Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಆಡಳಿತ-ಸಾಗರದಲ್ಲಿ ಧುಮುಕಿ ಈಜಿದ ಅನುಭವ…

Friday, 16.12.2016, 2:30 AM       No Comments

 ಕೇಂದ್ರ ಮತ್ತು ರಾಜ್ಯದಲ್ಲಿನ ಕಾರ್ಯನಿರ್ವಹಣೆಯಲ್ಲಿ ಅಗಾಧ ವ್ಯತ್ಯಾಸವಿದೆ. ಕೇಂದ್ರದಲ್ಲಿ ನೀವು ನಿರ್ಣಯ ಕೈಗೊಂಡಾಗ, ಅದು ಅನುಷ್ಠಾನಗೊಳ್ಳುವುದೋ ಇಲ್ಲವೋ ಎಂಬುದರ ಖಾತ್ರಿ ನಿಮಗಿರುವುದಿಲ್ಲ. ನಿರ್ಣಯ ಕೈಗೊಳ್ಳುವಾತ, ಅದನ್ನು ಅನುಷ್ಠಾನಕ್ಕೆ ತರುವಾತನ ನಡುವೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ ರಾಜ್ಯದಲ್ಲಿ ಕೂಲಂಕಷ ಅವಲೋಕನ ಸಾಧ್ಯವಿದೆ.

 

ಕೇಂದ್ರೀಯ ನಿಯೋಜನೆಯ ಮೇರೆಗೆ, ಕೇಂದ್ರ ಉಕ್ಕು ಖಾತೆಯಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬೇಕಾಗಿ ಬಂದಿದ್ದು ನನ್ನಲ್ಲಿ ವ್ಯಾಪಕ ಅರಿವು ಮೂಡಿಸಿತು ಎನ್ನಬೇಕು. ಅಲ್ಲಿಗೆ ತೆರಳುವುದಕ್ಕೆ ಮುಂಚೆ, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದೆ ಮತ್ತು ಇಂಗ್ಲೆಂಡ್​ನಲ್ಲಿನ ಉನ್ನತ ಶಿಕ್ಷಣವನ್ನೂ ಮುಗಿಸಿದ್ದೆ. ಆದರೆ ನವದೆಹಲಿಯಲ್ಲಿನ ಆಡಳಿತ ಕಚೇರಿಯಲ್ಲಿ ನನಗೆ ಕಂಡ ವಾತಾವರಣ, ಬೆಂಗಳೂರಿನಲ್ಲಿ ಕಂಡದ್ದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು- ತೀರಾ ಪುಟ್ಟ ಕ್ಯಾಬಿನ್, ಕಾಲನಿಷ್ಠೆಯಿಲ್ಲದ ಮತ್ತು ಅದಕ್ಷ ಸಿಬ್ಬಂದಿಯನ್ನು ಅಲ್ಲಿ ಕಾಣಬೇಕಾಗಿ ಬಂತು. ತಡವಾಗಿ ಬರುವುದೇ ಅವರ ಪರಿಪಾಠವಾಗಿಬಿಟ್ಟಿತ್ತು. ಜತೆಗೆ ಚಹಾ, ಕಾಫಿ ಇತ್ಯಾದಿ ಸಣ್ಣಪುಟ್ಟ ನೆಪ ಹೇಳಿಕೊಂಡು ಯಾವಾಗ ಬೇಕಿದ್ದರೂ ಕಣ್ಮರೆಯಾಗುವ ಚಾಳಿಯೂ ಅವರಲ್ಲಿ ಬೇರೂರಿತ್ತು.

ವಿಭಿನ್ನ ಕಾರ್ಯಸಂಸ್ಕೃತಿ: ಭೇಟಿಗೆ ಬರುವವರ ಸಂಖ್ಯೆಯೇನೂ ಅಲ್ಲಿ ಹೆಚ್ಚಿರಲಿಲ್ಲ ಎನ್ನಿ; ಕಾರಣ, ಭೇಟಿಗಾರರಿಗೆ ನಿಗದಿಪಡಿಸಲಾಗಿದ್ದ ಸಮಯ ಕಟ್ಟುನಿಟ್ಟಿನದಾಗಿತ್ತು ಮತ್ತು ಅನಪೇಕ್ಷಿತ ಭೇಟಿಗಾರರು ಆಡಳಿತ ಕಚೇರಿ ಪ್ರವೇಶಿಸುವುದಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ನೀಡುತ್ತಿರಲಿಲ್ಲ. ಪ್ರಮುಖ ಕಡತಗಳಿಗೆ ಸಂಬಂಧಿಸಿದ ಕೆಲಸಗಳು ಉಪ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಮಟ್ಟಗಳಲ್ಲಿ ನಡೆಯುವುದೇನೋ ಸರಿ; ಆದರೆ ಅಧೀನ ಕಾರ್ಯದರ್ಶಿ ಹಾಗೂ ಕೆಳಹಂತದ ವಿಭಾಗೀಯ ಅಧಿಕಾರಿಗಳು ಬಹುತೇಕ ವೇಳೆ ಲಭ್ಯರಿರುತ್ತಿರಲಿಲ್ಲ. ಅವರಿಂದ ಕೆಲಸ ತೆಗೆಯುವುದೂ ತೀರಾ ಕಷ್ಟದ ಬಾಬತ್ತಾಗಿತ್ತು. ಕಡತಗಳ ವ್ಯವಸ್ಥೆಯೂ ಭಿನ್ನವಾಗಿತ್ತು- ಅಂದರೆ ಟಿಪ್ಪಣಿ ಹಾಳೆಗಳನ್ನು ಒಂದೆಡೆ ಇಟ್ಟರೆ, ಮುಖ್ಯ ಪತ್ರವ್ಯವಹಾರಗಳ ಕಡತವನ್ನು ಮತ್ತೆಲ್ಲೋ ಇಡುವುದು ಅಲ್ಲಿನ ಅಭ್ಯಾಸವಾಗಿತ್ತು. ಕರ್ನಾಟಕದಲ್ಲಾದರೆ ನಾವು ಎರಡನ್ನೂ ಒಟ್ಟಿಗೆ ಇಡುತ್ತೇವೆ. ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ವ್ಯವಹರಿಸುವುದು ನನ್ನ ಕಾರ್ಯಭಾರವಾಗಿತ್ತು. ನಾನು ಮಾತ್ರವಲ್ಲದೆ, ಇತರ ಉಪ ಕಾರ್ಯದರ್ಶಿಗಳೂ ಅಲ್ಲಿದ್ದು, ಬಹುತೇಕವಾಗಿ ವಿಭಿನ್ನ ರಾಜ್ಯಗಳು ಹಾಗೂ ವಿಭಿನ್ನ ಸೇವಾವಲಯಗಳಿಂದ ಬಂದವರಾಗಿದ್ದರು. ಊಟದ ಸಮಯದಲ್ಲಿ ಭೇಟಿಯಾಗುತ್ತಿದ್ದ ನಾವು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೆವು. ಭಾರತ ಸರ್ಕಾರದ ಸೇವೆಯಲ್ಲಿರುವವರ ಮತ್ತೊಂದು ಭಿನ್ನತೆಯೆಂದರೆ, ತಮ್ಮ ಹೆಸರು ಹಾಗೂ ಪದನಾಮದ ನಂತರ ಸೇವಾವಲಯದ ಹೆಸರನ್ನು ಅವರು ಹಾಕಿಕೊಳ್ಳುವುದಿಲ್ಲ. ಹೀಗಾಗಿ, ಇವರು ಭಾರತೀಯ ಆಡಳಿತ ಸೇವೆಗೆ ಸೇರಿದವರೇ ಅಥವಾ ಬೇರಾವುದೇ ಸೇವಾವಲಯದವರೇ ಎಂಬುದನ್ನು ಮತ್ತೊಬ್ಬರು ಗುರುತಿಸಲಾಗುತ್ತಿರಲಿಲ್ಲ.

ಸಂಚಾರ ವ್ಯವಸ್ಥೆಯಲ್ಲಿನ ಅವ್ಯವಸ್ಥೆ: ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಿರಲಿಲ್ಲ; ಈ ಏರ್ಪಾಟನ್ನು ಇಂಥ ಅಧಿಕಾರಿಗಳೇ ಮಾಡಿಕೊಳ್ಳಬೇಕಿತ್ತು. ಹೀಗಾಗಿ, ಮೊಟ್ಟಮೊದಲ ಬಾರಿಗೆ ನಾನೊಂದು ವಾಹನವನ್ನು ಖರೀದಿಸಿದೆ- ಅದು ಕೂಡ ಸಾಲ ಮಾಡಿ ಕೊಂಡ ಮಾರುತಿ 800 ಕಾರು. ಇದನ್ನು ನಾನೇ ಓಡಿಸುತ್ತಿದ್ದೆ. ಮುಂಜಾನೆಯಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು, ನಂತರ ಮನೆಗೆ ಹಿಂದಿರುಗಿ, ಕಚೇರಿಗೆ ಹೊರಡಲು ಸಿದ್ಧನಾಗಿ, ತರುವಾಯದಲ್ಲಿ ಸಕಾಲಕ್ಕೆ ಅಲ್ಲಿಗೆ ತಲುಪುವುದು ನನ್ನ ದಿನಚರಿಯಾಗಿತ್ತು. ಗಾಡಿ ಓಡಿಸುವ ವಿಷಯದಲ್ಲಿ ಅಲ್ಲಿನವರದ್ದು ಆತ್ಮಘಾತುಕ ಶೈಲಿ; ಹೀಗಾಗಿ ವಾಹನ ಚಾಲನೆ ಅಲ್ಲಿ ನಿಜಕ್ಕೂ ಸವಾಲೇ. ನೀವೇನೋ ಜಾಗರೂಕತೆಯಿಂದಲೇ ಗಾಡಿ ಓಡಿಸಬಹುದು, ಆದರೆ ಯಾರು ಯಾವಾಗ ಎಲ್ಲಿ ನಿಮಗೆ ಅಪ್ಪಳಿಸುತ್ತಾರೆ ಎಂಬುದೇ ಗೊತ್ತಾಗದಂಥ ಜಾಗವದು! ವಾಹನಗಳು ಪರಸ್ಪರ ತಾಗುವಷ್ಟು ಹತ್ತಿರ ಬರುವ ತನಕ ಅವರು ನಿಂತರೆ ಕೇಳಿ! ಅಲ್ಲಿನ ಜನರಲ್ಲಿ ಆಕ್ರಮಣಶೀಲತೆ ಜಾಸ್ತಿ. ಹೀಗಾಗಿ, ರಸ್ತೆಯಲ್ಲಿ ಉದ್ವಿಗ್ನ ವಾತಾವರಣ ನಿರ್ವಣಗೊಂಡ ಸುದ್ದಿ ಬಹುತೇಕ ಪ್ರತಿದಿನವೂ ಪತ್ರಿಕೆಗಳಲ್ಲಿ ಮಾಮೂಲು. ವಾಹನ ತೂರುವುದಕ್ಕೆ ಜಾಗ ಬಿಡದಿದ್ದರೆ, ಯಾವುದಕ್ಕೂ ಹೇಸದ ವರ್ತನೆ ಅಲ್ಲಿನವರದ್ದು. ಒಟ್ಟಾರೆಯಾಗಿ, ಒಂದಿಡೀ ಸಂಚಾರ ವ್ಯವಸ್ಥೆಯೇ ಅವ್ಯವಸ್ಥೆಯ ಕೂಪವಾಗಿತ್ತು. ಆದರೆ ಈ ವಿಷಯದಲ್ಲಿ, ಹಳೆಯ ದೆಹಲಿಗಿಂತ ನವದೆಹಲಿ ಉತ್ತಮವಾಗಿತ್ತು. ಲಕ್ಷ್ಮೀಬಾಯಿ ನಗರದಲ್ಲಿನ, ಎರಡು ಮಲಗುವ ಕೋಣೆಗಳ ವಸತಿಯೊಂದರಲ್ಲಿ ನಾನು ವಾಸವಾಗಿದ್ದೆ. ವಾರಾಂತ್ಯದಲ್ಲಿ ಅಥವಾ 15 ದಿನಕ್ಕೊಮ್ಮೆ, ರಾಜಸ್ಥಾನದಲ್ಲಿನ ನನ್ನ ಹಳ್ಳಿಗೆ ಕುಟುಂಬದವರೊಂದಿಗೆ ವಾಹನದಲ್ಲಿ ತೆರಳುವುದು ಸಾಮಾನ್ಯವಾಗಿತ್ತು. ನಮ್ಮದು ವಾರದಲ್ಲಿ ಐದು ದಿನಗಳ ಕಚೇರಿ ಕಾರ್ಯನಿರ್ವಹಣೆಯಾದ್ದರಿಂದ, ಸಾಕಷ್ಟು ಕಾಲಾವಕಾಶ ಸಿಗುತ್ತಿತ್ತು.

ಕಡತ ನಿರ್ವಹಣೆಯಲ್ಲಿನ ಉತ್ತಮಿಕೆ: ಕೇಂದ್ರೀಯ ಆಡಳಿತ ಕಚೇರಿಯಲ್ಲಿನ ಕಡತ ನಿರ್ವಹಣಾ ವ್ಯವಸ್ಥೆಯು ಚೆನ್ನಾಗಿತ್ತು. ಹಳೆಯ ದಾಖಲೆಗಳನ್ನು, ಅದರಲ್ಲೂ ವಿಶೇಷವಾಗಿ, ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಂಬಂಧಿಸಿದ ವಿಷಯವಿದ್ದ ಕಡತಗಳ ನಿರ್ವಹಣೆ ಸಮರ್ಪಕವಾಗಿತ್ತು. ಏನಿಲ್ಲವೆಂದರೂ, ಹಿಂದಿನ ಐದು ವರ್ಷಗಳ ಉಲ್ಲೇಖಗಳು- ಅಂದರೆ, ಯಾವ ಪ್ರಶ್ನೆ ಕೇಳಲಾಗಿತ್ತು, ಅದಕ್ಕೆ ದಕ್ಕಿದ ಉತ್ತರವೇನು ಎಂಬೆಲ್ಲ ವಿವರಗಳು ಅಲ್ಲಿ ಲಭ್ಯವಿದ್ದವು. ದೇಶದೆಲ್ಲೆಡೆಯ ಸಂಸದರ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿ ಅಲ್ಲಿ ಸಂಗ್ರಹವಾಗುತ್ತದೆ; ತನ್ಮೂಲಕ ದೇಶದ ಒಟ್ಟಾರೆ ಚಿತ್ರಣ ದಕ್ಕಿಬಿಡುತ್ತದೆ. ನವದೆಹಲಿಯಲ್ಲಿ ವ್ಯವಹರಿಸುವಾಗ, ನೀವು ಧರ್ಮಸೂತ್ರವನ್ನೂ ಪರಿಗಣಿಸಬೇಕಾಗುತ್ತದೆ. ಸಂಪನ್ಮೂಲಗಳ ವಿತರಣೆಯ ವಿಷಯ ಬಂದಾಗ, ಹಂಚಿಕೆಗೆ ಸಂಬಂಧಿಸಿ ಯಾವುದೇ ಲಿಖಿತ ಸೂಚನೆ ಇರುವುದಿಲ್ಲ; ಇಷ್ಟಾಗಿಯೂ ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಲಾಗುತ್ತದೆ, ಸಮತೋಲನ ಕಾಯ್ದುಕೊಳ್ಳಲಾಗುತ್ತದೆ. ಒಟ್ಟಿನಲ್ಲಿ, ಸದರಿ ಆಡಳಿತ ಕಚೇರಿಯಲ್ಲಿನ ವ್ಯವಸ್ಥೆ, ಕಾರ್ಯವಿಧಾನ ಉತ್ತಮವಾಗಿತ್ತು. ಇನ್ನು, ಪ್ರಜಾಪ್ರತಿನಿಧಿಗಳ ಹಸ್ತಕ್ಷೇಪದ ಅನುಭವ ನಮಗಾಗುತ್ತಿದ್ದುದು ಕಡಿಮೆಯೇ; ಅವರೇನಿದ್ದರೂ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿಗಳೊಂದಿಗೆ ಸಾಮಾನ್ಯವಾಗಿ ಮಾತಾಡುತ್ತಿದ್ದರು.

ಆದಾಗ್ಯೂ, ಕೆಲ ಸಂಗತಿಗಳು ನನಗೆ ಹಿಡಿಸಲಿಲ್ಲ. ‘ಸೂಪರ್ ಟೈಮ್ ಸ್ಕೇಲ್’ ದರ್ಜೆಯಲ್ಲಿ ನನಗೆ ಬಡ್ತಿ ನೀಡಲಾಯಿತು. ಒಂದೋ ದೆಹಲಿಯಲ್ಲಿ ಉಳಿಯುವ ಅಥವಾ ತಂತಮ್ಮ ರಾಜ್ಯಕ್ಕೆ ಮರಳುವ ಆಯ್ಕೆಯನ್ನು ಆಗ ನೀಡಲಾಗುತ್ತದೆ. ಅದರಲ್ಲಿ ಕೆಲವೊಂದು ಆರ್ಥಿಕ ಪ್ರಯೋಜನಗಳೂ ಇದ್ದವು. ಆದರೆ, ಒಂದೂವರೆ ವರ್ಷಗಳ ನಂತರ ಕರ್ನಾಟಕಕ್ಕೆ ಮರಳಲು ನಾನು ಆದ್ಯತೆ ನೀಡಿದೆ.

ಅತ್ಯುತ್ತಮ ಪರಿಪಾಠಗಳನ್ನು ಹಂಚಿಕೊಳ್ಳಬೇಕು: ಕೇಂದ್ರ ಮತ್ತು ರಾಜ್ಯದಲ್ಲಿನ ಕಾರ್ಯನಿರ್ವಹಣೆಯ ನಡುವೆ ಅಗಾಧ ವ್ಯತ್ಯಾಸವಿದೆ. ಕೇಂದ್ರದಲ್ಲಿ ನೀವೊಂದು ನಿರ್ಣಯ ಕೈಗೊಂಡಾಗ, ಅದು ಅನುಷ್ಠಾನಗೊಳ್ಳುವುದೋ ಇಲ್ಲವೋ ಎಂಬುದರ ಖಾತ್ರಿ ನಿಮಗಿರುವುದಿಲ್ಲ. ಅದು ರಾಜ್ಯಗಳಿಗೆ ಹೋಗಿ, ಅಲ್ಲಿನ ಯಾರೋ ಒಬ್ಬರು ಅದನ್ನು ಅನುಷ್ಠಾನಗೊಳಿಸುತ್ತಾರೆ. ಹೀಗಾಗಿ ನಿರ್ಣಯ ಕೈಗೊಳ್ಳುವಾತ, ಅದನ್ನು ಅನುಷ್ಠಾನಕ್ಕೆ ತರುವಾತ ಅಥವಾ ಪರಿಶೀಲನೆ ನಡೆಸುವಾತನ ನಡುವೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ ರಾಜ್ಯದಲ್ಲಿ ಹಾಗಲ್ಲ; ಇಲ್ಲಿ ವಿಷಯ-ಪರಿಕಲ್ಪನೆಗೆ ರೂಪನೀಡುವುದಕ್ಕೆ, ನಿರ್ಣಯ ತಳೆಯುವುದಕ್ಕೆ, ಅದನ್ನು ಅಧೀನ ಸಿಬ್ಬಂದಿಗೆ ಕಳಿಸುವುದಕ್ಕೆ ಹಾಗೂ ಅದರ ಅನುಸರಣೆ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ಅವಲೋಕಿಸುವುದಕ್ಕೆ ಸಾಧ್ಯವಿದೆ. ಇಂಥದೊಂದು ಸಂಬಂಧವನ್ನು ಕೇಂದ್ರದಲ್ಲಿ ಕಾಣಲಾಗದು.

ರಾಜ್ಯಗಳಲ್ಲಿ ಹೆಚ್ಚಿನ ಮಟ್ಟದ ಹಸ್ತಕ್ಷೇಪ ಕಂಡುಬರುತ್ತದೆ. ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ ಎಂಬುದನ್ನು ಅರಿತ ಜನರು, ಅದರ ಅನುಷ್ಠಾನದ ಕುರಿತು ಕೇಳಲು ಶುರುವಿಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ, ನಿರ್ಣಯ ತಳೆಯುವಿಕೆಯ ಮೇಲೆ ಪ್ರಭಾವ ಬೀರಲೂ ಅವರು ಯತ್ನಿಸುವುದುಂಟು. ಆಗ ಹಿಮ್ಮಾಹಿತಿ ನೀಡುವಂತೆ ಸಚಿವರೂ ಕೇಳುತ್ತಾರೆ. ಅಲ್ಲಿಗೆ, ನೀವು ಕೈಗೊಂಡ ನಿರ್ಣಯ ಹಾಗೂ ಅನುಷ್ಠಾನಗೊಳಿಸುತ್ತಿರುವ ಸಂಗತಿಯ ನಡುವೆ ಸಂಬಂಧವಿದೆ ಎಂದಾಯ್ತು. ಅದೇ ವೇಳೆಗೆ, ಪ್ರಭಾವಗಳು ಮತ್ತು ಒತ್ತಡಗಳಿಂದಲೂ ನೀವು ತಪ್ಪಿಸಿಕೊಳ್ಳಲಾಗುವುದಿಲ್ಲ ಮತ್ತು ಇಂಥ ವಾತಾವರಣ ಕೇಂದ್ರದಲ್ಲೂ ಇದೆ. ಕೇಂದ್ರದಲ್ಲಿ ಸಾಕಷ್ಟು ಹಳೆಯ ಕಡತಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ; ರಾಜ್ಯದಲ್ಲಾದರೆ ಹಳೆಯ ಕಡತಗಳ ಜಾಡು ಬಹುತೇಕ ಸಿಗುವುದೇ ಇಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಕೇಂದ್ರ ಮತ್ತು ರಾಜ್ಯಗಳಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಅದರದ್ದೇ ಆದ ಸಕಾರಾತ್ಮಕತೆ, ನಕಾರಾತ್ಮಕತೆಗಳಿವೆ. ಹೀಗಾಗಿ ಈ ಪೈಕಿ ಅತ್ಯುತ್ತಮವಾದುದನ್ನಷ್ಟೇ ಆಯ್ದುಕೊಳ್ಳುವ ಅಗತ್ಯವಿದೆ. ಎರಡೂ ಆಡಳಿತ ವ್ಯವಸ್ಥೆಗಳು ತಮ್ಮಲ್ಲಿನ ಉತ್ತಮಿಕೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಅಳವಡಿಸಿಕೊಳ್ಳಲು ಸಾಧ್ಯವಿದೆ.

ವೈಯಕ್ತಿಕ ಅನುಭವ: ವೈಯಕ್ತಿಕ ನೆಲೆಗಟ್ಟಿನಲ್ಲಿಯೂ ನನಗೆ ಉತ್ತಮ ಅನುಭವವಾಯಿತೆನ್ನಬೇಕು. ಸಂಪರ್ಕಜಾಲ ವೃದ್ಧಿಗೆ ಕೇಂದ್ರವು ಸೂಕ್ತ ಸ್ಥಳ. ನೀವು ಬಯಸಿದರೆ, ಮಂತ್ರಿಗಳು, ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯ. ಹಾಗೆ ನೋಡಿದರೆ, ಈ ವಿಷಯದಲ್ಲಿ ಮಹಾನಗರಿ ಬೆಂಗಳೂರು ಕೂಡ ಉತ್ತಮವೇ. ಆದರೆ ಸಣ್ಣಪುಟ್ಟ ರಾಜ್ಯಗಳಲ್ಲಿ ಯಾವುದೇ ಚಟುವಟಿಕೆಯನ್ನು ಕಾಣುವುದೇ ದುಸ್ತರ. ಆಡಳಿತದ ವಿಷಯಕ್ಕೆ ಸಂಬಂಧಿಸಿ ಹೇಳುವುದಾದರೆ, ನವದೆಹಲಿಯಲ್ಲಿ ಕಾರ್ಯನಿರ್ವಹಿಸಿದ್ದು ನನಗೆ ಒಳ್ಳೆಯ ಮಾನ್ಯತೆಯನ್ನೇ ನೀಡಿತೆನ್ನಬೇಕು. ಆದರೆ ದೆಹಲಿಯ ಜೀವನ ನನ್ನ ಕುಟುಂಬಿಕರಾರಿಗೂ ಹಿಡಿಸಲಿಲ್ಲ. ‘ನಾವು ದೆಹಲಿಯಲ್ಲೇ ಉಳಿದುಬಿಡುತ್ತೇವಾ ಅಥವಾ ಬೆಂಗಳೂರಿಗೆ ಮರಳುತ್ತೇವಾ?’ ಎಂದು ಮಕ್ಕಳು ಕೇಳುತ್ತಿದ್ದುದುಂಟು. ಹೀಗಾಗಿ ಬೆಂಗಳೂರಿಗೆ ಮರಳಿ, ರಾಜ್ಯ ಸರ್ಕಾರದ ಅಧಿಕಾರವ್ಯಾಪ್ತಿಗೆ ಸೇರಿಕೊಂಡೆ. ರಾಜ್ಯದಲ್ಲಾದರೆ, ನಿರ್ದೇಶಕ ಎಂಬಾತ ಇಲಾಖಾ ಮುಖ್ಯಸ್ಥನಾಗಿರುತ್ತಾನೆ; ಆದರೆ ಕೇಂದ್ರದಲ್ಲಿ ಹಾಗಲ್ಲ. ಜಂಟಿ ಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿಯ ನಡುವಿನ ಹುದ್ದೆಯೇ ನಿರ್ದೇಶಕನದ್ದು. ಅಲ್ಲಿ ಅದನ್ನು ಉಪ ಕಾರ್ಯದರ್ಶಿ ಎಂದು ಕರೆಯಲಾಗುತ್ತದೆ. ನಿರ್ದಿಷ್ಟ ಕಾರ್ಯಭಾರಗಳನ್ನು ಪೂರ್ಣಗೊಳಿಸಿದ ಕೆಲ ಅಧಿಕಾರಿಗಳನ್ನು ನಿರ್ದೇಶಕರು ಎಂದು ಕರೆಯಲಾಗುತ್ತದೆ. ದೆಹಲಿಯಲ್ಲಿ, ನಿರ್ದೇಶಕನೊಬ್ಬನು ಆಡಳಿತ ಕಚೇರಿಯ ಒಂದು ಭಾಗವಷ್ಟೇ. ಕೇಂದ್ರಕ್ಕೆ ಹೋಲಿಸಿದಾಗ, ಜನರೊಂದಿಗಿನ ಸಂಪರ್ಕಶೀಲತೆ ರಾಜ್ಯದಲ್ಲೇ ಹೆಚ್ಚು. ಕೇಂದ್ರದಲ್ಲಿನ ಆಡಳಿತ ವ್ಯವಸ್ಥೆ ಅದೆಷ್ಟು ಅಗಾಧವೆಂದರೆ, ಅಲ್ಲಿ ಕಾರ್ಯನಿರ್ವಹಿಸುವವರು ಕಳೆದೇಹೋದವರಂತೆ ಅಥವಾ ನಗಣ್ಯರಂತೆ ಕಾಣುತ್ತಾರೆ. ಅದೊಂದು ರೀತಿಯ ಸಮುದ್ರವಿದ್ದಂತೆ. ಆ ಸಮುದ್ರದಲ್ಲಿ ಜಿಗಿದು ಕಾರ್ಯನಿರ್ವಹಿಸಿದ್ದು ನಿಜಕ್ಕೂ ಸ್ವಾರಸ್ಯಕರವಾಗಿತ್ತು, ಮಾಹಿತಿಪೂರ್ಣವಾಗಿತ್ತು.

 

Leave a Reply

Your email address will not be published. Required fields are marked *

Back To Top