Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಅಪರಾಧಿಕ ಹಿನ್ನೆಲೆಯವರ ಶಾಶ್ವತ ಅನರ್ಹತೆ ಸಾಧ್ಯವೇ?

Tuesday, 08.08.2017, 3:02 AM       No Comments

ಅಪರಾಧದ ಹಿನ್ನೆಲೆಯವರು ಚುನಾವಣೆಗಳಿಂದ ಶಾಶ್ವತವಾಗಿ ಅನರ್ಹಗೊಂಡರೆ ಸ್ವಚ್ಛ ರಾಜಕಾರಣಕ್ಕೆ ಆಸ್ಪದ ಸಿಕ್ಕೀತು. ಆಗ ರಾಜಕೀಯ ಪಕ್ಷಗಳು ಇಂಥವರಿಗೆ ಟಿಕೆಟ್ ನೀಡದಂತಾಗುತ್ತದೆ. ಇದು ಕೈಗೂಡಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಯಾಗಬೇಕು. ಆದರೆ ಅಪರಾಧ ಹಿನ್ನೆಲೆಯ ಸಾಕಷ್ಟು ಸಂಸದರಿರುವಾಗ ಸರ್ಕಾರ ಇಂಥ ತಿದ್ದುಪಡಿಗೆ ಮುಂದಾಗುವುದೇ?

 | ಎಂ.ಎಸ್.ಚಾಮದಾರ್

ಅಪರಾಧಿಕ ಹಿನ್ನೆಲೆಯವರನ್ನು ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಶಾಶ್ವತವಾಗಿ ಅನರ್ಹಗೊಳಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಸವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಅಪರಾಧಿಕ ಹಿನ್ನೆಲೆಯವರು ಕಳೆದ 2 ದಶಕಗಳಿಂದ ಚುನಾವಣೆಗಳಲ್ಲಿ ಹೆಚ್ಚೆಚ್ಚು ಆರಿಸಿ ಬರುತ್ತಿದ್ದಾರೆ. ಸದ್ಯ ದೇಶದ ಒಟ್ಟು 4,807 ಶಾಸಕರು ಮತ್ತು ಸಂಸದರಲ್ಲಿ 1460 ಜನರು (ಶೇ.30) ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ವಿಶ್ಲೇಷಿಸಬೇಕಿದೆ.

ಜಾರ್ಖಂಡ್​ನ ಒಟ್ಟು 74 ಶಾಸಕರಲ್ಲಿ 55 ಮಂದಿ ಅಂದರೆ ಶೇ. 74 ಶಾಸಕರು ಕ್ರಿಮಿನಲ್ ವಿಚಾರಣೆ ಎದುರಿಸುತ್ತಿದ್ದಾರೆ. ಅಂಥವರ ಸಂಖ್ಯೆ ಕೇರಳದಲ್ಲಿ ಶೇ. 62, ಮಹಾರಾಷ್ಟ್ರದಲ್ಲಿ ಶೇ. 59, ಬಿಹಾರದಲ್ಲಿ ಶೇ. 58, ಉತ್ತರ ಪ್ರದೇಶದಲ್ಲಿ ಶೇ. 47, ಪಶ್ಚಿಮ ಬಂಗಾಳ ಮತ್ತು ಪುದುಚೆರಿಯಲ್ಲಿ ಶೇ.37, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಶೇ. 34 ಇದೆ.

ಇಂಥ ಬಾಹುಬಲದವರು ಮಾತ್ರವಲ್ಲದೆ, ಕೋಟ್ಯಧೀಶ ಶಾಸಕರು/ಸಂಸದರ ಸಂಖ್ಯೆಯೂ ಏರುತ್ತಿದೆ. ವಾಸ್ತವದಲ್ಲಿ ಅವೆರಡಕ್ಕೂ ನಿಕಟ ಸಂಬಂಧವಿದೆ. ತೋಳ್ಬಲದಿಂದ ಹಣಗಳಿಸಿ ಕೋಟ್ಯಧೀಶರಾಗುವವವರಿಗೆ ಮತ್ತು ಮೋಸ, ವಂಚನೆ, ಭ್ರಷ್ಟಾಚಾರದಿಂದ ಕೋಟ್ಯಧೀಶರಾಗುವವರಿಗೆ ರಾಜಕೀಯ ನಂಟು ಬೇಕು. ತಾವು ಮಾಡುವ ಅನ್ಯಾಯಗಳಿಂದ ಬಚಾವಾಗಲು ಸಕ್ರಿಯ ರಾಜಕಾರಣ ಇವರ ಸಹಾಯಕ್ಕೆ ಬರುತ್ತದೆ.

ಈ ವಿಷಯದಲ್ಲಿ ಮಾತ್ರ ಭಾರತದ ಬಹುತೇಕ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ; ಬಾಹುಬಲ ಇರುವವರಿಗೆ ಎಲ್ಲ ಪಕ್ಷಗಳೂ ಟಿಕೆಟ್ ನೀಡಿವೆ. ಆದರಲ್ಲಿ ಲಾಲು ಪ್ರಸಾದರ ಆರ್​ಜೆಡಿ, ಮುಲಾಯಂ ಸಿಂಗ್ ಅವರ ಎಸ್​ಪಿ, ಮಾಯಾವತಿಯವರ ಬಿಎಸ್​ಪಿ ಪಕ್ಷಗಳ ನಂತರದ ಸ್ಥಾನದಲ್ಲಿರುವಂಥವು ಶಿವಸೇನೆ ಮತ್ತು ಬಿಜೆಪಿ. ಪ್ರಸ್ತುತ ಇತರ ಪಕ್ಷಗಳಿಗಿಂತ ಕಾಂಗ್ರೆಸ್ಸಿನಲ್ಲಿ ಇಂಥ ಬಾಹುಬಲದವರ ಪ್ರಮಾಣ ಸ್ವಲ್ಪ ಕಡಿಮೆಯಷ್ಟೇ!

ಈಗಿರುವ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 8, 8ಅ, 9, 9ಅ, 10, 10ಅ ಅನ್ವಯ ವಿವಿಧ ಅನಾಚಾರಗಳಿಗಾಗಿ ಶಿಕ್ಷೆಗೆ ಗುರಿಯಾದ ಸಂಸದ/ಶಾಸಕರನ್ನು ಚುನಾವಣೆಗಳಿಂದ ಅನರ್ಹಗೊಳಿಸಲು ಅವಕಾಶವಿದೆ. ಆದರೆ ಆ ಅನರ್ಹತೆ ಭಿನ್ನಭಿನ್ನ ಅಪರಾಧಗಳಿಗೆ ಭಿನ್ನಭಿನ್ನವಾಗಿದ್ದು 3, 5, 6 ವರ್ಷಗಳು ಇಲ್ಲವೆ ಜೈಲಿನಿಂದ ಹೊರಬಂದ 6 ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ತದನಂತರ ಅವರು ಮತ್ತೆ ಚುನಾವಣಾ ಕಣಕ್ಕೆ ಇಳಿಯುತ್ತಾರೆ. ರಾಜಕಾರಣಿಗಳಿಗೆ ನಿವೃತ್ತಿ ವಯಸ್ಸಿಲ್ಲ; ಭಾರತದ ಬಹುತೇಕ ರಾಜಕಾರಣಿಗಳು ಕೊನೆವರೆಗೂ ರಾಜಕಾರಣದಲ್ಲಿರುತ್ತಾರೆ. ಆದ್ದರಿಂದ ಸೀಮಿತ ಅನರ್ಹತೆಯನ್ನು ಶಾಶ್ವತಗೊಳಿಸಬೇಕೆಂಬುದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ವಿನಂತಿ.

ಈ ವಿಷಯವನ್ನು ವಿಶದವಾಗಿ ವಿಶ್ಲೇಷಿಸಬೇಕಿದೆ. ರಾಜಕೀಯ ಪಕ್ಷಗಳು ಕೆಟ್ಟ ಜನರಿಗೆ ಟಿಕೆಟ್ ನೀಡುತ್ತವೆ. ಆದರೆ ಜನರೇಕೆ ಇಂಥವರಿಗೆ ಮತನೀಡಿ ಗೆಲ್ಲಿಸುತ್ತಾರೆ? ಕಾರಣಗಳು ಅನೇಕ. ಬಿಹಾರದ ಪಪ್ಪು ಯಾದವ್, ಶಹಾಬುದ್ದೀನ್, ಆನಂದ್ ಮೋಹನ್, ಸೂರಜ್ ಭಾನ್, ಅನಂತ್ ಸಿಂಗ್, ಉತ್ತರ ಪ್ರದೇಶದ ರಾಜಾ ಭಯ್ಯಾ, ರಾಜಸ್ಥಾನದ ಧಾಮಸಿಂಗ್ ಥರದವರು ಜೈಲಿನಲ್ಲಿದ್ದರೂ ಹಿಂಬಾಲಕರ ಮೂಲಕ ಮತದಾರರಲ್ಲಿ ಭಯ ಹುಟ್ಟಿಸಿ ಮತ ಪಡೆದು ಆರಿಸಿ ಬರುತ್ತಾರೆ.

ಎರಡನೆಯದು, ಪ್ರತಿ ವೋಟಿಗೆ ಸಾವಿರಗಟ್ಟಲೆ ಹಣ ನೀಡಿ ಆರಿಸಿ ಬರುವವರು ಕರ್ನಾಟಕದಲ್ಲಿಯೇ ಸಾಕಷ್ಟಿದ್ದಾರೆ. ಅಂಥವರ ಗೂಂಡಾಗರ್ದಿಯನ್ನೂ ನಾವು ನಾಲ್ಕಾರು ವರ್ಷಗಳ ಹಿಂದೆ ನೋಡಿದ್ದೇವಲ್ಲ! ಟಿಕೆಟ್ ದೊರೆತರೆ ಈಗಲೂ ಅವರು ಆರಿಸಿ ಬರುತ್ತಾರೆ!

ಮೂರನೆಯದು, ಜಾತಿಯ ಪ್ರೀತಿ. ಇದಂತೂ ಆಯಾ ಜಾತಿಗಳ ಮತದಾರರ ತಲೆ ತಿರುಗಿಸಿ ಇತರ ಜಾತಿಯ ಮತದಾರರೊಡನೆ ಪೈಪೋಟಿಯನ್ನೇ ಸೃಷ್ಟಿಸುತ್ತದೆ. ಭೃಷ್ಟನಿರಲಿ, ತಲೆಹಿಡುಕನಿರಲಿ, ಕೊಲೆಗಡುಕನಿರಲಿ, ನಮ್ಮ ಜಾತಿಯವನಿದ್ದರೆ ಸಾಕು! ಹೀಗೆ ನಮ್ಮ ಪ್ರಜಾರಾಜ್ಯದಲ್ಲಿ ಬೇರೂರಿರುವ ಭಯ, ಭ್ರಷ್ಟತೆ ಮತ್ತು ಜಾತಿ ಎಂಬ ಈ ಮೂರು ಅಂಶಗಳು ಬಾಹುಬಲದವರಿಗೆ ಅಭಯ ನೀಡುವ ಶಕ್ತಿಗಳಾಗಿಬಿಟ್ಟಿವೆ!

ನಾಲ್ಕನೆಯದು, ಬಾಹುಬಲದ ಶಾಸಕರು ತಮ್ಮ ಕ್ಷೇತ್ರದ ಮತದಾರರಲ್ಲಿ ಬಹಳ ಜನಪ್ರಿಯರಾಗಿರುತ್ತಾರೆ. ಯಾರಾದರೂ ಸತ್ತರೆ ತಪ್ಪದೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ದುಃಖತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಾರೆ. ಮದುವೆ, ಗ್ರಾಮಗಳ ಜಾತ್ರೆ, ಪಂದ್ಯಾಟ, ಸಾರ್ವಜನಿಕ ಸಮಾರಂಭಗಳಿಗೆ ಹಣ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಗುಡಿ, ಸಮುದಾಯ ಭವನ, ಬಸ್ ನಿಲುಗಡೆ ತಾಣ, ಕಲ್ಯಾಣ ಮಂಟಪ ಇತ್ಯಾದಿಗಳನ್ನು ಕಟ್ಟಲು ಹಣ ನೀಡುತ್ತಾರೆ. ಕೆಲವೊಮ್ಮೆ ಬಡಮಕ್ಕಳ ಮದುವೆ, ಶಿಕ್ಷಣ, ವೈದ್ಯಕೀಯ ವೆಚ್ಚಕ್ಕೆ, ಅಂತ್ಯಸಂಸ್ಕಾರಕ್ಕೆ, ಗಾಯಾಳುಗಳಿಗೆ ಧನಸಹಾಯ ಮಾಡಿ ಪ್ರಚಾರ ಪಡೆಯುತ್ತಾರೆ. ಆ ಮೂಲಕ ದೀನಬಂಧು, ಬಡವರ ಸೇವಕ, ಸಮಾಜಮುಖಿ ನಾಯಕ ಎಂದೆಲ್ಲ ಹೆಸರು ಗಳಿಸುತ್ತಾರೆ. ಜನರೊಂದಿಗೆ ಹಸನ್ಮುಖರಾಗಿ ವರ್ತಿಸುತ್ತಾರೆ. ಇವೆಲ್ಲ ನಾಟಕೀಯವಾಗಿದ್ದರೂ ಒಳ್ಳೆಯ ಕೆಲಸಗಳೇ. ಆದರೆ ಈ ಸಮಾಜಮುಖಿ ಕಾರ್ಯಗಳಿಗೆ ಹಣ ಎಲ್ಲಿಂದ ಬರುತ್ತದೆ? ಅದೇ ಭ್ರಷ್ಟಾಚಾರದ ಮೂಲ. ಅದು ಸಣ್ಣ ಪ್ರಮಾಣದಿಂದ ಹಿಡಿದು ಹತ್ತಾರು ಕೋಟಿ ರೂಪಾಯಿವರೆಗೆ ತಲುಪುತ್ತದೆ. ಸರ್ಕಾರದಿಂದ ದೊರೆಯುವ ನಿವೇಶನ, ಮನೆ, ಸಹಾಯಧನ, ವಿವಿಧ ರೀತಿಯ ಪಿಂಚಣಿಗಳ ಮಂಜೂರಾತಿ, ಹಾಸ್ಟೆಲ್​ಗಳಿಗೆ ಪ್ರವೇಶಾವಕಾಶ ಇತ್ಯಾದಿಗಳಿಗೆ ಸೂಕ್ತ ವಸೂಲಿ ನಡೆಯುತ್ತದೆ. ನೌಕರಿ ಕೊಡಿಸುವುದು, ವರ್ಗಾವಣೆ ಮಾಡಿಸುವುದು, ವಿಚಾರಣೆ ಸ್ಥಗಿತಗೊಳಿಸುವುದು, ಅಮಾನತು ಆದೇಶದಿಂದ ಮುಕ್ತಗೊಳಿಸುವುದು ಮುಂತಾದವಕ್ಕೆ ನೌಕರರಿಂದ ಹಣವಸೂಲಿಯೂ ಸರ್ವೆಸಾಮಾನ್ಯ. ಈ ತರಹದ ಭ್ರಷ್ಟತೆ ಈಗ ಸೇವಾಶುಲ್ಕವೆನಿಸಿದೆ.

ದೊಡ್ಡಹಣ ನೀಡುವ ಗಿರಾಕಿಗಳೆಂದರೆ ದೊಡ್ಡ ಗುತ್ತಿಗೆದಾರರು, ಕಾಳಸಂತೆ ಖದೀಮರು, ವಿವಿಧ ಪ್ರಕಾರದ ಮಾಫಿಯಾಗಳು ಮತ್ತು ಭ್ರಷ್ಟ ಅಧಿಕಾರಿಗಳು. ಇವರು ನಿರಂತರ ದೊಡ್ಡಹಣದ ಮೂಲಗಳು. ವ್ಯಾಪಾರಿ/ ಉದ್ಯೋಗಪತಿಗಳಿಂದ ರಕ್ಷಣಾಹಣ ವಸೂಲಿ, ಶ್ರೀಮಂತ ಗಿರಾಕಿಗಳ ಅಪಹರಣದ ಮೂಲಕ ಹಣಕೀಳುವುದು ಇನ್ನೊಂದು ಮಾರ್ಗ. ಹೀಗೆ ಬಾಹುಬಲದ ಶಾಸಕರು ಆಧುನಿಕ ‘ರಾಬಿನ್ ಹುಡ್‘ಗಳಾಗಿದ್ದಾರೆ; ಅಂದರೆ, ಬಾಳಪ್ಪನಿಗೆ ಸಹಾಯಮಾಡಲು ಕಾಳಪ್ಪನಿಂದ ಹಣ ದೋಚುವುದು. ಆದರೆ ಅವರು ಆರಿಸಿಬರುತ್ತಾರೆ.

ಕಾನೂನು ಉಲ್ಲಂಘಿಸುವವರೇ ಕಾನೂನು ರಚನಾಕಾರರಾದರೆ ಏನಾಗುತ್ತದೆ ನೋಡಿ- ಮೊದಲನೆಯದು, ‘ಕ್ರೖೆಮ್ ಇನ್ ಇಂಡಿಯಾ‘ ವಾರ್ಷಿಕ ವರದಿಗಳ ಪ್ರಕಾರ, 1950ರ ದಶಕದಲ್ಲಿ ಬ್ರಿಟಿಷರು ಬಿಟ್ಟುಹೋದ ಆಡಳಿತ ವ್ಯವಸ್ಥೆ ಇನ್ನೂ ಸ್ವಲ್ಪ ಗಟ್ಟಿಮುಟ್ಟಾಗಿತ್ತು. ಆಗ 100ರಲ್ಲಿ 75ರಷ್ಟು ಅಪರಾಧಿಗಳಿಗೆ ಜೈಲುಶಿಕ್ಷೆಯಾಗುತ್ತಿತ್ತು. 1960ರ ದಶಕದಲ್ಲಿ ಅದು ಪ್ರತಿಶತ 60ಕ್ಕೆ ಇಳಿಯಿತು. ಈಗ 100ರಲ್ಲಿ ಕೇವಲ 30 ಅಪರಾಧಿಗಳು ಶಿಕ್ಷೆಗೆ ಗುರಿಯಾಗುತ್ತಾರೆ, ಮಿಕ್ಕ 70 ಅಪರಾಧಿಗಳ ವಿರುದ್ಧ ಆರೋಪ ಸಿದ್ಧವಾಗುವುದಿಲ್ಲ! ಶಿಕ್ಷೆಗೆ ಗುರಿಯಾಗುವವರಲ್ಲಿ ಬಹುಜನರು ಕಡುಬಡವರು, ವಕೀಲರ ಶುಲ್ಕ ಕೊಡಲು ಆಗದವರು, ಶಾಸಕರ/ಬಲಾಢ್ಯರ ಬೆಂಬಲವಿಲ್ಲದವರು. ಉಳಿದವರು ಜಾಮೀನಿನ ಮೇಲೆ ಹೊರಬಂದು, ನಂತರ ನ್ಯಾಯಾಲಯಗಳಿಂದ ಆರಾಮಾಗಿ ಖುಲಾಸೆ ಹೊಂದುತ್ತಾರೆ. ಇದು ನಮ್ಮ ಪೊಲೀಸ್ ಮತ್ತು ನ್ಯಾಯವ್ಯವಸ್ಥೆಯ ಇಂದಿನ ಸ್ಥಿತಿಗತಿ!

ಎರಡನೆಯದು, ಬಾಹುಬಲವಿರುವ ಬಹುತೇಕ ಶಾಸಕರು ಸರ್ಕಾರದಿಂದ ‘ಝೆಡ್ ಟೈಪ್‘ ರಕ್ಷಣೆ ಪಡೆಯುತ್ತಾರೆ. ಅದಕ್ಕೆ ಪ್ರತಿವರ್ಷ ಖರ್ಚಾಗುವ ಲಕ್ಷಗಟ್ಟಲೆ ಹಣ ಸರ್ಕಾರದ ಖಜಾನೆಯಿಂದ ಹೋಗುತ್ತದೆ. ಅಂಥ ರಕ್ಷಣೆ ದೊರೆಯದಿದ್ದರೆ ಅವರು ಮುಕ್ತವಾಗಿ ಓಡಾಡಲು ಸಾಧ್ಯವಿಲ್ಲ, ಬದುಕುವುದೂ ಕಷ್ಟ. ಹಾಗಾಗಿ ಏನಾದರೂ ಮಾಡಿ, ಚುನಾವಣೆಗಳಲ್ಲಿ ಆರಿಸಿ ಬರುವುದು ಅವರಿಗೆ ಅನಿವಾರ್ಯ.

ಮೂರನೆಯದು, ಚುನಾಯಿತರಾಗದ ಬಾಹುಬಲದ ಶಾಸಕರಿಗೆ ಸುರಕ್ಷಿತ ಸ್ಥಳವೆಂದರೆ ಜೈಲು! ಅಲ್ಲಿ ಪುಕ್ಕಟೆ ರಕ್ಷಣೆ ದೊರೆಯುತ್ತದೆ. ಸೂಕ್ತ ಕೈದಿಗಳನ್ನು ಗುರುತಿಸಿ ಹೊರಗಡೆ ಬಂದೊಡನೆ ದೊಡ್ಡ ಗ್ಯಾಂಗ್ ಕಟ್ಟಬಹುದು. ಹಣ ನೀಡಿದರೆ ಗಾಂಜಾ-ಎಲ್​ಎಸ್​ಡಿಯಂಥ ಮಾದಕ ಪದಾರ್ಥಗಳು, ಚಾಕು-ಚೂರಿ, ಮೊಬೈಲ್, ಮಟನ್ ಬಿರಿಯಾನಿ ಎಲ್ಲವೂ ಜೈಲಿನೊಳಗೇ ದೊರೆಯುತ್ತವೆ. ಹೀಗಾಗಿ ಅವು ನಿಜಾರ್ಥದಲ್ಲಿ ಸೆರೆಮನೆಗಳಾಗಿ ಉಳಿದಿಲ್ಲ, ಅಪರಾಧಿಗಳಿಗೆ ಅಭಯ ನೀಡುವ ಸ್ಥಳಗಳಾಗಿವೆ! ಜೈಲಿನೊಳಗಿದ್ದುಕೊಂಡೇ ಹೊರಗಿನ ತಮ್ಮ ದಂಡಿನ ಮುಖಾಂತರ ಸಮಾಜದಲ್ಲಿ ಕೋಲಾಹಲ ಉಂಟುಮಾಡಬಹುದು. ಈಗ ಕರ್ನಾಟಕದ ಜೈಲುಗಳಲ್ಲಿ ನಡೆಯುತ್ತಿರುವ ಕರೀಂಲಾಲಾ ತೆಲಗಿ, ಶಶಿಕಲಾರಂಥವರ ಅಧ್ವಾನಗಳ ವಿಚಾರಣೆ ಒಂದು ಸಣ್ಣ ಉದಾಹರಣೆಯಷ್ಟೇ!

ನಾಲ್ಕನೆಯದು, ಹಿಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಹೇಳಿದಂತೆ, ಭ್ರಷ್ಟ ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳು ಸೇರಿಕೊಂಡು ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಮಂಜೂರಾಗುವ ಹಣದಲ್ಲಿ ಒಂದು ರೂಪಾಯಿಯಲ್ಲಿ 15 ಪೈಸೆಯನ್ನಷ್ಟೇ ಅರ್ಹರಿಗೆ ತಲುಪಿಸುತ್ತಾರೆ ಎಂಬುದು ಅತಿಶಯೋಕ್ತಿಯಲ್ಲ. ಅದೆಲ್ಲಕ್ಕೂ ಭ್ರಷ್ಟತೆಯ ಮತ್ತು ತೋಳ್ಬಲದ ರಾಜಕಾರಣಗಳೇ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಆದ್ದರಿಂದ ಅಪರಾಧದ ಹಿನ್ನೆಲೆಯುಳ್ಳವರನ್ನು ಚುನಾವಣೆಗಳಿಂದ ಶಾಶ್ವತವಾಗಿ ಅನರ್ಹಗೊಳಿಸಿದರೆ ಮಾತ್ರ ಹೊಸ ನಮೂನೆಯ ಸ್ವಚ್ಛ ರಾಜಕಾರಣ ಈ ದೇಶದಲ್ಲಿ ಪ್ರಾರಂಭವಾಗಬಹುದು. ಆಗ ರಾಜಕೀಯ ಪಕ್ಷಗಳು ಅಪರಾಧ ಹಿನ್ನೆಲೆಯವರಿಗೆ ಟಿಕೆಟ್ ನೀಡದಂತಾಗುತ್ತದೆ. ಸ್ವಚ್ಛ ಚಾರಿತ್ರ್ಯ ಉಳ್ಳವರು ಚುನಾವಣೆಗೆ ನಿಲ್ಲುವುದಕ್ಕೆ ಅವಕಾಶವಾಗುತ್ತದೆ. ಸ್ವಾತಂತ್ರ್ಯ ಬಂದಾಗಿನ ಬಹುತೇಕ ನಾಯಕರು ಸ್ವಾತಂತ್ಯಕ್ಕಾಗಿ ಜೈಲಿಗೆ ಹೋದವರು; ಆದರೆ ಈಗಿನ ಸಾಕಷ್ಟು ನಾಯಕರು ವೈಯಕ್ತಿಕ ಅಪರಾಧಗಳಿಗಾಗಿ ಜೈಲು ಸೇರುವವರು. ಜೈಲಿನ ದಾಖಲೆ ಎಂಬುದು ಅಂದು ದೇಶಪ್ರೇಮದ ಸಂಕೇತವಾಗಿತ್ತು. ಆದರಿಂದು ಅದು ಸಮಾಜದ್ರೋಹದ ಸಂಕೇತವಾಗಿದೆ!

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಯಾವುದೇ ನಿರ್ಣಯಕ್ಕೆ ಬಂದರೂ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಅಧಿಕಾರವನ್ನು ಸಂಸತ್ತು ಮಾತ್ರ ಹೊಂದಿದೆ. ಅದರಲ್ಲೇ ಎಲ್ಲ ಪಕ್ಷಗಳ ಅಪರಾಧ ಹಿನ್ನೆಲೆಯಿರುವ ಶೇ. 30ರಷ್ಟು ಸಂಸದರಿರುವಾಗ ಅಂಥ ತಿದ್ದುಪಡಿಯನ್ನು ಸರ್ಕಾರ ತರುವುದೇ ಎಂಬುದನ್ನು ಕಾಯ್ದುನೋಡಬೇಕಿದೆ.

(ಲೇಖಕರು ನಿವೃತ್ತ ಐಎಎಸ್ ಅಧಿಕಾರಿ)

(ಓದುಗರ ಗಮನಕ್ಕೆ: ಅನಿವಾರ್ಯ ಕಾರಣದಿಂದ ಮುಜಫರ್ ಹುಸೇನ್ ಅವರ ಹಕೀಕತ್ಕೀ ಕಹಾನಿ ಅಂಕಣ ಇಂದು ಪ್ರಕಟವಾಗಿಲ್ಲ)

Leave a Reply

Your email address will not be published. Required fields are marked *

Back To Top