Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಗುಣಮಟ್ಟದ ಕಾರ್ಯಕ್ಕೆ ಮಧ್ಯವರ್ತಿಗಳ ಹಂಗೇಕೆ?

Friday, 30.12.2016, 4:00 AM       No Comments

| ಭರತ್​ಲಾಲ್ ಮೀನಾ

ದಕ್ಷ ಅಧಿಕಾರಿಗಳ ಉಪಸ್ಥಿತಿ ಅಥವಾ ಇಲಾಖಾ ಕಣ್ಗಾವಲಿನ ವ್ಯವಸ್ಥೆ ಇರುವೆಡೆಯೆಲ್ಲಾ ಕೆಲಸ/ಕಾಮಗಾರಿಗಳು ಉತ್ತಮವಾಗೇ ನಡೆಯುತ್ತವೆ. ಸಂಸ್ಥೆಯೊಂದರ ಪ್ರಸಿದ್ಧಿಗೆ ಅದರ ಸಮರ್ಥ ಕಾರ್ಯಪಡೆಯೇ ಮೂಲಾಧಾರವಾದರೆ, ಅದಕ್ಷ ಸಿಬ್ಬಂದಿಯಿಂದಾಗಿ ಒಂದಿಡೀ ಸಂಸ್ಥೆಯೇ ದೂಷಣೆಗೊಳಗಾಗುತ್ತದೆ. ಯಶಸ್ಸಿನೆಡೆಗೆ ತುಡಿಯುವವರು ಈ ಬೀಜಮಂತ್ರವನ್ನು ಮರೆಯಬಾರದು.

ಕರ್ನಾಟಕ ಭೂಸೇನಾ ನಿಗಮದಲ್ಲಿ ನಾನು ಸೇವೆ ಸಲ್ಲಿಸಿದ್ದು ಸಂಕ್ಷಿಪ್ತ ಅವಧಿಗಾದರೂ, ಇಲಾಖೆಯಲ್ಲಿ ಅದೊಂದು ಸ್ವಾರಸ್ಯಕರ ಘಟ್ಟವಾಗಿತ್ತು ಎನ್ನಲಡ್ಡಿಯಿಲ್ಲ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಭೂಸೇನಾ ನಿರ್ದೇಶನಾಲಯವಾಗಿ 1971ರಲ್ಲಿ ಶುರುವಾದ ಇದು, 1974ರಲ್ಲಿ ‘ಕರ್ನಾಟಕ ಭೂಸೇನಾ ನಿಗಮ’ ಎಂಬ ಹೆಸರಲ್ಲಿ ಕಾನೂನುಬದ್ಧ ಸಂಸ್ಥೆಯ ಸ್ವರೂಪ ತಳೆಯಿತು. 2008ರ ಆಗಸ್ಟ್​ನಲ್ಲಿ ಇದಕ್ಕೆ ‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ’ (ಕೆಆರ್​ಐಡಿಎಲ್) ಎಂಬುದಾಗಿ ಮರುನಾಮಕರಣ ಮಾಡಲಾಯಿತು. ಇದು ಕರ್ನಾಟಕ ಸರ್ಕಾರದ ಒಂದು ವಿಶಿಷ್ಟ ಸಂಸ್ಥೆಯಾಗಿದ್ದು, ರಾಜ್ಯದಲ್ಲಿನ ಸಿವಿಲ್ ಇಂಜಿನಿಯರಿಂಗ್ ನಿರ್ವಣಕಾರ್ಯ ಮತ್ತು ಸ್ವತ್ತುಗಳ ಸೃಷ್ಟಿಯಲ್ಲಿ ತೊಡಗಿಸಿಕೊಂಡಿದೆ.

ಗ್ರಾಮೀಣ ಜನರಿಗೆ ಉದ್ಯೋಗಾವಕಾಶ: ಗ್ರಾಮೀಣ ಪ್ರದೇಶಗಳ ನಿರುದ್ಯೋಗಿಗಳ ಮತ್ತು ಅಸಮರ್ಪಕ ಉದ್ಯೋಗಗಳಲ್ಲಿ ವ್ಯಸ್ತರಾಗಿರುವವರ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಅವರಿಗೆ ಉದ್ಯೋಗಾವಕಾಶ ಒದಗಿಸುವುದು ಕೆಆರ್​ಐಡಿಎಲ್​ನ ಉದ್ದೇಶ; ಹೀಗಾಗಿ, ಕಾರ್ವಿುಕ-ಕೇಂದ್ರಿತ ಅಥವಾ ಕಾರ್ವಿುಕಾಧಿಕ್ಯದ ಮೂಲಸೌಕರ್ಯ ಕಾಮಗಾರಿಗಳ ಮೇಲೆ ಅದು ಗಮನವನ್ನು ಕೇಂದ್ರೀಕರಿಸುತ್ತದೆ. ಗ್ರಾಮೀಣ ಪ್ರದೇಶಗಳ ಬಡವರ ಶೋಷಣೆ ತಪ್ಪಿಸಲೆಂದು, ಮಧ್ಯವರ್ತಿಗಳ ಅಂದರೆ ಗುತ್ತಿಗೆದಾರರ ಹಂಗಿಲ್ಲದೆ ಗ್ರಾಮೀಣಾಭಿವೃದ್ಧಿ ನಿರ್ಮಾಣ ಕಾಮಗಾರಿಗಳನ್ನು ನೇರವಾಗಿ ಕೈಗೆತ್ತಿಕೊಳ್ಳುವುದು ಇದರ ವೈಶಿಷ್ಟ್ಯ ಇದರಿಂದಾಗಿ ಜನರಿಗೆ ಹಣದ ಪೂರ್ಣಮೌಲ್ಯ/ಪರಿಪೂರ್ಣ ಪ್ರಯೋಜನ ದಕ್ಕಿದಂತಾಗುತ್ತದೆ.

ಇಲಾಖೆಗೆ ನವಚೈತನ್ಯ ತುಂಬುವಿಕೆ: ಇಲಾಖೆಗೆ ನನ್ನ ನಿಯೋಜನೆಯಾದಾಗ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಓಚ್ಟ್ಞಠಿಚkಚ ಖ್ಟಚ್ಞಠಟಚ್ಟಛ್ಞಿ್ಚ ಜ್ಞಿ ಕ್ಠಚ್ಝಿಜ್ಚಿ ಕ್ಟಟ್ಚuಛಿಞಛ್ಞಿಠಿ ಓಖಕಕ) ಕಾಯ್ದೆಯು ಜಾರಿಯಾಯಿತು. ಇದಕ್ಕೂ ಮುಂಚೆ, ಸರ್ಕಾರಿ ಇಲಾಖೆಯು ಏನೇ ಟೆಂಡರುಗಳನ್ನು ನೀಡಿದರೂ, ಅವುಗಳ ನೆರವೇರಿಕೆಯ ನೇರ ಹೊಣೆಗಾರಿಕೆ ಇಲಾಖೆಯದಾಗಿರುತ್ತಿತ್ತು. ಆದರೆ ಕಾಯ್ದೆಯ ಅನುಷ್ಠಾನದ ನಂತರ, ಪ್ರತಿಯೊಂದು ಇಲಾಖೆಯೂ ಟೆಂಡರ್ ಮಾರ್ಗವನ್ನೇ ಅಳವಡಿಸಿಕೊಳ್ಳಬೇಕಾಗಿ ಬಂತು. ಸಂಸ್ಥೆಗೆ ವಿನಾಯಿತಿ ದೊರೆಯದ ಹೊರತು ಯಾವುದೇ ಇಲಾಖೆಯು ಕಾಮಗಾರಿಯನ್ನು ಯಾರಿಗೇ ಆಗಲಿ ಕೊಡುವಂತಿರಲಿಲ್ಲ. ಈ ವಿನಾಯಿತಿಯೂ ಸುಮಾರು ಒಂದು ವರ್ಷದಷ್ಟು ಸಂಕ್ಷಿಪ್ತ ಅವಧಿಯದಾಗಿರುತ್ತಿತ್ತು. ಇಲಾಖೆಯಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ನಿಗಮದ ಮುಂದಿರುವ ಸವಾಲುಗಳ ಕುರಿತಾಗಿ ಇಂಜಿನಿಯರುಗಳ ಜತೆ ರ್ಚಚಿಸಿದೆ; ಇಲಾಖೆಗೆ ನವಚೈತನ್ಯ ತುಂಬಿ ದೀರ್ಘಕಾಲದವರೆಗೆ ಅದನ್ನು ಸುಸ್ಥಿರವಾಗಿಸುವುದು ಹೇಗೆ ಎಂಬುದರ ಕುರಿತು ವಿಚಾರವಿನಿಮಯ ನಡೆಸಿದೆ. ಇಲಾಖೆಯು ಕೇವಲ ಸರ್ಕಾರಿ ಕಾಮಗಾರಿಗಳನ್ನಷ್ಟೇ ನೆಚ್ಚಿ ಕೂರುವಂತಾಗಬಾರದು ಎಂಬುದು ನನ್ನ ಆಶಯವಾಗಿತ್ತು.

ಭೂಸೇನಾ ನಿಗಮದ ಇತಿಹಾಸ ತುಂಬ ಸ್ವಾರಸ್ಯಕರವಾಗಿದೆ. ಹೆಸರೇ ಸೂಚಿಸುವಂತೆ, ಸೇನೆ ಮತ್ತು ಭೂಮಿ ಸಂಬಂಧಿತ ಕಾರ್ಯಚಟುವಟಿಕೆ ಅದರದ್ದಾಗಬೇಕು. ಆದರೆ, ಭೂ ಅಭಿವೃದ್ಧಿಯೊಂದಿಗಾಗಲೀ ಅಥವಾ ಸೇನೆಯೊಂದಿಗಾಗಲೀ ಅದರದ್ದೇನೂ ಸಂಬಂಧವಿಲ್ಲ ಎಂಬುದು ವಾಸ್ತವ. ಜನರಿಗೆ, ಮಾಜಿ ಸೈನಿಕರಿಗೆ ಮತ್ತು ಇತರರಿಗೆ ಉದ್ಯೋಗ ಒದಗಿಸುವಂಥ ಮತ್ತು ಕೊಡಲ್ಪಟ್ಟ ಯಾವುದೇ ಕಾಮಗಾರಿಗಳಲ್ಲಿ ಗುತ್ತಿಗೆದಾರಿಕೆಯನ್ನು ತಪ್ಪಿಸುವಂಥ ‘ಜನಸೇನಾ’ ಕಾರ್ಯಗಳಲ್ಲಿ ಅದು ತೊಡಗಿಸಿಕೊಳ್ಳಬೇಕಿತ್ತು. ಶಾಲೆ ಅಥವಾ ಅಂಗನವಾಡಿ ಕಟ್ಟಡ ನಿರ್ವಣದಂಥ ಸಣ್ಣಪುಟ್ಟ ಕಾಮಗಾರಿಗಳನ್ನು ಈ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿತ್ತು. ಇದು ಗುತ್ತಿಗೆದಾರಿಕೆಯ ಏಜೆನ್ಸಿ ಆಗಿರಲಿಲ್ಲವಾದ ಕಾರಣ, ಟೆಂಡರುಗಳನ್ನು ಕರೆಯುವ ಅಧಿಕಾರವನ್ನು ಹೊಂದಿರಲಿಲ್ಲ. ನಿಯೋಜಿತ ಕಾಮಗಾರಿಯಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಂಡು, ಸಾಮಗ್ರಿಗಳನ್ನು ಸಂಗ್ರಹಿಸಿ, ಅತ್ಯಂತ ಅಗ್ಗದ ವೆಚ್ಚದಲ್ಲಿ ಪೂರ್ಣಗೊಳಿಸುವ ಮೂಲಕ ಅದನ್ನು ನೇರವಾಗಿ ನಿರ್ವಹಿಸುವುದು ನಿಗಮದ ಬಾಧ್ಯತೆಯಾಗಿತ್ತು. ಜತೆಗೆ, ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಒದಗಿಸುವುದೂ ಅದರ ಉದ್ದೇಶಗಳಲ್ಲಿ ಒಂದಾಗಿತ್ತು. ಒಟ್ಟಾರೆ ಹೇಳುವುದಾದರೆ, ಸದಾಶಯದೊಂದಿಗೇ ಈ ನಿಗಮವನ್ನು ಹುಟ್ಟುಹಾಕಲಾಗಿತ್ತು. ಆದರೆ, ಅದೀಗ ಒಂದು ಗುತ್ತಿಗೆ ಏಜೆನ್ಸಿಯಂತೆ ಮಾರ್ಪಾಡಾಗಿಬಿಟ್ಟಿದೆ. ವಿವಿಧ ಇಲಾಖೆಗಳ ಸಿವಿಲ್ ನಿರ್ಮಾಣ ಕಾಮಗಾರಿಗಳನ್ನು ಅದೀಗ ನಿರ್ವಹಿಸುತ್ತಿದೆ. ಹಣಕಾಸು ಇಲಾಖೆಯು ಕಾಲಾನುಕಾಲಕ್ಕೆ ಈ ನಿಗಮಕ್ಕೆ ವಿನಾಯಿತಿಯನ್ನು ನೀಡುತ್ತದೆ. ಆ ವಿನಾಯಿತಿಯ ಅನುಸಾರ, ವಿವಿಧ ಇಲಾಖೆಗಳಿಂದ ನಿಗಮಕ್ಕೆ ಕಾಮಗಾರಿಗಳು ಸಿಗುತ್ತವೆ.

ದೇಶವ್ಯಾಪಿ ಉಪಸ್ಥಿತಿಗಾಗಿ ಪ್ರೇರಣೆ: ಇಲಾಖೆಗೆ ನಾನು ಸೇರಿಕೊಂಡ ಸಂದರ್ಭದಲ್ಲಿ, ಭೂಸೇನಾ ನಿಗಮವನ್ನು ಹೇಗೆಲ್ಲಾ ವೈವಿಧಿ್ಯಕರಿಸಬಹುದು ಎಂಬ ವಿಷಯದ ಕುರಿತಾಗಿ ಇಂಜಿನಿಯರುಗಳ ಜತೆ ವ್ಯಾಪಕಚರ್ಚೆ ನಡೆಸಲಾಯಿತು. ಖಾಸಗಿ ವ್ಯಕ್ತಿಗಳಿಂದ ಸಿವಿಲ್ ನಿರ್ಮಾಣ ಕಾಮಗಾರಿಗಳನ್ನು ತರುವ ಇಂಜಿನಿಯರುಗಳಿಗಾಗಿ ಪ್ರೋತ್ಸಾಹಧನವನ್ನೂ ಘೊಷಿಸಲಾಯಿತು. ಅಂಥದೊಂದು ಪರಿಕಲ್ಪನೆಯೊಂದಿಗೆ ಸುಧಾರಣೆಗಳ ಕುರಿತು ಚಿಂತನೆ ನಡೆಸಲು ಅಡಿಯಿಟ್ಟೆವು. ಖಾಸಗಿಯಾಗಿ ಸಮಾಲೋಚನಾ ಕಾರ್ಯವನ್ನು ನಡೆಸುವುದಕ್ಕೂ ಅವರನ್ನು ಉತ್ತೇಜಿಸಿದೆವು. ಮನೆಗಳ ನಿರ್ವಣ, ವಿನ್ಯಾಸ, ವಾಸ್ತುಶೈಲಿ ಇತ್ಯಾದಿಗಳ ಕುರಿತು ಯಾರಾದರೂ ಸಲಹೆ ಅಥವಾ ಮಾರ್ಗದರ್ಶನ ಬಯಸಿದಲ್ಲಿ, ಅವನ್ನೂ ಸಂಸ್ಥೆಯು ನೆರವೇರಿಸುವಂತಾಗಬೇಕು ಎಂಬುದು ನಮ್ಮ ಇರಾದೆಯಾಗಿತ್ತು. ಸಾಮಾನ್ಯವಾಗಿ, ಇಂಥ ಕಾರ್ಯಗಳಿಗೆ ಖಾಸಗಿ ಸಮಾಲೋಚಕರು ಹೆಚ್ಚು ಶುಲ್ಕ ವಿಧಿಸುತ್ತಾರೆ; ನಾವಾದರೆ ಕಡಿಮೆ ಶುಲ್ಕ ವಿಧಿಸಬಹುದು ಎಂಬ ಚಿಂತನೆಯೊಂದಿಗೆ ಇಂಜಿನಿಯರುಗಳನ್ನು ಸಜ್ಜುಗೊಳಿಸಿದೆವು.

ಕೆಆರ್​ಐಡಿಎಲ್ ಕಾರ್ಯಾಚರಿಸುತ್ತಿದ್ದುದು ಕರ್ನಾಟಕದಲ್ಲಿ ಮಾತ್ರವೇ. ‘ಉತ್ತರಪ್ರದೇಶ ಸೇತುವೆ ನಿರ್ಮಾಣ ನಿಗಮ’ವು ದೇಶದೆಲ್ಲೆಡೆ ತೊಡಗಿಸಿಕೊಳ್ಳುವ ರೀತಿಯಲ್ಲೇ, ದೇಶದ ಯಾವುದೇ ಭಾಗದಲ್ಲಿನ ಟೆಂಡರ್​ಕಾರ್ಯಗಳಲ್ಲಿ ಕೆಆರ್​ಐಡಿಎಲ್ ಭಾಗವಹಿಸುವಂತಾಗುವುದಕ್ಕೆ ಪ್ರಚೋದಿಸಿದೆವು. ಅವು ನಿಜಕ್ಕೂ ಉತ್ಸಾಹಭರಿತ ದಿನಗಳಾಗಿದ್ದವು. ಚಟುವಟಿಕೆಗಳು ಪ್ರಾರಂಭವಾಗಿ, ಎರಡೇ ತಿಂಗಳೊಳಗೆ ವಹಿವಾಟು ಹಠಾತ್ ಜಿಗಿತವನ್ನು ಕಂಡಿತು. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲರೂ ಹೊಸ ಸವಾಲುಗಳನ್ನು ಸ್ವೀಕರಿಸಲು ಉತ್ಸುಕರಾದರು. ಆದರೆ, ಗೃಹಮಂಡಳಿಗೆ ನನ್ನ ವರ್ಗಾವಣೆಯಾದ ನಂತರ, ಕೆಆರ್​ಐಡಿಎಲ್​ನಲ್ಲಿ ಮಹತ್ತರವಾದುದೇನೂ ಸಂಭವಿಸಲಿಲ್ಲ; ಮತ್ತದೇ ವಾಡಿಕೆಯ ಕೆಲಸಗಳು ಮಾತ್ರವೇ ಅಲ್ಲಿ ಮುಂದುವರಿಯುವಂತಾಯಿತು. ಭೂಸೇನಾ ನಿಗಮದ ಪರಿಕಲ್ಪನೆಯು ವಾಸ್ತವವಾಗಿ ಚೆನ್ನಾಗೇ ಇದೆ; ಮಧ್ಯವರ್ತಿಗಳ ಹಂಗಿಲ್ಲದೆ ಅಥವಾ ಅವರನ್ನು ತೆಗೆದುಹಾಕಿ ಅಗ್ಗದ ದರದಲ್ಲಿ ಕಾಮಗಾರಿ ನಡೆಸುವುದು ಈ ಸಂಸ್ಥೆಯ ವೈಶಿಷ್ಟ್ಯ

ಗುಣಮಟ್ಟದ ನಿರ್ವಣವೆಂಬ ಏಕಮಾತ್ರ ಉದ್ದೇಶ: ಭೂಸೇನೆ ಕೈಗೆತ್ತಿಕೊಂಡು ನಿರ್ವಹಿಸುವ ಕಾಮಗಾರಿ ಕಳಪೆಯಾಗಿರುತ್ತದೆ ಎಂಬುದು ಈ ಸಂಸ್ಥೆಯ ವಿರುದ್ಧದ ಸಾಮಾನ್ಯ ದೂರಾಗಿತ್ತು. ಇಂಥದೊಂದು ಎಣಿಕೆಯನ್ನು ಬದಲಿಸುವುದು ಅನಿವಾರ್ಯವಾಗಿತ್ತು. ದಕ್ಷ ಅಧಿಕಾರಿ ಇರುವೆಡೆಯೆಲ್ಲ, ಆತನ ಅಧೀನದ ಕೆಲಸದ ಗುಣಮಟ್ಟವೂ ಉತ್ತಮವಾಗಿರುತ್ತದೆ. ಒಂದೊಮ್ಮೆ ಸಂಬಂಧಿತ ಸಂಸ್ಥೆಯ ಮೇಲ್ವಿಚಾರಣೆ ಇದ್ದ ಸಂದರ್ಭಗಳಲ್ಲೂ ಕೆಲಸದ ಗುಣಮಟ್ಟ ಉತ್ತಮವಾಗೇ ಇರುತ್ತದೆ. ಇಂಥದೊಂದು ಮೇಲ್ವಿಚಾರಣೆ ಇಲ್ಲದ ಪಕ್ಷದಲ್ಲಿ ಮತ್ತು ಅಧಿಕಾರಿಯೂ ದಕ್ಷನಾಗಿರದಿದ್ದಲ್ಲಿ, ಕೆಲಸ/ಕಾಮಗಾರಿ ಕಳಪೆಯಾಗಿ ಹೊಮ್ಮುವ ಸಾಧ್ಯತೆಯಿದೆ. ಇಂಥದೊಂದು ಎಣಿಕೆಯನ್ನು ಬದಲಿಸುವುದು ಹಾಗೂ ಮೇಲ್ವಿಚಾರಣೆ ಇಲ್ಲದಿದ್ದಾಗಲೂ ಉತ್ತಮ ಗುಣಮಟ್ಟದ ಕೆಲಸ ಹೊಮ್ಮುತ್ತದೆ ಎಂಬುದನ್ನು ಖಾತ್ರಿಪಡಿಸುವುದು ನಮ್ಮೆದುರಿನ ಸವಾಲಾಗಿತ್ತು. ಸೂಕ್ತ ಮೇಲ್ವಿಚಾರಣೆ ಇಲ್ಲದಿದ್ದಾಗ, ಕಟ್ಟಡವು ಹೊರಗಿನಿಂದ ಆಕರ್ಷಕವಾಗಿ ಕಾಣಿಸಬಹುದು; ಆದರೆ ಮಳೆಗಾಲದಲ್ಲಿ ಅದು ಸೋರಬಹುದು ಅಥವಾ ಆಂತರಿಕವಾಗಿ ಕಟ್ಟಡವು ಸದೃಢವಾಗಿಲ್ಲದಿರಬಹುದು. ಮರಗೆಲಸವೂ ಕಳಪೆಯಾಗಿರಬಹುದು. ನಿಗಮದ ವಿರುದ್ಧದ ಬಹುತೇಕ ದೂರುಗಳು ಇದೇ ತೆರನಾಗಿರುತ್ತಿದ್ದವು.

ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ಅಗತ್ಯ: ಕೆಲವೊಂದು ದೂರುಗಳ ಹೊರತಾಗಿಯೂ, ಇಲಾಖೆಯಿಂದ ಒಳ್ಳೆಯ ಕೆಲಸ-ಕಾರ್ಯಗಳೇ ಆಗಿವೆ. ನಿಜ ಹೇಳಬೇಕೆಂದರೆ, ದೆಹಲಿಯಲ್ಲಿ ಕೂಡ ಇದಕ್ಕೆ ಸಮಾನವಾಗಿರುವಂಥದ್ದು ಇಲ್ಲವೆನ್ನಬೇಕು. ‘ನ್ಯಾಷನಲ್ ಬಿಲ್ಡಿಂಗ್ ಕನ್ಸ್​ಟ್ರಕ್ಷನ್ ಕಾಪೋರೇಷನ್ (ಎನ್​ಬಿಸಿಸಿ) ಮತ್ತು ಇತರ ಅನೇಕ ದೊಡ್ಡ ಸಂಸ್ಥೆಗಳು ಅಲ್ಲಿವೆ, ಆದರೆ ದೊಡ್ಡ ಗುತ್ತಿಗೆಗಳನ್ನಷ್ಟೇ ಅವು ತೆಗೆದುಕೊಳ್ಳುತ್ತವೆ. ಅವುಗಳ ಕಾರ್ಯಶೈಲಿ ಮತ್ತು ಕೆಆರ್​ಐಡಿಎಲ್ ಕಾರ್ಯಶೈಲಿಯ ನಡುವೆ ಅಗಾಧ ವ್ಯತ್ಯಾಸವಿದೆ. ಕೆಆರ್​ಐಡಿಎಲ್ ಸಣ್ಣಪುಟ್ಟ ಕಾರ್ಯಭಾರಗಳನ್ನಷ್ಟೇ ಕೈಗೆತ್ತಿಕೊಳ್ಳುತ್ತದೆಯೇ ವಿನಾ, ದೊಡ್ಡ ಕಾಮಗಾರಿಗಳನ್ನಲ್ಲ. ಭೂಸೇನಾ ನಿಗಮಕ್ಕೆ ದಕ್ಕಿರುವ ಪ್ರಸಿದ್ಧಿಗೆ ಅದರ ಅಧಿಕಾರಿಗಳೇ ಮೂಲಾಧಾರವೆನ್ನಬೇಕು. ಅಧಿಕಾರಿಗಳು ದಕ್ಷರಾಗಿದ್ದರೆ, ಉತ್ತಮ ಗುಣಮಟ್ಟದ ಕೆಲಸವೇ ಹೊರಹೊಮ್ಮುತ್ತದೆ, ಪ್ರಸಿದ್ಧಿಯೂ ದಕ್ಕುತ್ತದೆ. ಒಂದೊಮ್ಮೆ ಅಧಿಕಾರಿಗಳು ಅದಕ್ಷರಾಗಿದ್ದರೆ, ಒಂದಿಡೀ ಸಂಸ್ಥೆಯೇ ದೂಷಣೆಗೊಳಗಾಗುತ್ತದೆ.

ನನಗನ್ನಿಸುವಂತೆ, ಕೆಆರ್​ಐಡಿಎಲ್​ನ ಮೂಲಭೂತ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವುದಕ್ಕೆ ವ್ಯಾಪಕ ಅವಕಾಶವಿದೆ. ಸರ್ಕಾರಗಳನ್ನು ಮತ್ತು ವ್ಯವಸ್ಥೆಯನ್ನು ಗುತ್ತಿಗೆದಾರರು ಸುಲಿಯುತ್ತಿರುವಂಥ ಕಾಲಘಟ್ಟದಲ್ಲಿ, ಇಂಥ ಸಂಸ್ಥೆಗಳು ಒಂದೊಮ್ಮೆ ದಕ್ಷತೆಯಿಂದ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಲ್ಲಿ, ಅನೇಕಾನೇಕ ಸಮಸ್ಯೆಗಳಿಗೆ ಪರಿಹಾರೋಪಾಯ ದಕ್ಕುವುದರಲ್ಲಿ ಎರಡು ಮಾತಿಲ್ಲ.

(ಲೇಖಕರು ಹಿರಿಯ ಐಎಎಸ್ ಅಧಿಕಾರಿ)

Leave a Reply

Your email address will not be published. Required fields are marked *

Back To Top