More

    ಅಪಪ್ರಚಾರಕ್ಕೆ ಕಿವಿ ಕೊಡದಿರಿ; ಆಂಜನೇಯ ಕಿವಿಮಾತು

    ಹೊಳಲ್ಕೆರೆ: ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂಬುದು ಜನಪರ ಯೋಜನೆಗಳನ್ನು ಸಹಿಸಿಕೊಳ್ಳಲು ಆಗದವರ ಅಪಪ್ರಚಾರ. ನಮ್ಮ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿರುವವರೆಗೂ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಯ ನೀಡಿದರು.

    ತಾಲೂಕಿನ ಎಚ್.ಡಿ.ಪುರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ನೇರ ಪ್ರಸಾರ ವೀಕ್ಷಣೆ ಹಾಗೂ ಯೋಜನೆ ಜಾರಿ ಕಾರ್ಯಕ್ರಮಕ್ಕೆ ಮಹಿಳೆಯರ ಕೈಯಿಂದಲೇ ಚಾಲನೆ ಕೊಡಿಸಿದ ಬಳಿಕ ಮಾತನಾಡಿದರು.

    ಚುನಾವಣೆಗೂ ಮುಂಚೆ ಐದು ಗ್ಯಾರಂಟಿ ಯೋಜನೆಗಳು ಜಾರಿ ಅಸಾಧ್ಯ, ಇವೆಲ್ಲವೂ ಸುಳ್ಳು ಎಂದು ಹೇಳಿದರು. ಬಳಿಕ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ಮೊದಲ ಸಚಿವ ಸಂಪುಟದಲ್ಲಿಯೇ ಎಲ್ಲ ಯೋಜನೆಗಳ ಜಾರಿಗೆ ಒಪ್ಪಿಗೆ ಸೂಚಿಸಿ, ಒಂದೊಂದನ್ನು ಜಾರಿಗೊಳಿಸುತ್ತಿದ್ದಂತೆ, ರಾಜ್ಯ ದಿವಾಳಿ ಆಗಲಿದೆ ಎಂದು ಸುಳ್ಳು ಹಬ್ಬಿಸಿದರು. ಯೋಜನೆಗಳು ಜನಪ್ರಿಯತೆ ಪಡೆಯುತ್ತಿದ್ದಂತೆ ಈಗ ಮತ್ತೊಂದು ಸುಳ್ಳು ಹರಡುತ್ತಿದ್ದಾರೆ ಎಂದು ದೂರಿದರು.

    ಸ್ತ್ರೀಶಕ್ತಿ ಯೋಜನೆ ಜಾರಿಗೊಳ್ಳುತ್ತಿದಂತೆ ಸಾರಿಗೆ ನಿಗಮ ಆರ್ಥಿಕವಾಗಿ ಬಲವರ್ಧನೆಗೊಳ್ಳುತ್ತಿದೆ. ಮನೆ ದೇವರು, ಒಡಹುಟ್ಟಿದವರು, ಸಂಬಂಧಿಕರ ಮನೆಗೆ ಹೋಗಲು ಕೈಯಲ್ಲಿ ದುಡ್ಡಿಲ್ಲದವರು ಸಂಭ್ರಮದಿಂದ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಜನರಲ್ಲಿ ಗೊಂದಲ ಉಂಟು ಮಾಡಲು ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ನೂಕುನುಗ್ಗಲು ಉಂಟಾಗಿ ಅವಘಡ ಸಂಭವಿಸಲಿ ಎಂಬ ಕೆಟ್ಟ ದೃಷ್ಟಿಯಿಂದ ಒಂದು ವಾರದಲ್ಲಿ ಉಚಿತ ಬಸ್ ಪ್ರಯಾಣ ಯೋಜನೆ ರದ್ದು ಆಗಲಿದೆ ಎಂದು ಸುಳ್ಳು ಸುದ್ದಿ ಹರಡಿದರು. ಆದರೂ ಮಹಿಳೆಯರು ನಂಬಲಿಲ್ಲ. ಅದೇ ರೀತಿ ಈಗಲೂ ಅವರ ಯಾವುದೇ ಸುಳ್ಳು ಮಾತುಗಳಿಗೆ ನೀವು ಕಿವಿಕೊಡದಿರಿ ಎಂದು ಕಿವಿಮಾತು ಹೇಳಿದರು.

    ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ, ಪ್ರತಿ ವ್ಯಕ್ತಿ ಖಾತೆಗೆ 170 ರೂ. ಹಾಗೂ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಈಗ ಗೃಹಲಕ್ಷ್ಮೀ ಯೋಜನೆ ಮೂಲಕ ಮನೆ ಯಜಮಾನಿ ಖಾತೆಗೆ 2000 ರೂ. ಜಮಾ ಆಗಿದೆ. ರಾಜ್ಯದಲ್ಲಿ 1.10 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.

    ದೇಶದಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸಿದ ಏಕೈಕ ರಾಜ್ಯ ಕರ್ನಾಟಕ ಮತ್ತು ಏಕೈಕ ಪಕ್ಷ ಕಾಂಗ್ರೆಸ್ ಸರ್ಕಾರ ಎಂದು ಹೆಮ್ಮೆಯಿಂದ ಕಾರ್ಯಕರ್ತರು ಹೇಳಿಕೊಳ್ಳಬಹುದು.

    ಪೆಟ್ರೋಲ್, ಡಿಸೇಲ್ ಸೇರಿ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ಏರಿದೆ. ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಅವರನ್ನು ಪಾರು ಮಾಡಲು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದು, ವಿದ್ಯಾನಿಧಿ-ಯುವನಿಧಿ ಯೋಜನೆಯೂ ಶೀಘ್ರ ಜಾರಿ ಆಗಲಿದೆ. ಈ ಮೂಲಕ ನಿರುದ್ಯೋಗ ಯುವ ಪೀಳಿಗೆಯಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

    ಸರ್ಕಾರ ಅಸ್ಥಿತ್ವಕ್ಕೆ ಬಂದು ಕೇವಲ 100 ದಿನಗಳಲ್ಲಿ ನುಡಿದಂತೆ ನಡೆದು ಜನರ ಪ್ರೀತಿ ಗಳಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇನ್ನಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸಿದ್ಧವಿದೆ. ಅದಕ್ಕೆ ಜನರ ಸಹಕಾರ, ಬೆಂಬಲ ಬೇಕು. ಅಸೂಹೆ ಪಡುವ ಜನರ ಸುಳ್ಳು ಮಾತುಗಳನ್ನು ನಿರ್ಲಕ್ಷಿಸಬೇಕು ಎಂದು ಕೋರಿದರು.

    ಮಹಿಳೆಯರ ಖಾತೆಗೆ ಜಮಾ ಆಗುವ 2 ಸಾವಿರ ರೂಪಾಯಿ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವೆಚ್ಚ ಮಾಡಲು ಮೊದಲ ಆದ್ಯತೆ ನೀಡಬೇಕು. ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ಖರೀದಿ ಜತೆಗೆ ಸಣ್ಣದಾಗಿ ಉಳಿತಾಯ ಮಾಡಲು ಚಿಂತನೆ ನಡೆಸಬೇಕು ಎಂದರು.

    ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇರದಿದ್ದರೂ ಪ್ರೌಢಶಾಲೆ ಮಕ್ಕಳಿಗೆ ಮೊಟ್ಟೆ ವಿತರಣೆ ಹೀಗೆ ಅನೇಕ ಜೀವಪರ ಯೋಜನೆಗಳನ್ನು ಸಿದ್ದರಾಮಯ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ ಎಂದು ಹೇಳಿದರು.

    ಜನರ ಕೈಯಲ್ಲಿ ದುಡ್ಡು ಇದ್ದರೆ ಮಾತ್ರ ದೇಶದ ಬಲವರ್ಧನೆ ಸಾಧ್ಯ ಎಂಬುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಸಣ್ಣಪುಟ್ಟ ವ್ಯಾಪಾರಸ್ಥರು, ಕೈಗಾರಿಕೆಗಳು ಜೀವ ಪಡೆದುಕೊಳ್ಳುತ್ತಿವೆ. ಸ್ವಯಂ ಉದ್ಯೋಗ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರ ಬಲಿಷ್ಠಗೊಳ್ಳಲಿದೆ. ಆರ್ಥಿಕ ಚಿಂತನೆ ವಿಷಯದಲ್ಲಿ ಜ್ಞಾನ ಹೊಂದಿಲ್ಲದವರು, ಉಳ್ಳವರ ಪರ ಇರುವವರು ಇಂತಹ ಜೀವಪರ ಯೋಜನೆಗಳನ್ನು ಸಹಿಸುವುದಿಲ್ಲ ಎಂದರು.

    ಸಿಲಿಂಡರ್ ಬೆಲೆ ಇಳಿಕೆ ಗ್ಯಾರಂಟಿ ಯೋಜನೆ ಎಫೆಕ್ಟ್: ಸುಳ್ಳೇ ದೇವರು ಎಂದು ನಂಬಿರುವ ಕೆಲ ಪಕ್ಷದವರು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಒಂದೊಂದಾಗಿ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಭೀತಿಗೆ ಒಳಗಾಗಿದ್ದಾರೆ ಎಂದು ವ್ಯಂಗ್ಯವಾಡಿದ ಆಂಜನೇಯ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರೀಯತೆಗೆ ಹೆದರಿ ಕೇಂದ್ರದ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಸಿಲಿಂಡರ್ ಬೆಲೆಯನ್ನು 200 ರೂಪಾಯಿಗೆ ಇಳಿಸಿದೆ ಎಂದು ಹೇಳಿದರು.

    ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ನೀಡುತ್ತಿದ್ದಂತೆ ಸಿಲಿಂಡರ್ ಬೆಲೆಯನ್ನು 400 ರೂಪಾಯಿಗೆ ಇಳಿಸಲಾಗುವುದು. ಜತೆಗೆ ದೇಶದ ಎಲ್ಲ ರಾಜ್ಯದಲ್ಲೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಬದ್ಧತೆ ಪ್ರದರ್ಶಿಸಲಾಗುವುದು ಎಂದರು.

    ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಇಲ್ಲಿ ರಾಜಕೀಯ ಮಾತುಗಳಿಗಿಂತಲೂ ಜನರ ಅಭಿವೃದ್ಧಿ ಮುಖ್ಯ. ಆದ್ದರಿಂದ ಜನರು ಐದು ಗ್ಯಾರಂಟಿ ಯೋಜನೆಗಳನ್ನು ಹೆಚ್ಚು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಜತೆಗೆ ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡಿ ಅವರಿಂದ ನಾಡಿಗೆ ಕೊಡುಗೆ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಎಚ್.ಡಿ.ಪುರ, ಚಿತ್ತಹಳ್ಳಿ, ಎನ್.ಜಿ.ಹಳ್ಳಿ ಗ್ರಾಪಂ ಕೇಂದ್ರದಲ್ಲಿ ಮಹಿಳೆಯರು ರಂಗೋಲಿ ಹಾಕಿ, ತಳೀರು-ತೋರಣ ಕಟ್ಟಿ ವಿಶೇಷವಾಗಿ ಯೋಜನೆ ಜಾರಿ ಕ್ಷಣಕ್ಕೆ ಕಾತರದಿಂದ ಕಾಯುತ್ತಿದ್ದರು.

    ಮೈಸೂರಲ್ಲಿ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ, ಟಿವಿ ಪರದೆಯಲ್ಲಿ ವೀಕ್ಷಿಸುತ್ತಿದ್ದ ಮಹಿಳೆಯರು ಚಪ್ಪಾಳೆ ತಟ್ಡಿ, ಎದ್ದುನಿಂತು ಸ್ವಾಗತಿಸಿದರು. ಒಂದು ರೀತಿ ಎಲ್ಲೆಡೆಯೂ ಹಬ್ಬದ ಸಡಗರ ಕಂಡುಬಂತು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಹೆಚ್.ಡಿ.ಪುರ ಗ್ರಾಪಂ ಅಧ್ಯಕ್ಷ ದಿವಾಕರ್, ಉಪಾಧ್ಯಕ್ಷೆ ಗೀತಾ, ಚಿತ್ರಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಎನ್.ಜೆ.ಹಳ್ಳಿ ಗ್ರಾಪಂ ಅಧ್ಯಕ್ಷ ವೀರನಾಗಪ್ಪ, ಉಪಾಧ್ಯಕ್ಷೆ ಗೀತಾಂಜಲಿ, ಮುಖಂಡರಾದ ಎಚ್.ಡಿ.ರಂಗಯ್ಯ, ಕೆ.ಸಿ.ರಮೇಶ್, ಕಾಟಲಿಂಗಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts