More

    ಭಾರತದಲ್ಲಿ ಭಿಕ್ಷೆ ಬೇಡುವುದು ಒಂದು ಆಧ್ಯಾತ್ಮಿಕ ಪರಂಪರೆ ಅಂದರೆ ನಂಬ್ತೀರಾ- ಸದ್ಗುರು ವಿವರಿಸಿದ್ದಾರೆ ಓದಿ..

    ದೌರ್ಬಲ್ಯ ಎಂದರೆ ಕೇವಲ ಒಂದು ಕೈಯನ್ನೋ ಅಥವಾ ಕಾಲನ್ನೋ ಕಳೆದುಕೊಂಡಿರುವುದಲ್ಲ. ವಾಸ್ತವದಲ್ಲಿ ಹೆಚ್ಚಿನಾಂಶದ ಜನರು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಅಂಗವಿಕಲರಾಗಿದ್ದಾರೆ. ಏಕೆಂದರೆ, ಜೀವನದ ಕುರಿತ ಅವರ ಆಲೋಚನೆಗಳು ಮತ್ತು ಭಾವನೆಗಳ ವಿಧಾನವು ಆ ರೀತಿಯದಾಗಿ ಇರುತ್ತದೆ.

    ಭಾರತದಲ್ಲಿ ಭಿಕ್ಷೆ ಬೇಡುವುದು ಒಂದು ಆಧ್ಯಾತ್ಮಿಕ ಪರಂಪರೆ ಅಂದರೆ ನಂಬ್ತೀರಾ- ಸದ್ಗುರು ವಿವರಿಸಿದ್ದಾರೆ ಓದಿ..ಬಹಳ ಹಿಂದೆ ಒಬ್ಬ ಭಿಕ್ಷುಕನಿದ್ದ. ಅವನು ಎಷ್ಟು ಬಡವನೆಂದರೆ, ತನ್ನ ಜೀವಮಾನ ಪೂರ್ತಿ ಒಂದು ಹರಿದು ಹೋದ ಕೋಟನ್ನೇ ಹಾಕಿಕೊಳ್ಳುತ್ತಿದ್ದ, ಆದರೆ ಅವನು ಬಹಳ ಬುದ್ಧಿವಂತನೆಂದೇ ಪ್ರಸಿದ್ಧಿ ಹೊಂದಿದ್ದ. ಜನರು ಅವನ ಬಳಿಗೆ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಸಮಾಚಾರ ರಾಜನಿಗೆ ತಿಳಿದು, ಅವನೂ ಸಲಹೆ ಪಡೆಯಲು ಆಗಾಗ್ಗೆ ಭಿಕ್ಷುಕನ ಬಳಿಗೆ ಹೋಗತೊಡಗಿದ. ಒಂದು ದಿನ ರಾಜನು ಆತನನ್ನು ಉದ್ದೇಶಿಸಿ, ‘ನೀನು ಭಿಕ್ಷುಕನಾಗಿ ಇರಬಾರದು, ನೀನು ನನ್ನ ಮಂತ್ರಿಯಾಗಬೇಕು’ ಎಂದ. ಅದಕ್ಕೆ ಭಿಕ್ಷುಕನು, ‘ನೀನು ನನಗೆ ನೀಡುತ್ತಿರುವ ಆಹ್ವಾನದಿಂದ ನನಗೇನೂ ವ್ಯತ್ಯಾಸ ಆಗುವುದಿಲ್ಲ, ಆದರೆ ಅದರಿಂದ ನಾನು ಜನರಿಗೆ ಉಪಯೋಗ ಆಗುವುದಾದರೆ, ಈ ಆಹ್ವಾನವನ್ನು ಒಂದು ಷರತ್ತಿನ ಮೇರೆಗೆ ಒಪ್ಪಿಕೊಳ್ಳುತ್ತೇನೆ. ನನಗೆ ಅರಮನೆಯಲ್ಲಿ ಪ್ರತ್ಯೇಕವಾಗಿ ಒಂದು ಕೊಠಡಿ ಇರಬೇಕು, ಅಲ್ಲಿಗೆ ನೀವೂ ಸೇರಿ ಯಾರೂ ಪ್ರವೇಶಿಸಬಾರದು ಅಥವಾ ತಪಾಸಣೆ ಮಾಡಬಾರದು. ಯಾರಾದರೂ ಆ ಕೊಠಡಿಗೆ ಪ್ರವೇಶಿಸುವುದಾಗಲಿ ಅಥವಾ ತಪಾಸಣೆ ಮಾಡುವುದಾಗಲಿ ಮಾಡಿದರೆ, ಅಂದಿನಿಂದ ನಿಮ್ಮ ಮಂತ್ರಿಯಾಗಿ ಮುಂದುವರಿಯಲಾರೆ’ ಎಂದನು. ಅದಕ್ಕೆ ರಾಜನು ಒಪ್ಪಿಕೊಂಡು ಅದರಂತೆಯೇ ಒಂದು ಪ್ರತ್ಯೇಕ ಕೋಣೆಯನ್ನು ಕೊಟ್ಟು, ಯಾರೂ ಪ್ರವೇಶಿಸದಂತೆ ಏರ್ಪಾಟು ಮಾಡಿದ.

    ಹೀಗೆ ಕೆಲವು ವರ್ಷಗಳು ಕಳೆದವು. ಮಂತ್ರಿಯಾದ ಭಿಕ್ಷುಕನು ತನ್ನ ಹರಿದುಹೋದ ಕೋಟಿನಲ್ಲಿ ಎಲ್ಲಿಯೂ ತಿರುಗಾಡುವಂತಿರಲಿಲ್ಲ. ಅವನು ಮಂತ್ರಿಯಂತೆ ಬಟ್ಟೆಯನ್ನು ಧರಿಸುತ್ತಿದ್ದ. ಕಾಲ ಕಳೆದಂತೆ ಅವನು ರಾಜನಿಗೆ ಮತ್ತು ಜನರಿಗೆ ಬಹಳ ಹತ್ತಿರವಾಗಿ ಅವರ ಮೆಚ್ಚುಗೆಯನ್ನು ಗಳಿಸಿದ. ಅವನ ಜನಪ್ರಿಯತೆ ಹಾಗೂ ಅಸಾಮಾನ್ಯ ಬುದ್ಧಿವಂತಿಕೆಯನ್ನು ಕಂಡು, ಉಳಿದ ಮಂತ್ರಿಗಳು ಅಸೂಯೆಗೊಂಡರು. ಕೆಲವರು ತಮ್ಮೊಳಗೆ ಒಂದು ಸಂಚನ್ನು ರೂಪಿಸಲು ಆರಂಭಿಸಿದರು, ‘ಅವನು ಅವನ ಕೊಠಡಿಯಲ್ಲಿ ಏನೋ ಸಂಶಯಾಸ್ಪದವಾದುದ್ದನ್ನು ಮಾಡುತ್ತಿದ್ದಾನೆ. ಆದ್ದರಿಂದಲೇ ಅವನು ಯಾರಿಗೂ ಆ ಕೊಠಡಿಗೆ ಪ್ರವೇಶ ನೀಡುತ್ತಿಲ್ಲ, ರಾಜನನ್ನೂ ಸೇರಿಸಿ. ಅದು ರಾಜನ ವಿರುದ್ಧ ಮತ್ತು ರಾಜ್ಯದ ವಿರುದ್ಧ ಯಾವುದೋ ಯೋಜನೆ ಆಗಿರಬಹುದು. ಇಲ್ಲದಿದ್ದಲ್ಲಿ ಆ ಕೊಠಡಿಯನ್ನು ಅಷ್ಟೊಂದು ಏಕೆ ರಹಸ್ಯವಾಗಿ ಏಕೆ ಇಡಬೇಕು?’ ಹೀಗೆಲ್ಲ… ಈ ವದಂತಿ ಬೆಳೆದು ರಾಜನ ಕಿವಿಗೂ ಬಿದ್ದಿತು.

