More

    ತೆರಿಗೆ ಹೇರಿಕೆ ಇಲ್ಲ, ವಿನಾಯಿತಿಯೂ ಇಲ್ಲ: ಆದಾಯ ತೆರಿಗೆಯ ಹಳೆಯ ಸ್ಲ್ಯಾಬ್ ಮುಂದುವರಿಕೆ; ಮಧ್ಯಮ ವರ್ಗ, ವೇತನದಾರರಿಗೆ ನಿರಾಸೆ

    ನವದೆಹಲಿ: ಕರೊನಾ ಬಳಿಕ ತೆರಿಗೆ ವಿನಾಯಿತಿ, ತೆರಿಗೆ ಮಿತಿ ಹೆಚ್ಚಳ ಎದುರು ನೋಡುತ್ತಿದ್ದ ಮಧ್ಯಮ ವರ್ಗ ಹಾಗೂ ವೇತನ ವರ್ಗಕ್ಕೆ ಯಾವುದೇ ಸಿಹಿ ಸುದ್ದಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿಲ್ಲ. ಆದರೆ, ತೆರಿಗೆ ಪಾವತಿಯನ್ನು ಸರಳೀಕರಿಸುವ ಹಾಗೂ ವಿವಾದಗಳನ್ನು ಬಗೆಹರಿಸುವ ಮೂಲಕ ನೆಮ್ಮದಿಯಿಂದ ಕೆಲಸದ ಕಡೆ ಗಮನ ಹರಿಸಲು ಸಹಕಾರ ನೀಡುವ ಸಂದೇಶವನ್ನು ನೀಡಿದ್ದಾರೆ. ಹಿರಿಯ ನಾಗರಿಕರಿಗೆ ತೆರಿಗೆ ಪಾವತಿಯಿಂದ ವಿನಾಯಿತಿ, ಸ್ಟಾರ್ಟಪ್ ಹೂಡಿಕೆದಾರರಿಗೆ ಉತ್ತೇಜನ, ಫೇಸ್​ಲೆಸ್ ಮೇಲ್ಮನವಿ ಪ್ರಾಧಿಕಾರ, ಎನ್​ಆರ್​ಐಗಳ ಸಂಕಷ್ಟಕ್ಕೆ ಪರಿಹಾರ, ತೆರಿಗೆ ಪ್ರಕರಣ ಪುನಃ ತೆರೆಯುವ ಅವಧಿ ಕಡಿತ ಸೇರಿ ಹತ್ತು ಹಲವು ವರ್ಗಗಳು ತೆರಿಗೆ ಪಾವತಿಯನ್ನು ಸರಳವಾಗಿ ನಡೆಸುವಂತಾಗಲು ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನ ಎರಡನೇ ಭಾಗವನ್ನು ಬಹುತೇಕ ತೆರಿಗೆ ಪ್ರಸ್ತಾವನೆಗಳಿಗೇ ಮೀಸಲಿಟ್ಟಿದ್ದರು. 2020ರಲ್ಲಿ ಕೈಗೊಂಡ ಕ್ರಮಗಳಿಂದಾಗಿ ಕಾರ್ಪೆರೇಟ್ ತೆರಿಗೆ ಇಡೀ ವಿಶ್ವದಲ್ಲೆ ಅತಿ ಕಡಿಮೆ ಹಂತದಲ್ಲಿದೆ. ಡಿವಿಡೆಂಡ್ ಹಂಚಿಕೆ ತೆರಿಗೆಯನ್ನು ರದ್ದುಪಡಿಸಲಾಗಿದೆ ಹಾಗೂ ತೆರಿಗೆ ವಿನಾಯಿತಿ ಹೆಚ್ಚಿಸುವ ಮೂಲಕ ಸಾಮಾನ್ಯ ತೆರಿಗೆದಾರರ ಮೇಲಿನ ಹೊರೆ ಕಡಿಮೆಗೊಳಿಸಲಾಗಿದೆ ಎಂದು ಭಾಷಣ ಪ್ರಾರಂಭದಲ್ಲೇ ಉಲ್ಲೇಖಿಸಿದರು. ಈ ಮೂಲಕ, ಪ್ರಸಕ್ತ ಬಜೆಟ್​ನಲ್ಲಿ ಯಾವುದೇ ತೆರಿಗೆ ವಿನಾಯಿತಿ, ಮಿತಿ ಹೆಚ್ಚಳದಂತಹ ಘೊಷಣೆಗಳನ್ನು ನಿರೀಕ್ಷೆ ಮಾಡಬೇಡಿ ಎಂಬ ಪರೋಕ್ಷ ಸಂದೇಶ ರವಾನಿಸಿದರು.

    ‘ಸಂಪತ್ತಿನ ಸೃಜನೆ, ರಕ್ಷಣೆ ಹಾಗೂ ಹಂಚಿಕೆಯನ್ನು ರಾಜನಾದವನು ಎಲ್ಲರ ಒಳಿತಿಗಾಗಿ ಮಾಡಬೇಕು’ ಎಂಬ ತಮಿಳು ಕವಿ ತಿರುವಳ್ಳುವರ್​ರ ತಿರಕ್ಕುರಳ್ ಉಲ್ಲೇಖಿಸಿ, ಅದಕ್ಕೆ ಅನುಗುಣವಾಗಿರುತ್ತೇವೆ ಎಂದರು. ಕಳೆದ ವರ್ಷದ ಸುಧಾರಣೆಗಳ ಪರಿಣಾಮ, 2014ರಲ್ಲಿ 3.31 ಕೋಟಿ ಇದ್ದ ತೆರಿಗೆ ಪಾವತಿದಾರರ ಸಂಖ್ಯೆ 2020ರಲ್ಲಿ 6.48 ಕೋಟಿಗೆ ಏರಿಕೆ ಆಗಿದೆ. ಕರೊನಾ ನಂತರ ಅನೇಕ ಆರ್ಥಿಕತೆಗಳು ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದರೆ ಭಾರತೀಯ ಜನತೆ ಹಾಗೂ ಕೈಗಾರಿಕೆಗಳು ಗಣನೀಯ ಪ್ರಮಾಣದಲ್ಲಿ ಪ್ರತಿರೋಧವನ್ನು ಒಡ್ಡಿವೆ ಎಂದು ನಾಗರಿಕರನ್ನು ಶ್ಲಾಘಿಸಿದರು. ಕರೊನಾ ನಂತರದ ಹೊಸ ಪದ್ಧತಿಯಲ್ಲಿ ಏಷ್ಯಾದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸಲು ಭಾರತಕ್ಕೆ ಅವಕಾಶವಿದ್ದು, ಈ ಕಾರ್ಯ ಸಾಧ್ಯವಾಗಬೇಕೆಂದರೆ ಪಾರದರ್ಶಕ, ಕ್ರಿಯಾಶೀಲ ತೆರಿಗೆ ಪದ್ಧತಿ ನಮ್ಮಲ್ಲಿರಬೇಕು, ಅದು ದೇಶದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಜನೆಯನ್ನು ಉತ್ತೇಜಿಸಬೇಕು, ಜತೆಜತೆಗೆ ತೆರಿಗೆದಾರರಿಗೂ ಹೊರೆಯಾಗಬಾರದು. ಇದೇ ಮಾದರಿಯಲ್ಲಿ ತೆರಿಗೆ ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

    ಹಿರಿಯ ನಾಗರಿಕರಿಗೆ ನಿರಾಳ

    ಸಚಿವೆ ನಿರ್ಮಲಾ, ನೇರ ತೆರಿಗೆ ಪ್ರಸ್ತಾವವನೆಗಳನ್ನು ಪ್ರಾರಂಭಿಸುವಾಗ ದೇಶದ ಹಿರಿಯ ನಾಗರಿಕರಿಗೆ ಪ್ರಣಾಮಗಳನ್ನು ತಿಳಿಸಿ, ಅನೇಕ ಮೂಲ ಅಗತ್ಯಗಳ ಕೊರತೆಯಲ್ಲೂ ದೇಶದ ಉನ್ನತಿಗೆ ಕೊಡುಗೆ ನೀಡಿದ್ದಾರೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 75 ವರ್ಷ ತುಂಬಿರುವ ಹಿರಿಯ ನಾಗರಿಕರಿಗೆ ಕೊಡುಗೆಯನ್ನು ಘೋಷಿಸಿದರು. ಕೇವಲ ಪಿಂಚಣಿ ಹಾಗೂ ಬಡ್ಡಿಯ ಆದಾಯವನ್ನು ಹೊಂದಿರುವ, 75 ಮೀರಿದ ಹಿರಿಯ ನಾಗರಿಕರು ಇನ್ನು ಆದಾಯ ತೆರಿಗೆ ವಿವರ ಸಲ್ಲಿಸುವ ಅಗತ್ಯವಿಲ್ಲ. ಆದಾಯಕ್ಕೆ ಅನುಗುಣ ತೆರಿಗೆಯನ್ನು ಬ್ಯಾಂಕ್ ತಾನೇತಾನಾಗಿ ಮುರಿದುಕೊಳ್ಳುತ್ತದೆ ಎಂದರು. ಕಳೆದ ಅನೇಕ ವರ್ಷಗಳಿಂದ ಬ್ಯಾಂಕ್ ಬಡ್ಡಿ ದರದಲ್ಲಿ ಕಡಿತವಾಗಿರುವುದು, ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟು ಅದರ ಬಡ್ಡಿಯಿಂದ ಹಾಗೂ ಮನೆಗಳನ್ನು ಬಾಡಿಗೆ ನೀಡಿ ಅದರ ಹಣವನ್ನು ಬ್ಯಾಂಕ್​ನಲ್ಲಿಟ್ಟು ಬಡ್ಡಿಯಿಂದ ಜೀವನ ನಡೆಸುತ್ತಿರುವ ಹಿರಿಯ ನಾಗರಿಕರನ್ನು ಸಂತೈಸಲು ಈ ಕ್ರಮ ಕೈಗೊಳ್ಳಲಾಗಿದೆ.

    ಎನ್​ಆರ್​ಐಗಳಿಗೆ ನಿರಾಳ

    ಅನಿವಾಸಿ ಭಾರತೀಯರಿಗೆ ಎರಡೂ ಕಡೆಯಿಂದ ತೆರಿಗೆ ಪಾವತಿಸುವ ಸಮಸ್ಯೆ ಬಗೆಹರಿಸಲು ಬದ್ಧವಾಗಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ವಿದೇಶದಲ್ಲಿ ನಿವೃತ್ತಿ ನಂತರ ಸಿಕ್ಕ ಆದಾಯದ ಜತೆಗೆ ಭಾರತಕ್ಕೆ ವಾಪಸಾದ ಎನ್​ಆರ್​ಐಗಳಿಗೆ ತೆರಿಗೆ ಸಮಸ್ಯೆ ಎದುರಾಗುತ್ತಿದೆ. ತೆರಿಗೆ ಅವಧಿ ಹೊಂದಿಕೆ ಆಗದಿರುವುದು ಇದಕ್ಕೆ ಪ್ರಮುಖ ಕಾರಣ. ವಿದೇಶದಲ್ಲಿ, ಭಾರತದ ತೆರಿಗೆಗೆ ಕ್ರೆಡಿಟ್ ಪಡೆಯುವಲ್ಲೂ ಸಮಸ್ಯೆಯಿದೆ. ಈ ಸಮಸ್ಯೆ ಬಗೆಹರಿಸಲು ನಿಯಮ ರೂಪಿಸಲಾಗುವುದು ಎಂದಿದ್ದಾರೆ.

    ತೆರಿಗೆ ಸಂಬಂಧಿತ ಪ್ರಕರಣಗಳಿಂದಾಗಿ ಈಗ ತೆರಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ವಿವಾದಗಳನ್ನು ಕಡಿಮೆ ಮಾಡಬೇಕು ಎಂಬುದು ನಮ್ಮ ಸರ್ಕಾರದ ಬದ್ಧತೆ. ಇದರ ಜತೆಗೆ, ತೆರಿಗೆ ವ್ಯವಸ್ಥೆಯನ್ನು ಫೇಸ್​ಲೆಸ್ ಮಾಡಲು ಮುಂದಾಗಿದ್ದೇವೆ.

    | ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆ

    ತೆರಿಗೆ ಹೇರಿಕೆ ಇಲ್ಲ, ವಿನಾಯಿತಿಯೂ ಇಲ್ಲ: ಆದಾಯ ತೆರಿಗೆಯ ಹಳೆಯ ಸ್ಲ್ಯಾಬ್ ಮುಂದುವರಿಕೆ; ಮಧ್ಯಮ ವರ್ಗ, ವೇತನದಾರರಿಗೆ ನಿರಾಸೆ

    • ಶೇ.95 ಡಿಜಿಟಲ್ ವಹಿವಾಟು ನಡೆಸಿದವರಿಗೆ ತೆರಿಗೆ ಆಡಿಟ್ ವಿನಾಯಿತಿ ಮಿತಿ 5 ಕೋಟಿ ರೂ. ವಹಿವಾಟಿನಿಂದ -ಠಿ;10 ಕೋಟಿವರೆಗೆ ವಿಸ್ತರಣೆ
    • ಡಿವಿಡೆಂಡ್ ಪಾವತಿಗೆ ಟಿಡಿಎಸ್​ನಿಂದ ವಿನಾಯಿತಿ
    • ಮೂಲಸೌಕರ್ಯದಲ್ಲಿ ಎಫ್​ಡಿಐ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿಯಲ್ಲಿರುವ ಸಮಸ್ಯೆ ಬಗೆಹರಿಸಲಾಗುತ್ತದೆ
    • ಕೈಗೆಟುಕುವ ದರದ ಮನೆ ಖರೀದಿಸಿದವರಿಗೆ ಸಾಲದ ಮೇಲೆ 1.5 ಲಕ್ಷ ರೂ.ವರೆಗೆ ದೊರಕುತ್ತಿದ್ದ ಬಡ್ಡಿ ವಿನಾಯಿತಿ ಅವಧಿಯನ್ನು 2022ರ ಮಾ.31ರವರೆಗೆ ತೆಗೆದುಕೊಳ್ಳುವ ಸಾಲದವರೆಗೆ ವಿಸ್ತರಣೆ ಮಾಡಲಾಗಿದೆ.
    • 1 ಕೋಟಿ ರೂ. ವಾರ್ಷಿಕ ಸ್ವೀಕೃತಿ ಇರುವ ಆಸ್ಪತ್ರೆ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಸಣ್ಣ ಚಾರಿಟೆಬಲ್ ಟ್ರಸ್ಟ್​ಗಳಿಗೆ ಇರುವ ವಿನಾಯಿತಿಯನ್ನು 5 ಕೋಟಿ ರೂ.ವರೆಗೆ ವಿಸ್ತರಣೆ ಮಾಡಲಾಗಿದೆ
    • ಈಗಾಗಲೆ ವೇತನ ಆದಾಯ, ತೆರಿಗೆ ಪಾವತಿ, ಟಿಡಿಎಸ್ ಮುಂತಾದವನ್ನು ಆದಾಯ ತೆರಿಗೆ ಅರ್ಜಿಯಲ್ಲಿ ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುತ್ತಿದೆ. ಇನ್ನು ಮುಂದೆ ಷೇರು ಆದಾಯ, ಡಿವಿಡೆಂಡ್ ಆದಾಯ, ಬ್ಯಾಂಕ್, ಅಂಚೆ ಮುಂತಾದವುಗಳಿಂದ ಬಡ್ಡಿಯನ್ನೂ ಭರ್ತಿ ಮಾಡಲಾಗುತ್ತದೆ.

      ತೆರಿಗೆ ಹೇರಿಕೆ ಇಲ್ಲ, ವಿನಾಯಿತಿಯೂ ಇಲ್ಲ: ಆದಾಯ ತೆರಿಗೆಯ ಹಳೆಯ ಸ್ಲ್ಯಾಬ್ ಮುಂದುವರಿಕೆ; ಮಧ್ಯಮ ವರ್ಗ, ವೇತನದಾರರಿಗೆ ನಿರಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts