Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ದೇಶಿ ಷೇರು ಮಾರುಕಟ್ಟೆ ಮೇಲೆ ಫೆಡ್ ಪ್ರಭಾವ

Monday, 12.12.2016, 2:00 AM       No Comments

| ಬಿ.ವಿ.ರುದ್ರಮೂರ್ತಿ

500 ಮತ್ತು 1,000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತ ಭಾರತದ ಷೇರು ಮಾರುಕಟ್ಟೆ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಇದೀಗ ಡಿಸೆಂಬರ್ 13 ಮತ್ತು 14ರಂದು ನಡೆಯಲಿರುವ ಅಮೆರಿಕದ ಫೆಡರಲ್ ಬ್ಯಾಂಕ್​ನ ಸಭೆ ಮುಂದಿನ ನಡೆಯೇನು ಎಂಬುದನ್ನು ನಿರ್ಧರಿಸಲಿದೆ. ಫೆಡರಲ್ ಬ್ಯಾಂಕ್ ಅಧ್ಯಕ್ಷೆ ಜಾನೆಟ್ ಎಲೆನ್ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಬಡ್ಡಿದರವನ್ನು ಶೇ.0.25ರಷ್ಟು ಏರಿಕೆ ಮಾಡುವ ನಿರೀಕ್ಷೆಯಿದೆ. ಅಮೆರಿಕದ ಉದ್ಯೋಗ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ, ಹಣದುಬ್ಬರ ಪ್ರಮಾಣದಲ್ಲಿ ಏರಿಕೆ, ಅಮೆರಿಕ ರಾಜಕೀಯದಲ್ಲಾದ ಬದಲಾವಣೆ ಬಡ್ಡಿದರ ಏರಿಕೆಯ ಎಲ್ಲ ಮುನ್ಸೂಚನೆ ನೀಡಿದೆ. ಆದರೆ ಸಭೆಯ ನಿರ್ಣಯವೇನೆಂದು ತಿಳಿದುಕೊಳ್ಳಲು ಡಿ.14ರವರೆಗೆ ಕಾಯಲೇಬೇಕಿದೆ. ಇದು ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರಲಿದೆ. 500 ಮತ್ತು 1,000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ನವೆಂಬರ್ ತಿಂಗಳೊಂದರಲ್ಲಿಯೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 37,000 ಕೋಟಿ ರೂ. ಮೌಲ್ಯದ ಹೂಡಿಕೆಯನ್ನು ಹಿಂಪಡೆದುಕೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮಾರುಕಟ್ಟೆ ಚೇತರಿಸಿಕೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ.

ನೋಟುಗಳ ಚಲಾವಣೆ ಸ್ಥಗಿತದಿಂದ ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ ಸಿಗುತ್ತಿದೆ. ಸರ್ಕಾರವೂ ಇದಕ್ಕೆ ಪ್ರೋತ್ಸಾಹಿಸುತ್ತಿದ್ದು, ಈಗಾಗಲೇ ಈ ವ್ಯವಸ್ಥೆಯನ್ನು ತಿಳಿದುಕೊಂಡಿರುವವರು ಉಳಿದವರಿಗೂ ತಿಳಿಸಿಕೊಡುವ ಅಗತ್ಯವಿದೆ. ಡಿಜಿಟಲ್ ಮನಿ, ಮೊಬೈಲ್ ವಾಲೆಟ್, ಎಲೆಕ್ಟ್ರಾನಿಕ್ ಟ್ರಾನ್ಸ್​ಫರ್ ಮತ್ತು ವಹಿವಾಟುಗಳಿಗೆ ತಂತ್ರಜ್ಞಾನದ ಬಳಕೆ ಮುಂತಾದವುಗಳ ಬಗ್ಗೆ ಎಲ್ಲರಿಗೂ ಮಾಹಿತಿ ತಲುಪುವಂತಾಗಬೇಕಿದೆ. ದೇಶದಲ್ಲಿ ನಗದುರಹಿತ ಆರ್ಥಿಕತೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಪಣತೊಟ್ಟಿದ್ದು, ಎಲ್ಲರಿಗೂ ಈ ಬಗ್ಗೆ ಜಾಗೃತಿ ಮೂಡಿಸುವುದು ಇದಕ್ಕೆ ಪೂರಕವಾಗಿರಲಿದೆ. ನಗದು ರಹಿತ ಪಾವತಿ ವ್ಯವಸ್ಥೆ ಭ್ರಷ್ಟಾಚಾರ ಮತ್ತು ಕಪ್ಪುಹಣಕ್ಕೆ ಕಡಿವಾಣ ಹಾಕುವುದರಲ್ಲಿ ಸಹಕಾರಿಯಾಗಿದೆ. ಈಗಾಗಲೇ 12 ಲಕ್ಷ ಕೋಟಿ ರೂ.ಗಳಷ್ಟು ಹಣ ಬ್ಯಾಂಕ್​ಗಳಲ್ಲಿ ಜಮೆಯಾಗಿದೆ. ಹಾಗೆಂದು ಬ್ಯಾಂಕ್ ಖಾತೆಗೆ ಜಮೆಯಾಗಿರುವ ಪೂರ್ತಿ ಮೊತ್ತ ಬಿಳಿಹಣ ಅಥವಾ ಆದಾಯ ತೆರಿಗೆ ಅಧಿಕಾರಿಗಳ ತನಿಖೆ ವ್ಯಾಪ್ತಿಗೆ ಬರುವುದಿಲ್ಲ ಎಂದಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ. ಆದರೆ ಸಾಮಾನ್ಯ ಜನರಿಗೆ, ಪ್ರಾಮಾಣಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಘೊಷಿಸಿಲ್ಲ. ರೆಪೋ ದರ ಶೇ.6.25ರಷ್ಟೇ ಇದೆ. ಆರ್​ಬಿಐನ ಈ ಕ್ರಮ ವ್ಯಾಪಾರ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತ, ಫೆಡರಲ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಮತ್ತು ಹಣದುಬ್ಬರ ಕಾರಣದಿಂದ ಆರ್​ಬಿಐ ಬಡ್ಡಿದರದಲ್ಲಿ ಶೇ.0.25ರಷ್ಟಾದರೂ ಇಳಿಕೆ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ ಆರ್​ಬಿಐ ಇದನ್ನು ಸುಳ್ಳು ಮಾಡಿದೆ. ಏರಿಕೆಯಾಗುತ್ತಿರುವ ನಗದು ಮೀಸಲು ಅನುಪಾತ(ಸಿಆರ್​ಆರ್) ಬ್ಯಾಂಕ್​ಗಳಿಗೆ ಕೊಂಚ ನಿರಾಳತೆ ನೀಡಿದೆ. ನಿರೀಕ್ಷಿತ ಹಣದುಬ್ಬರ ಪ್ರಮಾಣ ಶೇ.5ರಷ್ಟೇ ಇದ್ದು ಯಾವುದೇ ಬದಲಾವಣೆಯಾಗಿಲ್ಲ. ಷೇರು ಮಾರುಕಟ್ಟೆ ಹಲವು ಏರಿಳಿತಗಳಿಗೆ ಸಾಕ್ಷಿಯಾಗಲಿದ್ದು, ನಿಫ್ಟಿ 8050ರಿಂದ 8300ರೊಳಗೆ ವಹಿವಾಟು ನಡೆಸಲಿದೆ. ಮುಂದಿನ ದಿನಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಮತ್ತು ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಬಿಡುಗಡೆಯಾಗಲಿದ್ದು, ಇದರ ಮೇಲೆ ಮಾರುಕಟ್ಟೆ ದೃಷ್ಟಿ ನೆಟ್ಟಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮುಂದಿನ ನಡೆ ಮತ್ತು ಫೆಡರಲ್ ಬ್ಯಾಂಕ್ ನಿರ್ಣಯ ಕೂಡ ದೇಶೀಯ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿದೆ. ಬ್ಯಾಂಕ್ ನಿಫ್ಟಿ 18,200ರಿಂದ 18,750ರ ಹಂತದಲ್ಲಿ ವಹಿವಾಟು ನಡೆಸುತ್ತಿದೆ.

Leave a Reply

Your email address will not be published. Required fields are marked *

Back To Top