More

    ಕೃಷಿ ಸಂಸ್ಕೃತಿಯ ಸಂಭ್ರಮ, ಸಂಕಟ, ಸಂದಿಗ್ಧ…

    ಕೃಷಿ ಸಂಸ್ಕೃತಿಯ ಸಂಭ್ರಮ, ಸಂಕಟ, ಸಂದಿಗ್ಧ...ನಗರಗಳಿಗೆ ಬಂದು ನೆಲಸುವವರು ಮೂಲದಲ್ಲಿ ಗ್ರಾಮೀಣ ಹಿನ್ನೆಲೆಯವರೇ. ಹೀಗಾಗಿಯೇ ಟೆರೇಸ್ ಗಾರ್ಡನ್, ಕುಂಡಗಳಲ್ಲಿ ಸಸಿ ಬೆಳೆಯುವುದು, ಹೀಗೆ ನಾನಾ ಉಪಾಯ ಕಂಡುಕೊಳ್ಳುತ್ತಾರೆ. ಟೆರೇಸ್ ಗಾರ್ಡನಿಂಗ್ ಎಂಬುದು ಈಚಿನ ವರ್ಷಗಳಲ್ಲಿ ಟ್ರೆಂಡೇ ಆಗಿಬಿಟ್ಟಿದೆ. ಈ ರೀತಿಯಲ್ಲಿಯಾದರೂ ಕೃಷಿ ಪರಂಪರೆ ಮುಂದುವರಿಯುವುದು ಶುಭಸೂಚನೆಯಲ್ಲವೆ?

