Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ಕತ್ತಲಾಗದೇ ನಕ್ಷತ್ರಗಳು ಮಿನುಗುವುದೇ…?

Thursday, 15.12.2016, 2:20 AM       No Comments

ಅದೃಷ್ಟವಂತರಿಗಷ್ಟೆ ಜೀವಿಸಲು ಸಿಗುವ ಘಟ್ಟ ವೃದ್ಧಾಪ್ಯ. ಅದನ್ನವರು ಸಂತಸದಿಂದ ಕಳೆಯುವಂತಾಗಬೇಕು. ಅವರ ಜತೆಗಿದ್ದು ಬೆಳಗಿನ ತಂಪನ್ನು, ಹಗಲಿನ ಪ್ರಖರ ಬೆಳಕನ್ನು ಅನುಭವಿಸಿರುವ ನಮಗೆ ಸಂಜೆಗತ್ತಲಿನ ಭಯವೇಕೆ? ಕತ್ತಲಿನಲ್ಲಷ್ಟೇ ಚುಕ್ಕಿಗಳು ಮಿನುಗಲು ಸಾಧ್ಯ. ಆ ಮಿಂಚು ಹಿರಿಯರ ಮೊಗದಲ್ಲಿ ಪ್ರತಿಫಲಿಸಲು ಅವರೊಡನೆ ನಿಲ್ಲಬೇಕಾದ್ದು ನಮ್ಮ ಕರ್ತವ್ಯ.

  • ಅನಿತಾ ನರೇಶ್ ಮಂಚಿ

ಳೆಗಾಲ ಮುಗಿದೊಡನೆಯೇ ಸಮಾರಂಭಗಳ ಗೌಜá–ಗದ್ದಲಗಳು ಮೈ ಕೊಡವಿಕೊಂಡು ಎದ್ದುಬಿಡುತ್ತವೆ. ಇಂದಿಲ್ಲಿ, ನಾಳೆ ಅಲ್ಲಿ…. ಮನೆಯ ಕೆಲಸಗಳ ಒತ್ತಡದ ನಡುವೆ ಠಾಕು-ಠೀಕಾಗಿ ಸಿದ್ಧವಾಗಿ ಹೊರಡುವುದು ಸುಮ್ಮನೆ ಸಮಯ ಹಾಳೇನೋ ಎನ್ನುವಂಥ ಭಾವ ಮೂಡಿಸಿದರೆ, ಇನ್ನೊಮ್ಮೆ ಆತ್ಮೀಯರ ಭೇಟಿಯ ಸವಿನೆನಪು, ಅವರೊಡನೆ ಆಡುವ ಮಾತುಕತೆಗಳು ಬಹುದಿನದವರೆಗೆ ಉಲ್ಲಾಸ-ಉತ್ಸಾಹ ತರುವ ಟಾನಿಕ್ ಆಗುವುದೂ ಉಂಟು. ಹಲವು ವಿಷಯಗಳನ್ನು ಹಂಚಿಕೊಳ್ಳುವ ಸಮವಯಸ್ಸಿನ ಸ್ನೇಹಿತರು ಸಿಕ್ಕಿದರಂತೂ ಹೊತ್ತು ಹೋಗುವುದೇ ತಿಳಿಯದು. ತೊಂದರೆಗಳಾಗುವುದು ನಮ್ಮ ಸ್ನೇಹಿತರದ್ದೇ ಸಮಾರಂಭವಾದಾಗ. ದಿನನಿತ್ಯದಂತೆ ನಮ್ಮ ಜತೆ ಕುಳಿತು ಹರಟಲು ಅವರಿಗೆ ಸಮಯವಿರುವುದಿಲ್ಲ. ಹೋಗದೇ ಇದ್ದರೆ ಅವರಿಗೆ ಬೇಸರವಾಗುವ ಚಿಂತೆ. ಇಂತಹ ಸಮಯಗಳಲ್ಲಿ ನನ್ನ ಕಿವಿಗಳೇ ನನಗೆ ಮಿತ್ರರು.

