More

    ಪಾದಯಾತ್ರೆಗಿಂತ ಜನಾದೇಶ ದೊಡ್ಡದು, ಅದು ಮೋದಿ ಪರ ಇದೆ…

    ಪಾದಯಾತ್ರೆಗಿಂತ ಜನಾದೇಶ ದೊಡ್ಡದು, ಅದು ಮೋದಿ ಪರ ಇದೆ...|ಡಾ.ಸಿ.ಎನ್.ಅಶ್ವತ್ಥನಾರಾಯಣ ಲೇಖಕರು ಉನ್ನತ ಶಿಕ್ಷಣ ಸಚಿವರು

    ಕಾಂಗ್ರೆಸ್ ಇಷ್ಟು ವರ್ಷ ವಂಶಾಡಳಿತವನ್ನು ಪ್ರತಿಪಾದಿಸಿಕೊಂಡು ಬಂದಿದೆ. ಅದು ಜಾತಿ ರಾಜಕಾರಣ ಮಾಡಿದೆ ಮತ್ತು ತುಷ್ಟೀಕರಣದ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಹೀಗಾಗಿ, ಕಾಂಗ್ರೆಸ್ ಕಾಲದಲ್ಲಿ ಉಗ್ರವಾದ ಬೆಳೆಯುತ್ತ ಹೋಯಿತು. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ರಾಷ್ಟ್ರೀಯತೆ, ಭದ್ರತೆ ಮತ್ತು ಹಿಂದುತ್ವ ಎಂಬ ಭವ್ಯ ಭಾರತ ನಿರ್ಮಾಣದ ಸಂಕಥನವನ್ನು ಮುಂದಿಟ್ಟರು.

    ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯ ಅಂಗವಾಗಿ ವಿವಿಧ ರಾಜ್ಯಗಳನ್ನು ಹಾದು ಹೋಗುತ್ತಿದ್ದಾರೆ. ಪ್ರಜಾಪ್ರಭುತ್ವವಿರುವ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡಲು, ಜನರ ಮನಸ್ಸು ಸೆಳೆಯಲು ಎಲ್ಲ ಅಧಿಕಾರ ಇರುತ್ತದೆ. ರಾಹುಲ್ ಗಾಂಧಿ ಅವರಿಗೂ ಆ ಅಧಿಕಾರ ಇದೆ. ಆದರೆ, ಅವರು ಈ ಯಾತ್ರೆಗೆ ‘ಭಾರತ ಜೋಡೋ’ ಎಂಬ ಹೆಸರು ಇಟ್ಟಿರುವುದೇ ಆಕ್ಷೇಪರ್ಹವಾಗಿದೆ. ಪ್ರಜಾಪ್ರಭುತ್ವದಲ್ಲಿ ಜನಾದೇಶಕ್ಕೆ ಇರುವ ಬೆಲೆ ಇನ್ನಾವುದಕ್ಕೂ ಇರುವುದಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಗಳ ಫಲಿತಾಂಶ ನೋಡಿದರೆ ಈ ದೇಶದಲ್ಲಿ ಜನರ ಆದೇಶ ಏನಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 2014ರಲ್ಲಿ ಬಿಜೆಪಿಗೆ 282 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿತ್ತು. ಅದು ಅದಕ್ಕೆ ಹಿಂದಿನ ಮೂರು ದಶಕಗಳಲ್ಲಿ ಒಂದು ಪಕ್ಷಕ್ಕೆ ಸಿಕ್ಕ ಅತಿದೊಡ್ಡ ಜನಾದೇಶವಾಗಿತ್ತು. ನರೇಂದ್ರ ಮೋದಿಯವರು ಬಲಿಷ್ಠ, ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದರು. ಬಿಜೆಪಿ ಎನ್​ಡಿಎ ಭಾಗವಾಗಿದ್ದರೂ ಏಕಾಂಗಿಯಾಗಿ ಅದಕ್ಕೆ ಸಿಕ್ಕ ಗೆಲುವು ಅದು ತಾನೇ ತಾನಾಗಿ ಆಡಳಿತ ಮಾಡುವಷ್ಟು ಇತ್ತು.

    2019ರ ಲೋಕಸಭೆ ಚುನಾವಣೆಯ ಜನಾದೇಶ ಅದರ ಹಿಂದಿನ ಜನಾದೇಶವನ್ನು ಮೀರಿಸಿತು. ಬಿಜೆಪಿ ಏಕಾಂಗಿಯಾಗಿ 303 ಸೀಟುಗಳಲ್ಲಿ ಗೆಲುವು ಸಾಧಿಸಿತು. 2014ಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 21 ಸೀಟುಗಳನ್ನು ಅದು ಗಳಿಸಿತು. ಆದರೆ, ಈ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಸ್ಥಿತಿ ದಯನೀಯವಾಗುತ್ತ ಹೋಯಿತು. ಅದು ಎರಡಂಕಿ ದಾಟಲಿಲ್ಲ. ಅನೇಕ ವರ್ಷಗಳ ಕಾಲ ಈ ದೇಶವನ್ನು ಆಳಿದ ಪಕ್ಷವದು ಎಂಬುದನ್ನು ನಾವು ಮರೆಯಬಾರದು. 2014 ರಲ್ಲಿ ಕೇವಲ 44 ಸೀಟುಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ 2019 ರಲ್ಲಿ 52 ಸೀಟುಗಳಲ್ಲಿ ಗೆದ್ದಿತು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯಲೂ ಕಾಂಗ್ರೆಸ್ ಪಕ್ಷಕ್ಕೆ ಅರ್ಹತೆ ಇರಲಿಲ್ಲ. ಇದು ಜನಾದೇಶ ಎಂದು ಆ ಪಕ್ಷ ಭಾವಿಸಲಿಲ್ಲ.

    ಮೋದಿ ಸೀಮೋಲ್ಲಂಘನ: ಈ ಎರಡು ಚುನಾವಣೆಗಳಲ್ಲಿ ಮೋದಿಯವರು ತವರುರಾಜ್ಯವಾದ ಗುಜರಾತ್ ಬಿಟ್ಟು ಉತ್ತರದ ವಾರಾಣಸಿ ಕ್ಷೇತ್ರದ ಕಡೆಗೆ ಪಯಣ ಮಾಡಿದರು. ಅದು ಅವರ ಸೀಮೋಲ್ಲಂಘನದ ಸಂಕೇತವಾಗಿತ್ತು. ಆದರೆ, ರಾಹುಲ್ ಗಾಂಧಿ 2019 ರ ಚುನಾವಣೆಯಲ್ಲಿ ದಕ್ಷಿಣದ ಕಡೆಗೆ ಪಯಣ ಮಾಡಿದರು. ದಕ್ಷಿಣದ ಕಡೆಗೆ ಪಯಣ ಎನ್ನುವುದು ಇಳಿಮುಖದ ದಾರಿ ಎಂದೇ ಭಾರತೀಯ ನಂಬಿಕೆಯಿದೆ. ರಾಹುಲ್ ಆ ಚುನಾವಣೆಯಲ್ಲಿ ಅಮೇಥಿಯಲ್ಲಿ ಸ್ಮೃ ಇರಾನಿ ವಿರುದ್ಧ ಸೋತರು. ಬಹುಶಃ ಸೋಲಾಗಬಹುದು ಎಂಬ ಭಯದಿಂದಲೇ ಅವರು ಕೇರಳದ ವೈನಾಡಿಗೆ ಬಂದಿರಬಹುದು!

    ಇದು ಈ ಇಬ್ಬರು ನಾಯಕರ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಕಾಂಗ್ರೆಸ್ ಇಷ್ಟು ವರ್ಷ ವಂಶಾಡಳಿತವನ್ನು ಪ್ರತಿಪಾದಿಸಿಕೊಂಡು ಬಂದಿದೆ. ಅದು ಜಾತಿ ರಾಜಕಾರಣ ಮಾಡಿದೆ ಮತ್ತು ತುಷ್ಟೀಕರಣದ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಹೀಗಾಗಿ, ಕಾಂಗ್ರೆಸ್ ಕಾಲದಲ್ಲಿ ಉಗ್ರವಾದ ಬೆಳೆಯುತ್ತ ಹೋಯಿತು. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಸಕಾರಾತ್ಮಕವಾದ ಸಂಕಥನವನ್ನು ಜನರ ಮುಂದೆ ಇಟ್ಟಿದೆ. ರಾಷ್ಟ್ರೀಯತೆ, ಭದ್ರತೆ ಮತ್ತು ಹಿಂದುತ್ವ ಎಂಬ ಭವ್ಯ ಭಾರತ ನಿರ್ಮಾಣದ ಸಂಕಥನವನ್ನು ಮೋದಿ ಮುಂದಿಟ್ಟರು. ಅವರು ಯಾವಾಗಲೂ ನವಭಾರತವನ್ನು ನಿರ್ಮಿಸಬೇಕು ಎಂದು ಕನಸು ಕಂಡವರು.

    ಬಲಿಷ್ಠ ನಾಯಕ ಇರುವ ಒಂದು ದೇಶವೂ ಜಾಗತಿಕವಾಗಿ ಬಲಿಷ್ಠವಾಗಿರುತ್ತದೆ. ಮೋದಿ ಎಷ್ಟು ಪ್ರಬಲ ನಾಯಕರಾಗಿದ್ದಾರೆಂದರೆ ರಷ್ಯಾ ಮತ್ತು ಯೂಕ್ರೇನ್ ಯುದ್ಧದ ಸಂದರ್ಭದಲ್ಲಿ ಅವರ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರ ಸದಾ ಭಾರತವನ್ನು ಟೀಕಿಸುತ್ತಲೇ ಇರುವ ಪಾಕಿಸ್ತಾನ ಪ್ರಧಾನಿಯ ಪ್ರಶಂಸೆಗೂ ಪಾತ್ರವಾಯಿತು. ಹಾಗೆಂದು ಮೋದಿ ರಷ್ಯಾ ಸರ್ಕಾರದ ಹಂಗಿನಲ್ಲಿದ್ದಾರೆ ಎಂದು ನಾವು ಅಂದುಕೊಳ್ಳಬಾರದು. ಅವರು ರಷ್ಯಾ ಅಧ್ಯಕ್ಷ ಪುತಿನ್​ಗೆ, ‘ಇದು ಯುದ್ಧ ಮಾಡಲು ಸಕಾಲವಲ್ಲ’ ಎಂದು ಕಿವಿಮಾತು ಹೇಳಿದ್ದನ್ನು ಕಾಂಗ್ರೆಸ್ ಪಕ್ಷದ ದುರಂಧರರು ಗಮನಿಸುತ್ತಾರೆ ಎಂದು ಅಂದುಕೊಳ್ಳುತ್ತೇನೆ.

    ಗೋಡೆ ಮೇಲಿನ ಬರಹ ಕಾಣಿಸದೇ?: ರಾಹುಲ್ ಗಾಂಧಿ ‘ಭಾರತ್ ಜೋಡೋ’ ಎಂದು ಹೇಳುತ್ತಿರುವುದು ಕೂಡ ಜನಮಾನಸಕ್ಕೆ ವಿರುದ್ಧವಾದ ಕರೆಯೇ ಆಗಿದೆ. ನರೇಂದ್ರ ಮೋದಿಯವರು ಕರ್ನಾಟಕದಿಂದ ಕಾಶ್ಮೀರದವರೆಗೆ ಎಲ್ಲ ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ತಂದಿದ್ದಾರೆ. ಇದಕ್ಕಿಂತ ಇನ್ನು ಯಾವ ರೀತಿಯಲ್ಲಿ ಭಾರತವನ್ನು ಒಂದುಗೂಡಿಸಬೇಕು? 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 13 ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲಿಲ್ಲ. ಅದೇ ಭಾರತೀಯ ಜನತಾ ಪಕ್ಷದ ಗೆಲುವಿನ ರಥವು ಪಶ್ಚಿಮ ಬಂಗಾಳದ ಅಭೇದ್ಯ ಕೋಟೆಗೂ ನುಗ್ಗಿ ಅಲ್ಲಿ 18 ಸೀಟುಗಳಲ್ಲಿ ಗೆಲುವು ಸಾಧಿಸಿ ಇತಿಹಾಸ ಬರೆಯಿತು. ಒಡಿಶಾ, ತೆಲಂಗಾಣದಲ್ಲಿ ಕೂಡ ಅದು ಹೆಜ್ಜೆಗುರುತು ಮೂಡಿಸಿತು. ಕರ್ನಾಟಕದಲ್ಲಿ 28 ರ ಪೈಕಿ 25 ಸೀಟುಗಳಲ್ಲಿ ಮೋದಿ ನಾಯಕತ್ವಕ್ಕೆ ಗೆಲುವಿನ ಮುದ್ರೆ ಬಿದ್ದಿತ್ತು. ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರಿಗೆ ಕರ್ನಾಟಕದಲ್ಲಿ ಹೀಗೆ ಜನರು ಸಾರಾಸಗಟಾಗಿ ಗೆಲುವು ಕೊಡುತ್ತಿದ್ದರು. ಈಗ ಕಾಲ ಬದಲಾಗಿದೆ ಮತ್ತು ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ ಎಂದು ಅರ್ಥವಲ್ಲವೇ?

    ಡಬಲ್ ಎಂಜಿನ್ ಸರ್ಕಾರದ ಮಹತ್ವ: ಕರ್ನಾಟಕದ ರಾಜಕಾರಣದಲ್ಲಿಯೂ ರಾಹುಲ್ ಪಾದಯಾತ್ರೆ ಯಾವ ಮಹತ್ತರ ಬದಲಾವಣೆಯನ್ನೂ ಮಾಡುವುದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷ ಈಗ ಆಕಾಂಕ್ಷೆಗಳಲ್ಲಿ ಒಡೆದು ಹೋದ ಮನೆ. ಒಂದು ಕಡೆ ಸಿದ್ದರಾಮಯ್ಯ ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ನಡುವೆ ಆ ಪಕ್ಷದ ಕಾರ್ಯಕರ್ತರು ಇಬ್ಭಾಗವಾಗಿದ್ದಾರೆ. ದಾವಣಗೆರೆ ಮತ್ತು ಗುಂಡ್ಲುಪೇಟೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಒಂದುಗೂಡಿಸಲು ರಾಹುಲ್ ಮಾಡಿದ ಕಸರತ್ತು ಜನರಿಗೆ ಕಾಣಿಸಿಲ್ಲವೇ?

    ಎರಡನೆಯದಾಗಿ ಮತ್ತು ಬಹಳ ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರಿಂದ ಆಗುವ ಲಾಭಗಳು. ಇದನ್ನೇ ಮೋದಿಯವರು ‘ಡಬಲ್ ಎಂಜಿನ್ ಸರ್ಕಾರ’ ಎಂದು ಕರೆದಿದ್ದಾರೆ. ಡಬಲ್ ಎಂಜಿನ್ ಸರ್ಕಾರದಿಂದ ಆಡಳಿತಕ್ಕೆ ಬರುವ ವೇಗೋತ್ಕರ್ಷ ಎರಡು ಬೇರೆ ಬೇರೆ ಪಕ್ಷಗಳು ಆಡಳಿತ ಮಾಡುವಾಗ ಬರುವುದಿಲ್ಲ. ಕರ್ನಾಟಕವನ್ನು ದೇಶದ ಅಭಿವೃದ್ಧಿ ನಕಾಶೆಯಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲಿಸಲು ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಇರಬೇಕು ಎಂಬುದು ಕರ್ನಾಟಕದ ಜನರಿಗೆ ಈಗಾಗಲೇ ಮನವರಿಕೆಯಾಗಿದೆ. ಪ್ರಬುದ್ಧತೆಯಲ್ಲಿ ಕರ್ನಾಟಕದ ಜನರನ್ನು ಮೀರಿಸುವವರು ಯಾರಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts