Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಯಾತ್ರೆ ಜತೆ ಅಭ್ಯರ್ಥಿ ಖಾತ್ರಿ!

Thursday, 09.08.2018, 3:02 AM       No Comments

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾದಂತೆ ಬಿಜೆಪಿ ತನ್ನ ಪ್ರಚಾರಾಂದೋಲನಕ್ಕೆ ಗುರುವಾರ (ಆ.9) ಅಧಿಕೃತವಾಗಿ ಚಾಲನೆ ನೀಡಲಿದ್ದು, ಯಾತ್ರೆ ಮುಕ್ತಾಯವಾಗುವ ವೇಳೆಗೆ ಅಭ್ಯರ್ಥಿಗಳ ಹಾಗೂ ಸಂಘಟನೆ ಶಕ್ತಿಯನ್ನೂ ಅಳೆಯಲಿದೆ.

ರಾಜ್ಯ ಬಿಜೆಪಿ 3 ತಂಡಗಳಲ್ಲಿ ಯಾತ್ರೆ ನಡೆಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದ ತಂಡ ಬೀದರ್​ನಿಂದ, ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದ ತಂಡ ಶಿವಮೊಗ್ಗದಿಂದ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಮಂಡ್ಯದಿಂದ ಪ್ರವಾಸ ಆರಂಭಿಸಲಿದೆ. ಪ್ರತಿದಿನ 2 ಜಿಲ್ಲೆಗಳಂತೆ ಆ.16 ರೊಳಗೆ ಎಲ್ಲ ಜಿಲ್ಲೆಯಲ್ಲೂ ಸಮಾವೇಶಗಳು ನಡೆಯಲಿವೆ.

ಸಮಾವೇಶಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜನಮತ ರೂಪಿಸುವುದು ಬಿಜೆಪಿ ಗುರಿ. ನಮಗೆ ಅತಿ ಹೆಚ್ಚು ಸ್ಥಾನ ಲಭಿಸಿದರೂ ಕಾಂಗ್ರೆಸ್ ಜತೆ ಕೈಜೋಡಿಸಿದ ಜೆಡಿಎಸ್ ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದೆ. ಉತ್ತರ ಕರ್ನಾಟಕದ ಕುರಿತು ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ ಖಂಡಿಸದೆ ಕಾಂಗ್ರೆಸ್ ಸಹ ಪ್ರತ್ಯೇಕ ರಾಜ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಬಿಜೆಪಿ ಎಲ್ಲೆಡೆ ಪ್ರಚಾರ ಮಾಡಲಿದೆ. ಈ ಕಾರಣಕ್ಕೆ ಯಡಿಯೂರಪ್ಪ ಪ್ರವಾಸ ಬಹುತೇಕ ಉತ್ತರ ಕರ್ನಾಟಕದಲ್ಲೇ ಆಯೋಜನೆಯಾಗಿದೆ.

ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ಬಹಿರಂಗ ಕಾರಣವಾದರೆ, ಪಕ್ಷದ ಹಾಗೂ ಅಭ್ಯರ್ಥಿಗಳ ಸಾಮರ್ಥ್ಯ ಅರಿಯುವುದು ಯಾತ್ರೆಯ ಅಂತರಂಗದ ನಡೆ. ಪ್ರತಿ ಸಮಾವೇಶದಲ್ಲೂ ನೆರೆಯುವ ಹಾಗೂ ಸುತ್ತಮುತ್ತಲಿನ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಈಗಾಗಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ದೇಶನ ಮೇರೆಗೆ ಆಗಮಿಸಿರುವ ತಂಡ ರಾಜ್ಯದ ವಿವಿಧೆಡೆ ಬೀಡುಬಿಟ್ಟಿದೆ. ಪ್ರಸ್ತುತ ಬಿಜೆಪಿ ಸಂಸದರ ಜನಪ್ರಿಯತೆ, ಇತರೆ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಾಮರ್ಥ್ಯ ಅಳೆಯಲಿದೆ. ಪ್ರತಿಪಕ್ಷಗಳ ಸಂಸದರು ಹಾಗೂ ಆಕಾಂಕ್ಷಿಗಳ ಸಾಮರ್ಥ್ಯವನ್ನೂ ಸಮೀಕ್ಷೆ ಮಾಡಲಿದ್ದು, ಎಲ್ಲ ವರದಿಯನ್ನು ಯಡಿಯೂರಪ್ಪ ಅವರಿಗೂ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಮೂರನೇ ವಾರದಿಂದ ಅಭ್ಯರ್ಥಿಗಳ ಕುರಿತು ಚರ್ಚೆ

