Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಬನವಾಸಿಯ ಶ್ರೀದತ್ತರಾಜಯೋಗೀಂದ್ರ ಸದ್ಗುರು

Sunday, 18.06.2017, 3:00 AM       No Comments

‘ಲೌಕಿಕ’ ವ್ಯವಹಾರದಲ್ಲಿ ತೊಡಗಿಸಿಕೊಂಡೂ ‘ಅಲೌಕಿಕ’ ಜಗತ್ತಿನೊಂದಿಗೆ ಅನುಸಂಧಾನ ನಡೆಸುತ್ತ, ತರುವಾಯದಲ್ಲಿ ಶ್ರೀಸಹಜಾನಂದರ ಕೃಪಾಕಟಾಕ್ಷಕ್ಕೆ ಪಾತ್ರರಾದ ಶ್ರೀದತ್ತರಾಜಯೋಗಿಂದ್ರ ಸದ್ಗುರುಗಳು, ಸದಾ ತಪೋನುಷ್ಠಾನದಲ್ಲಿ ತೊಡಗಿ ಬ್ರಹ್ಮಾನುಭವವನ್ನು ಸವಿದವರು. ‘ದತ್ತಪಂಥ’ದ ವಿಶಿಷ್ಟ ಸಾಧಕರಲ್ಲಿ ಇವರದು ಎದ್ದುಕಾಣುವ ಹೆಸರು.

 

ಕರ್ನಾಟಕದಲ್ಲಿ ವಿಶಿಷ್ಟವಾಗಿ ಬೆಳೆದಿರುವ ‘ದತ್ತಪಂಥ’ದ ಸಾಧಕರಲ್ಲಿ ಶ್ರೀದತ್ತರಾಜ ಯೋಗೀಂದ್ರರು ಪ್ರಮುಖರು. ಇವರ ಗುರುಗಳು ಶ್ರೀಸಹಜಾನಂದ ಸ್ವಾಮಿಗಳು. ಅವರು ಶ್ರೀದತ್ತರಾಜಯೋಗೀಂದ್ರರಿಗೆ ದತ್ತಪಂಥದ ರಾಜಮಾರ್ಗವನ್ನು ತೋರಿಸಿದರು. ಶ್ರೀದತ್ತರಾಜಯೋಗೀಂದ್ರರ ಪ್ರಭಾವ ಮಧ್ಯಕರ್ನಾಟಕದಲ್ಲಿ ಅಗಾಧವಾಗಿದೆ. ಚಿತ್ರದುರ್ಗ, ಹೊಳಲ್ಕೆರೆ, ನುಲೇನೂರು, ಮೂಳೇನಹಳ್ಳಿ, ಕೊಮಾರನಹಳ್ಳಿ, ಲೋಕಿಕೆರೆ ಮುಂತಾದೆಡೆಗಳಲ್ಲಿ ದತ್ತಮಾರ್ಗದ ಜಲಚಿಹ್ನೆಗಳನ್ನು ಈಗಲೂ ಕಾಣಬಹುದು.

ಜನನ-ವಿದ್ಯಾಭ್ಯಾಸ: ದತ್ತರಾಜಯೋಗೀಂದ್ರರ ಜನ್ಮಸ್ಥಾನ ಬನವಾಸಿ. ಇದು ಹಲವು ಧರ್ಮಗಳ ಸಂಗಮಸ್ಥಾನ, ಅಲ್ಲಮಪ್ರಭುಗಳ ಸಿದ್ಧಸ್ಥಾನ. ಇಲ್ಲಿ ಮಧುಕೇಶ್ವರ ದೇವಾಲಯ ಪ್ರಮುಖವಾದುದು. ಇಲ್ಲಿ ಗುಂಡಪ್ಪ ಎಂಬ ಆಡಳಿತಾಧಿಕಾರಿ ಇದ್ದರು. ಇವರ ಮಡದಿ ಭಾಗೀರಥೀ ದೇವಿ. ಗುಂಡಪ್ಪನವರಿಗೆ ಆಡಳಿತಾಧಿಕಾರಿ ಹುದ್ದೆಯ ಜತೆಗೆ ಕುಲಕರ್ಣಿಕೆ, ನಾಡಿಗತನವೂ ಇತ್ತು. ಇವರ ಮಗನೇ ತ್ರ್ಯಬಕ (ಜನನ: 21.11.1871). ತಾಯಿ-ತಂದೆ ತಿರುಕಪ್ಪ ಎಂದು ಕರೆಯುತ್ತಿದ್ದರು. ಮುಂದೆ ಶ್ರೀದತ್ತರಾಜಯೋಗೀಂದ್ರರಾಗಿ ಖ್ಯಾತಿ ಹೊಂದಿದರು. 8 ವರ್ಷದ ಹುಡುಗನಾಗಿದ್ದಾಗ ಉಪನಯನವಾಯಿತು. ಮಧುಕೇಶ್ವರ ದೇವಸ್ಥಾನದ ಪುರೋಹಿತರು ನಿತ್ಯಾಗ್ನಿಹೋತ್ರಿಗಳು, ಸಾತ್ತಿ್ವಕಭಕ್ತರು; ಅವರು ಸುಂದರ ದತ್ತಮೂರ್ತಿಯನ್ನು ಆಶೀರ್ವಾದಪೂರ್ವಕ ತ್ರ್ಯಬಕನಿಗೆ ಕೊಟ್ಟರು. ಚಿಕ್ಕಂದೇ ದೈವಭಕ್ತಿ ಹೆಚ್ಚು. ಒಂಟಿಕಾಲಲ್ಲಿ ನಿಂತುಕೊಂಡು ಹಲವಾರು ಸ್ತೋತ್ರಗಳನ್ನು ಹೇಳುತ್ತಿದ್ದ ತ್ರ್ಯಬಕನಿಗೆ ಅವಧೂತಗೀತೆಯ ಶ್ಲೋಕಗಳು ಕಂಠಸ್ಥವಾಗಿದ್ದುವು. ದತ್ತಾತ್ರೇಯ ಇಷ್ಟದೈವ. ತಾಯಿ ಭಾಗೀರಥಮ್ಮನವರು ಗೌರೀಪಂಚಾಕ್ಷರಿ ಮಹಾಮಂತ್ರವನ್ನು ಪ್ರತಿನಿತ್ಯ 5,000 ಸಲ ಜಪಿಸುತ್ತಿದ್ದರು. ಮಧುಕೇಶ್ವರ ದೀಕ್ಷಿತರು ಪುರಾಣ ಹೇಳುತ್ತಿರುವಾಗ ತ್ರ್ಯಬಕ ತಾಯಿಯೊಡನೆ ಪುರಾಣಶ್ರವಣ ಮಾಡುತ್ತಿದ್ದನು.

ತ್ರ್ಯಬಕ ಓದಿನಲ್ಲಿ ಜಾಣ. ಮುಲ್ಕಿ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲೇ ಉತ್ತೀರ್ಣನಾದ. ನಂತರ ಕುಲಕರ್ಣಿ ಪರೀಕ್ಷೆಯಲ್ಲೂ ತೇರ್ಗಡೆ ಆಯಿತು. ಜತೆಗೆ ಗುಂಡಪ್ಪ ಮಗನಿಗೆ ಶಾನುಭೋಗಿಕೆ ಲೆಕ್ಕ ಹೇಳಿಕೊಡುತ್ತಿದ್ದರು, ಪ್ರತಿನಿತ್ಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತ್ರ್ಯಬಕನಿಗೊ ಪರಮಾರ್ಥ ಪ್ರಿಯವಾದ ವಿಷಯ! ಆತನಲ್ಲಿ ಜನ್ಮತಃ ವೈರಾಗ್ಯ ಗುಣ ತುಂಬಿತ್ತು. ದತ್ತಾತ್ರೇಯನಲ್ಲಿ ತೀವ್ರವಾದ ಭಕ್ತಿ. ಊರಿಗೆ ಬರುತ್ತಿದ್ದ ಸಾಧು-ಸತ್ಪುರುಷರನ್ನು ಮನೆಗೆ ಕರೆತಂದು ಸತ್ಕರಿಸುತ್ತಿದ್ದನು. ಆಪ್ತಸ್ನೇಹಿತ ನಾರಾಯಣಮಾಸ್ತರ್ ಸೂಚನೆಯಂತೆ ಚಿದಾನಂದರ ‘ಜ್ಞಾನಸಿಂಧು’ ತ್ರ್ಯಬಕನ ಪ್ರತಿನಿತ್ಯದ ಪಾರಾಯಣ ಗ್ರಂಥವಾಗಿ ವಿರಕ್ತಿ ಬೆಳೆಯಿತು; ಬದುಕು ಕಾಂತಿಯುಕ್ತವಾಯಿತು. ಆಗ ತ್ರ್ಯಬಕನಿಗೆ 15ರ ಪ್ರಾಯ. ಮಗನಿಗೆ ಮದುವೆ ಮಾಡಲು ತಂದೆ-ತಾಯಿ ಹಂಬಲಿಸಿದರು. ಮದುವೆ ನಡೆದೇಹೋಯಿತು. ಸಂಸಾರವೋ ಪರಮಾರ್ಥವೋ? ಎಂಬ ಪ್ರಶ್ನೆಯಲ್ಲಿ ತೊಳಲಾಡುತ್ತಲೇ ತ್ರ್ಯಬಕ ‘ಜ್ಞಾನಸಿಂಧು’ ಓದಲುತೊಡಗಿದ. ವಿರಕ್ತಭಾವ ತೀವ್ರವಾಗಿ ವ್ಯವಹಾರದಲ್ಲಿ ಉದಾಸೀನತೆ, ಊಟ-ಉಡುಗೆ-ನಿದ್ರೆಯಲ್ಲಿ ಅನಾಸಕ್ತಿ ಬೆಳೆಯಿತು. ಇದನ್ನೆಲ್ಲ ನೋಡಿದ ಹೆತ್ತವರು ‘ಅರಿಸಿನಗುಪ್ಪೆ’ ಗ್ರಾಮಕ್ಕೆ ಕಳುಹಿಸಿ, ಅಲ್ಲಿ ಸ್ವತಂತ್ರವಾಗಿ ಕುಲಕರ್ಣಿಕೆ ನಡೆಸಿದರೆ ಸರಿಹೋದೀತೆಂದು ಎಣಿಸಿದರು. ಅದೊಂದು ಏಕಾಂತಸ್ಥಳವಾಗಿದ್ದು, ಸಾಧನೆಗೆ ಹೇಳಿಮಾಡಿಸಿದ ಜಾಗವಾಗಿತ್ತು. ತ್ರ್ಯಬಕ ಅಲ್ಲಿದ್ದ ಆಂಜನೇಯ ದೇವಸ್ಥಾನವನ್ನೇ ಲೌಕಿಕ ಕಾರ್ಯಾಲಯವನ್ನಾಗಿ ಮಾಡಿಕೊಂಡ. ಸನಿಹದ ಸಿದ್ಧಪ್ಪನ ಗುಹೆ ಧ್ಯಾನಮಂದಿರವಾಯಿತು, ಷಣ್ಮುಖೀ ಮುದ್ರಾಸಹಿತ ಪ್ರಾಣಾಯಾಮದಲ್ಲಿ ತೊಡಗಿದ.

ಸಾಧನೆಯ ಬೆಳಗು: ಪ್ರತಿನಿತ್ಯ ಜನ ಏಳುವ ಮೊದಲು ತ್ರ್ಯಬಕ ದೇವಸ್ಥಾನಕ್ಕೆ ಬರುತ್ತಿದ್ದ. ಅಲ್ಲಿಗೆ ಬಂದ 5 ವರ್ಷದಲ್ಲಿ ಧ್ಯಾನ-ತಪಸ್ಸು ಬಲಿಯಿತು. ವಿಕೃತಿನಾಮ ಸಂವತ್ಸರದ ಮಾರ್ಗಶಿರ ಮಾಸದ ಅಮಾವಾಸ್ಯೆಯ ಮಧ್ಯರಾತ್ರಿ (1891)ಯಲ್ಲಿ ತ್ರ್ಯಬಕನ ಚಿತ್ತ ಧ್ಯಾನದಲ್ಲಿ ತೋರುತ್ತಿದ್ದ ದತ್ತಮೂರ್ತಿಯಲ್ಲಿ ಸಂಪೂರ್ಣ ಲೀನವಾಯಿತು; ಗಾಢ ಸಮಾಧಿಸ್ಥಿತಿ ಪಡೆಯಿತು. ತ್ರ್ಯಬಕ ದತ್ತದೇವನಾದ. ಅಮಾವಾಸ್ಯೆಯ ಕತ್ತಲು ಮಾಯವಾಗಿತ್ತು. ಗುಹೆಯ ಒಳ-ಹೊರಗೆ ದಿವ್ಯಪ್ರಭೆ ಹರಡಿತು. ಎಲ್ಲೆಲ್ಲೂ ದತ್ತದೇವ; ದತ್ತದೇವನೇ ತಾನು ಎಂಬ ಅಭೇದಭಾವ. ‘ಸರ್ವಂ ದತ್ತಮಯಂ ಜಗತ್’ ಎಂಬ ಏಕೋಭಾವ. ದಿಗಂಬರನಾಗಿ ಹಾಡುತ್ತ, ಕುಣಿಯುತ್ತ ಬನವಾಸಿಯ ದಾರಿ ತುಳಿದ. ತನಗೆ ‘ಜ್ಞಾನಸಿಂಧು’ ಕೊಟ್ಟು ಪರಮಾರ್ಥದ ದಾರಿ ತೋರಿಸಿದ ನಾರಾಯಣಮಾಸ್ತರ್ ಮನೆಗೆ ಹೋದ. ಅಲ್ಲಿನ ಕಂಬಕ್ಕೆ ಒರಗಿ ಕುಳಿತು, ಆನಂದದ ಸಮಾಧಿಯಲ್ಲಿ ಮುಳುಗಿದ. ಮಾಸ್ತರ್​ಗೆ ಅಚ್ಚರಿ. ತ್ರ್ಯಬಕ ಸಾಧನೆ-ಸಿದ್ಧಿಗಳನ್ನು ಗೆಳೆಯನಿಗೆ ತಿಳಿಸಿದ. ಆದರೆ, ಮಾಸ್ತರ್​ಗೆ ಅದು ಅರ್ಥವಾಗಲಿಲ್ಲ. ‘ಯೋಗಸಾಧನೆಯಿಂದ ಬುದ್ಧಿ ಕೆಡಿಸಿಕೊಂಡಿದ್ದಾನೆ’ ಎಂದುಕೊಂಡರು. ಅಲ್ಲಿಂದ ತ್ರ್ಯಬಕ ಮನೆಗೆ ಹೋದ. ಮಗನನ್ನು ಕಂಡ ತಾಯಿಗೆ ಒಂದೆಡೆ ಸಂಭ್ರಮ, ಮತ್ತೊಂದೆಡೆ ಗಾಬರಿ. ‘ಏನೋ ತಿರುಕ, ಹುಚ್ಚನಂತೆ ಬತ್ತಲೆ ಬರುವುದಕ್ಕೆ ಬುದ್ಧಿ ಕೆಟ್ಟಿತೇನಪ್ಪಾ’ ಎಂದು ಸಂಕಟಪಟ್ಟಳು. ‘ಇದು ದೈವಾನುಗ್ರಹ’ ಎಂದು ಉತ್ತರಕೊಟ್ಟ. ದೇಹ ಅಶುದ್ಧ, ದೇಹಿ ನಿರ್ಮಲ. ಇದು ನಿತ್ಯಶುದ್ಧ, ನಿತ್ಯಬುದ್ಧ, ನಿತ್ಯಮುಕ್ತ. ಈ ಪ್ರತ್ಯಗಾತ್ಮವನ್ನು (ದೇಹದೊಳಗೆ ನೆಲೆಸಿರುವ ಜೀವಾತ್ಮ) ತೊಳೆಯುವುದು ಅಗತ್ಯವಿಲ್ಲವೆಂದು ತಾಯಿಗೆ ಹೇಳಿದ. ಈ ಅನುಭವ ಬಂದ ಮೇಲೆ ಸ್ನಾನವನ್ನು ಬಿಟ್ಟುಬಿಟ್ಟ. ಊಟದ ಧ್ಯಾಸವಿಲ್ಲ, ರೂಪದ ಅಪೇಕ್ಷೆಯಿಲ್ಲ, ಲೋಕವ್ಯಾಪಾರದ ಮೋಹವಿಲ್ಲ. ತ್ರ್ಯಬಕನಿಗೆ ಆರಾಧಕ-ಆರಾಧ್ಯ ಎಂಬ ಭೇದಗಳೇ ಇಲ್ಲವಾಯಿತು.

ತ್ರ್ಯಬಕ ಭೇದಗಳನ್ನು ಜಯಿಸಿದ, ದತ್ತದೇವನೇನೊ ಆದ. ಆದರೆ ‘ಬಳಸದಿರು ಅದ್ವೈತವನು ಬಾಹ್ಯದಲಿ’ ಎಂದು ಹೇಳುವ ಗುರು ಅವನ ಬಳಿ ಇರಲಿಲ್ಲ. ಅವನ ಸ್ಥಿತಿ ಕಂಡು ಅವನ ಪಾಡಿಗೆ ಬಿಟ್ಟುಬಿಡುವ ತಿಳಿವಳಿಕೆ ಬಂಧುಬಾಂಧವರಿಗೂ ಇರಲಿಲ್ಲ. ಯೌಗಿಕ ಉನ್ಮಾದ, ದೇವರ ಹುಚ್ಚು ಇತರರಿಗೆ ತಿಳಿಯಲಿಲ್ಲ. ಹೀಗಾಗಿ, ಔಷಧೋಪಚಾರ ಮಾಡಿದರು, ತಂತ್ರ-ಮಂತ್ರ ಹಾಕಿಸಿದರು; ಆದರೆ, ಬಂಧುಗಳಿಗೆ ಪ್ರಯೋಜನ ಕಾಣಿಸಲಿಲ್ಲ. ಈ ಸಮಯದಲ್ಲಿ ದೈವೀಶಕ್ತಿ ಪ್ರಕಟವಾಯಿತು. ಜನರ ಮನದ ಆಲೋಚನೆಗಳನ್ನು ತ್ರ್ಯಬಕ ಯಥಾಸತ್ಯವಾಗಿ ಹೇಳಲು ಪ್ರಾರಂಭಿಸಿದ. ಅವನಿತ್ತ ಪ್ರಸಾದದಿಂದ ಅನೇಕರ ರೋಗಗಳು, ಸಂಕಟಗಳು ಪರಿಹಾರವಾದುವು. ಈ ನಡುವೆ ಆತ್ಮಾರಾಮದ ಸ್ಥಿತಿ. 3 ತಿಂಗಳು ಕಳೆಯಿತು. ತ್ರ್ಯಬಕ ಸಹಜಸ್ಥಿತಿಗೆ ಬಂದ. ಸ್ನಾನ-ಸಂಧ್ಯಾವಂದನೆ-ವಸ್ತ್ರಧಾರಣೆ-ಭೋಜನಾದಿಗಳನ್ನು ಮಾಡತೊಡಗಿದ. ಆತ್ಮಾವಲೋಕನ ಮಾಡಿಕೊಂಡ. ಸಂಸಾರ-ಪರಮಾರ್ಥಗಳ ನಡುವಣ ಸಿಕ್ಕುಗಳು ಅವನನ್ನು ಒದ್ದಾಡಿಸಿದುವು.

ಆರೂಢದರ್ಶನ: ತ್ರ್ಯಬಕನಿಗೆ ಹುಬ್ಬಳ್ಳಿಯ ಸಿದ್ಧಾರೂಢರ ನೆನಪಾಯಿತು. ಅವರಲ್ಲಿಗೆ ಹೋದರೆ ತನ್ನ ಸಮಸ್ಯೆ ಪರಿಹಾರ ಆಗುತ್ತದೆಂದು ಅನಿಸಿತು. ದೊಡ್ಡವರ ಮಾತು ಕೇಳುವುದು ಶ್ರೇಯಸ್ಕರ ಎಂಬ ಭಾವವೂ ಬಲಿಯಿತು. ಹುಬ್ಬಳ್ಳಿಯ ಹಾದಿ ತುಳಿದ, ಸಿದ್ಧಾರೂಢ ಮಠದಲ್ಲಿ ಉಳಿದ. ಇಲ್ಲಿ 3 ದಿನ ಉಳಿಯುವುದು, ಸ್ವಾಮಿಗಳಿಗೆ ಯಾವ ವಿಷಯವನ್ನೂ ತಿಳಿಸಬಾರದು. ಆಹಾರ ತೆಗೆದುಕೊಳ್ಳದೆ ದತ್ತಮೂರ್ತಿಯ ಧ್ಯಾನದಲ್ಲೇ ಇರಬೇಕೆಂದು ಗಟ್ಟಿಯಾಗಿ ನಿಶ್ಚಯಿಸಿದ. ಅದೇ ರೀತಿ ನಿಶ್ಚಲಧ್ಯಾನದಲ್ಲಿ ಮುಳುಗಿದ. ಮೂರನೇ ದಿನದ ಬೆಳಗಿನ ಜಾವ. ಆರೂಢರು ತ್ರ್ಯಬಕನ ಬಳಿ ಬಂದು ಮಸ್ತಕದ ಮೇಲೆ ಹಸ್ತಸಂಯೋಗ ಮಾಡಿದರು. ಮೈತುಂಬಾ ಬೆಳಕು ತುಂಬಿದಂತಾಯಿತು. ಕವಿದಿದ್ದ ಸಿಕ್ಕುಗಳೆಲ್ಲಾ ಕರಗಿಹೋದುವು. ತ್ರ್ಯಬಕ ಸಂಭ್ರಮದಿಂದ ಎದ್ದು ಸಿದ್ಧಾರೂಢರಿಗೆ ನಮಸ್ಕರಿಸಿದ. ಭಾವಪರವಶತೆಯಿಂದ ಪುಳಕಿತನಾದ. ಸಿದ್ಧಾರೂಢರು ದತ್ತದೇವನ ಸಂಶಯವನ್ನು ಪರಿಹರಿಸಿ ಸಂಸಾರತ್ಯಾಗ ಬೇಡವೆಂದೂ ಗೃಹಸ್ಥಯೋಗಿಯಾಗೆಂದೂ ತಿಳಿಸಿದರು. ಋಣತ್ರಯಗಳನ್ನು ತೀರಿಸಿ ಗುರುಮಾರ್ಗದಲ್ಲಿ ನಡೆಯೆಂದು ಆಶೀರ್ವದಿಸಿದರು. ಸಿದ್ಧಾರೂಢರು ನೀಡಿದ ಫಲಪುಷ್ಪ ಪ್ರಸಾದವನ್ನು ಪಡೆದು ಬನವಾಸಿಗೆ ಹಿಂದಿರುಗಿ ನಿತ್ಯ ಹಾಗೂ ನೈಮಿತ್ತಿಕ ಕರ್ಮಗಳಲ್ಲಿ ತೊಡಗಿಕೊಂಡ. ಬೇಸಾಯ ಮಾಡತೊಡಗಿದ. ತಂದೆ ಮಾಡಿದ ಸಾಲವನ್ನೆಲ್ಲಾ ತೀರಿಸಿ, ಸೊಗಸಾದ ಮನೆಯನ್ನು ಕಟ್ಟಿಸಿದ. ಅನಾಥ ವಿಧವೆಯೊಬ್ಬಳಿಗೆ ಆಶ್ರಯ ಕಲ್ಪಿಸಿದ. ತ್ರಿಕಾಲಧ್ಯಾನ ನಿರತನಾಗಿ ಆತ್ಮಾನಂದದಲ್ಲಿ ಇರಹತ್ತಿದ. ಇತ್ತ ಮಧುಕೇಶ್ವರ ದೇವಳದ ನಿರ್ವಹಣೆ ಮಾಡುತ್ತ ಖಜಾಂಚಿ, ಕರಣಿಕ, ಲೆಕ್ಕಪರಿಶೋಧಕ, ಮೇಲ್ವಿಚಾರಕ, ವ್ಯವಸ್ಥಾಪಕನಾಗಿ ಸೇವೆಮಾಡಲು ಪ್ರಾರಂಭಿಸಿದ. ಈ ಎಲ್ಲ ಕೆಲಸ ಮಾಡುತ್ತಿರುವಾಗ ಆತ್ಮಾರಾಮನಾಗಿ ಇರುವುದು ಅಭ್ಯಾಸವಾಯಿತು. ಅತ್ತ ಕರಿದಾರ(ಲೌಕಿಕ) ಇತ್ತ ಬಿಳಿದಾರ (ಪರಮಾರ್ಥ)ಗಳಿಂದ ಜೀವನವನ್ನು ನೇಯ್ದು ನೋಡಿಕೊಳ್ಳಲು ಪ್ರಾರಂಭಿಸಿದ. ಕುಟುಂಬ ಸಹಿತವಾಗಿ ತಾಯಿಯೊಡನೆ ಕಾಶೀ-ರಾಮೇಶ್ವರ ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದದ್ದಾಯಿತು. ಕಾಶಿಗೆ ಹೋಗಿದ್ದಾಗ ತಾಯಿ ಭಾಗೀರಥಿ ತೀರಿಕೊಂಡರು. ದಹನ ಹಾಗೂ ಶ್ರಾದ್ಧಕರ್ಮಗಳನ್ನು ಮಾಡಿ ಹಿಂದಿರುಗಿದ.

ಈ ನಡುವೆ ಸಗುಣ ಸಾಕ್ಷಾತ್ಕಾರದ ಹಂಬಲ ಉಂಟಾಯಿತು. ಸಮರ್ಥ ಸದ್ಗುರುವಿನ ಪ್ರತೀಕ್ಷೆಯಲ್ಲಿ ತೊಡಗಿ ಉತ್ತರ-ಪೂರ್ವ-ಪಶ್ಚಿಮದ ಅನೇಕ ಕಡೆ ಸುತ್ತಿದರೂ ಪ್ರಯೋಜನ ಆಗಲಿಲ್ಲ. ‘43ನೆಯ ವಯಸ್ಸಿನಲ್ಲಿ ಸದ್ಗುರುವಿನ ಅನುಗ್ರಹವಾಗುತ್ತದೆ’ ಎಂಬ ಸಿದ್ಧಾರೂಢರ ಮಾತು ನೆನಪಾಯಿತು. ನಂತರ ಮನೆಯನ್ನೇ ಮಂದಿರ ಮಾಡಿಕೊಂಡ. ತ್ರ್ಯಬಕನ 6 ಹೆಣ್ಣುಮಕ್ಕಳಲ್ಲಿ ಐವರು ವಿಧಿವಶರಾದರು. ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ ಚಿಕ್ಕವನಿದ್ದಾಗ ತೀರಿಕೊಂಡ. ಕಿರಿಯ ಮಗ ಗುರುನಾಥರಾಯ. ಲೌಕಿಕದ ಎಲ್ಲ ಕೆಲಸಗಳನ್ನು ಮಿತ್ರ ತಮ್ಮಣ್ಣಮಾಸ್ತರ್ (ಗುರುನಾಥ ಕೇಶವ ಅಭ್ಯಂಕರ್) ಅವರಿಗೆ ವಹಿಸಿ ಗೃಹಸ್ಥನ ನಿತ್ಯಕರ್ತವ್ಯಗಳಾದ ಪಂಚಮಹಾಯಜ್ಞ ಮಾಡುತ್ತ ತಪಸ್ಸಿನಲ್ಲಿಯೇ ಮುಳುಗಿದ. ಈ ನಡುವೆ 1910ರಲ್ಲಿ ಟೇಂಬೇ ಮಹಾರಾಜರು ಬನವಾಸಿಗೆ ಬಂದುಹೋದರು. ಅವರು ಅಲ್ಲಿ 40 ದಿವಸ ಇದ್ದಾಗ ‘ದತ್ತದೇವ’ ತ್ರ್ಯಬಕನ ಮನೆಗೆ ಬಂದು ಭಿಕ್ಷಾಸ್ವೀಕಾರ ಮಾಡಿದ್ದು ಒಂದು ವಿಶೇಷ.

ಸದ್ಗುರುವಿನ ಪ್ರತೀಕ್ಷೆ: ಒಂದು ದಿನ ದತ್ತದೇವರು ಸಮಾಧಿಯಲ್ಲಿದ್ದಾಗ ‘3 ದಿನಕ್ಕೆ ಸದ್ಗುರು ಬರುವನು’ ಎಂಬ ಅದೇಶವಾಯಿತು. 3ನೆಯ ದಿನ ಸಂಜೆ ದೇವಳದ ಹೊರಗಡೆ ಸಾಧುವಿನ ದರ್ಶನವಾಯಿತು. ಅವರು ಮಹಾಮೌನ ಮುದ್ರೆಯಲ್ಲಿ ಕುಳಿತಿದ್ದರು. ಶರೀರದ ಪರಿವೆ ಇರಲಿಲ್ಲ; ಅಂತಃಸಾಮ್ರಾಜ್ಯದಲ್ಲಿ ವಿಹರಿಸುತ್ತಿದ್ದರು. ರಾತ್ರಿಯೆಲ್ಲ ಆ ಸಾಧುವಿನ ಬಳಿಯೇ ಕುಳಿತುಕೊಂಡ ದತ್ತದೇವರು, ಮರುದಿನ ಬೆಳಗ್ಗೆ ಅವರನ್ನು ಮನೆಗೆ ಕರೆದೊಯ್ದು ಸತ್ಕರಿಸಿದರು. ಗುರುನಾಥರ ಪರಿಚಯ ಮಾಡಿಕೊಂಡರು. ಅವರು ಶ್ರೀಸಹಜಾನಂದರೆಂದು ತಿಳಿಯಿತು. ಹಂಪೆಯ ಹೇಮಕೂಟದಿಂದ ಬನವಾಸಿಗೆ ಬಂದಿದ್ದ ಪವಿತ್ರಾತ್ಮ ಸಹಜಾನಂದರು ದಿವ್ಯಾತ್ಮ ದತ್ತದೇವರನ್ನು ಕಂಡದ್ದು ಯೋಗಾಯೋಗ, ಅದೇ ದೈವಯೋಗ. ಸಹಜಾನಂದರಿಗೊ ಉತ್ತಮಾಧಿಕಾರಿಗಳು ಸಿಕ್ಕಿರಲಿಲ್ಲ. ಅದನ್ನು ದತ್ತದೇವರಲ್ಲಿ ಕಂಡರು. ದತ್ತದೇವರು ಗುರುದೇವನಿಗೆ ವರದಾನದಿಯ ದಂಡೆಯ ಮೇಲೆ ಕುಟೀರವನ್ನು ಕಟ್ಟಿಸಿದರು. ಶ್ರೀಸಹಜಾನಂದರು ಮೊದಲ ದಿನ ತತ್ತೊ್ವೕಪದೇಶ ಮಾಡುತ್ತಿರುವಾಗ ಶ್ರವಣಮಾತ್ರದಿಂದಲೇ ಶಿಷ್ಯನಿಗೆ ಸಮಾಧಿಸ್ಥಿತಿ ದೊರಕಿದ ಅದ್ವೈತಾನುಭವ ಗುರುವಿಗೆ ತಿಳಿಯಿತು. ಶ್ರೀಸಹಜಾನಂದರು ಒಡ್ಡಿದ ಹಲವು ಪರೀಕ್ಷೆಗಳಲ್ಲಿ ದತ್ತದೇವರು ಗೆದ್ದು ಬಂದರು. ಗುರುವಿನ ಆಣತಿಯಂತೆ ಒಮ್ಮೆ ವರದಾನದಿ ದಾಟಿ ಸ್ಮಶಾನದಲ್ಲಿ ಚಿತಾಭಸ್ಮ ತಂದರು. ಇನ್ನೊಂದು ದಿನ ಸ್ಮಶಾನದಲ್ಲಿ 24 ಗಂಟೆ 1,50,000 ಏಕಾಕ್ಷರ (ಓಂಕಾರ) ಜಪ ಮಾಡಿದರು. ಮಂಡಲಪೂಜೆ ಮಾಡಿಸಿ ಫಲಾಹಾರ, ತೃಣಾಹಾರ, ಅನಿಲಾಹಾರ ಮಾಡುತ್ತ ನಿರ್ವಿಕಲ್ಪ ಸಮಾಧಿಯಲ್ಲಿ ಗುರುನಾಥರು ನೆಲೆನಿಲ್ಲಿಸಿದರು. 4 ತಿಂಗಳ ಕಠೋರ ತಪಸ್ಸಿನಿಂದ ಶರೀರವು ಕ್ಷೀಣಿಸುತ್ತ, ಆತ್ಮಾನಂದ ಹೆಚ್ಚಾಯಿತು. ಎಚ್ಚರ, ಕನಸು, ನಿದ್ರೆಗಳ ಭೇದವೇ ತೋರಲಿಲ್ಲ. ತ್ರ್ಯಬಕರ ಮೂಲವ್ಯಾಧಿ ಉಲ್ಬಣಿಸಿದಾಗ ಶ್ರೀಸಹಜಾನಂದರು ತಮ್ಮ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ದೇಹಕ್ಕೆ ನವಚೈತನ್ಯ ತಂದುಕೊಟ್ಟು, ‘‘ಸಮಾಧಿಸ್ಥಿತಿ ಪಡೆದ ನೀನು ‘ದತ್ತರಾಜಯೋಗೀಂದ್ರ’ ಎಂಬ ಅಭಿಧಾನದಿಂದ ಪ್ರಸಿದ್ಧನಾಗು’’ ಎಂದು ಆಶೀರ್ವದಿಸಿದರು. ನಂತರ ತಮ್ಮ ಬಳಿಯಿದ್ದ ಹರಕುಜೋಳಿಗೆ ಕೊಡುತ್ತ ‘ಇದೋ ಅಕ್ಷಯಕೋಶ’ ಎಂದು ಅದರ ಜತೆಗೆ ಮರದ ಕಮಂಡಲುವನ್ನೂ ದಂಡವನ್ನೂ ಕೊಟ್ಟು ಬ್ರಹ್ಮವಿದ್ಯಾಶೀರ್ವಾದ ಮಾಡಿದರು. ಶ್ರೀಸಹಜಾನಂದರು 8 ತಿಂಗಳು ಬನವಾಸಿಯಲ್ಲಿದ್ದರು. ಅವರ ಪ್ರಕೃತಿ ಇಲ್ಲಿಯ ಶೀತಹವೆಗೆ ಒಗ್ಗಲಿಲ್ಲವಾಗಿ ಕೋರುಗಲ್ಲಿಗೆ ಹೊರಟರು.

ದತ್ತರಾಜಯೋಗೀಂದ್ರರು ತಪೋನುಷ್ಠಾನದಲ್ಲಿದ್ದು ಸದಾ ಬ್ರಹ್ಮಾನುಭವವನ್ನೇ ಸವಿಯುತ್ತಿದ್ದ ಪರಿಣಾಮ ವಿಷವೂ ಅಮೃತವಾಯಿತು, ಜಡವು ಚೇತನವಾಗಿ ಆತ್ಮಾನಂದ ಮುಗಿಲುಮುಟ್ಟಿತು. 1 ವರ್ಷದ ನಂತರ ಶ್ರೀಸಹಜಾನಂದರು ಬನವಾಸಿಗೆ ಬಂದು ತೈತ್ತರೀಯ ಉಪನಿಷತ್ತಿನಲ್ಲಿ ಹೇಳಿರುವ ಸ್ವಾಧ್ಯಾಯ-ಪ್ರವಚನಗಳ ರಹಸ್ಯವನ್ನು ಶ್ರೀದತ್ತಯೋಗೀಂದ್ರರಿಗೆ ಬೋಧಿಸಿದರು. ಯಾವುದಾದರೊಂದು ಅಧ್ಯಾತ್ಮಗ್ರಂಥವನ್ನು ಆಧಾರವಾಗಿಟ್ಟುಕೊಂಡು ಸ್ವಾಧ್ಯಾಯ-ಪ್ರವಚನದಲ್ಲಿ ಲೀನನಾಗೆಂದು ತಿಳಿಸಿದರು. ಅಂತೆಯೇ ಜ್ಞಾನಸಿಂಧು, ಅನುಭವಾಮೃತ, ಪರಮಾನುಭವಬೋಧೆ, ಯೋಗವಾಸಿಷ್ಠ ಮತ್ತು ಭಗವದ್ಗೀತೆಗಳು ಯೋಗೀಂದ್ರರ ಆಧಾರಗ್ರಂಥಗಳಾದುವು. ನಂತರ ವೇದಾಂತವಿಷಯಗಳನ್ನು ಮನಮುಟ್ಟುವಂತೆ ಹೇಳಲಾರಂಭಿಸಿದರು. ಪ್ರವಚನ ಒಂದೂವರೆ ವರ್ಷ ನಡೆಯಿತು. ಗುರುಗಳ ಸೂಚನೆಯಂತೆ ಕೋರುಗಲ್ಲಿಗೆ ಹೋದರು. ತುಂಗಭದ್ರಾ ನದಿಯ ಬಳಿಯಿದ್ದ ‘ಗಂಗಮ್ಮನ ಸಗ್ಗ’ಕ್ಕೆ ಕರೆದುಕೊಂಡು ಹೋಗಿ ನಿಸರ್ಗಾನುಭವದ ಆನಂದವನ್ನು ಯೋಗೀಂದ್ರರಿಗೆ ಮನವರಿಕೆ ಮಾಡಿಕೊಟ್ಟು ಅಭಿನ್ನಭಾವದ ಸಾಮರಸ್ಯದಿಂದ ಇಬ್ಬರೂ ಕಳೆಯೋಣವೆಂದು ಹೇಳಿ ಗೃಹಕೃತ್ಯದ ವ್ಯವಸ್ಥೆಮಾಡಿ ಬಾ- ಎಂದು ಹೇಳಿಕಳಿಸಿದರು. ಬನವಾಸಿಗೆ ದತ್ತಯೋಗೀಂದ್ರರು ಹಿಂದಿರುಗಿದರು. ಅಷ್ಟರಲ್ಲಿ ಗುರುವಿನ ನಿರ್ಯಾಣದ ಸುದ್ದಿ ತಿಳಿದು ತಕ್ಷಣವೇ ಹಿಂದಿರುಗಿದರು. ಅವರು ಬಂದ ಹಿಂದಿನ ದಿನವೇ ಸಮಾಧಿ ಆಗಿತ್ತು. ದತ್ತರಾಜಯೋಗೀಂದ್ರರು ಸಮಾಧಿಬಳಿ 3 ದಿನ ಧ್ಯಾನಸ್ಥಿತಿಯಲ್ಲೇ ಉಳಿದರು. ಗುರುನಾಥರು ಧ್ಯಾನದಲ್ಲಿ ಬಂದು ‘ನಾನು ಬರಿಯ ಬಯಲಾಗಿದ್ದೇನೆ. ಜ್ಞ್ಞಾನಪ್ರಸಾರ ಮಾಡು. ಅದರಿಂದ ಭಕ್ತರ ಬಾಳು ಬೆಳಗುತ್ತದೆ’ ಎಂದು ಹೇಳಿದಂತಾಯಿತು. ನಂತರ ಗುರುಗಳ ಸಮಾಧಿಯಮೇಲೆ ಶಿಲಾಮಂದಿರವನ್ನು ಕಟ್ಟಿಸಿ, ಪೂಜೆಗೆ ಏರ್ಪಾಡು ಮಾಡಿ ಬನವಾಸಿಗೆ ಹಿಂದಿರುಗಿದರು. ಕಾರ್ತಿಕ ಬಹುಳ ಅಷ್ಟಮಿ ಸಹಜಾನಂದರು ನಿರ್ಯಾಣ ಹೊಂದಿದ್ದು; ಆ ವರ್ಷದಿಂದಲೇ ಆರಾಧನಾ ಸಪ್ತಾಹ ಮಾಡತೊಡಗಿದರು.

ಅಧ್ಯಾತ್ಮ-ನಿರ್ಯಾಣ: ಶ್ರೀ ದತ್ತರಾಜಯೋಗೀಂದ್ರರು 1931ರ ಸೆಪ್ಟೆಂಬರ್​ನಲ್ಲಿ ಬನವಾಸಿ ಕಡೆಯಿಂದ ಪ್ರವಾಸ ಮಾಡುತ್ತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಬಂದರು. ಶ್ರೀಶಂಕರಲಿಂಗ ಭಗವಾನರು ಆಗ ನುಲೇನೂರಿನಲ್ಲಿದ್ದರು. ಇವರು ಮಂತ್ರದೀಕ್ಷೆ ಪಡೆದಿದ್ದರೂ ಪೂರ್ಣ ಗುರುಕೃಪೆ ಇನ್ನೂ ಸಿಕ್ಕಿರಲಿಲ್ಲ. ದತ್ತರಾಜಯೋಗೀಂದ್ರರನ್ನು ನೋಡಲು ಹೋದಾಗ ಭಗವಾನರಿಗೆ ಯೋಗೀಂದ್ರರ ಶರೀರದಲ್ಲಿ ಸೂರ್ಯಮಂಡಲ ಮಧ್ಯಸ್ಥನಾದ ದತ್ತಾತ್ರೇಯನ ದರ್ಶನವಾಗಿ ಅವರ ಶಿಷ್ಯರಾದರು. ಅಲ್ಲಿಯೇ ಗುರು ಶ್ರೀಸಹಜಾನಂದರ ಸಪ್ತಾಹ ಮಾಡಿದರು. ಶ್ರೀದತ್ತರಾಜಯೋಗೀಂದ್ರರು ಶಂಕರಲಿಂಗರನ್ನು ಹತ್ತಿರದಲ್ಲಿ ಕುಳ್ಳಿರಿಸಿಕೊಂಡು ‘ತಮೋಗುಣ ಪ್ರಧಾನವಾದ ನಿದ್ದೆಯನ್ನು ಗೆದ್ದಿದ್ದೀರಿ. ಷಡೂರ್ವಿುಗಳು (ಹಸಿವು, ನೀರಡಿಕೆ, ಶೋಕ, ಮೋಹ, ಮುಪ್ಪು, ಮರಣ) ಇವುಗಳನ್ನು ದಮನ ಮಾಡಿದ್ದೀರಿ. ನೀವು ಸಹಜಸಿದ್ಧರು’ ಎಂದು ಕೊಂಡಾಡಿದರು. ಶಂಕರಲಿಂಗರಿಗೆ ಮಹಾಪ್ರಣವ ದೀಕ್ಷೆ ನೀಡಿ, ಯೋಗಪೀಠದಲ್ಲಿ ಕುಳ್ಳಿರಿಸಿ, ಸಕಲ ತಪಸ್ಸನ್ನು ಸಕಾಲದಲ್ಲಿ ಧಾರೆಯೆರೆಯುತ್ತೇನೆಂದು ಹೇಳಿದರು. ಒಮ್ಮೆ ಗುರು-ಶಿಷ್ಯರು ವಾಯುವಿಹಾರಕ್ಕೆ ಹೊರಟಾಗ ಹೊಲವೊಂದನ್ನು ತೋರಿಸಿ, ಇಲ್ಲೊಂದು ಆಶ್ರಮ ನಿರ್ವಿುಸಬೇಕೆಂದೂ, ತಾವಿನ್ನು ಇಲ್ಲಿಯೇ ಸ್ಥಿರವಾಗಿ ನಿಲ್ಲುತ್ತೇವೆಂದು ಶಂಕರಲಿಂಗರಿಗೆ ತಿಳಿಸಿದರು. ಶಿವಮೊಗ್ಗೆಯ ಆರಾಧನೆ ಮುಗಿಸಿಕೊಂಡು 14.12.1934ರಂದು ನುಲೇನೂರಿಗೆ ಬಂದರು. ಶಂಕರಲಿಂಗರು ಶಿಷ್ಯರೊಡಗೂಡಿ ಇದಿರುಗೊಂಡು ಭಜನಪೂರ್ವಕವಾಗಿ ಮನೆಗೆ ಕರೆತಂದು ಸತ್ಕರಿಸಿದರು. ದತ್ತರಾಜಯೋಗೀಂದ್ರರು ಅಸ್ವಸ್ಥರಾದರು; ಮೈಯೆಲ್ಲಾ ಕಾದು ಬೆಂಕಿಯಾದರೂ, ಸಮಾಧಿಯೋಗದಲ್ಲಿಯೇ ಉಳಿದುಬಿಟ್ಟರು. 20.12.1934ರಂದು ಗುರುವಾರ. ಆದಿನ ದತ್ತಜಯಂತಿ. ಮುಂಜಾನೆ ಯೋಗೀಂದ್ರರು ದಿಢೀರನೆ ಎದ್ದುಕುಳಿತು, ಮುಖ ತೊಳೆದುಕೊಂಡು ಭಸ್ಮಧಾರಣೆ ಮಾಡಿಕೊಂಡರು. ಸಿದ್ಧಾಸನದಲ್ಲಿ ಕುಳಿತು ಕಣ್ಣುಮುಚ್ಚಿ ಪ್ರಣವಮಂತ್ರವನ್ನು ಉಚ್ಚರಿಸಿದರು. ಶರೀರ ಕಂಪಿಸುತ್ತಿತ್ತು. ಅದೇ ವೇಳೆಗೆ ಶಂಕರಲಿಂಗರು ಮನೆಯ ಮುಂದಿನ ಕೋಣೆಯಲ್ಲಿ ಪ್ರಣವಜಪ ಮಾಡುತ್ತಿದ್ದರು. ಯೋಗೀಂದ್ರರ ಶರೀರ ಸ್ವಲ್ಪಹೊತ್ತಿಗೆ ಪಕ್ಕಕ್ಕೆ ವಾಲಿತು. ನೆರೆದಿದ್ದ ಶಿಷ್ಯರು ಇದನ್ನು ಕಂಡು ಅಳತೊಡಗಿದರು. ಮಹಾಗುರುವಿನ ಅಗಲುವಿಕೆಗೆ ದುಃಖಿಸುವುದು ಉಚಿತವಲ್ಲವೆಂದೂ ಅವರು ಬ್ರಾಹ್ಮೀಸ್ಥಿತಿಯಲ್ಲಿದ್ದಾರೆಂದೂ ಶಂಕರಲಿಂಗ ಭಗವಾನರು ಭಕ್ತರಿಗೆ ತಿಳಿಸಿದರು. ನಂತರ ದತ್ತಭಜನೆ ನಡೆಯಿತು.

ಬನವಾಸಿಯಲ್ಲಿದ್ದ ಗುರುಗಳ ಪೂರ್ವಾಶ್ರಮದ ಮಕ್ಕಳಾದ ಗುರುನಾಥರಾಯರು, ಶಿವಮೊಗ್ಗೆಯ ರಂಗಾಜೋಯಿಸರು, ಅಂತರಂಗ ಭಕ್ತ ರಾಮರಾವ್-ಗೌರಮ್ಮ ಇವರಿಗೆಲ್ಲ ತಂತಿ ಸಂದೇಶ ರವಾನೆಯಾಯಿತು. ಪರವೂರುಗಳ ಭಕ್ತರಿಗೂ ದತ್ತರಾಜಯೋಗೀಂದ್ರರ ನಿರ್ಯಾಣದ ವಾರ್ತೆ ತಿಳಿಯಿತು. ಮರುದಿನ ಶುಕ್ರವಾರ ಸಂಜೆ ದೇಹಕ್ಕೆ ಅಭಿಷೇಕ-ಪೂಜಾದಿಗಳು ನಡೆದುವು. ಯೋಗೀಂದ್ರರು ತೋರಿಸಿದ ಜಾಗದಲ್ಲೆ ಮಹಾಸಮಾಧಿ ಮಾಡಲಾಯಿತು. ಸಮಾಧಿಯ ಮೃತ್ತಿಕೆ ಮತ್ತು ಗುರುಗಳ ಶೇಷವಸ್ತ್ರವನ್ನು ತೆಗೆದುಕೊಂಡು ಬನವಾಸಿಗೆ ಹಿಂದಿರುಗಿದ ಗುರುನಾಥರಾಯರು, ವರದಾನದಿಯ ದಂಡೆಯ ಮೇಲಿದ್ದ ಗುಹೆಯಲ್ಲಿ ಅವನ್ನಿಟ್ಟು ಈಶ್ವರಲಿಂಗವನ್ನು ಸ್ಥಾಪಿಸಿದರು. ತರುವಾಯ ಅಲ್ಲೊಂದು ತಾತ್ಕಾಲಿಕ ಪರ್ಣಕುಟಿ ನಿರ್ವಣವಾಯಿತು. ತಿಂಗಳುಗಟ್ಟಲೆ ಭಜನೆ-ಸಪ್ತಾಹ ನಡೆದುವು. ಶಂಕರಲಿಂಗ ಭಗವಾನರು ವಸ್ತ್ರತ್ಯಾಗ ಮಾಡಿ ಗುರುಗಳ ಮಹಾಸಮಾಧಿ ಬಳಿ ಉಳಿದುಕೊಂಡರು. ಮಧ್ಯಕರ್ನಾಟಕದಲ್ಲಿ ದತ್ತಪಂಥದ ಅಂಕುರಾರ್ಪಣೆ ಮಾಡಿ ಸಹಸ್ರಾರು ಜನಕ್ಕೆ ಬ್ರಹ್ಮಬೋಧೆ ಮಾಡಿ, ಬ್ರಹ್ಮೈಕ್ಯರಾದ ಶ್ರೀದತ್ತರಾಜಯೋಗೀಂದ್ರರ ಆಧ್ಯಾತ್ಮಿಕ ಪ್ರಭಾವ ಎಲ್ಲೆಡೆ ಪರಿಮಳದಂತೆ ಪಸರಿಸಿದೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top