Friday, 21st September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಕಾಂಗ್ರೆಸ್ ಅಭ್ಯರ್ಥಿಗಳ ಆತ್ಮಾವಲೋಕನ ಸಭೆ

Thursday, 14.06.2018, 5:00 AM       No Comments
ಎದ್ದುಕಂಡ ಡಾ.ಎಚ್.ಸಿ.ಮಹದೇವಪ್ಪ ಗೈರು

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಹಾಗೂ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳ ಆತ್ಮಾವಲೋಕನ ಸಭೆ ಜರುಗಿತು.

ಸಭೆಯಲ್ಲಿ ಶಾಸಕರಾದ ತನ್ವೀರ್‌ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳಾದ ವಾಸು, ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಡಿ.ರವಿಶಂಕರ್, ಎಚ್.ಬಿ.ಮಂಜುನಾಥ್, ನಗರಾಧ್ಯಕ್ಷ ಆರ್.ಮೂರ್ತಿ, ಭೋವಿ ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು, ಜಿ.ಪಂ.ಸದಸ್ಯೆ ಡಾ.ಪುಷ್ಪ ಅಮರನಾಥ್, ಶಾರದಾ ಸಂಪತ್ ಮುಂತಾದವರು ಭಾಗವಹಿಸಿದ್ದರು.

ಆದರೆ, ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತ್ರ ಗೈರಾಗಿದ್ದರು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಮಹದೇವಪ್ಪ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದಾರೆ. ಬೆಂಗಳೂರು ಬಳಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ನನಗೆ ಮೊದಲೇ ತಿಳಿಸಿ ಸಭೆಗೆ ಗೈರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಕಳಪೆ ಸಾಧನೆ ಬಗ್ಗೆ ಚರ್ಚೆ ನಡೆಸಲಾಯಿತು. ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಸಭೆಗೂ ಮೊದಲು ಹೋಟೆಲ್‌ನಲ್ಲಿ ಇಡ್ಲಿ, ವಡೆ ಸೇವಿಸಿದ ಸಿದ್ದರಾಮಯ್ಯ, ಮುಖಂಡರ ಜತೆ ಉಭಯ ಕುಶಲೋಪರಿ ನಡೆಸಿದರು. ಜತೆಗೆ ಮಾಧ್ಯಮದವರೊಂದಿಗೆ ತಮ್ಮ ಹಳೇ ಸವಿ ನೆನಪುಗಳನ್ನು ಮೆಲುಕು ಹಾಕಿದರು.

ಅಸಮಾಧಾನ ಹೊರಹಾಕಿದ ವಾಸು: ಸಿದ್ದರಾಮಯ್ಯ ಅವರು ಇಡ್ಲಿ, ವಡೆ ಸೇವಿಸುವಾಗಲೇ ಮಾಜಿ ಶಾಸಕ ವಾಸು ಅಸಮಾಧಾನ ಹೊರಹಾಕಿದರು. ಉಪಾಹಾರ ಸೇವನೆ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಸಿದ್ದರಾಮಯ್ಯ ತಕ್ಷಣ ಬೆನ್ನುತಟ್ಟಿ ಕ್ಷೇತ್ರ ಪ್ರವಾಸ ಮಾಡುವಂತೆ ಸಲಹೆ ನೀಡಿದರು. ಬಳಿಕ ನೀವೂ ಕ್ಷೇತ್ರಕ್ಕೆ ಹೋಗಿದ್ರ ಅಂತ ವಾಸು ಅವರನ್ನು ಸಿದ್ದರಾಮಯ್ಯ ಕೇಳಿದರು.

‘ಹೋಗಿ ಏನ್ ಮಾಡ್ಲಿ ಸರ್’ ಎಂದು ವಾಸು ಉತ್ತರಿಸಿದರು. ಕಾರ್ಯಕರ್ತರೊಂದಿಗೆ ಆತ್ಮಾವಲೋಕನ ಸಭೆ ಮಾಡ್ರಿ ಎಂದು ಸಿದ್ದರಾಮಯ್ಯ ತಿಳಿಸಿದರು. ಏನಂತ ಆತ್ಮಾವಲೋಕನ ಮಾಡೋದು. ಕಾರ್ಯಕರ್ತರೆಲ್ಲಾ ನಮ್ಮ ಪಕ್ಷದವರೇ ನಮ್ಮನ್ನು ಸೋಲಿಸಿದ್ರು ಅಂತಾರೆ ಎಂದು ಅಸಮಾಧಾನ ಹೊರಹಾಕಿದರು. ‘ಅಂತವರ ವಿರುದ್ಧ ದೂರು ನೀಡಿ. ನನಗೆ ಬೇಡ, ಪಕ್ಷದ ಅಧ್ಯಕ್ಷರಿಗೆ ದೂರು ನೀಡಿ ಎಂದು ಸಲಹೆ ನೀಡಿದರು.
ಪಾಠ ಮಾಡುವುದೇ ಖುಷಿ: ನನಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುವುದೆಂದರೆ ತುಂಬಾ ಖುಷಿ. ಈಗಲೂ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಇಷ್ಟ ಆಗುತ್ತದೆ. ಆದರೆ ಈಗ ನನಗೆ ವಯಸ್ಸಾಗಿದೆ ಎಂದರು.

ನೀವು 21ರ ಯುವಕನ ಹಾಗಿದ್ದೀರಿ, ನಿಮಗೆ ಮತ್ತೊಂದು ಮದುವೆ ಮಾಡಿಸುವ ಉತ್ಸಾಹದಲ್ಲಿದ್ದೇವೆ ಎಂದು ಬಾದಾಮಿಯಲ್ಲಿ ಚಿಮ್ಮನಕಟ್ಟಿ ಹೇಳಿದ್ದನ್ನು ಪತ್ರಕರ್ತರು ನೆನಪು ಮಾಡಿದಾಗ, ನನಗೆ 71ವರ್ಷ ವಯಸ್ಸಾಗಿದೆ. ಯಾರಾದ್ರು ಹುಡುಗಿಯರು ಕೇಳಿಸಿಕೊಂಡರೆ ತಪ್ಪು ತಿಳಿಯುತ್ತಾರೆ ಎಂದರು

ನೀವು ಈಗಲೂ ಯುವಕನ ಹಾಗೇ ಇದ್ದೀರಿ? ಯಂಗ್ ಅಟ್ ಹಾರ್ಟ್ ಎಂದಿದ್ದಕ್ಕೆ, ಹೌದೌದು ಹೃದಯದಲ್ಲಿ ನಾನಿನ್ನೂ ಯಂಗ್ ಎಂದರು.
ಚಾಮುಂಡೇಶ್ವರಿಯ ಇತ್ತೀಚಿನ ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ರೀತಿಯ ವಿಶ್ಲೇಷಣೆ ಮಾಡುವ ಅಗತ್ಯ ಕಂಡು ಬರಲಿಲ್ಲ. ಗೆಲ್ತೀನಿ ಅನ್ನೋ ವಿಶ್ವಾಸದಿಂದ ನಿಂತಿದ್ದೆ. ಈಗ ಅದೆಲ್ಲಾ ಮುಗಿದ ವಿಷಯ ಎಂದು ಮಾತಿಗೆ ಆರಂಭಿಸಿದರು. ಈದಿನ ಸಭೆ ಕರೆದಿರುವ ಉದ್ದೇಶ ಏನು? ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೀರಾ? ಎಂದಿದ್ದಕ್ಕೆ ಆತ್ಮಾನೂ ಇಲ್ಲ…ಲೋಕಾನೂ ಇಲ್ಲ. ತುಂಬಾ ದಿನ ಆಗಿತ್ತು ನಮ್ಮ ಪಕ್ಷದವರನ್ನು ನೋಡಿ, ಮಾತನಾಡಿ. ಹೀಗೆ ಚಿಟ್ ಚಾಟ್ ಮಾಡಲು ಸೇರಿದ್ದೇವೆ. ಲೋಕಸಭಾ ಚುನಾವಣೆಗೆ ಇನ್ನು 9/10 ತಿಂಗಳು ಮಾತ್ರ ಇದೆ. ಆ ಸಂಬಂಧವಾಗಿ ಚರ್ಚೆ ಮಾಡುತ್ತೇವೆ. ಸಿದ್ಧತೆಗಳು ಆಗಬೇಕಿದೆ. ಇದರ ಬಗ್ಗೆಯೂ ಚರ್ಚಿಸುತ್ತೇವೆ ಎಂದರು.

Leave a Reply

Your email address will not be published. Required fields are marked *

Back To Top