಥಣಿ ತಾಲೂಕಿನ ಶಿರಹಟ್ಟಿ, ಝುಂಜರವಾಡ, ಸವದಿ, ಬಳವಾಡ, ಮಹಿಷವಾಡಗಿ, ಜನವಾಡ, ನಂದೇಶ್ವರ, ಶೇಗುಣಸಿ, ಖವಟಕೊಪ್ಪ, ಅವರಖೋಡ, ನಾಗನೂರ ಪಿ.ಕೆ., ದೊಡವಾಡ, ಹುಲಗಬಾಳಿ, ನದಿ ಇಂಗಳಗಾಂವ, ತಂಗಡಿ, ಕೃಷ್ಣಾ ಕಿತ್ತೂರು, ಬಣಜವಾಡ, ಕುಸನಾಳ, ಜುಗೂಳ, ಮಂಗಾವತಿ, ಶಹಾಪುರ ಹಾಗೂ ಜಮಖಂಡಿಯ ಕುಲಹಳ್ಳಿ, ತಮದಡ್ಡಿ, ಆಸಂಗಿ, ಹಿಪ್ಪರಗಿ ಗ್ರಾಮಗಳು ಪುನರ್ವಸತಿ ಭಾಗ್ಯಕ್ಕೆ ಕಾದು ಕುಳಿತಿವೆ. ಈ ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ವಸತಿ ರಹಿತವಾಗಿ ಬದುಕು ಸವೆಸುತ್ತಿವೆ!
ಭೂಸ್ವಾಧೀನಕ್ಕೆ ಹಿನ್ನಡೆ?

ಅಥಣಿ ತಾಲೂಕಿನ ರಡ್ಡೇರಹಟ್ಟಿ, ಮೋಳೆ, ಹಲ್ಯಾಳ, ನಂದೇಶ್ವರ, ಸವದಿ ಮತ್ತು ಸತ್ತಿ ನಡುವಿರುವ ಝಿರೋ ಪಾಯಿಂಟ್ ಗ್ರಾಮಗಳ ಪುನರ್ವಸತಿ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ 15 ಕೋಟಿ ರೂ.ಗಿಂತ ಅಧಿಕ ವೆಚ್ಚವಾಗಲಿದೆ. ಆದರೆ, ಪುನರ್ವಸತಿ ಕಾರ್ಯಕ್ಕೆ ನಿವೇಶನ ಸರಿಯಾಗಿ ಸಿಗದ್ದರಿಂದ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಹಿನ್ನಡೆಯಾಗಿದ್ದರಿಂದ ತುಸು ವಿಳಂಬವಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದೆಂದು ಅಥಣಿ ವಿಭಾಗದ ನೀರಾವರಿ ನಿಗಮದ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

ನಾಗನೂರ ಪಿ.ಕೆ. ಗ್ರಾಪಂ ವ್ಯಾಪ್ತಿಯಲ್ಲೇ 1500 ಕುಟುಂಬಗಳು ನೆಲೆಸಿವೆ. ಈ ಪೈಕಿ ಶೇ. 30ರಷ್ಟು ಕುಟುಂಬಗಳಿಗೆ ಮನೆಯೇ ಇಲ್ಲ. ಆದರೆ, ಮುಳುಗಡೆ ಹಣೆಪಟ್ಟಿ ಇರುವ ಗ್ರಾಮಗಳಿಗೆ ಸರ್ಕಾರದ ವಸತಿ ಯೋಜನೆ ಮನೆ ಸಿಗುವುದಿಲ್ಲ. ಹಾಗಾಗಿ, ಪ್ರವಾಹ ಬಂದು 12 ವರ್ಷಗಳಾದರೂ ವಸತಿ ಯೋಜನೆ ಮನೆ ನೀಡುತ್ತಿಲ್ಲ. ಕೇಳಿದರೆ ಮುಳುಗಡೆ ಹಣೆಪಟ್ಟಿಯೆಂಬ ಉತ್ತರ ಬರುತ್ತಿದೆ. ಅತ್ತ ಪುನರ್ವಸತಿಯನ್ನೂ ಕಲ್ಪಿಸುತ್ತಿಲ್ಲ. ಹಾಗಾಗಿ, ತಗಡಿನ ಶೆಡ್‌ನಲ್ಲಿ ಅವರು ವಾಸಿಸುತ್ತಿದ್ದಾರೆ.
ಶಂಕರ ಚೌಗಲಾ
> ಗ್ರಾಪಂ ಅಧ್ಯಕ್ಷ, ನಾಗನೂರ ಪಿ.ಕೆ., ಅಥಣಿ ತಾಲೂಕು

  • -ಇಮಾಮಹುಸೇನ್ ಗೂಡುನವರ

Leave a Reply

Your email address will not be published. Required fields are marked *

Back To Top