More

    ನಿಮ್ಮೊಳಗೇ ಕಾಣಿರಿ ದೈವತ್ವವನು…

    ದೈವತ್ವ ಒಂದು ರೀತಿಯ ಬುತ್ತಿಯೂಟದ ಹಾಗೆ. ಅದನ್ನು ತಿನ್ನಲು ದೇವಸ್ಥಾನ, ಹೋಟೆಲ್ ಅಥವಾ ಸ್ವರ್ಗಕ್ಕೆ ಹೋಗಬೇಕೆಂದಿಲ್ಲ. ಅಸ್ತಿತ್ವದ ಮೂಲರೂಪ ಸದಾ ನಿಮ್ಮೊಂದಿಗೆ ಇರುತ್ತದೆ. ಅಂತರಾಳದಲ್ಲಿ ಯಾವುದೇ ಚಿತ್ರಣವಿರಲಿ, ಅದನ್ನು ದೃಢವಾಗಿ ಬೆನ್ನಟ್ಟಿ ಹೋದರೆ, ಅಲ್ಲೇ ದೈವತ್ವ ಸಿಗುವುದು. 

    ನಿಮ್ಮೊಳಗೇ ಕಾಣಿರಿ ದೈವತ್ವವನು...ಬೇರನ್ನು ಪೋಷಿಸಿದರೆ, ಹೂ ಅರಳುವುದನ್ನು ತಡೆಯಲು ಸಾಧ್ಯವೇ?
    ಎಲ್ಲೆಲ್ಲಿ ದೈವತ್ವದ ಹೂವು ಅರಳುವುದೋ, ಅಲ್ಲೇ ಸ್ವರ್ಗವಿದೆ
    ಅರಳುವುದು ಕಾಣದಿರಬಹುದು, ಆದರೆ ಸುವಾಸನೆ ಮರೆಮಾಚಲು ಸಾಧ್ಯವೇ?

    ಈ ಅಸ್ತಿತ್ವದಲ್ಲಿ ಏನನ್ನಾದರೂ ಅಚಲರಾಗಿ ಬಹುಕಾಲ ಅಥವಾ ಕೊನೆಯವರೆಗೆ ಬೆನ್ನಟ್ಟಿದರೆ, ನಾವು ದೈವತ್ವ ಎಂದು ಏನನ್ನು ಕರೆಯುತ್ತೇವೋ, ಅದೇ ಅಂತ್ಯವೆಂದು ಕಾಣುತ್ತೀರಿ. ಯಾವುದೇ ವಸ್ತುವಿನ ಮೇಲೆ ಸಾಧ್ಯವಾದಷ್ಟು ಗಮನವನ್ನು ಕೇಂದ್ರೀಕರಿಸಿದಾಗ- ಆ ವಸ್ತು ಹೂವು, ಆಕಾಶ, ಪ್ರಾಣಿ, ಮನುಷ್ಯನ ಮುಖ ಅಥವಾ ಮರಳಿನ ಕಣವೇ ಆಗಿರಬಹುದು- ದೈವತ್ವವು ಕೊನೆಯಲ್ಲಿ ಇರುತ್ತದೆ. ಇದರರ್ಥ ದೈವತ್ವವು ಆಕಾಶದಲ್ಲಿ, ಹೂವಿನಲ್ಲಿ, ಹಾರುವ ಹಕ್ಕಿಯಲ್ಲಿ, ತೆವಳುವ ಕೀಟದಲ್ಲಿ ಅಥವಾ ಬಂಡೆಗಲ್ಲಿನಲ್ಲಿದೆ ಎಂದಲ್ಲ. ನಿಮ್ಮ ಸ್ವಂತ ಆಂತರ್ಯವನ್ನು ಹೊರತುಪಡಿಸಿ ಯಾವುದನ್ನೂ ನಿಜವಾಗಿಯೂ ನೋಡುವ ಸಾಮರ್ಥ್ಯ ಇಲ್ಲದಿರುವುದರಿಂದ ಹೀಗೆ ಅನಿಸುತ್ತದೆಯಷ್ಟೆ.

