More

    ವಿನಾ ದೈನ್ಯೇನ ಜೀವನಂ…

    ವಿನಾ ದೈನ್ಯೇನ ಜೀವನಂ...ಜೀವಿಗಳಿಗೆ ವಯಸ್ಸಾಗುವುದರಲ್ಲಿ ಎರಡು ವಿಧಗಳಿವೆ. ಒಂದು ಕಾಲ ಜರಾ. ಮತ್ತೊಂದು ಅಕಾಲ ಜರಾ. ಕಾಲಕ್ಕೆ ಅನುಗುಣವಾಗಿ ಪ್ರಾಯ ಎಪ್ಪತ್ತೋ ಎಂಬತ್ತೋ ವರ್ಷವಾದಾಗ ವಯಸ್ಸಾಯಿತು ಎನ್ನುವುದಕ್ಕೆ ಅರ್ಥವಿದೆ. ಐವತ್ತು ವರ್ಷದ ಹೊಸ್ತಿಲಲ್ಲೇ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ, ಕೂದಲು ಬೆಳ್ಳಗೆ ಹೊಳೆಯುತ್ತಿದೆ, ಕಿವಿ ಸ್ವಲ್ಪ ಮಂದವಾಗಿದೆ, ಮೈಕೈ ನೋವು ವಿಪರೀತವಿದೆ, ಚರ್ಮ ಸುಕ್ಕುಗಟ್ಟಿದೆ, ತಿಂದದ್ದು ಜೀರ್ಣವಾಗುವುದಿಲ್ಲ, ನಿದ್ರೆ ಚೆನ್ನಾಗಿ ಬರುವುದಿಲ್ಲ, ನನಗೇನೂ ಕೈಲಾಗುವುದಿಲ್ಲ, ವಯಸ್ಸಾಯಿತು ಎಂದು ದೀರ್ಘಶ್ವಾಸ ತೆಗೆದುಕೊಳ್ಳುವ ಜನರನ್ನು ನಾವಿಂದು ಕಾಣುತ್ತಿರುವ ಪರಿಸ್ಥಿತಿ ಇದೆಯಲ್ಲ ಅದುವೇ ಅಕಾಲ ಜರಾ! ಅದಕ್ಕಾಗಿ ಪ್ರಾಚೀನ ಭಾರತದಲ್ಲಿದ್ದ ಜನರ ಅಭಿಲಾಷೆಯೆಂದರೆ ‘ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ’. ಜೀವನದ ಕೊನೆಯ ಭಾಗದಲ್ಲಿ ನರಳಾಟ ಇರಕೂಡದು, ಕಾಯಿಲೆಗಳಿಂದ ಒದ್ದಾಡದೆ ವಯಸ್ಸಹಜವಾಗಿ ಅಂತ್ಯವನ್ನು ಕಾಣಬೇಕು, ಜೀವಿತಾವಧಿಯಲ್ಲಿ ಕಾಡಿಬೇಡಿಕೊಂಡು ಪರರ ಹಂಗಿನಲ್ಲಿ ಬದುಕುವಂತಾಗಬಾರದು ಎಂಬುದು ಈ ಮಾತಿನ ಅಂತರಾಳ. ಹಾಸಿಗೆ ಹಿಡಿದು ಮಲಗುವಂತಹ ಕಾಯಿಲೆಗಳಿದ್ದಾಗ ಅನ್ಯರನ್ನು ಆಶ್ರಯಿಸದೇ ಬೇರೆ ದಾರಿಯಿರುವುದಿಲ್ಲ. ಹಾಗಾಗದೆ, ಬದುಕಿನುದ್ದಕ್ಕೂ ಸ್ವಾಸ್ಥ್ಯ ನಮ್ಮೊಡನೆ ಇರಲಿ ಎಂಬುದೇ ಇಲ್ಲಿನ ತಾತ್ಪರ್ಯ. ಹೀಗೆ ಇರಬೇಕಾದರೆ ಮುಪ್ಪು ಆವರಿಸುವುದನ್ನು ನಿಧಾನಗೊಳಿಸಬೇಕು. ಅಕಾಲ ಜರಾ ತಡೆಯುವುದು ಪ್ರತಿ ವ್ಯಕ್ತಿಯ ಆದ್ಯತೆಯಾಗಬೇಕು. ನಗರವನ್ನು ರಕ್ಷಿಸುವ ನಗರಾಧ್ಯಕ್ಷರಂತೆ, ರಥವನ್ನು ನಿರ್ವಹಿಸುವ ರಥಿಕರಂತೆ, ಮೇಧಾವಿಯಾದ ವ್ಯಕ್ತಿಯು ಜವಾಬ್ದಾರಿ ಅರಿತು ವಿಶೇಷ ವಿಧಾನಗಳಿಂದ ತನ್ನ ಶರೀರವನ್ನು ರಕ್ಷಿಸಿಕೊಳ್ಳಬೇಕೆಂಬ ಮಾರ್ವಿುಕವಾದ ವಿವರಣೆ ಚರಕಸಂಹಿತೆಯಲ್ಲಿದೆ. ಇದನ್ನು ಸಾಧಿಸುವ ಸಕಲ ಮಾರ್ಗಗಳನ್ನೂ ಆಯುರ್ವೆದ ತೆರೆದಿಟ್ಟಿದೆ.

    ಒಂದು ವಿಚಾರವನ್ನು ನಾವು ಸ್ಪಷ್ಟವಾಗಿ ತಿಳಿಯಲೇಬೇಕು. ಸಮಸ್ಯೆ ವೃದ್ಧರಲ್ಲ, ವೃದ್ಧಾಪ್ಯ! ವೃದ್ಧರನ್ನು ಕಿರಿಯರು ಪ್ರೀತಿಸುತ್ತಾರೆ. ಆದರೆ ವೃದ್ಧಾಪ್ಯದ ಯಾತನೆಗಳು ಅವರಿಗೆ ಸಹ್ಯವಾಗುವುದಿಲ್ಲ. ನೂರು ವರ್ಷ ಬದುಕಿ ಎಂದಾಗ ಇಷ್ಟಪಡುವ ಬದುಕು ನೂರುವರ್ಷಗಳದ್ದಾಗಿರಲಿ ಎಂಬ ಅರ್ಥವಿದೆಯೇ ಹೊರತು ನರಳಾಡಿಕೊಂಡು ಕಷ್ಟಪಟ್ಟು ನೂರುವರ್ಷ ತಳ್ಳಿ ಎಂಬರ್ಥವಿಲ್ಲ. ವೃದ್ಧಾಪ್ಯದಲ್ಲಿ ಇರುವ ತೊಂದರೆಯೆಂದರೆ ಪರಾವಲಂಬನೆ. ಆರೋಗ್ಯ ಚೆನ್ನಾಗಿದ್ದರೆ, ಗಟ್ಟಿಮುಟ್ಟಾಗಿ ಓಡಾಡುತ್ತಿದ್ದರೆ ವೃದ್ಧಾಪ್ಯವು ಬಾಧಿಸುವುದಿಲ್ಲ, ಎಲ್ಲರಿಗೂ ಅಪ್ಯಾಯಮಾನವಾಗುತ್ತದೆ. ಬದುಕಿನಲ್ಲೂ ನರ್ವಸ್ ನೈಂಟಿಯನ್ನು ರೋಚಕವಾಗಿ ಮಾರ್ಪಡಿಸುವುದು ಸಾಧ್ಯವಿದೆ.

    ವೃದ್ಧರಾಗಿದ್ದಾರೆಂದು ಯಾರನ್ನೂ ವೃದ್ಧಾಶ್ರಮಕ್ಕೆ ನೂಕಿಬಿಡುವುದಿಲ್ಲ. ವೃದ್ಧಾಶ್ರಮಗಳಲ್ಲಿ ಎಷ್ಟೇ ಸೌಕರ್ಯಗಳಿದ್ದರೂ ಅದೇನೂ ಅಭಿವೃದ್ಧಿಯ ಸಂಕೇತವಲ್ಲ. ವೃದ್ಧಾಪ್ಯದಲ್ಲಿ ಆರೋಗ್ಯ ಕೈಕೊಟ್ಟು ಇನ್ನೊಬ್ಬರನ್ನು ಅವಲಂಬಿಸಬೇಕಾಗಿ ಬಂದಾಗ ಕಷ್ಟಕಾರ್ಪಣ್ಯಗಳು ಇಮ್ಮಡಿಗೊಳ್ಳುತ್ತವೆ. ವೃದ್ಧರ ಬಗ್ಗೆ ಎಷ್ಟೇ ಗೌರವ ಪ್ರೀತಿಯಿದ್ದರೂ ‘ಅನಿವಾರ್ಯ ಕಾರಣಗಳಿಂದಾಗಿ’ ಎಂಬ ಹಣೆಪಟ್ಟಿಯೊಂದಿಗೆ ವೃದ್ಧಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ವೃದ್ಧಾಪ್ಯವನ್ನು ಸ್ವಾಸ್ಥ್ಯುಯವಾಗಿ ಪರಿವರ್ತಿಸಿದರೆ ಬಹುತೇಕ ಸಂದರ್ಭಗಳಲ್ಲಿ ಈ ಹಾದಿಯನ್ನು ತಪ್ಪಿಸಬಹುದು. ಸಂಬಂಧಗಳಿಗೆ ಬೆಲೆ ಕೊಡದ ಮಕ್ಕಳು ಮೊಮ್ಮಕ್ಕಳಿದ್ದರೆ ಕನಿಷ್ಠಪಕ್ಷ ಒಂಟಿ ಸಲಗಗಳಂತೆ ಸ್ವಾಭಿಮಾನದಿಂದ ಬದುಕಬಹುದು. ಜೀವನದ ಪೂರ್ವಾರ್ಧದಲ್ಲಿ ಆಯುರ್ವೆದ ಹೇಳಿದಂತೆ ಬಾಳಿದರೆ ವೃದ್ಧಾಪ್ಯ ಸಮಸ್ಯೆಯಾಗುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts