Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ತೊಗರಿ ಕಣಜದಲ್ಲಿ ಯಾರಿಗೆ ಬೆಂಬಲ ಬೆಲೆ?

Monday, 29.01.2018, 3:05 AM       No Comments

| ಜಯತೀರ್ಥ ಪಾಟೀಲ್ ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಮಾಜಿ ಸಿಎಂ ಧರ್ಮಸಿಂಗ್ ಮತ್ತು ಮಾಜಿ ಸಚಿವ ಖಮರುಲ್ ಇಸ್ಲಾಂ ಅಕಾಲಿಕ ನಿಧನ ನಂತರ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೇಲೆ ಕಾಂಗ್ರೆಸ್ ಹೊಣೆಗಾರಿಕೆ ಬಿದ್ದಿದೆ. ಬಿಜೆಪಿ ಪ್ರಾಬಲ್ಯದ ಮಧ್ಯೆಯೂ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಖರ್ಗೆಯವರೇ ಹಿರಿಯ ನಾಯಕರಾಗಿರುವುದರಿಂದ ಮತ್ತೊಮ್ಮೆ ಇಲ್ಲಿ ಕಾಂಗ್ರೆಸ್ ಕೋಟೆ ಭದ್ರಪಡಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ತೊಗರಿ ಕಣಜ, ಸಿಮೆಂಟ್ ನಗರಿ ಖ್ಯಾತಿಯ ಕಲಬುರಗಿ ವೀರೇಂದ್ರ ಪಾಟೀಲ್, ಎನ್.ಧರ್ಮಸಿಂಗ್ ಸೇರಿ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ. ದಲಿತ ಸಮುದಾಯದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಇದೇ ಜಿಲ್ಲೆಯವರು. ಧರ್ಮಸಿಂಗ್ ಹಾಗೂ ಮುಸ್ಲಿಮರ ಅಧಿನಾಯಕನೆಂದೇ ಹೆಸರಾಗಿದ್ದ ಸಚಿವ ಖಮರುಲ್ ಇಸ್ಲಾಂ ನಿಧನದ ನಂತರ ನಡೆಯಲಿರುವ ಮೊದಲ ವಿಧಾನಸಭೆ ಚುನಾವಣೆಗೆ ರಾಜಕೀಯ ಲೆಕ್ಕಾಚಾರ ಗರಿಗೆದರಿದ್ದು, ಈ ಇಬ್ಬರ ನಿಕಟವರ್ತಿಗಳು ಹಾಗೂ ಬೆಂಬಲಿಗರು ಕಂಗಾಲಾಗಿರುವುದಂತೂ ನಿಜ. ಈ ಜಿಲ್ಲೆ ಬಹುತೇಕ ಕಾಂಗ್ರೆಸ್ ಭದ್ರಕೋಟೆ. ಕಲಬುರಗಿ ಲೋಕಸಭಾ ವ್ಯಾಪ್ತಿಯ 7, ಬೀದರ್ ಎಂಪಿ ಕ್ಷೇತ್ರದ 2 ಸೇರಿ 9 ವಿಧಾನಸಭಾ ಕ್ಷೇತ್ರ ಹೊಂದಿದೆ.

ಚಿತ್ತಾಪುರದತ್ತ ಎಲ್ಲರ ಚಿತ್ತ

ಸಂಸದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ. ಮೊದಲ ಬಾರಿಗೆ ಈ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿದರು. ಅಭಿವೃದ್ಧಿಗೆ ಒತ್ತು ನೀಡಿರುವ ಪ್ರಿಯಾಂಕ್ 2ನೇ ಬಾರಿಯೂ ಅಭ್ಯರ್ಥಿ. ಮೀಸಲು ಕ್ಷೇತ್ರವಾದ ನಂತರ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ವಾಲ್ಮೀಕಿ ನಾಯಕ ತಲಾ ಒಮ್ಮೆ ಆಯ್ಕೆಯಾಗಿದ್ದಾರೆ. ಈಗ ವಾಲ್ಮೀಕಿ ನಾಯಕ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಸವರಾಜ ಬೆಣ್ಣೂರ ರೇಸ್​ನಲ್ಲಿದ್ದಾರೆ. ಜೆಡಿಎಸ್ ಇನ್ನೂ ಸಜ್ಜಾಗುತ್ತಿದೆ.

 


ಅಜಯ್​ಗೆ ವಿಜಯದ ನಿರೀಕ್ಷೆ

ಮೊದಲ ಬಾರಿಗೆ ಜೇವರ್ಗಿ ಕ್ಷೇತ್ರದಿಂದ ಗೆಲುವು ಸಾಧಿಸಿರುವ ದಿ.ಧರ್ಮಸಿಂಗ್ ಪುತ್ರ ಡಾ.ಅಜಯಸಿಂಗ್ ಮತ್ತೆ ವಿಜಯದ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೂ ಮುನ್ನ ಕಲಬುರಗಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದು, ತಂದೆ ಧರ್ಮಸಿಂಗ್ ಬೀದರ್​ಗೆ ವಲಸೆ ಹೋದ ಬಳಿಕ ಜೇವರ್ಗಿಯಲ್ಲಿ ನೆಲೆ ಕಂಡುಕೊಂಡರು. ತಂದೆ ಮಾರ್ಗದರ್ಶನದಲ್ಲೇ ಬೆಳೆದಿರುವ ಅಜಯರಿಗೆ ಧರಂ ಅನುಪಸ್ಥಿತಿಯಲ್ಲಿ ಇದು ಮೊದಲ ಚುನಾವಣೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ. ಜಿಪಂ ಸದಸ್ಯ ಶಿವರಾಜ ಪಾಟೀಲ್ ರದ್ದೇವಾಡಗಿ, ಧರ್ಮಣ್ಣ ದೊಡ್ಡಮನಿ, ರೇವಣಸಿದ್ದಪ್ಪ ಸಂಕಾಲೆ ರೇಸ್​ನಲ್ಲಿದ್ದಾರೆ. ಇಲ್ಲಿ ಜೆಡಿಎಸ್​ಗೂ ಬಲವಾದ ಅಸ್ತಿತ್ವ ಇದ್ದು, ಕೇದಾರಲಿಂಗಯ್ಯ ಹಿರೇಮಠ ಅಭ್ಯರ್ಥಿಯಾಗಲಿದ್ದಾರೆ.


ಯಾರಿಗೆ ಶರಣೆನ್ನುವ ಮತದಾರ?

ಸೇಡಂನಿಂದ ಹ್ಯಾಟ್ರಿಕ್ ಆಯ್ಕೆಯಾಗಿರುವ ಕಾಂಗ್ರೆಸ್​ನ ಡಾ.ಶರಣಪ್ರಕಾಶ ಪಾಟೀಲ್ ಜಿಲ್ಲಾ ಉಸ್ತುವಾರಿ ಮಂತ್ರಿ. ಅಭಿವೃದ್ಧಿ ಸೇರಿ ಗೊಂದಲ ಇಲ್ಲದಂತೆ ನಿಭಾಯಿಸುತ್ತಿರುವ ಇವರು ಸಂಸದ ಮಲ್ಲಿಕಾರ್ಜುನ ಖರ್ಗೆ ಬಲಗೈ. ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ರಾಜಕುಮಾರ ಪಾಟೀಲ್ ತೇಲ್ಕೂರ್ ಈ ಬಾರಿಯೂ ಆಕಾಂಕ್ಷಿ. ಜತೆಗೆ ರೆಡ್ಡಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಕೂಗೆದ್ದಿದ್ದು, ರಾಜಗೋಪಾಲರೆಡ್ಡಿ, ಮಧುಸೂಧನ ರೆಡ್ಡಿ ಸಹ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್​ನಿಂದ ಮತ್ತೊಮ್ಮೆ ಮುಕ್ರಂಖಾನ್ ಸ್ಪರ್ಧೆ ಖಚಿತ.

 


ಕಲಬುರಗಿ ‘ಉತ್ತರ’ಕ್ಕೆ ಹುಡುಕಾಟ!

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ಖಮರುಲ್ ಇಸ್ಲಾಂ ಅವರನ್ನು ಕಳೆದುಕೊಂಡಿದೆ. ಅವರ ಪತ್ನಿ ಅಥವಾ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಲೆಕ್ಕಾಚಾರ ವರಿಷ್ಠರಲ್ಲಿದೆ. ಕುಡಾ ಅಧ್ಯಕ್ಷ ಮಹ್ಮದ್ ಅಜಗರ್ ಚುಲಬುಲ್, ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್ ಭಾಗಬಾನ್ ಇತರರು ಆಕಾಂಕ್ಷಿಗಳು. ಮುಸ್ಲಿಂ ಸಮುದಾಯದ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಯುವ ಮುಖಂಡ ನಾಸೀರ್ ಹುಸೇನ್ ಉಸ್ತಾದ್ ಸಿದ್ಧತೆ ನಡೆಸಿದ್ದು, ಇವರೇ ಅಭ್ಯರ್ಥಿ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ. ಬಿಜೆಪಿಯಿಂದ ಮಹಾನಗರ ಜಿಲ್ಲಾಧ್ಯಕ್ಷರೂ ಆದ ಎಂಎಲ್ಸಿ ಬಿ.ಜಿ.ಪಾಟೀಲ್ ಪುತ್ರ, ಯುವ ಉದ್ಯಮಿ ಚಂದು ಪಾಟೀಲ್, ಮುಖಂಡ ಸುಭಾಷ ಬಿರಾದಾರ್, ಮಾಜಿ ಎಂಎಲ್ಸಿ ಶಶೀಲ್ ನಮೋಶಿ ಪ್ರಬಲ ಆಕಾಂಕ್ಷಿಗಳು.


ವೈಯಕ್ತಿಕ ವರ್ಚಸ್ಸೇ ವಿಶೇಷ

ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಅಫಜಲಪುರ ಕ್ಷೇತ್ರದ ವಿಶೇಷ. ಹಾಲಿ ಶಾಸಕ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕ ಎಂ.ವೈ.ಪಾಟೀಲ್ ಮಧ್ಯೆ ಜಗಳ್​ಬಂದಿ. ಸಿಎಂ ಸಿದ್ದರಾಮಯ್ಯ, ಸಂಸದ ಖರ್ಗೆ ವಿರುದ್ಧ ಗುಡುಗುವ ಮೂಲಕ ಸುದ್ದಿಯಾಗಿದ್ದ ಗುತ್ತೇದಾರ್ ತೆಪ್ಪಗಾಗಿದ್ದು, ಕೈ ಟಿಕೆಟ್ ಗಟ್ಟಿ ಮಾಡಿಕೊಂಡಿದ್ದಾರೆ. ಎಂ.ವೈ.ಪಾಟೀಲ್ ಅಥವಾ ಅವರ ಪುತ್ರ ಅರುಣಕುಮಾರ ಪಾಟೀಲ್, ರಾಜೇಂದ್ರ ಪಾಟೀಲ್ ರೇವೂರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಹಾಗೊಂದು ವೇಳೆ ಬಿಜೆಪಿ ಟಿಕೆಟ್ ದೊರೆಯದಿದ್ದರೆ, ಜೆಡಿಎಸ್ ಇಲ್ಲವೇ ಪಕ್ಷೇತರರಾಗಿಯೂ ರೇವೂರ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾಗಿ ಜೆಡಿಎಸ್ ಕಾದು ನೋಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ.


ಆಳಂದದಲ್ಲಿ ಯಾರಿಗೆ ಆನಂದ?

ಶಾಸಕ ಬಿ.ಆರ್.ಪಾಟೀಲ್ ಆಳಂದ ಕ್ಷೇತ್ರದಲ್ಲಿ ಕೆಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್​ಗೆ ಸೇರಿದ್ದು, ಈ ಬಾರಿ ಕಾಂಗ್ರೆಸ್​ನಿಂದಲೇ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್​ನಲ್ಲಿದ್ದ ಮಾಜಿ ಶಾಸಕ ಸುಭಾಷ ಗುತ್ತೇದಾರ್ ಬಿಜೆಪಿಗೆ ಸೇರಿ ಸ್ಪರ್ಧಿಸಲಿದ್ದಾರೆ. ಪಾಟೀಲ್-ಗುತ್ತೇದಾರ್ ಮಧ್ಯೆ ಕದನ ಏರ್ಪಟ್ಟಿದ್ದು, ಸೂರ್ಯಕಾಂತ ಕೊರಳ್ಳಿ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದೆ. ಈ ಮಧ್ಯೆ ಅರುಣಕುಮಾರ ಪಾಟೀಲ್ ಹಳಿಸಗರ ಅವರೂ ಜೆಡಿಎಸ್​ನಿಂದ ಪ್ರಯತ್ನ ಮುಂದುವರಿಸಿದ್ದಾರೆ ಎನ್ನಲಾಗಿದೆ.

 


ಕಲಬುರಗಿ ‘ದಕ್ಷಿಣೆ’ಗೆ ಕಾತರ!

ಕಲಬುರಗಿ ದಕ್ಷಿಣ ಮತಕ್ಷೇತ್ರ ಬಿಜೆಪಿ ವಶದಲ್ಲಿದೆ. ಮಾಜಿ ಶಾಸಕ ದಿ.ಚಂದ್ರಶೇಖರ ಪಾಟೀಲ್ ರೇವೂರ ಪುತ್ರ ದತ್ತಾತ್ರೇಯ ಪಾಟೀಲ್ (ಅಪು್ಪಗೌಡ) ಅವರೇ ಮುಂದಿನ ಅಭ್ಯರ್ಥಿ ಎಂದು ಪರಿವರ್ತನಾ ಯಾತ್ರೆ ವೇಳೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಆದರೆ, ಶಿಕ್ಷಣ ಸಂಸ್ಥೆ ಹೊಂದಿರುವ ಸಾಮಾಜಿಕ ಕಾರ್ಯಕರ್ತ ಬಸವರಾಜ ಡಿಗ್ಗಾವಿಯೂ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿಯಾದರೂ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್​ನಲ್ಲಿ ಮಾಜಿ ಎಂಎಲ್ಸಿ, ಧರ್ಮಸಿಂಗ್ ಕಟ್ಟಾ ಬೆಂಬಲಿಗ ಅಲ್ಲಮಪ್ರಭು ಪಾಟೀಲ್, ಮೇಯರ್ ಶರಣಕುಮಾರ ಮೋದಿ, ಉದ್ಯಮಿಗಳಾದ ಸಂತೋಷ ಬಿಲಗುಂದಿ, ಕೃಷ್ಣಾಜಿ ಕುಲಕರ್ಣಿ ಇತರರು ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಕಾದು ನೋಡುತ್ತಿದೆ.


ಗ್ರಾಮೀಣ ಇಲ್ಲಿ ಯಾರಿಗೆ ‘ಮೀಸಲು’?

ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​ನ ಜಿ.ರಾಮಕೃಷ್ಣ ಹಾಲಿ ಶಾಸಕರು. ಅವರು ಈ ಬಾರಿ ಪುತ್ರ ವಿಜಯಕುಮಾರ್​ಗೆ ಟಿಕೆಟ್ ಕೊಡಿಸುವ ಚಿಂತನೆಯಲ್ಲಿದ್ದಾರೆ. ಆದರೆ ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಪರಮೇಶ್ವರ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವ ರೇವೂನಾಯಕ ಬೆಳಮಗಿ, ರಾಜ್ಯ ಉಪಾಧ್ಯಕ್ಷ ಬಾಬುರಾವ ಚವ್ಹಾಣ್, ಜಿಪಂ ಸದಸ್ಯ ಬಸವರಾಜ ಮತ್ತಿಮೂಡ ಇತರರು ಪೈಪೋಟಿಯಲ್ಲಿದ್ದಾರೆ. ಇಲ್ಲೂ ಜೆಡಿಎಸ್ ಪ್ರಬಲವಾಗಿಲ್ಲ.

 


ಚಿಂಚೋಳಿ ಕ್ಷೇತ್ರದಲ್ಲಿ ಪ್ರಭಾವಳಿಗೆ ಪೈಪೋಟಿ

ತೆಲಂಗಾಣ ಗಡಿಯಲ್ಲಿರುವ ಚಿಂಚೋಳಿಯಲ್ಲಿ ಲಂಬಾಣಿಗರೇ ಹೆಚ್ಚಿದ್ದು, ಬಡ ಲಂಬಾಣಿ ಬಾಲಕಿಯರ ಮಾರಾಟ ಜಾಲದಿಂದ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ದಂಧೆಗೆ ಕಡಿವಾಣ ಬಿದ್ದರೂ ಗುಜ್ಜರಕಿ ಶಾದಿ ಜಾಲ ಕಾಣಿಸಿಕೊಂಡಿದೆ. ಮೀಸಲಾದ ನಂತರ ಮಾಜಿ ಸಚಿವ ವೈಜನಾಥ ಪಾಟೀಲರಿಂದ ಕ್ಷೇತ್ರ ಕೈಬಿಟ್ಟು ಹೋಯಿತು. ಮಾಜಿ ಸಿಎಂ ವೀರೇಂದ್ರ ಪಾಟೀಲರ ಕ್ಷೇತ್ರವೂ ಹೌದು. ಕಾಂಗ್ರೆಸ್​ನ ಡಾ.ಉಮೇಶ ಜಾಧವ್ ಹಾಲಿ ಶಾಸಕರು. ಇನ್ನು ಬಿಜೆಪಿಯಿಂದ ಮಾಜಿ ಶಾಸಕ ಸುನೀಲ್ ವಲ್ಲ್ಯಾಪುರೆ ಮರು ಸ್ಪರ್ಧೆ ಬಯಸಿದ್ದಾರೆ. ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ್ ಸಹ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್​ನಲ್ಲಿನ್ನೂ ಒಮ್ಮತ ಮೂಡಿಲ್ಲ.

Leave a Reply

Your email address will not be published. Required fields are marked *

Back To Top