ಮೊನ್ನೆಯೂ ಹಾಗೇ ಆಗಿತ್ತು. ಗೆಳತಿಯೊಬ್ಬಳ ನಾದಿನಿಯ ಮದುವೆ. ಅವಳೂ ನನಗೆ ಪರಿಚಿತಳೇ. ಮನೆಗೆ ಬಂದು ಆಹ್ವಾನ ಪತ್ರಿಕೆ ನೀಡಿಹೋಗಿದ್ದು ನಾನು ಹೋಗಲೇಬೇಕಾದ ಅನಿವಾರ್ಯತೆಯ ತಕ್ಕಡಿಯ ತೂಕ ಹೆಚ್ಚಾಗುವಂತೆ ಮಾಡಿತ್ತು. ಒಳನುಗ್ಗುವಾಗ ಬಾಯಾರಿಕೆ ಕೊಡಲು ನಿಂತವರು ನಗೆಬೀರಿ ಒಂದು ಕೈಗೆ ಹೂವು, ಇನ್ನೊಂದು ಕೈಗೆ ದೊಡ್ಡಲೋಟ ಜ್ಯೂಸು ಕೊಟ್ಟು ಸಾಗಹಾಕಿದರು. ಅತ್ತಿತ್ತ ನೋಡಿದರೆಲ್ಲಾ ಅಪರಿಚಿತ ಮುಖಗಳೇ. ‘ಎತ್ತೆತ್ತಲೀಗ ಕತ್ತಲೆಯು ಮುತ್ತಿ ಗುರಿ ಕಾಣದಾದೆ ವಿಠಲಾ..’ ಎಂದು ಮನದೊಳಗೆ ಹಾಡುತ್ತಾ ಒಂದು ಖಾಲಿಕುರ್ಚಿಗಳ ಸಾಲಿನಲ್ಲಿ ಆಸೀನಳಾಗಿ ಗೆಳತಿಯ ಮುಖ ಎಲ್ಲಿ ಕಾಣುತ್ತದೆ ಅಂತ ಕತ್ತನ್ನು ಮುನ್ನೂರರವತ್ತು ಡಿಗ್ರಿಗಳಿಗೂ ತಿರುಗಿಸಿದೆ. ಅಕ್ಕಪಕ್ಕದ ಕುರ್ಚಿಗಳು ಭರ್ತಿಯಾಗುತ್ತಿದ್ದಂತೆ ನನ್ನ ವ್ಯರ್ಥಪ್ರಯತ್ನ ಬಿಟ್ಟು ಮಂಟಪದ ಕಡೆ ಮುಖ ತಿರುಗಿಸಿ ಮದುವೆಯ ಕಲಾಪಗಳನ್ನು ನೋಡುತ್ತಾ ಕುಳಿತೆ. ನನ್ನ ಪಕ್ಕದಲ್ಲಿ ಕುಳಿತ ಹೆಣ್ಣುಮಗಳೊಬ್ಬಳು ನನ್ನೆದುರಿನಿಂದ ಮುಖಬಗ್ಗಿಸಿ ನನ್ನ ಇನ್ನೊಂದು ಪಕ್ಕದಲ್ಲಿ ಕುಳಿತವರನ್ನು ಮಾತಿಗೆಳೆದಳು. ನಾನು ಕಿವಿ ತೆರೆದಿಟ್ಟೆ.

‘‘ಅರ್ರೇ.. ಪಾರ್ವತಿ ಅತ್ತೆ, ಬಾರೀ ಅಪ್ರೂಪ ನೀವು? ಕಾಣದೇ ಎರಡ್ಮೂರು ವರ್ಷವೇ ಆಯ್ತೇನೋ? ಶ್ರೀನಿವಾಸ ಮಾವನನ್ನಾದರೆ ಒಂದೆರಡು ಸಲ ನೋಡಿದ್ದೆ’’.

‘‘ಯಾರಿದು? ನಂಗೆ ಸರೀ ಗುರ್ತ ಆಗ್ಲಿಲ್ಲಲ್ಲಾ? ಪಕ್ಕ ಅಂದಾಜು ಆಗುವುದಿಲ್ಲ ನೋಡೀಗ’’.

‘‘ಅಯ್ಯೋ .. ಅತ್ತೆ ನಾನು ವತ್ಸಲಾ.. ಗೊತ್ತಾಗ್ಲಿಲ್ವಾ..’’.

‘‘ವತ್ಸಲಾ.. ಅಂದ್ರೆ ನಮ್ಮ ಶಾಲಿನಿಯ ಮಗಳು ತಾನೇ.. ಗೊತ್ತಾಯ್ತು. ಹೇಗಿದ್ದೀಯಾ?’’.

‘‘ಹುಂ, ಎಲ್ಲಾ ಆರಾಮ ಅತ್ತೆ. ನೀವು ಹೇಗಿದ್ದೀರಾ?’’.

‘‘ನಂಗೇನಮ್ಮಾ, ನನ್ನ ಕೆಲಸ ನಾನು ಮಾಡಿಕೊಂಡ್ರೆ ಈಗ ಹುಷಾರು ಎಂತಲೇ ಲೆಕ್ಕ. ಇನ್ನೆಂತ ಆಗ್ಲಿಕ್ಕುಂಟು ನಮಗೆಲ್ಲ. ಹೀಗೆ ಕೈಕಾಲು ಆಡುವಾಗಲೇ ದೇವರು ಕೊಂಡೋದ್ರೆ ಸಾಕು’’.

‘‘ಸುಮ್ನಿರಿ ಅತ್ತೇ.. ನಿಮ್ಗೆಲ್ಲ ಎಂತ ಆಗ್ತದೆ. ಪ್ರಾಯ ಆದವರು ಹೀಗೆ ಮಾತಾಡಲೇಬೇಕು ಅಂತ ನಿಯಮ ಏನಾದ್ರು ಉಂಟಾ ಹೇಗೆ?’’.

‘‘ನಿಯಮ ಅಂತಲ್ಲ. ಪ್ರಾಯ ಆದಾಗ ಬರುವ ಸಮಸ್ಯೆಗಳು ಈ ಮಾತನ್ನು ಹೇಳಿಸುವುದು. ನಾವು ಬಾಯಲ್ಲಿ ಹೀಗೆ ಹೇಳಿದರೂ ನಮ್ಮೊಳಗೆ ಸಾಯುವ ಭಯ ಇದ್ದೇ ಇರ್ತದೆ ಗೊತ್ತುಂಟಾ… ತಿಂದದ್ದೋ ಉಂಡದ್ದೋ ಅಪಥ್ಯ ಆಗಿ ಒಂದಿಷ್ಟು ನೋವು ಬರ್ಲಿ. ನಮ್ಮ ಮಂಡೆಗೆ ಹೋಗುವುದು ‘‘ಆಯ್ತಿನ್ನು ನಮ್ಮ ಕತೆ, ಇದು ಬಹುಶಃ ನನ್ನನ್ನು ಕೊಂಡೋಗಲಿಕ್ಕೇ ಬರುವ ನೋವೇನೋ’ ಅಂತ….’’. ಪಕಪಕನೆ ಅವರು ನಕ್ಕ ನಗು ನನ್ನ ತುಟಿಗಳಲ್ಲೂ ಹರಿದು ಪಕ್ಕದಲ್ಲಿ ಕುಳಿತವಳಿಗೂ ತಲುಪಿತು.

‘‘ಹುಂ.. ಆವತ್ತು ಶ್ರೀನಿವಾಸ ಮಾವ ಸಿಕ್ಕಿದಾಗ ಹೇಳಿದ್ರು, ನಿಮಗೆಂತದೋ ಅಷ್ಟು ಆರೋಗ್ಯ ಸರಿ ಇಲ್ಲ ಅಂತ. ಏನಾಗಿತ್ತು ಅತ್ತೇ?’’.

‘‘ಹಾಗೆ ನೋಡಿದರೆ ಏನೂ ಆಗಿರಲೇ ಇಲ್ಲ ಅಂತಲೇ ಹೇಳಬೇಕು. ಅದ್ರೂ ಮನೆಬಿಟ್ಟು ಎಲ್ಲಿಗೆ ಹೋಗೋದೂ ಕಷ್ಟ ಎನ್ನುವಂತ ಸ್ಥಿತಿ ಮಾರಾಯ್ತಿ. ಯಾರ ಹತ್ತಿರ ಹೇಳಿಕೊಳ್ಳುವಂತೆಯೂ ಇಲ್ಲ’’.

‘‘ಅಂದ್ರೇನು ಅತ್ತೆ, ಮುಟ್ಟು ನಿಲ್ಲುವಾಗಿನ ತೊಂದರೆಗಳಾ? ನನಗೂ ಇನ್ನು ಶುರುವಾಗಲಿಕ್ಕುಂಟು ಅದು, ಈಗಲೇ ಮನಸ್ಸಿನಲ್ಲಿ ಹೆದರಿಕೆ ಕೂತಿದೆ. ಅಮ್ಮನಿಗೆ ತುಂಬಾ ತೊಂದರೆ ಆಗಿತ್ತಲ್ಲ, ಅದೆಲ್ಲಾ ಹೆರಿಡಿಟಿ ಅಂತಾರಪ್ಪ. ನನಗೂ ಹಾಗೇ ಆದರೆ.. ಅಮ್ಮ ಏನೋ ಮನೆಯಲ್ಲಿದ್ದಳು. ನನಗೆ ಆಫೀಸಿಗೂ ಹೋಗಬೇಕಲ್ಲ’’.

‘‘ಮುಟ್ಟಿಂದಲ್ಲ ಮಾರಾಯ್ತಿ. ಅದು ನಿಂತು ಯಾವ ಕಾಲ ಆಯ್ತೋ ಏನೋ, ನನಗೇ ಮರೆತುಹೋಗಿದೆ. ಇದು ಹೊಸಾರಗಳೆ. ನಿಮ್ಮಂತವರಿಗೆ ಕೇಳಿದರೆ ನಗು ಬಂದೀತು, ಆದ್ರೆ ಅನುಭವಿಸುವ ನಮ್ಮಂತವರಿಗೆ ಆಗುವ ಹಿಂಸೆ ಉಂಟಲ್ಲ, ಅದು ಶತ್ರುವಿಗೂ ಬೇಡ’’.

‘‘ಅಯ್ಯೋ ಅದೆಂತದು ಅತ್ತೆ ಅಷ್ಟು ವಿಪರೀತದ ಕಾಯಿಲೆ. ಎಂತೆಂತ ಹೊಸ ಹೊಸ ಕಾಯಿಲೆಗಳು ಬರ್ತದೋ ಈಗಿನ ಕಾಲದಲ್ಲಿ’’.

‘‘ಇದು ಈಗಿನ ಕಾಲದ್ದಲ್ಲ. ಮೊದಲಿನಿಂದಲೇ ಇತ್ತು. ಆಗ ನಾವು ಕೂಡಾ ಅಂತವರನ್ನು ನೋಡಿ ನಗಾಡುತ್ತಾ ಇದ್ದೆವು. ಈಗ ಅನುಭವಿಸುವಾಗ ಗೊತ್ತಾಗುತ್ತದೆ ಅಷ್ಟೇ ಅದರ ಸಂಕಟ. ಹಾಗೆ ಅದೇನೋ ಪ್ರಾಣ ಹೋಗುವಂತ ನೋವು ಇರುವುದೆಲ್ಲ ಅಲ್ಲ ಮಾರಾಯ್ತಿ. ಎಲ್ಲರ ಹತ್ರ ಹೇಳಲಿಕ್ಕೆ ಸಂಕೋಚ, ನಿನ್ನತ್ರ ಹೇಳಲಿಕ್ಕೇನು ತೊಂದ್ರೆ ಇಲ್ಲ ಬಿಡು. ನನಗೆಂತ ಆಗುವುದು ಗೊತ್ತುಂಟಾ, ಈಗ ನಿಮಗೆಲ್ಲಾ ಹೊರಗೆ ಮೂತ್ರ ಮಾಡಲಿಕ್ಕೆ ಹೋಗ್ಬೇಕು ಅಂದುಕೊಂಡ ಮೇಲೆ ಟಾಯ್ಲೆಟ್ ಹುಡುಕಿ ನಿಧಾನಕ್ಕೆ ಹೋದರೂ ಸಾಕಲ್ವ. ಅಂದರೆ ಎಷ್ಟೇ ಅವಸರ ಆಗಿದ್ದರೂ ಅದನ್ನು ಬಾರದಂತೆ ತಡೆ ಹಿಡಿಯಬಹುದಲ್ವಾ. ನನಗೆ ಹಾಗೆ ಮಾಡಲಿಕ್ಕೆ ಆಗುವುದಿಲ್ಲ. ಒಮ್ಮೆ ದೇಹ ಮಿದುಳಿಗೆ ಸಂಜ್ಞೆ ಮಾಡಿತು ಅಂತಾದರೆ ಕೂಡಲೇ ಹೋಗಲೇಬೇಕೆಂಬ ಒತ್ತಡ. ಒಂದು ಕ್ಷಣ ತಡವಾದರೂ ನಿಂತಲ್ಲೋ, ಕೂತಲ್ಲೋ ಒದ್ದೆಯಾಗುವ ಭಯ. ಮನೆಯಲ್ಲಾದ್ರೆ ಹೇಗಾದರೂ ಇದನ್ನು ಸುಧಾರಿಸಿಕೊಳ್ಳಬಹುದು. ಹೋದಲ್ಲಿ ಹೀಗೆಲ್ಲ ಆದರೆ ಎಷ್ಟು ನಾಚಿಕೆ. ಅದಕ್ಕೆ ನಾನು ಮನೆಬಿಟ್ಟು ಎಲ್ಲಿಗೂ ಹೋಗದೇ ಅಜ್ಞಾತವಾಸದಲ್ಲಿ ಕಳೆದಂತೆ ದಿನ ಕಳೆದದ್ದು. ಮನೆಗೆ ಬಂದ ಹತ್ತಿರದ ಬಂಧು-ಬಳಗದವರು ನಾನು ಅವರ ಮನೆಗೆ ಹೋಗುವುದಿಲ್ಲ ಅಂತ ಕೋಪಿಸಿಕೊಂಡದ್ದೂ ಇತ್ತು. ಎಲ್ಲರಿಗೂ ನನ್ನ ಸಮಸ್ಯೆ ಹೇಳಿಕೊಳ್ಳಲಿಕ್ಕಾಗುತ್ತದಾ.. ನನ್ನ ಕೊನೇ ನಾದಿನಿ ಅಂತೂ ನಾನು ಬೇಕು ಅಂತಲೇ ಅವಳ ಮನೆಗೆ ಹೋಗುವುದಿಲ್ಲ ಅಂತ ಮಾತೇ ಬಿಟ್ಟಿದ್ದಳು’’.

‘‘ಓಹ್.. ಈ ಸಮಸ್ಯೆ ಕೆಲವರಿಗೆ ಆಗುತ್ತದೆ ಅಲ್ವಾ.. ಇದರ ಬಗ್ಗೆ ನಾನೂ ಕೇಳಿದ್ದೆ ಅತ್ತೆ, ಆದ್ರೆ ಅದಕ್ಕೆ ಸ್ವಲ್ಪ ವ್ಯಾಯಾಮ, ಯೋಗ ಎಲ್ಲಾ ಮಾಡಿದರೆ ಆಗುತ್ತದಂತೆ ಅಲ್ವಾ..’’.

‘‘ಎಲ್ಲಿಗೆ ಮಾರಾಯ್ತಿ ನಾನು ವ್ಯಾಯಾಮ ಮಾಡುವುದು. ಕಾಲಿನ ಮಂಡಿ ಸವೆದು ಕಾಲುಗಂಟು ನೋವು, ನೆಲದಲ್ಲಿ ಕೂರಲಿಕ್ಕೆ ಆಗುವುದಿಲ್ಲ. ಇನ್ನು ವ್ಯಾಯಾಮ ಎಂತದನ್ನು ಮಾಡುವುದು. ಆದರೂ ನಮ್ಮ ಫ್ಯಾಮಿಲಿ ಡಾಕ್ಟ್ರು ಹೇಳಿಕೊಟ್ಟ ಒಂದೆರಡು ವ್ಯಾಯಾಮ ಮಾಡ್ತಾ ಇದ್ದೇನೆ. ಮುಖ್ಯ ನನ್ನ ಮನಸ್ಸಿಗೆ ಧೈರ್ಯ ಬೇಕಲ್ಲ. ಅದೇ ಇಲ್ಲ ನೋಡು ಪ್ರಾಯ ಆಗುವಾಗ. ಇನ್ನು ಈ ಶರೀರದ ಇಂಜಿನ್ನು ಎಲ್ಲಾ ರಿಪೇರಿ ಮಾಡಿ ಬರ್ಕತ್ತಾಗಲಿಕ್ಕೆ ಅಂತಿಲ್ಲ ಬಿಡು. ಆದರೂ ನಮ್ಮಷ್ಟಕ್ಕೆ ನಾವಿರುವಷ್ಟಾದರೂ ಆಗ್ಬೇಕಲ್ಲ’’.

‘‘ಅದು ಹೌದು ಅತ್ತೆ, ಸುಮ್ಮನೆ ನಮ್ಮಿಂದ ಇನ್ನೊಬ್ಬರಿಗೆ ತೊಂದರೆ, ನಮಗೂ ಮುಜುಗರ ಆಗ್ಬಾರ್ದಲ್ಲ. ಅದೆಲ್ಲಾ ಸರಿ. ಆದ್ರೆ ಈಗ ನಿಮ್ಮನ್ನು ನೋಡಿದರೆ ತೊಂದರೆ ಏನೂ ಇದ್ದಹಾಗಿಲ್ಲ. ಎಂತಾದ್ರೂ ಮದ್ದು ಮಾಡಿ ಗುಣ ಆಯ್ತಾ’’.

ಮುಖವೆಲ್ಲಾ ಗುಲಾಬಿಯಂತಾದ ಆಕೆ ಕೊಂಚ ನಾಚಿಕೆಯಿಂದ ಸ್ವರವನ್ನು ಇನ್ನಷ್ಟು ಸಣ್ಣದಾಗಿಸಿದರು.

‘‘ಮದ್ದು ಮಾಡಿದ್ದು ಡಾಕ್ಟ್ರಲ್ಲ ಮಾರಾಯ್ತಿ. ನನ್ನ ಪುಳ್ಳಿ’’.

‘‘ಹೌದಾ ಅದೆಂತ ಮದ್ದು ಪುಳ್ಳಿಯದ್ದು. ನಂಗೂ ಹೇಳಿ ನೋಡುವಾ’’.

‘‘ಎಂತದ್ದು ಇಲ್ಲ ಮಾರಾಯ್ತಿ. ಮಕ್ಕಳಿಗೆ ಹಾಕುವಂತೆ ನನಗೂ ಒತ್ತಾಯ ಮಾಡಿ ಡಯಾಪರ್ ಹಾಕಿಸಿದ್ದಾಳೆ. ಮೊದಮೊದಲು ರಗಳೆ ಆಗ್ತಿತ್ತು. ಈಗ ಅಭ್ಯಾಸ ಆಗಿದೆ. ಯಾವುದೇ ಹೊಸ ಜಾಗಕ್ಕೆ ಮನೆಯವರೊಂದಿಗೆ ಹೋದರೂ ಅಲ್ಲಿನ ಟಾಯ್ಲೆಟ್ ಎಲ್ಲಿದೆ ಅಂತ ಮೊದಲು ನನಗೆ ತೋರಿಸಿಯೇ ಹೋಗುತ್ತಾರೆ. ಹಾಗಾಗಿ ನನಗೆ ಆತಂಕ ಕಡಿಮೆಯಾಗಿದೆ. ಇದರಿಂದ ನನ್ನ ಸಮಸ್ಯೆ ಗುಣ ಆಗದಿದ್ದರೂ, ನಾಲ್ಕು ಜನರ ನಡುವೆ ನಾಚಿಗೆ ಪಡುವಂತಾಗುವುದಿಲ್ಲ ಅಂತ ಧೈರ್ಯ ಬಂದಿದೆ. ಒಮ್ಮೆ ನಮ್ಮ ಮನಸ್ಸಿಗೆ ಆ ಧೈರ್ಯ ಬಂದರೆ ಸಾಕಲ್ಲ. ಮತ್ತಿನದೆಲ್ಲಾ ಸಲೀಸು’’.

‘‘ಹ್ಹೋ.. ಇದೊಳ್ಳೆದಾಯ್ತು ಅತ್ತೆ ನೀವು ಹೇಳಿದ್ದು. ಯಾರಿಗಾದ್ರೂ ಅನುಕೂಲ ಆಗುವಂತದ್ದೇ ಇದು’’.

ಮಾತು ಇನ್ನೂ ಮುಂದುವರಿಯುತ್ತಿತ್ತು.. ಆಗಲೇ ಕುಳಿತಿದ್ದ ನಾನು ಗೆಳತಿಯ ಕಣ್ಣಿಗೆ ಬೀಳಬೇಕೇ..!! ಅವಳು ನನ್ನ ಹತ್ತಿರ ಬಂದು ಮದುಮಕ್ಕಳನ್ನು ಮಾತಾಡಿಸು ಅಂತ ಎಳೆದೊಯ್ದಳು.

ಮದುಮಕ್ಕಳ ಮೇಲೆ ಅಕ್ಷತೆಕಾಳು ಚೆಲ್ಲುತ್ತಿದ್ದಂತೆ ಮನಸ್ಸು ಆ ಹಿರಿಯಾಕೆಯ ಮನೆಯವರನ್ನು ನೆನೆಯಿತು. ವೃದ್ಧಾಪ್ಯ ಅದೃಷ್ಟವಂತರಿಗೆ ಮಾತ್ರ ಜೀವಿಸಲು ಸಿಗುವ ಘಟ್ಟ. ಅದನ್ನು ಅವರು ಸಂತಸದಿಂದ ಕಳೆಯುವಂತಾಗಲು ನಮ್ಮ ಸಹಕಾರ ಇದ್ದರೆ ಮಾತ್ರ ಸಾಧ್ಯ. ಅವರ ಜತೆಗಿದ್ದು ಆ ಬೆಳಗಿನ ತಂಪನ್ನು ಅನುಭವಿಸಿರುತ್ತೇವೆ. ಹಗಲಿನ ಪ್ರಖರ ಬೆಳಕಿನಲ್ಲಿ ಬದುಕು ಕಂಡುಕೊಳ್ಳುತ್ತೇವೆ. ಸಂಜೆಗತ್ತಲನ್ನು ಮಾತ್ರ ಯಾಕೆ ಭಯದಿಂದಲೇ ನೋಡುತ್ತೇವೆ? ಕತ್ತಲಿನಾಗಸ ಇದ್ದಲ್ಲಿ ಮಾತ್ರ ಚುಕ್ಕಿಗಳ ಮಾಲೆ ಮಿನುಗಲು ಸಾಧ್ಯ. ಆ ಮಿಂಚು ನಮ್ಮ ಮನೆ ಮನೆಯಲ್ಲಿರುವ ಹಿರಿಯರ ಮೊಗದ ಮೇಲೆ ಪ್ರತಿಫಲಿಸಬೇಕಾದರೆ ಅವರೊಡನೆ ನಿಲ್ಲಬೇಕಾದ್ದು ನಮ್ಮ ಕರ್ತವ್ಯ.

(ಲೇಖಕರು ಸಾಹಿತಿ)

 

Leave a Reply

Your email address will not be published. Required fields are marked *

Back To Top