Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಬಾಗಲಕೋಟೆಯೊಳಗಾರು ಭದ್ರ, ಯಾರು ಛಿದ್ರ?

Tuesday, 23.01.2018, 3:05 AM       No Comments

| ಅಶೋಕ ಶೆಟ್ಟರ ಬಾಗಲಕೋಟೆ

ಪ್ರೀತಿಯಿಂದ ಅಪ್ಪಿಕೊಂಡರೆ ಆ ಪಕ್ಷಕ್ಕೆ ಬರೀ ಗೆಲುವಲ್ಲ, ದಿಗ್ವಿಜಯ ಗ್ಯಾರಂಟಿ. ತಿರುಗಿ ಬಿದ್ದರೆ ಮಾತ್ರ ಆ ಪಕ್ಷ ಮಕಾಡೆ ಮಲಗುವುದು ಕಟ್ಟಿಟ್ಟ ಬುತ್ತಿ. ಇದು ಮುಳುಗಡೆ ಖ್ಯಾತಿಯ ಬಾಗಲಕೋಟೆ ಜಿಲ್ಲೆಯ ರಾಜಕಾರಣ. ಜಿಲ್ಲೆಯಲ್ಲಿ ಪಕ್ಷಗಳ ಹವಾ, ಮುಖಂಡರ ನಾಮಬಲ, ಜಾತಿ ಸಮೀಕರಣ ಗುಪ್ತಗಾಮಿನಿಯಾಗಿ ಕೆಲಸ ಮಾಡುತ್ತ ಬಂದಿದೆ.

ಉತ್ತರ ಕರ್ನಾಟಕದ ಮಧ್ಯಭಾಗವಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣೆ ಫಲಿತಾಂಶ ಊಹೆಗೂ ಮೀರಿದ್ದು. ಇಲ್ಲಿನ ಜನ ಒಂದು ಪಕ್ಷದ ಕಡೆಗೆ ಸಂಪೂರ್ಣ ವಾಲುತ್ತ ಬಂದಿದ್ದಾರೆ. 1957ರಿಂದ 2013ರ ವಿಧಾನಸಭೆ ಚುನಾವಣೆಗಳಲ್ಲಿ ಎರಡ್ಮೂರು ಸಲ ಬಿಟ್ಟರೆ ಉಳಿದಂತೆ ಪ್ರತಿ ಚುನಾವಣೆಯಲ್ಲೂ ಒಂದು ಪಕ್ಷಕ್ಕೆ ಭಾರಿ ಪ್ರಮಾಣದ ಬೆಂಬಲ ಸಿಗುತ್ತಿದೆ. ಒಮ್ಮೊಮ್ಮೆ ಏಳಕ್ಕೆ ಏಳು, ಕೆಲವೊಮ್ಮೆ ಐದು, ಆರು ಸ್ಥಾನಗಳು ಸಿಕ್ಕಿರುವುದೂ ಇದೆ.

1957ರಿಂದ 1983ರವರೆಗೆ ಕಾಂಗ್ರೆಸ್ ಭದ್ರಕೋಟೆ ಆಗಿಯೇ ಉಳಿದಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ 1985, 89, 94ರಲ್ಲಿ ಜನತಾ ಪರಿವಾರ ಬಿರುಕು ಮೂಡಿಸಿತು. ಜನತಾದಳ ಛಿದ್ರವಾದ ಬಳಿಕ 2004 ಮತ್ತು 2008 ಚುನಾವಣೆಯಲ್ಲಿ ಸಂಪೂರ್ಣ ಬಿಜೆಪಿ ಆವರಿಸಿಕೊಂಡಿತು. ಈ ಎರಡೂ ಅವಧಿಯಲ್ಲಿ ಒಬ್ಬರೆ ಒಬ್ಬ ಕಾಂಗ್ರೆಸ್ ಶಾಸಕರು ಇರಲಿಲ್ಲ. ಆದರೆ, 2013ರಲ್ಲಿ ಬಿಜೆಪಿ, ಕೆಜೆಪಿ ಗೊಂದಲದ ಲಾಭ ಪಡೆದ ಕಾಂಗ್ರೆಸ್ ಮತ್ತೆ ಮುಂಚೂಣಿಗೆ ಬಂದು ಏಳರಲ್ಲಿ ಆರು ಸ್ಥಾನ ಗೆದ್ದು ಬೀಗಿತು.

ಸದ್ಯಕ್ಕೆ ಜಿಲ್ಲೆಯಲ್ಲಿ ಕೈ-ಕಮಲ ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದರೂ ಎರಡ್ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪೈಪೋಟಿ ನೀಡುವ ಸಾಧ್ಯತೆಯಿದೆ.

ಮುಧೋಳ ಯಾರಿಗೆ ‘ಗೋವಿಂದ’?

ಎಸ್ಸಿ ಮೀಸಲು ಕ್ಷೇತ್ರ ಮುಧೋಳದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಶಾಸಕರಾಗಿದ್ದು, ಕಳೆದ ಐದು ಚುನಾವಣೆಗಳಲ್ಲಿ ಕಾಂಗ್ರೆಸ್​ನ ಆರ್.ಬಿ. ತಿಮ್ಮಾಪುರ ವಿರುದ್ಧ ನಾಲ್ಕು ಸಲ ಗೆಲವು ಪಡೆದಿದ್ದಾರೆ. 1994ರಲ್ಲಿ ಜನತಾ ದಳದಿಂದ ಮೊದಲ ಬಾರಿಗೆ ಶಾಸಕರಾದರು. 2004ರಿಂದೀಚೆಗೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅವರು ಹ್ಯಾಟ್ರಿಕ್ ಗೆಲುವು ಪಡೆದಿದ್ದಾರೆ. ಸತತ ಮೂರು ಸಲ ಸೋತರೂ ಆರ್.ಬಿ. ತಿಮ್ಮಾಪುರ ಸಿದ್ದರಾಮಯ್ಯ ಸರ್ಕಾರದಲ್ಲಿ ಎಂಎಲ್​ಸಿ ಆಗಿ ಬಳಿಕ ಮಂತ್ರಿಯೂ ಆಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಜೆಡಿಎಸ್​ನಲ್ಲಿ ಶಂಕರ ನಾಯಕ ಟಿಕೆಟ್ ಆಕಾಂಕ್ಷಿಯಾಗಿದ್ದು, ಇಲ್ಲಿ ಕಾಂಗ್ರೆಸ್​ನ ಸತೀಶ ಬಂಡಿವಡ್ಡರಗೆ ಜೆಡಿಎಸ್ ಗಾಳ ಹಾಕುತ್ತಿದೆ.


ಕಿಂಡಿಯಲ್ಲವಿದು ‘ಜಮಖಂಡಿ’

ಮಾಜಿ ಮುಖ್ಯಮಂತ್ರಿ ರಾಮಕೃಷ್ಟ ಹೆಗಡೆ ವಿರುದ್ಧ ಗೆದ್ದು ಇಡೀ ರಾಷ್ಟ್ರವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದ ಕಾಂಗ್ರೆಸ್​ನ ಸಿದ್ದು ನ್ಯಾಮಗೌಡ ಜಮಖಂಡಿಯ ಹಾಲಿ ಶಾಸಕ. 2008ರಲ್ಲಿ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ವಿರುದ್ಧ ಸೋಲು ಕಂಡು 2013ರಲ್ಲಿ ಗೆಲುವು ಪಡೆದರು. ಬಿಜೆಪಿಯಲ್ಲಿ ಶ್ರೀಕಾಂತ ಕುಲಕರ್ಣಿಗೆ ಟಿಕೆಟ್ ಎಂದಿದ್ದರೂ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಟಿಕೆಟ್ ಆಕಾಂಕ್ಷಿ. ಜೆಡಿಎಸ್ ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ ಗುಡಗುಂಟಿ ಅವರನ್ನು ಸೆಳೆಯಲು ಮುಂದಾಗಿದೆ.


ತೇರ‘ದಾಳ’ಕ್ಕೆ ಸಿಲುಕೋರ್ಯಾರು?

ತೇರದಾಳ ಕ್ಷೇತ್ರ ಪುನರ್ ವಿಂಗಡನೆ ಬಳಿಕ 2008ರಲ್ಲಿ ಪ್ರತ್ಯೇಕ ಕ್ಷೇತ್ರವಾದ ಇಲ್ಲಿ ನೇಕಾರ ಮತದಾರರೇ ನಿರ್ಣಾಯಕ. 2004ರಲ್ಲಿ ಜಮಖಂಡಿ ಶಾಸಕರಾಗಿದ್ದ ಬಿಜೆಪಿಯ ಸಿದ್ದು ಸವದಿ 2008ರಲ್ಲಿ ತೇರದಾಳಕ್ಕೆ ಬಂದು ಗೆಲುವು ಕಂಡರು. 2013ರಲ್ಲಿ ಸಚಿವೆ ಉಮಾಶ್ರೀಗೆ ಮತದಾರರು ಜೈ ಎಂದರು. 2018ರಲ್ಲಿ ಮತ್ತೆ ಉಮಾಶ್ರೀ- ಸಿದ್ದು ಸವದಿ ಅಖಾಡಕ್ಕಿಳಿಯಲಿದ್ದಾರೆ. ಹಾಲುಮತ ಸಮಾಜದ ಪ್ರೊ. ಬಸವರಾಜ ಕೊಣ್ಣೂರ ಜೆಡಿಎಸ್​ನಿಂದ ಸ್ಪರ್ಧಿಸಲಿದ್ದಾರೆ.

 


ಬಾಗಲ‘ಕೋಟೆ’ಗೆ ನಾಯಕನ್ಯಾರು?

2004ರಿಂದ 2008ರವರೆಗೆ ಬಿಜೆಪಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ವೀರಣ್ಣ ಚರಂತಿಮಠ ಗೆಲುವಿನ ಓಟಕ್ಕೆ 2013ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ ಎಚ್.ವೈ. ಮೇಟಿ ಬ್ರೇಕ್ ಹಾಕಿದರು. ಸಿಡಿ ಪ್ರಕರಣಕ್ಕೆ ಸಿಲುಕಿ ಸಚಿವ ಸ್ಥಾನವನ್ನೂ ಕಳೆದುಕೊಂಡಿದ್ದು ಮತ್ತೆ ಟಿಕೆಟ್ ಸಿಗದಿದ್ದರೆ ಮಾಜಿ ಶಾಸಕ ಪಿ.ಎಚ್. ಪೂಜಾರ ಮತ್ತು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಪ್ರಬಲ ಆಕಾಂಕ್ಷಿಗಳು. ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ನಿರತವಾಗಿದೆ.


ಬೀಳಗಿ ಜೋಳಿಗೆ ಯಾರ ಪಾಲಿಗೆ?

ಬೀಳಗಿ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಜೆ.ಟಿ. ಪಾಟೀಲ ಹಾಲಿ ಶಾಸಕರು. 2004 ಮತ್ತು 2008ರಲ್ಲಿ ಬಿಜೆಪಿಯ ಮುರುಗೇಶ ನಿರಾಣಿ ಶಾಸಕರಾಗಿದ್ದರು. ಹಿಂದಿನ ಚುನಾವಣೆಯಲ್ಲಿ ಮುಂದಿನ ಸಲ ಸ್ಪರ್ಧೆ ಮಾಡಲ್ಲ ಎಂದು ಜೆ.ಟಿ. ಪಾಟೀಲರು ಹೇಳುತ್ತಿದ್ದರು. ಬಿಜೆಪಿಯಿಂದ ನಿರಾಣಿ ಸ್ಪರ್ಧಿಸುತ್ತಾರೆ. ಅಕಸ್ಮಾತ್ ಕಾಂಗ್ರೆಸ್​ನಿಂದ ಪಾಟೀಲರು ಹಿಂದೆ ಸರಿದರೆ ಬಸವಪ್ರಭುಗೆ ಟಿಕೆಟ್ ಸಿಗಬಹುದು. ಜೆಡಿಎಸ್​ನಿಂದ ರಾಮಾರೂಢಮಠದ ಪರಮರಾಮಾರೂಢ ಸ್ವಾಮೀಜಿ ಆಕಾಂಕ್ಷಿ. ಆದರೆ, ಜೆಡಿಎಸ್ ಗಾಣಿಗ ಸಮುದಾಯದ ವಕೀಲರಿಗೆ ಗಾಳ ಹಾಕಿದೆ.


ಹುನಗುಂದದಲ್ಲಿ ಕುಟುಂಬ ಬಂಧ

ಕಾಂಗ್ರೆಸ್​ನ ವಿಜಯಾನಂದ ಕಾಶಪ್ಪನವರು ಹಾಲಿ ಶಾಸಕರು. 1985ರಿಂದ ಫಲಿತಾಂಶ ಏನೇ ಆದರೂ ಕಾಶಪ್ಪನವರ ಮನೆಗೆ ಟಿಕೆಟ್ ಫಿಕ್ಸ್. ಬಿಜೆಪಿಯಿಂದ 2013ರಲ್ಲಿ ಸೋತಿದ್ದ ದೊಡ್ಡನಗೌಡ ಪಾಟೀಲರೇ ಮತ್ತೆ ಸ್ಪರ್ಧಿಸುವ ಲಕ್ಷಣಗಳಿವೆ. ಗುತ್ತಿಗೆದಾರ ಎಸ್.ಆರ್. ನವಲಿಹಿರೇಮಠಗೆ ಜೆಡಿಎಸ್ ಜಾಲ ಬೀಸಿದೆ. ಅದಾಗದಿದ್ದರೆ ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರಿಗೆ ಗಾಳ ಹಾಕಲಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಹೊರಬಂದಿರುವ ಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನಗಣಿ ಸ್ಪರ್ಧಿಸಲಿರುವುದು ಫಲಿತಾಂಶದ ದಿಕ್ಕು ಬದಲಿಸಲಿದೆ.


ಬಾದಾಮಿ ಸಿಹಿಗೆ ಕಾದಾಟ

ಹಾಲಿ ಶಾಸಕರಾಗಿರುವ ಕಾಂಗ್ರೆಸ್​ನ ಬಿ.ಬಿ. ಚಿಮ್ಮನಕಟ್ಟಿ ಈ ಕ್ಷೇತ್ರದಿಂದ ಎಂಟು ಸಲ ಸ್ಪರ್ಧಿಸಿದ್ದು, ಐದು ಸಲ ಗೆಲುವು ಸಾಧಿಸಿ ಎರಡು ಸಲ ಮಂತ್ರಿಯಾಗಿದ್ದಾರೆ. ಇಲ್ಲಿ ಚಿಮ್ಮನಕಟ್ಟಿ-ಪಟ್ಟಣಶೆಟ್ಟಿ ಕುಟುಂಬಗಳ ಮಧ್ಯೆ ಚುನಾವಣೆ ಕದನವಿದೆ. ಎಂ.ಕೆ. ಪಟ್ಟಣಶೆಟ್ಟಿ ಆರು ಸಲ ಚುನಾವಣೆ ಎದುರಿಸಿ ಮೂರು ಸಲ ಗೆಲುವು, ಮೂರು ಸಲ ಸೋತಿದ್ದಾರೆ. ಈ ಸಲ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ಬೇಡವೆಂಬ ಕೂಗಿದೆ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ಪಕ್ಷ ಉಳಿಯಬೇಕೋ ಬೇಡವೋ ಎಂದು ನೇರವಾಗಿ ಹೇಳಿದ್ದಾರೆ. ಅಕಸ್ಮಾತ್ ಟಿಕೆಟ್ ತಪ್ಪಿದರೆ ಸಿಎಂ ಆಪ್ತ ಡಾ. ದೇವರಾಜ ಪಾಟೀಲ ಸೇರಿ ಆರು ಜನ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಿಂದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಮಹಾಂತೇಶ ಮಮದಾಪುರ ರೇಸ್​ನಲ್ಲಿದ್ದಾರೆ. ಜೆಡಿಎಸ್​ನಿಂದ ಜಿ.ಪಂ. ಮಾಜಿ ಉಪಾಧ್ಯಕ್ಷ ಮಾವಿನಮರದ ಅಭ್ಯರ್ಥಿ ಆಗಲಿದ್ದಾರೆ.

Leave a Reply

Your email address will not be published. Required fields are marked *

Back To Top