More

    ಹರಿದಾಸಪುರದ ಸಂಭ್ರಮ ಎಲ್ಲೆಡೆ ಪ್ರತಿಧ್ವನಿಸಲಿ…

    ಹರಿದಾಸಪುರದ ಸಂಭ್ರಮ ಎಲ್ಲೆಡೆ ಪ್ರತಿಧ್ವನಿಸಲಿ...ಮನೆಯಲ್ಲಿ ಗೃಹಿಣಿ ಸಾಮಾನ್ಯವಾಗಿ ಎಲ್ಲರಿಗಿಂತ ಕೊನೆಗೆ ಊಟ ಮಾಡುತ್ತಾಳೆ. ಕೆಲವೊಮ್ಮೆ ಆಕೆಗೆಂದು ಹೊಟ್ಟೆ ತುಂಬುವಷ್ಟು ಆಹಾರ ಇರುವುದಿಲ್ಲ. ಆದರೂ ಆಕೆ ಏನೊಂದೂ ಗೊಣಗದೆ ತನ್ನ ಪಾಲಿಗೆ ಇದ್ದುದನ್ನು ಸ್ವೀಕರಿಸಿ ಮತ್ತೆ ಮನೆಗೆಲಸಕ್ಕೆ ಸೆರಗು ಸಿಕ್ಕಿಸಿ ತಯಾರಾಗುತ್ತಾಳೆ. ಇದು ಸಹ ತ್ಯಾಗದ ಮತ್ತೊಂದು ರೂಪವಲ್ಲದೆ ಇನ್ನೇನು?

    ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಪುರ ಮಂಡಲದಲ್ಲಿ ಹರಿದಾಸಪುರ ಎಂಬ ಹೆಸರಿನ ಹಳ್ಳಿ. ಅಲ್ಲಿನ ಯಾವುದೇ ಮನೆಯಲ್ಲಿ ಹೆಣ್ಣುಮಗು ಜನಿಸಿದರೂ ಊರಿಗೆ ಊರೇ ಸಂಭ್ರಮಿಸುತ್ತದೆ. ಅಷ್ಟೇ ಅಲ್ಲ, ಮಗುವಿನ ಜನ್ಮದಿನವನ್ನು ಊರವರೆಲ್ಲ ಸೇರಿ ಆಚರಿಸುತ್ತಾರೆ. ಕಳೆದ ಒಂದು ವರ್ಷದಿಂದ ಚಾಲ್ತಿಗೆ ಬಂದಿರುವ ಪದ್ಧತಿ ಇದು. ‘ಅಯ್ಯೋ ಮತ್ತೆ ಹೆಣ್ಣು ಮಗೂನಾ?’ ಎಂದು ಆಕ್ಷೇಪದ ದನಿಯಲ್ಲಿ ಮಾತನಾಡುವವರ ನಡುವೆ ಹೆಣ್ಣುಮಗುವಿನ ಆಗಮನವನ್ನು ಸಂಭ್ರಮಿಸುವ ಈ ಪರಿ ವಿಶಿಷ್ಟವಾದುದಲ್ಲವೆ? 2020ರಲ್ಲಿ ಅಲ್ಲಿ ಎಂಟು ಪುತ್ರಿಯರ ಆಗಮನವಾಗಿತ್ತು. 2019ರಲ್ಲಿ 49 ಹೆಣ್ಣುಮಕ್ಕಳ ಜನನವಾಗಿತ್ತು. ಇನ್ನೂ ಒಂದು ವಿಶೇಷವೆಂದರೆ, ಈ ಎಲ್ಲ ಹೆಣ್ಣುಮಕ್ಕಳಿಗೆ ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯ (ಎಸ್​ಎಸ್​ವೈ) ಉಳಿತಾಯ ಖಾತೆಯನ್ನೂ ತೆರೆಯಲಾಗುತ್ತದೆ. ಅಂದಹಾಗೆ, ಹರಿದಾಸಪುರದಲ್ಲಿ ಇಂಥ ಸಾಮೂಹಿಕ ಸಡಗರ ರೂಢಿಗೆ ಬರಲು ವಿಶಿಷ್ಟ ಕಾರಣವೂ ಇದೆ. 2020ರ ಜನವರಿ 1ರಂದು ಅಲ್ಲಿನ ಸತ್ಯವತಿ ಎಂಬಾಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಅದು ಆಕೆಯ ಕುಟುಂಬದಲ್ಲಿ ಮೂರನೆಯ ಹೆಣ್ಣುಮಗುವಾಗಿತ್ತು. ಹೀಗಾಗಿ ಆ ವಿಚಾರವಾಗಿ ಕುಟುಂಬದಲ್ಲಿ ಸ್ವಲ್ಪ ಮನಸ್ತಾಪವಾಗಿತ್ತಂತೆ. ಪಂಚಾಯಿತಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಈ ಸಂಗತಿ ಗೊತ್ತಾಗಿ ಅವರ ಮನೆಗೆ ಬಂದರು. ‘ಹೆಣ್ಣುಮಗು ಜನಿಸಿದ ಮಾತ್ರಕ್ಕೆ ಬೇಸರಪಡುವುದು ಏನಿಲ್ಲ, ಈಗ ಆ ಕಾಲ ಹೋಗಿದೆ. ಹೆಣ್ಣುಮಗು ಬಂದಿದ್ದಕ್ಕಾಗಿ ಖುಷಿಪಡಿ’ ಎಂದು ಕುಟುಂಬದವರಿಗೆ ತಿಳಿಹೇಳಿ, ಭವ್ಯಶ್ರೀಯ (ಮಗುವಿನ ಹೆಸರು) ಜನ್ಮದಿನವನ್ನು ಆಚರಿಸಿದರು. ಅಲ್ಲಿಂದಾಚೆಗೆ ಊರಿನ ಯಾವ ಮನೆಯಲ್ಲಿ ಹೆಣ್ಣುಮಗು ಜನಿಸಿದರೂ ಊರ ವತಿಯಿಂದ ಜನ್ಮದಿನ ಆಚರಿಸಿ ಸಿಹಿ ವಿತರಿಸಿ ದೀಪಹಚ್ಚಿ ಸಂಭ್ರಮಿಸುವ ರೂಢಿ ಶುರುವಾಯಿತು…

    ತೆಲಂಗಾಣದ ಹರಿದಾಸಪುರದಲ್ಲಿ ಕಂಡುಬಂದಿರುವ ಇಂಥ ಸಕಾರಾತ್ಮಕ ಮನೋಭಾವ ನಮ್ಮ ದೇಶದ ಇತರ ಕೆಲ ರಾಜ್ಯಗಳಲ್ಲೂ ಕಂಡುಬಂದಿರುವುದು ಸ್ವಲ್ಪ ಸಮಾಧಾನಕರ. 2020ರ ಅಂಕಿಅಂಶ ತೆಗೆದುಕೊಂಡರೆ, ಭಾರತದಲ್ಲಿ ಪುರುಷ ಮತ್ತು ಮಹಿಳೆ ಅನುಪಾತ 108:100 ಇದೆ. ಅಂದರೆ, 108 ಪುರುಷರಿಗೆ ಹೆಣ್ಣುಮಕ್ಕಳ ಸಂಖ್ಯೆ 100. ಹಿಂದೆ ಲಿಂಗಾನುಪಾತದ ಕಾರಣಕ್ಕೆ ಕುಖ್ಯಾತಿಗೀಡಾಗಿದ್ದ ಹರಿಯಾಣ ಈಗ ಈ ನಿಟ್ಟಿನಲ್ಲಿ ಸುಧಾರಿಸಿದೆ. 2011ರಲ್ಲಿ ಅಲ್ಲಿ ಈ ಅನುಪಾತ 1000:833 ಇತ್ತು. 2019ರಲ್ಲಿ ಈ ಪ್ರಮಾಣ 1000:923 ಇತ್ತು. ಈಗ 2020ರಲ್ಲಿ 1000:922 ಆಗಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಹೆಣ್ಣು ಭ್ರೂಣಹತ್ಯೆ ತಡೆಯಂತಹ ಪ್ರಮುಖ ಯೋಜನೆಗಳಿಗೆ ಕರೊನಾ ಕಾರಣದಿಂದಾಗಿ 2020ರಲ್ಲಿ ಸ್ವಲ್ಪ ಹಿನ್ನಡೆಯಾದರೂ, ಹರಿಯಾಣದ ಒಟ್ಟಾರೆ ಸನ್ನಿವೇಶ ಆಶಾದಾಯಕವಾಗಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಕರ್ನಾಟಕದಂತಹ ಕೆಲ ರಾಜ್ಯಗಳಲ್ಲಿ ಈ ಅನುಪಾತ ಉಲ್ಟಾ ಇದೆ. ಅಂದರೆ ಹೆಣ್ಣುಮಕ್ಕಳ ಸಂಖ್ಯೆಯೇ ಜಾಸ್ತಿ ಇದೆ.

    2019-20ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ, ಕರ್ನಾಟಕದಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ನಗರ ಪ್ರದೇಶದಲ್ಲಿ 1,063 ಹಾಗೂ ಗ್ರಾಮೀಣ ಪ್ರದೇಶದಲ್ಲಿ 931 ಹೆಣ್ಣು ಮಕ್ಕಳಿದ್ದಾರೆ. 2015-16ರ ಸಮೀಕ್ಷೆಯ ಪ್ರಕಾರ ಈ ಅನುಪಾತ ನಗರ ಪ್ರದೇಶದಲ್ಲಿ 1000:978 ಗ್ರಾಮೀಣ ಪ್ರದೇಶದಲ್ಲಿ 1000:910 ಇತ್ತು. ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15 ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣ ಏರಿಕೆಯಾಗಿದೆ. ಬೀದರ್, ವಿಜಯಪುರ, ಚಿಕ್ಕಮಗಳೂರು, ಹಾವೇರಿ, ರಾಯಚೂರು ಸೇರಿದಂತೆ 15 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣ ಕುಸಿದಿದೆ.

    ಹೆಣ್ಣು ಮಕ್ಕಳ ಜನನದಲ್ಲಿ ಮಾತ್ರವಲ್ಲದೆ ಮಹಿಳೆಯರ ಸಂಖ್ಯೆಯಲ್ಲೂ ಸುಧಾರಣೆ ಕಂಡು ಬಂದಿರುವುದು ವಿಶೇಷ. ರಾಜ್ಯದಲ್ಲಿ ಪ್ರತಿ ಸಾವಿರ ಪುರುಷರಿಗೆ 1,035 ಮಹಿಳೆಯರಿದ್ದಾರೆ. 2015-16 ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಪುರುಷ ಮತ್ತು ಮಹಿಳೆಯರ ಅನುಪಾತ 1000: 979 ಆಗಿತ್ತು.

    ಇಷ್ಟಿದ್ದರೂ, ಜಾಗತಿಕವಾಗಿ ಹೋಲಿಸಿದಲ್ಲಿ ಭಾರತದ ಸ್ಥಿತಿ ಸುಧಾರಿಸಬೇಕಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಪುರುಷ-ಮಹಿಳೆ ಅನುಪಾತದಲ್ಲಿ ಭಾರತ ಜಗತ್ತಿನ 201 ದೇಶಗಳ ಪೈಕಿ 189ನೇ ಸ್ಥಾನದಲ್ಲಿದೆ. ಏಷ್ಯಾದ 51 ದೇಶಗಳನ್ನು ಪರಿಗಣಿಸಿದರೆ, ಭಾರತ 42ನೇ ಸ್ಥಾನದಲ್ಲಿದೆ. 2011ರ ಜನಗಣತಿ ವರದಿ ಅನ್ವಯ, ಪುರುಷ-ಮಹಿಳೆ ಅನುಪಾತ ಪ್ರಮಾಣ 1000:943 ಇತ್ತು. ಆ ಲೆಕ್ಕದಲ್ಲಿ ಈಗ ಸಾಕಷ್ಟು ಸುಧಾರಿಸಿದೆ.

