Thursday, 20th September 2018  

Vijayavani

Breaking News

ಬಿಜೆಪಿ ವಿರುದ್ಧ ಐಟಿ ಇಲಾಖೆಗೆ ದೂರಿತ್ತ ಕೈ

Saturday, 15.09.2018, 2:03 AM       No Comments

ಬೆಂಗಳೂರು: ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷ ಬಿಜೆಪಿ ಷಡ್ಯಂತ್ರ ನಡೆಸಿದೆ ಎಂಬ ಭೀತಿಯಿಂದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತಿತಂತ್ರ ಹೂಡಲು ಮುಂದಾಗಿದ್ದು, ಸರ್ಕಾರ ಬೀಳಿಸುವುದರ ಹಿಂದೆ ಬಿಜೆಪಿ ಕ್ರಿಮಿನಲ್ ಸಂಚು ನಡೆಸಿದೆ ಎಂದು ಗಂಭೀರ ಆರೋಪ ಮಾಡಿ ಆದಾಯ ತೆರಿಗೆ ಇಲಾಖೆಯ ಮೊರೆ ಹೋಗಿವೆ. ಇದರಿಂದ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಒಂದೆಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರು ಈಗಾಗಲೇ ಕೆಲ ಶಾಸಕರಿಗೆ ಡೌನ್​ಪೇಮೆಂಟ್ ಕೊಟ್ಟಿದ್ದು, ಅದಕ್ಕಾಗಿ ಕ್ರಿಮಿನಲ್​ಗಳನ್ನು ಬಳಕೆ ಮಾಡಿಕೊಂಡಿದೆ ಎಂಬ ಗಂಭೀರ ಆರೋಪ ಮಾಡಿದ್ದರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿದ್ದು, ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದೂರು ನೀಡುವ ಮೂಲಕ ಕಾನೂನು ಹೋರಾಟ ನಡೆಸುತ್ತೇವೆ ಎಂದು ಸಾರಿದ್ದಾರೆ. ಇದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಪ್ರಾದೇಶಿಕ ಕಚೇರಿಗೆ ತೆರಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದ ನಿಯೋಗ ಬಿಜೆಪಿ ಮುಖಂಡರ ವಿರುದ್ಧ ದೂರು ನೀಡಿದೆ.

ಸಿಎಂ, ಡಿಸಿಎಂ ತಂತ್ರ

ಮಾಜಿ ಡಿಸಿಎಂ ಆರ್.ಅಶೋಕ್, ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ್ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಅವರ ಹೆಸರುಗಳನ್ನು ಹೇಳದೇ ಸಿಎಂ ಕುಮಾರಸ್ವಾಮಿ ಈ ಎಲ್ಲ ನಾಯಕರು ಕೆಲ ಕ್ರಿಮಿನಲ್​ಗಳನ್ನು ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಷಡ್ಯಂತ್ರದ ಆರೋಪ ಜತೆಗೆ ಕ್ರಿಮಿನಲ್ ಸಂಪರ್ಕದ ಆರೋಪವನ್ನೂ ಬಿಜೆಪಿ ವಿರುದ್ಧ ಮಾಡಿರುವ ಸಿಎಂ ಕುಮಾರಸ್ವಾಮಿ ಹಾಗೂ ಲಂಚದ ಆಮಿಷ ಆರೋಪ ಮಾಡಿರುವ ಡಿಸಿಎಂ ಡಾ.ಪರಮೇಶ್ವರ್, ಪ್ರತಿಪಕ್ಷಕ್ಕೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ.

ದೂರಿನಲ್ಲಿರುವ ಅಂಶಗಳೇನು?

ಕಾಂಗ್ರೆಸ್ ಶಾಸಕರಾದ ಕುಂದಗೋಳದ ಸಿ.ಎಸ್.ಶಿವಳ್ಳಿ, ರಾಯ ಚೂರು ಗ್ರಾಮೀಣ ಕ್ಷೇತ್ರದ ಬಸನಗೌಡ, ಹಿರೇಕೆರೂರಿನ ಬಿ.ಸಿ.ಪಾಟೀಲ್ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಅವರ ಕುಮ್ಮಕ್ಕಿನಿಂದ ಶಾಸಕ ಡಾ.ಅಶ್ವತ್ಥ ನಾರಾಯಣ ಮತ್ತಿತರ ನಾಯಕರು ಆಮಿಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ.

ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪದ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆಗೆ ಕಾಂಗ್ರೆಸ್ ದೂರು ನೀಡಲು ಮುಂದಾಗಿದೆ. ಕಾಂಗ್ರೆಸ್ ನಾಯಕರಲ್ಲಿರುವ ಬೌದ್ಧಿಕ ದಿವಾಳಿತನವನ್ನು ಈ ದೂರು ಪ್ರದರ್ಶಿಸಿದೆ. ಇಡೀ ಕಾಂಗ್ರೆಸ್​ಗೆ ಹುಚ್ಚುತನ ಆವರಿಸಿದೆ.

| ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಸರ್ಕಾರದ ಮೇಲಿನ ಹಿಡಿತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವೃಥಾ ಬಿಜೆಪಿ ವಿರುದ್ಧ ಆರೋಪಿಸುತ್ತಿದ್ದಾರೆ. ಮಾನಸಿಕ ಹತೋಟಿ ಕಳೆದುಕೊಂಡವರಂತೆ ಹೊಣೆಗೇಡಿತನದಿಂದ ಮಾತನಾಡುವುದು ಶೋಭೆಯಲ್ಲ.

| ಎನ್.ರವಿಕುಮಾರ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *

Back To Top