Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಬಿಜೆಪಿಗೆ ಬಿಸಿ, ಕಾಂಗ್ರೆಸ್​ಗೆ ಕಸಿವಿಸಿ, ದಳಕ್ಕೆ ತಳಮಳ

Monday, 12.02.2018, 3:05 AM       No Comments

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿ, ಧರ್ಮ, ಭಾಷೆಗಳಾಚಿನ ಬಾಂಧವ್ಯಕ್ಕೆ ಹೆಚ್ಚು ಬೆಲೆ. ಪುಲಕೇಶಿನಗರ ಕ್ಷೇತ್ರ ಪಕ್ಷಾಂತರ ಪರ್ವಕ್ಕೆ ಸಿಲುಕಿದೆ. ಮೂರು ಕ್ಷೇತ್ರಗಳು ಬಿಜೆಪಿ, ಮೂರು ಕ್ಷೇತ್ರಗಳು ಕಾಂಗ್ರೆಸ್ ಮುಷ್ಟಿಯಲ್ಲಿವೆ. ಜೆಡಿಎಸ್ ತೆಕ್ಕೆಯಲ್ಲಿರುವ ಕ್ಷೇತ್ರಗಳನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಳ್ಳಲು ತಂತ್ರ ರೂಪಿಸುತ್ತಿದೆ. ಈ ಕುರಿತ ಸಮಗ್ರ ವರದಿ ಇಲ್ಲಿದೆ.

 | ವಿಲಾಸ ಮೇಲಗಿರಿ ಬೆಂಗಳೂರು

ಬೆಂಗಳೂರು ಮೆಟ್ರೋಪಾಲಿಟನ್ ಮತ್ತು ಕಾಸ್ಮೋಪಾಲಿಟನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅತ್ತ ಪೂರ್ಣ ಪ್ರಮಾಣದಲ್ಲಿ ನಗರವೂ ಅಲ್ಲ, ಇತ್ತ ಗ್ರಾಮೀಣ ಪ್ರದೇಶವೂ ಅಲ್ಲ ಎನ್ನುವಂತಿದೆ. ಆಗರ್ಭ ಶ್ರೀಮಂತರು ವಾಸಿಸುವ ಡಾಲರ್ಸ್ ಕಾಲನಿಯೂ ಇದೇ ಕ್ಷೇತ್ರದಲ್ಲಿದೆ. ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಹೆಬ್ಬಾಳ, ಗ್ರಾಮೀಣ ಪ್ರದೇಶದಂತಿರುವ ಕೆ.ಆರ್. ಪುರ, ಬ್ಯಾಟರಾಯನಪುರ, ಕಿಷ್ಕಿಂಧೆಯಂತಿರುವ ಯಶವಂತಪುರ ಕ್ಷೇತ್ರಗಳು ಹಲವು ಜಾತಿ, ಧರ್ಮ, ಭಾಷಿಕರ ನೆಲೆವೀಡು. ಹಾಗಾಗಿ ಇಲ್ಲಿ ಗೆಲ್ಲಲು ಜಾತಿಗಿಂತ ವ್ಯಕ್ತಿಗತ ವರ್ಚಸ್ಸು, ಜನರ ಬೇಕು ಬೇಡಗಳನ್ನು ಆಲಿಸುವ ಸ್ಪಂದನಶೀಲ ಗುಣ, ಪಕ್ಷದ ಕಾರ್ಯಕರ್ತರ ಪ್ರಾಮಾಣಿಕ ದುಡಿಮೆ, ಪ್ರಧಾನ ಪಾತ್ರವಹಿಸಲಿವೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಬಿಜೆಪಿ, ಮೂರು ಕಾಂಗ್ರೆಸ್, ಎರಡು ಜೆಡಿಎಸ್ ಅಭ್ಯರ್ಥಿಗಳು ಕಾರುಬಾರು ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಈ ಕ್ಷೇತ್ರದ ಸಂಸದರಾಗಿದ್ದು, 2019ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಈ ಕ್ಷೇತ್ರ ಪ್ರತಿಷ್ಠೆ ಪ್ರಶ್ನೆಯಾಗಿದೆ. ಪುಲಕೇಶಿನಗರದ ಶಾಸಕ ಜೆಡಿಎಸ್ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಾತ್ರಿಯಾಗಿರುವುದರಿಂದ ‘ದಳ’ದಲ್ಲಿ ತಳಮಳ ಶುರುವಾಗಿದೆ. ತನ್ನ ಕ್ಷೇತ್ರಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ಏದುಸಿರು ಬಿಡಬೇಕಾದ ಪರಿಸ್ಥಿತಿ ಇದೆ.

ಪುಲಕೇಶಿ ನಗರಕ್ಕೆ ‘ಪುಲಿ’ ಯಾರು?

ಜೆಡಿಎಸ್​ನಿಂದ ಚುನಾಯಿತರಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ದಳಪತಿಗಳ ವಿರುದ್ಧ ಬಂಡಾಯ ಸಾರಿದ್ದು, ಕಾಂಗ್ರೆಸ್​ನಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಈಗಾಗಲೆ ಹಸ್ತ ಪಡೆ ಸೇರ್ಪಡೆಗೆ ವೇದಿಕೆ ಸಿದ್ಧಗೊಂಡಿದ್ದು, ಮರು ಆಯ್ಕೆಗೆ ಸೆಣಸಾಟ ನಡೆಸಲಿದ್ದಾರೆ. ಮಾಜಿ ಸಚಿವ, ದಲಿತ ನಾಯಕ ರಾಗಿದ್ದ ಬಿ. ಬಸವಲಿಂಗಪ್ಪ ಅವರ ಪುತ್ರ ಪ್ರಸನ್ನ ಕುಮಾರ್ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಬಿಜೆಪಿಯಿಂದ ಪಳನಿ ಟಿಕೆಟ್ ಬಯಸಿದ್ದು, ಬಿಜೆಪಿ ಕೊನೆಯ ಕ್ಷಣದಲ್ಲಿ ವಲಸಿಗರೊಬ್ಬರನ್ನು ತಂದು ಈ ಕ್ಷೇತ್ರದಿಂದ ಕಣಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ. ಜೆಡಿಎಸ್​ನಿಂದ ಜಲಮಂಡಳಿಯ ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಎಂ. ಬಸವರಾಜ್, ಮಾಜಿ ಶಾಸಕ ವಿ. ಶಿವರಾಮ್ ಅಶ್ವತ್ಥಮ್ಮ ಟಿಕೆಟ್ ಬಯಸಿದ್ದಾರೆ.


ಡಾಕ್ಟರ್​ರಿಂದ ಆಪರೇಷನ್ ಹ್ಯಾಟ್ರಿಕ್

ಮಲ್ಲೇಶ್ವರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಡಾ. ಅಶ್ವತ್ಥ ನಾರಾಯಣ ಬಿಜೆಪಿಯಿಂದ ಮೂರನೇ ಬಾರಿ ಪೈಪೋಟಿಗೆ ಮುಂದಾಗಿದ್ದಾರೆ. ಕಾಂಗ್ರೆಸ್​ನಿಂದ ಸಚಿವ ಎಂ.ಆರ್. ಸೀತಾರಾಂ, ಹಿರಿಯ ನಾಯಕ ಹರಿಪ್ರಸಾದ್ ಸಹೋದರ ಬಿ.ಕೆ. ಶಿವರಾಂ ಅಥವಾ ಅವರ ಪುತ್ರ ರಕ್ಷಿತ್ ಶಿವರಾಂ, ಕೆಂಗಲ್ ಹನುಮಂತಯ್ಯನವರ ಮೊಮ್ಮಗ ಶ್ರೀಪಾದರೇಣು ಹೆಸರು ಚಾಲ್ತಿಯಲ್ಲಿವೆ. ಜೆಡಿಎಸ್​ನಿಂದ ವಕೀಲ ನಾರಾಯಣಸ್ವಾಮಿ, ಸಿ. ಅಶೋಕ್​ಕುಮಾರ್, ಡಾ.ಟಿ.ಎಚ್. ಆಂಜನಪ್ಪ, ಎಸ್.ಆರ್. ವೆಂಕಟೇಶಗೌಡ ಮತ್ತಿತರರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

 


ಬಿಜೆಪಿ ಟಿಕೆಟ್​ಗಾಗಿ ಪಕ್ಷಾಂತರ!

ಜೆಡಿಎಸ್ ಬಂಡಾಯ ಶಾಸಕರ ಗುಂಪಿನಲ್ಲಿ ಕೆಲ ಕಾಲ ಗುರುತಿಸಿಕೊಂಡಿದ್ದ ಮಹಾಲಕ್ಷ್ಮಿಪುರ ಕ್ಷೇತ್ರದ ಶಾಸಕ ಗೋಪಾಲಯ್ಯ ಅಂತಿಮವಾಗಿ ಪಕ್ಷದಲ್ಲೇ ಉಳಿದಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಪೂರ್ಣ ಬೆಂಬಲ ವ್ಯಕ್ತಪಡಿಸಿರು ವುದರಿಂದ ಮರು ಆಯ್ಕೆಗೆ ಕಸರತ್ತು ನಡೆಸುವುದು ಖಚಿತ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರ್ಪಡೆ ಗೊಂಡಿರುವ ನೆ.ಲ. ನರೇಂದ್ರಬಾಬು, ಮಾಜಿ ಉಪ ಮೇಯರ್ ಹರೀಶ್ ಬಿಜೆಪಿ ಟಿಕೆಟ್​ಗೆ ಪೈಪೋಟಿ ನಡೆಸುತ್ತಿದ್ದಾರೆ. ಸಚಿವ ಎಚ್.ಎಂ. ರೇವಣ್ಣ ಈ ಕ್ಷೇತ್ರದಿಂದ ಸ್ಪರ್ಧಿಸುವ ಸುದ್ದಿ ಇದೆ. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಗಿರೀಶ್ ಕೆ. ನಾಶಿ, ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ.


ಯಶವಂತಪುರದಲ್ಲಿ ಯಾರಿಗೆ ಯಶ?

ಕಾಂಗ್ರೆಸ್ ಬಿಗಿಮುಷ್ಟಿಯಲ್ಲಿರುವ ಯಶವಂತಪುರ ಕ್ಷೇತ್ರವನ್ನು ಎಸ್.ಟಿ. ಸೋಮಶೇಖರ್ ಪ್ರತಿನಿಧಿಸುತ್ತಿದ್ದು, ಎರಡನೇ ಬಾರಿ ಸೆಣಸಾಡಲು ಸಜ್ಜಾಗಿದ್ದಾರೆ. ಜೆಡಿಎಸ್ ಕೂಡ ಈ ಕ್ಷೇತ್ರದಲ್ಲಿ ಪ್ರಬಲವಾಗಿದ್ದು ಜವರಾಯಿಗೌಡ ಸ್ಪರ್ಧಿಸುವುದು ಬಹುತೇಕ ಖಚಿತ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರದಿಂದ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ. ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಾದೇಗೌಡ ಕೂಡ ಬಿಜೆಪಿ ವರಿಷ್ಠರ ಮೇಲೆ ಟಿಕೆಟ್​ಗೆ ಒತ್ತಡ ಹೇರಿದ್ದಾರೆ.

 


ಕಾಂಗ್ರೆಸ್ ಟಿಕೆಟ್​ಗೆ ಹೊಯ್ಕೈ

ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೆಬ್ಬಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಪಕ್ಷೇತರರಾಗಿ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ರಾಜಕೀಯ ಪ್ರವೇಶಿಸಿದ ನಾರಾಯಣಸ್ವಾಮಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗದ್ದುಗೆ ಹಿಡಿದಿದ್ದಾರೆ. ಈಗ ಮತ್ತೆ ಟಿಕೆಟ್ ಪಡೆದು ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಗೆ ಸಡ್ಡು ಹೊಡೆಯುವುದು ಖಾತ್ರಿಯಾಗಿದೆ. ಕಾಂಗ್ರೆಸ್​ನಿಂದ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಪ್ ಅವರ ಮೊಮ್ಮಗ ರೆಹಮಾನ್ ಷರೀಫ್ ಮತ್ತೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಸಚಿವರಾದ ರೋಷನ್ ಬೇಗ್ ಕಾಂಗ್ರೆಸ್ ಟಿಕೆಟ್ ಕೇಳಿದರೂ ಅಚ್ಚರಿಯೇನಲ್ಲ. ಮತ್ತೊಬ್ಬ ಸಚಿವ ಎಚ್.ಎಂ. ರೇವಣ್ಣ ಇನ್ನೊಂದು ಅವಕಾಶ ಕೇಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದರೆ, ಸಿಎಂ ಆಪ್ತ ಆರ್. ಬೈರತಿ ಸುರೇಶ್ ಈಗಾಗಲೇ ಹೈಕಮಾಂಡ್​ನಿಂದ ಗ್ರೀನ್ ಸಿಗ್ನಲ್ ಪಡೆದು ಎಡೆಬಿಡದೆ ಓಡಾಡುತ್ತಿದ್ದಾರೆ. ಜೆಡಿಎಸ್​ನಿಂದ ಹನುಮಂತೇಗೌಡ ಬಹುತೇಕ ಟಿಕೆಟ್ ಗ್ಯಾರಂಟಿ ಮಾಡಿಕೊಂಡಂತಿದೆ.


ದಾಸರಹಳ್ಳಿಯಲ್ಲಿ ‘ಮುನಿ-ಶಂಕರ’

ದಾಸರಹಳ್ಳಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಮುನಿರಾಜು ಹ್ಯಾಟ್ರಿಕ್ ಗೆಲುವಿಗಾಗಿ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡ ಬಿ.ಎಲ್. ಶಂಕರ್ ಮತ್ತೆ ಟಿಕೆಟ್ ಪಡೆಯುವುದು ಬಹುತೇಕ ಖಚಿತ. ಟಿಕೆಟ್ ಖಾತ್ರಿ ಹಿನ್ನೆಲೆಯಲ್ಲಿ ಸೋತ ನಂತರವೂ ಪಕ್ಷದ ಕಾರ್ಯಕರ್ತರ ಜತೆ ಶಂಕರ್ ನಿಕಟ ಸಂಪರ್ಕ ಇರಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಹಾಲಿ ಎಂಎಲ್​ಸಿ ಕಾಂತರಾಜ್ ಕಡೆಗೆ ವರಿಷ್ಠರು ಒಲವು ತೋರಿದ್ದಾರೆ. ಮುಖಂಡರಾದ ಗುಂಡಪ್ಪ, ಎಚ್.ಆರ್. ಪ್ರಕಾಶ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.


ಸಾಂಪ್ರದಾಯಿಕ ಎದುರಾಳಿಗಳ ಸೆಣಸಾಟ

ಕೆ.ಆರ್.ಪುರ ಕ್ಷೇತ್ರವನ್ನು ಕಾಂಗ್ರೆಸ್​ನ ಭೈರತಿ ಬಸವರಾಜ್ ಆಳುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಬಲವಾಗಿ ಬೇರು ಬಿಟ್ಟಿರುವ ಹಾಗೂ ಮುಖ್ಯಮಂತ್ರಿಗಳ ಆಪ್ತರೂ ಆಗಿರುವ ಬೈರತಿ ಬಸವರಾಜ್​ಗೆ ಟಿಕೆಟ್ ನಿಶ್ಚಿತವಾಗಿದ್ದು, ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳಲಿದ್ದಾರೆ. ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿ ನಂದೀಶರೆಡ್ಡಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಪೂರ್ಣಿಮಾ ಶ್ರೀನಿವಾಸ್ ಕೂಡ ಬಿಜೆಪಿ ಟಿಕೆಟ್​ಗೆ ಪೈಪೋಟಿಗಿಳಿದಿದ್ದಾರೆ. ಈ ನಡುವೆ ವರಿಷ್ಠರು ಹೊಸ ಮುಖದ ಹುಡುಕಾಟದ ಕಡೆಗೂ ಆಲೋಚನೆ ನಡೆಸಿದ್ದಾರೆ. ಜೆಡಿಎಸ್​ನಿಂದ ಗೋಪಾಲ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

 


ಮೂರನೇ ಗೆಲುವಿಗೆ ಬ್ಯಾಟಿಂಗ್

ಸಚಿವ ಕೃಷ್ಣ ಬೈರೇಗೌಡ ಬ್ಯಾಟರಾಯನಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯಿಂದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರ ಸಂಬಂಧಿ ಎ. ರವಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಹಾಗೂ ರಾಜಗೋಪಾಲಗೌಡ ಟಿಕೆಟ್ ಪೈಪೋಟಿಯಲ್ಲಿದ್ದಾರೆ. ಜೆಡಿಎಸ್​ನಿಂದ ಹನುಮಂತೇಗೌಡ ಮತ್ತು ತಿಂಡ್ಲು ಚಂದ್ರು ಟಿಕೆಟ್ ರೇಸ್​ನಲ್ಲಿದ್ದಾರೆ.

Leave a Reply

Your email address will not be published. Required fields are marked *

Back To Top