Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಅಂತರಂಗದ ಅರಿವು ಉನ್ನತಿಗೆ ಮೂಲ

Friday, 19.05.2017, 3:05 AM       No Comments

ಮೊನ್ನಿನ ಮೇ 10ರಂದು ‘ಬುದ್ಧ ಪೂರ್ಣಿಮೆ’ ಆಚರಿಸಲಾಯಿತು. ‘ಬುದ್ಧ’ ಎಂಬ ಪರಿಕಲ್ಪನೆಯನ್ನು ‘ಗೌತಮ’ನೊಂದಿಗೆ ಹೋಲಿಸುವುದು ವಾಡಿಕೆ. ಆದರೆ ಬುದ್ಧನೆಂದರೆ ಅವನೊಬ್ಬನೇ ಅಲ್ಲ, ವಿಶ್ವದಲ್ಲಿ ಸಾವಿರಾರು ಮಂದಿ ಬುದ್ಧರಿದ್ದರು, ಇನ್ನೂ ಇದ್ದಾರೆ. ‘ಬುದ್ಧ’ ಎಂದರೆ ಯಾರು, ‘ಬುದ್ಧ’ನಾಗುವುದಕ್ಕೆ ಏನು ಮಾಡಬೇಕಾಗುತ್ತದೆ ಎಂಬುದನ್ನು ಸದ್ಗುರು ಇಲ್ಲಿ ಸರಳವಾಗಿ ವಿವರಿಸಿದ್ದಾರೆ.

ಆಧ್ಯಾತ್ಮಿಕ ಮಾರ್ಗದಲ್ಲಿರುವ ಯಾವುದೇ ವ್ಯಕ್ತಿಯೂ ಗೌತಮನನ್ನು ನಿರ್ಲಕ್ಷಿಸಲಾಗುವುದಿಲ್ಲ, ಏಕೆಂದರೆ ಅವನ ಪ್ರಭಾವ ಅಷ್ಟು ಪ್ರಧಾನವಾಗಿದೆ. ಅವನು ಬದುಕಿದ್ದಾಗ, ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಜಗತ್ತಿನಲ್ಲಿ ಹರಡಲು, ಅವನ ಬಳಿ ನಲವತ್ತು ಸಾವಿರ ಸಂನ್ಯಾಸಿಗಳಿದ್ದರು. ಗೌತಮನು ಮೌನವಾಗಿ, ತನ್ನದೇ ಆದ ರೀತಿಯಲ್ಲಿ ಜಗತ್ತನ್ನು ಶಾಶ್ವತವಾಗಿ ಬದಲಿಸಿದ.

ಅಸಾಧಾರಣ ಆಧ್ಯಾತ್ಮಿಕ ಅಲೆ: ಜಗತ್ತಿನಲ್ಲಿ ಸಂಭವಿಸಿದ ಅಸಾಧಾರಣವಾದ ಆಧ್ಯಾತ್ಮಿಕ ಅಲೆಗಳಲ್ಲಿ ಅವನದ್ದೂ ಒಂದಾಗಿದೆ. ಯೋಗ ಸಂಸ್ಕೃತಿಯಲ್ಲಿ ಬುದ್ಧ-ಪೂರ್ಣಿಮೆಯು ಯಾವಾಗಲೂ ಒಂದು ಮಹತ್ವದ ದಿನವಾಗಿ ಪರಿಗಣಿಸಲ್ಪಟ್ಟಿದೆ ಮತ್ತು ಯಾವುದೇ ಆಧ್ಯಾತ್ಮಿಕ ಅನ್ವೇಷಕನ ಜೀವನದಲ್ಲಿ ಒಂದು ಅತ್ಯಂತ ಶುಭಕರವಾದ ದಿನವಾಗಿದೆ. ಇವತ್ತಿನ ದಿನಗಳಲ್ಲಿ, ಗೌತಮ ಬುದ್ಧನ ಸ್ಮರಣೆಯಲ್ಲಿ, ಅವನ ಹೆಸರಿನಲ್ಲಿ ಈ ದಿನ ಆಚರಿಸಲಾಗುತ್ತಿದೆ. 2,500 ವರ್ಷಗಳ ಹಿಂದೆ, ಆ ಪೂರ್ಣಿಮೆಯಂದು ಒಬ್ಬ ಮನುಷ್ಯ ಪ್ರಬುದ್ಧನಾಗಿ ಅರಳಿದ. ಸಾಮಾನ್ಯವಾಗಿ ಜನರು ಬುದ್ಧ ಎಂಬ ಶಬ್ದವನ್ನು ಗೌತಮನೊಂದಿಗೆ ಹೋಲಿಸುತ್ತಾರೆ. ಆದರೆ ಬುದ್ಧನೆಂದರೆ ಅವನೊಬ್ಬನೇ ಅಲ್ಲ. ಜಗತ್ತಿನಲ್ಲಿ ಸಾವಿರಾರು ಬುದ್ಧರಿದ್ದರು ಮತ್ತು ಇನ್ನೂ ಇದ್ದಾರೆ. ‘ಬು’ ಎಂದರೆ ಬುದ್ಧಿ. ಯಾರು ಬುದ್ಧಿಯನ್ನು ಮೀರಿದ್ದಾರೋ, ಯಾರು ಇನ್ನೂ ತನ್ನ ಮನಸ್ಸಿನ ಒಂದು ಭಾಗವಲ್ಲವೋ ಅವನು ಒಬ್ಬ ಬುದ್ಧ.

ಇದೀಗ ಬಹಳ ಜನರು ತಮ್ಮ ಚಿಂತನೆ, ಭಾವನೆ, ಅಭಿಪ್ರಾಯಗಳ ನೆಲೆಗಟ್ಟಿನಲ್ಲಿ ಖಂಡಿತವಾಗಿಯೂ ಪೂರ್ವಗ್ರಹಗಳ ಮೂಟೆಯಾಗಿದ್ದಾರೆ ಅಷ್ಟೇ. ದಯವಿಟ್ಟು ನೋಡಿ, ನೀವು ‘ನಾನು’ ಎಂದು ಏನನ್ನು ಕರೆಯುತ್ತೀರೋ ಅದು ನೀವು ಹೊರಗಡೆಯಿಂದ ಸಂಗ್ರಹಿಸಿರುವ ಒಂದು ಮಿಶ್ರಣವಷ್ಟೇ. ನೀವು ಜೀವನದಲ್ಲಿ ಎಂತಹ ಸನ್ನಿವೇಶಗಳಿಗೆ ಒಳಗಾಗಿದ್ದೀರೋ ಆ ರೀತಿಯ ಅಸಂಬದ್ಧವನ್ನು ಮನಸ್ಸಿನಲ್ಲಿ ಸಂಗ್ರಹಿಸಿರುತ್ತೀರಿ. ನಿಮ್ಮ ಮನಸ್ಸು ಸಮಾಜದ ಕಸದಬುಟ್ಟಿ; ಏಕೆಂದರೆ ನಿಮಗೆ ಏನು ತೆಗೆದುಕೊಳ್ಳುವುದು ಮತ್ತು ಏನು ತೆಗೆದುಕೊಳ್ಳಬಾರದು ಎಂಬುದರ ಬಗ್ಗೆ ಆಯ್ಕೆಯೇ ಇಲ್ಲ. ನಿಮ್ಮ ಕಡೆಗೆ ಬಂದವರೆಲ್ಲಾ ನಿಮ್ಮ ತಲೆಯಲ್ಲಿ ಏನಾದರೂ ಎಸೆದು ಹೋಗುತ್ತಾರೆ. ನೀವು ಈ ಅಸಂಬದ್ಧವನ್ನು ದೈವತ್ವವೆಂದು ಪೂಜಿಸಬಹುದು, ಆದರೆ ಅದು ದೈವತ್ವವಾಗುವುದಿಲ್ಲ; ಅದು ಸುಮ್ಮನೇ ಮನಸ್ಸು ಅಷ್ಟೇ. ನೀವು ಮನಸ್ಸು ಎಂದು ಯಾವ ಪ್ರಕ್ರಿಯೆಯನ್ನು ಕರೆಯುತ್ತೀರೋ ಅದನ್ನು ಮೀರಿಹೋಗಿ ಜೀವನವನ್ನು ಅನುಭವಿಸುವ ಒಂದು ದಾರಿಯಿದೆ. ಇದನ್ನು ಮಾಡಲು ನೀವು ಕಸದಬುಟ್ಟಿಯನ್ನು ಮುಚ್ಚಿ ಪಕ್ಕಕ್ಕೆ ಇಡಬೇಕಾಗುತ್ತದೆ.

ಮನಸ್ಸಿಗೆ ಅಂಟಿಕೊಳ್ಳದಿರಿ: ಮನಸ್ಸು ಎಂಬುದು ಒಂದು ಅದ್ಭುತ. ಆದರೆ ನೀವು ಅದಕ್ಕೆ ಅಂಟಿಕೊಂಡರೆ ಅದು ನಿಮ್ಮನ್ನು ಒಂದು ಕೊನೆಯಿಲ್ಲದ ಸವಾರಿಗೆ ಎಳೆದುಕೊಂಡು ಹೋಗುತ್ತದೆ. ನೀವು ಮನಸ್ಸಿನಲ್ಲಿ ಇದ್ದರೆ, ನಿರಂತರವಾಗಿ ಬಳಲುತ್ತೀರಿ- ನೀವು ಅದರ ಬಗ್ಗೆ ಅಸಹಾಯಕರು. ಬಳಲುವಿಕೆ ಅನಿವಾರ್ಯವಾದುದು. ನೀವು ಸೂರ್ಯಾಸ್ತವನ್ನು ನೋಡಲು ಕೂತಾಗ ಅದರ ಸೌಂದರ್ಯದಲ್ಲಿ ಬಹುಶಃ ಎಲ್ಲವನ್ನೂ ಮರೆಯಬಹುದು. ಆದರೆ ನೀವು ಹಿಂತಿರುಗಿ ನೋಡಿದ ಕ್ಷಣವೇ, ಅದು ಅಲ್ಲೇ ಇರುತ್ತದೆ. ‘ನನ್ನ ಸಂತೋಷ’ ಎಂದು ಏನನ್ನು ಕರೆಯುತ್ತೀರೋ ಅದು ನಿಮ್ಮ ಬಳಲುವಿಕೆಯ ಬಗ್ಗೆ ಮರೆತ ಕೆಲವು ಕ್ಷಣಗಳು ಅಷ್ಟೇ. ನೀವು ಮನಸ್ಸಿನಲ್ಲೇ ಇದ್ದಷ್ಟೂ ಭಯ, ಆತಂಕ ಮತ್ತು ಒದ್ದಾಟಗಳು ಅನಿವಾರ್ಯ; ಅದು ಮನಸ್ಸಿನ ಸ್ವಭಾವ.

ಹೀಗೆ ಮನಸ್ಸಿನ ಹಿಂಸೆಯನ್ನು ತಾಳಲಾರದೆ ಜನರು ಮನಸ್ಸಿಗಿಂತ ಕೆಳಗೆ ಹೋಗಲು ಅನೇಕ ದಾರಿಗಳನ್ನು ಕಂಡುಹಿಡಿದಿದ್ದಾರೆ. ಅತಿಯಾಗಿ ತಿನ್ನುವುದು, ಮದ್ಯಪಾನ, ಭೌತಿಕ ಹಷೋಲ್ಲಾಸಗಳಲ್ಲಿ ಅತಿಯಾಗಿ ತೊಡಗುವುದು- ಇವೆಲ್ಲವೂ ಮನಸ್ಸಿಗಿಂತ ಕೆಳಗೆ ಹೋಗುವ ದಾರಿಗಳು. ಜನರು ಇವನ್ನು ಉಪಯೋಗಿಸಿ ಕೆಲವು ಕ್ಷಣಗಳ ಕಾಲ ಹಿಂಸೆಯನ್ನು ಮರೆಯುತ್ತಾರೆ. ನೀವು ಒಂದು ಬಾಟಲಿ ಮದ್ಯವನ್ನು ಕುಡಿದು ಮಲಗಿದರೆ, ಒಂದೆರಡು ಗಂಟೆಗಳ ಕಾಲ ಮನಸ್ಸಿನ ಹಿಂಸೆ ತಪ್ಪುತ್ತದೆ. ಏಕೆಂದರೆ ನೀವು ಮನಸ್ಸಿಗಿಂತ ಕೆಳಗೆ ಹೋಗಿರುತ್ತೀರಿ. ಇದರಲ್ಲಿ ಅತಿಯಾದ ಆನಂದ ಸಿಗುತ್ತದೆ ಮತ್ತು ಬಹಳ ವಿಶ್ರಾಂತಿ ಸಿಗುತ್ತದೆ; ಏಕೆಂದರೆ ಇದ್ದಕ್ಕಿದ್ದಂತೆ ಮನಸ್ಸಿನ ಹಿಂಸೆಗಳು ನಿಂತಿರುತ್ತವೆ. ಆದ್ದರಿಂದ ನೀವು ಆಳವಾಗಿ ಅದಕ್ಕೆ ವ್ಯಸನಿಯಾಗುತ್ತೀರಿ. ಆದರೆ ವಿಕಸನ ಪ್ರಕ್ರಿಯೆಯ ಸ್ವಭಾವ ಎಂತಹದ್ದೆಂದರೆ ಯಾವುದು ಪ್ರಾಣಿಯ ರೂಪದಲ್ಲಿ ಮನಸ್ಸಿನ ಕೆಳಗಿತ್ತೋ ಅದು ಮನುಷ್ಯನ ರೂಪದಲ್ಲಿ ಮನಸ್ಸಿಗೆ ವಿಕಸನಗೊಂಡಿದೆ. ಅದು ವಿಮುಕ್ತವಾಗಬೇಕೆಂದರೆ, ಅದು ಮನಸ್ಸನ್ನು ಮೀರಬೇಕು. ವಾಪಸು ಹೋಗುವುದು ಎಂಬಂತೆ ಏನೂ ಇಲ್ಲ. ನೀವು ಏನೋ ಕೆಮಿಕಲ್ ಉಪಯೋಗಿಸಿ ಮನಸ್ಸಿನ ಕೆಳಗೆ ಹೋದರೆ, ಜೀವನ ಮತ್ತಷ್ಟು ತೀವ್ರತೆಯಿಂದ ನಿಮ್ಮನ್ನು ವಾಪಸು ಹಿಡಿದುಕೊಳ್ಳುತ್ತದೆ ಎಂದು ಕಾಣುವಿರಿ. ಯೋಗ ಎಂದರೆ ಮನಸ್ಸನ್ನು ಮೀರಿಹೋಗುವ ಒಂದು ವೈಜ್ಞಾನಿಕ ರೀತಿ. ಮನಸ್ಸನ್ನು ಮೀರಿದರೆ ಮಾತ್ರವೇ ನಿಮ್ಮ ನಿಜಸ್ವಭಾವ ಹೊರಬರುತ್ತದೆ.

ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ: ಯಾರಿಗೆ ಪಟ್ಟುಹಿಡಿದು ಕೆಲಸ ಸಾಧಿಸುವ ಸ್ವಭಾವವಿದೆಯೋ ಅವರು, ದುರ್ಬಲಗೊಳಿಸುವ ಎಲ್ಲ ಮಿತಿಗಳನ್ನೂ ಮೀರಬಹುದು ಎಂದು ನೆನಪಿಸಿಕೊಳ್ಳುವ ಮತ್ತೊಂದು ದಿನವೇ ‘ಬುದ್ಧ ಪೂರ್ಣಿಮೆ’. ಸಂಪೂರ್ಣ ಜಗತ್ತನ್ನು ನಿರ್ವಾಣದೆಡೆಗೆ ತಿರುಗಿಸುವ ಗೌತಮನ ಕನಸು ಇನ್ನೂ ನನಸಾಗಿಲ್ಲ. ‘ಇದನ್ನು’ ಒಂದು ಕ್ಷಣವಾದರೂ ಅನುಭವಿಸಿದವರು, ‘ಇದು’ ಎಲ್ಲರನ್ನೂ ತಲುಪುವಂತೆ ಕೆಲಸ ಮಾಡಿ ಎಂದು ನಾನು ಕೇಳಿಕೊಳ್ಳುತ್ತೇನೆ. ‘ಹೇಗೆ’ ಎಂಬುದು ನಿಮ್ಮ ಪ್ರಶ್ನೆಯಾದರೆ, ನೀವು ಒಂದು ಸರಳ ನಿರ್ಧಾರವನ್ನು ಕೈಗೊಳ್ಳಬಹುದು. ನೀವು ಅನುಭವಿಸಿದ ಅತ್ಯಂತ ಆಳವಾದ ಮತ್ತು ಅತ್ಯಂತ ಉಲ್ಲಾಸಕರ ಅನುಭವವನ್ನು ಗುರುತಿಸಿ. ಆ ಕ್ಷಣದಲ್ಲಿ, ನೀವು ಯಾವ ಭಾವನೆಯ ಮುಖವನ್ನು ಹೊಂದಿದ್ದಿರಿ? ಆ ಅನುಭವ ಮತ್ತು ಮುಖಭಾವವನ್ನು ಜೀವನದ ತಳಹದಿಯನ್ನಾಗಿ ಮಾಡಿಕೊಳ್ಳಿ. ನಿಮಗೆ ಈಗಾಗಲೇ ಗೊತ್ತಿರುವ ಎತ್ತರದಿಂದ ಕೆಳಗೆ ಬರಕೂಡದು. ನೀವು ಆ ಮಾನದಂಡಕ್ಕಿಂತ ಮೇಲಕ್ಕೆ ಮಾತ್ರ ಬದುಕಬೇಕು. ನಿಮ್ಮ ಜೀವನದ ಶಿಖರವನ್ನು ಭವಿಷ್ಯದ ತಳಪಾಯವನ್ನಾಗಿ ಮಾಡಿಕೊಳ್ಳಿ. ಪರಿವರ್ತನೆಗೆ ಬೇಕಾದಷ್ಟು ಉಪಕರಣಗಳಿವೆ. ಜತೆಗೆ ನೀವು ಸರಿಯಾದ ಸಮಯದಲ್ಲಿದ್ದೀರಿ. ನೀವು ಸಂಪೂರ್ಣತೆಗೆ ಅರಳಲು ಇದು ಅದ್ಭುತ ಸಮಯ.

ತಾನು ಕಾಲವಾದ 2,500 ವರ್ಷಗಳ ನಂತರ ಒಂದು ಹೊಸ ಆವೃತ್ತಿ ಆರಂಭವಾಗುತ್ತದೆ ಎಂದು ಗೌತಮ ಬುದ್ಧನು ಘೊಷಿಸಿದ್ದನು. ಅದಾಗುವುದನ್ನು ನೋಡಲು ನಾವು ಇಲ್ಲಿರುವುದಿಲ್ಲ. ಆದರೆ ಮುಂದಿನ ಎರಡು ಶತಮಾನಗಳಲ್ಲಿ, ವಿಶೇಷವಾಗಿ ಭಾರತದಲ್ಲಿ, ಮತ್ತು ಬಹಳ ರೀತಿಗಳಲ್ಲಿ ಪ್ರಪಂಚದ ಉಳಿದ ಭಾಗಗಳಲ್ಲಿಯೂ ಕೂಡ, ಸಮಾಜ ಪ್ರಗತಿಗೊಳ್ಳುತ್ತದೆ- ವಿಶೇಷವಾಗಿ ಆಧ್ಯಾತ್ಮಿಕ ಆಯಾಮದಲ್ಲಿ. ಬಹಳಷ್ಟು ರೀತಿಗಳಲ್ಲಿ ಅದು ತನ್ನದೇ ಒಂದು ಹೊಸ ಕ್ರಾಂತಿಯನ್ನು ಶುರುಮಾಡುತ್ತದೆ. ನಾವು ಈಗಿರುವ ಸಮಯ ಅನಂತತೆಯಲ್ಲೇ ಅತಿ ಮಹತ್ವದ ಕಾಲ ಎಂದೇನೂ ನಾನು ಹೇಳುತ್ತಿಲ್ಲ. ಪ್ರತಿಯೊಂದು ಪೀಳಿಗೆಗೂ, ಅವರು ಇತಿಹಾಸದ ಯಾವ ಸಮಯದಲ್ಲಿ ಬದುಕಿದ್ದರೋ, ಅದು ಒಂದು ರೀತಿಯಲ್ಲಿ ಅತಿ ಮಹತ್ವದ ಕಾಲವಾಗಿತ್ತು. ಆದರೆ ಇತಿಹಾಸದ ವಿವಿಧ ಕಾಲಗಳಲ್ಲಿ, ಜೀವನದ ವಿವಿಧ ಅಂಶಗಳು ಮಹತ್ವದ್ದಾಗಿದ್ದವು.

ಆಂತರಿಕ ಆಯಾಮದ ಬಗ್ಗೆ ಹೆಚ್ಚಿದ ಆಸಕ್ತಿ: ನಾವು ಈಗಿರುವ ಸಮಯ ಪ್ರಪಂಚದಲ್ಲಿ ಆಧ್ಯಾತ್ಮಿಕವಾಗಿ ಅತಿ ಮಹತ್ವದ್ದು. ಇಂದು, ಪ್ರಪಂಚ ಹಿಂದೆಂದಿಗಿಂತಲೂ ಆರಾಮದಾಯಕವಾಗಿದೆ. ಅದೇ ಸಮಯದಲ್ಲಿ, ಅದು ಹಿಂದೆಂದಿಗಿಂತಲೂ ಅನಿಶ್ಚಿತವಾಗಿದೆ ಮತ್ತು ಒತ್ತಡದಿಂದ ತುಂಬಿದೆ. ಹಿಂದೆಂದೂ ಸಾಮಾನ್ಯ ಜನರು ಆಧ್ಯಾತ್ಮಿಕತೆಯ ಬಗ್ಗೆ ಇಂದಿನಷ್ಟು ಆಸಕ್ತಿ ವ್ಯಕ್ತಪಡಿಸಿಲ್ಲ. ಪ್ರಪಂಚದಲ್ಲಿ ಕಲಹ ಮತ್ತು ಒದ್ದಾಟ ಹೆಚ್ಚಿದಂತೆ, ಆಂತರಿಕ ಆಯಾಮದ ಬಗ್ಗೆ ಆಸಕ್ತಿ ಹೆಚ್ಚಿದೆ. ಒಂದು ರೀತಿಯಲ್ಲಿ, ನೀವು ಇದನ್ನು ನೋಡಿದರೆ, ಇದೊಂದು ಮಹತ್ತರ ಹೆಜ್ಜೆ. ಇದು ಹೀಗೇ ಮುಂದುವರಿದರೆ, ಪ್ರತಿಯೊಬ್ಬ ಮನುಷ್ಯನಲ್ಲೂ ಈ ಆಸಕ್ತಿ ಆಳವಾದರೆ, ಅದು ಬಹಳ ರೀತಿಗಳಲ್ಲಿ ಮನುಷ್ಯತ್ವದ ಪರಿಹಾರ ಮತ್ತು ವಿಮೋಚನೆ.

ಇಂದಿನವರೆಗೆ, ಮನುಷ್ಯರು ಹೊರಜಗತ್ತನ್ನು ವಶಪಡಿಸಿಕೊಳ್ಳುವುದರಲ್ಲಿ ಮುಳುಗಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಸಹಾಯದಿಂದ ಬಾಹ್ಯದಲ್ಲಿ ಎಷ್ಟೊಂದು ಸಾಧಿಸಿದ್ದೇವೆ. ಆದರೆೆ, ಕೇವಲ ಹಿಂದಿನ ಎರಡು ಶತಮಾನಗಳಲ್ಲಿ, ಬಾಹ್ಯವನ್ನು ವಶಪಡಿಸಿಕೊಳ್ಳುವುದರಿಂದ ನಮ್ಮ ಜೀವನಗಳು ಸರಿಹೋಗುವುದಿಲ್ಲ ಎಂಬ ಅರಿವು ಜನರಲ್ಲಿ ಮೂಡಿದೆ. ನಾವು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯವಿಲ್ಲದೆ ಪ್ರಯತ್ನಿಸಿದ್ದರೆ ಇದನ್ನು ತಿಳಿಯಲು ಬಹುಶಃ ನೂರಾರು ಅಥವಾ ಸಾವಿರಾರು ವರ್ಷಗಳು ತೆಗೆದುಕೊಂಡಿರುತ್ತಿತ್ತೇನೋ.

ಒಂದು ಕಾಲದಲ್ಲಿ ಒಬ್ಬ ಅಶೋಕ ಅಥವಾ ಒಬ್ಬ ಗೌತಮ ಬುದ್ಧ, ಬಾಹ್ಯವನ್ನು ವಶಪಡಿಸಿಕೊಳ್ಳುವುದರಿಂದ ನಾವು ಎಲ್ಲಿಯೂ ಹೋಗುವುದಿಲ್ಲ ಎಂದು ಅರಿತರು. ಆದರೆ ಇಂದು, ಜಗತ್ತಿನ ಒಬ್ಬ ಸಾಮಾನ್ಯ ನಾಗರಿಕನಿಗೂ ಇದರ ಅರಿವಾಗುತ್ತಿದೆ. ಏಕೆಂದರೆ ನಾವು ವಿಜ್ಞಾನ ಹಾಗೂ ತಂತ್ರಜ್ಞಾನದ ಸಹಾಯದಿಂದ ಚಂದ್ರ ಮತ್ತು ಮಂಗಳಕ್ಕೆ ಹೋಗಬಹುದು; ಆದರೆ ನಮ್ಮೊಳಗೆ ನಾವು ಎಲ್ಲಿಯೂ ಹೋಗುತ್ತಿಲ್ಲ ಎಂದು ನಾವೆಲ್ಲರೂ ಸ್ಪಷ್ಟವಾಗಿ ಕಾಣಬಹುದು.

ನೀವು ಇಲ್ಲಿ ಇರಬೇಕಾದರೆ ಸಾಮಾನ್ಯವಾದುದಕ್ಕೆ ನೀವು ಅಪೇಕ್ಷೆ ಪಡಬಾರದು. ನಿಮ್ಮ ಗುರಿ ಅಂತಿಮವಾದುದಕ್ಕಿಂತ ಕಡಿಮೆ ಇರಕೂಡದು. ಅಂಥದೊಂದು ಅರಿವು ನಿಮ್ಮ ಬೆಳವಣಿಗೆಗೆ ಪ್ರಚೋದನೆಯಾಗಲಿ.

ಯಾರು ಬುದ್ಧಿಯನ್ನು ಮೀರಿದ್ದಾರೋ, ಯಾರು ಇನ್ನೂ ತನ್ನ ಮನಸ್ಸಿನ ಒಂದು ಭಾಗವಲ್ಲವೋ ಅವನು ಒಬ್ಬ ಬುದ್ಧ

-ಸದ್ಗುರು

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

(ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

Leave a Reply

Your email address will not be published. Required fields are marked *

Back To Top