ಗುರುವಾರದಿಂದ ಆರಂಭವಾಗುವ ಯಾತ್ರೆಗಳು ಎರಡನೇ ವಾರದ ಅಂತ್ಯಕ್ಕೆ ಮುಕ್ತಾಯವಾಗುತ್ತವೆ. ಒಟ್ಟಾರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಬಗೆಗಿರುವ ಜನರ ಅಭಿಪ್ರಾಯವನ್ನು ಸಮಾವೇಶಗಳಲ್ಲಿ ನೋಡಿ ತಿಳಿಯಿರಿ. ಅಲ್ಲಿನ ಸಮೀಕ್ಷೆಗಳಿಂದ ಲಭಿಸಿದ ವರದಿಗಳನ್ನು ಮುಂದಿಟ್ಟುಕೊಂಡು ಮೂರನೇ ವಾರದಲ್ಲಿ ಅಭ್ಯರ್ಥಿಗಳ ಕುರಿತು ಚರ್ಚೆ ಆರಂಭಿಸೋಣ ಎಂದು ಇತ್ತೀಚೆಗೆ ನವದೆಹಲಿ ಭೇಟಿ ವೇಳೆ ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ಅವಲೋಕನ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವುದರ ಜತೆಗೆ ಜನರ ಜೀವನ ಪರಿಸ್ಥಿತಿಯನ್ನೂ ಪ್ರವಾಸದಲ್ಲಿ ಅವಲೋಕಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಪ್ರಧಾನಿ ಮೋದಿ, ಅಮಿತ್ ಷಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಬಂದಿದ್ದೇನೆ. ರಾಜ್ಯಕ್ಕೆ ಆಗಬೇಕಿರುವ ಕೆಲಸ ಗಳ ಬಗ್ಗೆ ಕೇಂದ್ರ ಸಚಿವರ ಬಳಿ ಮಾತಾಡಿ ದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಕೆಲ ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿಯಿದ್ದು, ಪ್ರವಾಸದ ವೇಳೆ ಇದೆಲ್ಲವನ್ನೂ ಅವಲೋಕಿಸುತ್ತೇವೆ ಎಂದರು.

ಆಪರೇಷನ್ ಕಮಲದ ಅವಶ್ಯಕತೆ ಇಲ್ಲ

ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ಇದು ಅರ್ಥಹೀನ ಆರೋಪ. ನಾವು ವಿರೋಧ ಪಕ್ಷದಲ್ಲೇ ಇರುತ್ತೇವೆ. ಆಪರೇಷನ್ ಕಮಲ ಅವಶ್ಯಕತೆ ಇಲ್ಲ ಎಂದರು.

ಸರ್ಕಾರ ಬೀಳಿಸುತ್ತೇವೆ ಎಂದು ನಾವೆಲ್ಲೂ ಹೇಳಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಕೆಲವರನ್ನು ಮಂತ್ರಿ ಮಾಡುತ್ತೀನಿ ಎಂದಿದ್ದರು. ಆದರೆ ಮಾತು ಉಳಿಸಿಕೊಂಡಿಲ್ಲ. ಹೀಗಾಗಿ ಅನೇಕ ಶಾಸಕರು ಅವರನ್ನು ಕಾಡುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಆಪರೇಷನ್ ಕಮಲದ ಮಾತನಾಡುತ್ತಿದ್ದಾರೆ.

| ಬಿ. ಶ್ರೀರಾಮುಲು ಶಾಸಕ

Leave a Reply

Your email address will not be published. Required fields are marked *

Back To Top