    ದೈವತ್ವವೇ ನಿಮ್ಮ ಅಂತಿಮ ಹಂತ, ಯಾಕೆಂದರೆ ಆಂತರ್ಯವನ್ನು ಬಿಟ್ಟು ಬೇರೆ ಯಾವುದನ್ನೂ ನೋಡುವುದಕ್ಕೆ ಸಾಧ್ಯವಿಲ್ಲ. ಜಗತ್ತಿನಲ್ಲಿ ಎರಡು ವಿಧವಾದ ಮತಧರ್ಮಗಳಿವೆ. ‘ದೇವರು’ ಎಂದಕೂಡಲೇ, ಬಹಳಷ್ಟು ಜನರು ಮೇಲೆ ನೋಡುತ್ತಾರೆ. ‘ಊಪರ್​ವಾಲಾ’ ಎಂದರೆ ಮೇಲಿರುವವನು. ಆದರೆ ಕೆಲವರು ಕೆಳಗೆ ನೋಡುತ್ತಾರೆ, ದೇವರು ಭೂಮಿಯ ಕೇಂದ್ರದಲ್ಲಿದ್ದಾನೆ ಎಂದು ಅವರು ನಂಬಿದ್ದಾರೆ. ದೇವರು ಸ್ವರ್ಗದಲ್ಲಿದ್ದಾನೆಂದು ನಂಬುವ ಕೆಲವರು ಈ ಗ್ರಹಕ್ಕೆ (ಭೂಮಿಗೆ) ಹಾನಿ ಮಾಡುತ್ತಿದ್ದಾರೆ. ಅವರು ಸುಟ್ಟುಹಾಕಿದ ಇಂಗಾಲವನ್ನು ಇಲ್ಲಿ ಬಿಡುತ್ತಿದ್ದಾರೆ. ಇದನ್ನು ‘ಕಾರ್ಬನ್ ಫುಟ್​ಪ್ರಿಂಟ್’ ಎಂದು ಕರೆಯುತ್ತೇವೆ. ಈ ಗ್ರಹದಲ್ಲೇ ದೇವರು ನೆಲೆಸಿದ್ದಾನೆ ಎಂದು ನಂಬುವವರು ಬಹಳ ಎಚ್ಚರಿಕೆಯಿಂದ ನಡೆಯುತ್ತಾರೆ. ಯಾಕೆಂದರೆ ಈ ಗ್ರಹ ಅವರ ದೇವತೆಗಳ ನಿವಾಸ.

    ಮೇಲೆ ಅಥವಾ ಕೆಳಗೆ ನೋಡುವುದು ತಿಳಿಯುವಿಕೆಯ ವಿಧಾನವಲ್ಲ. ಮನುಷ್ಯರು ಪ್ರಜ್ಞೆಯೊಳಗೆ ಪ್ರತಿಬಿಂಬಿಸುವುದನ್ನು ಹೊರತುಪಡಿಸಿ ಬೇರೆ ಯಾವುದನ್ನೂ ತಿಳಿಯುವ ಸಾಮರ್ಥ್ಯ ಹೊಂದಿಲ್ಲ. ನೀವು ಏನನ್ನೂ ನಿಮ್ಮ ಹೊರಗೆ ನೋಡುವುದಿಲ್ಲ. ಹೊರಗೆ ಆಗುವುದೇನು ಕೇಳುವುದಿಲ್ಲ. ನೋಡುವುದು ಹಾಗೂ ಕೇಳುವುದೆಲ್ಲ ಮನಸ್ಸಿನ ಆಗುಹೋಗುಗಳು ಮಾತ್ರ. ಇದನ್ನೂ ಓದಿ: ಅಮೃತಧಾರೆ|ಆಹ್ಲಾದವನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ಮೈಸೂರು-ಬೆಂಗಳೂರು-ಮೈಸೂರು: ವಿಶ್ವವಿದ್ಯಾಲಯದಲ್ಲಿ ನಾವು ಓದುತ್ತಿದ್ದಾಗ, ಬೈಕ್​ಗಳನ್ನು ಉಪಯೋಗಿಸಲು ಶುರು ಮಾಡಿದೆವು. ಬೈಕಿನಲ್ಲಿ ಪೆಟ್ರೋಲ್ ತುಂಬಿದ್ದರೆ, ನಮಗೆ ಸುಮ್ಮನೆ ಕೂರಲು ಆಗುತ್ತಿರಲಿಲ್ಲ. ಆಗ ‘ಜಾವ’ ಎಂಬ ಜೆಕೊಸ್ಲೊವಾಕಿಯಾದ ಬ್ರಾಂಡಿನ ಬೈಕ್ ಅನ್ನು ಮೈಸೂರಿನಲ್ಲಿ ತಯಾರು ಮಾಡುತ್ತಿದ್ದರು. ಹಾಗಾಗಿ ಮೈಸೂರಿನಲ್ಲಿ ಬೈಕುಗಳ ಬಳಕೆ ಜಾಸ್ತಿ ಇತ್ತು. ದ್ವಿಚಕ್ರಗಳ ಮೇಲೆ ಸಮತೋಲನ ಮಾಡಲು ಬರುವ ಎಲ್ಲರೂ ತಮ್ಮನ್ನು ತಾವು ಗ್ರಾ್ಯಂಡ್ ಪ್ರಿಕ್ಸ್ ಚಾಂಪಿಯನ್ ಎಂದು ತಿಳಿದಿದ್ದರು. ಬೆಂಗಳೂರಿನಿಂದ ಮೈಸೂರು 140 ಕಿಲೋಮೀಟರ್​ನಷ್ಟು ಅಂತರದಲ್ಲಿದೆ. ಪೆಟ್ರೋಲ್ ಟ್ಯಾಂಕ್ ತುಂಬಿದ್ದರೆ, ನಾವು ಬೆಂಗಳೂರಿನವರೆಗೆ ಹೋಗಿ, ಅಲ್ಲೊಂದು ಮುಖ್ಯವೃತ್ತದ ಸುತ್ತು ಹಾಕಿ, ಮತ್ತೆ ವಾಪಸ್ ಮೈಸೂರಿಗೆ ಬರುವ ಪರಿಪಾಠವಿತ್ತು. ಬೆಂಗಳೂರಿನ ಸ್ನೇಹಿತರು ಕೂಡ ಹಾಗೆಯೇ, ಮೈಸೂರಿಗೆ ಬಂದು ಮತ್ತೆ ವಾಪಸ್ ಹೋಗುತ್ತಿದ್ದರು.

    ಕೆಲ ಕಾಲದ ಬಳಿಕ, ಬೆಂಗಳೂರಿನವರು ಮೈಸೂರಿಗೆ ಬಂದು ಸ್ವಲ್ಪ ಹೊತ್ತು ಉಳಿಯಲು ಶುರುಮಾಡಿದರು. ನಮ್ಮನ್ನೂ ಆಹ್ವಾನಿಸುತ್ತಿದ್ದರು. ಹಾಗಾಗಿ ನಾವು ಅಲ್ಲಿ ಹೋದಾಗ ಅವರನ್ನು ನಗರದ ಕೇಂದ್ರಸ್ಥಳದಲ್ಲಿ ಭೇಟಿಯಾಗುತ್ತಿದ್ದೆವು. ಅದನ್ನು ಹೋಟೆಲ್ ಎಂದು ಕರೆಯಲಾಗುವುದಿಲ್ಲ. ಅಲ್ಲಿ ಕುರ್ಚಿ, ಟೇಬಲ್​ಗಳು ಏನೂ ಇರಲಿಲ್ಲ. ಅಲ್ಲಿದ್ದಿದ್ದು ಕೇವಲ ಬೈಕ್ ಮತ್ತು ಕಾಫಿ-ತಿಂಡಿ. ಈ ಜಾಗವನ್ನು ‘ದ ಓನ್ಲೀ ಪ್ಲೇಸ್-ಒಂದೇ ಸ್ಥಳ’ ಎಂದು ಕರೆಯುತ್ತಿದ್ದೆವು. ಯಾಕೆಂದರೆ ಅದು ಬೆಂಗಳೂರಿನಲ್ಲಿ ನಮಗೆ ಏಕೈಕ ಸ್ಥಳವಾಗಿತ್ತು.

    ನೀವು ಎಲ್ಲೇ ಹೋಗಲಿ, ಏನೇ ಮಾಡಲಿ, ಎಲ್ಲವೂ ಆಗುವುದು ನಿಮ್ಮೊಳಗೆ. ಒಂದೇ ಒಂದು ಸ್ಥಳವಿರುವುದರಿಂದ ಎಲ್ಲವೂ ಬಹಳ ಸುಲಭ. ನೀವೆಲ್ಲಿಗೂ ಹೋಗುವ ಅಗತ್ಯವಿಲ್ಲ. ನೀವು ಎಲ್ಲೇ ಹೋದರೂ ನಿಮ್ಮ ‘ಒಂದೇ ಸ್ಥಳ’ ನಿಮ್ಮ ಜೊತೆಯೇ ಬರುತ್ತದೆ.

    ದೈವತ್ವ ಒಂದು ರೀತಿಯ ಬುತ್ತಿಯೂಟದ ಹಾಗೆ. ತಿನ್ನಲು ದೇವಸ್ಥಾನ, ಹೋಟೆಲ್ ಅಥವಾ ಸ್ವರ್ಗಕ್ಕೆ ಹೋಗಬೇಕೆಂದಿಲ್ಲ. ಅಸ್ತಿತ್ವದ ಮೂಲರೂಪ ಸದಾ ನಿಮ್ಮೊಂದಿಗೆ ಇರುತ್ತದೆ. ಅಂತರಾಳದಲ್ಲಿ ಯಾವುದೇ ಚಿತ್ರಣವಿರಲಿ, ಅದನ್ನು ದೃಢವಾಗಿ ಬೆನ್ನಟ್ಟಿ ಹೋದರೆ, ಅಲ್ಲೇ ನಿಮಗೆ ದೈವತ್ವ ಸಿಗುವುದು.

    ಯಹೂದಿ ಗುರುಗಳನ್ನು ಭೇಟಿಯಾಗಲು ಓರ್ವ ಯುವಕ ಬಂದ. ‘ಗುರುಗಳೇ, ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ನೀವು ಕಲಿಸಿದ್ದನ್ನು ಮಾಡಲು ಪ್ರಯತ್ನ ಮಾಡಿದೆ. ಆದರೆ ಏನೂ ಮಾಡಲು ಆಗುತ್ತಿಲ್ಲ. ಪ್ರತಿ ದಿನ, ಬರೀ ಪಾಪಗಳನ್ನೇ ಮಾಡುತ್ತಿದ್ದೇನೆ’ ಎಂದು ಹೇಳಿದ. ಆಗ ಗುರುಗಳು ಅವನನ್ನು ನೋಡಿ ‘ಪಾಪವನ್ನು ಬಲವಾಗಿ ಮಾಡು’ ಎಂದು ಹೇಳಿದರು. ನೀವೇನೇ ಮಾಡಿದರೂ ಅದನ್ನು ಬಲವಾಗಿ ಮಾಡಿದರೆ, ಆ ಅಂತ್ಯವನ್ನು ತಲುಪುವಿರಿ. ಉದಾಹರಣೆಗೆ, ಕೋಪ ಅವಲಕ್ಷಣದ ಅಂಶ. ಯಾರೇ ಆಗಲಿ, ಕೋಪಗೊಂಡಾಗ ಸುಂದರವಾಗಿ ಕಾಣುವುದಿಲ್ಲ. ಆದರೆ ಆ ಕೋಪವನ್ನು 24 ಗಂಟೆಗಳ ಕಾಲ ತೀವ್ರವಾಗಿ ಅನುಭವಿಸಿದರೆ, ಜ್ಞಾನೋದಯವಾಗುತ್ತದೆ. ಇದೊಂದು ಕಷ್ಟದ ದಾರಿ, 24 ಗಂಟೆಗಳು ಕೋಪದಲ್ಲಿರಬೇಕೆಂದರೆ ಅದಕ್ಕೆ ಅಸಾಧಾರಣ ಪ್ರಮಾಣದ ಶಕ್ತಿ ಬೇಕಾಗುತ್ತದೆ. 24 ಗಂಟೆಗಳು ಪ್ರೀತಿಯಿಂದ ಇರಬಹುದು, ಆದರೆ ಕೋಪದಲ್ಲಿರಲು ಸಾಧ್ಯವಿಲ್ಲ-ಅದು ನಿಮ್ಮನ್ನು ಸುಡುತ್ತದೆ.

    ಎಲ್ಲರೂ ಅವರವರ ದಾರಿಗಳನ್ನು ಕಂಡುಕೊಳ್ಳಬಹುದು. ದಾರಿ ಸಮಸ್ಯೆಯೇ ಅಲ್ಲ. ಆದರೆ ಆ ದಾರಿಯನ್ನು ಅನ್ವೇಷಿಸಲು ತೀವ್ರತೆ, ಗಮನ ಮತ್ತು ಸತ್ಯತೆ ಇಲ್ಲದಿದ್ದರೆ ಆಗ ಸಮಸ್ಯೆ ಉಂಟಾಗುತ್ತದೆ. ಯಾರೋ ‘ನೀವು ಪ್ರೇಮಮಯಿ ಆಗಿ, ಕರುಣಾಮಯಿ ಆಗಿ, ಇನ್ನೊಬ್ಬರೊಂದಿಗೆ ಒಳ್ಳೆಯದಾಗಿರಿ’ ಎಂದು ಹೇಳಿದರು. ಈಗ ಅದನ್ನು ಅಳವಡಿಸಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ. ಇದನ್ನೂ ಓದಿ: ಅಮೃತಧಾರೆ ಅಂಕಣ: ಅಸ್ತಿತ್ವದ ಭವ್ಯತೆಯೇ ವಿಶಾಲ ಎಂಬುದನ್ನು ಅರಿಯೋಣ

    ಕಳ್ಳಸಾಗಣೆದಾರ ಸಹೋದರರು: ಅಮೆರಿಕದಲ್ಲಿ ಇಬ್ಬರು ಸಹೋದರರು ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಅದರಿಂದ ಬಹಳ ದುಡ್ಡು ಸಂಪಾದಿಸಿ ಸಮಾಜದಲ್ಲಿ ಅದನ್ನು ವಿನಿಯೋಗಿಸುತ್ತಿದ್ದರು. ಹೀಗಿರುವಾಗ ಒಬ್ಬ ಸಹೋದರ ತೀರಿಕೊಂಡ. ಆಗ ಆ ಪಟ್ಟಣಕ್ಕೆ ಹೊಸ ಪಾದ್ರಿ ಬಂದಿದ್ದರು. ಹಳೆಯ ಪಾದ್ರಿ ಆ ಸಹೋದರರ ಅಂಕುಶದಲ್ಲಿ ಇದ್ದರು. ಈ ಹೊಸ ಪಾದ್ರಿ ಸಣ್ಣ ವಯಸ್ಸಿನವರು ಮತ್ತು ಸ್ವಲ್ಪ ಪ್ರಾಮಾಣಿಕರು. ನಿಮಗೆ ಗೊತ್ತಲ್ಲ, ಯುವಪೀಳಿಗೆ ಹೆಚ್ಚಾಗಿ ಮೌಲ್ಯ ಮತ್ತು ತತ್ತ್ವಗಳಲ್ಲಿ ಬದುಕುತ್ತಾರೆ. ಈ ಜಗತ್ತನ್ನು ಸ್ವಚ್ಛ ಮಾಡಬಹುದು ಎಂದು ನಂಬುತ್ತಾರೆ. ಈ ಹೊಸ ಪಾದ್ರಿ ತನ್ನ ಹಿಂದಿನವರು ಮಾಡಿದ ಪಾಪವನೆಲ್ಲ ತೊಳೆದು ಹೊಸ ಪೂಜಾಸ್ಥಳವನ್ನು ಕಟ್ಟಬೇಕೆಂದು ಅಂದುಕೊಂಡಿದ್ದರು. ಆಗ ಬದುಕಿದ್ದ ಸಹೋದರ ಆ ಪಾದ್ರಿಗೆ, ‘ನಿಮಗೆ ಹೊಸ ಪೂಜಾಸ್ಥಳವನ್ನು ಕಟ್ಟಲು ದುಡ್ಡು ಕೊಡುವೆ. ಆದರೆ ನೀವು ನನ್ನ ತಮ್ಮನ ಬಗ್ಗೆ ಮಾತಾಡುವಾಗ, ಅವನು ದೊಡ್ಡ ಸಂತನಾಗಿದ್ದ ಎಂದು ಘೊಷಿಸಬೇಕು’ ಎಂದು ಹೇಳಿದ. ಪಾದ್ರಿ ಒಪ್ಪಿದರು. ಸಮಯ ಬಂದಾಗ ಅವರು, ‘ಆ ಮನುಷ್ಯ ಕಳ್ಳಸಾಗಣೆದಾರ. ಸಮಾಜ, ಅಧಿಕಾರಿಗಳನ್ನು ಅವನು ಭ್ರಷ್ಟ ಮಾಡಿದ. ಹೆಂಡತಿಗೆ ಮೋಸ ಮಾಡಿದ. ಜನರನ್ನು ಕೆಟ್ಟದಾಗಿ ನಡೆಸಿಕೊಂಡ. ದೇವರನ್ನು ದೂಷಿಸಿದ. ಆದರೆ ಈ ಸಹೋದರನಿಗೆ ಹೋಲಿಸಿದರೆ, ಅವನು ಸಂತ’ ಎಂದು ಘೊಷಿಸಿದರು.

    ನಿಮ್ಮ ಒಳ್ಳೆಯತನವನ್ನು ಯಾವಾಗಲೂ ಇನ್ನೊಬ್ಬರ ಜೊತೆ ಹೋಲಿಸಿ ಅಳೆಯಲಾಗುತ್ತದೆ. ಅದರಿಂದ ಪ್ರಯೋಜನವಿಲ್ಲ. ನಿಮ್ಮಲ್ಲೇ ಆ ‘ಒಂದೇ ಸ್ಥಳ’ ಇದ್ದಾಗ, ಹೋಲಿಸಿ ಬದುಕುವುದು ಬೇಕಾಗುವುದಿಲ್ಲ. ಇದನ್ನೂ ಓದಿ: ಗೊತ್ತಾಗದೆ ಗಡಿ ದಾಟಿದ ಇವರು ಮರಳಿ ದೇಶಕ್ಕೆ ಕಾಲಿಡಲು 5 ವರ್ಷಗಳೇ ಬೇಕಾದವು…

    ಹಾಗಾಗಿ ಆ ಅಂತ್ಯದ ಸ್ಥಾನವನ್ನು ತಲುಪಬೇಕಾದರೆ, ಯಾವುದೇ ಒಂದು ವಿಷಯದಲ್ಲಿ ತೀವ್ರತೆ ಮುಖ್ಯವಾಗುತ್ತದೆ. ‘ಮಲ್ಟಿ-ಟಾಸ್ಕಿಂಗ್’ ಅಥವಾ ಬಹಳ ಕೆಲಸಗಳನ್ನು ಒಟ್ಟಿಗೆ ಮಾಡುವವರಿಗೆ ಇದು ಸಾಧ್ಯವಿಲ್ಲ. ಒಂದರಿಂದ ಇನ್ನೊಂದಕ್ಕೆ ಹಾರುವ ಚಂಚಲತೆಯೇ ಈಗ ದೊಡ್ಡ ಸಮಸ್ಯೆ. ಜೀವನವನ್ನು ಸರ್ಕಸ್ ಹಾಗೆ ನೋಡಲು ಹೋದರೆ ಸಮಸ್ಯೆ ಉಂಟಾಗುತ್ತದೆ. ಆದರೆ ಯಾವುದನ್ನಾದರೂ ಬಲವಾಗಿ ತೀವ್ರತೆಯಿಂದ ಮಾಡಿದರೆ, ಖಂಡಿತವಾಗಿಯೂ ಆ ದೈವತ್ವವನ್ನು ತಲುಪುವಿರಿ.

    ಅಮೃತಧಾರೆ|ನಿರ್ಣಯ ತೆಗೆದುಕೊಳ್ಳಲು ಅಂತರ್​ದೃಷ್ಟಿ ಅವಲಂಬಿಸಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts