Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಆರ್ಥಿಕ ಕ್ರಾಂತಿ ಸಾಕಾರಕ್ಕೆ ದೃಢಹೆಜ್ಜೆ

Thursday, 13.07.2017, 3:00 AM       No Comments

ಸಂಸತ್ತಿನ ವಿಶೇಷ ಅಧಿವೇಶನಗಳು ಮಧ್ಯರಾತ್ರಿಯಲ್ಲಿ ನಡೆಯುವುದು ವಾಡಿಕೆಯ ಪರಿಪಾಠವೇನಲ್ಲ; ಇಂಥ ಅಪರೂಪದ ಸಂದರ್ಭಗಳಲ್ಲಿ ಪ್ರಧಾನಮಂತ್ರಿಯವರ ಭಾಷಣವನ್ನು ಅತೀವ ಉತ್ಸುಕತೆಯಿಂದ ಕೇಳಲಾಗುತ್ತದೆ. ಜಿಎಸ್​ಟಿ ಜಾರಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಜುಲೈ 1ರ ಮಧ್ಯರಾತ್ರಿ ಅಧಿವೇಶನದ ವೇಳೆ ಮಾಡಿದ ಭಾಷಣವೂ ಇದಕ್ಕೆ ಹೊರತಾಗಿರಲಿಲ್ಲ.

| ಅನಿಲ್ ಬಲೂನಿ

ಆರ್ಥಿಕ ಕ್ರಾಂತಿಯೊಂದರ ಜನನಕ್ಕೆ ಭಾರತವು ಸಾಕ್ಷಿಯಾದ ಆ ಪರ್ವಕಾಲದಲ್ಲಿ ಮೋದಿಯವರ ಮುತ್ಸದ್ದಿತನದ ಪರಮಾವಧಿ ನಮ್ಮೆಲ್ಲರ ಅರಿವಿಗೆ ಬಂತು. ಹಿಂದಿನ ಸರ್ಕಾರದಿಂದ ನಿಯುಕ್ತರಾದ ಮತ್ತು ತಂತಮ್ಮ ಸಾರ್ವಜನಿಕ ಜೀವನದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರಣಬ್ ಮುಖರ್ಜಿ ಮತ್ತು ಹಮೀದ್ ಅನ್ಸಾರಿಯವರು ಮಾತ್ರವಲ್ಲದೆ, 1996ರಲ್ಲಿ ಸರ್ಕಾರ ರಚಿಸದಂತೆ ಬಿಜೆಪಿಯನ್ನು ತಡೆಯಲೆಂದು ಪ್ರಧಾನಮಂತ್ರಿ ಗಾದಿಯಲ್ಲಿ ಕೂರಿಸಲ್ಪಟ್ಟ ಎಚ್.ಡಿ. ದೇವೇಗೌಡರ ಮಧ್ಯದಲ್ಲಿ ಆಸೀನರಾಗಿದ್ದ ಪ್ರಧಾನಿಯವರು, ಜಿಎಸ್​ಟಿ ಪದ್ಧತಿಯ ಮಹತ್ವವನ್ನು ಪಟ್ಟಿಮಾಡಿದ್ದಲ್ಲದೆ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರಯೋಜನ ತರಬಲ್ಲ ಹೊಸತೊಂದು ಆರ್ಥಿಕ ವ್ಯವಸ್ಥೆಯಾಗಿ ಇದು ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂಬುದರ ಕುರಿತು ಮನವರಿಕೆ ಮಾಡಿಕೊಟ್ಟರು.

ಮೋದಿ ಭಾಷಣದ ಕೆಲ ನಿಮಿಷಗಳ ನಂತರ, ಇನ್ನಿತರ ಪ್ರಧಾನಿಗಳ ಭಾಷಣಗಳೊಂದಿಗೆ ಅದನ್ನು ಹೋಲಿಸಲಾಯಿತು. ಆದರೆ, 1947ರ ಆಗಸ್ಟ್ 15ರಂದು ಜವಾಹರಲಾಲ್ ನೆಹರು ಮಾಡಿದ ಭಾಷಣವನ್ನು ಅದು ಹೆಚ್ಚು ನೆನಪಿಸುವಂತಿತ್ತು. ಚುನಾವಣೆಗಳಲ್ಲಿ ಅಜೇಯರೇ ಆಗಿದ್ದ, ಮಹತ್ತರ ಗೌರವ ಹಾಗೂ ಪ್ರಸಿದ್ಧಿಗೆ ಪಾತ್ರರಾಗಿರುವ ಈ ಇಬ್ಬರು ಪ್ರಧಾನಿಗಳು, ಪ್ರಜಾಪ್ರಭುತ್ವದ ದೇಗುಲದಲ್ಲಿ ಮಧ್ಯರಾತ್ರಿಯಲ್ಲಿ ಮಾಡಿದ ಭಾಷಣವನ್ನು ತುಲನಾತ್ಮಕ ನೆಲೆಗಟ್ಟಿನಲ್ಲಿ ಅವಲೋಕಿಸೋಣ.

ಎರಡು ಭಾಷಣ ಹಲವು ಹೊಳಹು: ‘ವಿಧಿಯೊಂದಿಗೆ ಮುಖಾಮುಖಿ’ ಎಂಬುದು ನೆಹರು ಭಾಷಣದ ಆಧಾರವಾಕ್ಯವಾಗಿದ್ದರೆ, ‘ದೃಢಸಂಕಲ್ಪದ ಪ್ರತಿಜ್ಞೆ’ ಎಂಬುದು ಮೋದಿ ಭಾಷಣದ ಸಾರಭೂತ ಪರಿಕಲ್ಪನೆಯಾಗಿತ್ತು. ನೆಹರು ಭಾಷಣದ ವೈಶಿಷ್ಟ್ಯ- ಅವರದ್ದೇ ಆದ ವಿಶಿಷ್ಟ ಶೈಲಿ. ಅವರ ಅಲಂಕಾರಿಕ ಮಾತು, ಅದರಲ್ಲಿನ ನಾಜೂಕನ್ನು ಕೆಲವೇ ನಾಯಕರಲ್ಲಿ ಕಾಣಲಿಕ್ಕೆ ಸಾಧ್ಯ. ಅವರ ಪ್ರತಿಯೊಂದು ಮಾತು, ಸಾಲು ಕೂಡ ಭವಿತವ್ಯದ ಮಾತುಗಾರರಿಗೆ ಮೇಲ್ಪಂಕ್ತಿಯೇ ಸರಿ.

ಇದಕ್ಕೆ ಕೊಂಚ ಭಿನ್ನವಾಗಿರುವಂಥದ್ದು ಮೋದಿ-ಶೈಲಿ. ಇಲ್ಲಿಯೂ ನಾಜೂಕತನವಿದೆ. ಆದರೆ ಅದರ ಜತೆಜತೆಗೆ, ಮುಂದೆ ಸಾಗಬೇಕಾದ ಹಾದಿಯ ಕುರಿತು ಅಲ್ಲೊಂದು ದೃಢಸಂಕಲ್ಪ ಮತ್ತು ಮಾರ್ಗದರ್ಶನ ದಟ್ಟವಾಗಿರುತ್ತದೆ. ಜಿಎಸ್​ಟಿ ಎಂಬುದು ಸರಿಯಾದ ದಿಕ್ಕಿನಲ್ಲಿಟ್ಟಿರುವ ಹೆಜ್ಜೆ ಎಂಬ ಭರವಸೆಯನ್ನು ರಾಷ್ಟ್ರಕ್ಕೆ ನೀಡಿದ್ದರ ಜತೆಗೆ ಕ್ರಮಿಸಬೇಕಾದ ಹಾದಿಯನ್ನೂ ತೋರಿಸಿಕೊಟ್ಟಿದ್ದು ಮೋದಿ ಹೆಗ್ಗಳಿಕೆ. 125 ಕೋಟಿ ಭಾರತೀಯರು ಒಗ್ಗೂಡಿದರೆ, ಜಿಎಸ್​ಟಿಯನ್ನು ಯಶಸ್ವಿಗೊಳಿಸುವುದು, ಎಲ್ಲ ಕೊರತೆಗಳನ್ನು ಜಯಿಸುವುದು ಕಷ್ಟವೇನಲ್ಲ ಎಂಬ ಅವರ ಉತ್ತೇಜನಕಾರಿ ಮಾತೇ ಇದಕ್ಕೆ ಸಾಕ್ಷಿ.

ಧೀರೋದಾತ್ತರ ಉಲ್ಲೇಖ: ಸ್ವಾತಂತ್ರ್ಯಹೋರಾಟಗಾರರೆಡೆಗಿನ ಗೌರವಾದರವನ್ನು ಭಾಷಣದಲ್ಲಿ ಅಭಿವ್ಯಕ್ತಿಸಿದ್ದು ಮೋದಿ ವಿಶೇಷ. ಗಾಂಧೀಜಿ, ಸರ್ದಾರ್ ಪಟೇಲ್, ಅಂಬೇಡ್ಕರ್, ರಾಜೇಂದ್ರ ಪ್ರಸಾದ್, ಮೌಲಾನಾ ಆಜಾದ್, ಸರೋಜಿನಿ ನಾಯ್ಡು, ಆಚಾರ್ಯ ಕೃಪಲಾನಿ ಮೊದಲಾದ ಹೆಸರುಗಳು ಈ ಪಟ್ಟಿಯಲ್ಲಿದ್ದವು ಮತ್ತು ಈ ಯಾವ ಹೆಸರುಗಳೂ ಮೋದಿಯವರ ಸೈದ್ಧಾಂತಿಕ ಒಲವುಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲದಂಥವು ಎಂಬುದನ್ನಿಲ್ಲಿ ಗಮನಿಸಬೇಕು. ಇದಕ್ಕೆ ತದ್ವಿರುದ್ಧವಾಗಿ, ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮ ಸಹವರ್ತಿಗಳಾಗಿದ್ದ ಯಾವ ಧೀಮಂತರ ಹೆಸರೂ ನೆಹರು ಭಾಷಣದಲ್ಲಿ ಕೇಳಿಬರಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಆಡಳಿತ ವ್ಯವಸ್ಥೆಗಳನ್ನೊಳಗೊಂಡ, ಅಂದರೆ ಬಿಜೆಪಿ ಅಥವಾ ಎನ್​ಡಿಎ ಒಕ್ಕೂಟವನ್ನು ಹೊರತುಪಡಿಸಿದ ಪಕ್ಷಗಳ ಮುಖ್ಯಮಂತ್ರಿಗಳನ್ನೂ ಒಳಗೊಂಡ ‘ಟೀಮ್ ಇಂಡಿಯಾ’ದ ಸಂಯೋಜಿತ ಬಲವೇ ಜಿಎಸ್​ಟಿ ಅನುಷ್ಠಾನಕ್ಕೆ ಬಲ ತುಂಬುತ್ತದೆ ಎಂದರು ಮೋದಿ. ನೆಹರುರ ‘ವಿಧಿಯೊಂದಿಗೆ ಮುಖಾಮುಖಿ’ ಎಂಬ ಭಾಷಣದಲ್ಲಿ ಇಂಥದೊಂದು ‘ಸಾಂಘಿಕ ಕಾರ್ಯ’ದ ಉಲ್ಲೇಖವೇ ಇಲ್ಲ.

ಯಾರನ್ನುದ್ದೇಶಿಸಿದ ಭಾಷಣ?: ನೆಹರು ಮತ್ತು ಮೋದಿ ಭಾಷಣಗಳಲ್ಲಿ ಹೊಮ್ಮುವ ಭಾಷೆ, ಅವುಗಳ ಉದ್ದೇಶಿತ ಕೇಳುಗರಾರು ಎಂಬುದರ ದ್ಯೋತಕ. ನೆಹರು ಅವರದ್ದು ಅದೆಂಥ ಕುಂದಿಲ್ಲದ ಇಂಗ್ಲಿಷ್ ಭಾಷಾಶೈಲಿಯೆಂದರೆ ಬ್ರಿಟಿಷರೇ ನಾಚಿ ತಲೆತಗ್ಗಿಸಬೇಕು. ಆದರೆ, ಸಂಸತ್ ಸದನದಲ್ಲಿ ಮಾತಾಡುವುದೂ ಸೇರಿದಂತೆ ಬಹುತೇಕ ಭಾಷಣಗಳಲ್ಲಿ ಮೋದಿ ನೆಚ್ಚುವುದು ಹಿಂದಿಯನ್ನು. ಭಾರತದಲ್ಲಿ ಬರೋಬ್ಬರಿ 70 ವರ್ಷಗಳ ಹಿಂದೆ ನೆಹರು ಭಾಷಣವನ್ನು ಅರ್ಥೈಸಿಕೊಂಡವರಿಗೆ ಹೋಲಿಸಿದಾಗ, ಮೋದಿ ಭಾಷಣವನ್ನು ಗ್ರಹಿಸಿದವರ ಸಂಖ್ಯೆಯೇ ಹೆಚ್ಚು. ಇದಕ್ಕಿರುವ ಕಾರಣಗಳೂ ಸ್ಪಷ್ಟವೇ- ಇಂಗ್ಲಿಷ್​ಗೆ ಹೋಲಿಸಿದಾಗ ಹಿಂದಿಯನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ಹೆಚ್ಚು. ಮೇಲಾಗಿ, 1947ರ ಕಾಲಾವಧಿಯಲ್ಲಿ ಇಂಗ್ಲಿಷನ್ನು ಗ್ರಹಿಸಬಲ್ಲವರ ಸಂಖ್ಯೆಯೂ ಕಡಿಮೆಯಿತ್ತು ಮತ್ತು ಹಿಂದಿ ಬಳಕೆಯಿಲ್ಲದ ಪ್ರದೇಶಗಳಲ್ಲಿ, ಇಂಗ್ಲಿಷ್​ಗಿಂತ ಪ್ರಾದೇಶಿಕ ಭಾಷೆಗಳ ಪ್ರಭಾವವೇ ಅಧಿಕವಾಗಿತ್ತು. ಅಲ್ಲಿಗೆ, ನೆಹರು ಭಾಷಣವು ಬ್ರಿಟಿಷರು ಮತ್ತು ಮಿಕ್ಕ ಜಾಗತಿಕ ಕೇಳುಗರನ್ನು ಉದ್ದೇಶಿಸಿತ್ತೇ ವಿನಾ ಭಾರತದ ಜನರನ್ನಲ್ಲ ಎಂದು ಭಾವಿಸಬಹುದೇ? ಪ್ರಧಾನ ಮಂತ್ರಿಯೊಬ್ಬರು ಸಂಸತ್ತಿನಿಂದ ಮಾತನಾಡುವಾಗ, ಅದು ಜಾಗತಿಕ ಜನರಿಗಿಂತ ದೇಶೀಯ ಜನರನ್ನು ಉತ್ತೇಜಿಸುವಂತಿರಬೇಕಲ್ಲವೇ?

ಯಾವುದು ನಿಜವಾದ ‘ಡಿಸ್ಕವರಿ ಆಫ್ ಇಂಡಿಯಾ’?: ‘ಡಿಸ್ಕವರಿ ಆಫ್ ಇಂಡಿಯಾ’ ಎಂಬ ಕೃತಿಯನ್ನು ಬರೆದಿದ್ದು ಜವಾಹರಲಾಲ್ ನೆಹರು ಎಂಬುದೇನೋ ನಿಜ; ಆದರೆ, ಜುಲೈ 1ರಂದು ಮೋದಿಯವರು ಸಂಸತ್ತಿನಲ್ಲಿ ಮಾಡಿದ ಪುಟ್ಟ-ಪ್ರಭಾವಶಾಲಿ ಭಾಷಣವು ನಿಜಾರ್ಥದಲ್ಲಿ ‘ಡಿಸ್ಕವರಿ ಆಫ್ ಇಂಡಿಯಾ’ ಅಥವಾ ‘ಭಾರತ ದರ್ಶನ’ವನ್ನು ಮಾಡಿಸಿತೆನ್ನಬೇಕು. ಭಾರತದ ಸತ್ವ ಅಥವಾ ಚೈತನ್ಯದಲ್ಲಿ ಅಂತರ್ಗತವಾಗಿರುವ ಎಲ್ಲ ಸಾರಭೂತ ಅಂಶಗಳನ್ನೂ ಅವರ ಹೃದಯರ್ಸ³ ಮಾತುಗಳು ಉದ್ದೀಪಿಸಿದವು. ಭಾಷಣದಲ್ಲಿ ನಮ್ಮ ಇತಿಹಾಸವನ್ನು ಉಲ್ಲೇಖಿಸುತ್ತಲೇ ಉಜ್ವಲ ಭವಿಷ್ಯದ ಕುರಿತೂ ದೂರದೃಷ್ಟಿ ಬೀರಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುತ್ತಲೇ, ಯುವಸಮೂಹದ ಕನಸುಗಳಿಗೆ ಶಕ್ತಿ ತುಂಬಬೇಕಾದ ಅಗತ್ಯದ ಕುರಿತು ಒತ್ತಿಹೇಳಿದ್ದು ಮೋದಿ ವೈಶಿಷ್ಟ್ಯ. ಭಾರತದ ಆರ್ಥಿಕ ಸುಸಂಘಟನೆಯಲ್ಲಿ ಅಂತರ್ಗತವಾಗಿರುವ ಜೀವಂತಿಕೆಯ ಕುರಿತು ಮಾತಾಡುತ್ತಲೇ ಭಾರತವನ್ನು ಆರ್ಥಿಕ ನೆಲೆಗಟ್ಟಿನಲ್ಲಿ ಒಗ್ಗೂಡಿಸಬೇಕಾದ ಕಾಲವೀಗ ಬಂದಿದೆ ಎಂದ ಮೋದಿಯವರು, ಸುದೀರ್ಘ 70 ವರ್ಷಗಳಿಂದ ಭಾರತದ ಬಡಜನ ಯಾವೆಲ್ಲದರಿಂದ ವಂಚಿತರಾಗಿದ್ದಾರೋ ಅವನ್ನು ಅವರಿಗೆ ಒದಗಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ ಎಂದರು. ರಾಷ್ಟ್ರದ ಆರ್ಥಿಕ ಪುನರುತ್ಥಾನದ ನೇತೃತ್ವ ವಹಿಸಿಕೊಳ್ಳುವ ಅವಕಾಶ ಭಾರತದ ಪೂರ್ವಭಾಗಕ್ಕೆ ದಕ್ಕುವಂತಾಗಬೇಕು ಎಂದು ಒತ್ತಿಹೇಳಿದರು.

ಜಿಎಸ್​ಟಿಯಿಂದಾಗಿ ವ್ಯಾಪಾರ-ವ್ಯವಹಾರ ವಲಯಕ್ಕೆ ದಕ್ಕಲಿರುವ ಪ್ರಯೋಜನಗಳು, ರೈಲ್ವೆ ವಲಯ ಕಾಣಲಿರುವ ಏರುಗತಿ, ಸರಳೀಕೃತ ವ್ಯವಹಾರ ಪ್ರಕ್ರಿಯೆ ಮತ್ತು ಡಿಜಿಟಲ್ ಇಂಡಿಯಾ ಇವೇ ಮೊದಲಾದ ವಿಷಯಗಳು ಅವರ ಭಾಷಣದಲ್ಲಿ ಒಂದೊಂದಾಗಿ ಪ್ರಸ್ತಾಪಿಸಲ್ಪಟ್ಟವು. ಒಂದಿಡೀ ವಿಶ್ವವನ್ನು ಎದುರಿಸುವುದಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಒಂದು ಹೊಸ, ಲವಲವಿಕೆಯ ಮತ್ತು ಮಹತ್ವಾಕಾಂಕ್ಷಿ ಭಾರತವನ್ನು ಕಟ್ಟುವುದಕ್ಕೆ ಬೇಕಾದ ಅಗತ್ಯ ಅಂಶಗಳೆಲ್ಲವೂ ಅದರಲ್ಲಿ ಅಂತರ್ಗತವಾಗಿದ್ದವು. ಆದರೆ ನೆಹರು ಭಾಷಣದಲ್ಲಿ, ಇಂಥ ಮುನ್ನೋಟಗಳೇನೂ ಇರಲಿಲ್ಲ. ಹಾಗೆ ನೋಡಿದರೆ, ಹೆಚ್ಚು ಸ್ಪಷ್ಟತೆಯೊಂದಿಗೆ ಈ ಎಲ್ಲ ಅಂಶಗಳೆಡೆಗೆ ಗಮನ ಹರಿಸಬೇಕಾದ ಕಾಲಘಟ್ಟ ಅದಾಗಿತ್ತು; ಆದರೆ ಅಂದಿನ ರಾಷ್ಟ್ರದ ಸಾಮರ್ಥ್ಯ, ಹೆಬ್ಬಯಕೆ ಮತ್ತು ಸಂಕೀರ್ಣತೆಗಳೆಡೆಗೆ ಇಂಥದೊಂದು ನೋಟ ಹರಿಯಲೇ ಇಲ್ಲ.

ಕಾಂಗ್ರೆಸ್ ಬಹಿಷ್ಕಾರ: ಜಿಎಸ್​ಟಿ ವಿಶೇಷಾಧಿವೇಶನವನ್ನು ಕಾಂಗ್ರೆಸ್​ಬಹಿಷ್ಕರಿಸಿದ್ದು ಅಚ್ಚರಿಯೇ ಸರಿ. ಪಕ್ಷ-ಪ್ರಭಾವಳಿಯನ್ನೂ ಮೀರಿದ ರಾಜಕೀಯ ವಲಯದ ಯತ್ನಗಳ ಪಲವಾಗಿಯೇ ಜಿಎಸ್​ಟಿ ಪರಿಕಲ್ಪನೆಯೀಗ ವಾಸ್ತವವಾಗಿ ಪರಿಣಮಿಸಿದೆ. ಅಜಯ್ ಸಿಂಗ್ ಈ ನಿಟ್ಟಿನಲ್ಲಿ ಮಾಡಿರುವ ವಿಶ್ಲೇಷಣೆ ಹೀಗಿದೆ: ‘‘ಜಿಎಸ್​ಟಿ ಜಾರಿ ಸಂಬಂಧ ಜೂನ್ 30ರ ಮಧ್ಯರಾತ್ರಿ ಸಂಸತ್ತಿನ ಅಧಿವೇಶನ ಸೇರಿದಾಗ, 1947ರ ‘ವಿಧಿಯೊಂದಿಗೆ ಮುಖಾಮುಖಿ’ ಎಂಬ ಅಳಿಸಲಾಗದ ಚಿಂತನೆಯ ಮಟ್ಟಕ್ಕೆ ‘ಜಿಎಸ್​ಟಿಯೊಂದಿಗಿನ ದೃಢಸಂಕಲ್ಪ’ ಎಂಬ ಪರಿಕಲ್ಪನೆಯನ್ನು ಏರಿಸಲೆಂದು ಅಥವಾ ಜವಾಹರಲಾಲ್ ನೆಹರುರ ಸಮಾನಸ್ಕಂಧರೆಂಬಂತೆ ನರೇಂದ್ರ ಮೋದಿಯವರನ್ನು ಬಿಂಬಿಸಲೆಂದು ಚಾತುರ್ಯದಿಂದ ರೂಪಿಸಲಾದ ಒಂದು ‘ಪ್ರಹಸನ’ ಎಂಬ ಲೇವಡಿ ಮಾಡುವ ಮೂಲಕ ಕಾಂಗ್ರೆಸ್ ಮತ್ತು ಇತರ ಕೆಲ ವಿಪಕ್ಷಗಳು ಈ ಅಧಿವೇಶನವನ್ನು ಬಹಿಷ್ಕರಿಸಿದವು. ಜಿಎಸ್​ಟಿ ವಿಷಯವನ್ನಿಟ್ಟುಕೊಂಡು ನೆಹರು ಭಾಷಣವನ್ನು ಮಂಕಾಗಿಸಲೆಂದೇ ಈ ಮಧ್ಯರಾತ್ರಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ ಎಂಬುದು ಪ್ರಾಯಶಃ ಕಾಂಗ್ರೆಸ್ ನಾಯಕತ್ವದ ಭಯವಾಗಿದ್ದಿರಲಿಕ್ಕೂ ಸಾಕು. ಕ್ಷಿಪ್ರಗತಿ ಯಲ್ಲಿ ಬದಲಾಗುತ್ತಿರುವ ರಾಜಕೀಯ ವಾಸ್ತವತೆಗಳೊಂದಿಗೆ ರಾಜಿ ಮಾಡಿಕೊಳ್ಳು ವಲ್ಲಿನ ಕಾಂಗ್ರೆಸ್ ನಾಯಕತ್ವದ ಅಸಾಮರ್ಥ್ಯಕ್ಕೆ ಇದು ಕೈಗನ್ನಡಿ’’.

ಒಂದು ವಿಷಯವನ್ನಂತೂ ಸ್ಪಷ್ಟವಾಗಿ ಹೇಳಬಹುದು. 1947ರ ಆಗಸ್ಟ್ 15ರಂದು, ‘ವಿಧಿಯೊಂದಿಗೆ ಮುಖಾಮುಖಿ’ಯ ಆಧಾರದ ಮೇಲೆ ನಾವು ಪಯಣವನ್ನು ಆರಂಭಿಸಿದೆವು; 70 ವರ್ಷಗಳ ನಂತರ, 2017ರ ಜುಲೈ 1ರಂದು ಆರ್ಥಿಕ ಸುಸಂಘಟನೆ ಮತ್ತು ಸ್ವಾತಂತ್ರ್ಯದ ಪಯಣಕ್ಕೆ ಮೊದಲಿಟ್ಟಿದ್ದೇವೆ. ದೇವರ ಆಶೀರ್ವಾದ ಮಾತ್ರವಲ್ಲದೆ, 125 ಕೋಟಿ ಭಾರತೀಯರ ಕೌಶಲ ಮತ್ತು ಸಾಮರ್ಥ್ಯಗಳು ಇದಕ್ಕೆ ಬಲತುಂಬಿವೆ ಮತ್ತು ಹುರುಪಿನ ಹಾಗೂ ಆತ್ಮವಿಶ್ವಾಸದ ನಾಯಕತ್ವದ ಮಾರ್ಗದರ್ಶನ ಈ ವಿತ್ತಯಾತ್ರೆಗೆ ದಕ್ಕಿದೆ ಎಂದರೆ ಅತಿಶಯೋಕ್ತಿಯಲ್ಲ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top