    ಒಟ್ಟಾರೆ ದೇಶದಲ್ಲಿಯೂ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಸದ್ಯದ ಮಾಹಿತಿ ಪ್ರಕಾರ, ದೇಶದಲ್ಲಿ ಪುರುಷರ ಒಟ್ಟು ಸಂಖ್ಯೆ 717,100,970 ಇದ್ದರೆ, ಮಹಿಳೆಯರ ಸಂಖ್ಯೆ 662,903,415 ಇದೆ. ಮತದಾರರ ಪ್ರಮಾಣವನ್ನು ತೆಗೆದುಕೊಂಡಾಗ ಪುರುಷರು ಮತ್ತು ಮಹಿಳೆಯರ ಸಂಖ್ಯೆ ಬಹುತೇಕ ಹತ್ತಿರತ್ತಿರ ಇದೆ. ಶಾಸನಸಭೆಗಳಲ್ಲಿ ಮಹಿಳೆಯರ ಪ್ರಮಣ ಕಡಿಮೆ ಇದ್ದರೂ, ಪಂಚಾಯಿತಿಯಲ್ಲಿ ಕಡಿಮೆ ಏನಿಲ್ಲ. ಈಚೆಗೆ ಜರುಗಿದ ಕರ್ನಾಟಕದ ಗ್ರಾಮಪಂಚಾಯಿತಿ ಚುನಾವಣೆಯನ್ನೇ ತೆಗೆದುಕೊಂಡರೆ ಒಟ್ಟು 93 ಸಾವಿರ ಸದಸ್ಯರಲ್ಲಿ ಮಹಿಳೆಯರ ಸಂಖ್ಯೆ ಅರ್ಧದಷ್ಟಿದೆ. ಇನ್ನು, ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲಾತಿ ನೀಡಬೇಕೆಂಬ ವಿಚಾರ ಇನ್ನೂ ಸಂಸತ್​ನಲ್ಲಿ ಚರ್ಚೆಯ ಹಂತದಲ್ಲಿದೆ. ಬಹುತೇಕ ರಾಜಕೀಯ ಪಕ್ಷಗಳು ಈ ಬಗ್ಗೆ ಸಹಮತ ಹೊಂದಿದ್ದರೂ, ಕೆಲ ಕಾರಣಗಳಿಗಾಗಿ ಇದು ಸಾಧ್ಯವಾಗುತ್ತಿಲ್ಲ. ಎರಡು ದಶಕಗಳ ಹಿಂದೇ, ಅಂದರೆ 1996ರ ಸೆಪ್ಟೆಂಬರ್ 12ರಂದು ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಆಗ ಯುನೈಟೆಡ್ ಫ್ರಂಟ್ ಸರ್ಕಾರವಿತ್ತು, ಎಚ್.ಡಿ.ದೇವೆಗೌಡರು ಪ್ರಧಾನಿಯಾಗಿದ್ದರು. ನಂತರದಲ್ಲಿ ವಾಜಪೇಯಿ ಸರ್ಕಾರ ಈ ಮಸೂದೆಯನ್ನು ಅಂಗೀಕರಿಸಲು ಯತ್ನಿಸಿತಾದರೂ ಅದು ಸಾಧ್ಯವಾಗಲಿಲ್ಲ. 2008ರ ಮೇ ತಿಂಗಳಲ್ಲಿ ಆಗಿನ ಯುಪಿಎ-1 ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತು. 2010ರ ಮಾರ್ಚ್ 9ರಂದು ರಾಜ್ಯಸಭೆ ಈ ಮಸೂದೆಯನ್ನು ಅಂಗೀಕರಿಸಿತು. ಆದರೆ ಲೋಕಸಭೆಯಲ್ಲಿ ಬಾಕಿ ಇದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಬಹುತೇಕ ನಾಯಕರು ಇದರ ಪರವಾಗಿದ್ದಾರೆ. ಮುಂದೆ ಏನಾಗುತ್ತದೆಂದು ಕಾದುನೋಡಬೇಕು. ಹಾಗೆನೋಡಿದರೆ, ಮಹಿಳಾ ಮೀಸಲಾತಿಯ ಕಲ್ಪನೆಯ ಕುಡಿಯೊಡೆದದ್ದು, 1993ರಲ್ಲಿ ಸಂವಿಧಾನ ತಿದ್ದುಪಡಿಯಾದಾಗಲೇ. ಗ್ರಾಮಪಂಚಾಯಿತಿಯಲ್ಲಿ ಶೇ.33 ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲು ಈ ತಿದ್ದುಪಡಿ ಅವಕಾಶ ಕಲ್ಪಿಸಿತ್ತು. ನಂತರದಲ್ಲಿ, ಸಂಸತ್ ಮತ್ತು ಶಾಸನಭೆಗಳಿಗೂ ಮೀಸಲು ಪ್ರಮಾಣದ ಪ್ರಸ್ತಾವ ಮುನ್ನೆಲೆಗೆ ಬಂತು.

