Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ಸಿರಿವಂತ ಭಾರತ, ಬಲವಾಗಲಿ ಈ ಮಾರುತ…

Saturday, 26.05.2018, 3:05 AM       No Comments

ಭಾರತದ ಆರ್ಥಿಕ ಪ್ರಗತಿ ಸಂತಸ ಕೊಡುವಂಥದೇ. ಈ ಏಳಿಗೆಯ ಹಿಂದೆ ಬೆವರಿನ ಹನಿಯಿದೆ, ಕಠಿಣ ಪರಿಶ್ರಮದ ತಪಸ್ಸಿದೆ. ಆದರೆ ಈ ಉತ್ಸಾಹದಲ್ಲಿ ನಮ್ಮ ತಾಯಿಬೇರಾದ ಧಾರ್ವಿುಕ, ಆಧ್ಯಾತ್ಮಿಕ ಆಯಾಮವನ್ನು ಕಡೆಗಣಿಸಬಾರದು. ಏಕೆಂದರೆ ಇಂದಿನ ಅನೇಕ ಸಾಮಾಜಿಕ ಕಾಯಿಲೆಗಳಿಗೆ ಇಲ್ಲಿ ಉತ್ತರವಿದೆ.

ವಿಜಯನಗರ ಅರಸರ ಕಾಲದಲ್ಲಿ ಬೀದಿಗಳಲ್ಲಿ ಚಿನ್ನಾಭರಣಗಳ ವ್ಯಾಪಾರ ನಡೆಯುತ್ತಿತ್ತಂತೆ; ಭಾರತವನ್ನು ನೂರಾರು ವರ್ಷ ಕಾಲ ಆಳಿದ ಬ್ರಿಟಿಷರು ನೂರಾರು ಹಡಗುಗಳಷ್ಟು ಆಗಬಲ್ಲ ಚಿನ್ನಾಭರಣಗಳನ್ನು ಭಾರತದಿಂದ ತಮ್ಮ ದೇಶಕ್ಕೆ ತೆಗೆದುಕೊಂಡು ಹೋದರಂತೆ; ವಿದೇಶಿ ದಾಳಿಕೋರರು ಕೂಡ ಅಪಾರ ಸಂಪತ್ತನ್ನು ದೋಚಿದರಂತೆ…

ಇವೆಲ್ಲ ನಾವು ಇತಿಹಾಸದ ಪಠ್ಯಗಳಲ್ಲಿ ಓದಿದ ಸಂಗತಿಗಳು. ಭಾರತದ ಬಗ್ಗೆ ಹೆಮ್ಮೆ ಮೂಡಿಸಬಲ್ಲ ಸಂಗತಿಗಳು ಕೆಲವಿದ್ದರೆ, ಇಲ್ಲಿನ ಸಂಪತ್ತು ಅನ್ಯರ ಕೈವಶವಾದ ಸಂಗತಿ ವಿಷಾದ ಮೂಡಿಸುತ್ತದೆ. ಕೆಲ ವರ್ಷಗಳ ಹಿಂದೆ ಟಾಟಾ ಸಮೂಹ ಇಂಗ್ಲೆಂಡಿನ ಕೋರಸ್ ಉಕ್ಕು ಸಮೂಹವನ್ನು ಸುಮಾರು 50 ಸಾವಿರ ಕೋಟಿ ರೂ.ಗಳ ಮೊತ್ತಕ್ಕೆ ಖರೀದಿ ಮಾಡಿದಾಗ, ಹಿಂದೆ ಬ್ರಿಟಿಷರು ಭಾರತದಲ್ಲಿ ಮಾಡಿದ ಕೊಳ್ಳೆಯನ್ನು ನೆನಪಿಸಿಕೊಂಡ ಕೆಲವರು, ಇದೀಗ ಮುಯ್ಯಿಗೆ ಮುಯ್ಯಿ ತೀರಿದಂತಾಯಿತು ಎಂದು ಸಂತಸಪಟ್ಟಿದ್ದರು. ಕೆಲವು ವಿಷಯಗಳೇ ಹಾಗೆ. ನಮ್ಮ ಅಸ್ಮಿತೆ, ವೈಭವ ಮರುಕಳಿಸಿದಾಗ ಸಖತ್ ಖುಷಿಯಾಗುತ್ತದೆ.

ಈಗ ನಾವೇನು ವ್ಯಾಪಾರದ ಜಾಗತೀಕರಣ ಎಂದು ಹೇಳುತ್ತೇವಲ್ಲ, ಭಾರತ ನೂರಾರು ವರ್ಷಗಳ ಹಿಂದೆಯೇ ಈ ಬಾಬತ್ತಿನಲ್ಲಿ ಅಗ್ರಣಿಯಾಗಿತ್ತು ಎಂದರೆ ಅಚ್ಚರಿಯಾಗುತ್ತದೆಯೇ? ತನ್ನ ತೋಳ್ಬಲದಿಂದ ಜಗತ್ತನ್ನೇ ಜಯಿಸುವ ಕನಸು ಕಂಡ ಅಲೆಕ್ಸಾಂಡರ್ ಚಕ್ರವರ್ತಿ ಭಾರತಕ್ಕೆ ಬಂದಿದ್ದು ಈ ಅಗಾಧ ಸಂಪತ್ತಿನ ಮೇಲೆ ಕಣ್ಣಿಟ್ಟೇ. ಹಿರಿಯ ಪತ್ರಕರ್ತ ಕೆ.ವಿದ್ಯಾಶಂಕರ ಅವರು ಈ ಕುರಿತು ಒಂದು ಆಸಕ್ತಿಪೂರ್ಣ ಅಂಕಿಅಂಶ ಮಂಡಿಸುತ್ತಾರೆ. ಚಂದ್ರಗುಪ್ತ ಮೌರ್ಯನ ಆಡಳಿತಾವಧಿಯ ಆ ಕಾಲದಲ್ಲಿ ಜಗತ್ತಿನ ಜಿಡಿಪಿ (ಅಂದರೆ ಒಟ್ಟು ಆರ್ಥಿಕ ಚಟುವಟಿಕೆಗಳ ಮೊತ್ತ)ಸುಮಾರು10,203 ಡಾಲರ್. 1990ರ ಡಾಲರ್ ಮೌಲ್ಯ ಲೆಕ್ಕಹಾಕಿ ಈ ಅಂಕಿಸಂಖ್ಯೆ ಅಂದಾಜಿಸಲಾಗಿದೆ. ಇದರಲ್ಲಿ ಮೂರನೇ ಒಂದು ಭಾಗ ಅಂದರೆ ಶೇ.33 ಅಂದರೆ ಸುಮಾರು 3,375 ಕೋಟಿ ಡಾಲರ್ ವಹಿವಾಟು ಭಾರತದ್ದಾಗಿತ್ತು. ಭಾರತದ ವಾಣಿಜ್ಯ ಚಟುವಟಿಕೆ ಎಷ್ಟು ವಿಸ್ತಾರವಾಗಿತ್ತು ಎಂಬುದು ಇದರಿಂದ ಅರಿವಾಗುತ್ತದೆ. ಅಮೆರಿಕ ಈಗ ತಾನು ಜಗತ್ತಿನ ದೊಡ್ಡಣ್ಣ, ಸೇನಾಶಕ್ತಿಯಲ್ಲಿ, ಆರ್ಥಿಕ ತಾಕತ್ತಿನಲ್ಲಿ ತನ್ನನ್ನು ಮೀರಿಸುವವರಿಲ್ಲ ಎಂದು ಆಟಾಟೋಪ ಮಾಡುತ್ತಿದೆ ತಾನೆ? ಒಂದು ಕುತೂಹಲಕ್ಕಾಗಿ ನಾವು ಈಗ ಅಮೆರಿಕವನ್ನು ಎರಡು ಸಾವಿರ ವರ್ಷಗಳ ಹಿಂದಿನ ಭಾರತದ ಆರ್ಥಿಕ ಶಕ್ತಿಗೆ ಹೋಲಿಕೆ ಮಾಡಿದರೆ ಅಮೆರಿಕ ಏನೇನೂ ಅಲ್ಲ.

ಹೌದು, ಈಗೇಕೆ ಭಾರತದ ಗತವೈಭವದ ಪ್ರಸ್ತಾಪ ಎಂದಿರಾ? ಕಾರಣ ಇದೆ. ಅಫ್ರಾ ಏಷ್ಯಾ ಬ್ಯಾಂಕ್ ಈಚೆಗೆ ಜಗತ್ತಿನ ಸಿರಿವಂತ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಯಾದಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ, ಜಪಾನ್, ಬ್ರಿಟನ್ ಮತ್ತು ಜರ್ಮನಿ ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಹಂಚಿಕೊಂಡಿವೆ. ಈ ಲೆಕ್ಕಾಚಾರದ ಪ್ರಕಾರ, ಭಾರತದ ಒಟ್ಟಾರೆ ಸಂಪತ್ತಿನ ಮೌಲ್ಯ ಸುಮಾರು 560 ಲಕ್ಷ ಕೋಟಿ ರೂ.ಗಳು. ಅರ್ಥಾತ್ 8,230 ಬಿಲಿಯನ್ ಡಾಲರ್​ಗಳು. ಗಣಿತ ಕಬ್ಬಿಣದ ಕಡಲೆ ಎನ್ನುವವರಿಗೆ ಈ ಲೆಕ್ಕ ತಿಳಿಯೋದು ಸ್ವಲ್ಪ ಕಷ್ಟವೇ ಎನ್ನಿ! ಆದರೆ ಭಾರತ ಆರನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಇದೆಯಲ್ಲ, ಸಾಕು. ಅದೇ ಅಮೆರಿಕದ ಒಟ್ಟು ಸಂಪತ್ತಿನ ಪ್ರಮಾಣ 4,254 ಲಕ್ಷ ಕೋಟಿ ರೂ. (62,584 ಬಿಲಿಯನ್ ಡಾಲರ್). ಈ ಅಂದಾಜು ಇನ್ನೂ ಒಂದು ಆಶಾಭಾವದ ಮುನ್ಸೂಚನೆ ನೀಡಿದೆ. ಅದೆಂದರೆ, ಮುಂದಿನ ದಶಕದಲ್ಲಿ ಭಾರತ ಜಾಗತಿಕವಾಗಿ ಸಿರಿವಂತ ದೇಶಗಳ ಯಾದಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ ಎಂಬುದು. ಅದಾಗಲಿ ಎಂದು ಮನದುಂಬಿ ಹಾರೈಸೋಣ. ಅಫ್ರಾ ಏಷ್ಯಾ ಬ್ಯಾಂಕ್ ಈ ಸಂಪತ್ತಿನ ಲೆಕ್ಕ ಹಾಕುವಾಗ, ಆಯಾ ದೇಶದಲ್ಲಿ ವ್ಯಕ್ತಿಗಳು ವೈಯಕ್ತಿಕವಾಗಿ ಹೊಂದಿರುವ ಆಸ್ತಿ, ನಗದು, ಷೇರು, ವ್ಯಾಪಾರ ವಹಿವಾಟಿನ ಮೌಲ್ಯವನ್ನು ಪರಿಗಣಿಸಿದೆ. ಇದರಲ್ಲಿ ಸರ್ಕಾರದ ಖಜಾನೆಯಲ್ಲಿರುವ ಹಣ ಹಾಗೂ ಆಸ್ತಿಯ ಲೆಕ್ಕ ಸೇರಿಲ್ಲ. ಒಂದು ಕಾಲದಲ್ಲಿ ಹಾವಾಡಿಗರ ದೇಶ, ಭಿಕ್ಷುಕರ ದೇಶ ಎಂಬೆಲ್ಲ ಗ್ರಹಿಕೆಗಳನ್ನು ಜಾಗತಿಕವಾಗಿ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳ ವಲಯದಲ್ಲಿ ಹೊಂದಿದ್ದ ಭಾರತ ಈ ಪರಿ ಶ್ರೀಮಂತನಾಗಿದ್ದಾದರೂ ಹೇಗೆ? ಎಷ್ಟೆಲ್ಲ ಯಶಸ್ಸಿನ ಕತೆಗಳು ಇದರಲ್ಲಿ ಅಡಗಿರಬಹುದಲ್ಲ! ಹೌದು, ಭಾರತದಲ್ಲಿ ಭಾರಿ ಸಂಖ್ಯೆಯಲ್ಲಿರುವ ಕೈಗಾರಿಕೆಗಳು, ಶಿಕ್ಷಣ ರಂಗದ ಬೆಳವಣಿಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆ, ಏರುಗತಿಯಲ್ಲಿರುವ ಹೊರಗುತ್ತಿಗೆ ಉದ್ಯಮ ವಲಯ, ರಿಯಲ್ ಎಸ್ಟೇಟ್ ರಂಗದ ಪ್ರಗತಿ, ಆರೋಗ್ಯ ರಂಗದಲ್ಲಿನ ಬೆಳವಣಿಗೆ ಮುಂತಾದ ಕಾರಣಗಳನ್ನು ನೀಡಲಾಗಿದೆ. ನಿಜ, ಹಿಂದೆ ಲೈಸೆನ್ಸ್​ರಾಜ್ ಎಂಬ ಸರ್ಕಾರಿ ಆಡಳಿತಶಾಹಿ ಕೆಂಪುಪಟ್ಟಿಯಲ್ಲಿ ಸಿಲುಕಿ ಉಸಿರುಕಟ್ಟಿದಂತಾಗಿದ್ದ ಉದ್ಯಮರಂಗಕ್ಕೆ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳು ವರವಾಗಿ ಬಂದವು. ಇದರ ಪರಿಣಾಮವಾಗಿ, ಚಿಕ್ಕ ಹಾಗೂ ಮಧ್ಯಮಗಾತ್ರದ ಉದ್ದಿಮೆಗಳು ದೊಡ್ಡ ಸಂಖ್ಯೆಯಲ್ಲಿ ಅಸ್ತಿತ್ವಕ್ಕೆ ಬಂದವು. ಇದರಿಂದ ಉದ್ಯೋಗಾವಕಾಶ ಮಾತ್ರವಲ್ಲದೆ, ದೇಶದ ಆರ್ಥಿಕ ಏಳಿಗೆಗೂ ಅಳಿಲು ಪಾಲು ಸಲ್ಲುತ್ತ ಬಂತು. ಇನ್ನು, ಬೃಹತ್ ಕೈಗಾರಿಕೆಗಳಂತೂ ಇದ್ದೇ ಇವೆ. ಇನ್ನೊಂದೆಡೆ, ಪ್ರತಿಭಾವಂತ ಯುವ ಜನರು ಉದ್ಯೋಗ ರಂಗದಲ್ಲಿ ತಮ್ಮದೇ ಆದ ಛಾಪು ಒತ್ತಿದರು. ಬಹುರಾಷ್ಟ್ರೀಯ ಕಂಪನಿಗಳು ಜಾಗತಿಕ ನಕಾಶೆಯಲ್ಲಿ ಮಿಂಚತೊಡಗಿದಾಗ ಅಲ್ಲಿ ಭಾರತದ ಯುವಜನರ ಹೊಳಪೂ ಗೋಚರಿಸಿತು. ಕೆಲವರು ಇದನ್ನು ಪ್ರತಿಭಾ ಪಲಾಯನ ಎಂದು ಕರೆದರೂ, ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಬೇಲಿ ಹಾಕಲು ಸಾಧ್ಯವಿಲ್ಲವಲ್ಲ?

ಭಾರತದ ಈ ಆರ್ಥಿಕ ಮುಖವೇನೋ ಖುಷಿಯ ಸಂಗತಿಯೇ. ನಮ್ಮ ದೇಶದ ಜನರು ಆರ್ಥಿಕವಾಗಿ ಸಶಕ್ತರಾಗಿ, ದೇಶಕ್ಕೂ ಅದರಿಂದ ಅನುಕೂಲವಾಗುವುದಾದರೆ ಹೆಮ್ಮೆಯಲ್ಲದೆ ಇನ್ನೇನು? ಆದರೆ ಈ ಖುಷಿಯ ನಡುವೆ ಒಂದು ಸಣ್ಣ ಆತಂಕವೂ ಕಾಣಿಸುತ್ತಿರುವದನ್ನು ನಾವು ಕಡೆಗಣಿಸಲಾಗದು. ನಮ್ಮ ನಗರ ಪ್ರದೇಶಗಳನ್ನೇ ನೋಡಿ. ಒಂದೆಡೆ, ಶ್ರೀಮಂತಿಕೆಯನ್ನು ಬಿಂಬಿಸುವ ಬಡಾವಣೆಗಳು, ಮನೆಗಳು, ಮಹಲುಗಳು, ರಸ್ತೆಗಳು ಇತ್ಯಾದಿ. ಮತ್ತೊಂದೆಡೆ, ಮೂಲಸವಲತ್ತುಗಳೂ ಇಲ್ಲದ ದೊಡ್ಡ ಸಂಖ್ಯೆಯ ಕೊಳೆಗೇರಿಗಳು. ಕೋಟಿ ಕೋಟಿ ಎಣಿಸುವ ಕುಳಗಳು ಒಂದೆಡೆಯಾದರೆ, ಇದನ್ನು ಕನಸಿಸಲೂ ಆಗದ ಲಕ್ಷಾಂತರ ಜನರು… ದೇಶದ ವಾಣಿಜ್ಯನಗರಿ ಮುಂಬೈಯ ಕತೆವ್ಯಥೆ ನೋಡಿ. ಅಲ್ಲಿನ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಮಂದಿ ಕೊಳೆಗೇರಿಗಳಲ್ಲಿ ವಾಸಿಸುತ್ತಾರೆ!

ಇದು ಲೌಕಿಕ-ಭೌತಿಕ ಪ್ರಗತಿಯ ಮಾತಾಯಿತು. ಇನ್ನು, ನಾಣ್ಯದ ಮತ್ತೊಂದು ಮುಖದತ್ತಲೂ ನೋಡಬೇಕಾಗುತ್ತದೆ. ಭಾರತ ಮೊದಲಿಂದಲೂ, ಲೌಕಿಕ ಏಳಿಗೆಗಿಂತ ಆಧ್ಯಾತ್ಮಿಕ ಪ್ರಗತಿಗೆ ಹೆಚ್ಚು ಒತ್ತುಕೊಟ್ಟ ದೇಶ. ಬಹುಶಃ ಇಂಥದೊಂದು ಅಡಿಪಾಯವೇ ಬಡತನದಲ್ಲೂ ಭಾರತೀಯರು ನೆಮ್ಮದಿಯಿಂದ ಇರುವಂತೆ ಮಾಡಿತ್ತು. ಇದರರ್ಥ ಆರ್ಥಿಕ ಪ್ರಗತಿ ಬೇಡ ಅಥವಾ ಅದು ತಪ್ಪು ಎಂದಲ್ಲ. ಆದರೆ ಆರ್ಥಿಕ ಪ್ರಗತಿಯಾದಾಗ ನೈತಿಕ, ಆಧ್ಯಾತ್ಮಿಕ ಆಯಾಮವನ್ನು ಮರೆಯಬಾರದಲ್ಲ? ಕೆಲ ವಿಷಯಗಳಲ್ಲಿ ಭಾರತದ ಪ್ರಸ್ತುತ ಪರಿಸ್ಥಿತಿ ಈ ಆಶಯಕ್ಕೆ ಅನುಗುಣವಾಗಿಲ್ಲ ಎಂದು ವಿಷಾದದಿಂದಲೇ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಆತ್ಮವಂಚನೆಯಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲಣ ದೌರ್ಜನ್ಯ ಹೆಚ್ಚುತ್ತಿದೆ ಎಂಬುದನ್ನು ನ್ಯಾಷನಲ್ ಬ್ಯೂರೊ ಆಫ್ ಕ್ರೖೆಮ್ ರೆಕಾರ್ಡ್ಸ್ ಎಂಬ ಸರ್ಕಾರಿ ಅಂಗಸಂಸ್ಥೆಯ ಅಂಕಿಅಂಶಗಳು ಸಾರುತ್ತವೆ; ಮಕ್ಕಳಲ್ಲಿ ಅಪರಾಧ ಪ್ರಮಾಣ ಹೆಚ್ಚುತ್ತಿರುವ ಕಳವಳಕಾರಿ ಸಂಗತಿಯೂ ನಮ್ಮೆದುರಿಗಿದೆ. 2015ಕ್ಕೆ ಹೋಲಿಸಿದರೆ 2016ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಶೇ.2.9ರಷ್ಟು ಹೆಚ್ಚಳವಾಗಿದೆ; ಅತ್ಯಾಚಾರ ಪ್ರಕರಣಗಳಲ್ಲಿ ಶೇ.12.4 ಏರಿಕೆಯಾಗಿದೆ. ಮಕ್ಕಳ ವಿರುದ್ಧದ ಅಪರಾಧಗಳಲ್ಲಿಯೂ ಶೇ.13ರಷ್ಟು ಹೆಚ್ಚಳವಾಗಿದೆ. ಈ ಅಂಕಿಸಂಖ್ಯೆಗಳ ಧ್ವನಿ ಏನೆಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಇಷ್ಟೇ ಅಲ್ಲ, ಇನ್ನೊಂದು ಅಂಶವನ್ನೂ ಗಮನಿಸಲೇಬೇಕಿದೆ. ಅದು ನಮ್ಮ ಚುನಾವಣೆಗಳದು. ರಾಜಕೀಯ ಪಕ್ಷಗಳು ಗೆಲ್ಲುವ ಸಲುವಾಗಿ ಏನೆಲ್ಲ ಸರ್ಕಸ್ ಮಾಡುತ್ತವೆ, ಆಮಿಷ ಒಡ್ಡುತ್ತವೆ, ಹಣ ಹಂಚುತ್ತವೆ ಎಂಬುದೆಲ್ಲ ಗೊತ್ತೇ ಇದೆ. ಚುನಾವಣಾ ಆಯೋಗದ ನಿಯಮಗಳು ಕಾಗದದ ಮೇಲಿದ್ದರೆ, ವಾಸ್ತವದಲ್ಲಿ ನಡೆಯುವುದು ಬೇರೆಯೇ. ರಾಜಕೀಯ ಪಕ್ಷಗಳು ಇದರಲ್ಲಿ ದೊಡ್ಡ ತಪ್ಪುದಾರರು ಎಂಬುದನ್ನು ಒಪ್ಪುತ್ತಲೇ, ಈ ಅಪಸವ್ಯದಲ್ಲಿ ಮತದಾರರಾದ ನಮ್ಮ ಪಾಲೂ ಇದೆಯೆಂಬುದನ್ನು ಒಪ್ಪಲೇಬೇಕಲ್ಲವೆ? ಎಂಎಲ್​ಎ ಚುನಾವಣೆಗೆ ಒಂದು ಕ್ಷೇತ್ರದಲ್ಲಿ ಹತ್ತಾರು ಕೋಟಿ ಖರ್ಚು ಮಾಡುತ್ತಾರೆಂಬ ಸಂಗತಿ ನಮ್ಮ ಆತ್ಮಸಾಕ್ಷಿಯನ್ನು ಕಲಕಬೇಕಲ್ಲವೆ? ಆತ್ಮಾವಲೋಕನಕ್ಕೆ ಒಳಪಡಿಸಬೇಕಲ್ಲವೆ?

ಹಾಗಂತ ಆಶಾಭಾವನೆ ಕಳೆದುಕೊಳ್ಳಬೇಕಿಲ್ಲ. ಇತಿಹಾಸದುದ್ದಕ್ಕೂ ಸವಾಲುಗಳಿಗೆ ಮುಖಾಮುಖಿಯಾಗುತ್ತ ಬಂದ ಭಾರತಕ್ಕೆ ಇಂಥದನ್ನು ಎದುರಿಸಿ ಜೀರ್ಣಿಸಿಕೊಳ್ಳುವ ಶಕ್ತಿಯಿದೆ ಎಂಬ ಬಗ್ಗೆ ನಮಗೆ ನಂಬಿಕೆಯಿರಬೇಕಷ್ಟೆ. ನಮ್ಮ ಆಧ್ಯಾತ್ಮಿಕ ಹಿನ್ನೆಲೆ ಈ ನಿಟ್ಟಿನಲ್ಲಿ ನಮ್ಮನ್ನು ಪೊರೆಯಬಲ್ಲುದು.

***

ಕರ್ನಾಟಕದಲ್ಲಿ ಈಗಷ್ಟೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶದ ವಿವಿಧೆಡೆಗಳಿಂದ ಬಂದ ನಾಯಕಗಣ ನೋಡಿ ಎಲ್ಲರೂ ಓಹೋ ಎಂದು ಹುಬ್ಬೇರಿಸಿದವರೇ. ಮತ್ತಿನ್ನೇನು? ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ… ಈ ಪಟ್ಟಿ ಇನ್ನೂ ಉದ್ದವಿದೆ. ಅಷ್ಟಕ್ಕೂ ಈ ಸಮಾರಂಭಕ್ಕೆ ಮಾಮೂಲಿ ಪ್ರಮಾಣವಚನಕ್ಕಿಂತ ಹೆಚ್ಚಿಗೆ ಮಹತ್ವ ಬರಲು ಕಾರಣವಿಲ್ಲದೆ ಇಲ್ಲ. ದೇಶದಲ್ಲಿ ಬಿರುಗಾಳಿಯಂತೆ ವಿಸ್ತರಿಸುತ್ತಿರುವ ಬಿಜೆಪಿಯ, ಇನ್ನೊಂದು ಮಾತಲ್ಲಿ ಹೇಳಬೇಕೆಂದರೆ ಮೋದಿ ಅಲೆಯನ್ನು ತಡೆಯುವ ಉದ್ದೇಶದಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟವನ್ನು ಸ್ಥಾಪಿಸುವ ಉದ್ದೇಶಕ್ಕೆ ಕರ್ನಾಟಕದಲ್ಲಿ ಚಾಲನೆ ದೊರೆತಿದೆ ಎಂದೇ ಈಗ ವಿಶ್ಲೇಷಿಸಲಾಗುತ್ತಿದೆ. ಇನ್ನು ಕೆಲವರ ಪ್ರಕಾರ, ಈ ಕಸರತ್ತು ಕಪ್ಪೆಗಳನ್ನು ತಕ್ಕಡಿಯಲ್ಲಿ ಹಾಕಿದಂತೆಯೇ ಸರಿ. ಮುಂದೆ ಇದರ ಪರಿಣಾಮಗಳು ಏನೇ ಇರಲಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾರತೀಯರಿಗೆ ಹೊಸ ಹೊಸ ಕನಸುಗಳನ್ನು ಕಟ್ಟಿಕೊಡುವ, ಹೊಸಯುಗದ ಸವಾಲಿಗೆ ದೇಶವನ್ನು ಸಜ್ಜುಗೊಳಿಸುವ ಖಚಿತ ಭರವಸೆ ನೀಡುವ, ಯುವಜನರ ಆವೇಶವನ್ನು, ಶಕ್ತಿಯನ್ನು ಉದ್ಯೋಗ ಹಾಗೂ ಸ್ವ-ಉದ್ಯೋಗದ ಮೂಲಕ ಉತ್ಪಾದನೆಯನ್ನಾಗಿ ಪರಿವರ್ತಿಸುವ ವಿಶ್ವಾಸ ಮೂಡಿಸುವ ನಾಯಕರತ್ತ ಜನರ ಚಿತ್ತ ಒಲಿದರೂ ಒಲಿಯಬಹುದು. ಏಕೆಂದರೆ 21ನೇ ಶತಮಾನದ ಎರಡನೇ ದಶಕ ಸಮೀಪಿಸುತ್ತಿರುವ ಕಾಲಘಟ್ಟದಲ್ಲಿ ಭಾರತೀಯರ ಆಶೋತ್ತರಗಳಿಗೆ ಸ್ಪಂದಿಸುವ ಮಹಾಸವಾಲು ರಾಜಕೀಯ ಪಕ್ಷಗಳ ಎದುರಿಗಿದೆ. ಈ ಕೆಲಸವನ್ನು ಮಹಾಮೈತ್ರಿಕೂಟ ಮಾಡುತ್ತದೋ ಅಥವಾ ಮೋದಿ ಮಾಡುತ್ತಾರೋ ಎಂಬುದನ್ನು ಕಾಲವೇ ಹೇಳಬೇಕಷ್ಟೆ.

ಕೊನೇ ಹನಿ: ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರೆಂಬುದನ್ನು ನಿರ್ಧರಿಸಲು ಆ ಕೂಟದೊಳಗೇ ಒಂದು ಮಿನಿ ಚುನಾವಣೆ ನಡೆಸಬೇಕಾಗುತ್ತದೇನೋ!

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top