Friday, 21st September 2018  

Vijayavani

ಮತ್ತೆ ದೇವಸ್ಥಾನಕ್ಕೆ ಹೊರಟ ಸಿಎಂ - ಇಂದು ಸಂಜೆ ಶೃಂಗೇರಿ ಶಾರದಾಂಬೆಯ ದರ್ಶನ - ನಂತರ ಜಗದ್ಗುರಗಳ ಭೇಟಿ        ಕೊಡಗಿನಲ್ಲಿ ತಹಸೀಲ್ದಾರ್ ಮೇಲೆ‌ ಹಲ್ಲೆ ಪ್ರಕರಣ - ಪ್ರಕರಣ ಸಂಬಂಧ 12 ಆರೋಪಿಗಳ ಬಂಧನ        ಸಿಎಂ ದಂಗೆ ಹೇಳಿಕೆಗೆ ಆಕ್ರೋಶ - ಇಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ದೂರು - ಬಿಎಸ್​​ವೈ ನಿವಾಸಕ್ಕೆ ಬಿಗಿ ಭದ್ರತೆ        ಸಂಪುಟ ಸಭೆಯಲ್ಲಿ ಸಿಎಂ ದಂಗೆ ಹೇಳಿಕೆ ಪ್ರಸ್ತಾಪ - ಎಚ್​ಡಿಕೆ ಮಾತಿಗೆ ಹಿರಿಯ ಸಚಿವರಿಂದಲೇ ಆಕ್ಷೇಪ        ಎಸ್. ಗಿರೀಶ್​​ರಿಂದ ಆಪರೇಷನ್ ಕ್ಲೀನ್ - ಸಿಸಿಬಿ ಎಸ್ಪಿಯಾಗಿ ಬಂದ 24 ಗಂಟೆಯಲ್ಲೇ 5 ಸಿಬ್ಬಂದಿ ಎತ್ತಂಗಡಿ        ಬಾಗಲಕೋಟೆಯ ಬನಹಟ್ಟಿಯಲ್ಲೊಬ್ಬ ಪೋಲಿ ಶಿಕ್ಷಕ - ವಿದ್ಯಾರ್ಥಿನಿ ಮೊಬೈಲ್​​​ಗೆ ಐ ಲವ್ ಯೂ ಮೆಸೇಜ್       
Breaking News

ದುಪ್ಪಟ್ಟಾಯ್ತು ಸಾಲದ ಹೊರೆ

Monday, 12.02.2018, 3:06 AM       No Comments

| ವಿಲಾಸ ಮೇಲಗಿರಿ ಬೆಂಗಳೂರು

‘ಸಾಲ ಮಾಡಿಯಾದರೂ ತುಪ್ಪ ತಿನ್ನು’… ಸಿದ್ದರಾಮಯ್ಯ ಸರ್ಕಾರದ ಸರಣಿ ಭಾಗ್ಯಗಳ ಭಾರ ಹೊತ್ತಿರುವ ಕರ್ನಾಟಕದ ಸದ್ಯದ ಆರ್ಥಿಕ ಸ್ಥಿತಿಯನ್ನು ಈ ರೀತಿ ವಿಶ್ಲೇಷಿಸಬಹುದು. ವಿತ್ತೀಯ ಶಿಸ್ತಿನ ಮಿತಿಯೊಳಗೇ ಸಾಲವಿದೆ ಎಂಬ ಸರ್ಕಾರದ ಸಮರ್ಥನೆ ಹೊರತಾಗಿಯೂ ಸಾಲದ ಶೂಲ ಅಭಿವೃದ್ಧಿಗೆ ಅಡ್ಡಗಾಲಾಗುತ್ತಿರುವುದು ವಾಸ್ತವ. ವರ್ಷದಿಂದ ವರ್ಷಕ್ಕೆ ಸಾಲ ಹೆಚ್ಚುತ್ತಿರುವುದು ಹಣಕಾಸು ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದನ್ನು ತೋರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದ 1.12 ಲಕ್ಷ ಕೋಟಿ ರೂ. ಸಾಲ ವರ್ಷಾಂತ್ಯಕ್ಕೆ 2.42 ಲಕ್ಷ ಕೋಟಿ ರೂ.ತಲುಪುವ ನಿರೀಕ್ಷೆ ಇರುವುದು ರಾಜ್ಯದ ಆರ್ಥಿಕ ಶಿಸ್ತಿನ ಭವಿಷ್ಯಕ್ಕೆ ಕೈ ಕನ್ನಡಿಯಾಗಿದೆ.

ರಾಜ್ಯ ಸರ್ಕಾರದ ಸಾಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸಾಲದ ಮೇಲಿನ ಬಡ್ಡಿ, ಅಸಲು ಕಟ್ಟುವುದರಲ್ಲಿ, ಹಳೆ ಸಾಲ ತೀರಿಸಲು ಹೊಸ ಸಾಲ ಮಾಡಬೇಕಾದ ಪರಿಸ್ಥಿತಿ ತಲೆದೋರುವುದನ್ನೂ ಅಲ್ಲಗಳೆಯುವಂತಿಲ್ಲ. ಜನಪ್ರಿಯತೆಯ ಉಮೇದಿನಲ್ಲಿ ಸರ್ಕಾರಗಳು ಜನಪರ ಯೋಜನೆಗಳನ್ನು ಜಾರಿಗೆ ತರುವುದೇ ಸಾಲ ಹೆಚ್ಚಳಕ್ಕೆ ಪ್ರಮುಖ ಕಾರಣ. ಚುನಾವಣೆಗೆ ಮುನ್ನ ಕೊಟ್ಟ ಭರವಸೆ ಈಡೇರಿಸುವ ಸಾಹಸ, ಬಜೆಟ್ ಹೊರತಾಗಿಯೂ ಜನಪ್ರಿಯ ಯೋಜನೆ ಜಾರಿಗೊಳಿಸುವ ದುಸ್ಸಾಹಸ, ಹಠಾತ್ ಎದುರಾಗುವ ಸಮಸ್ಯೆಗಳು(ರೈತರ ಆತ್ಮಹತ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಸಾಲ ಮನ್ನಾ, ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಏರಿಕೆ) ಸರ್ಕಾರವನ್ನು ಸಾಲದ ಶೂಲಕ್ಕೆ ಸಿಲುಕಿಸುತ್ತವೆ. ನಿರೀಕ್ಷೆಗೆ ಅನುಗುಣವಾಗಿ ರಾಜಸ್ವ ಸಂಗ್ರಹಣೆ ಸಾಧ್ಯವಾಗದೇ ಇರುವುದು ಕೂಡ ರಾಜ್ಯ ಸರ್ಕಾರದ ಸಾಲದ ಮೊತ್ತ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಜನಮತಕ್ಕೆ ಜನಪರ ಯೋಜನೆಗಳು

ಇಂದಿರಾ ಕ್ಯಾಂಟೀನ್ ರಾಜ್ಯಾದ್ಯಂತ ವಿಸ್ತರಣೆ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗಳನ್ನು ಬಜೆಟ್ ನಂತರ ಸರ್ಕಾರ ಘೋಷಿಸಿದ್ದರಿಂದಾಗಿ ಬಜೆಟ್​ನಲ್ಲಿ ಮೀಸಲಿಟ್ಟ ಅನುದಾನ ಹೊರತಾಗಿ ಹೆಚ್ಚಿನ ಮೊತ್ತವನ್ನು ಒದಗಿಸಬೇಕಾಗಿದೆ. ಎಲ್ಲಕ್ಕೂ ಮಿಗಿಲು ಬರದ ಬರೆಯಿಂದ ರೈತನನ್ನು ಪಾರು ಮಾಡಲು ಸರ್ಕಾರ ಸಹಕಾರ ಬ್ಯಾಂಕ್​ಗಳ 50 ಸಾವಿರ ರೂ. ಸಾಲ ಮನ್ನಾ ಮಾಡಿ 8,165 ಕೋಟಿ ರೂ. ಹೊರೆಯನ್ನು ಹೊತ್ತುಕೊಂಡಿದೆ. ಸಾಲ ಮನ್ನಾಕ್ಕಾಗಿ ಈಗಾಗಲೇ ಪೂರಕ ಬಜೆಟ್​ನಲ್ಲಿ 2,999 ಕೋಟಿ ರೂ. ಒದಗಿಸಿದ್ದು, ಇನ್ನೂ 5,166 ಕೋಟಿ ರೂ. ನೀಡಬೇಕಿದೆ.

ಪ್ರತಿ ಪ್ರಜೆ ಮೇಲೆ – ರೂ 38 ಸಾವಿರ ಹೊರೆ?

ಈಗಾಗಲೇ ಸರ್ಕಾರದ ಮೇಲೆ 2.05 ಲಕ್ಷ ಕೋಟಿ ರೂ.ಸಾಲವಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 37,092 ಸಾವಿರ ಕೋಟಿ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆಗ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ. ಈ ನಿರೀಕ್ಷೆಯನ್ನೂ ಮೀರಿ ಆರ್ಥಿಕ ವರ್ಷದ ಅಂತ್ಯಕ್ಕೆ ಸಾಲದ ಪ್ರಮಾಣ 2.50 ಲಕ್ಷ ಕೋಟಿ ರೂ. ದಾಟುವ ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ. ಹೀಗಾದಲ್ಲಿ ರಾಜ್ಯದ ಪ್ರತಿ ಪ್ರಜೆಯ ತಲೆಯ ಮೇಲೂ ಸುಮಾರು 38 ಸಾವಿರ ರೂ.ಗೂ ಹೆಚ್ಚು ಸಾಲದ ಹೊರೆ ಬೀಳಲಿದೆ.

ಆದಾಯ ಸಂಗ್ರಹ ಅಧ್ವಾನ

2017-18ನೇ ಸಾಲಿನಲ್ಲಿ 1,86,561 ಕೋಟಿ ರೂ.ನ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಇದನ್ನು ಕಾರ್ಯರೂಪಕ್ಕೆ ತರಲು – 1,44,892 ಕೋಟಿ ರೂ ರಾಜಸ್ವ ಸಂಗ್ರಹ ಗುರಿಯ ಜತೆಗೆ – 37,092 ಕೋಟಿ ರೂ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇದರಿಂದಾಗಿ ವರ್ಷಾಂತ್ಯಕ್ಕೆ ಸಾಲದ ಮೊತ್ತ – 2,42,420 ಕೋಟಿ ರೂ ತಲುಪಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆದಾಯ ಸಂಗ್ರಹದಲ್ಲಿ ಕುಸಿತ, ವೆಚ್ಚ ಹೆಚ್ಚಳದಿಂದ ಸಾಲದ ಪ್ರಮಾಣ ಈ ವರ್ಷ  45 ಸಾವಿರ ಕೋಟಿ ರೂ ದಾಟುವ ಅಂದಾಜಿದೆ.

ತೆರಿಗೆ ಸಂಗ್ರಹ ಗುರಿ ಹಿನ್ನಡೆ

2017-18ನೇ ಸಾಲಿನ ಬಜೆಟ್​ನಲ್ಲಿ 1,44,892 ರಾಜಸ್ವ ಸಂಗ್ರಹ ಲೆಕ್ಕಾಚಾರವನ್ನು ಹಿಂದಿನ ವರ್ಷದ ತೆರಿಗೆ ಸಂಗ್ರಹ ಬೆಳವಣಿಗೆಯ ದರದ (ಪ್ರತಿ ವರ್ಷ ತೆರಿಗೆ ಸಂಗ್ರಹದಲ್ಲಿ ಶೇ. 14ರಿಂದ 15ರಷ್ಟು ಇದ್ದರೆ, ಈ ಬಾರಿ ಶೇ. 16ರಿಂದ ಶೇ. 17ರಷ್ಟು ಏರಿಕೆ ಗುರಿ) ಆಧಾರದ ಮೇಲೆ ಹಾಕಲಾಗಿತ್ತು. ಆದರೆ, ಜಿಎಸ್​ಟಿ ಜಾರಿಯಿಂದಾಗಿ ತೆರಿಗೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ನಿರೀಕ್ಷಿತ ಶೇ.14-15ರ ಬದಲು ಶೇ.7- 8ರೊಳಗಿದೆ. ಈ ನಷ್ಟದ ಪ್ರಮಾಣವನ್ನು ಕೇಂದ್ರ ಸರ್ಕಾರ ಭರಿಸುತ್ತದೆಯಾದರೂ ಹೆಚ್ಚುವರಿ ಗುರಿಯ ಮೊತ್ತವನ್ನು ಕೇಂದ್ರ ನೀಡುವುದಿಲ್ಲ. ಹಾಗಾಗಿ ಹೆಚ್ಚುವರಿ ಸಾಲ ಅನಿವಾರ್ಯವಾಗುತ್ತದೆ.

ಚುನಾವಣಾ ರಾಜಕೀಯ

ಹೆಚ್ಚುವರಿ ವೆಚ್ಚ ಹೊಂದಾಣಿಕೆ ಮಾಡಲು ಇತರೆ ಇಲಾಖೆಗಳಿಗೆ ನೀಡಿರುವ ಅನುದಾನ ಕಡಿತಗೊಳಿಸಬೇಕಾಗುತ್ತದೆ. ಆದರೆ, ಚುನಾವಣೆ ಸಮೀಪಿಸಿರುವುದರಿಂದ ಅನುದಾನ ಕಡಿತಗೊಳಿಸಿದರೆ ರಾಜಕೀಯವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾರಣ ಹೆಚ್ಚುವರಿ ಸಾಲ ಪಡೆದೇ ಯೋಜನೆಗಳಿಗೆ ಹಣ ಒದಗಿಸಬೇಕು.

 

Leave a Reply

Your email address will not be published. Required fields are marked *

Back To Top