    ಅದೊಂದು ಹಳ್ಳಿ. ಅಲ್ಲಿನ ಇತರರಂತೆ ಈ ದಂಪತಿಗೂ ಕೃಷಿಯೇ ಜೀವನೋಪಾಯ. ಒಂದು ದಿನ ಆತ ಹೊಲದಲ್ಲಿ ಊಳುತ್ತಿರುವಾಗ ಠಣ್ ಎಂಬ ಶಬ್ದ ಬಂದಿತು. ಅದೇನೆಂದು ನೋಡಲಾಗಿ, ಒಂದು ಸಣ್ಣ ಕಬ್ಬಿಣದ ಪೆಟ್ಟಿಗೆ ಗೋಚರಿಸಿತು. ನಮ್ಮ ಹೊಲದಲ್ಲಿ ಇದೇನಪಾ ಪೆಟ್ಟಿಗೆ ಎಂದು ಅಚ್ಚರಿಗೊಂಡ ಆತ, ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಗೆ ವಿಷಯ ತಿಳಿಸಿದ. ಪೆಟ್ಟಿಗೆಯನ್ನು ತೆರೆಯಲಾಗಿ, ಅದರಿಂದ ಒಂದು ಭೂತ ಹೊರಬಂತು. ‘ಓ ರೈತನೆ ನಾನು ನಿನಗೆ ಆಭಾರಿಯಾಗಿದ್ದೇನೆ. ಬಹಳ ವರ್ಷಗಳಿಂದ ಈ ಪೆಟ್ಟಿಗೆಯಲ್ಲಿ ಸಿಕ್ಕಿಕೊಂಡು ಫಜೀತಿಪಡುತ್ತಿದ್ದೆ. ಸ್ವಾತಂತ್ರ್ಯವಿಲ್ಲದೆ ಕಂಗಾಲಾಗಿದ್ದೆ. ನೀನು ದೇವರಂತೆ ಬಂದು ನನ್ನನ್ನು ಇದರಿಂದ ಮುಕ್ತಗೊಳಿಸಿದೆ. ಹೀಗಾಗಿ ಇನ್ನು ನಾನು ನಿನ್ನ ಸೇವಕ. ನೀನು ಯಾವ ಕೆಲಸ ಹೇಳಿದರೂ ಶಿರಸಾವಹಿಸಿ ಮಾಡುತ್ತೇನೆ’ ಎಂದು ಭೂತ ಹೇಳಿತು. ಅದೇ ಉಸಿರಿನಲ್ಲಿ ಭೂತ ಸ್ಪಷ್ಟಪಡಿಸಿತು-‘ಆದರೆ ಒಂದು ಷರತ್ತು ಇದೆ. ಯಾವುದೇ ಕಾರಣಕ್ಕೂ ನಾನು ಕೆಲಸವಿಲ್ಲದೆ ಖಾಲಿ ಇರಬಾರದು. ಹಾಗೇನಾದರೂ ನೀನು ನನಗೆ ಕೆಲಸ ಕೊಡದೆ ಖಾಲಿ ಕೂಡ್ರಿಸಿದರೆ ನಾನು ನಿನ್ನನ್ನೇ ತಿನ್ನುತ್ತೇನೆ’. ಕೃಷಿಯಲ್ಲಿ ಕೆಲಸಕ್ಕೆ ಕಡಿಮೆಯೆ? ವರ್ಷವಿಡೀ ದುಡಿದರೂ ಮುಗಿಯುವುದಿಲ್ಲ. ಕೆಲವು ದಿನಕ್ಕೆ ಈ ಭೂತಕ್ಕೆ ಶ್ರಮವಾಗಿ ಸುಮ್ಮನಾಗುತ್ತದೆ ಎಂದುಕೊಂಡ ರೈತ ಅದರ ಷರತ್ತಿಗೆ ಸಮ್ಮತಿಸಿದ. ಮೊದಲಿಗೆ, ಹೊಲವನ್ನು ಊಳಲು ಹೇಳಿದ. ಕೆಲವೇ ಕ್ಷಣಗಳಲ್ಲಿ ಆ ಕೆಲಸ ಮಾಡಿದ ಭೂತ ವಾಪಸ್ ಬಂದು ಮುಂದಿನ ಕೆಲಸ ಏನು ಎಂದಿತು. ರೈತನಿಗೆ ಆಶ್ಚರ್ಯ. ಇಷ್ಟು ಬೇಗ ಮುಗೀತಾ ಎಂದು. ನೋಡಿದರೆ, ಹೌದು, ಹೊಲವನ್ನೆಲ್ಲ ಊಳಲಾಗಿತ್ತು. ನಂತರ, ಇಡೀ ಹೊಲಕ್ಕೆ ನೀರು ಹಾಯಿಸಲು ಹೇಳಿದ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಭೂತ ಕೆಲಸ ಪೂರೈಸಿತು. ಮರಳಿ ಬಂದು ‘ಈಗ ಯಾವ ಕೆಲಸ?’ ಎಂದು ಕೇಳಿತು. ರೈತನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ನಂತರ ಮನೆಯನ್ನು ಸ್ವಚ್ಛಗೊಳಿಸಲು ಹೇಳಿದ. ಭೂತಕ್ಕೆ ಅದೊಂದು ಲೆಕ್ಕವೆ? ಅದೂ ಮುಗಿದುಹೋಯಿತು. ರೈತನಿಗೆ ಈಗ ಚಿಂತೆ ಶುರುವಾಯಿತು. ಕೆಲಸ ಕೊಡದಿದ್ದರೆ ತನ್ನನ್ನೇ ತಿನ್ನುವೆನೆಂದು ಹೇಳಿದೆ. ಹೆಂಡತಿ ಬಳಿ ಈ ವಿಷಯ ಪ್ರಸ್ತಾಪಿಸಿದ. ಆಕೆಯೋ ಬಹಳ ಜಾಣೆ ಮತ್ತು ವಿವೇಕಿ. ವಾಸ್ತವದಲ್ಲಿ ಆಕೆ ಬಂದ ನಂತರವೇ ಈ ರೈತನ ಮನೆಯಲ್ಲಿ ಸಂತಸ ಕಂಡಿದ್ದು. ಆಕೆ ಕೆಲ ಕ್ಷಣ ಆಲೋಚಿಸಿ ಒಂದು ಉಪಾಯ ಹೇಳಿದಳು- ‘ನಮ್ಮ ಮನೆಯ ನಾಯಿ ಇದೆಯಲ್ಲ, ಅದರ ಬಾಲವನ್ನು ನೇರ ಮಾಡಲು ಹೇಳೋಣ. ಆಗ ಭೂತ ಏನು ಮಾಡುತ್ತದೆ ನೋಡೋಣ…’

    ರೈತ ಒಪ್ಪಿದ. ಭೂತವನ್ನು ಕರೆದು ಹೇಳಿದ. ಭೂತಕ್ಕೋ ಇದೆಂಥ ಕೆಲಸ ಎಂಬ ಉದಾಸೀನ. ಕೆಲಸ ಶುರುಮಾಡಿತು. ನಾಯಿಯ ಬಾಲ ಹಿಡಿದು ನೇರ ಮಾಡಿದಷ್ಟು ಹೊತ್ತು ಸರಿ ಇರುತ್ತಿತ್ತು. ನಂತರ ಮತ್ತೆ ಡೊಂಕೇ ಆಗುತ್ತಿತ್ತು. ಭೂತಕ್ಕೂ ಇದೊಂದು ಚೋದ್ಯದಂತೆ ಕಂಡಿತು. ಯತ್ನ ಮಾಡುತ್ತಲೇ ಹೋಯಿತು. ಉಹುಂ. ಕೊನೆಗೂ ಸೋತೆನೆಂದು ಒಪ್ಪಿತು. ರೈತನೂ ನಿರಾಳನಾದ.

    ಕೃಷಿಕರಿಗೆ ಸಮಸ್ಯೆಗಳೇನು ಹೊಸದಲ್ಲ. ಒಂದು ಲೆಕ್ಕದಲ್ಲಿ ಸಮಸ್ಯೆಗಳ ಜತೆಯೇ ಜೀವನ. ಹಾಗಂತ ಹಿಂದಡಿ ಇಡುವವರಲ್ಲ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಕೆ ಪ್ರಮುಖ ವಾಣಿಜ್ಯ ಬೆಳೆ. ವಿಶೇಷವಾಗಿ ಅಡಕೆ ಕೊಯ್ಲಿನ ಸಂದರ್ಭದಲ್ಲಿ ತೆರಪಿಲ್ಲದ ಕೆಲಸ ಇರುತ್ತದೆ. ಕೆಲ ವರ್ಷಗಳಿಂದ ಕೂಲಿ ಕಾರ್ವಿುಕರ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಕೊನೆ ಕೊಯ್ಯುವವರ ತುಟಾಗ್ರತೆ ಬಹಳವಿದೆ. 60-70 ಅಡಿ ಎತ್ತರದ ಮರ ಏರಿ ಅಡಕೆ ಕೊನೆ ಕೊಯ್ಯುವುದು ಸಾಹಸವೇ ಸರಿ. ಅದಕ್ಕೆ ಕೌಶಲದ ಜತೆಗೆ ಧೈರ್ಯವೂ ಬೇಕು. ಕ್ರಮೇಣ ಕೊನೆ ಕೊಯ್ಯುವವರ ಸಂಖ್ಯೆ ಕಡಿಮೆಯಾಗುತ್ತ ಬಂದು ಈಗಂತೂ ಸಮಸ್ಯೆ ತೀವ್ರವಾಗಿದೆ. ಹೀಗಾಗಿಯೇ ಫಲಗುತ್ತಿಗೆ (ಅಂದರೆ ಅಡಕೆ ಗುತ್ತಿಗೆದಾರ ತೋಟದ ಕೊನೆಯನ್ನು ತಾನೇ ಕೊಯ್ಯಿಸಿ, ಒಯ್ಯುವುದು. ಮುಂಚಿನ ಮಾತುಕತೆಯಂತೆ ರೈತನಿಗೆ ನಿರ್ದಿಷ್ಟ ಹಣ ನೀಡುವುದು) ಪದ್ಧತಿ ಹೆಚ್ಚುತ್ತ ಬಂತು. ಇಂತಹ ಸನ್ನಿವೇಶದಲ್ಲಿ ಕೆಲವರು ಸಂಶೋಧನಾ ಆಸಕ್ತಿಯವರು ಹೊಸರೀತಿಯಲ್ಲಿ ಆಲೋಚಿಸಿ, ಮರ ಏರುವುದಕ್ಕೆ ಸುಲಭ ಉಪಾಯವನ್ನೇನಾದರೂ ಕಂಡುಕೊಳ್ಳಬಹುದೇ ಎಂದು ಅನ್ವೇಷಣೆಗೆ ಮುಂದಾದರು. ಅದರ ಫಲವೇ ಅಡಕೆ ಮರ ಏರುವ ಮಷಿನ್ ತಯಾರಾಯಿತು. ಇದು ಇನ್ನೂ ವ್ಯಾಪಕವಾಗಿ ಬಳಕೆಗೆ ಬರಬೇಕು ಎಂಬುದು ನಿಜವಾದರೂ, ಕೃಷಿಕರಿಗೆ ಪರ್ಯಾಯ ಆಯ್ಕೆಯನ್ನು ನೀಡಿದ್ದು ಸುಳ್ಳಲ್ಲ. ಅದೇ ರೀತಿ, ಅಡಕೆ ಸುಲಿಯುವವರ ಸಮಸ್ಯೆಯಾದಾಗ ಕೆಲವು ಹಳ್ಳಿಗಳಲ್ಲಿ ಮುರಿಯಾಳು ಪದ್ಧತಿ ಮತ್ತೆ ರೂಢಿಗೆ ಬಂತು. ಅಂದರೆ ಅವರ ಮನೆ ಕೆಲಸಕ್ಕೆ ಇವರು, ಇವರ ಮನೆ ಕೆಲಸಕ್ಕೆ ಅವರು ಹೆಗಲು ಕೊಡುವುದು. ಹಾಗೇ, ಗುತ್ತಿಗೆದಾರನೊಬ್ಬ ಒಂದೇ ಕಡೆ ಒಂದಷ್ಟು ಕಾರ್ವಿುಕರನ್ನು ಕಲೆಹಾಕಿ ಅಲ್ಲಿ ಅಡಕೆ ಸುಲಿದು ಕೊಡುವುದೂ ಶುರುವಾಯಿತು. ಹಾಗೆ, ಅಡಕೆ ಸುಲಿಯುವ ಯಂತ್ರವೂ ತಯಾರಾಯಿತು. ಈಚಿನ ದಿನಗಳಲ್ಲಿ ಮತ್ತೊಂದು ರೀತಿಯ ಪದ್ಧತಿ ಬಂದಿದೆ. ಹಸಿ ಅಡಕೆ ಪ್ರೊಸೆಸ್ ತುಂಬ ಕಷ್ಟ. ಅಡಕೆ ಕೊಯ್ದ ನಂತರ ವಿಳಂಬಿಸದೆ ಸುಲಿಯಬೇಕು, ಬೇಯಿಸಿ 10-12 ಬಿಸಿಲಿನಲ್ಲಿ ಒಣಗಿಸಬೇಕು. ಇದು ನಿರಂತರ ಕೆಲಸ. ಎಷ್ಟೊ ಜನರ ಕೈಲಿ ಇದನ್ನೆಲ್ಲ ಮಾಡುವುದು ಆಗುತ್ತಿಲ್ಲ. ಇದಕ್ಕೆ ಪರಿಹಾರ ಎಂಬಂತೆ ಹಸಿ ಅಡಕೆಯನ್ನೇ ಖರೀದಿ ಮಾಡುವ ರೂಢಿ ಶುರುವಾಗಿದೆ. ಟಿಎಸ್​ಎಸ್​ನಂತಹ ಕೃಷಿ ಸಂಸ್ಥೆಗಳಲ್ಲಿ ಟೆಂಡರ್ ಮೂಲಕ ಖರೀದಿ ನಡೆಯುವುದರಿಂದ ರೈತರಿಗೆ ಸ್ಪರ್ಧಾತ್ಮಕ ದರವೂ ದೊರೆಯುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಂಬೋಣ. ಇಂಥದರಿಂದ ಸಮಸ್ಯೆಗೆ ಕೆಲಮಟ್ಟಿಗೆ ಪರಿಹಾರೋಪಾಯ ದೊರೆಯುವುದು ನಿಜವಾದರೂ, ಇಂತಹ ಕ್ರಮಗಳಿಂದ ಮೂಲ ಕೃಷಿಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂದು ವಾದಿಸುವವರೂ ಇದ್ದಾರೆ. ಅದೇ ಸಮಯದಲ್ಲಿ, ಕೃಷಿ ಮಾಡಲಾಗದು ಎಂದು ಜಮೀನು ಮಾರುವುದೋ ಅಥವಾ ಜಮೀನನ್ನು ಪಾಳುಬಿಡುವುದೋ ಮಾಡುವುದಕ್ಕಿಂತ ಇದು ಉತ್ತಮವಲ್ಲವೆ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಅಡಕೆ ಮಾತ್ರವಲ್ಲ ಬೇರೆ ಬೆಳೆಗಳಲ್ಲಿಯೂ ಇಂಥ ಸಂಶೋಧನಾ ಪ್ರವೃತ್ತಿಯನ್ನು ಗಮನಿಸಬಹುದು. ಅಂದಹಾಗೆ ರೈತರೇ ಇಂಥ ಆವಿಷ್ಕಾರಕ್ಕೆ ಮುಂದಾಗುವುದಿದೆಯಲ್ಲ ಅದು ಆಶಾದಾಯಕ ಭರವಸೆ. ಇದರರ್ಥ ಕೃಷಿರಂಗ ಎಲ್ಲ ಸಮಸ್ಯೆಗಳಿಂದ ಮುಕ್ತವಾಗಿದೆ ಎಂದಲ್ಲ. ಆದರೆ ಶ್ರದ್ಧೆಯಿಂದ ಕೃಷಿ ಮಾಡುವವನಿಗೆ ಈಗ ಅವಕಾಶಗಳಿವೆ ಮತ್ತು ಮಾಹಿತಿ-ತಂತ್ರಜ್ಞಾನದ ನೆರವೂ ಇದೆ.

    ಬೆಂಗಳೂರಿನ ಹೆಸರಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇದೆ (ಐಐಎಚ್​ಆರ್.) ಇಲ್ಲಿ ಪ್ರತಿವರ್ಷ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗುತ್ತದೆ. ಈ ವರ್ಷ ಕರೊನಾ ಕಾರಣಕ್ಕೆ ಜನರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಆಗಿದ್ದು ಹೌದಾದರೂ, ಜನರ ಉತ್ಸಾಹಕ್ಕೆ ಕೊರತೆ ಏನೂ ಇರಲಿಲ್ಲ. ಕರೊನಾ ಮಾಯವಾಯಿತು ಎಂಬ ರೀತಿಯಲ್ಲಿ ಜನರು ಬಂದು ಮಳಿಗೆಗಳನ್ನು ಸುತ್ತಿದರು, ಪ್ರಾತ್ಯಕ್ಷಿಕೆ ವೀಕ್ಷಿಸಿದರು. 20 ಅಡಿಗಿಂತ ಹೆಚ್ಚು ಎತ್ತರ ಬೆಳೆದ ಟೊಮಾಟೊ ಗಿಡ ಕಂಡು ‘ವಾವ್’ ಎಂದರು; ಬಳ್ಳಿಯಲ್ಲಿ ಎಲೆ ಕಾಣದಷ್ಟು ರೀತಿಯಲ್ಲಿ ಬಿಟ್ಟ ಬೀನ್ಸ್ ಕಂಡು ಅಚ್ಚರಿಗೊಂಡರು. ಇಲ್ಲಿ ಎಂದಲ್ಲ, ಯಾವುದೇ ಕೃಷಿಮೇಳ ನಡೆದರೂ ಕೃಷಿಕರ ಜತೆಗೆ ಜನಸಾಮಾನ್ಯರೂ ಹೋಗುವುದು ಕಂಡುಬರುತ್ತದೆ. ತರಕಾರಿ ಮತ್ತು ಹೂವಿನ ಬೀಜಗಳಿಗೆ ಭರ್ಜರಿ ಬೇಡಿಕೆಯಿರುತ್ತದೆ. ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಪ್ರತಿ ವರ್ಷ ಗಣರಾಜ್ಯ ದಿನ ಮತ್ತು ಸ್ವಾತಂತ್ರೊ್ಯೕತ್ಸವ ಹೀಗೆ ಎರಡು ಸಲ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಇದಕ್ಕೆ ಜನಸಾಗರವೇ ಹರಿದುಬರುತ್ತದೆ. ಈಚಿನ ಮತ್ತೊಂದು ಟ್ರೆಂಡ್ ಎಂದರೆ, ಸಾವಯವ ಉತ್ಪನ್ನಗಳು. ಅದರಲ್ಲೂ ಕರೊನಾ ಬಂದ ನಂತರದಲ್ಲಂತೂ ಈ ಆಸಕ್ತಿ ಮತ್ತಷ್ಟು ಹೆಚ್ಚಿದೆ. ಅಂದರೆ, ಮಾನವನಲ್ಲಿ ಮೂಲಭೂತವಾಗಿರುವ ಕೃಷಿ ಸಂಸ್ಕೃತಿ ಹೀಗೆ ಅವಕಾಶ ಸಿಕ್ಕಾಗ ಮುನ್ನೆಲೆಗೆ ಬರುತ್ತದೆಯಾ? ನಗರಗಳಲ್ಲಿ ಇರುವ ಜನರಿಗೆ ಆಸಕ್ತಿ ಇದ್ದರೂ ಕೃಷಿಯನ್ನು ಮಾಡುವುದಕ್ಕೆ ಆಗದು. ಆದರೆ ಅಸ್ತಿತ್ವದ ಬೇರನ್ನು ಮರೆಯುವುದುಂಟೆ? ಅಷ್ಟಕ್ಕೂ ನಾನಾ ಕಾರಣಗಳಿಗಾಗಿ ನಗರಗಳಿಗೆ ಬಂದು ನೆಲಸುವವರು ಮೂಲದಲ್ಲಿ ಗ್ರಾಮೀಣ ಹಿನ್ನೆಲೆಯವರೆ ತಾನೆ. ಹೀಗಾಗಿಯೇ ಟೆರೇಸ್ ಗಾರ್ಡನ್, ಕುಂಡಗಳಲ್ಲಿ ಸಸಿ ಬೆಳೆಯುವುದು, ಹೀಗೆ ನಾನಾ ಉಪಾಯ ಕಂಡುಕೊಳ್ಳುತ್ತಾರೆ. ಟೆರೇಸ್ ಗಾರ್ಡನಿಂಗ್ ಎಂಬುದು ಈಚಿನ ವರ್ಷಗಳಲ್ಲಿ ಒಂದು ಟ್ರೆಂಡೇ ಆಗಿಬಿಟ್ಟಿದೆ. ಎಷ್ಟೆಂದರೆ, ಮನೆಗೆ ಸಾಕಾಗುವಷ್ಟು ತರಕಾರಿ ಮತ್ತು ಹೂವನ್ನು ಅಲ್ಪ ಜಾಗದಲ್ಲಿಯೇ ಬೆಳೆದುಕೊಳ್ಳುವವರಿದ್ದಾರೆ. ಈ ರೀತಿಯಲ್ಲಿಯಾದರೂ ಕೃಷಿ ಪರಂಪರೆ ಮುಂದುವರಿಯುವುದು ಶುಭಸೂಚನೆಯಲ್ಲವೆ?

    ಕರೊನಾ ಕಾರಣದಿಂದಾಗಿ ಬಹುತೇಕ ಎಲ್ಲ ರಂಗಗಳು ಹೊಡೆತ ತಿಂದಿದ್ದು ಗೊತ್ತೇ ಇದೆ. ಚೀನಾವನ್ನು ಹೊರತುಪಡಿಸಿ ಎಲ್ಲ ದೇಶಗಳ ಜಿಡಿಪಿ ಮೈನಸ್ ಆಗಿದೆ. ಇಂಥ ಬಿಕ್ಕಟ್ಟಿನಲ್ಲಿಯೂ ಭಾರತದ ಕೃಷಿರಂಗ ಮಾತ್ರ ಎದೆಯೊಡ್ಡಿ ನಿಂತಿತು ಎಂಬುದು ಹೆಮ್ಮೆಯ ಸಂಗತಿಯಲ್ಲವೆ? 2020ರ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದ ಕೃಷಿ ರಫ್ತು ಪ್ರಮಾಣ ಶೇ.43ರಷ್ಟು ಹೆಚ್ಚಿತ್ತು. ಅಂದರೆ ರಫ್ತು ಮೊತ್ತ 37,397 ಕೋಟಿ ರೂ.ಗಳಿಂದ 53,526 ಕೋಟಿ ರೂ.ಗಳಿಗೆ ಏರಿತು. ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿತ್ತು. ಆದರೆ, ಹಿಂದಿನ ಕೆಲ ವರ್ಷಗಳಲ್ಲಿ ರಫ್ತು ಪ್ರಮಾಣ ಕುಸಿದಿರುವುದನ್ನೂ ಗಮನಿಸಬಹುದು. 2004-05ರಲ್ಲಿ 8.7 ಶತಕೋಟಿ ಡಾಲರ್ ಇದ್ದ ರಫ್ತು ಮೊತ್ತ 2014-15ರ ವೇಳೆಗೆ ಐದು ಪಟ್ಟು ಹೆಚ್ಚಿ 42.6 ಬಿಲಿಯನ್ ಡಾಲರ್​ಗೆ ಏರಿತ್ತು. 2016-17ರಲ್ಲಿ 33 ಬಿಲಿಯನ್ ಡಾಲರ್​ಗೆ ಕುಸಿಯಿತು. ಕೃಷಿ ವಲಯದಲ್ಲಿ ಆದಾಯ ಕುಸಿದಿದ್ದು ಇದಕ್ಕೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದರು.

    ಭಾರತದ ಸಂಸ್ಕೃತಿ, ಹಬ್ಬಗಳೆಲ್ಲವೂ ಕೃಷಿಯೊಂದಿಗೆ ಬೆರೆತಿವೆ. ಬಿತ್ತನೆ, ನಾಟಿಯಿಂದ ಹಿಡಿದು ಕೊಯ್ಲಿನ ತನಕ ಈ ಹಬ್ಬಗಳು ಕೃಷಿಯ ಜತೆ ಬೇರ್ಪಡಿಸಲಾಗದಂತೆ ಗಟ್ಟಿಯಾಗಿ ಬೆಸೆದುಕೊಂಡಿವೆ. ಇದು ನಮ್ಮ ಸಂಸ್ಕೃತಿ, ಪರಂಪರೆ.

    | ನರೇಂದ್ರ ಮೋದಿ ಪ್ರಧಾನಮಂತ್ರಿ

    ಜೀವನದಲ್ಲಿ ಒಮ್ಮೆಯಾದರೂ ಡಾಕ್ಟರ್, ವಕೀಲ, ಪೊಲೀಸ್ ಮತ್ತು ಧಮೋಪದೇಶಕ ಇವರನ್ನು ಭೇಟಿಯಾಗಬೇಕಾಗುತ್ತದೆ. ಆದರೆ ಪ್ರತಿದಿನವೂ ಮೂರು ಸಲ ರೈತನ ಅಗತ್ಯ ಇರುತ್ತದೆ ಎಂದು ನನ್ನ ಅಜ್ಜ ಸದಾ ಹೇಳುತ್ತಿದ್ದರು.

    | ಬ್ರೆಂಡಾ ಶೇಹೋಪ್ ಕೆನಡಾದ ಬರಹಗಾರ್ತಿ, ಕೃಷಿ ಕಾರ್ಯಕರ್ತೆ

    ಕೊನೇ ಮಾತು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ, ಅಲ್ಲಿ ಖಲಿಸ್ತಾನ್ ಚಳವಳಿಯವರು ಸೇರಿದಂತೆ ಬೇರೆ ಬೇರೆ ಶಕ್ತಿಗಳ ಪ್ರವೇಶದ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆದರೆ ಅಲ್ಲಿಗೆ ರೈತರು ಐಷಾರಾಮಿ ವಾಹನಗಳಲ್ಲಿ ಬಂದರು, ಪಿಜ್ಜಾ ತಿಂದರು ಎಂದೆಲ್ಲ ಕೂಡ ಟೀಕೆ ಕೇಳಿಬಂತು. ಬೇರೆಡೆಯ ರೈತರೂ ಎಸ್​ಯುುವಿ ವಾಹನಗಳನ್ನು ಬಳಸುವಂತಾಗಲಿ, ಅದರಲ್ಲಿ ತಪ್ಪೇನು, ಅಲ್ಲವೆ?

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts