Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಷರತ್ತುಬದ್ಧ ಪ್ರೀತಿಯನ್ನು ಪ್ರೀತಿ ಎನ್ನಲಾದೀತೇ?

Saturday, 14.01.2017, 4:00 AM       No Comments

| ಶಾಂತಾ ನಾಗರಾಜ್

ಮಹಿಳಾ ಕಾಲೇಜೊಂದರಲ್ಲಿ ಪದವಿಯ ವಿದ್ಯಾರ್ಥಿನಿಯರಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸಿದ್ದರು. ನಾನು ಒಂದು ಸೆಷನ್​ಗೆ ಸಂಪನ್ಮೂಲವ್ಯಕ್ತಿಯಾಗಿ ಹೋಗಿದ್ದೆ. ಅಲ್ಲಿ 90 ವಿದ್ಯಾರ್ಥಿನಿಯರಿದ್ದರು. ನಾನು ಪೇರೆಂಟಿಂಗ್ ಬಗ್ಗೆ ಅದರಲ್ಲೂ ತಾಯ್ತನದ ಜವಾಬ್ದಾರಿಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಸಬೇಕಿತ್ತು. ಮೊದಲಿಗೆ ಒಂದು ಪ್ರಶ್ನೆ ಕೇಳಿದೆ- ‘ಎರಡು ವರ್ಷದ ಮಗುವಿಗೆ ತಾಯಿ-ತಂದೆ ‘ನಿನ್ನನ್ನು ನಾವು ತುಂಬಾ ಇಷ್ಟಪಡುತ್ತೇವೆ’ ಎನ್ನುವುದನ್ನು ಮನದಟ್ಟು ಮಾಡಬೇಕು. ಅದನ್ನು ಹೇಗೆ ಮಾಡಬಹುದು?’. ಬಹಳಷ್ಟು ಹುಡುಗಿಯರು ‘ಆಟಿಕೆಗಳನ್ನು ಕೊಡಿಸಿ’ ಎಂದರು. ಕೆಲವರು ಸಿಹಿತಿಂಡಿ, ಬಟ್ಟೆ ಹೀಗೆ ವಿವಿಧ ವಸ್ತುಗಳ ಹೆಸರು ಹೇಳಲು ಪ್ರಾರಂಭಿಸಿದರು. ನಾನು, ‘ಆಯಿತು. ಹೀಗೆ ವಸ್ತುವನ್ನು ಕೊಡಿಸಿ ಪ್ರೀತಿಯನ್ನು ಪ್ರಕಟಪಡಿಸಬಹುದು ಎಂಬುದನ್ನು ನಿಮ್ಮಲ್ಲಿ ಎಷ್ಟು ಜನ ನಂಬುತ್ತೀರಿ ಕೈಯೆತ್ತಿ’ ಎಂದೆ. 90ರಲ್ಲಿ 60 ಹುಡುಗಿಯರು ಕೈಯೆತ್ತಿದರು. ಆ 60 ಜನರನ್ನು ನನ್ನ ಬಲಭಾಗದ ಆಸನಗಳಲ್ಲಿ ಕುಳ್ಳಿರಿಸಿ, ಮಿಕ್ಕವರನ್ನು ಎಡಗಡೆ ಕೂರುವಂತೆ ಹೇಳಿ, ‘ಈಗ ನಿಮ್ಮ ಈ ಎರಡು ಗುಂಪುಗಳಲ್ಲಿ ಒಂದು ಚಿಕ್ಕ ಸ್ಪರ್ಧೆ. ‘ವಸ್ತುಗಳಿಂದ ಪ್ರೀತಿ’ ಎನ್ನುವ ನೀವು, ಇಲ್ಲಿ ‘ಅದಲ್ಲ’ ಎನ್ನುತ್ತಿದ್ದಾರಲ್ಲ ಅವರ ಮನಒಲಿಯುವಂತೆ ಮಾತಾಡಿ, ಈಕಡೆ ಇರುವವರನ್ನು ನಿಮ್ಮ ಕಡೆ ಎಳೆದುಕೊಳ್ಳಬೇಕು. ಮತ್ತು ನನ್ನ ಎಡಗಡೆ ಇರುವ ನೀವು, ‘ವಸ್ತುವಿನಿಂದ ಪ್ರೀತಿಯಲ್ಲ’ ಎನ್ನುವುದನ್ನು ಇವರಿಗೆ ಮನದಟ್ಟು ಮಾಡಿ ಇವರನ್ನು ನಿಮ್ಮೆಡೆ ಸೆಳೆದುಕೊಳ್ಳಬೇಕು. ಇಲ್ಲಿ ಪಕ್ಷಾಂತರ ನಿಷಿದ್ಧವಲ್ಲ. ಯಾರು ಯಾವಾಗ ಬೇಕಾದರೂ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಪಕ್ಷಾಂತರ ಮಾಡಬಹುದು’ ಎಂದೆ.