    ರಾಜನು ಕೋಪಗೊಂಡು ಒಂದು ದಿನ ಮಂತ್ರಿಯೊಂದಿಗೆ, ‘ನಾನು ನಿನ್ನ ಕೊಠಡಿಯೊಳಗೆ ಏನಿದೆ ಎಂಬುದನ್ನು ನೋಡಬೇಕು’ ಎಂದನು. ಅದಕ್ಕೆ ಮಂತ್ರಿಯು, ‘ನೀವು ನೋಡಬಹುದು, ಆದರೆ ನೀವು ಕೊಠಡಿಯನ್ನು ಪ್ರವೇಶ ಮಾಡಿದಾಕ್ಷಣ ನಾನು ಹಿಂತಿರುಗಿ ಹೋಗುತ್ತೇನೆ ಹಾಗೂ ನಾನು ನಿಮ್ಮ ಮಂತ್ರಿಯಾಗಿ ಇರುವುದಿಲ್ಲ’ ಎಂದನು. ರಾಜನಿಗೆ ಇಂತಹ ಬುದ್ಧಿವಂತ ವ್ಯಕ್ತಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ ತಾನು ಕೊಠಡಿಯನ್ನು ಪ್ರವೇಶಿಸುವ ಇಚ್ಛೆಯನ್ನು ನಿಗ್ರಹಿಸಿಕೊಂಡನು.

    ಆದಾಗ್ಯೂ, ಕೆಲವು ದಿನಗಳ ನಂತರ ರಾಜನು ತಾಳ್ಮೆ ಕಳೆದುಕೊಂಡನು ಹಾಗೂ ಇತರರೂ ರಾಜನಿಗೆ ಕಿವಿ ಚುಚ್ಚುತ್ತಿದ್ದರು, ‘ನೀನು ರಾಜ, ಅದ್ಹೇಗೆ ಅವನು ನಿನ್ನ ಅರಮನೆಯಲ್ಲಿ ರಹಸ್ಯವನ್ನು ನಿನ್ನಿಂದ ಮುಚ್ಚಿಡುತ್ತಿದ್ದಾನೆ’. ಸ್ವಲ್ಪ ದಿನಗಳು ಕಳೆದಮೇಲೆ, ರಾಜನು ಮಂತ್ರಿಗೆ, ‘ನಿನ್ನ ಕೊಠಡಿಯನ್ನು ನೋಡಲೇಬೇಕು’ ಎಂದು ಒತ್ತಾಯಿಸಿದ. ಮಂತ್ರಿಯು ಅದಕ್ಕೆ ಒಪ್ಪಿದ. ರಾಜನು ಕೊಠಡಿಯೊಳಕ್ಕೆ ಹೋದಾಗ ಅಲ್ಲಿ ಏನನ್ನೂ ಕಾಣಲಿಲ್ಲ! ಆ ಕೋಣೆ ಖಾಲಿಯಾಗಿತ್ತು. ಭಿಕ್ಷುಕನು ಹಾಕಿಕೊಳ್ಳುತ್ತಿದ್ದ ಹಳೆಯ ಹರಕಲು ಕೋಟು ಒಂದು ಗೂಟದಲ್ಲಿ ನೇತಾಡುತ್ತಿತ್ತು. ಇದನ್ನೆಲ್ಲ ನೋಡಿ ರಾಜನು, ‘ಇದನ್ನು ರಹಸ್ಯವಾಗಿ ಇಟ್ಟಿದ್ದೇಕೆ? ಇಲ್ಲಿ ಏನೂ ಇಲ್ಲ’ ಎಂದನು. ಮಂತ್ರಿಯು, ‘ನಾನು ಹಗಲು ಹೊತ್ತಿನಲ್ಲಿ ಮಂತ್ರಿ. ರಾತ್ರಿಯಲ್ಲಿ ನಾನು ಆ ಕೋಟನ್ನು ಹಾಕಿಕೊಂಡು ನೆಲದ ಮೇಲೆ ಮಲಗುತ್ತಿದ್ದೆ. ಈ ರೀತಿಯಾಗಿ ನಾನು ಮಂತ್ರಿಯೆಂಬ ಅಧಿಕಾರ ಮದದಿಂದ ಎಂದಿಗೂ ಬದುಕಲಿಲ್ಲ. ಆದರೆ ಈಗ ನೀವು ಒಪ್ಪಂದವನ್ನು ಮುರಿದಿದ್ದೀರಿ, ಇದು ಇಲ್ಲಿಗೆ ಮುಗಿಯಿತು’ ಎಂದು ಹೇಳಿ ಹಳೆಯ ಕೋಟನ್ನು ಧರಿಸಿ ಹೊರಟು ಹೋದ.

