More

    ದೇಸಿ ಹಸುಗಳೇ ದೇವರು!

    ಮುಂಡರಗಿ: ದೇಸಿ ಹಸುಗಳೇ ದೇವರೆಂದು ಭಾವಿಸಿದ ರೈತ ಕುಟುಂಬವೊಂದು ಎರಡು ದಶಕಗಳಿಂದ ಹಸುಗಳ ಆರೈಕೆಯಲ್ಲಿ ತೊಡಗಿದೆ. ಹತ್ತಾರು ಅಡ್ಡಿ ಆತಂಕಗಳ ಮಧ್ಯೆ ಮಕ್ಕಳಂತೆ ಪೋಷಿಸುತ್ತಿದೆ.

    ಪಟ್ಟಣದ ಹೊರವಲಯದ ಹೆಸರೂರ ರಸ್ತೆ ಬಳಿ ನಾಗಮ್ಮ ಹಿರೇಹೊಳೆ (ಗೊಲ್ಲರ) ಕುಟುಂಬ ಗೋ ಸಂರಕ್ಷಣೆಯಲ್ಲಿ ತೊಡಗಿದೆ. 22 ವರ್ಷಗಳ ಹಿಂದೆ ನಾಗಮ್ಮ ಅವರ ಪರಿಚಯಸ್ಥರೊಬ್ಬರ ಹಸುವಿನ ಕಾಲಿಗೆ ಅಪಘಾತದಲ್ಲಿ ಪೆಟ್ಟಾಗಿ ಕುಂಟುತ್ತಿತ್ತು. ಅವರು ಅದನ್ನು ಮಾರಲು ಮುಂದಾ ದಾಗ ನಾಗಮ್ಮ ಖರೀದಿಸಿ ಆರೈಕೆ ಮಾಡಿದರು. ಒಂದರಿಂದ ಒಂದು ಎನ್ನು ವಂತೆ ಇದೀಗ 8 ಕರುಗಳು ಸೇರಿ ಸುಮಾರು 80 ದೇಸಿ ಗೋವುಗಳ ಸಂತತಿ ಬೆಳೆದಿದೆ.

    ಯಾವುದೇ ದುರಾಸೆ ಇಲ್ಲದೆ ಹಸುಗಳ ಚಿಕಿತ್ಸೆಗೆ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಕೇವಲ ನಾಲ್ಕೈದು ಲೀಟರ್ ಹಾಲು ಕರೆದು ಮಾರಾಟ ಮಾಡುತ್ತಾರೆ. ಉಳಿದ ಹಾಲನ್ನು ಕರುಗಳಿಗೆ ಬಿಡಲಾಗುತ್ತದೆ. ಗೋ ಸಂತತಿ ವೃದ್ಧಿಸಬೇಕು ಎನ್ನುವ ಅಪೇಕ್ಷೆ ಇರುವ ನಾಗಮ್ಮ ಅವರು ಯಾವುದೆ ಕಾರಣಕ್ಕೂ ಗೋವುಗಳನ್ನು ಮಾರಾಟ ಮಾಡುವುದಿಲ್ಲ. ಹಸುಗಳು ವಯೋಸಹಜವಾಗಿ ಮೃತಪಟ್ಟರೆ ತಮ್ಮ ಜಮೀನಿನಲ್ಲೇ ಮಣ್ಣು ಮಾಡುತ್ತಾರೆ. ರೈತರು ಸಾಕಿಕೊಂಡು ತಮ್ಮ ಜಮೀನಿನ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ ಎಂದರೆ ಮಾತ್ರ ಹೋರಿಗಳನ್ನು ಮಾರಾಟ ಮಾಡುತ್ತಾರೆ.

    ಮೇವು, ನೀರಿನ ಸಮಸ್ಯೆ…: ಗೋವುಗಳ ನೀರಿನ ದಾಹ ನೀಗಿಸಲು ನಾಗಮ್ಮ ಅವರ ಹೊಲದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಈ ವರ್ಷ ಸಮೃದ್ಧವಾಗಿ ಮಳೆ ಬಂದಿದ್ದರಿಂದ ಅಂತರ್ಜಲಮಟ್ಟ ವೃದ್ಧಿಯಾಗಿದ್ದು ನೀರಿಗೆ ಕೊರತೆಯಾಗಿಲ್ಲ. ಆದರೆ, ಬರಗಾಲದಲ್ಲಿ ದನಕರುಗಳಿಗೆ ನೀರು ಕುಡಿಸಬೇಕಾದರೆ 7 ಕಿ.ಮೀ. ದೂರದ ತುಂಗಭದ್ರಾ ನದಿಗೆ ಹೋಗಬೇಕಿದೆ. ನಾಗಮ್ಮ ಅವರಿಗೆ ಐದೂವರೆ ಎಕರೆ ಜಮೀನಿದ್ದು ಹೊಲದ ಮೇವಿನೊಂದಿಗೆ ಬೇರೆ ಕಡೆಯಿಂದ ಮೇವು ಖರೀದಿಸುತ್ತಾರೆ. ಹಸುಗಳ ಸಗಣಿ ಗೊಬ್ಬರ ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಮೇವು ಖರೀದಿಸುತ್ತಾರೆ.

    ಕಷ್ಟದಲ್ಲೇ ನಿರ್ವಹಣೆ…: ನಾಗಮ್ಮ ಅವರ ಪತಿ, ಮಕ್ಕಳು, ಸೊಸೆಯಂದಿರು ಸಹ ಗೋವುಗಳ ಸಂರಕ್ಷಣೆಯಲ್ಲಿ ಕೈಜೋಡಿಸಿದ್ದಾರೆ. ಗೋವುಗಳು ಅನಾರೋಗ್ಯಕ್ಕೆ ತುತ್ತಾದರೆ ಅವುಗಳಿಗೆ ಔಷಧ ನೀಡುವುದು ಈ ಕುಟುಂಬಕ್ಕೆ ಕಷ್ಟವಾಗಿದೆ. ಸರಿಯಾದ ಶೆಡ್ ವ್ಯವಸ್ಥೆ ಇಲ್ಲದ ಕಾರಣ ಮಳೆಯಾದರೆ ಹಸುಗಳನ್ನು ರಕ್ಷಿಸುವುದು ಕಷ್ಟವಾಗುತ್ತದೆ.

    22 ವರ್ಷಗಳಿಂದ ಗೋಮಾತೆಯ ಸೇವೆ ಮಾಡುತ್ತಿದ್ದೇವೆ. ನಮ್ಮ ಕುಟುಂಬದವರು ಜಮೀನಿನ ಕೆಲಸದ ಜೊತೆಗೆ ಮುಖ್ಯವಾಗಿ ಗೋವುಗಳ ಸಂತತಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದೇವೆ. ಹಸುಗಳನ್ನು ಅಕ್ಕರೆಯಿಂದ ಸಾಕುತ್ತಿದ್ದೇವೆ. ಸರ್ಕಾರ ಸಾಲ ಸೌಲಭ್ಯ ಮಾಡಿಕೊಟ್ಟರೆ ಗೋವುಗಳಿಗೆ ಮತ್ತು ಮೇವು ಸಂಗ್ರಹಿಸಿಟ್ಟುಕೊಳ್ಳಲು ಉತ್ತಮ ಶೆಡ್ ನಿರ್ವಿುಸಿಕೊಳ್ಳಬೇಕು ಎಂದುಕೊಂಡಿದ್ದೇವೆ.

    | ನಾಗಮ್ಮ ಹಿರೇಹೊಳೆ ಗೋ ಸಂರಕ್ಷಕಿ

    ನಮ್ಮ ತಾಯಿಯೊಂದಿಗೆ ಕುಟುಂಬದವರೆಲ್ಲರೂ ಗೋಮಾತೆಯನ್ನು ಜೋಪಾನ ಮಾಡುತ್ತಿದ್ದೇವೆ. ಗೋ ಸಂತತಿ ಬೆಳೆಸುವುದೇ ನಮ್ಮ ಗುರಿಯಾಗಿದೆ. ಕೆಲವೊಮ್ಮೆ ಮೇವು ಸಿಗದಿದ್ದಾಗ ಹಸಿದ ಗೋವುಗಳ ಮುಖವನ್ನು ನೋಡಿದರೆ ಕಣ್ಣೀರು ಬರುತ್ತದೆ. ಮೇವು ಹರಸಿಕೊಂಡು ಗೋವುಗಳನ್ನು ಬೇರೆಡೆ ಕರೆದುಕೊಂಡು ಹೋಗಿ ಮೇಯಿಸುತ್ತೇವೆ.

    | ಪರುಶುರಾಮ ಹಿರೇಹೊಳೆ ನಾಗಮ್ಮನ ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts