More

    ಬಿಜೆಪಿಗರನ್ನು ದೇಶ ಬಿಟ್ಟು ಓಡಿಸಿ; ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

    ಕೊಪ್ಪಳ: ದೇಶದ ಸಂಪತ್ತನ್ನು ಮಾರಾಟಕ್ಕಿಟ್ಟಿರುವ ಬಿಜೆಪಿ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಿ ದೇಶ ಬಿಟ್ಟು ಓಡಿಸಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

    ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದ ಬನ್ನಿಕಟ್ಟಿಯಿಂದ ಅಶೋಕ ವೃತ್ತದವರೆಗೆ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ನೇತೃತ್ವವಹಿಸಿ ಮಾತನಾಡಿದರು. ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ, ಪೆಟ್ರೋಲ್, ಡೀಸೆಲ್ ಬೆಲೆ ಅರ್ಧದಷ್ಟು ಕಡಿಮೆಯಾಗುವುದು. ದೇಶ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದು ಹೇಳಿದವರೆಲ್ಲ ಇಂದು ಎಲ್ಲಿದ್ದಾರೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಗಣನೀಯವಾಗಿ ಕಡಿಮೆಯಾದರೂ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಸಿಲಿಂಡರ್ ಸೇರಿ ದಿನ ಬಳಕೆ ವಸ್ತುಗಳ ಬೆಲೆ ಏರುತ್ತಲೇ ಇದೆ. ಸಾಮಾನ್ಯ ಜನರು ಬದುಕುವುದಕ್ಕೂ ಕಷ್ಟಪಡುವಂತಾಗಿದೆ. ಇದೇನಾ ಅಚ್ಛೆ ದಿನ್ ಅಂದ್ರೆ. ಕೇಂದ್ರ ಸರ್ಕಾರ ಇಷ್ಟೆಲ್ಲ ಜನವಿರೋಧಿ ಆಡಳಿತ ನಡೆಸಿದರೂ ಅವರನ್ನು ಸಮರ್ಥಿಸಿಕೊಳ್ಳುವ ರಾಜ್ಯ ಬಿಜೆಪಿಗರು, ಕಾರ್ಯಕರ್ತರಿಗೆ ಸ್ವಲ್ಪವಾದರೂ ನಾಚಿಕೆ, ಮಾನ, ಮರ್ಯಾದೆ ಇದೆಯಾ ಎಂದು ಕಟುವಾಗಿ ಟೀಕಿಸಿದರು.

    ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂಥ ಅಂಶಗಳಿಲ್ಲ. ರಾಜ್ಯ ಸರ್ಕಾರ ಸಹ ಜನಪರವಾದ ಒಂದು ಯೋಜನೆಯನ್ನೂ ಜಾರಿ ಮಾಡಿಲ್ಲ. ಯುಪಿಎ ಸರ್ಕಾರ ಇದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದ್ದರೂ, ದೇಶದ ಜನರಿಗೆ ಕಡಿಮೆ ದರಕ್ಕೆ ನೀಡುಲಾಗುತ್ತಿತ್ತು. ಇಂದು ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಅಂಬಾನಿ, ಅದಾನಿ ಸುತ್ತ ಸುತ್ತುತ್ತಿದೆ. ದೇಶದ ರೈತರು ಕೃಷಿ ಕಾಯ್ದೆ ವಿರೋಧಿಸಿ ಹಲವು ದಿನದಿಂದ ಪ್ರತಿಭಟಿಸುತ್ತಿದ್ದಾರೆ. 60ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ. ಆದರೂ ಕೇಂದ್ರ ಸರ್ಕಾರ ಅವರ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲವೆಂದು ಆರೋಪಿಸಿದರು.

    ಬನ್ನಿಕಟ್ಟಿಯಿಂದ ಅಶೋಕ ವೃತ್ತದವರೆಗೆ ನೂರಾರು ಕಾರ್ಯಕರ್ತರು ಎತ್ತಿನ ಬಂಡಿ, ಬೈಕ್, ಆಟೋ ಹಾಗೂ ಕಾಲ್ನನಿಡಗೆ ಮೂಲಕ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಪಂ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಜಿಪಂ ಸದಸ್ಯ ಎಸ್.ಬಿ.ನಾಗರಳ್ಳಿ, ಮುಖಂಡರಾದ ಕೃಷ್ಣ ಇಟ್ಟಂಗಿ, ಗುರುರಾಜ ಹಲಗೇರಿ, ಕಿಶೋರಿ ಬೂದನೂರು ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts