Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಹೇಮಾವತಿ ಸೆರಗಿನಲ್ಲಿ ನೀರಾವರಿ ಕೆಂಡ!

Thursday, 25.01.2018, 3:05 AM       No Comments

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಹೊರತಾಗಿನ ರಾಜಕಾರಣವೂ ಸಾಕಷ್ಟು ಪ್ರಭಾವ ಹೊಂದಿದೆ. ಇಲ್ಲಿ ‘ಹೇಮಾವತಿ’ ಪಾತ್ರವೇ ಪ್ರಮುಖ. ಶಾಶ್ವತ ನೀರಾವರಿ ಸೌಲಭ್ಯದ ಮಾತುಗಳು ಜನಪ್ರತಿನಿಧಿಗಳ ಬಾಯಿಂದ ಬರುತ್ತಿದೆಯೇ ವಿನಾ ಅನುಷ್ಠಾನಕ್ಕೆ ಬರುತ್ತಿಲ್ಲ. ಹೀಗಾಗಿ ಪ್ರತಿ ಚುನಾವಣೆಗೂ ಇದು ಪ್ರಬಲ ಅಸ್ತ್ರವಾಗುತ್ತಾ ಬಂದಿದೆ. ಜತೆಗೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಪ್ರತಿನಿಧಿಸಿದ್ದ ಹಳೇ ಕ್ಷೇತ್ರ ಚಿಕ್ಕನಾಯಕನಹಳ್ಳಿ ಸಹ ಈ ಸಲದ ಕುತೂಹಲದ ಕಣ. ಸ್ವತಃ ಮಂತ್ರಿಗಳ ಪುತ್ರ ಇಲ್ಲಿ ಸ್ಪರ್ಧಿಸಲಿದ್ದಾರೆಂಬ ಮಾತುಗಳೂ ಕೇಳಿಬಂದಿವೆ. ಗುಬ್ಬಿ, ತುರುವೇಕೆರೆ, ಪಾವಗಡ ಚಿಕ್ಕನಾಯಕನಹಳ್ಳಿ ಕ್ಷೇತ್ರಗಳು ಜೆಡಿಎಸ್ ವಶದಲ್ಲಿದ್ದರೆ, ತಿಪಟೂರು ಮಾತ್ರ ‘ಕೈ’ ಪಾಳಯದಲ್ಲಿದೆ. ಕೆಲ ಕಡೆ ಗೆಲ್ಲಲೇಬೇಕೆಂಬ ಬಿಜೆಪಿ ಹಠಕ್ಕೆ ಬಿದ್ದಿದ್ದು, ರಾಜಕೀಯ ಜಿದ್ದಾಜಿದ್ದಿ ಬಲು ಜೋರಾಗಿದೆ.

ಗುಬ್ಬಿಯಲ್ಲಿ ಯಾರಿಗೆ ಲಡ್ಡು

ಸಿ.ಎಸ್.ಪುರ ಹೋಬಳಿ ತುರುವೇಕೆರೆ ಕ್ಷೇತ್ರಕ್ಕೆ ಸೇರ್ಪಡೆಯಾದ ಬಳಿಕ ಗುಬ್ಬಿ ಲಿಂಗಾಯತರ ಪ್ರಾಬಲ್ಯ ಕ್ಷೇತ್ರವೆನಿಸಿದೆ. ಆದರೂ ಒಕ್ಕಲಿಗ ಸಮುದಾಯದ ಜೆಡಿಎಸ್​ನ ಎಸ್.ಆರ್.ಶ್ರೀನಿವಾಸ್ ಸತತ 4ನೇ ಗೆಲುವಿನ ಕನಸು ಕಾಣುತ್ತಿದ್ದಾರೆ. ಪ್ರಬಲ ಆಡಳಿತ ವಿರೋಧಿ ಅಲೆ ಸುಳಿಗೆ ಸಿಲುಕಿರುವ ಶ್ರೀನಿವಾಸ್​ಗೆ ಕ್ಷೇತ್ರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ದಿನೇದಿನೆ ಬಿಜೆಪಿ ಪ್ರಬಲವಾಗುತ್ತಿದ್ದು, ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಬೇಕಿದೆ. ಜಿ.ಎನ್.ಬೆಟ್ಟಸ್ವಾಮಿ, ಚಂದ್ರಶೇಖರ್ ಬಾಬು (ಗ್ಯಾಸ್​ಬಾಬು), ಹಾಲಿ ಜಿಪಂ ಸದಸ್ಯ ರಾಮಾಂಜಿನಯ್ಯ ಕೂಡ ಸ್ಪರ್ಧಾಕಾಂಕ್ಷಿಗಳು. ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿಯಾದರೆ ಅಚ್ಚರಿ ಪಡುವಂತಿಲ್ಲ. ಎಸ್.ಡಿ. ದಿಲೀಪ್​ಕುಮಾರ್ ಸಂಘಟನೆಯಲ್ಲಿ ಹಿಂದೆಬಿದ್ದಿಲ್ಲ. ಕಾಂಗ್ರೆಸ್ ಸಹ ಶಕ್ತಿಶಾಲಿಯಾಗುತ್ತಿದ್ದು ಬಾಲಾಜಿ ಟ್ರಸ್ಟ್​ನ ಕೆ.ಕುಮಾರ್, ಹೊನ್ನಗಿರಿಗೌಡ ರೇಸ್​ನಲ್ಲಿದ್ದಾರೆ. ಕುಮಾರ್ ಕ್ಷೇತ್ರದೆಲ್ಲೆಡೆ ಚಿರಪರಿಚಿತರಾಗಿದ್ದು ಉತ್ತಮ ಅವಕಾಶವಿದೆ.


ಪಾವಗಡದಲ್ಲಿ ನೀರಾ‘ವರಿ’

ಜಿಲ್ಲೆಯ 2ನೇ ಮೀಸಲು ಕ್ಷೇತ್ರ ಪಾವಗಡ, ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇದೆ. ವಿಷಯುಕ್ತ ಫ್ಲೋರೈಡ್ ನೀರು ಜನರ ಜೀವನವನ್ನೇ ಕಸಿದಿದೆ. 2 ದಶಕಕ್ಕೂ ಹೆಚ್ಚು ಕಾಲ ಶಾಶ್ವತ ನೀರಾವರಿ ಯೋಜನೆ, ಶುದ್ಧ ಕುಡಿಯುವ ನೀರಿನ ಹೋರಾಟ ಈಗಲೂ ಜೀವಂತ. ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆದ್ದ ಇತಿಹಾಸವಿಲ್ಲ. ಯುವಕರ ಗುಳೆ ತಪ್ಪಿಸಲು ಉದ್ಯೋಗ ಸೃಷ್ಟಿ ಆಗಿಲ್ಲ. ಕಾಂಗ್ರೆಸ್ ಟಿಕೆಟ್​ಗೆ ಅಪ್ಪ-ಮಗ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ ವೆಂಕಟರವಣಪ್ಪ, ಅವರ ಪುತ್ರ ಜಿಪಂ ಸದಸ್ಯ ಎಚ್.ವಿ.ವೆಂಕಟೇಶ್ ಇಬ್ಬರಲ್ಲೊಬ್ಬರಿಗೆ ಟಿಕೆಟ್ ಗ್ಯಾರಂಟಿ. ಕಾಂಗ್ರೆಸ್​ನಿಂದ ಜಿ.ಎಂ.ಬಲರಾಮ್ ಮದ್ದೂರಯ್ಯ ಸ್ಪರ್ಧಾಕಾಂಕ್ಷಿಗಳು. ಜೆಡಿಎಸ್​ನಿಂದ ಹಾಲಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಪ್ರಾಬಲ್ಯ ಇಲ್ಲ. ಕೊತ್ತೂರು ಹನುಮಂತರಾಯ, ಕೃಷ್ಣ ನಾಯ್್ಕ ಆಕಾಂಕ್ಷಿಗಳು.


ತುರುವೇಕೆರೆಯಲ್ಲಿ ಎಂ‘ಟೀಕೆ’ ಸಂಕಷ್ಟ!

ಜೆಡಿಎಸ್ ಭದ್ರಕೋಟೆಯಲ್ಲಿ ತುರುವೇಕೆರೆಯೂ ಒಂದು. ಅಭಿವೃದ್ಧಿ ಮರೀಚಿಕೆ ಈ ಬಾರಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ತುಸು ಸಂಕಷ್ಟವನ್ನು ತಂದೊಡ್ಡಿದೆ. ರಮೇಶ್​ಗೌಡ ಜೆಡಿಎಸ್ ಟಿಕೆಟ್ ಬಯಸಿ ಬಂಡಾಯವೆದ್ದರೂ ವರಿಷ್ಠರ ಮಧ್ಯಪ್ರವೇಶದಿಂದ ಸದ್ಯಕ್ಕೆ ಶಮನವಾಗಿದೆ. ಆದರೆ ರಮೇಶ್​ಗೌಡ ಅವರಿಗೆ ಹೊಡೆದು ಓಡಿಸುವೆ ಎಂದು ನೀಡಿದ್ದ ಹೇಳಿಕೆ ಎಂಟಿಕೆಗೆ ಉಲ್ಟಾ ಹೊಡೆಯುವ ಸಾಧ್ಯತೆ ಇದೆ. ಬಿಜೆಪಿಗೆ ಉತ್ತಮ ವಾತಾವರಣವಿದ್ದು, ಪ್ರಬಲ ಟಿಕೆಟ್ ಆಕಾಂಕ್ಷಿ ಮಸಾಲೆ ಜಯರಾಂಗೆ ಪಕ್ಷದೊಳಗಿನ ಶತ್ರುಗಳ ಕಾಟವಿದೆ. ಕಾಂಗ್ರೆಸ್ ಚೇತರಿಸಿಕೊಂಡಿದೆ. ಚೌದ್ರಿರಂಗಪ್ಪ, ಚಿತ್ರ ನಿರ್ವಪಕ ಕೆ.ಮಂಜು, ವಸಂತಕುಮಾರ್ ಟಿಕೆಟ್ ಆಕಾಂಕ್ಷಿಗಳು. ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ.


ತಿಪಟೂರು ಯಾರಿಗೆ ಕಲ್ಪವೃಕ್ಷ?

ತಿಪಟೂರು ಲಿಂಗಾಯತರ ಪ್ರಾಬಲ್ಯ ಕ್ಷೇತ್ರ. ಚಾಮರಾಜನಗರ ಬಿಟ್ಟರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತ ಶಾಸಕರಿರುವ ಕ್ಷೇತ್ರವಿದು. ಕಾಂಗ್ರೆಸ್​ನ ಹಾಲಿ ಶಾಸಕ ಕೆ.ಷಡಕ್ಷರಿ ಮತ್ತೆ ಪಕ್ಷದಿಂದ ಕಣಕ್ಕಿಳಿಯುವುದು ಖಚಿತ. ಷಡಕ್ಷರಿಗೆ ಅರ್ಹವಾಗಿ ಸಿಗಬೇಕಿದ್ದ ಸಚಿವ ಸ್ಥಾನ ಕೊನೇ ಘಳಿಗೆಯಲ್ಲಿ ಕೈತಪ್ಪಿತು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಆಗಿವೆ. ಗೆಲುವಿನ ಲೆಕ್ಕಾಚಾರಕ್ಕೆ ಇವೆಲ್ಲ ಪ್ಲಸ್ ಆಗಲಿವೆ. ಮಾಜಿ ಶಾಸಕ ಬಿ.ಸಿ.ನಾಗೇಶ್ ಬಿಜೆಪಿಯಿಂದ ಕಣಕ್ಕಿಳಿಯಲಿದ್ದು ಪ್ರಬಲ ಸ್ಪರ್ಧೆಯೊಡ್ಡಲಿದ್ದಾರೆ. ಜೆಡಿಎಸ್ ಕೂಡ ಪ್ರಬಲವಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಟಿಕೆಟ್ ರೇಸ್​ನಲ್ಲಿ ಮಂಚೂಣಿಯಲ್ಲಿದ್ದಾರೆ. ಮಾಜಿ ಶಾಸಕ ಬಿ.ನಂಜಾಮರಿ ಸಹ ಆಕಾಂಕ್ಷಿ. ಷಡಕ್ಷರಿ ಆಪ್ತ ಜಿಪಂ ಸದಸ್ಯ ಜಿ.ನಾರಾಯಣ್ ಪಕ್ಷೇತರವಾಗಿಯಾದರೂ ಸ್ಪರ್ಧಿಸುವುದು ಖಚಿತ.


ಚಿಕ್ಕನಾಯಕನಹಳ್ಳಿ ದೊಡ್ಡಾಟ!

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಇತಿಹಾಸದಲ್ಲಿ ಸತತ 2 ಬಾರಿ ಗೆದ್ದ ದಾಖಲೆ ಜೆಡಿಎಸ್ ಶಾಸಕ ಸಿ.ಬಿ. ಸುರೇಶ್​ಬಾಬು ಹೆಸರಲ್ಲಿದೆ. ಈ ಬಾರಿ ಹ್ಯಾಟ್ರಿಕ್ ಸಾಧಿಸಿ ಹೊಸ ಇತಿಹಾಸ ಬರೆಯುವ ಹಂಬಲ ಅವರದ್ದು. ಹೇಮೆ ನೀರು ಹರಿಸುವುದು ಹೊರತುಪಡಿಸಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳಾಗಿವೆ ಎನ್ನುವ ಮಾತಿದೆ. ಜನರೊಂದಿಗೆ ಬೆರೆಯುವ ಮನೋಭಾವವೂ ಬಾಬುಗಿದೆ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದರೆ ತುಸು ಕಷ್ಟವಾಗಲಿದೆ. ಕಳೆದ ಬಾರಿ ಪರಾಜಿತ ಅಭ್ಯರ್ಥಿ ಸಾಸಲು ಸತೀಶ್, ಸಚಿವ ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಕಾಂಗ್ರೆಸ್​ನ ಪ್ರಬಲ ಆಕಾಂಕ್ಷಿಗಳು. ಸಂತೋಷ್ ಸ್ಪರ್ಧಿಸಿದರೆ ಬಾಬು ಗೆಲುವು ಸುಲಭವಲ್ಲ. ಇನ್ನು ಬಿಜೆಪಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿದರೆ ಗೆಲುವುಗೆ ಪ್ರಯತ್ನಿಸಬಹುದು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್​ಕುಮಾರ್ ಟಿಕೆಟ್​ಗಾಗಿ ಫೈಟ್ ನಡೆಸಿದ್ದಾರೆ.

Leave a Reply

Your email address will not be published. Required fields are marked *

Back To Top