ನವದೆಹಲಿ: ಕಾನೂನು ಬಾಹಿರ ಠೇವಣಿ ಯೋಜನೆಗಳ ಅಂಕುಶಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಈ ಸಂಬಂಧ ಹೊಸ ಕಾಯ್ದೆ ರಚನೆಗೆ ತೀರ್ವನಿಸಿದೆ. ಪ್ರಸ್ತಾಪಿತ ಕಾಯ್ದೆ ಪ್ರಕಾರ ಆರ್ಬಿಐ ಅಥವಾ ಯಾವುದೇ ಪ್ರಾಧಿಕಾರಗಳಿಂದ ಅನುಮತಿಯಿಲ್ಲದೆ ನಡೆಸುವ ಎಲ್ಲ ರೀತಿಯ ಠೇವಣಿ ಯೋಜನೆಗಳು ಅಕ್ರಮವಾಗಲಿದ್ದು, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆ ಆಯವ್ಯಯದ ಮುಂದುವರಿದ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಹೊಸ ಕಾಯ್ದೆ ಜಾರಿಯಾದ ನಂತರ ಚಿಟ್ಫಂಡ್, ಆಭರಣ ಮಳಿಗೆಗಳಲ್ಲಿನ ಅನಧಿಕೃತ ಠೇವಣಿ, ಬಹುಹಂತದ ಮಾರ್ಕೆಟಿಂಗ್ನ ಹೂಡಿಕೆ ಸೇರಿ ಎಲ್ಲ ರೀತಿಯ ಕಾನೂನು ಬಾಹಿರ ಠೇವಣಿ ಯೋಜನೆಗಳಿಗೂ ಲಗಾಮು ಬೀಳಲಿದೆ.
2017-18ರ ಆಯವ್ಯಯ ಭಾಷಣದಲ್ಲೇ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಕುರಿತು ಪ್ರಸ್ತಾಪ ಮಾಡಿದ್ದರು. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಇಂತಹ ಅನೇಕ ಅನಧಿಕೃತ ಯೋಜನೆಗಳಿಂದ ಸಾರ್ವಜನಿಕರಿಗೆ ಕೋಟ್ಯಂತರ ರೂ. ಟೋಪಿ ಬಿದ್ದಿತ್ತು.
ಸೂಕ್ತ ಕಾನೂನಿನ ರಕ್ಷಣೆ ಇರದಿರುವುದರಿಂದ ಸಾರ್ವಜನಿಕರ ದೂರು ಅರಣ್ಯರೋದನವಾಗಿ ಲೂಟಿಕೋರರ ದಂಧೆಗೆ ನಿಯಂತ್ರಣವೇ ಇಲ್ಲದಂತಾಗಿತ್ತು. ಈ ಕಾಯ್ದೆಯಿಂದ ಅಧಿಕೃತವಾಗಿ ಠೇವಣಿ ಯೋಜನೆ ನಡೆಸುತ್ತಿರುವರಿಗೆ ಕಠಿಣ ನಿಯಮ ಹಾಗೂ ಅನಧಿಕೃತ ದಂಧೆಗೆ ಸಂಪೂರ್ಣ ನಿಷೇಧ ಬೀಳಲಿದೆ. ವೈಯಕ್ತಿಕ ಅಥವಾ ಸಂಸ್ಥೆ ಮೂಲಕ ಇಂತಹ ಯಾವುದೇ ಅನಧಿಕೃತ ಠೇವಣಿ ಯೋಜನೆ ನಡೆಸಿದರೆ ಪೊಲೀಸರ ಅತಿಥಿಯಾಗಬೇಕಾಗುತ್ತದೆ.
ಈ ವ್ಯವಸ್ಥೆಯ ಮೇಲೆ ನಿಗಾ ಇಡಲು ಪ್ರತಿ ರಾಜ್ಯದಲ್ಲೂ ವಿಶೇಷ ಮಾಹಿತಿ ಕೇಂದ್ರಗಳಿರುತ್ತವೆ. ಇವು ಈ ರೀತಿಯ ಆರ್ಥಿಕ ಹಾಗೂ ಆನ್ಲೈನ್ ವ್ಯವಹಾರಗಳ ಮೇಲೆ ಕಣ್ಣಿಡಲಿವೆ.
ಯಾವುದೆಲ್ಲ ನಿಷೇಧ?
# ಅನಧಿಕೃತವಾಗಿ ಠೇವಣಿ ಸಂಗ್ರಹಿಸುವುದು
# ಅನಧಿಕೃತ ಠೇವಣಿ ಯೋಜನೆಗೆ ಪ್ರಚಾರ
ಯಾವುದು ಅಕ್ರಮ?
# ಅನಧಿಕೃತ ಠೇವಣಿ ಯೋಜನೆ ನಡೆಸುವುದು
# ಅಧಿಕೃತ ಠೇವಣಿ ಯೋಜನೆ ನಡೆಸಿ ಮೋಸ ಮಾಡುವುದು
# ಅನಧಿಕೃತ ಠೇವಣಿ ಯೋಜನೆಗೆ ಸಹಕಾರ ನೀಡುವುದು
ಶಿಕ್ಷೆ ತಪ್ಪಿದ್ದಲ್ಲ…
ಅಧಿಕೃತವಾಗಿ ಚಿಟ್ಫಂಡ್ ನಡೆಸುತ್ತಿದ್ದರೂ ಎಲ್ಲ ಚೀಟಿಗಳ ಮಾಹಿತಿಯನ್ನು ಆರ್ಬಿಐ ಜತೆಗೆ ಹಂಚಿಕೊಳ್ಳುತ್ತಿರಲಿಲ್ಲ. ಇನ್ನು ಮುಂದೆ ಇಂತಹ ಯಾವುದೇ ಅಕ್ರಮ ಎಸಗಿದರೂ ಕಾನೂನು ರೀತಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಎಲ್ಲ ರೀತಿಯ ಅಧಿಕೃತ ಚೀಟಿಗಳು ಕೂಡ ಕಾನೂನು ವ್ಯಾಪ್ತಿಗೆ ಬರಲಿವೆ.
ಏನು ಶಿಕ್ಷೆ?
# ಅನಧಿಕೃತವಾಗಿ ಠೇವಣಿ ಸಂಗ್ರಹಿಸಿದರೆ ಜೈಲು ಶಿಕ್ಷೆ ಹಾಗೂ ದಂಡ, ಸಾರ್ವಜನಿಕರಿಗೆ ಹಣ ಮರುಪಾವತಿ
# ಅಧಿಕೃತವಾಗಿ ಠೇವಣಿ ಸಂಗ್ರಹಿಸಿ ಮೋಸ ಮಾಡಿದರೂ ಆಸ್ತಿ, ಹಣ ಜಪ್ತಿ, ಜೈಲು ಶಿಕ್ಷೆ ಹಾಗೂ ದಂಡ, ಗ್ರಾಹಕರಿಗೆ ಹಣ ಹಂಚಿಕೆ
ಅನಧಿಕೃತ ಠೇವಣಿಗಳಿವು
# ನೋಂದಣಿಯಾಗದ ಚಿಟ್ಫಂಡ್ ವ್ಯವಹಾರ ? ಆಭರಣ ಮಳಿಗೆ ಹಾಗೂ ಇತರ ಸಂಸ್ಥೆಗಳಲ್ಲಿ ಆರ್ಬಿಐ ಅನುಮತಿಯಿಲ್ಲದೆ ನಡೆಯುವ ಚೀಟಿ ವ್ಯವಹಾರಗಳು
# ಬಹು ಹಂತದ ಮಾರ್ಕೆಟಿಂಗ್ನಲ್ಲಿ ನಡೆಯುವ ಹಣಕಾಸು ವ್ಯವಹಾರ
# ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿಯಿಲ್ಲದೇ ಪಿರಾಮಿಡ್ ಅಥವಾ ಇತರ ಮಾದರಿಯಲ್ಲಿ ನಡೆಯುವ ಹೂಡಿಕೆ ಪತ್ರಗಳು