Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಹಣ್ಣೆಲೆ ಚಿಗುರಿದಾಗ ಚಿತ್ರಕ್ಕೆ ಐವತ್ತು ವರ್ಷ

Friday, 16.02.2018, 3:04 AM       No Comments

| ಗಣೇಶ್ ಕಾಸರಗೋಡು

ಎಂಥ ವಿಚಿತ್ರ ನೋಡಿ; ಯೋಗ ಮತ್ತು ಯೋಗ್ಯತೆ ಕೂಡಿ ಬಂದರೆ ಯಾರದ್ದೋ ಅವಕಾಶ ಮತ್ಯಾರದ್ದೋ ಪಾಲಾಗಿ ಬಿಡುತ್ತದೆ ಎನ್ನುವ ಸ್ಟೇಟ್​ವೆುಂಟ್​ಗೆ ಸಾಕ್ಷಿಯಾಗಿ ಈ ಘಟನೆ ನಮ್ಮ ಮುಂದಿದೆ! ಇದು ‘ಹಣ್ಣೆಲೆ ಚಿಗುರಿದಾಗ’ ಚಿತ್ರಕ್ಕೆ ಸಂಬಂಧಿಸಿದ ಘಟನೆ. ಈ ಚಿತ್ರಕ್ಕೀಗ ಭರ್ತಿ 50 ವರ್ಷ. 1968ರಲ್ಲಿ ತೆರೆಕಂಡ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಪಿತಾಮಹರೆಂದೇ ಖ್ಯಾತಿ ಪಡೆದ ಆರ್.ನಾಗೇಂದ್ರರಾಯರು ನಿರ್ವಿುಸಬೇಕಾಗಿತ್ತು. ಆದರೆ ನಿರ್ವಿುಸಿದ್ದು ಶ್ರೀಕಾಂತ್ ಶ್ರೀಕಾಂತ್ ಎಂಟರ್​ಪ್ರೖೆಸಸ್ ಸಂಸ್ಥೆಯ ಶ್ರೀಕಾಂತ್ ನಹತಾ ಮತ್ತು ಶ್ರೀಕಾಂತ್ ಪಟೇಲ್!

ಈ ಪವಾಡ ನಡೆದದ್ದು ಹೀಗೆ; ‘ಬೆಳ್ಳಿಮೋಡ’ ಚಿತ್ರಕ್ಕಾಗಿ ಸಂಭಾಷಣೆ ಬರೆಯುವ ಕೆಲಸವನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಸಾಹಿತಿ ಆರ್.ಎನ್.ಜಯಗೋಪಾಲ್ ಅವರಿಗೆ ಒಪ್ಪಿಸಿದ್ದರು. ಒಪ್ಪಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಜಯಗೋಪಾಲ್, ಸಂಭಾಷಣೆ ಬರೆಯುವ ಸಿದ್ಧತೆಗಾಗಿ ತ್ರಿವೇಣಿಯವರ ಎಲ್ಲ ಕಾದಂಬರಿಗಳನ್ನು ಓದಿಕೊಂಡಿದ್ದರು. ಸಂಭಾಷಣೆ ಬರೆಯಲು ಹೊರಟದ್ದು ‘ಬೆಳ್ಳಿಮೋಡ’ ಚಿತ್ರಕ್ಕಾದರೂ ಜಯಗೋಪಾಲ್ ಅವರನ್ನು ಆಕರ್ಷಿಸಿದ್ದು ಅದೇ ತ್ರಿವೇಣಿಯವರು ಬರೆದ ‘ಹಣ್ಣೆಲೆ ಚಿಗುರಿದಾಗ’ ಕಾದಂಬರಿ.

ಈ ಕೃತಿಯನ್ನು ಓದಿದಾಗಲೇ ಇದನ್ನೊಂದು ಸಿನಿಮಾ ಮಾಡಬೇಕೆನ್ನುವ ಯೋಚನೆ ಜಯಗೋಪಾಲ್ ಅವರಿಗೆ ಬಂದಿತ್ತು. ಸಾಧ್ಯವಾದರೆ ಈ ಸಿನಿಮಾವನ್ನು ತಂದೆ ಆರ್.ನಾಗೇಂದ್ರರಾಯರೇ ನಿರ್ವಿುಸಿ, ನಿರ್ದೇಶಿಸಬೇಕೆನ್ನುವ ಆಸೆ ಜಯಗೋಪಾಲ್ ಅವರಿಗಿತ್ತು. ಈ ವಿಚಾರವಾಗಿ ತಂದೆ ಜತೆ ರ್ಚಚಿಸಿದಾಗ ಅವರಿಗೂ ಇದು ಒಪ್ಪಿಗೆಯಾಗಿತ್ತು. ಆದರೆ ಹಣವನ್ನು ಎಲ್ಲಿಂದ ಹೊಂದಿಸೋದು ಎಂಬ ಪ್ರಶ್ನೆ ಕಾಡತೊಡಗಿದಾಗ ಉತ್ತರವಾಗಿ ಕಂಡವರೇ ಫೈನಾನ್ಸಿಯರ್ ಸುಂದರಲಾಲ್ ಮೆಹ್ತಾ. ಅಷ್ಟರಲ್ಲಾಗಲೇ, ಸುಂದರಲಾಲ್ ಅವರು ‘ಮನಸ್ಸಿದ್ದರೆ ಮಾರ್ಗ’ ಎಂಬ ಚಿತ್ರವನ್ನು ನಿರ್ವಿುಸಿದ್ದರು. ಈ ಚಿತ್ರವನ್ನು ಎಂ.ಆರ್. ವಿಠ್ಠಲ್ ನಿರ್ದೇಶಿಸಿದ್ದರು. ವಿಶೇಷವೆಂದರೆ, ತಮ್ಮ ಮುಂದಿನ ಚಿತ್ರ ಕಾದಂಬರಿ ಆಧಾರಿತವಾಗಿರಬೇಕೆನ್ನುವ ಹಠ ವಿಠ್ಠಲ್ ಅವರದ್ದಾಗಿತ್ತು! ಕಾಲ ಕೂಡಿ ಬಂದಿತ್ತು. ನಾಗೇಂದ್ರರಾಯರು ‘ಹಣ್ಣೆಲೆ ಚಿಗುರಿದಾಗ’ ಕಾದಂಬರಿಯನ್ನು ತರುವುದಕ್ಕೂ, ವಿಠ್ಠಲ್ ಅವರು ಕಾದಂಬರಿಯನ್ನೇ ಸಿನಿಮಾ ಮಾಡುವ ಹಠ ಹಿಡಿದದ್ದಕ್ಕೂ ಸರಿಹೋಯಿತು!

ಆದರೆ, ಸುಂದರಲಾಲ್ ಮೆಹ್ತಾ ಇದನ್ನೇ ಬೇರೆ ರೀತಿಯಲ್ಲಿ ಯೋಚಿಸಿದರು; ಈ ಕಾದಂಬರಿಯನ್ನು ತಾವೇ ಯಾಕೆ ಸಿನಿಮಾ ಮಾಡಬಾರದು ಎನ್ನುವುದು ಅವರ ಯೋಚನೆಯಾಗಿತ್ತು. ಮನದಿಂಗಿತವನ್ನು ನಾಗೇಂದ್ರರಾಯರಿಗೆ ಮನಮುಟ್ಟುವಂತೆ ವಿವರಿಸಿದರು. ಈ ಕಾದಂಬರಿಯ ಹಿರಿಯನ ಪಾತ್ರವನ್ನು ನಾಗೇಂದ್ರರಾಯರೇ ಮಾಡಬೇಕೆಂದು ಮೆಹ್ತಾ ಹಠ ಹಿಡಿದರು. ತುಂಬ ಮೃದು ಸ್ವಭಾವದ ನಾಗೇಂದ್ರರಾಯರು ಹಾಗೆಯೇ ಆಗಲೆಂದು ಒಪ್ಪಿದರು. ಅಪ್ಪನೇ ಒಪ್ಪಿದ ಮೇಲೆ ಮಗನದೇನು ತಕರಾರು? ಜಯಗೋಪಾಲ್ ಕೂಡ ಒಪ್ಪಿದರು. ಎಂ.ಆರ್. ವಿಠ್ಠಲ್ ಅವರೇ ನಿರ್ದೇಶಕರೆಂದು ಮೆಹ್ತಾ ಸಾಹೇಬರು ಘೊಷಿಸಿದರು. ಹೀಗಾಗಿ ‘ಹಣ್ಣೆಲೆ ಚಿಗುರಿದಾಗ’ ಚಿತ್ರವನ್ನು ನಿರ್ದೇಶಿಸಬೇಕಾಗಿದ್ದ ನಾಗೇಂದ್ರರಾಯರು ಪ್ರಮುಖ ಪಾತ್ರ ನಿರ್ವಹಿಸುವುದಕ್ಕಷ್ಟೇ ತೃಪ್ತರಾದರು. ತಮ್ಮ ಆಸೆ ಆಕಾಂಕ್ಷೆಗಳನ್ನೆಲ್ಲ ಕಟ್ಟಿಟ್ಟುಕೊಂಡ ಆರ್.ಎನ್. ಜಯಗೋಪಾಲ್ ಅವರು ಬದಲಾದ ಪ್ರಾಜೆಕ್ಟ್ ಪ್ರಕಾರ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆರಚನೆಯ ಕೆಲಸಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಬೇಕಾಯಿತು! ಎಂ.ರಂಗಾರಾವ್ ಅವರು ಅದ್ಭುತವಾದ ಸಂಗೀತ ನೀಡಿ ಚಿತ್ರವನ್ನು ಮತ್ತಷ್ಟು ಎತ್ತರಕ್ಕೇರಿಸಿದರು.

ರಾಜ್​ಕುಮಾರ್ ಅವರ 100ನೇ ಚಿತ್ರ ಇದಾದರೂ, ಈ ಚಿತ್ರದಲ್ಲಿ ಅವರಿಗೆ ನಾಯಕನ ಪಾತ್ರ ಇಲ್ಲದೆ ಇದ್ದುದರಿಂದ ’ಭಾಗ್ಯದ ಬಾಗಿಲು’ ಚಿತ್ರವನ್ನು ಶತಚಿತ್ರವೆಂದು ಘೊಷಿಸಲಾಯಿತು. ಈ ಚಿತ್ರವನ್ನು ನಿರ್ವಿುಸಲು ನಾಗೇಂದ್ರರಾಯರು ತ್ರಿವೇಣಿ ಅವರಿಂದ ಹಕ್ಕು ಪಡೆದಿದ್ದರಾದರೂ ಅದನ್ನು ಶ್ರೀಕಾಂತ್ ಸಂಸ್ಥೆಗೆ ನೀಡಿದರು. ಹೀಗಾಗಿ ಸುಂದರಲಾಲ್ ಬರೀ ಫೈನಾನ್ಸಿಯರ್ ಆಗಿ ಉಳಿಯಬೇಕಾಯಿತು! 78ನೇ ವಯಸ್ಸಿನಲ್ಲಿ ನಾಗೇಂದ್ರರಾಯರು ಈ ಚಿತ್ರದ ನಾಯಕ ನಟನಾಗಿ ಲವಲವಿಕೆಯಿಂದ ನಟಿಸಿದರು. ಹೀಗಾಗಿ ಆ ವರ್ಷದ ‘ಅತ್ಯುತ್ತಮ ನಟ’ ಪ್ರಶಸ್ತಿ ಲಭ್ಯವಾಯಿತು. ಅತ್ಯುತ್ತಮ ನಟಿಯಾಗಿ ಕಲ್ಪನಾ, ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಎಂ. ರಂಗಾರಾವ್ ಮತ್ತು ಪ್ರಥಮ ಅತ್ಯುತ್ತಮ ಚಿತ್ರವೆಂದು ‘ಹಣ್ಣೆಲೆ ಚಿಗುರಿದಾಗ’ ಚಿತ್ರ ಪ್ರಶಸ್ತಿ ಪಡೆಯಿತು.

ವಿಧವಾ ವಿವಾಹ ಮತ್ತು ಸ್ತ್ರೀಸ್ವಾತಂತ್ರ್ಯದ ವಿಚಾರಗಳನ್ನು ಸಮನಾದ ರೀತಿಯಲ್ಲಿ ಬ್ಲೆಂಡ್ ಮಾಡುವಲ್ಲಿ ಎಂ.ಆರ್. ವಿಠ್ಠಲ್ ಯಶಸ್ವಿಯಾದರೆಂದೇ ಹೇಳಬೇಕು. ಬಾಲಮುರಳಿ ಕೃಷ್ಣ ಹಾಡಿದ ‘ಹಾಲಲಿ ಮಿಂದವಳೋ ದಂತದ ಮೈಯವಳೋ..’ ಹಾಡು ದೃಶ್ಯಕಾವ್ಯವಾಗಿ ಮೂಡಿದರೆ, ‘ಹೂವು ಚೆಲುವೆಲ್ಲಾ..’ ಹಾಡು ನಾದ ವೈಭವದಿಂದ ಕಂಗೊಳಿಸಿತು. ವಿಶೇಷವೆಂದರೆ, ಕಾದಂಬರಿ ಬರೆದ ತ್ರಿವೇಣಿಯವರಿಗೆ ಅತ್ಯುತ್ತಮ ಕಥಾ ಲೇಖಕಿ ಪುರಸ್ಕಾರ ಲಭ್ಯವಾಯಿತು.

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top