More

    ಧರ್ಮದರ್ಶನ|ಪೂರ್ವಜರ ಸಾಧನೆಗಳನ್ನು ಗೌರವಿಸೋಣ

    ಧರ್ಮದರ್ಶನ|ಪೂರ್ವಜರ ಸಾಧನೆಗಳನ್ನು ಗೌರವಿಸೋಣಭಾರತೀಯ ಗ್ರಂಥಗಳೆಲ್ಲವೂ ಗುರು-ಶಿಷ್ಯ ಪರಂಪರೆಯಿಂದ ಬೆಳೆದುಬಂದವುಗಳು. ಗುರುವಿನ ಅನುಗ್ರಹ ಮಾರ್ಗದರ್ಶನ ಇಲ್ಲದಿದ್ದರೆ ಆ ಯಾವ ವಿದ್ಯೆಯೂ ಫಲಿಸುವುದಿಲ್ಲ. ಆದ್ದರಿಂದ ಜ್ಞಾನದಷ್ಟೇ ಮಹತ್ವ ಆ ಜ್ಞಾನವನ್ನು ಬೋಧಿಸುವ ಗುರುವಿಗೂ ಇದೆ. ಭಾರತದ ಆಧ್ಯಾತ್ಮಿಕ ಜ್ಞಾನಗಳು ಕೇವಲ ವಿಷಯವನ್ನು ದಾಟಿಸುವ ಸಾಧನಗಳಲ್ಲ.

    ಇತ್ತೀಚೆಗೆ ವಿಶ್ವ ಯೋಗ ದಿನವನ್ನು ನಾವೆಲ್ಲರೂ ಆಚರಿಸಿದ್ದೇವೆ. ಈ ವರ್ಷ ವಿಶೇಷವಾಗಿ ‘ಮನೆಯಿಂದಲೇ ಯೋಗ, ಕುಟುಂಬದೊಂದಿಗೆ ಯೋಗ’ ಎಂಬ ಘೊಷವಾಕ್ಯದೊಂದಿಗೆ ನಮ್ಮ ನಮ್ಮ ಕುಟುಂಬದೊಂದಿಗೆ ವಿಶ್ವ ಯೋಗ ದಿನವನ್ನು ಆಚರಿಸಿದ್ದೇವೆ. ದೇಹ ಮತ್ತು ಮನಸ್ಸು ಇದರ ಮಧ್ಯೆ ಸಮತೋಲನ ತರುವಂತಹ ಯೋಗ ಇಂದು ವಿಶ್ವದಾದ್ಯಂತ ಅನುಸರಿಸಲ್ಪಡುತ್ತಿದೆ. ಇದನ್ನು ಬೋಧಿಸಿದವರು ಭಾರತೀಯ ಋಷಿಮುನಿಗಳು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಮನಸ್ಸಿನ ವೃತ್ತಿಯನ್ನು ನಿಯಂತ್ರಿಸುವ ಯೋಗ ನಮ್ಮ ನಮ್ಮ ವೃತ್ತಿಯಲ್ಲಿ ‘ಯೋಗಃ ಕರ್ಮಸು ಕೌಶಲಮ್ ಎಂಬಂತೆ ಕುಶಲತೆಯನ್ನು ಉಂಟುಮಾಡುತ್ತದೆ.

    ಈ ವರ್ಷದ ಯೋಗ ದಿನದಂದು ಒಂದು ವಿಶೇಷ ಗ್ರಂಥ ಲೋಕಾರ್ಪಣೆ ಮಾಡುವ ಸದವಕಾಶ ನನಗೆ ದೊರಕಿತು. ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದವರು ಪ್ರಕಟಿಸಿದ ‘ಘೕರಂಡ ಸಂಹಿತಾ’ ಎಂಬ ಗ್ರಂಥವನ್ನು ಅಂದು ನಮ್ಮ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದೆವು. ‘ಘೕರಂಡ ಸಂಹಿತೆ’ಯು ಘೕರಂಡ ಎಂಬ ಋಷಿಯು ತನ್ನ ಶಿಷ್ಯನಾದ ಚಂಡಕಾಪಾಲಿಗೆ ಉಪದೇಶಿಸಿದ ಹಠಯೋಗ ಗ್ರಂಥ. ಇದು ವಿಶೇಷವಾಗಿ ದೇಹವೆಂಬ ಘಟವನ್ನು ಹೇಗೆ ಶುದ್ಧಿಮಾಡಿಕೊಳ್ಳಬೇಕು ಮತ್ತು ಆ ಶುದ್ಧಿಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಸಪ್ತಾಂಗ ಯೋಗಗಳನ್ನು ವಿವರಿಸಿದೆ.

    ನಮ್ಮ ಪ್ರಾಚೀನ ಋಷಿ-ಮುನಿಗಳು ಇಂತಹ ಅದ್ಭುತ ವಿಷಯಗಳನ್ನು ಹೇಗೆ ಸಂಶೋಧಿಸಿದರು ಎಂಬುದು ಆಶ್ಚರ್ಯ ಮತ್ತು ಸಂಶೋಧನೆಗೆ ಯೋಗ್ಯವಾದ ವಿಷಯ. ಇಂತಹ ಗ್ರಂಥಗಳು ಆ ಋಷಿ-ಮುನಿಗಳು ತಮ್ಮ ಅಂತರಂಗ ಸಾಧನೆಯಿಂದ ಕಂಡುಕೊಂಡ ಸತ್ಯವನ್ನು ದಾಖಲಿಸುತ್ತವೆ ಮತ್ತು ಮುಂದಿನ ತಲೆಮಾರುಗಳಿಗೆ ಜ್ಞಾನಶಾಖೆಯನ್ನು ವಿಸ್ತರಿಸುತ್ತವೆ. ತಲೆ ತಲಾಂತರದಿಂದ ಬಂದ ಜ್ಞಾನವನ್ನು ದಾಖಲಿಸುವುದು ಅಮೂಲ್ಯವಾದ ಕೆಲಸ. ಏಕೆಂದರೆ ಜ್ಞಾನ ಎಂಬುದು ಅವಿನಾಶಿ. ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ’.

    ಈ ವರ್ಷ ಯೋಗ ದಿನದಂದೇ ಸೂರ್ಯಗ್ರಹಣ ಸಂಭವಿಸಿತು. ಜನಸಾಮಾನ್ಯರಿಗೆ ಇದು ಕುತೂಹಲದಿಂದ ಕಂಡು ಆನಂದಿಸುವ ಒಂದು ಘಟನೆಯಾದರೆ ಆಧ್ಯಾತ್ಮಿಕವಾಗಿ ಸಾಧನೆ ಮಾಡುವವರಿಗೆ ಸ್ನಾನ, ಜಪ, ಅನುಷ್ಠಾನ ಮಾಡಲು ಸುವರ್ಣಾವಕಾಶ. ಇಂತಹ ಗ್ರಹಣ ಹೇಗೆ ಆಗುತ್ತದೆ ಮತ್ತು ಯಾವ ಸಮಯದಲ್ಲಿ ಗ್ರಹಣದ ಸ್ಪರ್ಶ, ಮೋಕ್ಷ ಆಗುತ್ತದೆ ಮತ್ತು ಗ್ರಹಣದ ಬಿಂಬದ ಪರಿಮಾಣ, ಗ್ರಹಣ ಮಧ್ಯಕಾಲ ಇವೆಲ್ಲವನ್ನೂ ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಋಷಿಮುನಿಗಳು ನಿಖರವಾಗಿ ಕಂಡುಹಿಡಿದಿದ್ದರು. ಇದನ್ನು ನಾವು ಪಂಚಾಂಗಗಳಲ್ಲಿ ಕಾಣುತ್ತೇವೆ. ಇಂದಿನ ವಿಜ್ಞಾನಿಗಳು ವಿವಿಧ ಉಪಕರಣಗಳಿಂದ ಇವುಗಳನ್ನು ನಿರೂಪಿಸುತ್ತಾರೆ. ಆದರೆ ಯಾವುದೇ ವೈಜ್ಞಾನಿಕ ಸಲಕರಣೆಗಳು ಇಲ್ಲದಿದ್ದಾಗಲೂ ನಮ್ಮ ಹಿರಿಯರು ಹೇಗೆ ಇದನ್ನು ನಿಖರವಾಗಿ ಹೇಳಿದರೆಂಬುದು ಇಂದಿಗೂ ಕುತೂಹಲದ ವಿಷಯವೇ.

    ಯೋಗ, ಆಯುರ್ವೆದ ಮೊದಲಾದ ಭಾರತೀಯ ಪದ್ಧತಿಗಳಿಗೆ ಇಂದು ವಿಶ್ವದಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಆಯುರ್ವೆದವು ಒಂದು ಸಮತೋಲಿತವಾದ ಭಾರತದ ಚಿಕಿತ್ಸಾ ಪದ್ಧತಿ. ಬೆಂಗಳೂರಿನಲ್ಲಿ ಆಯುರ್ವೆದದ ಚಿಕಿತ್ಸಾ ಪದ್ಧತಿಯ ಸಂಶೋಧನಾ ಕೇಂದ್ರವೊಂದಿದೆ. ಅವರು ‘ನಾನೌಷಧಿಃ ವನಂ ನಾಸ್ತಿ’ ಎಂಬ ಉಕ್ತಿಯಂತೆ ಯಾವ ಗಿಡದಿಂದ ಯಾವ ರೀತಿಯ ಔಷಧಗಳನ್ನು ಸಿದ್ಧಪಡಿಸಬೇಕು ಎಂಬುದನ್ನು ಸಂಶೋಧಿಸುತ್ತಿದ್ದಾರೆ. ಒಂದು ಔಷಧೀಯ ಗಿಡದ ಬೇರು, ಕಾಂಡ, ತೊಗಟೆ, ಎಲೆ, ಪುಷ್ಪ, ಕಾಯಿ, ಹಣ್ಣು ಹೀಗೆ ಒಂದೊಂದು ಅವಯವಗಳಿಂದಲೂ ಯಾವ ವಿಧವಾದ ರೋಗ ಉಪಶಮನವಾಗುವ ಔಷಧ ಸಿದ್ಧಪಡಿಸಬಹುದು ಎಂದು ಸಂಶೋಧಿಸುತ್ತಿದ್ದಾರೆ. ಔಷಧಗಳ ಮಿಶ್ರಣವನ್ನು ಮಾಡುವ ವಿಧಾನ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಅಲ್ಲದೆ ಉತ್ತರ ಭಾರತದಲ್ಲಿ ಬೇಕಾದ ಗಿಡ ಸಿಕ್ಕದಿದ್ದಲ್ಲಿ ದಕ್ಷಿಣದಿಂದ ಅದನ್ನು ಉತ್ತರಕ್ಕೆ ತರಿಸಿಕೊಳ್ಳುವ ಹಾಗೆಯೇ ದಕ್ಷಿಣ ದೇಶದಲ್ಲಿ ದೊರಕದಂಥ ಗಿಡಮೂಲಿಕೆಗಳನ್ನು ಉತ್ತರದಿಂದ ದಕ್ಷಿಣಕ್ಕೆ ತರಿಸಿಕೊಂಡು ಔಷಧಗಳನ್ನು ಸಿದ್ಧಪಡಿಸುತ್ತಿದ್ದಾರೆ. ಹೀಗೆ ಗಿಡಮೂಲಿಕೆಗಳಿಂದ ಸಿದ್ಧಪಡಿಸುವ ಆಯುರ್ವೆದ ಔಷಧಗಳನ್ನು ದೇಶದಲ್ಲಿ ವಿವಿಧೆಡೆಯಿಂದ ಸಂಗ್ರಹಿಸಿ, ಸಂಶೋಧಿಸಿ, ವಿವಿಧ ರೋಗಗಳಿಗೆ ಬೇಕಾದ ಔಷಧಗಳನ್ನು ಕಂಡು ಹಿಡಿಯುತ್ತಿದ್ದಾರೆ. ಇದು ಶುದ್ಧ ಆಯುರ್ವೆದೀಯ ಔಷಧ.

    ವೃಕ್ಷಗಳ ಒಂದೊಂದು ಅಂಶದಿಂದಲೇ ಔಷಧವನ್ನು ತಯಾರಿಸುವ ವಿಧಾನ ಮತ್ತು ಅದು ಯಾವ ರೋಗವನ್ನು ಉಪಶಮನ ಮಾಡುತ್ತದೆ ಎಂಬುದನ್ನು ಋಷಿಮುನಿಗಳು ಆಯುರ್ವೆದ ಗ್ರಂಥದಲ್ಲಿ ಪ್ರತಿಪಾದಿಸಿದ್ದಾರೆ. ಅವರು ಹೇಗೆ ಸಂಶೋಧನೆಗಳನ್ನು ನಡೆಸಿದರು, ಹೇಗೆ ನಿರ್ಣಯಕ್ಕೆ ಬಂದರು ಎಂಬ ಬಗ್ಗೆ ನಮಗೆ ನಿಖರವಾದ ಮಾರ್ಗಸೂಚಿ ಗೊತ್ತಿಲ್ಲದಿದ್ದರೂ ಅವರ ಸಾಧನೆ ನಮ್ಮ ಕಣ್ಣ ಮುಂದೆ ಇದೆ. ಹೀಗೆ ದೇಶದ ಋಷಿಮುನಿಗಳು ಕಂಡುಕೊಂಡಂಥ ಮತ್ತು ಗ್ರಂಥರೂಪದಲ್ಲಿ ಪ್ರತಿಪಾದಿಸಿದಂಥ ವಿಷಯಗಳು ಕೇವಲ ವಿದ್ವಾಂಸರ ಸ್ವತ್ತು ಆಗಬಾರದು. ಇದನ್ನು ಜನಸಾಮಾನ್ಯರಿಗೂ ತಲುಪಿಸುವಂತಹ ದಿಶೆಯಲ್ಲಿ ಕಾರ್ಯಗಳು ಆಗಬೇಕಾಗಿದೆ. ಇಂತಹ ಅವಿಷ್ಕಾರಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯುವಂತೆ ಆಗಬೇಕು.

    ಪತಂಜಲಿಯು ಯೋಗದರ್ಶನದಲ್ಲಿ ಪ್ರತಿಪಾದಿಸಿದಂತಹ ಅಷ್ಟಾಂಗ ಯೋಗಗಳು ಶ್ರೀಸಾಮಾನ್ಯರವರೆಗೂ ಮೊದಲು ತಲುಪಿರಲಿಲ್ಲ. ಭಾರತದ ಈಗಿನ ಪ್ರಧಾನಮಂತ್ರಿಗಳು ವಿಶ್ವಸಂಸ್ಥೆಯಲ್ಲಿ ಯೋಗದ ವಿಷಯವನ್ನು ಪ್ರತಿಪಾದಿಸಿ, ಅದರ ವೈಶಿಷ್ಟ್ಯವನ್ನು ಪರಿಚಯಿಸಿದರು. ಆದ್ದರಿಂದ ಯೋಗ ವಿದೇಶಿಯರನ್ನೂ ವಿಶೇಷವಾಗಿ ಆಕರ್ಷಿಸುತ್ತಿದೆ. ಹೀಗೆ ಇನ್ನೂ ಜನೋಪಯೋಗಿ ಆದಂತಹ ಮತ್ತು ಸಾರ್ವಕಾಲಿಕವಾದಂಥ ಅನೇಕ ವಿಷಯಗಳು ನಮ್ಮ ಪ್ರಾಚೀನ ಗ್ರಂಥಗಳಲ್ಲಿವೆ. ಅದನ್ನು ಹೊರತೆಗೆದು, ಅದರ ಪ್ರಯೋಜನ ಎಲ್ಲರಿಗೂ ಸಿಗಬೇಕು ಅಂತಾದರೆ, ಸಂಸ್ಕೃತ ಭಾಷೆಯಲ್ಲಿ ಇರುವಂಥ ಈ ವಿಷಯಗಳನ್ನು ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆಗೊಳಿಸಿ ಸರ್ವತ್ರ ಇದು ಹರಡುವಂತೆ ಮಾಡಬೇಕು.

    ಇದನ್ನೂ ಓದಿ: ಕೋವಿಡ್​ ಸೋಂಕಿತರ ಶವ ಸಾಗಿಸಲು ಅರ್ಥ್​ ಮೂವರ್ ಬಳಸಿದ್ರು!

    ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇನ್ನೊಂದು ಪುಸ್ತಕದ ಬಿಡುಗಡೆ ನಡೆಯಿತು. ಅದು ಹೋಮ, ಹವನ, ಉಚ್ಚಾಟನೆ ಮೊದಲಾದ ಗಹನವಾದ ವಿಷಯವನ್ನು ಒಳಗೊಂಡ ಪುಸ್ತಕ. ಆ ಪುಸ್ತಕ ಬಿಡುಗಡೆ ಮಾಡುವಾಗ ಇಂತಹ ಅಮೂಲ್ಯವಾದ ವಿಷಯ ಯಾವುದೋ ಅಯೋಗ್ಯರ ಕೈಗೆ ಸಿಕ್ಕಿ ಇದರಿಂದ ಅನಾಹುತವೇ ಹೆಚ್ಚಿಗೆ ಆಗಬಹುದು ಎಂದೆನಿಸಿತು. ಆದ್ದರಿಂದ ಇಂತಹ ಪುಸ್ತಕಗಳನ್ನು ಯಾಕೆ ಅಕ್ಷರ ರೂಪದಲ್ಲಿ ಪ್ರಕಟಿಸಿದರು ಎಂದು ನನಗೆ ಅನ್ನಿಸಿತು. ಆದರೆ ನಂತರ ಆ ಪುಸ್ತಕವನ್ನು ಆಮೂಲಾಗ್ರವಾಗಿ ಅವಲೋಕಿಸಿದಾಗ, ಗುರುಮುಖೇನ ಕಲಿಯದಿದ್ದರೆ ಅದರಲ್ಲಿರುವ ಒಂದಂಶವೂ ಅರ್ಥವಾಗುವುದಿಲ್ಲ ಎಂಬುದು ಸ್ಪಷ್ಟವಾಯಿತು. ಇಂತಹ ಅಮೂಲ್ಯ ವಿಷಯವು ಒಂದು ತಲೆಮಾರಿಗೆ ಮುಗಿದು ಹೋಗಬಾರದು. ಅವುಗಳನ್ನು ಪುಸ್ತಕರೂಪದಲ್ಲಿ ಸಂಗ್ರಹಿಸಿದ್ದು ಒಳಿತೇ ಆಯಿತು ಎಂದು ಅನ್ನಿಸಿತು. ಭಾರತೀಯ ಗ್ರಂಥಗಳೆಲ್ಲವೂ ಗುರು-ಶಿಷ್ಯ ಪರಂಪರೆಯಿಂದ ಬೆಳೆದುಬಂದವುಗಳು. ಗುರುವಿನ ಅನುಗ್ರಹ ಮಾರ್ಗದರ್ಶನ ಇಲ್ಲದಿದ್ದರೆ ಆ ಯಾವ ವಿದ್ಯೆಯೂ ಫಲಿಸುವುದಿಲ್ಲ. ಆದ್ದರಿಂದ ಜ್ಞಾನದಷ್ಟೇ ಮಹತ್ವ ಆ ಜ್ಞಾನವನ್ನು ಬೋಧಿಸುವ ಗುರುವಿಗೂ ಇದೆ. ಭಾರತದ ಆಧ್ಯಾತ್ಮಿಕ ಜ್ಞಾನಗಳು ಕೇವಲ ವಿಷಯವನ್ನು ದಾಟಿಸುವ ಸಾಧನಗಳಲ್ಲ. ಪ್ರತಿಯೊಂದೂ ಅನುಭವವೇದ್ಯವಾಗಿ ಅನುಷ್ಠಾನಕ್ಕೆ ಬಂದು, ಅದನ್ನು ಅರಿತುಕೊಂಡು ಮುಂದಿನವರಿಗೆ ತಿಳಿಸಿ ಕೊಡುವಂಥ ವ್ಯವಸ್ಥೆ ಆಧುನಿಕ ವಿದ್ಯೆಯಂತೆ ಅಂದರೆ ರಸಾಯನಶಾಸ್ತ್ರ, ಭೌತಶಾಸ್ತ್ರ ಮೊದಲಾದವುಗಳನ್ನು ಪುಸ್ತಕ ನೋಡಿ ಕಲಿತು ಮುಂದೆ ಹೋಗಬಹುದು. ಆದರೆ ಋಷಿಮುನಿಗಳು ಕೊಟ್ಟಂಥ ಜ್ಞಾನರಾಶಿಯನ್ನು ಈ ರೀತಿಯಲ್ಲಿ ಅಧ್ಯಯನ ಮಾಡಿದರೆ ಸಾಕಾಗದು. ಅದನ್ನು ಕಲಿಸಬೇಕಾದರೆ ಗುರುಉಪದೇಶ, ತದನಂತರ ಅದರ ಅನುಷ್ಠಾನ, ಆಗ ಕಂಡುಕೊಂಡಂತಹ ಸತ್ಯ ಅದು ಮುಂದಿನ ತಲೆಮಾರಿಗೆ ಹೋಗುತ್ತದೆ.

    ನಾವು ಸಂಪಾದಿಸಿದ ವಿದ್ಯೆಯನ್ನು ಬಯಸುವವರಿಗೆ ಬೋಧಿಸುವುದು ಒಂದು ಉತ್ತಮ ಕಾರ್ಯವಾದರೆ, ನಾವು ಸಂಪಾದಿಸಿದ ವಿಶೇಷ ಜ್ಞಾನವನ್ನು ಗ್ರಂಥರೂಪದಲ್ಲಿ ಬರೆಯುವುದು ಒಂದು ವಿಶೇಷವಾದಂಥ ಸೇವೆ. ಇದು ಪುಣ್ಯದ ಕಾರ್ಯ. ಯಾಕೆಂದರೆ ಮುಂದೆ ಸಾಧನೆ ಮಾಡುವವರಿಗೆ, ಅರಿತುಕೊಳ್ಳಬೇಕು ಎಂಬ ಕುತೂಹಲ ಇರುವವರಿಗೆ ಒಂದು ಶಾಶ್ವತವಾದಂಥ ತಿಳಿವಳಿಕೆ ಈ ಗ್ರಂಥಗಳಲ್ಲಿ ಇರುತ್ತದೆ.

    ನಾವು ಕಲಿತ ವಿದ್ಯೆಯನ್ನು ಕೇವಲ ಭಾಷಣ ಅಥವಾ ಮಾತಿನ ಮುಖಾಂತರ ಬೇರೆಯವರಿಗೆ ತಿಳಿಸಿದರೆ ಅದು ಒಂದು ರೀತಿಯಲ್ಲಿ ಕ್ಷಣಿಕವೇ. ಅದೇ ನಮ್ಮ ಜ್ಞಾನವನ್ನು ಗ್ರಂಥರೂಪದಲ್ಲಿ ಸಂಗ್ರಹ ಮಾಡಿದರೆ ಅದು ತಲೆತಲಾಂತರದವರೆಗೂ ಇರುತ್ತದೆ. ಅದನ್ನು ಗುರುಮುಖೇನ ಶ್ರದ್ಧೆಯಿಂದ ಅಧ್ಯಯನ ಮಾಡಿದಾಗ ಅದರ ಒಳಹರಿವು ನಮ್ಮ ಅರಿವಿಗೆ ಬರುತ್ತದೆ. ನಮ್ಮ ಪ್ರಾಚೀನ ಋಷಿ-ಮುನಿಗಳು ತಮ್ಮ ಅಂತರಂಗ ಸಂಶೋಧನೆಯಿಂದ ಇಷ್ಟೆಲ್ಲ ಅದ್ಭುತವಾದಂತಹ ವಿಷಯಗಳನ್ನು ಸಂಗ್ರಹಿಸಿದ್ದಾರೆ. ಇದು ಸಾರ್ವಕಾಲಿಕ, ಸಾರ್ವದೇಶಿಕವಾದಂಥ ಇಹಪರಗಳೆರಡಕ್ಕೂ ಸಲ್ಲುವ ವಿಚಾರಧಾರೆಯಾಗಿದೆ.
    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ಕರೊನಾ ಸ್ಫೋಟ: ಒಂದೇ ದಿನ ಸಾವಿರದ ಸನಿಹ ಕೇಸ್ ದೃಢ- ಬೆಂಗಳೂರಿನಲ್ಲೆ ಗರಿಷ್ಠ 596

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts