Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಕೈವಾರದ ಶ್ರೀನಾರೇಯಣ ಯೋಗೀಂದ್ರರು

Sunday, 16.07.2017, 3:00 AM       No Comments

‘ಕೈವಾರದ ತಾತಯ್ಯ‘ ಎಂದೇ ಜನಜನಿತರಾದ ಶ್ರೀನಾರೇಯಣ ಯೋಗೀಂದ್ರರು ಮಹಾನ್ ಆಧ್ಯಾತ್ಮಿಕ ಸಾಧಕರು. ಭಕ್ತಿಯೋಗದ ಸಗುಣಾರಾಧನೆಯಲ್ಲಿ ಸಾಧನೆಗೆ ತೊಡಗಿ, ತರುವಾಯ ಸಮಾಧಿಯೋಗದ ನಿರ್ಗಣಾರಾಧನೆಯ ಕಡೆಗೆ ತಿರುಗಿ ಸಿದ್ಧಿ ಸಾಧಿಸಿದ ಇವರು ಅಧ್ಯಾತ್ಮದ ಅರಿವು ಮೂಡಿಸಿದ್ದರ ಜತೆಗೆ ಭಕ್ತೋದ್ಧಾರದ ಕೈಂಕರ್ಯವನ್ನೂ ನಿರ್ವಹಿಸಿದ ಮಹಾಪುರುಷರು.

ಕೋಲಾರ ಜಿಲ್ಲೆಯ ಕೈವಾರ, ತಾತಯ್ಯನವರ ಆಧ್ಯಾತ್ಮಿಕ ಕ್ಷೇತ್ರವಾಗಿ ಬೆಳಗಿದ ಐತಿಹಾಸಿಕ ಪ್ರದೇಶ. ಒಂದು ಕಾಲಕ್ಕೆ ‘ಕೈವಾರನಾಡು’ ಎನಿಸಿಕೊಂಡಿತ್ತು, ಸುತ್ತಮುತ್ತಣ ಗ್ರಾಮಗಳನ್ನು ಒಳಗೊಂಡು ದೇಶೀಯ ಸಂಸ್ಥಾನವಾಗಿಯೂ ವಿರಾಜಮಾನವಾಗಿತ್ತು. ಗಂಗ, ಬಾಣ, ನೊಳಂಬ ಅರಸರ ಗಮನವನ್ನೂ ಸೆಳೆದಿತ್ತು. ಇಲ್ಲಿ ಹೈದರ್-ಟಿಪ್ಪು, ಮರಾಠರ ಹೆಜ್ಜೆಗುರುತುಗಳನ್ನು ಕಾಣಬಹುದು. ಅಮರನಾರಾಯಣ, ಭೀಮಲಿಂಗೇಶ್ವರ ದೇವಾಲಯಗಳು ಇಲ್ಲಿವೆ. ಕೈವಾರವು ಪಂಚಲಿಂಗೇಶ್ವರ ಕ್ಷೇತ್ರವೆನಿಸಿದೆ. ಇಲ್ಲಿನ ಬೆಟ್ಟದಲ್ಲಿ ದುರ್ಗಿ-ಚಾಮುಂಡಿ ದೇವಾಲಯಗಳುಂಟು. ಹೀಗಾಗಿ, ಇದು ಹರಿಹರ-ರಾಮ-ಭಗವತೀ ಕ್ಷೇತ್ರವೆನಿಸಿದೆ.

ಜನನ-ಬಾಲ್ಯ: ಕೋಲಾರ ಜಿಲ್ಲೆಯಲ್ಲಿ ಆಂಧ್ರದ ಹಲವು ಜನಾಂಗಗಳು ಬಹಳ ಕಾಲದಿಂದ ಇವೆ. ಈ ಪೈಕಿ ಬಳೆಬಣಜಿಗರ ಜನಾಂಗವೂ ಒಂದು. ಬಳೆಮಾರುವುದು ಇವರ ಕುಲಕಸುಬು. ಈ ಜನಾಂಗದಲ್ಲಿ ಕೊಂಡಪ್ಪ-ಮುದ್ದಮ್ಮ ಎಂಬ ದಂಪತಿಯಿದ್ದರು. ಕೊಂಡಪ್ಪ ಪರಮ ಸಾತ್ವಿಕ, ಅಮರನಾರಾಯಣನ ಭಕ್ತ. ಪ್ರತಿನಿತ್ಯ ತುಲಸಿ-ಹೂಗಳನ್ನು ಅರ್ಚಕರಿಗೆ ತಂದುಕೊಡದೆ, ಬಳೆಯ ಮಲಾರವನ್ನು ಹೆಗಲಿಗೇರಿಸುತ್ತಿರಲಿಲ್ಲ. ಬಳೆಯು ಅವನ ಪಾಲಿಗೆ ಅಧ್ಯಾತ್ಮಭಾವವೇ ಆಗಿತ್ತೇ ವಿನಾ, ಉದ್ಯೋಗವಾಗಿರಲಿಲ್ಲ. ಇವನಿಗೆ ತಕ್ಕ ಮಡದಿ ಮುದ್ದಮ್ಮ. ಪರಮಸಾಧಿ್ವಾಗಿದ್ದ ಈಕೆ ಪ್ರತಿನಿತ್ಯ ದೈವಚಿಂತನೆ ಮಾಡುತ್ತಿದ್ದುದಲ್ಲದೆ, ಊರಿನ ಎಲ್ಲ ಧಾರ್ವಿುಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದ ಪುಣ್ಯಜೀವಿ! ಈ ದಂಪತಿಗೆ ಬಹುಕಾಲ ಮಕ್ಕಳಾಗಲಿಲ್ಲ. ಸಂತಾನಕ್ಕಾಗಿ ಇಬ್ಬರೂ ಪ್ರತಿನಿತ್ಯ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಅಂದು ನವರಾತ್ರಿ ನಿತ್ಯೋತ್ಸವದ ಕೊನೆಯದಿನ. ಮುದ್ದಮ್ಮ ಪ್ರತಿನಿತ್ಯ ಹೂದಂಡೆಯನ್ನು ಅಮರನಾರಾಯಣನಿಗೆ ಶ್ರದ್ಧೆಯಿಂದ ಅರ್ಪಿಸಿ ಬೇಡಿಕೊಂಡಾಗಿತ್ತು. ಅರ್ಚಕರು ಪುಷ್ಪಪ್ರಸಾದ ಕೊಟ್ಟು ‘ಇಷ್ಟಾರ್ಥ ನೆರವೇರುತ್ತದೆ’ ಎಂದರು. ಅಂದು ರಾತ್ರಿ ಆಕೆಗೆ ಕನಸಾಯಿತು. ಎಲ್ಲಿಂದಲೋ ಓಂಕಾರನಿನಾದ. ಮಿಂಚಿನಂಥ ಪ್ರಭಾಖಂಡ ಹೊಟ್ಟೆಯೊಳಗೆ ಪ್ರವೇಶಿಸಿದ ಅನುಭವ. ಇದನ್ನು ಗಂಡನಿಗೆ ಹೇಳಿದ್ದಕ್ಕೆ ‘ದೈವ ಕಣ್ತೆರೆಯಿತು’ ಎಂದ. ಮುದ್ದಮ್ಮ ಗರ್ಭವತಿಯಾದಳು. ಕ್ರಿ.ಶ. 1726ನೇ ಇಸವಿ, ಪರಾಭವ ಸಂವತ್ಸರ ಫಾಲ್ಗುಣಮಾಸದ ಹುಣ್ಣಿಮೆಯಂದು ಗಂಡುಮಗುವಿಗೆ ಜನ್ಮವಿತ್ತಳು. ಅಮರನಾರಾಯಣ ಪ್ರಸಾದದಿಂದ ಹುಟ್ಟಿದ್ದರಿಂದ ನಾರಾಯಣ ಎಂಬ ನಾಮಕರಣವಾಯಿತು.

ಬಾಲಕ ನಾರಣಪ್ಪ ಎಲ್ಲರನ್ನೂ ಆಕರ್ಷಿಸುತ್ತಿದ್ದ. ಪ್ರತಿನಿತ್ಯ ಅಪ್ಪನ ಜತೆ ತೆರಳಿ ದೇವರಿಗೆ ಹೂವನ್ನು ಅರ್ಪಿಸಿ, ಧ್ಯಾನಮಾಡಿ ಬರುತ್ತಿದ್ದ. ನಂತರ ಕೂಲಿಮಠಕ್ಕೆ ಓದಲು ಹೋಗುತ್ತಿದ್ದ. ಮರಳಿನಲ್ಲಿ ಬೆರಳಿನಿಂದ ತಿದ್ದಿಸಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಕಾಲವದು. ಅದು ದ್ವಿಭಾಷಿಗಳಿದ್ದ ಗಡಿಪ್ರದೇಶವಷ್ಟೆ? ಮನೆ-ಪರಿಸರಗಳಲ್ಲಿ ತೆಲುಗಿನದೇ ಪ್ರಾಧಾನ್ಯ; ವ್ಯವಹಾರಕ್ಕೆ ಕನ್ನಡ. ನಾರಣಪ್ಪ ಕನ್ನಡ-ತೆಲುಗು-ಸಂಸ್ಕೃತ ಭಾಷೆಗಳಲ್ಲಿ ಸಾಮಾನ್ಯ ಶಿಕ್ಷಣ ಪಡೆದ. ಅವರೊಂದು ಕಡೆ ‘ಗೀರ್ವಾಣಾಂಧ್ರಪುಭಾಷಲು ನೇನೆರುಗಾ, ಅಮರಸಿಂಹಂಬನು ಅರ್ಥಲಕ್ಷಣಮು ವಿವರರಂಬು ನೇನೆರುಗಾ’ ಎಂದು ಹೇಳಿಕೊಂಡದ್ದುಂಟು. ಇದು ವಿನಯ ಹಾಗೂ ಸೌಜನ್ಯದ ಮಾತು! ಕನಕ-ಪುರಂದರರ ಕೃತಿಗಳ ಅಭ್ಯಾಸ ಮಾಡಿರುವುದರ ಉಲ್ಲೇಖವೂ ಇದೆ. ಅಧ್ಯಾತ್ಮಚಿಂತನವಿಲ್ಲದ ಸಾಹಿತ್ಯ ಬರೆಯುವವರನ್ನು ‘ಶಾಸ್ತ್ರ ಶೋಧನ ಕವುಲು ಕವುಲು ಕಾದನರಾ’ ಎಂದಿರುವ ಅವರು ಸಾಮಾನ್ಯ ಶಿಕ್ಷಣ ಪಡೆದಿದ್ದರೂ ಅಸಾಮಾನ್ಯ ಬುದ್ಧಿವಂತರಾಗಿದ್ದರು.

ಅಧ್ಯಾತ್ಮ-ಸಂಸಾರ: ಅಧ್ಯಾತ್ಮಶಾಸ್ತ್ರದ ಹಿನ್ನೆಲೆಯಲ್ಲಿ ಪ್ರತಿಯೊಂದನ್ನೂ ತೂಗಿನೋಡುವುದು ನಾರಾಯಣನ ಅಭ್ಯಾಸ. ಹೊರಗಿನ ಬಡತನ-ನೋವು, ಉಪವಾಸ, ಸಾಲ-ಸೋಲಗಳನ್ನು ಕಾಣುತ್ತಲೇ ಒಳಗಿನ ಅಧ್ಯಾತ್ಮದ ಹಸಿವನ್ನು ತಿಳಿಯುತ್ತ ಬೆಳೆದ. ಜನ ಓದಿ ಓದಿ ಸಾಯುವುದಾಯಿತೇ ಹೊರತು ‘ಸಾಯದ ವಿದ್ಯೆ;’ ತಿಳಿಯುತ್ತಿಲ್ಲವಲ್ಲ ಎಂಬ ಕೊರಗು. ಬದುಕನ್ನು ತಿದ್ದುವ ಮಟ್ಟಿಗೆ ನೀತಿಶಾಸ್ತ್ರ ಓದಿಕೊಂಡರೆ ಸಾಕು; ಪ್ರೌಢವ್ಯಾಸಂಗದಿಂದ ಕಾಲಹರಣವೇ ಹೊರತು ಆಧ್ಯಾತ್ಮಿಕಲಾಭ ಇಲ್ಲವೆಂದು ತಿಳಿದಿದ್ದ ನಾರಣಪ್ಪನನ್ನು ತೆಲುಗಿನ ಪೋತನ ಭಾಗವತ ವಾಚನ ಮತ್ತು ವೇಮನಯೋಗಿ ಗೀತಗಳು ಪ್ರಭಾವಿಸಿದ್ದವು. ಎಲ್ಲಾದರೂ ಭಜನೆ, ಕಥಾಕೀರ್ತನೆ, ಕೋಲಾಟ, ಉತ್ಸವ-ಪೂಜೆಗಳಿದ್ದರೆ ಮನೆಯವರ ಕಣ್ಣುತಪ್ಪಿಸಿ ಹಾಜರಾಗಿಬಿಡುತ್ತಿದ್ದ. ಬಿಡುವಾದಾಗೆಲ್ಲ ದೇವಾಲಯದಲ್ಲಿ ಪದ್ಮಾಸನ ಹಾಕಿ ಧ್ಯಾನಸ್ಥನಾಗುತ್ತಿದ್ದ. ಇದು ಹೆತ್ತವರನ್ನು ಚಿಂತೆಗೀಡುಮಾಡಿತು. ಹೀಗೇ ಬಿಟ್ಟರೆ ಸಾಧುಗಳ ಜತೆ ಸೇರುತ್ತಾನೆಂಬ ಭಯ ಇಣುಕಿ, ಇವನಿಗೆ ಆದಷ್ಟು ಬೇಗ ಮದುವೆ ಮಾಡಬೇಕೆಂದುಕೊಂಡರು. ಮದುವೆ ಬೇಡವೆಂದರೂ, ಹೆತ್ತವರ ಆಗ್ರಹಕ್ಕೆ ನಾರಾಯಣ ಮಣಿಯಬೇಕಾಯಿತು. ಹೀಗೆ ಕೈಹಿಡಿದವಳೇ ಮುನಿಯಮ್ಮ. ಕೆಲವು ದಿನಕ್ಕೆ ತಾಯಿ ಮುದ್ದಮ್ಮ ಶೀತಜ್ವರ ಬಾಧೆಯಿಂದ ಮರಣಹೊಂದಿದಳು. ಅಪ್ಪ ಕೊಂಡಪ್ಪನೂ ಅವಳನ್ನು ಹಿಂಬಾಲಿಸಿದ. ನಾರಣಪ್ಪನಿಗೆ ತಬ್ಬಲಿತನದ ಅನುಭವವಾಯಿತು. ಮುನಿಯಮ್ಮನ ಮಾತಿನ ವರಸೆಯೇ ಬದಲಾಯಿತು. ಆಕೆಯ ಮಾತಿನ ಛಡಿಏಟಿಗೆ ನಾರಣಪ್ಪ ನಲುಗಿದರೂ, ದೈವಚಿಂತನೆಯಲ್ಲೇ ಸಂಸಾರದ ನೊಗವನ್ನು ಎಳೆಯಲಾರಂಭಿಸಿದ. ಪೆದ್ದಕೊಂಡಪ್ಪ-ಚಿನ್ನಕೊಂಡಪ್ಪ ಎಂಬ ಗಂಡುಮಕ್ಕಳು, ಮುದ್ದಮ್ಮ ಎಂಬ ಮಗಳು ಜನಿಸಿದರು.

ನಾರಣಪ್ಪ ಬಳೆಮಾರಲು ಹೋದಾಗ ಕೃಷ್ಣಾರ್ಪಣ ಆಗುತ್ತಿದ್ದುದೇ ಹೆಚ್ಚು. ಅಧ್ಯಾತ್ಮಸ್ವಭಾವದ ಅವನಿಗೆ ದುಡ್ಡುಕೊಡುತ್ತಿದ್ದುದು ಕೆಲವರೇ; ಮಿಕ್ಕವರು ‘ಮುಂದಿನ ಬಾರಿ’ ಎನ್ನುತ್ತಿದ್ದರು. ಗಂಡ ಮನೆಗೆ ಬಂದೊಡನೆ ಹೆಂಡತಿಯು ಕಾದಾಡಿ, ಸಂಪಾದನೆಯನ್ನು ಕಿತ್ತುಕೊಳ್ಳುತ್ತಿದ್ದುದೇ ಹೆಚ್ಚು. ಹಣ ಇಲ್ಲದಿರುವಾಗ ಹೀಯಾಳಿಕೆ! ಹೀಗಾಗಿ, ಅನಿವಾರ್ಯವಾಗಿ ಸಾಲ ಮಾಡಬೇಕಾಯಿತು. ಗಂಡನಿಗೆ ಕಾಣದಂತೆ ಮುನಿಯಮ್ಮ ಹಲವರ ಬಳಿ ಸಾಲತಂದದ್ದೂ ಉಂಟು! ಊರಿನ ಶಾನುಭೋಗ ಮಲ್ಲಯ್ಯನಿಗೆ ನಾರಣಪ್ಪನನ್ನು ಕಂಡರೆ ಆಗುತ್ತಿರಲಿಲ್ಲ, ಕಿರುಕುಳ ಕೊಡುತ್ತಲೇ ಇರುತ್ತಿದ್ದ. ನಾರಣಪ್ಪ ಕೆಲವೊಮ್ಮೆ ಮಲ್ಲಯ್ಯನ ಜತೆ ಅಧ್ಯಾತ್ಮ ಸಂಬಂಧವಾಗಿ ರ್ಚಚಿಸುತ್ತಿದ್ದುದೂ ಉಂಟು! ಆಧಾರವಿಲ್ಲದ ಮಾತಿಗೆ ನಾರಣಪ್ಪ ಕಸಿವಿಸಿಗೊಳ್ಳುತ್ತಿದ್ದ. ಇದು ಹೀಗೇ ಬೆಳೆದು ಹೆಮ್ಮರವಾಯಿತು. ಅಧರ್ಮ-ಅನ್ಯಾಯಗಳನ್ನು ಸಹಿಸದ ನಾರಣಪ್ಪ ಅದನ್ನು ಹಲವು ಬಾರಿ ಪ್ರಕಟಪಡಿಸಿದ್ದ. ಒಮ್ಮೆ ಸಾಲಿಗರು, ಬಡ್ಡಿಸಮೇತ ಹಣಕೊಟ್ಟು ಮುಂದಕ್ಕೆ ಹೋಗೆಂದು ಹಠಹಿಡಿದರು. ಇದಕ್ಕೆ ಶಾನುಭೋಗ ಮಲ್ಲಯ್ಯನ ಕುಮ್ಮಕ್ಕಿತ್ತು. ಮನೆ ಜಫ್ತಿಗೆ ಬಂತು. ಸಾಲ ತೀರಿಸಲು ಆಂಧ್ರಪ್ರದೇಶದ ಕಡೆ ಬಳೆವ್ಯಾಪಾರಕ್ಕೆ ಹೊರಟ. ಪಾಪನಪಲ್ಲಿ (ಶ್ರೀನಿವಾಸಪುರ)ಯ ಚಂದ್ರಮೌಳೇಶ್ವರನಿಗೆ ನಮಸ್ಕರಿಸಿ ಪುಂಗನೂರು ಮಾರ್ಗವಾಗಿ ಚಿತ್ತೂರು ಜಿಲ್ಲೆಗೆ ಪ್ರವೇಶಿಸಿದ. ವೆಂಕಟಗಿರಿ ಕಣಿವೆ ಕಾಡುದಾರಿ. ಮಾರ್ಗಮಧ್ಯದಲ್ಲಿ ಹಳ್ಳಿಗಳಿರಲಿಲ್ಲ. ಮಳೆ ಪ್ರಾರಂಭವಾಯಿತು. ದಾರಿಪಕ್ಕ ಗುಹೆಯೊಂದಿದ್ದು, ದೀಪ ಬೆಳಗುತ್ತಿತ್ತು. ಒಳಕ್ಕೆ ಹೋದಾಗ ಧ್ಯಾನಸ್ಥಿತಿಯಲ್ಲಿರುವ ಯೋಗಿಯೊಬ್ಬರ ದರ್ಶನವಾಯಿತು. ಇಲ್ಲಿಂದ ನಾರಣಪ್ಪನ ಬದುಕೇ ಬದಲಾಯಿತು.

ಯೋಗಮಾರ್ಗ: ಪ್ರಾಣಾಯಾಮದಲ್ಲಿದ್ದ ಯೋಗಿಯ ಮುಖದಲ್ಲಿ ದಿವ್ಯತೇಜಸ್ಸಿತ್ತು. ಆತನ ದರ್ಶನದಿಂದಲೇ ನಾರಣಪ್ಪನಿಗೆ ಅಗೋಚರ ದಿವ್ಯತ್ವದ ಅರಿವಾಯಿತು. ಕಣ್ತೆರೆದ ಯೋಗಿ ‘ನಿನಗೇನು ಬೇಕು…. ಲೋಕದ ಧನವೋ? ಜ್ಞಾನಧನವೋ? ಬಂಧನದ ಭೋಗವೋ ಮುಕ್ತಿಯ ಯೋಗವೋ? ಮಾಯೆಯ ಚಮತ್ಕಾರವೋ? ತತ್ತ್ವದ ಸಾಕ್ಷಾತ್ಕಾರವೋ? ಸಗುಣದ ದ್ವೈತವೋ ನಿರ್ಗಣದ ಅದ್ವೈತವೋ?’ ಎಂದು ಕೇಳಿದರು. ನಾರಣಪ್ಪ ‘ನಾನೊಬ್ಬ ಪಾಮರ, ಈ ಯಾವುದನ್ನೂ ತಿಳಿದವನಲ್ಲ; ಉದ್ಧಾರದ ಮಾರ್ಗ ತಿಳಿಸಿ’ ಎಂದು ಬೇಡಿದ. ಆಗ ಆ ಯೋಗಿ, ‘ಸಗುಣ ತತ್ತ್ವಕ್ಕಿಂತ ನಾಮ-ರೂಪದ ದೇವರುಗಳನ್ನು ಮೀರಿದ ಪರಬ್ರಹ್ಮದ ಉಪಾಸನೆ ಮಾಡು. ಅದನ್ನು ಯೋಗಮಾರ್ಗದಿಂದ ತಿಳಿಯಬಹುದು. ನಿನ್ನದು ಕಾರಣಜನ್ಮ. ನೀನು ಉದ್ಧಾರವಾದರಷ್ಟೇ ಸಾಲದು, ನಿನ್ನಿಂದ ಲೋಕವೂ ಉದ್ಧಾರವಾಗಬೇಕು. ಅದಕ್ಕೆ ನೀನು ಮೊದಲು ಜ್ಞಾನಿಯಾಗಬೇಕು. ಸಾಧನೆಯಿಂದ ಜಿತೇಂದ್ರಿಯನಾಗು. ನಂತರ ಘಟಶೋಧನೆಯಿಂದ ಸಿದ್ಧಿಪುರುಷನಾಗಲು ಸಾಧ್ಯವಾಗುತ್ತದೆ. ಕುಂಡಲಿನೀ ಜಾಗರಣ ಯೋಗದಿಂದ ಸುಷುಮ್ನಾಸಿದ್ಧಿ ಗಳಿಸುವ ಪರಮಹಂಸ ನೀನಾಗಬೇಕು. ನಂತರ ಷಟ್ಚಕ್ರಗಳನ್ನು ಭೇದಿಸಿ ಬ್ರಹ್ಮರಂಧ್ರ ಸ್ಥಾನದ ಸಹಸ್ರಾರದಲ್ಲಿ ನಿಂತು ನಾದಬ್ರಹ್ಮಾನಂದವನ್ನು ಅನುಭವಿಸುವ ಜೀವನ್ಮುಕ್ತಿಯ ತಾರಕಬ್ರಹ್ಮನಾಗಬೇಕು’ ಎಂದರು.

ಸಾಧನೆ-ಯೋಗ ಎಂಬುದನ್ನು ಕೇಳಿಲ್ಲದ ತಾನು ಅವನ್ನೆಲ್ಲ ಸಾಧಿಸುವುದು ಹೇಗೆಂದು ನಾರಣಪ್ಪ ಮುಗ್ಧವಾಗಿ ಪ್ರಶ್ನಿಸಿದಾಗ ಯೋಗಿಯು, ‘ಅಜ್ಞಾನವೇ ಮಾಯೆ. ಅದು ತೊಲಗಿದರೆ ಜ್ಞಾನ ತಾನಾಗಿ ಪ್ರಕಾಶಿಸುತ್ತದೆ. ಪ್ರಾರಬ್ಧಕರ್ಮದ ಸಂಬಂಧ ಕಡಿದುಹೋಗಬೇಕಾದರೆ ವೈರಾಗ್ಯ ಮೂಡಬೇಕು. ಬಯಕೆಗಳನ್ನು ತೊರೆದು ಪರಮಾತ್ಮನನ್ನೇ ಗುರುವಾಗಿ ನಂಬಿದರೆ ಅವನು ಯೋಗವಿಧಾನವನ್ನು ಬೋಧಿಸುತ್ತಾನೆ. ಯೋಗಮತವೇ ಶ್ರೇಷ್ಠ. ಅದು ನಿನ್ನನ್ನು ಜ್ಞಾನಯೋಗಿಯನ್ನಾಗಿ ಮಾಡುತ್ತದೆ. ಆಗ ನೀನು ಶಿವಯೋಗಿ, ತಾರಕಯೋಗಿ ಆಗುತ್ತೀಯೆ. ಸಗುಣದ ಕೋಟೆಯ ಮೂಲಕ ನಿರ್ಗಣವೆಂಬ ಬೆಟ್ಟವನ್ನು ಏರುತ್ತೀಯೆ. ನೀನು ರಾಗ-ದ್ವೇಷಾದಿಗಳನ್ನೆಲ್ಲಾ ದೈವದಲ್ಲೇ ಅರ್ಪಿಸು’ ಎಂದು ಹೇಳಿ ನಾರಾಯಣನಿಗೆ ಅಷ್ಟಾಕ್ಷರೀ ಮಂತ್ರಜಪ ಮಾಡಲು ಸೂಚಿಸಿದರು. ಅದು ಸಿದ್ಧಿಸುವುದರ ಕುರುಹು ಕೇಳಿದಾಗ ‘ಬಾಯಲ್ಲಿನ ಬೆಣಚುಕಲ್ಲು ಕಲ್ಲುಸಕ್ಕರೆಯಾದಾಗ ಯೋಗಸಿದ್ಧಿ ದೊರಕಿತೆಂದು ತಿಳಿ’ ಎಂದು ಹೇಳಿ ಯೋಗಶಾಸ್ತ್ರಕ್ಕೆ ಸಂಬಂಧಿಸಿದ ನಾಲ್ಕು ಬಗೆಯ ಯೋಗಸಂಪ್ರದಾಯಗಳನ್ನು ತಿಳಿಸಿಕೊಟ್ಟರು. ತಾರಕ-ಅಮನಸ್ಕಯೋಗ ಭೇದಗಳು, ಪ್ರಾಣಾಪಾನಯೋಗದ ಕುಂಡಲಿನೀ ಜಾಗರಣ, ನಾಡಿಶುದ್ಧಿ- ಇತ್ಯಾದಿಗಳನ್ನು ನಾರಣಪ್ಪನಿಗೆ ತಿಳಿಸಿಕೊಡುವ ಹೊತ್ತಿಗೆ ಅರುಣೋದಯವಾಯಿತು. ನಾರಣಪ್ಪ ಕಣ್ತೆರೆದಾಗ ರಾತ್ರಿ ಕಂಡ ಯೋಗಿ ಅಲ್ಲಿರಲಿಲ್ಲ. ಅಮರನಾರಾಯಣನನ್ನು ಕಾಣುವ ಹಂಬಲ ಹೆಚ್ಚಾಗಿ ಊರಿಗೆ ಹೊರಟ.

ಊರಿಗೆ ಬಂದ ನಾರಣಪ್ಪ ಮನೆಯಲ್ಲಿನ ಕೋಲಾಹಲ, ಸಾಲಿಗರ ಕಿರುಕುಳ ಕಂಡು ರೋಸಿಹೋಗಿ ಊರಿನ ಪಕ್ಕದ ಯೋಗ ನರಸಿಂಹವನಕ್ಕೆ ಬಂದ. ಅದೊಂದು ಭಯಂಕರ ಅರಣ್ಯ. ದೂರದಲ್ಲಿ ಗುಹೆಯೊಂದು ಕಾಣಿಸಿತು. ಮೂರು ದೊಡ್ಡ ಕಲ್ಲುಗುಂಡುಗಳು ಅಲ್ಲಿದ್ದುವು. ಒಂದು ಗುಂಡಿನ ಮೇಲೆ ಯೋಗಾನರಸಿಂಹನ ಆಕೃತಿ ಮೂಡಿತ್ತು. ನಾರಣಪ್ಪ ಒಂದು ಬಂಡೆಯ ಮೇಲೆ ಕುಳಿತ. ಸಂಸಾರದ ಸ್ಮರಣೆ ಬಂದರೂ ಅದರಿಂದ ಬಿಡಿಸಿಕೊಂಡ. ಆತ್ಮಶೋಧನೆಯೇ ಬ್ರಹ್ಮವಿದ್ಯೆ, ಅದನ್ನು ಪಡೆಯಲು ಗುರುಕಾರುಣ್ಯ ಬೇಕೆಂದು ನಿಶ್ಚಯಿಸಿ ಗುರುವನ್ನು ಅರಸಿದ್ದೇ ಅರಸಿದ್ದು. ಆದರೆ, ಸಿಕ್ಕವರೆಲ್ಲ ಲೋಕಭೋಗಕ್ಕೆ ಅಂಟಿಕೊಂಡವರೇ ಹೊರತು ತತ್ತ್ವದರ್ಶಿಗಳಲ್ಲ. ಮೌನೇಯ ಗುರುಗಳನ್ನು ಕಂಡ, ಜ್ಞಾನಿಯಂತೆ ಕಾಣುವ ಗುರುವನ್ನು ಕಂಡ; ಎಲ್ಲರೂ ನರಗುರುಗಳೇ ಆಗಿದ್ದರು.

ಸಾಧನಾಪಥ: ಕೊನೆಗೆ ಕೈವಾರದ ಅಮರನಾರಾಯಣ ದೇವಾಲಯಕ್ಕೆ ಬಂದು ‘ನಿಮ್ಮ ನಾಮಮಂತ್ರ ಧ್ಯಾನ ಕೊಡಬೇಕು ಹರಿಯೇ’ ಎಂದು ನರಸಿಂಹವನಕ್ಕೆ ನಡೆದರು. ಅಲ್ಲಿಯ ಗುಹೆಯ ಶುದ್ಧೀಕರಣಕ್ಕೆ ಮುಂದಾದರು. ಹೊರಗಿಂದ ಬೆಳ್ಳಗಿನ ಬೆಣಚುಕಲ್ಲು ತಂದು ತೊಳೆದು ದವಡೆಯಲ್ಲಿಟ್ಟುಕೊಂಡರು. ಬೈರಾಗಿಯೊಬ್ಬರಿಂದ ದೊರೆತ ಕೃಷ್ಣಾಜಿನದ ಮೇಲೆ ಪದ್ಮಾಸನಸ್ಥರಾಗಿ ಅಷ್ಟಾಕ್ಷರೀ ಮಂತ್ರಜಪ ಪ್ರಾರಂಭಿಸಿದರು. ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾರಂಭಿಸಿದ್ದು ಮಧ್ಯರಾತ್ರಿವರೆಗೂ ಮುಂದುವರಿಯಿತು. ಅವರು ವೈಷ್ಣವ ಅಷ್ಟಾಕ್ಷರೀ ಮಂತ್ರ ಜಪಿಸುವಾಗ ‘ನಾರೇಯಣ’ ಎಂದೇ ಉಚ್ಚರಿತವಾಗುತ್ತಿತ್ತು. ಎಷ್ಟೋ ದಿನಗಳು ಗತಿಸಿದುವು. ಜಪಮಂತ್ರ ಅಂತರ್ಭಾವಗೊಂಡು ತನ್ಮಯತೆಯನ್ನು ಉಂಟುಮಾಡಿತು. ನಂತರ ಅದು ಉಪಾಯಜಪವಾಗಿ ಪರಿವರ್ತಿತವಾಯಿತು. ಮುಂದೆ ಅಮರನಾರಾಯಣ ದೈವದ ಅನುಗ್ರಹದಲ್ಲಿ ನಾರೇಯಣ ಯೋಗಿಯಾದರು. ಮಂತ್ರದೀಕ್ಷೆಯೊಡನೆ ಸಂನ್ಯಾಸದೀಕ್ಷೆಯೂ ನಾರಣಪ್ಪರಿಗೆ ಆಯಿತು. ‘ಸಹಜ ಸಮಾಧಿಯ ಮಾಡಿ-ಪರಂಜ್ಯೋತಿ ಬೆಳಕ ನೋಡಿ’ ಎಂಬ ಅವರ ಮಾತನ್ನೆ ನುಡಿಸಿ ನೋಡಿದರೆ, ಯೋಗಿ ನಾರಣಪ್ಪ ಏರಿದ ಎತ್ತರ ತಿಳಿಯುತ್ತದೆ.

ಶ್ರೀ ನಾರೇಯಣ ಯೋಗಿಗಳು ಸಂನ್ಯಾಸದೀಕ್ಷೆ ಪಡೆದಾಗ ವಯಸ್ಸು 51. ಹೇಮಲಂಬಿ ಸಂವತ್ಸರ 1777ರ ಕ್ರಿಸ್ತವರ್ಷ. ಅವರು ಯೋಗಾನರಸಿಂಹ ಗುಹೆಯಲ್ಲಿ ಮೂರುವರ್ಷ ಅಖಂಡ ತಪಸ್ಸಿನಲ್ಲಿ ಮುಳುಗಿದರು. ಭಕ್ತಿಯೋಗದ ಸಗುಣಾರಾಧನೆಯಲ್ಲಿ ಪ್ರಾರಂಭವಾದ ಆಧ್ಯಾತ್ಮಿಕ ಸಾಧನೆ, ಕ್ರಮಕ್ರಮವಾಗಿ ಸಮಾಧಿಯೋಗದ ನಿರ್ಗಣಾರಾಧನೆಯ ಕಡೆಗೆ ತಿರುಗಿತು. ದಿನಕಳೆದಂತೆ ಅಂತಮುಖ ಸಿದ್ಧಿ ಉಂಟಾಯಿತು. ಬಾಯಲ್ಲಿದ್ದ ಬೆಣಚುಕಲ್ಲು ಕರಗಿತು, ಪರದೇಶ ಸ್ವಾಮಿಗಳು ಹೇಳಿದಂತೆ ಕಲ್ಲುಸಕ್ಕರೆಯಾಯಿತು! ಇದು ಜಡವು ಚೈತನ್ಯವಾಗಿ ಪರಿವರ್ತಿತವಾದ ಸಂಕೇತ. ಅವರು ತಪೋವನಕ್ಕೆ ಬಂದಾಗ ಜನರ ಮುಂದೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ- ಸಾಧನೆಗೆ ವಿಘ್ನವೊದಗುವುದೆಂಬ ಕಾರಣಕ್ಕಾಗಿ. ಆಗಾಗ್ಗೆ ಅಮರನಾರಾಯಣ ದೇವಾಲಯಕ್ಕೆ ಬರುತ್ತಿದ್ದುದುಂಟು. ತಪೋವನದ ಬಳಿಬರುವ ದನಗಾಹಿಗಳನ್ನು ಮಾತಾಡಿಸಿ, ಅಲ್ಲಿದ್ದ ಬೆಣಚುಕಲ್ಲನ್ನು ಆಯ್ದು ಕಲ್ಲುಸಕ್ಕರೆಯೆಂದು ಕೊಡುತ್ತಿದ್ದುದುಂಟು. ಇದು ಊರಿನ ಜನರಿಗೆ ಕರ್ಣಾಕರ್ಣಿಯಾಗಿ ತಿಳಿಯುತ್ತಾ ಬಂದಿತು. ಶಾನುಭೋಗ ಮಲ್ಲಯ್ಯ ಸಾಲದ ಹಣ ವಸೂಲಿಗೆ ಜನರೊಂದಿಗೆ ನರಸಿಂಹಗವಿಯ ಬಳಿ ಬಂದ. ಗುಹೆಯೊಳಗೆ ಯತೀಂದ್ರರು ಧ್ಯಾನಸ್ಥರಾಗಿದ್ದರು, ಎರಡು ಹುಲಿಗಳು ಅವರ ತೊಡೆಮೇಲೆ ತಲೆಯಿಟ್ಟು ಮಲಗಿದ್ದವು. ಇದನ್ನು ಕಂಡ ಮಲ್ಲಯ್ಯ ಮೊದಲಾದವರು ಪರಾರಿಯಾದರು. ಯತೀಂದ್ರರು ಪವಾಡಪುರುಷರೆಂಬುದು ಜನಜನಿತವಾಗಿ ನರಸಿಂಹವನಕ್ಕೆ ಜನ ಬರಲಾರಂಭಿಸಿದರು, ‘ಕೈವಾರದ ತಾತಯ್ಯ’ ಎಂದು ಕರೆಯಲಾರಂಭಿಸಿದರು. ಅವರಿಂದ ಭಜನೆ-ಪ್ರವಚನ ಮಾಡಿಸತೊಡಗಿದರು. ಹೀಗೆ ವಿವಿಧೆಡೆ ಸಂಚರಿಸಿದ ತಾತಯ್ಯ ತಾವು ಭೇಟಿಯಿತ್ತ ಕ್ಷೇತ್ರದೈವಗಳನ್ನು ವರ್ಣಿಸಿ ಸ್ತೋತ್ರರೂಪದ ಕೀರ್ತನೆಗಳನ್ನು ರಚಿಸುತ್ತಿದ್ದರು, ಜನ ಹಾಡುತ್ತಿದ್ದರು.

ನಾರೇಯಣ ಯೋಗಿಗಳ ದೇಶಸಂಚಾರದಿಂದ ಅನೇಕರು ಶಿಷ್ಯರಾದರು. ಹೀಗೆ ಬಂದ ಈಡಿಗ ಸಮುದಾಯದ ನಾಗಮ್ಮನನ್ನು ಮಗಳ ಸ್ಥಾನದಲ್ಲಿಟ್ಟು, ಯತೀಂದ್ರರು ಅಧ್ಯಾತ್ಮ ಮತ್ತು ಯೋಗವಿಷಯಗಳನ್ನು ತಿಳಿಸಿಕೊಟ್ಟರು. ಮುತ್ತಯ್ಯ ಎಂಬ ಮತ್ತೋರ್ವ ಶಿಷ್ಯನಿಗೆ ‘ಮುತ್ತಾರ್ಯ’ ಎಂಬ ಹೆಸರು ನೀಡಿದರು. ಯೋಗಿನಾರೇಯಣರು ಇದ್ದ ಜಾಗದಲ್ಲಿ ಪರ್ಣಕುಟಿ ಕಟ್ಟಲಾಯಿತು. ಜನ ಎಲ್ಲೆಲ್ಲಿಂದಲೊ ಬರಲಾರಂಭಿಸಿದರು, ಕೀರ್ತನ-ಸತ್ಸಂಗ-ಪ್ರವಚನ ನಡೆಯಲಾರಂಭಿಸಿದುವು.

ಬ್ರಹ್ಮೀಭೂತ: ಶ್ರೀ ತಾತಯ್ಯನವರ ದೇಹದ ಶಕ್ತಿ ದಿನೇದಿನೆ ಕುಗ್ಗಿತು. ಆಹಾರ-ನಿದ್ರೆ ಕಡಿಮೆಯಾದುವು. ಭಜನೆ-ಕೀರ್ತನೆ ಹೆಚ್ಚಾದುವು. ಒಮ್ಮೆ ಮುತ್ತಾರ್ಯರು, ತತ್ತ್ವಬೋಧೆಗಳಿಗೆ ಗ್ರಂಥರೂಪ ನೀಡುವಂತೆ ತಾತಯ್ಯನವರನ್ನು ಕೋರಿ, ಅವರು ಹಾಡಿದ ಕೀರ್ತನೆಗಳನ್ನು ಗ್ರಂಥಸ್ಥಗೊಳಿಸಿದರು. ಅಮರ ನಾರೇಯಣ ಶತಕ, ನಾದ ಬ್ರಹ್ಮಾನಂದ ನಾರೇಯಣ ಕವಿ ಶತಕಮು, ಬ್ರಹ್ಮಾಂಡಪುರಿ ಶತಕಮು, ತಾರಕ ಬ್ರಹ್ಮಾನಂದ ದ್ವಯಕಂದ ಶತಕಮು, ಶ್ರೀ ಕೃಷ್ಣಚರಿತ ತತ್ತಾ್ವಮೃತ ಯೋಗಸಾರಮು ಮತ್ತು ಕಾಲಜ್ಞಾನ ಸೇರಿ 9 ಕೃತಿಗಳನ್ನು ತಾತಯ್ಯ ರಚಿಸಿದರು. ಅವರ ಬರಹ ಹೆಚ್ಚಾಗಿ ತೆಲುಗಿನಲ್ಲಿದ್ದು, 18 ಕೀರ್ತನೆಗಳಷ್ಟೇ ಕನ್ನಡದಲ್ಲಿವೆ.

ಕ್ರಿ.ಶ. 1813-14ನೆಯ ಇಸವಿ. ಆಗ ಅವರಿಗೆ 87 ವರ್ಷ. ಶಿಷ್ಯ ಮುತ್ತಯ್ಯನನ್ನು ಉದ್ದೇಶಿಸಿ ಭವಿಷ್ಯದ ಚರಿತವನ್ನು ಹೇಳಿದರು. ಬಿಳಿಯರ ಆಳ್ವಿಕೆ, ದೇಶೀಯ ರಾಜರ ಪತನ, ಅನಾಯಕತ್ವದ ವಾತಾವರಣ, ಲಂಚ, ಕಳ್ಳತನ, ಪ್ರಜೆಗಳ ಕಳವಳ ಮುಂತಾದ ವಿಷಯಗಳನ್ನು ಅವರು 43 ಪದ್ಯಗಳಲ್ಲಿ ಕಾಲಜ್ಞಾನ-ಭವಿಷ್ಯವಾಣಿಯ ಸ್ವರೂಪದಲ್ಲಿ ಹೇಳಿದ್ದಾರೆ. ಅವರ ಬೋಧನೆ ಒಂದು ಜಾತಿ-ವರ್ಗಕ್ಕಷ್ಟೇ ಮೀಸಲಾಗಿರಲಿಲ್ಲ; ಅಧ್ಯಾತ್ಮದ ಹಸಿವು ಇದ್ದವರಿಗೆ ದಾರಿ ತೋರಿಸಿ ಉದ್ಧರಿಸುತ್ತಿದ್ದರು. ಅವರಿಗಾಗ 110 ಸಂವತ್ಸರಗಳು. ಶ್ರೀಹರಿಯ ಪಾದ ಸೇರುವ ಬಯಕೆಯನ್ನು ಶಿಷ್ಯರಿಗೆ ತಿಳಿಸಿ ತಾವಿದ್ದಲ್ಲೇ ಪ್ರದಕ್ಷಿಣೆ ಮಾಡಿದರು. ನಂತರ ಪದ್ಮಾಸನಸ್ಥರಾಗಿ ಇಚ್ಛಾಮರಣದ ಸಾಧನೆಯಂತೆ ದೀರ್ಘ ಪ್ರಣವೋಚ್ಚಾರಣೆ ಮಾಡಿ ಪ್ರಾಣಾಯಾಮ ವಿಧಿ ಕೈಗೊಂಡರು. ಬಾಹ್ಯದೃಷ್ಟಿ ನಾಸಾಗ್ರದಿಂದ ಭ್ರೂಮಧ್ಯದಲ್ಲಿ ನಿಂತಿತು! ಅಂತಮುಖಿಗಳಾದ ಅವರ ಶರೀರದಿಂದ ಓಂಕಾರನಾದ ಝೇಂಕರಿಸಿತು. ಸುತ್ತಲಿದ್ದ ಭಕ್ತರೂ ಶಿಷ್ಯರೂ ‘ಓಂ ನಮೋ ನಾರೇಯಣಾಯ’ ಎನ್ನುತ್ತಿರುವಾಗ ತಾತಯ್ಯನವರ ಬ್ರಹ್ಮರಂಧ್ರ ಭಾಗದ ಮೇಲೆ ದಿವ್ಯಜ್ಯೋತಿಯ ವರ್ತಲ ಗೋಚರಿಸಿತು. ಯೋಗೀಂದ್ರರು ಬ್ರಹ್ಮೀಭೂತರಾದರು. ಆ ಪುಣ್ಯದಿನವೇ ದುಮುಖೀನಾಮ ಸಂವತ್ಸರ ಜ್ಯೇಷ್ಠ ಶುದ್ಧ ತದಿಗೆ, ಕ್ರಿ.ಶ. 1836ನೆಯ ಇಸವಿ. ತಾತಯ್ಯನವರ ಇಚ್ಛೆಯಂತೆ ಅವರು ಸಾಧನೆ ಮಾಡುತ್ತಿದ್ದ ಸ್ಥಳದಲ್ಲೇ ಸಮಾಧಿ ಮಾಡಲಾಯಿತು.

ಕೈವಾರ ಕ್ಷೇತ್ರ ಅಧ್ಯಾತ್ಮ ಸಾಧಕರಿಗೆ ತಪೋವನವೇ ಆಗಿದೆ. ಇಲ್ಲಿ ಬಂದವರು ತಾತಯ್ಯನವರ ಬೋಧನೆಯಿಂದ ಪಾವನರಾಗುತ್ತಿದ್ದಾರೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

ತಾತಯ್ಯ ಬೋಧೆ

‘ಓದಿ ಓದಿ ಸಾಯುವ ವಿದ್ಯೆಯನ್ನು ಸಾಕುಮಾಡಿ, ಸಾಯದ ಅಧ್ಯಾತ್ಮವಿದ್ಯೆ ಓದಿರಿ. ಯೋಗಿಗಳ ಹೆಸರಲ್ಲಿ ಓಡಾಡುವ ಜೋಗಿಗಳ ಬಲೆಗೆ ಬೀಳದಿರಿ. ಒಳ್ಳೆಯ ಬೋಧಗುರುವನ್ನು ಆಶ್ರಯಿಸಿ ಉದ್ಧಾರವಾಗಿರಿ. ಮನಸ್ಸೆಂಬ ಶಕ್ತಿಯಿಂದ ಮಾಯೆಯನ್ನು ಕಡಿದುಹಾಕಿರಿ. ದಶವಿಧ ಪ್ರಣವನಾದವನ್ನು ಕೇಳುತ್ತ ಹಂಸಮಾರ್ಗದಲ್ಲಿ ಸಂಚರಿಸಿ’- ಇದು ಅವರ ಜೀವಬೋಧೆಯ ಸೂತ್ರಸಾರ.

Leave a Reply

Your email address will not be published. Required fields are marked *

Back To Top