Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ದಂತವೈದ್ಯರೂ ನಗಿಸಬಲ್ಲರು… ನಕ್ಕು ಹಗುರಾಗಿ!

Thursday, 29.12.2016, 4:00 AM       No Comments

| ಭುವನೇಶ್ವರಿ ಹೆಗಡೆ

ಕನ್ನಡ ಸಾಹಿತ್ಯಕ್ಕೆ ವೈದ್ಯಲೋಕದ ಕೊಡುಗೆ ಅಪಾರವೂ ಉಪಯುಕ್ತವೂ ಆಗಿದೆ. ಮಾನಸಿಕ ಸ್ವಾಸ್ಥ್ಯ್ಕೆ ಪುಷ್ಟಿಕೊಡುವ ಸಾಹಿತ್ಯ, ವಿನೋದ, ಕಲೆಗಳು ಹೇಗೆ ಅಗತ್ಯವೋ ಹಾಗೇ ದೈಹಿಕ ಸ್ವಾಸ್ಥ್ಯ್ಕೆ ಕಣ್ಣು, ಕಿವಿ, ಕಾಲು, ಹಲ್ಲುಗಳಂತಹ ದೇಹದ ಎಲ್ಲ ಭಾಗಗಳ ಆರೋಗ್ಯದ ಕುರಿತ ಅರಿವು, ಮುನ್ನೆಚ್ಚರಿಕೆ, ಆರೈಕೆಗಳ ಕುರಿತ ಜ್ಞಾನವೂ ಅಗತ್ಯ. ಇದನ್ನು ನಮ್ಮ ವೈದ್ಯಲೋಕ ಯಶಸ್ವಿಯಾಗಿ ಮಾಡುತ್ತಲೇ ಬಂದಿದೆ. ಇಂತಹ ಬರಹಗಳು ಕೇವಲ ವೈದ್ಯಕೀಯ ಪರಿಭಾಷೆಯ ಮೂಸೆಯಲ್ಲಿ ಮೂಡಿಬಂದಾಗ ಆಕರ್ಷಣೆಯಿಲ್ಲದ ಪಠ್ಯಗಳಂತೆ ತೋರಿಬರುವುದೂ ಉಂಟು. ಆದರೆ ಅದೇ ಹೂರಣವನ್ನು ಸಾಹಿತ್ಯದ ಚೌಕಟ್ಟಿನಲ್ಲಿ ಕತೆ, ಕವಿತೆ, ವಿನೋದ, ಲೇಖನ, ಸಿನಿಮಾ, ನಾಟಕಗಳಂತಹ ಆಕರ್ಷಕ ಮಾಧ್ಯಮಗಳಲ್ಲಿ ಸೆರೆಹಿಡಿದುಕೊಟ್ಟಾಗ ಜನರಿಗೆ ರುಚಿಸುವುದಷ್ಟೇ ಅಲ್ಲ ತಮ್ಮ ಮೂಲಉದ್ದೇಶವನ್ನೂ ನೆರವೇರಿಸಿಕೊಳ್ಳುವುದರಲ್ಲಿ ಅವು ಸಫಲವಾಗುತ್ತವೆ. ಇಂತಹ ಒಂದು ಸಾರ್ಥಕ ಸುಂದರ ಪ್ರಯೋಗವಾದ ‘ಚಿತ್ರಾನ್ನ’ ಎಂಬ ಕಥಾಸಂಕಲನ ಇತ್ತೀಚೆಗೆ ಹೊರಬಂತು. ಹಲ್ಲುಗಳನ್ನು ‘ಕಟ್ಟಿಕೊಡುವ’ ದಂತವೈದ್ಯರುಗಳ ಒಂದು ತಂಡ ಉತ್ತಮ ಸಂವೇದನೆಯ ಸುಂದರ ದಂತಕತೆಗಳನ್ನು ಇಲ್ಲಿ ‘ಕಟ್ಟಿಕೊಟ್ಟಿದೆ’. ಇಂಥದೊಂದು ಸಾಹಿತ್ಯಕ ಪ್ರಯತ್ನಕ್ಕೆ ಮುಂದಾಗಿರುವ ಮಂಗಳೂರಿನ ಸಾಹಿತ್ಯಾಸಕ್ತ ದಂತವೈದ್ಯ ಡಾ. ಮುರಲೀ ಮೋಹನ ಚೂಂತಾರು ಇವರನ್ನು ಅಭಿನಂದಿಸುತ್ತೇನೆ.

ಒಟ್ಟು 32 ದಂತಕತೆಗಳನ್ನು (ಮಾನವನ ಹಲ್ಲು 32 ತಾನೆ?) ಹೊಂದಿರುವ ಈ ಸಂಕಲನದಲ್ಲಿ ಹಿರಿಯ ವೈದ್ಯರಿಂದ ಹಿಡಿದು ದಂತವೈದ್ಯ ವಿದ್ಯಾರ್ಥಿಗಳ ಕತೆಗಳ ತನಕದ ಕೊಡುಗೆಗಳಿವೆ. ಎಲ್ಲರೂ ಬರಹಗಳ ನಿರೂಪಣೆಗೆ ಯಾವ ಕಲ್ಪನೆಯನ್ನೂ ಬಳಸದೆ ವೃತ್ತಿಜೀವನದ ನೈಜ ಅನುಭವಗಳನ್ನೇ ಹೇಳಿರುವುದು ಈ ಸಂಕಲನದ ವೈಶಿಷ್ಟ್ಯ ಪ್ರತಿ ಕತೆಯಲ್ಲೂ ತಮ್ಮ ವಿದ್ಯಾರ್ಥಿಜೀವನದ ರೋಚಕ ಕನಸುಗಳು, ತಮ್ಮನ್ನು ರೂಪಿಸಿದ ಗುರುಗಳ, ಹಿರಿಯರ ಸಂಸ್ಮರಣೆ, ವೃತ್ತಿಯಲ್ಲಿ ನೈಪುಣ್ಯ ಸಾಧಿಸಲು ನೆರವಿತ್ತ ಸಹೋದ್ಯೋಗಿಗಳ, ರೋಗಿಗಳ ನೆನಪುಗಳು, ತಮ್ಮಿಂದ ಚಿಕಿತ್ಸೆ ಪಡೆದ ರೋಗಿಗಳು ಕೃತಜ್ಞತೆ ಸಲ್ಲಿಸಿದ ಮುಗ್ಧರೀತಿ, ಪ್ರಾರಂಭಿಕ ದಿನಗಳಲ್ಲಿ ತಾವು ಚಿಕಿತ್ಸೆ ನೀಡುವಾಗ ತಪ್ಪಿದ ಅನಾಹುತಗಳಿಗಾಗಿ ಭಗವಂತನ ಸ್ಮರಣೆ ಮಾಡಿದ್ದು ಮೊದಲಾದ ಮಾನವೀಯ ಸಂವೇದನೆಗಳು ಗಾಢವಾಗಿವೆ. ಮುಗ್ಧರೋಗಿಗಳ ವಿಕ್ಷಿಪ್ತ ನಡವಳಿಕೆಗಳನ್ನು ವಿನೋದಪೂರ್ಣವಾಗಿ ನೆನಪಿಸಿಕೊಳ್ಳಲಾಗಿದೆಯಾದರೂ ಎಲ್ಲಿಯೂ ಅಮಾನವೀಯ ಗೇಲಿಯ ಬಳಕೆಯಾಗಿಲ್ಲವೆಂಬುದು, ಜನಸಾಮಾನ್ಯರು ವೈದ್ಯರ ಮೇಲಿಟ್ಟಿರುವ ಗೌರವಾದರಗಳಿಗೆ ಚ್ಯುತಿಬಾರದ ರೀತಿಯ ನಿರೂಪಣೆಗಳೇ ಇವೆ ಎಂಬುದು ಈ ಎಲ್ಲ ಬರಹಗಾರರಲ್ಲಿ ಮೆಚ್ಚಬೇಕಾದ ಅಂಶವಾಗಿದೆ. ಇದು ‘ವೈದ್ಯ-ರೋಗಿ’ ಸಂಬಂಧದಲ್ಲಿರುವ ಅವ್ಯಕ್ತ ಬಾಂಧವ್ಯವನ್ನು ತೆರೆದಿಡುವ, ಹೃದ್ಯ ಅನುಭವ ನೀಡುವ, ಸ್ವಾರಸ್ಯಕರ ಓದಿನ ಅನುಭವ ನೀಡುವ ಒಂದು ಸಾರ್ಥಕ ಕೃತಿ.

‘ಅವಸರವೇ ಅಪಘಾತಕ್ಕೆ ಕಾರಣ’ ಎಂಬ ಶೀರ್ಷಿಕೆಯ ಕತೆಯಲ್ಲಿ ಡಾ. ಮುರಲೀ ಮೋಹನ ಚೂಂತಾರು ಅವರು ವೃತ್ತಿಜೀವನದ ಪ್ರಾರಂಭದ ದಿನಗಳಲ್ಲಿ, ರೋಗಿಯ ಕಾಯಿಲೆಗಳ ಪೂರ್ವಾಪರ ವಿವರ ಪಡೆಯದೇ ಮಧುಮೇಹ ರೋಗಿಯೊಬ್ಬಳ ದಂತಗಾರೆಯನ್ನು ಕಿತ್ತೆಸೆದು, ನಂತರ ಆಕೆಯ ರಕ್ತ ಹೆಪ್ಪುಗಟ್ಟದೇ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಲು ಹೆಣಗಾಡಿದ ರೀತಿ, ಸ್ವತಃ ತಾವೇ ರೋಗಿಯ ಜತೆ ಭದ್ರಾವತಿಯಿಂದ ಮಣಿಪಾಲದವರೆಗೆ ಪಯಣಿಸಿ ಚಿಕಿತ್ಸೆ ಕೊಡಿಸಿ ರೋಗಿಯ ಜೀವವನ್ನ ಅಪಾಯದಿಂದ ಪಾರುಮಾಡಿದ ರೋಚಕ ಅನುಭವ, ಅದರ ಹಿಂದಿರುವ ಮಾನವೀಯ ಕಾಳಜಿ ಮತ್ತು ಆ ಘಟನೆಯಿಂದ ತಾವು ಕಲಿತ ವೃತ್ತಿಪಾಠ ಇವುಗಳನ್ನು ಮನಮುಟ್ಟುವಂತೆ ಬರಹಕ್ಕಿಳಿಸಿದ್ದಾರೆ. ವೈದ್ಯಸಮೂಹ ಕಲಿಯಬೇಕಾದ ಮೂಲಪಾಠದ ಹೊಳಹು ಈ ಕತೆಯಲ್ಲಿದೆ.

ಯಾವುದೇ ದಂತವೈದ್ಯನಿಗೆ ಆರಂಭದ ದಿನಗಳು ಯಾತನಾಮಯ ದಿನಗಳಾಗಿರುತ್ತವೆ. ಆಗಲೇ ಜಿಪುಣರೋಗಿ ಧನಿಕನಾದರೂ ಮೋಸ ಮಾಡಿದರೆ ನಿಜಕ್ಕೂ ಆಘಾತಕಾರಿ. ಅಂತಹ ಸಂದರ್ಭದಲ್ಲೂ ವೃತ್ತಿಧರ್ಮ ಮೇಲೆತ್ತಿ ಹಿಡಿದ ವೈದ್ಯೆಯ ಅನಿಸಿಕೆಗಳು ವೈದ್ಯವೃತ್ತಿಗೆ ಗೌರವ ತರುವಂತಿವೆ (ಡಾ|. ರಾಜಶ್ರೀ).

ಈ ಸಂಕಲನದ ಒಂದು ಉತ್ತಮ ಕತೆ- ‘ನನ್ನ ನೆನಪಿನಂಗಳದಲ್ಲಿ ಅರಳಿದ ಹೂಗಳು’. ವೃತ್ತಿಯ ಅಧ್ಯಯನದ ಜತೆಗೆ ಈ ಹಿರಿಯ ವೈದ್ಯರಿಗೆ (ಡಾ. ಶಿವಕುಮಾರ್) ವಿಶಾಲ ಓದಿನ ಅಭಿರುಚಿ ಇರುವುದು, ಅವರು ಅಲ್ಲಲ್ಲಿ ಬಳಸಿಕೊಂಡ ಕವಿಗಳ ಉಕ್ತಿಗಳಿಂದಲೇ ವಿದಿತವಾಗುತ್ತದೆ. ‘ಡೆನ್​ಚರ್’ ಪೇಷಂಟ್ ಎಂಬುದನ್ನು ಪೋನಿನಲ್ಲಿ ‘ಡೇಂಜರ್’ ಪೇಷಂಟ್ ಎಂದು ಕೇಳಿಸಿಕೊಂಡು ಭಾನಗಡಿಯಾದ ಸಂಗತಿ, ರೋಗಿಯ ಹೆಸರು ಮರೆತ ಡಾಕ್ಟ್ರಿಗೆ ಕಳೆದವಾರವಷ್ಟೇ ಬಂದು ತಾನು ಹೇಳಿದ ಹೆಸರನ್ನೇ ನೆನಪಿಟ್ಟುಕೊಳ್ಳಲಾರದ ನೀವು ಇಷ್ಟೊಂದು ದೊಡ್ಡ ದೊಡ್ಡ ಪುಸ್ತಕಗಳಲ್ಲಿರುವ ವಿಷಯವನ್ನು ಹೇಗೆ ನೆನಪಿಟ್ಟುಕೊಂಡು ತಪ್ಪಿಲ್ಲದಂತೆ ಚಿಕಿತ್ಸೆ ಮಾಡುತ್ತೀರಿ ಎಂದು ಕೇಳಿ ರೋಗಿಯೊಬ್ಬ ವೈದ್ಯರನ್ನೇ ತಬ್ಬಿಬ್ಬುಗೊಳಿಸಿದ್ದು ಇದರಲ್ಲಿ ಕಾಣಸಿಗುತ್ತವೆ. ಇದೇ ವೈದ್ಯರು ಗಣ್ಯವ್ಯಕ್ತಿಗಳ ಜತೆ ಕಾಲೇಜಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಓಡಿಬಂದು ಯಾರೋ ಗುದ್ದಿ ಓಡಿದ ಅನುಭವವಾದಾಗ ತಿರುಗಿ ನೋಡಿದರೆ, ಬುದ್ಧಿಮಾಂದ್ಯ ಮಗುವೊಂದು ಒಮ್ಮೆ ತಮ್ಮ ಶಾಲೆಗೆ ಬಂದು ಚಿಕಿತ್ಸೆ ನೀಡಿದ ವೈದ್ಯರನ್ನು ಗುರುತಿಸಿ ಸಂತಸ ವ್ಯಕ್ತಪಡಿಸಿದ ರೀತಿ ಆದಾಗಿತ್ತು ಎಂದು ತಿಳಿದಾಗ ಲೇಖಕರ ಜತೆ ಓದುಗರೂ ಗದ್ಗದಿತರಾಗುತ್ತಾರೆ.

ಅಂತರಂಗಕ್ಕೆ ಮುಟ್ಟುವ ಮಾನವೀಯ ಮೌಲ್ಯಗಳ ಸ್ವರ್ಶವಿರುವ ಇಂಥ ಹೇರಳ ಅನುಭವಗಳು ಕೃತಿಯ ಉದ್ದಕ್ಕೂ ದೊರಕುತ್ತವೆ. ಡಾ. ಹರಿಕೃಷ್ಣರ ‘ಕರ್ಮಣ್ಯೇವಾಧಿಕಾರಸ್ತೇ’ ಕತೆ ಒಂದೊಳ್ಳೆ ವಿನೋದ ಲೇಖನದ ಓದನ್ನು ಒದಗಿಸುತ್ತದೆ. ಮಧ್ಯರಾತ್ರಿ ಬರುವ ‘ಯಮರ್’ಜನ್ಸಿ ಕಾಲ್ ಅವರ ಇಡೀ ರಾತ್ರಿಯನ್ನು ಹಾಳುಮಾಡಿದ ರೀತಿ, ತಾನು ಚಿಕಿತ್ಸೆಯನ್ನೇ ಮಾಡದ ರೋಗಿಯೊಬ್ಬನ ಹೆಂಡತಿ ಕೇವಲ ‘ಬಾಯ್ಬಲ’ದಿಂದ ಡಾಕ್ಟರಿಗೆ ಚಳ್ಳೆಹಣ್ಣು ತಿನ್ನಿಸುವ ಪರಿ ನಗೆಯುಕ್ಕಿಸುತ್ತದೆ. ವೈದ್ಯವೃತ್ತಿಯಲ್ಲಿ ಹಾಸ್ಯಪ್ರಜ್ಞೆಯೂ ಒಂದು ರೀತಿಯ ಚೇತೋಹಾರಿ ಚಿಕಿತ್ಸೆಯೇ ಎಂಬುದನ್ನು ಸಾಬೀತುಪಡಿಸಿದ ಕತೆ ಇದು.

ಮೂಲದಲ್ಲಿ ವಿನೋದವನ್ನೇ ಜೀವಾಳವಾಗಿಸಿಕೊಂಡ ಬರಹಗಳು ಇವಾದುದರಿಂದ, ಇವನ್ನು ಕತೆಯೆಂದೇ ಕರೆದು ಓದಬೇಕಿಲ್ಲ. ಇಡೀ ಸಂಕಲನದುದ್ದಕ್ಕೂ ಹಾಸ್ಯದ ಘಟನೆಗಳೇ ಹೆಚ್ಚಿದ್ದು ಸಂಕಲನ ಕೈಗೆತ್ತಿಕೊಂಡಾಗಿಂದ ನಾವು ನಗಲೇಬೇಕಾಗುತ್ತದೆ (ಹಲ್ಲು ಕಾಣುವಷ್ಟು ದೊಡ್ಡ ನಗುವೇ ಉಕ್ಕುತ್ತದೆ!).

ಕಾಸರಗೋಡಿನ ಹಿರಿಯ ದಂತವೈದ್ಯರಾದ ಡಾ. ಗಣಪತಿ ಭಟ್ಟ ಕುಳಮರ್ವರ ಅನುಭವವಂತೂ ಇಂಥದೇ ನಗೆಯುಕ್ಕಿಸುವ ಪಾತ್ರಗಳಿಂದಲೇ ತುಂಬಿದೆ. ತನ್ನ ಕೆಳದವಡೆಯ ಆಳವಾದ ತೂತಿಗೆ ಸ್ಟೀಲ್ ತೆಳು ಪೇಪರನ್ನು ಉಂಡೆಮಾಡಿಸಿ ತುರುಕಿಕೊಂಡು ಬಂದ ರೋಗಿ, ತನ್ನ ಅಲುಗಾಡುವ ಹಲ್ಲುಗಳಿಗೆ ತಾನೆ ಬೆಳ್ಳಿ ಸರಿಗೆಯಿಂದ ನೇಯ್ದುಕೊಂಡ ಚಿನಿವಾರ, ರೋಗಿಯನ್ನು ಕರೆದುಕೊಂಡು ಬಂದಾತನ ಬಳಿ ‘ಹಲ್ಲು ಕೀಳುವಾಗ ರಕ್ತ ಬರುತ್ತದಾದ್ದರಿಂದ ನೋಡಲು ಭಯವಾಗಬಹುದು, ನೀವು ಹೊರಗೆ ಕುಳಿತುಕೊಳ್ಳಿ’ ಎಂದರೆ ‘ನಾನು ನೋಡುವುದು ಬಿಡಿ, ರಕ್ತವನ್ನು ಕುಡಿಯಲೂ ತಯಾರಿದ್ದೇನೆ’ ಎಂದುಲಿದು ತನ್ನ ಮೂಲದ ಬಗ್ಗೆ ಒಂದು ಐಡಿಯಾ ಕೊಟ್ಟ ವ್ಯಕ್ತಿ, ಹಲ್ಲು ಕೀಳಿಸಲು ಬಂದ ಮದ್ಯವ್ಯಸನಿಗಳು ನಿರ್ವಿುಸುವ ದೃಶ್ಯ, ನೋವು ನಿವಾರಕಗಳಿಲ್ಲದೆ ಹಲ್ಲು ಕೀಳಿ ಎಂದು ಚಾಲೆಂಜ್ ಮಾಡಿದ ಯೋಗಸಾಧಕ (ಹಾಗೇ ಮಾಡಿದಾಗ ಎರಡೂ ಕಣ್ಣಲ್ಲಿ ನೀರಂತೆ!), ಹಲ್ಲು ಕೀಳಿಸಲು ಬಂದ ಪ್ರಸೂತಿತಜ್ಞೆ ಹಲ್ಲು ಕೀಳಿಸುವಾಗ ಧೈರ್ಯಕ್ಕೆ ಗಂಡನ ಕೈ ಹಿಡಿದುಕೊಳ್ಳುವ ದೃಶ್ಯ, ಇದ್ದಷ್ಟೂ ಹಣವನ್ನು ಡಾಕ್ಟರ ಕೈ ಮೇಲಿಟ್ಟ ಕುಡುಕ, ತಮ್ಮ ಹಲ್ಲನ್ನು ತಾವೇ ಕಿತ್ತುಕೊಂಡ ಕೊಡಗಿನ ದಂತವೈದ್ಯರು… ಹೀಗೆ ಧಾರಾಳ ನಗುವನ್ನು ಒದಗಿಸುವ ಬರಹ ಇದು.

ಕರ್ನಾಟಕದ ವಿವಿಧ ಭಾಗಗಳ ದಂತವೈದ್ಯರುಗಳು ಬರೆದ, ವಿವಿಧ ಪ್ರದೇಶದ ಜನರ ವೈಶಿಷ್ಟ್ಯಳನ್ನು ಚಿತ್ರಿಸುವ ಕತೆಗಳು ಇಲ್ಲಿವೆ. ಸಿರಸಿಯ ಡಾ. ನಾರಾಯಣ ಭಟ್ಟರು ಮಲೆನಾಡಿನ ಕೃಷಿಕ ರೋಗಿಗಳ ಮುಗ್ಧತೆಗೆ ಕನ್ನಡಿ ಹಿಡಿದಿದ್ದಾರೆ. ಗಾರೆ ಮೇಸ್ತ್ರಿಯಿಂದ ಹಲ್ಲಿನ ಕುಳಿಗೆ ಸಿಮೆಂಟು ತುಂಬಿಸಿಕೊಂಡು ಬಂದ ರೋಗಿ, ‘ಬಾಯೊಳಗೆ ಅರಿವಳಿಕೆ ಇಂಜಕ್ಷನ್ ಬೇಡ, ಬಲಭುಜಕ್ಕೆ ಕೊಟ್ಟು ಹಲ್ಲು ಕೀಳಿ’ ಎಂದು ಅಪ್ಪಣೆ ಕೊಡಿಸುವ ರೋಗಿಗಳು, ಮಧ್ಯರಾತ್ರಿ ಕಾಂಪೌಂಡು ಹಾರಿಬಂದು ಬಾಗಿಲು ಬಡಿಯುವ ದಂತಪೀಡಿತರು, ಹಲ್ಲಿನ ಚಿಕಿತ್ಸೆ ಮಾಡಿದ ವೈದ್ಯರಿಗೇ ಟೋಪಿಹಾಕುವ ಬುದ್ಧಿವಂತ ರೋಗಿಗಳು, ಹತ್ತೇ ರೂಪಾಯಿ ಎಂದರೆ ಇಪ್ಪತ್ತು ಇಟ್ಟುಹೋಗುವ ‘ತಿಕ್ಕಲು’ ರೋಗಿಗಳು, ಸ್ಕಿಜೋಫ್ರೀನಿಯಾ ಎಂಬ ಭ್ರಮೆಯಿಂದ ಬಳಲುವ ಮಾನಸಿಕ ರೋಗಿ ‘ನಾನು ಬ್ರಹ್ಮನಾಗಿಬಿಟ್ಟಿದ್ದೇನೆ ನಾಲ್ಕು ತಲೆ ಹುಟ್ಟಿಬಿಟ್ಟಿದೆ; ಈಗ ಬಲಗಡೆ ತಲೆಯ ಬಾಯಲ್ಲಿ ಎಡಗಡೆ ಹಲ್ಲಿಗೆ ಹುಳುಕಾಗಿದೆ, ಬೆಳ್ಳಿಹಾಕಿ ತುಂಬಿ ಡಾಕ್ಟ್ರೆ’ ಎಂದು ವೈದ್ಯರಿಗೇ ತಲೆಕೆಡುವ ಹಾಗೆ ಮಾಡುವುದು, ಕಿತ್ತ ಹಲ್ಲನ್ನೇ ಪುನಃ ಡಾಕ್ಟರಿಗೆ ತಂದುಕೊಟ್ಟು ಬೇರೆಯವರಿಗೆ ಕಟ್ಟಿಕೊಡಿ ಎನ್ನುವ ಶಿಖಾಮಣಿಗಳು, ಚಿಕಿತ್ಸೆಗೆಂದು ಬಂದ ಮಗು ಕಿಟಾರನೆ ಕಿರುಚಿ ಕ್ಲಿನಿಕ್ಕಿನಿಂದ ಹೊರಗೋಡಿ ನೂರಾರು ಜನ ಅದನ್ನು ಹಿಡಿಯಲು ಹೊರಟಾಗ ನಿರ್ವಣವಾಗುವ ದೃಶ್ಯ… ಹೀಗೆ ಇಡೀ ಪುಸ್ತಕವನ್ನು ಓದಿ ಮುಗಿಸುವಾಗ ನಕ್ಕು ಹಗುರಾಗುವ ನೂರಾರು ದೃಶ್ಯಗಳು, ಪಾತ್ರಗಳು ಕಂಡುಬಂದು ನಗುವಿನ ಥೆರಪಿಗೆ ಒಳಗಾಗಿ ಗೆಲುವಾಗಿಬಿಡುತ್ತೇವೆ. ‘ದಂತವೈದ್ಯರೇ ಎಚ್ಚರೆಚ್ಚರ’ ಎಂಬ ಬರಹ (ಡಾ. ಶ್ರೀಪ್ರಕಾಶ್) ಶುದ್ಧಾಂಗ ಹಾಸ್ಯಸಾಹಿತ್ಯಕ್ಕೆ ಸೇರಬಹುದಾದ ಬರಹ (ಓದಿಯೇ ಸವಿಯಬೇಕು). ಹೀಗೆ ಓದುಗರನ್ನು ನಗಿಸುತ್ತಲೇ ಆಳದಲ್ಲಿರುವ ಮಾನವೀಯ ಗುಣಗಳನ್ನು ಅನಾವರಣಗೊಳಿಸುವ ಈ ಕತೆಗಳು ಓರ್ವ ಹಾಸ್ಯಲೇಖಕಿಯಾದ ನನಗೆ ಅತೀವ ಸಂತಸವನ್ನು ನೀಡಿವೆ. ‘ನಗುವೂ ನೋವುನಿವಾರಕ’ ಎನ್ನುತ್ತಾರೆ. ಈ ಕೃತಿಯಲ್ಲಿ ಧಾರಾಳ ನಗುವಿದೆ. ವೈದ್ಯರೆಂದರೆ ನಮ್ಮ ನೋವು ನೀಗಿಸಲು ಬಂದವರು ತಾನೆ? ಅವರೇ ನಗೆಯುಕ್ಕಿಸಿದ್ದಾರೆ ಅಂದಬಳಿಕ ನಗುವಿನ ಡಬಲ್ ಧಮಾಕಾ! ಸಂಕೋಚಪಡದೇ ನಕ್ಕು (ಹಲ್ಲುಕಾಣುವಂತೇ ನಗಿರಿ) ಹಗುರಾಗಿ. ಈ ಕೃತಿ ವೈದ್ಯರ ಬಳಗದಲ್ಲಷ್ಟೇ ಅಲ್ಲ ಓದುಗರ ವಲಯದಲ್ಲೂ ಸಂಚಲನ ಮೂಡಿಸಬಲ್ಲ ಸಾಮರ್ಥ್ಯ ಹೊಂದಿರುವುದರಿಂದ ಸಾಹಿತ್ಯಲೋಕದಲ್ಲಿ ಇದರ ಸೂಕ್ತ ಪ್ರವೇಶವಾಗಿ ಸಂಪಾದಕರ ಶ್ರಮ ಸಾರ್ಥಕವಾಗಲಿ ಎಂದು ಹಾರೈಸುತ್ತೇನೆ.

(‘ಚಿತ್ರಾನ್ನ’ ಕೃತಿಗಾಗಿ ಸಂರ್ಪಸಿ: ಡಾ. ಮುರಲಿ ಚೂಂತಾರು- 9845135787)

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *

Back To Top