ಸರಿ, ಚರ್ಚಾಸ್ಪರ್ಧೆ ಶುರುವಾಯಿತು. ಈ 60 ಹುಡುಗಿಯರು ತಮ್ಮೆಲ್ಲಾ ವಾಙ್ಮಯತೆಯನ್ನು ಪ್ರಯೋಗಿಸಲು ಶುರುಮಾಡಿದರು. ಒಬ್ಬಳಂತೂ ತಮ್ಮ ಮನೆಕಟ್ಟುವಾಗ ಕಲ್ಲುಕುಟ್ಟಲು ಬರುತ್ತಿದ್ದ ಮಹಿಳೆ, ಹಣಕೊಟ್ಟಾಗ ತನ್ನ ಮಗುವಿಗೆ ಚಾಕಲೇಟ್ ತೆಗೆದುಕೊಂಡು ಹೋದ ಕಥೆಯನ್ನು ರಂಜನೀಯವಾಗಿ ಹೇಳುತ್ತಾ ‘ಅಂಥ ಬಡಮಹಿಳೆಯೇ ‘ಚಾಕಲೇಟ್’ ಮೂಲಕ ತನ್ನ ಪ್ರೀತಿಯನ್ನು ತೋರ್ಪಡಿಸುವಾಗ ಹಣವುಳ್ಳವರು ಏನಾದರೂ ಕೊಡಿಸುವುದು ಖಂಡಿತಾ ಸರಿ’ ಎಂದಳು. ಹೀಗೇ ವಾದವಿವಾದ ನಡೆದು, ನೋಡನೋಡುತ್ತಿದ್ದಂತೇ ‘ಅದಲ್ಲ’ ಎನ್ನುತ್ತಿದ್ದ ಈ 30 ಹುಡುಗಿಯರಲ್ಲಿ 29 ಮಂದಿ ಇತ್ತಲಿನ 60 ಜನರನ್ನು ಸೇರಿಕೊಂಡುಬಿಟ್ಟರು! ಒಬ್ಬಳು ಮಾತ್ರ ‘ಅದಲ್ಲ’ ಎನ್ನುತ್ತಿದ್ದಳೇ ವಿನಾ ‘ಅದು ಹೇಗೆ ಸರಿಯಲ್ಲ’ ಎನ್ನುವುದನ್ನು ವಿವರಿಸಲು ಪರದಾಡುತ್ತಿದ್ದಳು. ಒಬ್ಬಂಟಿಯಾಗಿ ಉಳಿದ ಆ ಹುಡುಗಿಯನ್ನೇ ‘ಗೆದ್ದವಳು’ ಎಂದು ನಾನು ಘೊಷಿಸಿ ‘ಅನ್​ಕಂಡಿಷನಲ್ ಲವ್’ ಬಗ್ಗೆ ವಿವರಿಸಿದ ಮೇಲೆ ಅವರಿಗೆ ತಮ್ಮ ತಪ್ಪಿನ ಅರಿವಾಯಿತು.

