Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಇಷ್ಟು ಕಾಲ ಇಸ್ರೇಲನ್ನು ನಾವು ದೂರವಿಟ್ಟಿದ್ದೇಕೆ?

Tuesday, 11.07.2017, 3:00 AM       No Comments

| ನಾಗರಾಜ ಶೆಣೈ

ರಡನೆಯ ಮಹಾಯುದ್ಧ ಮುಗಿದ ನಂತರ ಆ ಯುದ್ಧದ ಅತ್ಯಂತ ದಯನೀಯ ಸಂತ್ರಸ್ತ ಸಮುದಾಯವಾದ ಯಹೂದಿ ಜನಾಂಗಕ್ಕೆ ತನ್ನದೆಂಬ ನೆಲೆಯೊಂದನ್ನು ಒದಗಿಸಿಕೊಡಬೇಕೆಂಬ ಜಾಗತಿಕ ಅಭಿಪ್ರಾಯಕ್ಕೆ ಎಲ್ಲೆಡೆಯಿಂದ ಮನ್ನಣೆ ಸಿಗಲಾರಂಭಿಸಿತ್ತು. ಜಗತ್ತಿನಾದ್ಯಂತ ಹರಡಿಕೊಂಡಿದ್ದರೂ ತನ್ನದೆಂಬ ಸ್ವಂತ ದೇಶ, ಅಷ್ಟೇ ಏಕೆ ಸ್ವಂತದ್ದೊಂದು ದನಿಯೂ ಯಹೂದಿ ಸಮುದಾಯಕ್ಕೆ ಇಲ್ಲವಾಗಿತ್ತು. ಯಹೂದಿಗಳ ವಿರುದ್ಧ ಹಿಟ್ಲರನ ಕ್ರೌರ್ಯವಂತೂ ಮನುಕುಲದ ಆತ್ಮಸಾಕ್ಷಿಯನ್ನೇ ಘಾಸಿಗೊಳಿಸಿತ್ತು. ಇದನ್ನೆಲ್ಲ ಗಮನಿಸಿದ ವಿಶ್ವಸಂಸ್ಥೆ ಯಹೂದಿಯರಿಗೆ ನೆಲೆ ಕಲ್ಪಿಸಲು ಜೆರುಸಲೇಮ್ ಬಳಿ ಪುಟ್ಟದೊಂದು ಜಾಗವನ್ನು ಬಿಟ್ಟುಕೊಡಲು ಪ್ರಸ್ತಾವ ಕೈಗೊಂಡಿತು. ಈ ಪ್ರಸ್ತಾವನೆಗೆ ಪ್ರಮುಖ ರಾಷ್ಟ್ರಗಳ ವೋಟಿನ ಅಗತ್ಯವಿತ್ತು. ಆದರೆ, ಜೆರುಸಲೇಮ್ ಸುತ್ತ ನೆರೆದಿದ್ದ ಅರಬ್ ಸಮುದಾಯ ಇದನ್ನು ವಿರೋಧಿಸಿತು. ಇಂಥ ಸಂದರ್ಭದಲ್ಲಿ ಭಾರತದ ಬಗ್ಗೆ ಅಪಾರ ಗೌರವ ಹೊಂದಿದ್ದ, ಯಹೂದಿ ಜನಾಂಗದವರೇ ಆದ ಮಹಾನ್ ವಿಜ್ಞಾನಿ ಅಲ್ಬರ್ಟ್ ಐನಸ್ಟೀನ್ ಜವಾಹರಲಾಲ ನೆಹರುರಿಗೆ ಕಳಕಳಿಯ ಒಂದು ಪತ್ರ ಬರೆದು ವಿಶ್ವಸಂಸ್ಥೆಯ ಮತದಾನದಲ್ಲಿ ಯಹೂದಿ ನಾಡಿನ ಪರವಾಗಿ ಮತ ಚಲಾಯಿಸಲು ಮನವಿ ಮಾಡಿದರು. ಈ ಪತ್ರದಲ್ಲಿ ಯಹೂದಿ ಜನಾಂಗಕ್ಕಾಗಿರುವ ಅನ್ಯಾಯವನ್ನು ಎಳೆಎಳೆಯಾಗಿ ವಿವರಿಸಿ, ಪ್ರತ್ಯೇಕ ಯಹೂದಿ ರಾಷ್ಟ್ರದ ಅಗತ್ಯತೆಯ ನೈತಿಕ, ರಾಜತಾಂತ್ರಿಕ ಆಯಾಮಗಳನ್ನೂ ಉಲ್ಲೇಖಿಸಿದರು.

ಐನಸ್ಟೀನ್ ಮನವಿಗೂ ಕರಗದ ನೆಹರು: ಆದರೆ ಸೋಜಿಗವೆಂದರೆ ಇವ್ಯಾವುದೂ ನೆಹರುರವರ ಮೇಲೆ ಪರಿಣಾಮ ಬೀರಲಿಲ್ಲ! ಐನ್​ಸ್ಟೀನ್​ರ ವಿವರಣೆಗಳನ್ನೆಲ್ಲ ತಿರಸ್ಕರಿಸಿದ ಅವರು ಅದಕ್ಕೆ ಕೊಟ್ಟ ಕಾರಣವೇನಿತ್ತು ಗೊತ್ತೇ? ‘ಯೆಹೂದಿಗಳನ್ನು ಬೆಂಬಲಿಸುವ ನಿರ್ಣಯದ ಪರವಾಗಿ ಮತ ಹಾಕಿದರೆ ಭಾರತದಲ್ಲಿರುವ ಮುಸ್ಲಿಮರ ಮನಸ್ಸಿಗೆ ನೋವಾಗುತ್ತದೆ…’ ದೇಶವಿಭಜನೆಯಾದ ಅಲ್ಪಾವಧಿಯಲ್ಲೇ ನೆಹರು ಮತ್ತೆ ತುಷ್ಟೀಕರಣಕ್ಕೆ ಮುಂದಾದರು. ಮುಸ್ಲಿಂ ರಾಷ್ಟ್ರಗಳ ಪಕ್ಷದಲ್ಲಿ ನಿಂತ ನೆಹರು ಅದೇ ತಾನೇ ನಮ್ಮಿಂದ ಪ್ರತ್ಯೇಕಗೊಂಡ ಪಾಕಿಸ್ತಾನ ಅಲ್ಲದೆ ಯೆಮೆನ್, ಸೌದಿ ಅರೇಬಿಯಾ, ಇರಾನ್, ಇರಾಕ್, ಸಿರಿಯಾ, ಲೆಬನಾನ್ ಮತ್ತು ಅಫ್ಘಾನಿಸ್ತಾನದಂಥ ದೇಶಗಳೊಂದಿಗೆ ಸೇರಿ 1947ರ ನವೆಂಬರ್ 29ರಂದು ನಡೆದ ಮತದಾನದಲ್ಲಿ ಪ್ರತ್ಯೇಕ ಯಹೂದಿ ರಾಷ್ಟ್ರ ಪ್ರಸ್ತಾವನೆ ವಿರುದ್ಧ ಮತ ಚಲಾಯಿಸಿದರು. ಈ ಎಲ್ಲ ರಾಷ್ಟ್ರಗಳ ವಿರೋಧದ ಹೊರತಾಗಿಯೂ 2/3ನೇ ಬಹುಮತದೊಂದಿಗೆ ಫಲಿತಾಂಶ ಪ್ರತ್ಯೇಕ ಯಹೂದಿ ರಾಷ್ಟ್ರದ ಪರವಾಗಿಯೇ ಬಂದು ಕಡೆಗೂ ಇಸ್ರೇಲ್ ಹುಟ್ಟಿಕೊಂಡಿತು.

ಸಂಘರ್ಷದ ಇತಿಹಾಸ: 1949ರಲ್ಲಿ ಇಸ್ರೇಲ್​ನ್ನು ವಿಶ್ವಸಂಸ್ಥೆಗೆ ಸೇರಿಸಿಕೊಳ್ಳುವ ಪ್ರಸ್ತಾವನೆ ಬಂದಾಗಲೂ ಭಾರತ ಅದರ ವಿರುದ್ಧ ಮತ ಚಲಾಯಿಸಿತು. ಆದರೂ ಜಾಗತಿಕ ವಾಸ್ತವ ಕಡೆಗಣಿಸಲಾಗದೆ, ಭಾರತ 1950ರ ಸೆಪ್ಟೆಂಬರ್ 17ರಂದು ಇಸ್ರೇಲ್​ಗೆ ದೇಶದ ಮನ್ನಣೆಯನ್ನು ನೀಡಿತು. ಇಷ್ಟಾದರೂ ಮತ್ತೆ ಅಹಂಕಾರ ಪ್ರದರ್ಶಿಸಿದ ಆಗಿನ ನೆಹರು ಸರ್ಕಾರ ಅದರೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿಕೊಳ್ಳಲು ನಿರಾಕರಿಸಿತು!

ಹಾಗೆ ನೋಡಿದರೆ ಭಾರತ ಮತ್ತು ಇಸ್ರೇಲ್ ಮಧ್ಯೆ ಅನೇಕ ಸಾಮ್ಯತೆಗಳಿದ್ದವು. ಎರಡೂ ದೇಶಗಳು ಶತಮಾನಗಳ ಕಾಲ ವಿದೇಶಿ ದಾಸ್ಯದಲ್ಲಿಯೇ ಬದುಕಿದವು. ದೌರ್ಜನ್ಯ, ಮತಾಂತರ, ನೋವು ಅವಮಾನಕ್ಕೆ ತುತ್ತಾದವು. ಅವೆಲ್ಲವನ್ನೂ ಸಹಿಸಿ, ನಿರಂತರ ಹೋರಾಟದ ಫಲವಾಗಿ ಕಡೆಗೂ ಭಾರತ ಸ್ವಾತಂತ್ರ್ಯ ಪಡೆದುಕೊಂಡಿತು. ಆಗಿನ ಸಂದರ್ಭದಲ್ಲಿ ಪುಟ್ಟ ಯೆಹೂದಿ ರಾಷ್ಟ್ರವಾಗಿ ಇಸ್ರೇಲ್ ಉದಯವಾದಾಗ ಭಾರತ ನೈತಿಕವಾಗಿ ಇಸ್ರೇಲಿನ ಪರವಾಗಿಯೇ ನಿಲ್ಲಬೇಕಿತ್ತು. ಹಿಟ್ಲರನ ಅತಿ ಕ್ರೂರ ಸರ್ವನಾಶದ ಪ್ರಯತ್ನದ ಹೊರತಾಗಿಯೂ ಹೊಸ ಬದುಕು ಕಟ್ಟಿಕೊಳ್ಳಲು ಹೊರಟ ಕೆಚ್ಚೆದೆಯ ಸಮುದಾಯಕ್ಕೆ ಒತ್ತಾಸೆಯಾಗಿ ನಿಲ್ಲಬೇಕಿತ್ತು. ಆದರೆ, ತುಷ್ಟೀಕರಣಕ್ಕೆ ತೊಡಗಿದ ನೆಹರು ಬೆಂಬಲಿಸಿದ್ದು ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಹೋರಾಟಗಾರರೆಂಬ ಮುಖವಾಡ ಹೊತ್ತ ಸಂಘಟನೆಗಳನ್ನು. ಲಿಬರೇಶನ್ ಆರ್ಗನೈಜೇಶನ್ (ಕಔಣ), ಫತಾಹ್, ಜನರಲ್ ಕಮಾಂಡ್, ಡೆಮಾಕ್ರೆಟಿಕ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್, ದಿ ಅಬು ನಡಾಲ್ ಆರ್ಗನೈಜೇಶನ್… ಹೀಗೆ ಅನೇಕ ಗುಂಪುಗಳು ಹುಟ್ಟಿಕೊಂಡು ಇಸ್ರೇಲನ್ನು ನಾಶ ಮಾಡುವ ಕೆಲಸದಲ್ಲಿ ತೊಡಗಿದವು. ಪವಿತ್ರ ನಗರ ಜೆರುಸಲೇಮನ್ನು ರಕ್ತಸಿಕ್ತಗೊಳಿಸಿದರು. ಬಾಂಬ್ ದಾಳಿ, ಕಲ್ಲು ತೂರಾಟ, ಒತ್ತೆ ಹಣಕ್ಕಾಗಿ ಅಪಹರಣ, ಕೊಲೆ, ಸುಲಿಗೆ, ವಿಮಾನ ಅಪಹರಣ ಇವೆಲ್ಲ ಈ ‘ಸ್ವಾತಂತ್ರ್ಯೕರರ’ ಹೋರಾಟದ ವಿಧಾನಗಳಾದವು!

ಗೆಲುವಿನ ನಡೆ: ವಿಪರ್ಯಾಸವೆಂದರೆ, ಪ್ಯಾಲೆಸ್ಟೈನ್ ಬೆಂಬಲಿಸಿ ನಮ್ಮ ದೇಶದಲ್ಲೂ ಅನೇಕ ಪ್ರತಿಭಟನೆ, ಚಳವಳಿಗಳು ನಡೆದವು. ಕಾರಣ, ‘ಪ್ಯಾಲೆಸ್ಟೈನ್​ನ ಸ್ವಾತಂತ್ರ್ಯಲ್ಲಿ ನಿಮ್ಮ ಹಿತಾಸಕ್ತಿ ಅಡಗಿದೆ’ ಎಂದು ಇಲ್ಲಿನ ಅಲ್ಪಸಂಖ್ಯಾತರನ್ನು ನಂಬಿಸಲಾಗಿತ್ತು. ಇಸ್ರೇಲಿನ ಹುಟ್ಟು ಮಾತ್ರವಲ್ಲ, ಅದರ ಅಸ್ತಿತ್ವವೂ ವಿವಾದ, ಸಂಘರ್ಷಗಳಿಂದಲೇ ತುಂಬಿತ್ತು. ಕೇವಲ ಪ್ಯಾಲೆಸ್ಟೈನ್ ಯೋಧರು ಮಾತ್ರವಲ್ಲ, ಸುತ್ತಲಿನ ಎಲ್ಲ ಅರಬ್ ರಾಷ್ಟ್ರಗಳು ಅದರ ಮೇಲೆ ನಿರಂತರ ದಾಳಿ ನಡೆಸಿಕೊಂಡೇ ಬಂದವು. ಇಸ್ರೇಲಿನ ನಾಶವನ್ನು ಧರ್ಮಯುದ್ಧವಾಗಿ (ಜಿಹಾದ್) ಸ್ವೀಕರಿಸಿದ ಮತಾಂಧರ ಗುಂಪದು. ಇದರ ಪರ್ಯವಸಾನವಾದದ್ದು 6 ದಿನಗಳ ಯುದ್ಧ ಎಂದು ಖ್ಯಾತವಾದ 1967 ಅರಬ್-ಇಸ್ರೇಲ್ ಯುದ್ಧದಲ್ಲಿ. ಆಗ ಸುತ್ತಲಿನ ಎಲ್ಲ ದೇಶಗಳೂ ಜೋರ್ಡಾನ್, ಈಜಿಪ್ತ್ (ಆಗ ಅದನ್ನು ‘ಯುನೈಟೆಡ್ ಅರಬ್ ರಿಪಬ್ಲಿಕ್’ ಎಂದು ಕರೆಯಲಾಗುತ್ತಿತ್ತು), ಸಿರಿಯಾ ಸಹಿತ- ಇಸ್ರೇಲ್ ಮೇಲೆ ಏಕಕಾಲದಲ್ಲಿ ಮುಗಿಬಿದ್ದವು. 1967ರ ಜೂನ್ 5ರಂದು ಯುದ್ಧ ಆರಂಭವಾದಾಗ ಬಹುತೇಕರು ಇಸ್ರೇಲ್ ಕಥೆ ಮುಗಿಯಿತು ಎಂದುಕೊಂಡರು. ಆದರೆ, ಕೇವಲ 6 ದಿನಗಳಲ್ಲಿ ಇಸ್ರೇಲ್ ಗೆಲುವು ಸಾಧಿಸಿ ಅಂತಾರಾಷ್ಟ್ರೀಯ ವಲಯ ಬೆಚ್ಚಿಬೀಳುವಂತೆ ಮಾಡಿತು.

ನೆರೆಯ ಪಾಕಿಸ್ತಾನ ಮತ್ತು ಚೀನಾದ ಕಿರುಕುಳ ಅನುಭವಿಸುತ್ತಿದ್ದ ನಮಗೆ ಈ ಗೆಲುವು ಒಂದು ಪಾಠವಾಗಬೇಕಿತ್ತು. ಆಗಲಾದರೂ ಇಸ್ರೇಲ್​ನತ್ತ ಸ್ನೇಹಹಸ್ತ ಚಾಚಬಹುದಿತ್ತು. ಊಹುಂ, ನಮ್ಮ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಆಗಲೇ ಇಲ್ಲ. ಅಷ್ಟರಲ್ಲಿ ನಾವು ಚೀನಾದ ವಿರುದ್ಧ 1962ರಲ್ಲಿ ಒಂದು ಯುದ್ಧ ಸೋತಾಗಿತ್ತು. ಸ್ವಾಮಿ ವಿವೇಕಾನಂದರ ‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ’ ಎಂಬುದು ರಾಷ್ಟ್ರದ ಘೊಷವಾಕ್ಯವಾಗಬೇಕಾಗಿತ್ತು. ಆದರೆ, ಹಾಗಾಗಲೇ ಇಲ್ಲ. ನೆಹರು ಗತಿಸಿ, ಶಾಸ್ತ್ರಿಯವರ ಅಲ್ಪಕಾಲದ ಆಳ್ವಿಕೆಯ ನಂತರ ನೆಹರು ಪುತ್ರಿ ಇಂದಿರಾ ಗಾಂಧಿ ದೇಶದ ಚುಕ್ಕಾಣಿ ಹಿಡಿದಿದ್ದರು. ನೆಹರು ಹಾಕಿಕೊಟ್ಟ ವಿದೇಶಾಂಗ ನೀತಿ, ನಿಲುವು, ಮಗಳು ಬದಲಾಯಿಸುವುದುಂಟೆ? ಅದು ಅಪ್ಪ ನೆಟ್ಟ ಆಲದ ಮರ!

ಈ ಪ್ಯಾಲೆಸ್ಟೈನ್ ಭಯೋತ್ಪಾದನೆಯ ಕ್ರೂರಮುಖ ಅನಾವರಣವಾಗಿದ್ದು ಆಗಿನ ಪಶ್ಚಿಮ ಜರ್ಮನಿಯ ಮ್ಯುನಿಕ್ ಒಲಿಂಪಿಕ್ಸ್​ನಲ್ಲಿ. 1972ರ ಸೆಪ್ಟೆಂಬರ್ 5ರಂದು ಬೆಳಗಿನ ಜಾವ ಒಲಿಂಪಿಕ್ಸ್ ಗ್ರಾಮದಲ್ಲಿ ನುಸುಳಿದ 8 ಜನ ಪ್ಯಾಲೆಸ್ಟೈನ್ ಭಯೋತ್ಪಾದಕರು ಇಸ್ರೇಲಿನ ಕ್ರೀಡಾಪಟುಗಳು ಉಳಿದುಕೊಂಡಿದ್ದ ವಸತಿ ಸಮುಚ್ಚಯ ಪ್ರವೇಶಿಸಿ ಇಬ್ಬರನ್ನು ಕೊಂದು ಉಳಿದ 9 ಕ್ರೀಡಾಪಟುಗಳನ್ನು ಒತ್ತೆಯಾಳಾಗಿರಿಸಿದರು. ನಂತರ ಹೆಲಿಕಾಪ್ಟರ್​ನಲ್ಲಿ ಪರಾರಿಯಾಗುವ ಯತ್ನದಲ್ಲಿದ್ದ ಇಸ್ರೇಲಿನ ಎಲ್ಲ 9 ಕ್ರೀಡಾಪಟುಗಳನ್ನು ಕೊಂದು ಹಾಕಿದರು. ಹೋಲೋಕಾಸ್ಟ್ ನರಸಂಹಾರ ನಡೆದ ಜರ್ಮನಿಯಲ್ಲಿಯೇ ಮತ್ತೊಂದು ಯಹೂದಿ ಮಾರಣಹೋಮ ನಡೆಯಿತು. ಶಾಂತಿ, ಸೌಹಾರ್ದ ಮತ್ತು ಭಾತೃತ್ವ ಬೆಸೆಯುವ ಉದ್ದೇಶದ ಒಲಿಂಪಿಕ್ಸ್, ಜನಾಂಗೀಯ, ರಾಜಕೀಯ ವೈಷಮ್ಯಕ್ಕೆ ಹಿಂಸಾತ್ಮಕವಾಗಿ ಬಳಕೆಯಾದದ್ದು ದುರಂತ.

ಇಸ್ರೇಲ್ ಕಲಿಸಿದ ಪಾಠ: ಈ ಘಟನೆ ನಂತರ ಪ್ಯಾಲೆಸ್ಟೈನ್ ‘ಸ್ವಾತಂತ್ರ್ಯ ಹೋರಾಟ’ವು ಬೆರಳೆಣಿಕೆ ರಾಷ್ಟ್ರಗಳನ್ನು ಹೊರತುಪಡಿಸಿ ಎಲ್ಲೆಡೆ ತನ್ನ ಸಹಾನುಭೂತಿ ಕಳೆದುಕೊಂಡಿತು. ಅಚ್ಚರಿಯೆಂದರೆ, ನಮ್ಮ ಶಾಂತಿಪ್ರಿಯ ದೇಶ ಮಾತ್ರ ಪ್ಯಾಲೆಸ್ಟೈನ್​ನ ಹೋರಾಟಕ್ಕೆ ಬೆಂಬಲ ಮುಂದುವರಿಸಿತು. ನಂತರ ‘ಆಪರೇಷನ್ ಎಂಟೆಬ್ಬೆ’ ಎಂದು ಖ್ಯಾತವಾದ ಕಾರ್ಯಾಚರಣೆಯಲ್ಲಿ ಇಸ್ರೇಲ್ ತನ್ನ ತಾಕತ್ತನ್ನು ಮತ್ತೊಮ್ಮೆ ರುಜುವಾತು ಮಾಡುತ್ತದೆ. 1976ರ ಜೂನ್ 27ರಂದು ಪ್ಯಾಲೆಸ್ಟೈನ್ ಉಗ್ರಗಾಮಿಗಳು ಏರ್ ಫ್ರಾನ್ಸ್​ನ ವಿಮಾನವನ್ನು ಅಪಹರಿಸಿದರು. ಇಸ್ರೇಲ್ ರಾಜಧಾನಿ ಟೆಲ್ ಅವಿವ್​ನಿಂದ ಪ್ಯಾರಿಸ್​ಗೆ ಹೊರಟಿದ್ದ ವಿಮಾನವನ್ನು ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದರು. ಇಷ್ಟು ಸಾಲದೆಂಬಂತೆ ಉಗಾಂಡದ ಇದಿ ಅಮಿನ್ ಸರ್ಕಾರ ಅಪಹರಣಕಾರರ ಪರವಾಗಿ ನಿಂತಿತು. ಇಂಥ ಕ್ಲಿಷ್ಟ ಸನ್ನಿವೇಶವನ್ನು ಇಸ್ರೇಲ್ ನಿಭಾಯಿಸಿದ ರೀತಿ ನಮ್ಮ ದೇಶಕ್ಕಷ್ಟೇ ಅಲ್ಲ, ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಜಗತ್ತಿನ ಯಾವುದೇ ದೇಶಕ್ಕೂ ಒಂದು ದೊಡ್ಡ ಪಾಠ.

ಅಪಹರಣಕಾರರು ಇಸ್ರೇಲಿಗಳು ಮತ್ತು ಯಹೂದಿಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಯಾಣಿಕರನ್ನು ಬಿಡುಗಡೆ ಮಾಡಿ ಇಸ್ರೇಲ್ ಮೇಲೆ ಒತ್ತಡ ಹೆಚ್ಚಿಸಿದರು. ತನ್ನ ಶತ್ರುದೇಶದಲ್ಲಿ ಅಲ್ಲಿನ ಸರ್ಕಾರದ ಸಹಕಾರ ಪಡೆದ ಭಯೋತ್ಪಾದಕರನ್ನು ಸದೆಬಡಿಯುವುದು ಮತ್ತು ತನ್ನ ನಾಗರಿಕರನ್ನು ಸುರಕ್ಷಿತವಾಗಿ ಹೊರತರುವುದು ಅಸಾಧಾರಣ ಯುಕ್ತಿ, ಧೈರ್ಯ ಮತ್ತು ಚಾಣಾಕ್ಷತೆಯನ್ನು ಬಯಸುತ್ತದೆ. ಇಸ್ರೇಲ್ ಅದನ್ನು ಸಾಧಿಸಿ ತೋರಿಸಿತು. 1976ರ ಜುಲೈ 4ರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲ್ ತನ್ನ 100 ಕಮಾಂಡೋಗಳನ್ನು 4000 ಕಿಲೋಮೀಟರ್ ದೂರದ ಉಗಾಂಡಾಕ್ಕೆ ರಹಸ್ಯವಾಗಿ ಕಳುಹಿಸಿ, ದಿಢೀರ್ ದಾಳಿ ನಡೆಸಿ ತನ್ನ 102 ನಾಗರಿಕರನ್ನು ಬಿಡುಗಡೆ ಮಾಡಿಸಿತು. ಕೇವಲ 90 ನಿಮಿಷದಲ್ಲಿ ಪೂರ್ಣಗೊಂಡ ಈ ಕಾರ್ಯಾಚರಣೆಯಲ್ಲಿ ಎಲ್ಲ ಅಪಹರಣಕಾರರು, ಒತ್ತೆಯಾಳುಗಳು ಮತ್ತು ಉಗಾಂಡದ 45 ಸೈನಿಕರು ಹತರಾದರು. ವಿಷಾದದ ಒಂದೇ ಸಂಗತಿ ಎಂದರೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೆಫ್ತಿನೆಂಟ ಕರ್ನಲ್ ಯೋನಾಥನ್ ನೆತನ್ಯಾಹು ಹೋರಾಡುತ್ತ ವೀರಮರಣವನ್ನಪ್ಪಿದರು. ಯೋನಾಥನ್ ಸದ್ಯದ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರ ಹಿರಿಯ ಸೋದರ. ಯಾರನ್ನೋ ಒಲೈಸುವ ಉದ್ದೇಶದಿಂದ ನೆಹರು ಮತ್ತು ಆ ನಂತರದ ಕಾಂಗ್ರೆಸ್ ಸರ್ಕಾರಗಳು ಇಸ್ರೇಲನ್ನು ದೂರವೇ ಇಟ್ಟವು. ಆ ಕಾಲದ ನಮ್ಮೆಲ್ಲ ಪತ್ರಿಕೆಗಳೂ ಇಸ್ರೇಲ್ ಬಗ್ಗೆ ಅಪರೂಪವಾಗಿ ಪ್ರಕಟಿಸುತ್ತಿದ್ದ ವರದಿಗಳಲ್ಲೂ ನಕಾರಾತ್ಮಕ ಅಭಿಪ್ರಾಯವನ್ನೇ ಬಿಂಬಿಸುತ್ತಿದ್ದವು.

ಪಿ. ವಿ. ನರಸಿಂಹ ರಾವ್ ಪ್ರಧಾನಿಯಾದಾಗ ‘ಕೈ’ ಪಕ್ಷ ಪೋಷಿಸಿಕೊಂಡು ಬಂದಿದ್ದ ಆರ್ಥಿಕ ಮತ್ತು ವಿದೇಶಾಂಗ ನೀತಿಯಿಂದ ಹೊರಬರುವ ದಿಟ್ಟ ನಿರ್ಧಾರ ಕೈಗೊಂಡರು. ಅದರಲ್ಲಿ ಪ್ರಮುಖ ಹೆಜ್ಜೆಯಾಗಿ, 1992ರ ಜನವರಿ 29ರಂದು ಇಸ್ರೇಲ್ ಜತೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವ ನಿರ್ಧಾರ ತಳೆದರು. ಸ್ವಪಕ್ಷೀಯರಿಂದಲೇ ಬಹಳಷ್ಟು ಟೀಕೆ-ಟಿಪ್ಪಣಿಗಳು ಬಂದರೂ ರಾವ್ ತಲೆ ಕೆಡಿಸಿಕೊಳ್ಳಲಿಲ್ಲ. ಮುಂದೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಇಸ್ರೇಲ್ ಜತೆ ಸಂಬಂಧವರ್ಧನೆಗೆ ಮಹತ್ವದ ಪ್ರಯತ್ನಗಳು ನಡೆದವು. ನಂತರದ ಒಂದು ದಶಕ ಮತ್ತೆ ಕಾಂಗ್ರೆಸ್​ನ ದರ್ಬಾರು ಮೂರು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಮುಕ್ತ ಮನಸ್ಸಿನಿಂದ ಇಸ್ರೇಲನ್ನು ಅಪ್ಪಿಕೊಂಡಿದೆ. ಇಸ್ರೇಲ್ ಕೂಡ ಇದಕ್ಕೆ ಸ್ಪಂದಿಸಿರುವ ರೀತಿ ಅಭೂತಪೂರ್ವ. ಏಳು ದಶಕಗಳ ಸ್ವಾಭಿಮಾನ ಶೂನ್ಯ ವಿದೇಶಾಂಗ ನೀತಿಯಿಂದ ಹೊರಬರಲು ಈಗಲಾದರೂ ನಿರ್ಧರಿಸಿರುವುದು ಸಮಾಧಾನದ ಬೆಳವಣಿಗೆ. ಎಂದೋ ಆಗಬೇಕಿದ್ದುದು ಇಂದು ನಡೆದಿದೆ. ಇಸ್ರೇಲ್​ಗೆ ಭೇಟಿ ಕೊಟ್ಟಾಗಲೆಲ್ಲ ಪ್ಯಾಲೆಸ್ಟೈನ್​ಗೂ ಭೇಟಿ ಕೊಡುವ ‘ಜೋಡಿ ವಿದೇಶಾಂಗ ನೀತಿ (Hyphenated Foreign Policy)ಯ ಸಂಪ್ರದಾಯ ಮುರಿದು De-hyphenation of Foreign Policy ಎನ್ನುವ ಸರಿಯಾದ ಮಾರ್ಗ ತುಳಿದಿದ್ದೇವೆ. ಈ ಬದಲಾವಣೆಯಿಂದ ಕಸಿವಿಸಿಗೊಂಡವರು, ಮುನಿಸಿಕೊಂಡವರೂ ಇದ್ದಾರೆ. ‘ಪ್ಯಾಲೆಸ್ಟೈನನೊಂದಿಗೆ ನಮ್ಮದು ಹಳೆಯ ಸಂಬಂಧ, ಅದು ಬದಲಾಗಬಾರದು… ಇಸ್ರೇಲ್ ಜತೆಗಿನ ಸ್ನೇಹ ಪ್ಯಾಲೆಸ್ಟೈನ್ ಜತೆಗಿನ ಸಂಬಂಧಕ್ಕೆ ಧಕ್ಕೆ ತರಬಾರದು’ ಅಂತೆಲ್ಲ ಉಪದೇಶ ಕೊಡುತ್ತಿದ್ದಾರೆ. ಅವರೆಲ್ಲ ಹಳೆ ಮನಸ್ಥಿತಿಯಿಂದ ಹೊರಬರದವರು. ಬದಲಾಗುತ್ತಿರುವ ಜಾಗತೀಕರಣದ ಸಮೀಕರಣಗಳ ಅನ್ವಯ ಹೊಸ ಹೆಜ್ಜೆ ಇರಿಸುವುದರಲ್ಲೇ ನಿಜವಾದ ಜಾಣ್ಮೆ ಇದೆ. ಇಸ್ರೇಲ್ ಜತೆ ಸ್ನೇಹ ಬೆಳೆಸುವ ಮೂಲಕ ಭಾರತ ನಿಜವಾದ ಹಿತೈಷಿಯನ್ನು ಕಂಡುಕೊಂಡಿದೆ.

(ಲೇಖಕರು ದಯಾನಂದ ಸಾಗರ ಜ್ಯೂನಿಯರ್ ಬಿಜಿನೆಸ್ ಸ್ಕೂಲಿನ ನಿರ್ದೇಶಕರು, ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

Back To Top