Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ದೇವೇಗೌಡರ ಒಂದೇಟಿಗೆ ಮೂರು ಹಕ್ಕಿಗಳು!

Friday, 25.05.2018, 3:05 AM       No Comments

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಹೊಂದಾಣಿಕೆ, ಪ್ರಣಾಳಿಕೆಗಳ ಅವಲೋಕನಕ್ಕೆ ಕಾಲಾವಕಾಶದ ಅಗತ್ಯವಿದ್ದು, ಹೊಸ ಸರ್ಕಾರಕ್ಕೆ ಆರು ತಿಂಗಳ ಹನಿಮೂನ್​ಗೆ ಅವಕಾಶ ಕಲ್ಪಿಸುವುದು ಸೂಕ್ತ.

| ಆರ್.ಪಿ. ಜಗದೀಶ್

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವುದನ್ನು ಕೇಳಿದ್ದೇವೆ. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳ ರೆಕ್ಕೆ ಕತ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿರೀಕ್ಷೆಯಂತೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಯಾವುದರ ಜೊತೆ ಹೊಂದಾಣಿಕೆ ಮಾಡಿಕೊಂಡರೂ ಅದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಗಿರಬೇಕು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಥವಾ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೆ ಏರಬಾರದು ಎಂಬುದು ಅವರ ತಂತ್ರವಾಗಿತ್ತು.

ಮಗನ ಪಟ್ಟಾಭಿಷೇಕದ ಸದವಕಾಶ ಉಪಯೋಗಿಸಿಕೊಂಡು ದೇಶದಲ್ಲಿರುವ ಬಿಜೆಪಿಯೇತರ ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳ ಧುರೀಣರನ್ನು ಒಂದೇ ವೇದಿಕೆಗೆ ಕರೆತಂದು ತೃತೀಯ ರಂಗ ರಚನೆಗೆ ಭೂಮಿಕೆ ಸಜ್ಜುಗೊಳಿಸುವ ಮೂಲಕ ತಾವು ತೃತೀಯ ರಂಗದ ಮುಂಚೂಣಿಗೆ ಬರಬಹುದು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಅತ್ತ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡುವುದು ಹಾಗೂ ತೃತೀಯ ರಂಗ ಬಲಪಡಿಸುವುದು- ಹೀಗೆ ದೇವೇಗೌಡರು ಮೂರು ಹಕ್ಕಿಗಳನ್ನು ಒಂದೇ ಏಟಿಗೆ ಹೊಡೆದುರುಳಿಸಿದ್ದಾರೆ.

ಬಹುತೇಕ ಬಿಜೆಪಿಯೇತರ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಹಾಗೂ ವಿರೋಧ ಪಕ್ಷದ ಸ್ಥಾನದಲ್ಲಿರುವ ಪಕ್ಷಗಳು ಉತ್ತರ-ದಕ್ಷಿಣದಂತಿವೆ. ಇವರನ್ನೆಲ್ಲ ಒಗ್ಗೂಡಿಸುವುದೆಂದರೆ ಕಪ್ಪೆಗಳನ್ನು ತಕ್ಕಡಿಗೆ ಹಾಕಿ ತೂಗಿದಂತಹ ಸಾಹಸದ ಕೆಲಸವೇ ಸರಿ. ಆದರೂ, ಈ ಇಳಿವಯಸ್ಸಿನಲ್ಲಿಯೂ ಗೌಡರ ಉತ್ಸಾಹ, ಹುಮ್ಮಸ್ಸು ಹಾಗೂ ಆತ್ಮವಿಶ್ವಾಸ ಮೆಚ್ಚತಕ್ಕದ್ದು. ಮುಂದೇನಾಗುತ್ತದೆಯೋ ಕಾದು ನೋಡೋಣ. ಪ್ರಯತ್ನ ತಪ್ಪಲ್ಲ ಎಂಬುದು ಅವರ ನಿಲುವು. ಮುಂದಿನ ದಿನಗಳಲ್ಲಿ, ಈ ಎಲ್ಲಾ ಪಕ್ಷಗಳ ನಾಯಕರನ್ನು ಆದಷ್ಟು ಪ್ರತ್ಯೇಕವಾಗಿ ಭೇಟಿಯಾಗಿ ರ್ಚಚಿಸುವ ದೊಡ್ಡಗೌಡರು, ಎಲ್ಲರ ಮೂಗಿಗೂ (ಪ್ರಧಾನಿ ಹುದ್ದೆ) ತುಪ್ಪ ಹಚ್ಚುತ್ತಾರೆ. ನಂತರ ಸಂದರ್ಭ ನೋಡಿ ಒಬ್ಬೊಬ್ಬರ ಹೆಗಲ ಮೇಲೂ ಕೈಯೂರಿ, ನೆಲಕಚ್ಚಿಸಿ ತಾವು ಸರ್ವಸಮ್ಮತ ನಾಯಕರು ಎಂದು ಅವರ ಬಾಯಿಂದಲೇ ಹೇಳಿಸುತ್ತಾರೆ. ರಾಜಕೀಯ ಚದುರಂಗ ಆಟದಲ್ಲಿ ‘ನ್ಯಾಷನಲ್ ಚಾಂಪಿಯನ್’ ಆಗಿರುವ ಗೌಡರಿಗೆ ಈ ವಿದ್ಯೆ ಕರಗತವಾಗಿದೆ. ಇದೇ ರೀತಿ, ತಂದೆಗೆ ತಕ್ಕ ಮಗನಾದ ಕುಮಾರಸ್ವಾಮಿ ಅವರೂ ‘ಬ್ರದರ್ ಬ್ರದರ್’ ಎಂದು ನಗುನಗುತ್ತಲೇ ಎಲ್ಲರ ಹೆಗಲ ಮೇಲೆ ಕೈಹಾಕಿ ಅವರಸ್ನೇಹ ಗಳಿಸುತ್ತಾರೆ. ಕೊನೆಗೆ ಇವರು, ಎಲ್ಲರಿಗೂ ಸಲ್ಲುವಂತಾಗಿ ಒಮ್ಮತದ ನಾಯಕನಾಗಿ ಹೊರಹೊಮ್ಮುತ್ತಾರೆ. ಹೀಗಾಗಿ ಕುಮಾರಸ್ವಾಮಿಯವರು ‘ನಮ್ಮ’ ಮುಖ್ಯಮಂತ್ರಿಯೆಂದು ಸಿದ್ದರಾಮಯ್ಯ ಬಾಯಿಂದಲೇ ಹೇಳುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು.

ಒಂದು ವೇಳೆ ತಮ್ಮ ಲೆಕ್ಕಾಚಾರ ತಪ್ಪಿ ಕಾಂಗ್ರೆಸ್ ನೂರರ ಗಡಿ ದಾಟಿ ಕೇವಲ ಕೆಲವು ಸ್ಥಾನಗಳ ಕೊರತೆ ಉಂಟಾಗಿದ್ದರೆ, ಆಗ ಕಾಂಗ್ರೆಸ್ ಜೊತೆ ಕೈಜೋಡಿಸಿ ಡಾ. ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಿ ಎರಡೂವರೆ ವರ್ಷಕ್ಕೆ ರೇವಣ್ಣನವರನ್ನು ಡಿಸಿಎಂ ಮಾಡುವ ‘ಬಿ’ ತಂತ್ರವೂ ಅವರ ಬತ್ತಳಿಕೆಯಲ್ಲಿತ್ತಂತೆ. ಇದೇ ರೀತಿ ರಾಮಲಿಂಗಾರೆಡ್ಡಿ ಮೂಗಿಗೂ ತುಪ್ಪ ಸವರಲಾಗಿತ್ತು ಎನ್ನಲಾಗಿದೆ. ಮಣ್ಣಿನ ಮಗ ಪ್ರಧಾನಿಯಾದರು. ಅವರ ಮಗ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ದೊಡ್ಡಗೌಡರೂ 2ನೇ ಬಾರಿಗೆ ಪ್ರಧಾನಿ ಆಗುವುದನ್ನು ತಳ್ಳಿ ಹಾಕುವಂತಿಲ್ಲ. ದೇವರ ಆಟ ಬಲ್ಲವರಾರು? ಆಗಲಿ, ಆಗುವುದೆಲ್ಲಾ ಒಳ್ಳೆಯದಕ್ಕೇ ಅಲ್ಲವೇ? ‘ನಾನು ಸಂದರ್ಭದ ಕೂಸು’ ಎಂದು ಕುಮಾರಸ್ವಾಮಿ ಹೇಳುವುದನ್ನು ನಂಬಲು ಸಾಧ್ಯವಿಲ್ಲ. ಸಂದರ್ಭದ ಶಿಶು ಅಲ್ಲ, ಆ ಅನಿವಾರ್ಯತೆಯ ಸೃಷ್ಟಿಕರ್ತ ಬೇರೆ ಯಾರೂ ಅಲ್ಲ, ಅವರ ತಂದೆಯವರೇ ಎನ್ನುವುದು ಕಟುಸತ್ಯ. ರಾಜ್ಯದ ಜನತೆಯೂ ಇದನ್ನು ಅರಿತಿದ್ದಾರೆ. ಆದರೆ, ‘ನಾನೇ ಮುಂದೆಯೂ ಸಿಎಂ’ ಎಂದು ಹಿಮಾಲಯದ ಶಿಖರದ ಮೇಲೆ ನಿಂತು ದರ್ಪದಿಂದ ಅಬ್ಬರಿಸುತ್ತಿದ್ದ ಸಿದ್ದರಾಮಯ್ಯ ಈಗ ಪಾತಾಳಕ್ಕೆ ತಳ್ಳಲ್ಪಟ್ಟಿದ್ದಾರೆ. ‘150 ಸ್ಥಾನ ಗಳಿಸಿ ಸಿಎಂ ಆದ 24 ಘಂಟೆಯೊಳಗೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೇನೆ’ ಎಂದು ಘೀಳಿಡುತ್ತಿದ್ದ ಬಿಎಸ್​ವೈ, ಕೇವಲ ಎರಡೂವರೆ ದಿನಗಳ ಸುಲ್ತಾನರಾಗಿ ಮನೆಗೆ ಮರಳಿದ್ದಾರೆ.

ಮುಖ್ಯಮಂತ್ರಿಗಳ ದೇವರು- ದೇವಮಾನವರ ಭೇಟಿ ಸಾಕು. ಎಲ್ಲಕ್ಕೂ ಇತಿಮಿತಿ ಇದ್ದರೆ ಚೆನ್ನ. ಈ ಪ್ರವಾಸ ನಿಲ್ಲಿಸಿ, ಸಮಸ್ಯೆಗಳ ಸರಮಾಲೆಯ ಸುಳಿಯಲ್ಲಿಯೇ ಸಿಕ್ಕಿ ಕಂಗಾಲಾಗಿರುವ ಮತದಾರ ಪ್ರಭುಗಳ ಮನೆಬಾಗಿಲಿಗೆ ಹೋಗಿ ಕಷ್ಟ ಸುಖ ವಿಚಾರಿಸುವಂತಾದರೆ ಇದೇ ಜನತಾ ಜನಾರ್ದನನ ಸೇವೆ ಮಾಡಿದಂತೆ. ಅಲ್ಲದೆ, ವಿಧಾನಸೌಧ, ವಿಕಾಸಸೌಧಗಳನ್ನು ದೇವಸ್ಥಾನಗಳಾಗಿ ಪರಿವರ್ತಿಸಬಾರದು. ಸಚಿವರ ಕೊಠಡಿಗಳು ಗುಡಿ-ಗೋಪುರ-ಮಸೀದಿ-ಚರ್ಚುಗಳಾಗಬಾರದು. ಸ್ಪರ್ಧೆಗೆ ಬಿದ್ದವರಂತೆ ಕೊಠಡಿಗಳನ್ನು ಅಲಂಕರಿಸಿ ಪೂಜೆ ಮಂಗಳಾರತಿ ಮಾಡಬಾರದು. ಇದೆಲ್ಲಾ ವೈಯಕ್ತಿಕ ಹಾಗೂ ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು. ಇಲ್ಲದಿದ್ದರೆ ವಿಧಾನಸೌಧದ ಆವರಣದ ಮೂಲೆಯೊಂದರಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ದೇವಸ್ಥಾನವೊಂದನ್ನು ನಿರ್ವಿುಸಿ, ಎಲ್ಲರೂ ವಿಧಾನಸೌಧಕ್ಕೆ ಬರುವ ಮುನ್ನ, ಅಲ್ಲಿಗೆ ಹೋಗಿ ನಿತ್ಯಪೂಜೆ ಮಾಡಿಸಿ ಬರಲಿ.

ವಿಧಾನಸೌಧದಲ್ಲಿ ಖಾತೆಗಳಿಗೆ ಅನುಗುಣವಾಗಿ ನಿರ್ದಿಷ್ಟ ಕೊಠಡಿಗಳನ್ನು ಗೊತ್ತುಪಡಿಸಬೇಕು (ಕೇಂದ್ರ ಸರ್ಕಾರದಲ್ಲಿರುವ ರೀತಿ). ಉದಾಹರಣೆಗೆ- ಮುಖ್ಯಮಂತ್ರಿಗಳು, ಪಕ್ಕದ ಕೊಠಡಿ- ಉಪಮುಖ್ಯಮಂತ್ರಿಗಳಿಗೆ. ತದನಂತರ ಗೃಹ ಇಲಾಖೆ, ಹಣಕಾಸು, ಕೈಗಾರಿಕೆ, ವಾರ್ತೆ- ಹೀಗೆ ಕಾಯಂ ಕೊಠಡಿಗಳಿರಬೇಕು. ಇದರಿಂದ ಸಾರ್ವಜನಿಕರು, ಅಧಿಕಾರಿಗಳ ಭೇಟಿಯ ಗೊಂದಲಗಳು ತಪ್ಪುತ್ತವೆ. ಮುಖ್ಯಮಂತ್ರಿಗಳೂ ಕೂಡ ಅಧಿಕೃತ ನಿವಾಸದಲ್ಲಿಯೇ ವಾಸಿಸಬೇಕು. ಅವರೇನಾದರೂ ಸ್ವಂತ ನಿವಾಸದಲ್ಲಿ ಉಳಿದುಕೊಂಡರೆ, ಸರ್ಕಾರದ ವೆಚ್ಚ ಕಡಿಮೆ ಮಾಡಬಹುದು ಎಂಬುದು ಕೇವಲ ತೋರಿಕೆಯ ವಿಷಯವಾಗುತ್ತದೆ. ಏಕೆಂದರೆ, ಪ್ರಮಾಣವಚನ ಕಾರ್ಯಕ್ರಮಕ್ಕೆ ಆದ ವೆಚ್ಚ, ರೆಸಾರ್ಟಿನಲ್ಲಿರುವ ಶಾಸಕರಿಗೆ ಮಾಡಿರುವ ಖರ್ಚು- ದುಡ್ಡು ಯಾರದ್ದೇ ಆಗಿರಲಿ- ಇವೆಲ್ಲ ದುಂದು ವೆಚ್ಚವಲ್ಲವೇ? ಅಲ್ಲದೇ, ಅಧಿಕಾರಿಗಳ ತುರ್ತು ಭೇಟಿ, ಗಣ್ಯ ವ್ಯಕ್ತಿಗಳ ಜೊತೆ ಸಮಾಲೋಚನೆ, ಸಭೆ- ಹೀಗೆ ಹಲವು ವಿಚಾರಗಳ ದೃಷ್ಟಿಯಿಂದ ಮುಖ್ಯಮಂತ್ರಿಗಳು, ಸರ್ಕಾರದ ಅಧಿಕೃತ ನಿವಾಸದಲ್ಲಿ ಉಳಿಯುವುದು ಸೂಕ್ತ. ಇದೇ ರೀತಿ ಖಾತೆಗಳಿಗೆ ಅನುಗುಣವಾಗಿ ಸಚಿವರ ಅಧಿಕೃತ ನಿವಾಸಗಳನ್ನೂ ಕಾಯಂಗೊಳಿಸಬೇಕು.

ಜೊತೆಗೆ ಸಚಿವರ ಆಪ್ತ ಸಿಬ್ಬಂದಿಯಲ್ಲೂ ಎಲ್ಲ ಜಾತಿ, ವರ್ಗ, ಧರ್ಮದವರ ನೇಮಕವಾಗಬೇಕು. ಇನ್ನು ಮುಖ್ಯಮಂತ್ರಿಗಳು ಹಾಗೂ ನೂತನ ಸಚಿವರ ಸನ್ಮಾನಕ್ಕೆ ಕಡಿವಾಣ ಹಾಕಬೇಕು. ಯಾವರೀತಿ ಪರಾಕ್ರಮ ಪ್ರದರ್ಶಿಸಿ ಯುದ್ಧ ಗೆದ್ದುಬಂದಿದ್ದಾರೆಂದು ಇವರಿಗೆಲ್ಲ ಸನ್ಮಾನ? ರೆಸಾರ್ಟಿನಲ್ಲಿ ಚೆನ್ನಾಗಿ ಉಂಡು-ತಿಂದು-ತೇಗಿ ಮಜಾ-ಮಸ್ತಿ ಮಾಡಿ ಬಂದವರಿಗೇಕೆ ಈ ಆದರ? ಸರಳ ಸಜ್ಜನರಂತೆ ನಡೆದುಕೊಂಡರೆ ಘನತೆ ಗೌರವ ಹೆಚ್ಚುತ್ತದೆ, ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಆಡಂಬರದಿಂದ ಮೆರೆದರೆ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇನ್ನು ಒಂದೇ ವರ್ಷದೊಳಗೆ ಲೋಕಸಭಾ ಚುನಾವಣೆ ಬರಲಿದೆ. ಹೊಸನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋಯಿತೆಂಬಂತೆ ಹಳೆಯದನ್ನು ಕೆದಕದೆ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುವುದು ಸಮ್ಮಿಶ್ರ ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಾಗಲೀ, ಮಾಧ್ಯಮ ಮಿತ್ರರಾಗಲೀ ಸರ್ಕಾರದ ಮೇಲೆ (ಸಿಎಂ) ಏಕಕಾಲದಲ್ಲಿ ಮುಗಿಬಿದ್ದು, ನಿಂತ ಹೆಜ್ಜೆಯಲ್ಲಿಯೇ ಪ್ರಣಾಳಿಕೆಯಲ್ಲಿರುವ ಎಲ್ಲ ಅಂಶಗಳೂ ಜಾರಿಯಾಗಬೇಕೆಂಬ ಹಠ ಹಿಡಿಯುವುದು ಸಲ್ಲದು. ಮೈತ್ರಿ ಸರ್ಕಾರದ ಹೊಂದಾಣಿಕೆ, ಪ್ರಣಾಳಿಕೆಗಳ ಅವಲೋಕನಕ್ಕೆ ಕಾಲಾವಕಾಶದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಸರ್ಕಾರಕ್ಕೆ ಆರು ತಿಂಗಳ ಹನಿಮೂನ್​ಗೆ ಅವಕಾಶ ಕಲ್ಪಿಸುವುದು ಸೂಕ್ತ. ವಿಧಾನಸಭೆಯಲ್ಲಿ ಶಾಸಕರಿಂದ ವಿಶ್ವಾಸಮತ ಗಳಿಸುವುದರ ಜೊತೆಗೆ ರಾಜ್ಯದ ಜನತೆಯ ವಿಶ್ವಾಸ ಗಳಿಸುವುದೂ ಸಮ್ಮಿಶ್ರ ಸರ್ಕಾರಕ್ಕೆ ಸವಾಲಾಗಿದೆ.

(ಲೇಖಕರು ಹಿರಿಯ ಪತ್ರಕರ್ತರು)

(ಅನಿವಾರ್ಯ ಕಾರಣದಿಂದ ‘ವಿತ್ತ ಲೋಕ’ ಅಂಕಣ ಪ್ರಕಟವಾಗಿಲ್ಲ)

Leave a Reply

Your email address will not be published. Required fields are marked *

Back To Top