    ಹರಿದಾಸಪುರದ ಸಂಭ್ರಮ ಎಲ್ಲೆಡೆ ಪ್ರತಿಧ್ವನಿಸಲಿ...

    ಒಬ್ಬ ಮಹಿಳೆ ಪರ್ವತ ಪ್ರದೇಶದಲ್ಲಿ ಚಾರಣ ಕೈಗೊಂಡಿದ್ದಳು. ಹೀಗೆ ಸಾಗುತ್ತಿರುವಾಗ ತೊರೆಯೊಂದರಲ್ಲಿ ಬಿದ್ದಿದ್ದ ಅಮೂಲ್ಯ ಹರಳೊಂದು ಆಕೆಗೆ ಸಿಕ್ಕಿತು. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯೂ ಅಲ್ಲಿ ಪ್ರವಾಸಕ್ಕಾಗಿ ಬಂದಿದ್ದ. ಆತನ ಕೈಲಿ ತಿನ್ನಲು ಕುಡಿಯಲು ಏನೂ ಇರಲಿಲ್ಲ. ಬಹಳ ಆಯಾಸಗೊಂಡಿದ್ದ ಆತನನ್ನು ಗಮನಿಸಿ ಈ ಮಹಿಳೆ ತನ್ನ ಕೈಲಿದ್ದ ಆಹಾರವನ್ನು ನೀಡಲು ನಿರ್ಧರಿಸಿ ಆತನನ್ನು ಆಹ್ವಾನಿಸಿದಳು. ಆಕೆ ಚೀಲವನ್ನು ತೆರೆಯುವಾಗ ಅದರಲ್ಲಿದ್ದ ಹರಳು ಆತನ ಕಣ್ಣಿಗೆ ಬಿತ್ತು. ತಿಂಡಿ ತಿಂದಾದ ಮೇಲೆ ಆತ ಆ ಹರಳನ್ನು ತನಗೆ ನೀಡುವಂತೆ ವಿನಂತಿಸಿದ. ಆ ಮಹಿಳೆ ಒಂದು ಕ್ಷಣವೂ ಯೋಚಿಸದೆ ಅದನ್ನು ಅವನಿಗೆ ಕೊಟ್ಟಳು. ಅಲ್ಲಿಂದ ಹೊರಟ ಆತನಿಗೆ ಖುಷಿಯೋ ಖುಷಿ. ಈ ಬೆಲೆಬಾಳುವ ಹರಳನ್ನು ಮಾರಿದರೆ ಇಡೀ ಜೀವನವನ್ನು ಆರಾಮಾಗಿ ಕಳೆಯಬಹುದು ಎಂದು ಆಲೋಚಿಸಿದ. ರಾತ್ರಿಯಿಡೀ ಆತನ ತಲೆಯಲ್ಲಿ ಏನೇನೋ ವಿಚಾರಗಳು. ಇದ್ದಕ್ಕಿದ್ದಂತೆ ಏನೋ ಹೊಳೆದಂತಾಯಿತು. ಮರುದಿನವೇ ಆತ ಮತ್ತೆ ಆಕೆಯಿದ್ದಲ್ಲಿಗೆ ಬಂದ. ‘ಈ ಹರಳಿಗಿಂತ ಅಮೂಲ್ಯವಾದುದು ನಿನ್ನ ಬಳಿ ಇದೆ. ದಯವಿಟ್ಟು ಅದನ್ನು ನನಗೆ ಕೊಡುವೆಯಾ?’ ಎಂದು ಕೇಳಿದ. ‘ಈ ಹರಳನ್ನು ನನಗೆ ಕೊಡು ಎಂದು ಕೇಳಿದಾಗ ನೀನು ಇನಿತೂ ಯೋಚಿಸದೆ, ಏನೊಂದೂ ಲೆಕ್ಕಾಚಾರ ಹಾಕದೆ, ಸ್ವಾರ್ಥದ ಚಿಂತನೆ ಮಾಡದೆ ನನಗೆ ಕೊಟ್ಟುಬಿಟ್ಟೆಯಲ್ಲ. ನಿನ್ನ ಆ ಉದಾರ ಗುಣವನ್ನು ನನಗೆ ದಯಪಾಲಿಸು. ನಿನ್ನ ದೊಡ್ಡಗುಣಕ್ಕೆ ನಾನು ಶರಣಾದೆ’ ಎಂದು ಭಾವುಕನಾಗಿ ಹೇಳಿದ.

    ಅದು ಅಮೂಲ್ಯ ಹರಳು ಎಂದು ಗೊತ್ತಿದ್ದರೂ, ತಾನು ಅದರಿಂದ ಬೇಕಷ್ಟು ಸಂಪಾದಿಸಬಹುದು ಎಂದು ತಿಳಿದಿದ್ದರೂ ಆಕೆ ಉದಾರಹೃದಯದಿಂದ ಆತನಿಗೆ ಕೊಟ್ಟುಬಿಟ್ಟಳು. ತ್ಯಾಗ ಎಂಬುದು ಮಹಿಳೆಗೆ ಜನ್ಮದಾರಭ್ಯವೇ ಬರುತ್ತದೆಯೇನೋ! ಅದಿಲ್ಲವಾದಲ್ಲಿ ಅತ್ಯಮೂಲ್ಯ ಹರಳನ್ನೇ ಯಾರೋ ಅಪರಿಚಿತನಿಗೆ ಕೊಟ್ಟುಬಿಡುವ ಗುಣ ದಿಢೀರನೆ ಬರಲು ಸಾಧ್ಯವೆ? ಆಕೆಯಲ್ಲಿ ಮೊದಲೇ ಇದ್ದ ಆ ಗುಣ ಆ ಸಂದರ್ಭದಲ್ಲಿ ಪ್ರಕಟಗೊಂಡಿತು ಅಷ್ಟೆ. ಮನೆಯಲ್ಲಿ ಊಟ ಮಾಡುವಾಗ ಗೃಹಿಣಿ ಸಾಮಾನ್ಯವಾಗಿ ಎಲ್ಲರಿಗಿಂತ ಕೊನೆಗೆ ಊಟ ಮಾಡುತ್ತಾಳೆ. ಕೆಲವೊಮ್ಮೆ ಆಕೆಗೆಂದು ಹೊಟ್ಟೆ ತುಂಬುವಷ್ಟು ಆಹಾರ ಇರುವುದಿಲ್ಲ. ಆದರೂ ಆಕೆ ಏನೊಂದೂ ಗೊಣಗದೆ ತನ್ನ ಪಾಲಿಗೆ ಇದ್ದುದನ್ನು ಸ್ವೀಕರಿಸಿ ಮತ್ತೆ ಮನೆಗೆಲಸಕ್ಕೆ ಸೆರಗು ಸಿಕ್ಕಿಸಿ ತಯಾರಾಗುತ್ತಾಳೆ. ಇದು ಸಹ ತ್ಯಾಗದ ಮತ್ತೊಂದು ರೂಪವಲ್ಲದೆ ಇನ್ನೇನು? ಮನೆಯ ಸಲುವಾಗಿ ಆಕೆ ಇದ್ದುದರಲ್ಲೆ ಸಂಭಾಳಿಸುತ್ತಾಳೆ. ಅದೇ, ತನ್ನ ಮಕ್ಕಳು ಅರೆಹೊಟ್ಟೆ ಉಣ್ಣುವಂತಾದರೆ ನೊಂದುಬೆಂದು ಯಾರಿಗೂ ಕಾಣದಂತೆ ಸೆರಗಿನಲ್ಲಿ ಕಣ್ಣೀರೊರೆಸಿಕೊಳ್ಳುತ್ತಾಳೆ. ಇದು ಹೆಣ್ಣಿನ ಗುಣ, ಮಾತೃಭಾವ. ಎಷ್ಟೆಲ್ಲ ಅಪಸವ್ಯಗಳ ನಡುವೆಯೂ ಮನುಕುಲ ಇಷ್ಟಾದರೂ ಉಳಿದಿದೆ, ಉಸಿರಾಡುತ್ತಿದೆ ಎಂದರೆ ಅದಕ್ಕೆ ಹೆಣ್ಣಿನ ಈ ಗುಣವಲ್ಲದೆ ಬೇರೇನು ಕಾರಣ ಇದ್ದೀತು!

    ಜನಸಮೂಹ ಯಾವ ದಿಕ್ಕಿನಲ್ಲಿ ನಡೆಯುತ್ತಿದೆಯೋ ಅದೇ ದಿಕ್ಕಿನಲ್ಲಿ ನಡೆಯುವ ಮಹಿಳೆ ಆ ಜನರಿಗಿಂತ ಹೆಚ್ಚಿನದೇನನ್ನೂ ಸಾಧಿಸಲಾರಳು. ಆದರೆ, ತನ್ನದೇ ಹಾದಿಯಲ್ಲಿ ಹೆಜ್ಜೆಹಾಕುವ ಮಹಿಳೆ ಆವರೆಗೆ ಯಾರೂ ಏರದ ಎತ್ತರಕ್ಕೆ ಏರಬಹುದು.

    | ಆಲ್ಬರ್ಟ್ ಐನ್​ಸ್ಟೀನ್

    ಕೊನೇ ಮಾತು: ಒಂದು ಮನೆಯ ಊಟೋಪಚಾರ ಮತ್ತು ಮನೆ ವ್ಯವಸ್ಥೆಯ ಬಜೆಟ್ ಆ ಮನೆಯ ಯಜಮಾನತಿಗೆ ಸೇರಿದ ಜವಾಬ್ದಾರಿ. ಆಕೆ ಈ ಹೊಣೆಗಾರಿಕೆಯಲ್ಲಿ ಎಡವಿದರೆ ಮನೆಯ ಬಜೆಟ್ ಏರುಪೇರಾಗುತ್ತದೆ. ಕೊರತೆ ಬಜೆಟ್ ಆಗಬೇಕಾಗುತ್ತದೆ. ಹಾಗೇ, ಭಾರತವೆಂಬ ಕುಟುಂಬದ ಬಜೆಟ್ ಜವಾಬ್ದಾರಿ ಸದ್ಯ ನಿರ್ಮಲಾ ಸೀತಾರಾಮನ್ ಎಂಬ ಹೆಣ್ಣುಮಗಳ ಕೈಲಿದೆ. ಫೆಬ್ರವರಿ 1ನೇ ತಾರೀಖಿನಂದು ಅವರು ಯಾವ್ಯಾವ ನಿರ್ಣಯಗಳನ್ನು ಪ್ರಕಟಿಸಬಹುದು? ಏನಾದರೂ ಕೊಡುಗೆಗಳನ್ನು ನೀಡಬಹುದಾ? ಎಂಬೆಲ್ಲ ನಿರೀಕ್ಷೆ ಕುತೂಹಲ ದೇಶದ ತುಂಬ ಮನೆಮಾಡಿದೆ. ಕಾದುನೋಡೋಣ…

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts