Thursday, 20th September 2018  

Vijayavani

Breaking News

ಆಯುಷ್ಮಾನ್ ಜತೆ ಆರೋಗ್ಯ ಕರ್ನಾಟಕ

Saturday, 15.09.2018, 2:04 AM       No Comments

ಬೆಂಗಳೂರು: ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಹಾಗೂ ರಾಜ್ಯ ಸಕಾರದ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿ ಕುರಿತ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಎರಡೂ ಯೋಜನೆಗಳನ್ನು ಆಯಾ ಹೆಸರಿನಲ್ಲೇ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎರಡೂ ಯೋಜನೆ ಗಳಡಿ 1.21 ಕೋಟಿ ಕುಟುಂಬ ಗಳಿಗೆ ವೈದ್ಯಕೀಯ ಸೇವೆ ಸಿಗಲಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ಆರ್ಥಿಕ ಜನಗಣತಿ ಪ್ರಕಾರ ರಾಜ್ಯದ 62 ಲಕ್ಷ ಕುಟುಂಬಗಳು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಆರ್​ಎಸ್​ಬಿವೈ)ಗೆ

ಒಳಪಡಲಿದ್ದು, ಆ ಕುಟುಂಬಕ್ಕೆ ಮಾತ್ರವೇ ‘ಆಯುಷ್ಮಾನ್ ಭಾರತ್’ ಯೋಜನೆ ಪ್ರಕಾರ ಶೇ.60 ಅನುದಾನ ಲಭ್ಯವಾಗಲಿದೆ. ಇನ್ನುಳಿದ ಶೇ.40 ಅನುದಾನ ರಾಜ್ಯ ಸರ್ಕಾರವೇ ಭರಿಸಲಿದೆ. ಆದರೆ, ಕೇಂದ್ರದ ಮಾನದಂಡಗಳಿಗೆ ಒಳಪಡದ 59 ಲಕ್ಷ ಕುಟುಂಬಕ್ಕೆ ಆಯುಷ್ಮಾನ್ ಭಾರತ್ ಯೋಜನೆಯಿಂದ ವಂಚಿತವಾಗಲಿದ್ದು, ಈ ಕುಟುಂಬಗಳು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕದ ಯೋಜನೆಗೆ ಒಳಪಡಲಿವೆ. ಈ ಕುಟುಂಬಗಳ ವೈದ್ಯಕೀಯ ವೆಚ್ಚ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತಿಸಿದೆ.

ಕೋ-ಬ್ರ್ಯಾಂಡ್​ಗೆ ತೀರ್ಮಾನ: ಆಯುಷ್ಮಾನ್ ಭಾರತ್ ಎಂದೇಯೋಜನೆಯನ್ನು ಮುಂದುವರಿಸಲು ಬಹುತೇಕ ರಾಜ್ಯಗಳು ತೀರ್ವನಿಸಿವೆ. ಆದರೆ ಕರ್ನಾಟಕದಲ್ಲಿ ಈ ಯೋಜನೆಯನ್ನು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಹೆಸರಿನಲ್ಲಿ ಮುಂದುವರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ. ಕೇಂದ್ರ- ರಾಜ್ಯ ಸರ್ಕಾರಗಳ ಸಾಮಾಜಿಕ, ಆರ್ಥಿಕ ಜನಗಣತಿ ಮಾನದಂಡಗಳು ಬೇರೆ ಇದ್ದಿದ್ದರಿಂದ ಆಯುಷ್ಮಾನ್ ಭಾರತಕ್ಕೆ ಒಳಪಡುವ ಕುಟುಂಬಗಳ ವಿಚಾರ ಗೊಂದಲ ಉಂಟಾಗಿತ್ತು. ಇದೀಗ ರಾಜ್ಯ ಸರ್ಕಾರ ಕೇಂದ್ರದ ಮಾನದಂಡದ ಪ್ರಕಾರ ಬಿಟ್ಟುಹೋಗುವ ಕುಟುಂಬಗಳಿಗೆ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ಒದಗಿಸಲು ನಿರ್ಧರಿಸಿದೆ. ರಾಜ್ಯದಲ್ಲಿ 1.21 ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಈ ಪೈಕಿ ಆರ್​ಎಸ್​ಬಿವೈಗೆ 62 ಲಕ್ಷ ಕುಟುಂಬಗಳು ಒಳಪಡಲಿವೆ. ಇನ್ನುಳಿದ ಅಂದಾಜು 59 ಲಕ್ಷ ಕುಟುಂಬಗಳನ್ನು ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಡಿಸಲಾಗುತ್ತದೆ. ರಾಜ್ಯದ 4.5 ಕೋಟಿಗೂ ಅಧಿಕ ಜನರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದ ಲಾಭ ಸಿಗುವ ಅಂದಾಜಿದೆ.

ಬಿಪಿಎಲ್ ಕುಟುಂಬಗಳಿಗೂ 5 ಲಕ್ಷ

ಈ ಮೊದಲು ರಾಜ್ಯ ಸರ್ಕಾರ ನೀಡುತ್ತಿದ್ದ 2 ಲಕ್ಷ ರೂ. ವೈದ್ಯಕೀಯ ವೆಚ್ಚವನ್ನು 5 ಲಕ್ಷಕ್ಕೆ ಹೆಚ್ಚಿಸುವ ಚಿಂತನೆ ಇದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬುದ್ಧಿಮಾಂದ್ಯರ ಕುರಿತಾದ ‘ಡೆಮೆನ್​ಷಿಯಾ-2018’ ರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಆಯುಷ್ಮಾನ್ ಭಾರತ ದಿಂದ ಹೊರಗುಳಿಯುವ 59 ಲಕ್ಷ ಕುಟುಂಬಗಳ ವೈದ್ಯಕೀಯ ವೆಚ್ಚವನ್ನು ಸಂಪೂರ್ಣ ವಾಗಿ ರಾಜ್ಯ ಸರ್ಕಾರವೇ ಭರಿಸಲಿದ್ದು, ವೈದ್ಯಕೀಯ ವೆಚ್ಚ 5 ಲಕ್ಷ ರೂ.ವರೆಗೆ ಹೆಚ್ಚಿಸುವ ಸಂಬಂಧ ಸಚಿವ ಸಂಪುಟ ಸಭೆ ಯಲ್ಲಿ ರ್ಚಚಿಸಿ ತೀರ್ವನಿಸಲಾಗುವುದು ಎಂದರು.

1,620 ವಿವಿಧ ಚಿಕಿತ್ಸೆಗಳಿಗೆ ವೆಚ್ಚ

ಆರೋಗ್ಯ ಕರ್ನಾಟಕ ಯೋಜನೆಯಡಿ 1,620 ವಿವಿಧ ಚಿಕಿತ್ಸೆಗಳಿಗೆ ಸಹಾಯ ಒದಗಿಸಲಾಗುತ್ತಿತ್ತು. ಇದೀಗ ಆಯುಷ್ಮಾನ್ ಭಾರತ್​ದಲ್ಲಿನ ಸಂಗತಿಗಳನ್ನು ಪರಿಶೀಲಿಸ ಲಾಗಿದ್ದು, ಅಲ್ಲಿ ಬಿಟ್ಟು ಹೋಗಿರುವ ಚಿಕಿತ್ಸೆಗಳಿಗೂ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಪ್ರಕಾರ ವೈದ್ಯಕೀಯ ಸಹಾಯ ಸಿಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಶಿವಾನಂದ ಪಾಟೀಲ ತಿಳಿಸಿದ್ದಾರೆ.

920 ಕೋಟಿ ರೂಪಾಯಿ ವೆಚ್ಚ

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಗೆ -ಠಿ;920 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಕೇಂದ್ರದಿಂದ 62 ಲಕ್ಷ ಕುಟುಂಬಕ್ಕೆ ಸಿಗುವ ಶೇ.60 ಅನುದಾನದ ಮೊತ್ತ -ಠಿ;300 ಕೋಟಿ ಆಗಲಿದೆ. ಉಳಿದ ಮೊತ್ತ ರಾಜ್ಯ ಸರ್ಕಾರ ಭರಿಸಬೇಕಿದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಹೆಸರಿನಲ್ಲಿ ಯೋಜನೆ ಮುಂದುವರಿಯಲಿದೆ. 62 ಲಕ್ಷ ಕುಟುಂಬಗಳಿಗೆ ಕೇಂದ್ರ ಸರ್ಕಾರ ಶೇ.60 ವೈದ್ಯಕೀಯ ವೆಚ್ಚ ನೀಡುತ್ತಿದ್ದು, ಇನ್ನುಳಿದ ಮೊತ್ತ ರಾಜ್ಯ ಸರ್ಕಾರ ಭರಿಸುವುದರೊಂದಿಗೆ ಅಂದಾಜು 59 ಲಕ್ಷ ಕುಟುಂಬಗಳ ಪೂರ್ಣ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.

| ಶಿವಾನಂದ ಪಾಟೀಲ ಆರೋಗ್ಯ ಸಚಿವ


ಆಯುಷ್ಮಾನ್​ಗೆ ಲ್ಯಾನ್ಸೆಟ್ ಮೆಚ್ಚುಗೆ

ನವದೆಹಲಿ: ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಕಟವಾಗುವ ಬ್ರಿಟನ್ ಮೂಲದ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಆಯುಷ್ಮಾನ್ ಭಾರತ್’ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಭಾರತೀಯರನ್ನು ಗಮನದಲ್ಲಿರಿಸಿ ಜಾರಿಗೆ ತರಲಾಗುತ್ತಿರುವ ಮೋದಿ ನೇತೃತ್ವದ ಸರ್ಕಾರದ ಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಲ್ಯಾನ್ಸಟ್ ಸಂಪಾದಕ ರಿಚರ್ಡ್ ಹಾರ್ಟನ್ ಹೇಳಿದ್ದಾರೆ.

ಆರೋಗ್ಯ ಸೇವೆಗಳು ಪ್ರಜೆಯ ಹಕ್ಕು ಮಾತ್ರವಲ್ಲ ಎಂದು ಮೋದಿ ಅರಿತಿದ್ದಾರೆ. ಜನರು ಸರ್ಕಾರದಿಂದ ಬಯಸುತ್ತಿರುವುದನ್ನು ಅರಿತು ಉತ್ತಮ ಯೋಜನೆಗಳನ್ನು ತರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆಗೆ ಜರ್ನಲ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಹಾರ್ಟನ್, ಕಾಂಗ್ರೆಸ್ ಪಕ್ಷದ ಪುನರುತ್ಥಾನಕ್ಕೆ ರಾಹುಲ್ ಯತ್ನಿಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್​ನಲ್ಲಿ ಕೌಟುಂಬಿಕ ಅಧಿಪತ್ಯವನ್ನು ಮತ್ತೆ ಸಾಧಿಸಲು ಶ್ರಮಿಸುತ್ತಿದ್ದಾರೆ. ಬಡವರು, ಬುಡಕಟ್ಟು, ನಿರ್ಗತಿಕರ ಕಲ್ಯಾಣಕ್ಕೆ ಅವರು ನೀಡುತ್ತಿರುವ ಭರವಸೆಗಳು ಮೋದಿಕೇರ್​ನಿಂದ ಬಹಳ ದೂರವೇ ಉಳಿದಿವೆ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top