Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಬಿಟ್ ಕಾಯಿನ್ ಜೂಜಾಟ ಬಿಟ್ಹಾಕಿ ಬಚಾವಾಗಿ!

Sunday, 04.02.2018, 3:02 AM       No Comments

| ಸಿ.ಎಸ್. ಸುಧೀರ್ ಸಿಇಒ, ಇಂಡಿಯನ್ ಮನಿ ಡಾಟ್​ಕಾಂ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮೊನ್ನೆ ಪ್ರಸಕ್ತ ಸಾಲಿನ ಬಜೆಟ್ ಮಂಡಿಸುವಾಗ, ಬಿಟ್ ಕಾಯಿನ್ ಕರೆನ್ಸಿಗೆ ನಮ್ಮ ದೇಶದಲ್ಲಿ ಮಾನ್ಯತೆ ಇಲ್ಲ ಎಂದು ಹೇಳಿದ್ದೇ ತಡ ಎಲ್ಲೆಡೆ ಆ ಬಗ್ಗೆ ಚರ್ಚೆ ಶುರು ವಾಗಿದೆ. ಒಂಭತ್ತು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿ ರುವ ಬಿಟ್ ಕಾಯಿನ್ ಡಿಜಿಟಲ್ ಕರೆನ್ಸಿ ಭಾರಿ ಕುತೂಹಲ ಮತ್ತು ಆತಂಕ ಎರಡನ್ನೂ ಸೃಷ್ಟಿಸಿದೆ. ಆರ್​ಬಿಐ ಕೂಡ ಬಿಟ್ ಕಾಯಿನ್​ನಂಥ ಕ್ರಿಪ್ಟೊಕರೆನ್ಸಿ ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಹುಷಾರ್ ಎಂದು ಎಚ್ಚರಿಸಿದೆ.

ನಿಯಂತ್ರಕರು ಯಾರು? ಗ್ಯಾರಂಟಿ ಏನು?

ಭಾರತೀಯ ರಿಸರ್ವ್ ಬ್ಯಾಂಕ್ ನಮ್ಮ ದೇಶದ ನೋಟು ಮತ್ತು ನಾಣ್ಯಗಳ ಮುದ್ರಣವನ್ನು ನಿಯಂತ್ರಿಸುತ್ತದೆ. ಆದರೆ ಬಿಟ್ ಕಾಯಿನ್​ಗೆ ಯಾವುದೇ ನಿಯಂತ್ರಣ ವ್ಯವಸ್ಥೆ ಇಲ್ಲ. ತಂತ್ರಾಂಶಗಳು ಮತ್ತು ಗಣಿತದ ಲೆಕ್ಕಾಚಾರಗಳೇ ಇದರ ಮೂಲ. ಬಿಟ್ ಕಾಯಿನ್ ಬಳಸುವವರೇ ಅದನ್ನು ನಿಯಂತ್ರಿಸುತ್ತಿರುತ್ತಾರೆ. ತಂತ್ರಜ್ಞಾನ ಅಭಿವೃದ್ಧಿಪಡಿಸುವವರು ಬಿಟ್ ಕಾಯಿನ್ ಸಾಫ್ಟ್​ವೇರ್​ನಲ್ಲಿ ಸುಧಾರಣೆ ತರಬಹುದು. ಆದರೆ ಅದರ ಮೂಲ ನಿಯಮಗಳನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಬಿಟ್ ಕಾಯಿನ್​ಗೆ ಯಾವುದೇ ಗ್ಯಾರಂಟಿ ಇಲ್ಲ. ಇಲ್ಲಿ ನಿಮಗೆ ಮೋಸ ಆದರೆ ಯಾರಿಗೂ ದೂರು ಕೊಡಲಾಗದು. ಭಾರತದಲ್ಲಿ ಅನೇಕರು ಕ್ರೆಡಿಟ್ ಕಾರ್ಡ್ ಬಳಸಿ ಬಿಟ್ ಕಾಯಿನ್ ಖರೀದಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಒಂದೊಮ್ಮೆ ಅದು ನಿಜವಾದಲ್ಲಿ ಅವರೆಲ್ಲ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.

ಉತ್ಪಾದನೆ ಹೇಗೆ?

ಬಿಟ್ ಕಾಯಿನ್ ಮೈನಿಂಗ್’ ಎಂಬ ಪ್ರತ್ಯೇಕ ಸಾಫ್ಟ್​ವೇರ್ ಖರೀದಿಸಿ ಬಳಸುವ ಮೂಲಕ ಬಿಟ್ ಕಾಯಿನ್​ಗಳನ್ನು ಸೃಷ್ಟಿಸಬಹುದು. ಇಂಟರ್​ನೆಟ್ ಆಧಾರಿತ ಅಪ್ಲಿಕೇಷನ್ ಮೂಲಕ ಇಲ್ಲಿ ಮೈನಿಂಗ್ ಮಾಡಿ ಸಂಕೀರ್ಣ ಗಣಿತ ಲೆಕ್ಕಾಚಾರವಿರುವುದನ್ನು ಬಿಡಿಸಿದರೆ ಬಿಟ್​ಕಾಯಿನ್​ನ ಸಣ್ಣ ಭಾಗ ನಿಮ್ಮದಾಗುತ್ತದೆ. ರೂಪಾಯಿಯನ್ನು ನಾವು ಪೈಸೆಗಳ ಲೆಕ್ಕದಲ್ಲಿ ವಿಭಜಿಸುವಂತೆ ಪ್ರತಿಯೊಂದು ಬಿಟ್ ಕಾಯಿನ್​ನ ಮೌಲ್ಯವನ್ನೂ ಅಳೆಯಬಹುದು. ತಂತ್ರಜ್ಞಾನದ ಪರಿಭಾಷೆಯಲ್ಲಿ ಹೇಳುವುದಾದರೆ ಬಿಟ್ ಕಾಯಿನ್​ಗಳ ಅಂದಿನ ವರ್ಗಾವಣೆಗಳ ಲೆಕ್ಕಾಚಾರಗಳನ್ನು ಬಿಡಿಸುತ್ತಾ ಹೋಗಬೇಕು. ಹಳೆಯ ವರ್ಗಾವಣೆಗಳ ಲೆಕ್ಕಗಳ ಸಂಗ್ರಹವನ್ನು ‘ಬ್ಲಾಕ್ ಚೈನ್’ ಎನ್ನುತ್ತಾರೆ. ಆರಂಭದಲ್ಲಿ, ಅಂದರೆ 2009ರಲ್ಲಿ ಮೈನಿಂಗ್ ಮಾಡುವವರಿಗೆ ಪ್ರತಿ 10 ನಿಮಿಷಕ್ಕೆ 50 ಹೊಸ ಬಿಟ್ ಕಾಯಿನ್​ಗಳು ಸಿಗುತ್ತಿದ್ದವು. 2012ರಲ್ಲಿ 25ಕ್ಕೆ ಇಳಿಯಿತು. 2017ಕ್ಕೆ 12.5ಕ್ಕೆ ತಗ್ಗಿದೆ. ಮೈನಿಂಗ್ ಮಾಡುವವರ ಸಂಖ್ಯೆ ಹೆಚ್ಚಿದಂತೆ ಬಿಟ್ ಕಾಯಿನ್ ಸಿಗುವ ಸಂಖ್ಯೆ ಕಡಿಮೆಯಾಗುತ್ತದೆ. ಈಚೆಗೆ ಒಂದು ಬಿಟ್ ಕಾಯಿನ್ ಮೌಲ್ಯ10 ರಿಂದ 16 ಲಕ್ಷ ರೂ.ವರೆಗೂ ತಲುಪಿತ್ತು. ಆದರೆ ಬಜೆಟ್ ನಂತರದಲ್ಲಿ ಇದರ ಮೌಲ್ಯ ಇಳಿಮುಖವಾಗುತ್ತಿದ್ದು, ಭಾನುವಾರ 5 ಲಕ್ಷ ರೂ.ಗಳಷ್ಟಿತ್ತು. ಬಿಟ್ ಕಾಯಿನ್ ಅನ್ನು ನಿಮ್ಮ ಆನ್​ಲೈನ್ ವ್ಯಾಲೆಟ್​ನಲ್ಲಿ ಖರೀದಿಸಿ ಸಂಗ್ರಹಿಸಿಡಬಹುದು. ಅದಕ್ಕಾಗೇ ಕೆಲವು ಪ್ರತ್ಯೇಕ ವೆಬ್ ತಾಣಗಳಿವೆ.

ಮಾನ್ಯತೆ ಇಲ್ಲದಿದ್ದರೂ ಅಸ್ತಿತ್ವ

ಜಗತ್ತಿನ ಯಾವ ದೇಶವೂ ಬಿಟ್ ಕಾಯಿನ್​ಗೆ ಅಧಿಕೃತ ಮಾನ್ಯತೆ ನೀಡಿಲ್ಲ. ಆದರೆ ಕೆಲ ದೇಶಗಳಲ್ಲಿ ಈ ವ್ಯವಹಾರ ಜೋರಾಗಿಯೇ ನಡೆಯುತ್ತಿದೆ.

ಭಾರತದಲ್ಲೂ ಮಾನ್ಯತೆ ಇಲ್ಲ

ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೊಕರೆನ್ಸಿ ವಹಿವಾಟಿಗೆ ಭಾರತದಲ್ಲಿ ಕಾನೂನುಬದ್ಧ ಮಾನ್ಯತೆ ಇಲ್ಲ ಎಂದು ಭಾರತ ಸರ್ಕಾರ ಹಾಗೆಯೇ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕವಾಗಿ ಹೇಳುತ್ತಲೇ ಬಂದಿವೆ. ಕಾನೂನು ಮಾನ್ಯತೆ ಇಲ್ಲದಿರುವ ವಹಿವಾಟಿನಲ್ಲಿ ಸುರಕ್ಷತೆಯನ್ನು ನಿರೀಕ್ಷಿಸಲಾಗದು. ಈ ವಹಿವಾಟು ಆನ್​ಲೈನ್ ಮೂಲಕ ನಡೆಯುತ್ತಿದ್ದು, ಅದು ಪ್ರತ್ಯೇಕ ವಿಚಾರ. ಆದಾಗ್ಯೂ, ಈ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಸರ್ಕಾರ ತಜ್ಞರ ತಂಡವನ್ನು ನೇಮಿಸಿದ್ದು, ವರದಿಯನ್ನು ಎದುರುನೋಡುತ್ತಿದೆ. ಈ ವಹಿವಾಟು ಕಾನೂನುಬದ್ಧವಲ್ಲ ಎಂಬುದನ್ನು ಪುನರುಚ್ಚರಿಸುತ್ತೇನೆ.

| ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ (ಬಜೆಟ್ ಭಾಷಣದ ವೇಳೆ ಹೇಳಿದ್ದು)

 

ಐಟಿ ಹದ್ದಿನ ಕಣ್ಣು

ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಬೆಂಗಳೂರು ಸೇರಿ ದೇಶದ ಆರು ನಗರಗಳಲ್ಲಿರುವ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ತೆರಿಗೆ ವಂಚನೆಯ ನಿಟ್ಟಿನಲ್ಲಿ ಬಿಟ್ ಕಾಯಿನ್​ನಲ್ಲಿ ಹೂಡಬಹುದು ಎಂದು ಭಾವಿಸಿದರೆ, ಸಂಕಷ್ಟ ಗ್ಯಾರಂಟಿ.

ಇದರ ಸೃಷ್ಟಿ ಹೇಗೆ?

ಬಿಟ್ ಕಾಯಿನ್ ಹೇಗೆ ಸೃಷ್ಟಿಯಾಯಿತು ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಸತೋ ನಕಾಮೊಟೊ 2009ರಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯಿಸಿದ ಎಂದು ಹೇಳಲಾಗಿದೆ. ಕ್ರಿಪೋ›ಗ್ರಫಿ ಸಂಕೇತಗಳಲ್ಲಿದ್ದ ಬಿಟ್ ಕಾಯಿನ್ ಬಳಕೆಯ ಬಗ್ಗೆ ಆತ ವಿಶ್ಲೇಷಿಸಿದ್ದ. 2010ರ ವೇಳೆಗೆ ಕಾರಣಾಂತರಗಳಿಂದ ನಕಾಮೊಟೊ ಯೋಜನೆಯನ್ನು ಕೈಬಿಟ್ಟಿದ್ದ. ಆದರೆ ಡಿಜಿಟಲ್ ತಂತ್ರಜ್ಞಾನ ಪ್ರಿಯರು ಬಿಟ್ ಕಾಯಿನ್ ವ್ಯವಸ್ಥೆಯನ್ನು ಜಗತ್ತಿನೆಲ್ಲೆಡೆ ಬಳಸುವಂತೆ ಅಭಿವೃದ್ಧಿಪಡಿಸಿದರು.

ಬಿಟ್ ಕಾಯಿನ್ ಅಂದ್ರೇನು?

ಬಿಟ್ ಕಾಯಿನ್ ಎನ್ನುವುದು ಪ್ರಿಂಟ್ ರೂಪದಲ್ಲಿ ಇರದ ಡಿಜಿಟಲ್ ಕರೆನ್ಸಿ. ಇದು ರೂಪಾಯಿ , ಡಾಲರ್, ಯುರೋ ಅಥವಾ ಇನ್ಯಾವುದೇ ದೇಶದ ಅಧಿಕೃತ ಕರೆನ್ಸಿಯ ಮಾದರಿಯಲ್ಲಿ ಇರುವುದಿಲ್ಲ. ಇಲ್ಲಿ ವರ್ಗಾವಣೆಗಳೆಲ್ಲವೂ ಇಂಟರ್​ನೆಟ್ ಮೂಲಕ ನಡೆಯುತ್ತದೆ. ಬಿಟ್ ಕಾಯಿನ್​ನ ಮೌಲ್ಯವನ್ನು ಕೊನೆಯಲ್ಲಿ ನಿಮ್ಮ ಆಯ್ಕೆಯ ಕ್ರಿಪ್ಟೊಕರೆನ್ಸಿಗೆ ಪರಿವರ್ತಿಸಿಕೊಳ್ಳಬಹುದು. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸಬಹುದು. ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಸಾಫ್ಟ್​ವೇರ್ ಮೂಲಕ ಈ ನಿಗೂಢ ನಾಣ್ಯ ರೂಪ ಪಡೆದುಕೊಳ್ಳುತ್ತದೆ.

ಜನರಿಗೆ ಏಕೆ ಇಷ್ಟು ಪ್ರೀತಿ?

ಬಿಟ್ ಕಾಯಿನ್​ಗೆ ಯಾವುದೇ ತೆರಿಗೆಯ ಅಡೆತಡೆ ಇರುವುದಿಲ್ಲ. ಹಣದ ತ್ವರಿತ ವರ್ಗಾವಣೆಗೆ ಶುಲ್ಕವೂ ಇರುವುದಿಲ್ಲ , ಜತೆಗೆ ಅಕ್ರಮ ಹಣ ಸಂಪಾದನೆಗೆ ಇದು ಸುಲಭ ಮಾರ್ಗ ತೋರಿಸುತ್ತದೆ. ಹಠಾತ್ ಶ್ರೀಮಂತರಾಗಲು ಇದು ಸುಲಭ ದಾರಿ ಎಂದೇ ಬಿಂಬಿಸಲಾಗಿದೆ. ಹಾಗಾಗಿ ಜನರು ಆಸಕ್ತಿ ತೋರುತ್ತಿದ್ದಾರೆ.

(ಲೇಖಕರು ಇಂಡಿಯನ್ ಮನಿ ಡಾಟ್​ಕಾಂ ಸಿಇಒ)

Leave a Reply

Your email address will not be published. Required fields are marked *

Back To Top