Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಮುಖ್ಯಮಂತ್ರಿ ಕಳದೋದ್ನಪ್ಪೊ ಕಥೆಯೊಳಗೊಂದು

Friday, 23.03.2018, 3:03 AM       1 Comment

|ಗಣೇಶ್ ಕಾಸರಗೋಡು

ಇದೊಂದು ಇಂಟರೆಸ್ಟಿಂಗ್ ಸ್ಟೋರಿ. ಇದೇ ಶುಕ್ರವಾರ ತೆರೆಕಾಣಲಿರುವ ‘ಮುಖ್ಯಮಂತ್ರಿ ಕಳದೋದ್ನಪ್ಪೊ’ ಚಿತ್ರಕ್ಕೆ ಸಂಬಂಧಿಸಿದ ಕಥೆಯಿದು. ಈ ಕಥೆಯ ಹೀರೊನ ಹೆಸರು; ಆರ್.ವಿ. ಭದ್ರಯ್ಯ. ಬೆಂಗಳೂರಿನ ಭಾಷ್ಯಂ ಸರ್ಕಲ್​ನಲ್ಲಿರುವ ಬಾಳೆಎಲೆ, ವೀಳ್ಯದೆಲೆ, ಗ್ರಂಥಿಗೆ ಅಂಗಡಿಯ ಓನರ್! ವಿಷಯ ಇದಲ್ಲ, ಒಂದು ಕಾಲದಲ್ಲಿ ಕಲಾಕೇಸರಿ ಉದಯಕುಮಾರ್ ಅವರ ಚೆನ್ನೈ ಮನೆಯ ಅಡುಗೆ ಕೆಲಸ ಮಾಡುತ್ತಿದ್ದ ಭದ್ರಯ್ಯನವರು ಆಮೇಲೆ ಏನಾದರು ಎನ್ನುವುದೇ ಸ್ಟೋರಿ! ಅಂದಹಾಗೆ, ‘ಮುಖ್ಯಮಂತ್ರಿ ಕಳದೋದ್ನಪ್ಪೊ’ ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ, ನಿರ್ಮಾಣದ ಕೆಲಸವನ್ನು ಮಾಡಿರುವ ಆರ್. ಶಿವಕುಮಾರ್ ಅವರೇ ಈ ಭದ್ರಯ್ಯನವರ ಸುಪುತ್ರರು!

ಕಲಾಕೇಸರಿ ಮನೆಯ ಬಾಳೆ ಎಲೆಯ ಕಥೆ!

25 ಬಾಳೆ ಎಲೆ ಕಟ್ಟು, 25 ವೀಳ್ಯದೆಲೆ ಕಟ್ಟು- ಇವು ಭದ್ರಯ್ಯನವರ ಬದುಕನ್ನು ಭದ್ರ ಪಡಿಸಿದ ವಿಷಯಗಳು! ಅವರ ಪೂರ್ತಿ ಹೆಸರು; ಆರ್.ವಿ. ಭದ್ರಯ್ಯ. ‘ಕಲಾಕೇಸರಿ’ ಉದಯಕುಮಾರ್ ಅವರು ಚೆನ್ನೈನಲ್ಲಿ ವಾಸವಿದ್ದಾಗ ಅವರ ಮನೆಯ ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದವರು ಈ ಭದ್ರಯ್ಯ. ಅವರು ಮಾಡುವ ಉಪ್ಪಿಟ್ಟು ಅಂದರೆ ಉದಯಕುಮಾರ್ ಅವರಿಗೆ ಪಂಚಪ್ರಾಣ! ಈ ಕಾರಣಕ್ಕಾಗಿಯೇ ಉದಯಕುಮಾರ್ ಅವರ ಪತ್ನಿ ಸುಶೀಲಮ್ಮ, ಭದ್ರಯ್ಯನವರನ್ನು ಸವತಿಯಂತೆ ಕಾಣುತ್ತಿದ್ದ ದಿನಗಳೂ ಇದ್ದವಂತೆ!

ನೇರವಾಗಿ ವಿಷಯಕ್ಕೆ ಬರುವುದಿದ್ದರೆ; ಆರ್. ವಿ. ಭದ್ರಯ್ಯನವರು ಇದೇ ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ಪುಟ್ಟದೊಂದು ಗ್ರಂಥಿಗೆ ಅಂಗಡಿಯನ್ನಿಟ್ಟುಕೊಂಡಿದ್ದರು. ಮೊದಲೇ ಹೇಳಿದ ಹಾಗೆ ಅಂಗಡಿಯನ್ನು ಆರಂಭಿಸಿದ್ದು ಬಾಳೆಎಲೆ ಮತ್ತು ವೀಳ್ಯದೆಲೆ ಕಟ್ಟುಗಳಿಂದ! ವರ್ಷಾಂತರಗಳಲ್ಲಿ ಅಂಗಡಿ ಬೇರೆ ರೂಪು ಪಡೆದುಕೊಂಡರೂ ಬಾಳೆಎಲೆ ಮತ್ತು ವೀಳ್ಯದೆಲೆಗಳನ್ನು ಅಂಗಡಿಯಲ್ಲಿಟ್ಟುಕೊಳ್ಳುವುದನ್ನು ಮುಂದುವರಿಸಿದ್ದರು. ಅಂಥ ಭದ್ರಯ್ಯನವರು ಕಾಲಾಂತರದಲ್ಲಿ ಬಾಳೆ ಎಲೆ ಭದ್ರಯ್ಯ ಎಂದು ಬದಲಾದದ್ದು ಮಾತ್ರ ಅವರ ಒಟ್ಟು ಬದುಕಿನ ತಿರುಳು!

ಕಥೆ ಆರಂಭವಾಗುವುದೇ ಇಲ್ಲಿಂದ; 1953ರಲ್ಲಿ ಇದೇ ಭದ್ರಯ್ಯನವರ ತಂದೆ ತೀರಿಕೊಂಡರು. ಅನಾಥರಾದ ಅವರು ಬದುಕಿಗಾಗಿ ಉದ್ಯೋಗ ಹುಡುಕುತ್ತ ಚೆನ್ನೈಗೆ ಹೋದರು. ಆ ಕಾಲದಲ್ಲಿ ಖ್ಯಾತರಾಗಿದ್ದ ನಟ ಉದಯಕುಮಾರ್ ಅವರ ಆಶ್ರಯ ಸಿಕ್ಕಿತು. ಆಗ ಉದಯಕುಮಾರ್, ಕಲ್ಯಾಣಕುಮಾರ್ ಮತ್ತು ರಾಜಕುಮಾರ್ ವೃತ್ತಿಬದುಕಿನಲ್ಲಿ ಉತ್ತುಂಗಕ್ಕೇರುತ್ತಿದ್ದ ಕಾಲ. ಉದಯಕುಮಾರ್ ಅವರಿಗೆ ತಮ್ಮ ಎರಡನೇ ಸಂಸಾರದಲ್ಲಿ ವಿಶ್ವವಿಜೇತನೆಂಬ ಮಗು ಹುಟ್ಟಿದ ಸಮಯ. ಆತನ ಲಾಲನೆ ಪೋಷಣೆಯ ಜವಾಬ್ದಾರಿ ಭದ್ರಯ್ಯನವರ ಪಾಲಿಗೆ ಬಿತ್ತು. ಸುಶೀಲಮ್ಮ ಇಡಿಯ ಕುಟುಂಬವನ್ನೇ ಸಂಭಾಳಿಸುತ್ತಿದ್ದ ದಿನಗಳವು. ಭದ್ರಯ್ಯನವರಿಗೆ ಅಲ್ಲೇ ಊಟ, ಅಲ್ಲೇ ನಿದ್ರೆ, ಅಲ್ಲೇ ಬದುಕು! ಉದಯಕುಮಾರ್ ಅವರು ಈ ಭದ್ರಯ್ಯನವರನ್ನು ಎಷ್ಟೊಂದು ಹಚ್ಚಿಕೊಂಡಿದ್ದರೆಂದರೆ, ಸುಶೀಲಮ್ಮ ಇವರ ಮೇಲೆ ಅಸೂಯೆ ಪಡುವಷ್ಟು! ಹಗಲೆಲ್ಲ ದುಡಿಯುವ ಭದ್ರಯ್ಯ ರಾತ್ರಿಯ ಹೊತ್ತು ಉದಯಕುಮಾರ್ ಅವರಿಗೆ ಮಸಾಜ್ ಮಾಡುತ್ತಿದ್ದರು. ಕೈ, ಕಾಲು, ಬೆನ್ನನ್ನು ಚೆನ್ನಾಗಿ ತಿಕ್ಕುತ್ತಿದ್ದರು. ಹಾಗೆ ಎಣ್ಣೆ ಹಾಕಿ ತಿಕ್ಕುತ್ತಿರುವಂತೆಯೇ ಉದಯಕುಮಾರ್ ನಿದ್ದೆಗೆ ಜಾರುತಿದ್ದರು.

ಆ ಸಮಯದಲ್ಲೇ ಇದೇ ‘ಮಹಾ ಸುದಿನ’ ಎಂಬ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ಪ್ರಾರಂಭವಾಯಿತು. ಆದರೆ, ಬಂಡವಾಳದ ಅಭಾವದಿಂದಾಗಿ ಚಿತ್ರೀಕರಣ ಅರ್ಧದಲ್ಲೇ ನಿಂತು ಹೋಯಿತು. ಉದಯಕುಮಾರ್ ಅವರಿಗೆ ಬೇರೆ ಅವಕಾಶಗಳಿರಲಿಲ್ಲ. ವಿಧಿಯಿಲ್ಲದೆ ಗೆಳೆಯರೊಂದಿಗೆ ಸೇರಿಕೊಂಡು ನಾಟಕವಾಡುತ್ತ ಊರಿಂದೂರಿಗೆ ಪ್ರಯಾಣ ಹೊರಟರು. ಆಗಲೂ ಈ ಕುಟುಂಬದ ಜತೆ ಭದ್ರಯ್ಯನವರಿದ್ದರು. ಸೋಮವಾರ ಪೇಟೆ, ಮಡಿಕೇರಿ, ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು, ಮೈಸೂರುಗಳಲ್ಲಿ ನಾಟಕವಾಡುತ್ತ ಮಂಡ್ಯಕ್ಕೆ ಬಂದಾಗ ಭದ್ರಯ್ಯನವರು ಸುಸ್ತು ಹೊಡೆದು ಬಿಟ್ಟಿದ್ದರು. ಈ ರೀತಿ ಊರಿಂದೂರಿಗೆ ಗುಳೆ ಹೊರಡುವ ಬದುಕು ಸಾಕಾಗಿತ್ತು. ಅಷ್ಟು ವರ್ಷಗಳ ಕಾಲ ಅನ್ನ ಹಾಕಿ, ಆಶ್ರಯ ಕೊಟ್ಟು ಸಾಕಿ ಸಲಹಿದ ಧಣಿಗೆ ಒಂದು ಮಾತೂ ಹೇಳದೆ ಉದಯಕುಮಾರ್ ಅವರ ನಾಟಕ ಕಂಪನಿಯಿಂದ ಮಾಯವಾಗಿ ಬೆಂಗಳೂರು ಸೇರಿಕೊಂಡರು ಭದ್ರಯ್ಯ. ಇವರ ನಿಜವಾದ ಬದುಕು ಆರಂಭವಾದದ್ದೇ ಅಲ್ಲಿಂದ. ಕಣ್ಣಿಗೆ ಬಟ್ಟೆ ಕಟ್ಟಿದಂತಾದ ಭದ್ರಯ್ಯನವರು ಮುಂದಿನ ಬದುಕಿಗಾಗಿ ಏನು ಮಾಡುವುದೆಂದು ತಿಳಿಯದೆ ಕಂಗಾಲಾಗಿಬಿಟ್ಟರು. ಆಗ ನೆನಪಾದದ್ದೇ ಬಾಳೆಎಲೆ ಮತ್ತು ವೀಳ್ಯದೆಲೆ! ತಮ್ಮ ಧಣಿ ಉದಯಕುಮಾರ್ ಅವರಿಗೆ ಬಾಳೆಎಲೆಯಲ್ಲಿ ಊಟ ಮಾಡುವುದೆಂದರೆ ತುಂಬ ಇಷ್ಟ. ಊಟದ ನಂತರ ವೀಳ್ಯದೆಲೆ ಜಗಿಯದಿದ್ದರೆ ತಿಂದ ಅನ್ನ ಜೀರ್ಣವಾಗುತ್ತಿರಲಿಲ್ಲ. ಅವರಂಥ ಮಹಾನುಭಾವರು ಬೆಂಗಳೂರಿನಾದ್ಯಂತ ಎಷ್ಟು ಸಾವಿರ ಮಂದಿ ಇದ್ದಾರೋ ಎಂಬ ಲೆಕ್ಕಾಚಾರದೊಂದಿಗೆ ಬಾಳೆಎಲೆ ವ್ಯಾಪಾರ ಶುರು ಮಾಡಲು ಯೋಚಿಸಿದರು. ಇದ್ದಬದ್ದ ದುಡ್ಡನ್ನೆಲ್ಲ ಸೇರಿಸಿ 25 ಬಾಳೆಎಲೆ ಖರೀದಿಸಿ ವ್ಯಾಪಾರ ಆರಂಭಿಸಿ ಬಿಟ್ಟರು. ಜತೆಗೆ 25 ಸಂಖ್ಯೆಯ 5 ಕಟ್ಟು ವೀಳ್ಯದೆಲೆ! ಭದ್ರಯ್ಯನವರು ನಂಬಿದ ರಾಘವೇಂದ್ರ ಸ್ವಾಮಿ ಕೈ ಬಿಡಲಿಲ್ಲ. ಅದೇ ಭಾಷ್ಯಂ ಸರ್ಕಲ್ ಇವರಿಗೆ ಹೊಸ ಬದುಕು ನೀಡಿತು. ವ್ಯಾಪಾರ ಅಭಿವೃದ್ಧಿಯಾಗುತ್ತಿರುವಂತೆಯೇ ಗ್ರಂಥಿಗೆ ಅಂಗಡಿ ಶುರುಮಾಡಿದರು. ಭದ್ರಯ್ಯನವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲವದು! ಬಾಳೆಎಲೆ ಮತ್ತು ವೀಳ್ಯದೆಲೆಯೊಂದಿಗೆ ಆರಂಭಿಸಿದ ವ್ಯಾಪಾರ ನಂತರದ ದಿನಗಳಲ್ಲಿ ಭದ್ರಯ್ಯನವರನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿತು ಎನ್ನುವುದು ಸಿನಿಮಾದ ಚಿತ್ರಕಥೆಯಂತಿರುವ ಬದುಕು! ನ್ಯಾಯಯುತವಾಗಿ ಸಂಪಾದಿಸಿದ ಹಣವನ್ನು ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸತೊಡಗಿದ ಭದ್ರಯ್ಯ ಬೆಂಗಳೂರಿನ ಬಸ್ ಪ್ರಯಾಣಿಕರಿಗೆ ನೆರಳು ನೀಡಲೆಂದು 3-4 ಬಸ್ ಶೆಲ್ಟರ್​ಗಳನ್ನು ಕಟ್ಟಿಸಿದರು. ಬಾಯಾರಿದವರಿಗೆ ನೀರು ಕೊಡಲೆಂದು ಅರವಟ್ಟಿಗೆ ಕಟ್ಟಿಸಿದರು! ಹಸಿದವರಿಗೆ ಅನ್ನ ಕೊಟ್ಟರು. ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಂಚಿದರು…

ಒಂದು ಮುಂಜಾನೆ ಇವೆಲ್ಲವನ್ನೂ ಬಿಟ್ಟು ವಿಧಿವಶರಾದರು ಭದ್ರಯ್ಯ. ಅವರಿಗೊಬ್ಬ ಮಗನಿದ್ದಾನೆ. ಹೆಸರು; ಶಿವಕುಮಾರ್ ಭದ್ರಯ್ಯ. ಪ್ರೀತಿಯಿಂದ, ಶಿವು. ಹೆಸರಿನಲ್ಲಿರುವ ಕುಮಾರ್ ಉದಯ ಕುಮಾರ್ ನೆನಪಿಗಾಗಿಯೂ, ಭದ್ರಯ್ಯ ಅಪ್ಪನ ನೆನಪಿಗಾಗಿಯೂ ಜತೆ ಸೇರಿಕೊಂಡಿತು! ಅಪ್ಪನ ಸಮಾಜ ಸೇವೆಯನ್ನು ಇವರೂ ಮುಂದುವರಿಸಿದ್ದಾರೆ. ಅಂಗಡಿಯನ್ನು ಮತ್ತಷ್ಟು ವಿಸ್ತರಿಸಿ ದೊಡ್ಡ ಮಟ್ಟದ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಶಿವಕುಮಾರ್ ಅವರಿಗೆ ಚಿತ್ರರಂಗ ತಾನಾಗಿಯೇ ತನ್ನತ್ತ ಸೆಳೆದುಬಿಟ್ಟಿದೆ! ವ್ಯಾಪಾರ, ವ್ಯವಹಾರಗಳಲ್ಲಿ ಮುಳುಗಿಹೋದ ಭದ್ರಯ್ಯನವರಿಗೆ ಚಿತ್ರರಂಗ ಆಕರ್ಷಿಸಿರಲಿಲ್ಲ. ಇಷ್ಟಾಗಿ ಚಿತ್ರರಂಗದ ಏಳು ಬೀಳುಗಳನ್ನು ಕಣ್ಣಾರೆ ಕಂಡಿದ್ದ ಭದ್ರಯ್ಯ ಆ ಕಡೆ ತಲೆ ಹಾಕಿ ಮಲಗಿದವರಲ್ಲ. ಆದರೆ, ಮಗ ಶಿವಕುಮಾರ್ ಅವರು ಕಲಾಪೋಷಕರು ಮತ್ತು ಕಲೋಪಾಸಕರು! ಇದೀಗ ಹೊಸ ಟೀಮ್ ಕಟ್ಟಿಕೊಂಡು ಒಂದು ಸಿನಿಮಾ ಮಾಡಿದ್ದಾರೆ. ಹೆಸರು; ‘ಮುಖ್ಯಮಂತ್ರಿ ಕಳದೋದ್ನಪ್ಪೊ’. ಈ ಚಿತ್ರದಲ್ಲಿ ಶಿವಕುಮಾರ್ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ! ಜತೆಗೆ ತಮ್ಮ ಮಗನಿಗೂ ಒಂದು ಪಾತ್ರ ಕೊಟ್ಟಿದ್ದಾರೆ. ಅಪ್ಪ ಸಂಪಾದಿಸಿದ ಹಣದಲ್ಲಿ ಒಂದೊಂದು ಪೈಸೆಯೂ ಹಾಳಾಗದಂತೆ ಶಿವಕುಮಾರ್ ಎಚ್ಚರ ವಹಿಸಿಕೊಂಡಿದ್ದಾರೆ. ಮಿನಿಮಮ್ ಬಜೆಟ್​ನಲ್ಲಿ ಚಿತ್ರ ತಯಾರಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಶಿವಕುಮಾರ್ ಅವರದ್ದು. ಇವರ ಪ್ರೊಡಕ್ಷನ್ ಕಂಪನಿಯ ಹೆಸರು; ಆರ್.ವಿ. ಭದ್ರಯ್ಯ ಬಾಳೆಎಲೆ ಫಿಲ್ಮ್ ಪ್ರೊಡಕ್ಷನ್!

ಈ ಬಗ್ಗೆ ಶಿವಕುಮಾರ್ ಹೇಳುತ್ತಾರೆ; ‘ಅಪ್ಪ ಸಂಪಾದಿಸಿದ ದುಡ್ಡಿನೊಂದಿಗೆ ನನ್ನ ಸಂಪಾದನೆಯ ದುಡ್ಡನ್ನು ಸೇರಿಸಿ ಈ ಚಿತ್ರವನ್ನು ಸಿದ್ಧಪಡಿಸಿದ್ದೇನೆ. ಅಪ್ಪ ಎಷ್ಟೊಂದು ಶ್ರಮಪಟ್ಟು ಕೋಟ್ಯಾಧಿಪತಿಯಾದರು ಎನ್ನುವುದು ನನಗೆ ಗೊತ್ತಿದೆ. ಆ ಹಣಕ್ಕೆ ಅನ್ಯಾಯವಾಗದಂತೆ ಚಿತ್ರ ನಿರ್ಮಾಣ ಮಾಡಿದ್ದೇನೆ. ಜತೆಗೆ ಅಪ್ಪನ ಬದುಕಿನ ಆಸೆಯಂತೆ ಚಿತ್ರೀಕರಣ ಸಮಯದಲ್ಲಿ ನೂರಾರು ಮಂದಿಗೆ ಅನ್ನ ಹಾಕುವ ಭಾಗ್ಯ ನನ್ನದಾಗಿದೆ ಮತ್ತು ಅಪ್ಪ ಮಾಡುತ್ತಿದ್ದ ಸಾಮಾಜಿಕ ಸಹಾಯವನ್ನು ನಾನು ಮುಂದುವರಿಸಿದ್ದೇನೆ’ ಎನ್ನುತ್ತಾರವರು..

One thought on “ಮುಖ್ಯಮಂತ್ರಿ ಕಳದೋದ್ನಪ್ಪೊ ಕಥೆಯೊಳಗೊಂದು

  1. I read this column with interest every Friday. It is gives us the not-so-far-known matters in the film industry. Thank you Mr. Kasargod, thank you Vijayavani

Leave a Reply

Your email address will not be published. Required fields are marked *

Back To Top