ನನಗೆ ಗಾಬರಿಯಾದ ಮತ್ತೊಂದು ಅಂಶವೆಂದರೆ, ಅಲ್ಲಿದ್ದ ಕೆಲ ಉಪನ್ಯಾಸಕರೂ, ಪ್ರಾಂಶುಪಾಲರೂ ಈ ಬಹುಸಂಖ್ಯಾತ ಹುಡುಗಿಯರ ವಾದವನ್ನು ಸಮರ್ಥಿಸಿದ್ದು! ಪ್ರಾಂಶುಪಾಲರಂತೂ ‘ನನ್ನ ಮಗ ಪಿ.ಯು.ಸಿ ಓದುತ್ತಿದ್ದಾನೆ. ಅವನಿಗೆ ‘ಶೇ.98 ಅಂಕ ತೆಗೆದುಕೋ, ನಿನ್ನಿಷ್ಟದ ಬೈಕ್ ಕೊಡಿಸುತ್ತೇನೆ’ ಎಂದರೆ ತಪ್ಪೇನು ಮೇಡಂ? ಇದರಿಂದ ಅವನಿಗೆ ಓದಲು ಮತ್ತಷ್ಟು ಸ್ಪೂರ್ತಿ ಬರುವುದಿಲ್ಲವೇ?’ ಎಂದರು! ನಾನು ಕೇಳಿದೆ- ‘ಇದುವರೆವಿಗೂ ಅವನು ‘ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು, ಒಳ್ಳೆಯ ಅಂಕಗಳಿಸಿ ಚೆನ್ನಾದ ಕಾಲೇಜಿನಲ್ಲಿ ಸೀಟು ಪಡೆಯಬೇಕು’ ಎನ್ನುವ ಗುರಿಯಿಟ್ಟುಕೊಡು ಓದುತ್ತಿರುತ್ತಾನೆ. ನೀವು ‘ಶೇ. 98 ಅಂಕ ಪಡೆದರೆ ನಿನ್ನಿಷ್ಟದ ಬೈಕ್’ ಎಂದರೆ ಅವನು ಕನಸು ಕಾಣಲು ಶುರುಮಾಡುತ್ತಾನೆ. ಆಗ ಅವನಿಗೆ ಪ್ರತಿ ಪುಟದಲ್ಲೂ ವಿಷಯದ ಬದಲು ‘ಬೈಕ್’ ಕಾಣಿಸುತ್ತದೆ. ವಿದ್ಯೆಯ ಗುರಿ ‘ತನ್ನಿಷ್ಟದ ಬೈಕ್’ಗಾಗಿ ಎನಿಸಿ, ಅಂತರ್ಜಾಲದಲ್ಲಿ ಹೊಸ ಮಾಡೆಲ್ಲಿನ ಬೈಕ್​ಗಳ ಶೋಧಕ್ಕೆ ತೊಡಗುತ್ತಾನೆ. ಅವನ ಏಕಾಗ್ರತೆಯನ್ನೂ, ಗುರಿಯನ್ನೂ ಕೆಡಿಸಿದ್ದು ಯಾರು? ಅವನಿಗೆ ಬೈಕಿನ ತುರ್ತು ಇದ್ದರೆ, ನಿಮಗೆ ಅದನ್ನು ಕೊಡಿಸುವ ಆರ್ಥಿಕಬಲವಿದ್ದರೆ, ಅವನು ಶೇ. 55 ಅಂಕ ತೆಗೆದುಕೊಂಡರೂ ನೀವು ಬೈಕ್ ಕೊಡಿಸಬೇಕಲ್ಲವೇ? ಜೀವನದ ಅಗತ್ಯಗಳಿಗೂ ಮಕ್ಕಳ ಪರ್ಸೆಂಟೇಜಿಗೂ ತಳಕುಹಾಕುವುದು ಸರಿಯೇ?’ ಎಂದೂ ಕೇಳಿದೆ. ಅವರು ಮೌನದ ಮೊರೆಹೊಕ್ಕರು.

‘ಪೇರೆಂಟಿಂಗ್ ವರ್ಕ್​ಷಾಪ್’ ನಡೆಸುವಾಗ ಅನೇಕ ತಂದೆ-ತಾಯಿಯರಲ್ಲಿ ಈ ಗೊಂದಲವನ್ನು ಕಾಣುತ್ತೇನೆ. ಇಂದಿನ ಜಾಹೀರಾತುಗಳು ನಮ್ಮನ್ನು ಅದೆಷ್ಟು ‘ಕೊಳ್ಳುಬಾಕ’ರನ್ನಾಗಿಸಿಬಿಟ್ಟಿವೆ ಎಂದರೆ, ಕೊಳ್ಳುವುದಕ್ಕೆ ಅನೇಕ ‘ನೆವ’ಗಳನ್ನು ಹುಡುಕುತ್ತಿರುತ್ತೇವೆ. ಅದರಲ್ಲಿ ಈ ಮಕ್ಕಳ ‘ಜಾಣತನ’ದ ನೆವವೂ ಒಂದು! ಇದರಿಂದಾಗಿ ಮಕ್ಕಳು ‘ಶುದ್ಧ ಅಂತಃಕರಣ’ ಅನುಭವಿಸುತ್ತಲೇ ಇಲ್ಲ, ಅದನ್ನು ಮತ್ತೊಬ್ಬರಿಗೆ ಕೊಡುವುದಕ್ಕೂ ಅವರಿಗೆ ಬರುತ್ತಿಲ್ಲ. ಹಾಗಾಗಿ ಇವತ್ತು ‘ಸ್ನೇಹ’ವೂ ‘ಕಂಡಿಷನಲ್’ ಆಗಿದೆ. ನಮ್ಮ ಸೆಂಟರ್​ಗೆ ಬಂದ ಶಾಲಾಬಾಲಕನೊಬ್ಬ ಹೇಳುತ್ತಿದ್ದ- ‘ನನ್ನ ಪ್ರೀತಿಯ ಸ್ನೇಹಿತ ಈಗ ನನ್ನ ಮಾತೇ ಆಡಿಸುತ್ತಿಲ್ಲ. ಅವನ ಬರ್ತ್​ಡೇಗೆ ನಾನು ಏನೂ ಗಿಫ್ಟ್ ಕೊಡಲಿಲ್ಲ. ಅದಕ್ಕೇ ಅವನಿಗೆ ಕೋಪ ಬಂದಿದೆ!’. ಆರನೇ ತರಗತಿಯ ವಿದ್ಯಾರ್ಥಿ ಸ್ನೇಹವನ್ನು ಕೇವಲ ಗಿಫ್ಟ್ ನಲ್ಲಿ ಅಳೆಯುತ್ತಾನೆ!

ಇಂದು ತಂದೆ-ತಾಯಿಯರು, ಇರುವ 1 ಅಥವಾ 2 ಮಕ್ಕಳನ್ನು ಸಾಕುತ್ತಿರುವ ರೀತಿಯನ್ನು ಸ್ವಲ್ಪ ಗಮನಿಸಿ. ವಿದ್ಯಾವಂತೆಯಾದ ತಾಯಿಯೂ ತನ್ನ ಅವಸರಕ್ಕಾಗಿ ಮಗುವಿಗೆ ‘ಕಂಡಿಷನ್’ ಹಾಕುತ್ತಿರುತ್ತಾಳೆ. ಉದಾಹರಣೆಗೆ, ‘ನೀನು ಬೇಗಬೇಗ ತಿಂದು ತಟ್ಟೆ ಖಾಲಿ ಮಾಡಿದರೆ, ರ್ಪಾಗೆ ಕರ್ಕೆಂಡು ಹೋಗ್ತೀನಿ’, ‘ಹೋಂವರ್ಕ್ ಬೇಗ ಮುಗಿಸಿದ್ರೆ ಚಾಕಲೇಟ್’- ಹೀಗೆ ಒಂದಕ್ಕೆ ಒಂದು ಆಮಿಷ!. ಮಗುವಿಗೆ ‘ಯಾವುದು ನನ್ನ ಕರ್ತವ್ಯ? ಯಾವುದಕ್ಕೆ ನನಗೆ ಬಹುಮಾನ?’ ಎನ್ನುವ ಅಂತರವೇ ಗೊತ್ತಾಗದಂತಾಗಿ ‘ನಾನೇನು ಮಾಡಿದರೂ ಅದಕ್ಕೊಂದು ಪ್ರತಿಫಲ ಇರುತ್ತದೆ’ ಎಂಬ ನಂಬಿಕೆಯಲ್ಲಿ ಬೆಳೆಯುತ್ತದೆ. ಇದರಿಂದಾಗಿ ಮಗುವಿನಲ್ಲಿ ಸ್ವಾರ್ಥ, ತನಗೆ ಬೇಕೆನಿಸಿದ್ದು ಸಿಗದಿದ್ದಾಗ ಹಠ, ಬೇರೆಯವರಿಗೆ ಹೆಚ್ಚು ಸಿಕ್ಕರೆ ದ್ವೇಷ ಇಂಥ ‘ನೆಗೆಟಿವ್’ ಗುಣಗಳು ಬೆಳೆಯಲಾರಂಭಿಸುತ್ತವೆ. 50 ವರ್ಷದ ಹಿಂದಿದ್ದ ಕುಟುಂಬದ ರೀತಿನೀತಿಗಳನ್ನೊಮ್ಮೆ ನೆನಪಿಸಿಕೊಳ್ಳಿ- ಊಟ, ಸ್ನಾನ, ಶಾಲೆಗೆ ಹೋಗುವುದು, ಹೋಂವರ್ಕ್ ಮಾಡಿಕೊಳ್ಳುವುದು ಇತ್ಯಾದಿಗಳನ್ನು ಮಕ್ಕಳು ಕರ್ತವ್ಯವೆಂದೇ ತಿಳಿದಿದ್ದರು. ಎಲ್ಲವೂ ಸಹಜವಾಗಿ ನಡೆಯುತ್ತಿತ್ತು. ಇವತ್ತಿನ ಅನೇಕ ಮಕ್ಕಳು ತಮ್ಮದೇ ಕೆಲಸಗಳನ್ನೂ ‘ಅಪ್ಪ-ಅಮ್ಮನ ಸಂತೋಷ’ಕ್ಕಾಗಿ ಅಥವಾ ಅವರ ಒತ್ತಾಯಕ್ಕಾಗಿ ಮಾಡುತ್ತಿದ್ದೇವೆ ಎಂದೇ ಭಾವಿಸುತ್ತಾರೆ.

ಶಾಲೆಗಳಲ್ಲಿ ‘ಲೈಫ್​ಸ್ಕಿಲ್’ ವರ್ಕ್​ಷಾಪ್ ನಡೆಸಲು ಹೋದಾಗ 10ನೇ ತರಗತಿ ಮಕ್ಕಳಿಗೆ ನಾನು ಕೊಡುವ ಪ್ರಶ್ನಾವಳಿಯಲ್ಲಿನ ಒಂದು ಪ್ರಶ್ನೆ ಹೀಗಿದೆ-

  • ನಾನು ಹೋಂವರ್ಕ್ ಮಾಡುವುದು……

1) ಅಪ್ಪ-ಅಮ್ಮನ ಬಲವಂತಕ್ಕಾಗಿ, 2) ಮೇಡಂ ಬಯ್ಯುತ್ತಾರೆಂದು

3) ಬೇರೆಬೇರೆ ಕಾರಣಗಳಿಗಾಗಿ

ಮೂರನೆಯ ಕಾರಣವನ್ನು ಮಕ್ಕಳನ್ನು ದಾರಿತಪ್ಪಿಸಲೆಂದೇ ಬರೆದದ್ದು. ಆದರೆ ಜಾಣ ಹಾಗೂ ಪಾಸಿಟಿವ್ ಚಿಂತನೆಯ ಮಕ್ಕಳು ಅದನ್ನೇ ಆರಿಸುತ್ತಾರೆ. ಏಕೆಂದರೆ ಆ ‘ಬೇರೆ ಬೇರೆಯ ಕಾರಣ’ವೆಂದರೆ, ‘ನನಗೆ ವಿಷಯ ಚೆನ್ನಾಗಿ ಅರ್ಥವಾಗುತ್ತದೆ, ಬರೆಯುವುದು ಚೆನ್ನಾಗಿ ಅಭ್ಯಾಸವಾಗುತ್ತದೆ’ ಇತ್ಯಾದಿ ಊಹಿಸಬಹುದು. ಆದರೆ ‘ರೆಡಿಮೇಡ್’ ಬದುಕು ಇವತ್ತಿನ ಮಕ್ಕಳಿಗೆ ಎಷ್ಟು ಅಭ್ಯಾಸವಾಗಿಬಿಟ್ಟಿದೆಯೆಂದರೆ ಊಹೆ, ಕಲ್ಪನೆಗಳಿಗೆ ಆಸ್ಪದವೇ ಕೊಡದೆ, ತಕ್ಷಣ ತೋರುವ ಉತ್ತರವನ್ನೇ ಆಯ್ದುಕೊಳ್ಳುತ್ತಾರೆ! ದುರಂತವೆಂದರೆ ಶೇ. 80 ಮಕ್ಕಳು ಒಂದು ಅಥವಾ ಎರಡನೆಯದನ್ನು ಆರಿಸುತ್ತಾರೆ.

ನಾನು ಹಳ್ಳಿಹಳ್ಳಿಗಳಲ್ಲೂ ಶಾಲಾಮಕ್ಕಳ ತಂದೆ-ತಾಯಿಯರಿಗೆ ‘ಪೇರೆಂಟಿಂಗ್ ವರ್ಕ್​ಷಾಪ್’ ಮಾಡುವಾಗ ಹೀಗೆ ಪ್ರಶ್ನಿಸುತ್ತೇನೆ- ‘ಮಕ್ಕಳು ತಪ್ಪೆಸಗಿದಾಗ ನೀವೇನು ಮಾಡುತ್ತೀರಿ?’. ಅದಕ್ಕೆ, ‘ಹೊಡೆಯುತ್ತೇವೆ, ಬಯ್ಯುತ್ತೇವೆ, ಊಟಹಾಕದೇ ಶಿಕ್ಷೆಕೊಡುತ್ತೇವೆ’ ಇತ್ಯಾದಿ ಚಿತ್ರವಿಚಿತ್ರ ಉತ್ತರಗಳು ಬರುತ್ತವೆ. ‘ಆಯಿತು, ನೀವು ಹೇಳದಿದ್ದರೂ ಮಕ್ಕಳು ತಮಗೆ ತೋಚಿದಂತೆ ಒಂದು ಒಳ್ಳೆಯ ಕೆಲಸ ಮಾಡಿದರೆ ಏನು ಮಾಡುತ್ತೀರಿ?’ ‘ಮಾಡುವುದೇನು? ಸರಿ ಅಂತ ಸುಮ್ಮನಾಗುತ್ತೇವೆ’- ಇಂಥ ಉತ್ತರಗಳೇ ಬಹಳಷ್ಟು ಬಾರಿ ಬರುತ್ತವೆ! ಇದು ‘ಕಂಡಿಷನಲ್ ಲವ್’ನ ಮತ್ತೊಂದು ಮುಖ!. ‘ತಪ್ಪು ಮಾಡಿದಾಗ ಏನೇನೋ ಶಿಕ್ಷೆ ಕೊಡುವ ನೀವು, ಒಳ್ಳೆಯದನ್ನು ಮಾಡಿದಾಗ ಹೊಗಳಬೇಕಲ್ಲವೇ?’ ಎಂದರೆ ತಕ್ಷಣ ‘ಹಾಗೆಲ್ಲಾ ಹೊಗಳಿದರೆ ತಲೆಯ ಮೇಲೇ ಕೂತುಬಿಡುತ್ತಾರಷ್ಟೇ’ ಎನ್ನುವ ಉತ್ತರ ಬರುತ್ತದೆ. ಇದು ಕೂಡ ‘ಕಂಡಿಷನಲ್ ಲವ್’ನ ಮುಖವೇ!

ಇಂಥ ಷರತ್ತುಬದ್ಧ ಅಂತಃಕರಣವನ್ನು ಮನಶ್ಶಾಸ್ತ್ರ ತಿರಸ್ಕರಿಸುತ್ತದೆ. ಅದನ್ನು ಪ್ರೀತಿಯೇ ಅಲ್ಲ ಎನ್ನುತ್ತದೆ. ಶುದ್ಧ ಅಂತಃಕರಣದಲ್ಲಿ ಹೀಗೆ ‘ಕೊಡು-ಕೊಳ್ಳುವಿಕೆ’ ಇರಬಾರದು. ‘ಮಕ್ಕಳನ್ನು (ಅವರು ಯಾವ ವಯಸ್ಸಿನವರಾದರೂ ಸರಿ), ಆಗಷ್ಟೇ ಹುಟ್ಟಿದ ಮಗುವನ್ನು ಪ್ರೀತಿಸುವ ಹಾಗೆ ಪ್ರೀತಿಸಬೇಕು’ ಎನ್ನುತ್ತಾರೆ ಪಾಶ್ಚಾತ್ಯ ದೇಶಗಳ ‘ಪೇರೆಂಟಿಂಗ್ ಫೋರಂ’ನ ಸದಸ್ಯರು. ಸರಳವಾಗಿ ಹೇಳಬೇಕೆಂದರೆ, ಯಾವ ತಂದೆ-ತಾಯಿಯರು ಮಕ್ಕಳಿಗೆ ಪ್ರತಿದಿನ ‘ನಿನ್ನ ಕಷ್ಟದಲ್ಲಿ, ಸುಖದಲ್ಲಿ ನಾವಿದ್ದೇವೆ; ನೀನು ಶೇ. 98 ಅಂಕ ತೆಗೆದುಕೊಂಡರೂ ನಮ್ಮ ಮಗುವೇ, ಫೇಲಾದರೂ ನಮ್ಮ ಮಗುವೇ, ಆಗಲೂ ನಮ್ಮ ಪ್ರೀತಿ ಕಿಂಚಿತ್ತೂ ಕಡಿಮೆಯಾಗುವುದಿಲ್ಲ, ಬದಲಾಗಿ ಜಾಸ್ತಿಯಾಗುತ್ತದೆ. ಏಕೆಂದರೆ ನೀನು ಕಷ್ಟದಲ್ಲಿರುತ್ತೀ, ನಮ್ಮ ಅಂತಃಕರಣ ಮಿಡಿಯುತ್ತದೆ’- ಇಂಥ ಮಾತಾಡುತ್ತಾ ಭರವಸೆ ತುಂಬುತ್ತಾರೋ ಅವರದ್ದೇ ನಿಜವಾದ ‘ಅನ್​ಕಂಡಿಷನಲ್ ಲವ್’.

ಪ್ರಖ್ಯಾತ ವಿಜ್ಞಾನಿಯೊಬ್ಬ ಶಾಲಾವಿದ್ಯಾರ್ಥಿಯಾಗಿದ್ದಾಗ, ‘ಪೆದ್ದನಾಗಿರುವ ಕಾರಣ ಶಾಲೆಯಿಂದ ಹೊರಹಾಕಿರುವುದಾಗಿ’ ತಿಳಿಸಿ ಶಾಲೆಯಿಂದ ಮನೆಗೆ ಪತ್ರ ಬಂತು. ಆತನ ತಾಯಿ ಅದನ್ನು ಮಗನಿಗೆ ಹೇಳಲಿಲ್ಲ; ಬದಲಾಗಿ ‘ನಿನ್ನಂಥ ಜಾಣನಿಗೆ ಆ ಶಾಲೆ ಸರಿಯಿಲ್ಲ’ ಎಂದು ತಿಳಿಸಿ, ಮನೆಯಲ್ಲೇ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲ ಕಲ್ಪಿಸಿದಳು. ಮುಂದೆ ಆತ ವಿಶ್ವವಿಖ್ಯಾತನಾದ. ಆದರೆ ಅದನ್ನು ನೋಡಲು ಆ ತಾಯಿ ಇರಲಿಲ್ಲ. ಒಮ್ಮೆ, ಗತಿಸಿದ ತನ್ನ ತಾಯಿಯ ಹಳೆ ಪೆಟ್ಟಿಗೆಯನ್ನು ಆ ವಿಜ್ಞಾನಿ ತೆರೆದು ನೋಡಿದಾಗ ಶಾಲೆಯ ‘ಆ ಪತ್ರ’ ಸಿಕ್ಕಿತು! ‘ಅನ್​ಕಂಡಿಷನಲ್ ಲವ್’ಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇಕೇ?

(ಲೇಖಕರು ಆಪ್ತಸಲಹೆಗಾರರು, ಬರಹಗಾರರು)

Leave a Reply

Your email address will not be published. Required fields are marked *

Back To Top