Friday, 21st September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

11 ಜನರ ನಿಗೂಢ ಸಾವು: ಭಾಟಿಯಾ ಕುಟುಂಬದ ಕುಡಿ ಪ್ರಿಯಾಂಕಾ ಪ್ರಭಾವ ಬೀರಿದಳೆ?

Saturday, 07.07.2018, 7:10 PM       No Comments
<< ಪೊಲೀಸರಿಗೆ ಪ್ರಕರಣ ಇನ್ನೂ ಯಕ್ಷಪ್ರಶ್ನೆ; ಘಟನೆಯ ಮರು ಸೃಷ್ಟಿ ಹೀಗಿದೆ >>

ನವದೆಹಲಿ: ಕಳೆದೊಂದು ವಾರದಿಂದ ದೇಶದೆಲ್ಲೆಡೆ ತೀವ್ರ ಕುತೂಹಲ ಕೆರಳಿಸಿರುವ ದೆಹಲಿಯ ಬುರಾರಿಯ ಭಾಟಿಯಾ ಕುಟುಂಬದ 11 ಜನರ ನಿಗೂಢ ಸಾವಿನ ಪ್ರಕರಣವನ್ನು ಬೇಧಿಸಲು ದೆಹಲಿ ಪೊಲೀಸರು ಸಕಲ ಪ್ರಯತ್ನ ನಡೆಸುತ್ತಿದ್ದು, ಇನ್ನೊಂದು ವಾರದಲ್ಲಿ ತನಿಖೆ ಒಂದು ನಿರ್ಣಾಯಕ ಘಟ್ಟ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದೊಂದು ವಾರದಿಂದ ದೆಹಲಿ ಪೊಲೀಸರು ಸಂಗ್ರಹಿಸಿರುವ ಸಾಕ್ಷಿಗಳು, ಕಲೆ ಹಾಕಿರುವ ಮಾಹಿತಿ, ದಾಖಲಿಸಿಕೊಂಡಿರುವ ಹೇಳಿಕೆಗಳು ಹಲವಾರು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿವೆ. ಅವುಗಳಲ್ಲಿ ಕೆಲವೊಂದು ಪ್ರಮುಖ ಅಂಶಗಳು ಇಲ್ಲಿವೆ.

ಭಾಟಿಯಾ ಕುಟುಂಬದ ಹಿನ್ನೆಲೆಯ ಏನು?

ಭಾಟಿಯಾ ಕುಟುಂಬಸ್ಥರು ರಾಜಸ್ಥಾನದ ಚಿತ್ತೋರ್​ಗಢದವರು. ಸುಮಾರು 20 ವರ್ಷಗಳ ಹಿಂದೆ ಇವರು ದೆಹಲಿಯ ಬುರಾರಿಗೆ ಬಂದು ನೆಲೆಸಿದ್ದರು. 77 ವರ್ಷದ ನಾರಾಯಣ ದೇವಿ ಕುಟುಂಬದ ಹಿರಿಯ ಸದಸ್ಯೆ. ಭವನೀಶ್​ ಭಾಟಿಯಾ (50) ಮತ್ತು ಲಲಿತ್​ ಭಾಟಿಯಾ (45) ಇವರ ಮಕ್ಕಳು. ಸವಿತಾ (48) ಭವನೀಶ್​ ಪತ್ನಿ ಮತ್ತು ಟೀನಾ (42) ಲಲಿತ್​ ಭಾಟಿಯಾ ಅವರ ಪತ್ನಿ. ಪ್ರತಿಭಾ (57) ಅವರು ನಾರಾಯಣ ದೇವಿ ಅವರು ಪುತ್ರಿ. ನಾರಾಯಣ ದೇವಿಗೆ ಪ್ರಿಯಾಂಕಾ (33), ನೀತು (25) ಮತ್ತು ಮೋನು (23), ಧೃವ ಮತ್ತು ಶಿವಮ್​ ಎಂಬ 5 ಮೊಮ್ಮಕ್ಕಳಿದ್ದಾರೆ.

ಲಲಿತ್​ ಪ್ಲೈವುಡ್​ ವ್ಯಾಪಾರ ಮಾಡುತ್ತಿದ್ದರೆ, ಭವನೀಶ್​ ದಿನಸಿ ವ್ಯಾಪಾರಿಯಾಗಿದ್ದರು. ಇವರಿಬ್ಬರೂ ತಮ್ಮ ಮನೆಯ ಕೆಳ ಅಂತಸ್ತಿನಲ್ಲಿ ವ್ಯಾಪಾರ ಮಳಿಗೆ ಹೊಂದಿದ್ದರು. ಉಳಿದಂತೆ ಇವರ ಕುಟುಂಬದಲ್ಲಿ ಪ್ರಿಯಾಂಕಾ ಮಾತ್ರ ಕೆಲಸಕ್ಕೆ ಹೋಗುತ್ತಿದ್ದರು ಮತ್ತು ಜೂನ್​ 17 ರಂದು ಇವರ ನಿಶ್ಚಿತಾರ್ಥ ನಡೆದಿತ್ತು.

ಆ ಮನೆಯಲ್ಲಿ ನಡೆದದ್ದೇನು?

ಜುಲೈ 1 ರಂದು ಭವನೀಶ್​ ಭಾಟಿಯಾ ಎಂದಿನಂತೆ ತಮ್ಮ ದಿನಸಿ ಅಂಗಡಿ ತೆರೆದಿರಲಿಲ್ಲ. ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಅವರ ಮನೆಗೆ ಹೋಗಿ ನೋಡಿದಾಗ 11 ಜನರು ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಇವರಲ್ಲಿ 10 ಜನರು ಹಾಲ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ನಾರಾಯಣ ದೇವಿ ಮೃತದೇಹ ಪಕ್ಕದ ರೂಂನಲ್ಲಿ ಪತ್ತೆಯಾಗಿತ್ತು.

ಕೊಲೆ ಪ್ರಕರಣ ದಾಖಲಾಗಿದ್ದು ಏಕೆ?

ನಾರಾಯಣ ದೇವಿ ಮೃತದೇಹ ನೆಲದ ಮೇಲೆ ಬಿದ್ದಿತ್ತು ಮತ್ತು ಆಕೆಯ ಕುತ್ತಿಗೆಯ ಮೇಲೆ ಕತ್ತು ಹಿಸುಕಿರುವ ಗುರುತು ಪತ್ತೆಯಾಗಿತ್ತು ಮತ್ತು ನೇಣು ಬಿಗಿದು ಮೃತಪಟ್ಟವರ ಪೈಕಿ ಮೂವರ ಕಾಲುಗಳು ನೆಲಕ್ಕೆ ತಗಲುತ್ತಿದ್ದವು. ಜತೆಗೆ ಮನೆಯ ಮುಖ್ಯದ್ವಾರ ತೆರೆದಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಮೃತಪಟ್ಟವರ ಮೇಲೆ ಯಾವುದೇ ಬಲ ಪ್ರಯೋಗವಾಗಿಲ್ಲ. ಪೊಲೀಸರು ಕುಟುಂಬಸ್ಥರನ್ನು ಯಾರಾದರೂ ದೇವ ಮಾನವರು ದಾರಿ ತಪ್ಪಿಸಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕೆ ಪುಷ್ಟಿ ನೀಡುವ ಯಾವುದೇ ಬಲವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ.

ಮನೆಯಲ್ಲಿ ಸಿಕ್ಕಿದ್ದೇನು?

ಮನೆಯಲ್ಲಿ 11 ನೋಟ್​ ಪುಸ್ತಕಗಳು ಪತ್ತೆಯಾಗಿದ್ದವು. ಇದರಲ್ಲಿ ಹಿಂದಿಯಲ್ಲಿ ಧಾರ್ಮಿಕ ಆಚರಣೆ ಕುರಿತು ಬರೆಯಲಾಗಿತ್ತು. ಇವರು ಸಾಯುವುದಕ್ಕೂ ಮುನ್ನ ಹೋಮ ಮಾಡಿರುವ ಕುರುಹು ಪತ್ತೆಯಾಗಿತ್ತು. ಸಿಕ್ಕಿರುವ ಡೈರಿಗಳಲ್ಲಿ ಜುಲೈ 8, 2007 ರಿಂದ ಜೂನ್​ 30, 2018ರ ವರೆಗೆ ಬರೆದಿರುವ ಟಿಪ್ಪಣಿಗಳು ಪತ್ತೆಯಾಗಿವೆ. ಡೈರಿ ಆರಂಭಿಕ ಪುಟಗಳಲ್ಲಿ ಲಲಿತ್​ ಭಾಟಿಯಾ ಹೇಗೆ ತಮ್ಮ ಕುಟುಂಬದ ಆಪತ್ಭಾಂಧವ ಆದ ಎಂಬುದರ ಕುರಿತು ವಿವರಿಸಲಾಗಿದ್ದರೆ, ಡೈರಿಯ ಕೊನೆಯ ಭಾಗದಲ್ಲಿ 2007 ರಲ್ಲಿ ಮೃತಪಟ್ಟಿದ್ದ ನಾರಾಯಣ ದೇವಿಯ ಪತಿ ಭೋಪಾಲ್​ ಸಿಂಗ್​ಗೆ ಧನ್ಯವಾದ ಅರ್ಪಿಸುವ ಧಾರ್ಮಿಕ ಆಚರಣೆಯ ಕುರಿತು ಉಲ್ಲೇಖಿಸಲಾಗಿದೆ.

ಧಾರ್ಮಿಕ ಆಚರಣೆಯ ಹಿನ್ನೆಲೆ ಏನು?

2007 ರಲ್ಲಿ ಭೋಪಾಲ್​ ಸಿಂಗ್​ ಮೃತಪಟ್ಟಿದ್ದರು. ಇವರು ಸಾಯುವ ಮುನ್ನ ಭಾಟಿಯಾ ಕುಟುಂಬ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿತ್ತು. ಭೋಪಾಲ್​ ಸಿಂಗ್​ ಮೃತಪಟ್ಟ ನಂತರ ಲಲಿತ್​ ಕುಟುಂಬದ ಚುಕ್ಕಾಣಿ ಹಿಡಿದರು. ಲಲಿತ್​ ತಮ್ಮನ್ನು ಭೋಪಾಲ್​ ಸಿಂಗ್​ನ ಪುನರ್ಜನ್ಮ ಎಂದು ಹೇಳುತ್ತಿದ್ದರು ಮತ್ತು ಭೋಪಾಲ್​ ಸಿಂಗ್​ರಂತೆಯೇ ವರ್ತಿಸುತ್ತಿದ್ದರು.

ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿದ್ದಕ್ಕಾಗಿ ಮತ್ತು ಪ್ರಿಯಾಂಕಾ ನಿಶ್ಚಿತಾರ್ಥವಾಗಿದ್ದಕ್ಕಾಗಿ ಭಾಟಿಯಾ ಕುಟುಂಬ ಹಿರಿಯರಿಗೆ ಧನ್ಯವಾದ ಅರ್ಪಿಸಲು ಬಯಸಿದ್ದರು. ತಾವು ನೇಣು ಬಿಗಿದುಕೊಂಡ ಸಂದರ್ಭದಲ್ಲಿ ಕುಟುಂಬದ ಹಿರಿಯರು ತಮ್ಮ ರಕ್ಷಣೆಗೆ ಧಾವಿಸುತ್ತಾರೆ. ಅವರು ನಮ್ಮನ್ನು ಕಾಪಾಡುತ್ತಾರೆ ಎಂದು ನಂಬಿದ್ದರು ಎಂಬುದು ಡೈರಿಯಲ್ಲಿರುವ ಟಿಪ್ಪಣಿಗಳಿಂದ ತಿಳಿದು ಬಂದಿದೆ.

ಇವರು ಸಾಯುವ ದಿನದವರೆಗೂ ನೆರೆ ಹೊರೆಯವರೊಂದಿಗೆ ಸಾಮಾನ್ಯವಾಗಿ ವರ್ತಿಸಿದ್ದರು. ಪ್ರಿಯಾಂಕಾ ಮುಂದಿನ ಡಿಸೆಂಬರ್​ನಲ್ಲಿ ನಡೆಯಲಿದ್ದ ಮದುವೆಗೆ ಸ್ನೇಹಿತರನ್ನು ಆಹ್ವಾನಿಸಿದ್ದರು. ಕುಟುಂಬದ ಇತರರು ಮುಂದಿನ ದಿನದ ಕೆಲಸ ಕಾರ್ಯಗಳ ಕುರಿತು ಚರ್ಚೆ ಸಹ ನಡೆಸಿದ್ದರು. ಕುತೂಹಲದ ಸಂಗತಿಯೆಂದರೆ ಪ್ರಿಯಾಂಕ ಮಾತ್ರ ಫೇಸ್​ಬುಕ್​ ಪೇಜ್​ನಲ್ಲಿ ದೆವ್ವಗಳ ಕುರಿತ ಮಾಹಿತಿ ಮತ್ತು ವಿಡಿಯೋವನ್ನು ಲೈಕ್​ ಮಾಡಿರುವುದಾಗಿ ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದ್ದೇನು?

ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಜೂನ್​ 30 ರಂದು ರಾತ್ರಿ 10 ಗಂಟೆ ಸುಮಾರಿಗೆ ಸವಿತಾ ಮತ್ತು ನೀತು ಸ್ಟೂಲ್​ಗಳನ್ನು ತಮ್ಮ ಮನೆಗೆ ತರುವುದು ಹಾಗೂ ಧೃವ ಮತ್ತು ಶಿವಮ್​ ಕೇಬಲ್​ಗಳನ್ನು ತರುವುದು ದಾಖಲಾಗಿದೆ. ಆ ನಂತರ ಫುಡ್​ ಡೆಲಿವರಿ ಬಾಯ್​ 20 ಚಪಾತಿಗಳನ್ನು ಕುಟುಂಬಸ್ಥರಿಗೆ ನೀಡಿರುವುದು ದಾಖಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ಅನುಮಾನಾಸ್ಪದ ಚಲನವಲನಗಳು ಪತ್ತೆಯಾಗಿಲ್ಲ.

ಮನಃಶಾಸ್ತ್ರಜ್ಞರು, ಸಂಬಂಧಿಕರು ಹೇಳುವುದೇನು?

ಕುಟುಂಬದ ಸದಸ್ಯರೆಲ್ಲರೂ ಯಾರೋ ಒಬ್ಬರ ಸೂಚನೆಗಳನ್ನು ಪ್ರಶ್ನೆ ಮಾಡದೆ ಪಾಲನೆ ಮಾಡಿರುವುದು ಕಂಡು ಬರುತ್ತಿದೆ. ಲಲಿತ್​ ಭಾಟಿಯಾ ಭ್ರಮಿತ ಅಸ್ವಸ್ಥತೆ (delusional disorder) ಯಿಂದ ಬಳಲಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಟುಂಬದ ಸಂಬಂಧಿಕರು ಇದು ಆತ್ಮಹತ್ಯೆ ಪ್ರಕರಣ ಎಂಬುದನ್ನು ನಂಬಲು ಸಿದ್ಧರಿಲ್ಲ. ಎಲ್ಲಾ 11 ಜನರನ್ನು ಕೊಲೆ ಮಾಡಲಾಗಿದೆ ಎಂದು ವಾದಿಸುತ್ತಿದ್ದಾರೆ.

ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಭಾಟಿಯಾ ಕುಟುಂಬಸ್ಥರ ನಿಗೂಢ ಸಾವಿನ ಕಾರಣವನ್ನು ಶೀಘ್ರದಲ್ಲೇ ಸಾರ್ವಜನಿಕರ ಮುಂದಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:

ಬುರಾರಿ ಆತ್ಮಹತ್ಯೆ ಪ್ರಕರಣ: ಸಾಕು ನಾಯಿ ಟಾಮಿಯನ್ನು ಕಟ್ಟಿ ಹಾಕದಿದ್ದರೆ…!

ಬುರಾರಿ ಆತ್ಮಹತ್ಯೆ ಪ್ರಕರಣ: ಮರಣಪೂರ್ವ ಮನೋವಿಶ್ಲೇಷಣೆಗೆ ಪೊಲೀಸರ ನಿರ್ಧಾರ

Leave a Reply

Your email address will not be published. Required fields are marked *

Back To Top