    ಭಾರತದಲ್ಲಿ ಭಿಕ್ಷೆ ಬೇಡುವುದು ಒಂದು ಆಧ್ಯಾತ್ಮಿಕ ಪರಂಪರೆಯಾಗಿದೆ. ಇದರ ಒಂದು ಅರ್ಥವೆಂದರೆ, ನೀವು ನಿಮ್ಮ ಆಹಾರವನ್ನು ಆಯ್ಕೆ ಮಾಡುವಂತಿಲ್ಲ; ಜನರು ನಿಮಗೆ ಏನನ್ನು ನೀಡುತ್ತಾರೆಯೋ ಅದನ್ನು ತಿನ್ನಬೇಕು. ಆಧ್ಯಾತ್ಮಿಕ ಪಥದಲ್ಲಿರುವ ವ್ಯಕ್ತಿಯು ಮನೆಯ ಮುಂದೆ ನಿಂತು ಯಾಚಿಸಿದರೆ, ಅದೊಂದು ತಮ್ಮ ಭಾಗ್ಯವೆಂಬಂತೆ ಜನರು ಭಾವಿಸಿ ಆಹಾರವನ್ನು ನೀಡುತ್ತಿದ್ದರು. ಇಂದು ಈ ಪರಂಪರೆಯನ್ನು ದುರುಪಯೋಗಪಡಿಸಿ ಕೊಳ್ಳಲಾಗುತ್ತಿದೆ. ಎಷ್ಟೋ ಜನರು ಆಧ್ಯಾತ್ಮಿಕತೆ ಎಂದು ಅರಸುವವರ ಸಮವಸ್ತ್ರವನ್ನು ಧರಿಸುತ್ತಾರೆ, ಆದರೆ ಅವರು ಕೇವಲ ಹಣ ಮತ್ತು ಆಹಾರವನ್ನು ಹುಡುಕುತ್ತಿರುವ ಸಾಧಾರಣ ಭಿಕ್ಷುಕರಾಗಿದ್ದಾರೆ. ಆದರೆ ಜನರು ಪ್ರಜ್ಞಾಯುತವಾಗಿ ಯಾಚಕರಾದರೆ, ಅದಕ್ಕೊಂದು ಸಂಪೂರ್ಣವಾದ, ಭಿನ್ನವಾದ ಅರ್ಥವಿದೆ ಹಾಗೂ ಸಾಧ್ಯತೆಗಳಿವೆ.

    ಯಾರಾದರೂ ನಿಮ್ಮ ಮುಂದೆ ಕೈಚಾಚಿದಾಗ, ನಿಮಗೆ ಅವರು ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದೆನಿಸಿದರೆ, ನೀವು ಅವರಿಗೆ ಏನನ್ನೂ ಕೊಡದೆ ಮುಂದೆ ಹೋಗಬಹುದು. ಅವರಿಗೆ ನಿಜವಾದ ಅಗತ್ಯವಿದೆ ಎಂದೆನಿಸಿದರೆ, ಒಬ್ಬ ಮನುಷ್ಯನಾಗಿ ಅದಕ್ಕೆ ಸ್ಪಂದಿಸಬೇಕಾಗುತ್ತದೆ. ರಸ್ತೆಯಲ್ಲಿ ಯಾರದೋ ಒಬ್ಬರ ಮುಂದೆ ಕೈಚಾಚುವುದು ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಸ್ವಲ್ಪ ಯೋಚಿಸಿ. ಆ ವ್ಯಕ್ತಿ ಅವನಿರುವ ಸ್ಥಿತಿಯಿಂದಾಗಿ ಆ ರೀತಿ ಮಾಡುತ್ತಾನೆ. ಒಬ್ಬ ಭಿಕ್ಷುಕನು ಅಸಹಾಯಕತೆಯಿಂದ ಆ ರೀತಿ ಮಾಡುತ್ತಾನೆ, ಆದರೆ ಒಬ್ಬ ಸಂನ್ಯಾಸಿಯು ತನ್ನದೇ ಬೆಳವಣಿಗೆಗಾಗಿ ಪ್ರಜ್ಞಾಯುತವಾಗಿ ಹಾಗೆ ಮಾಡುತ್ತಾನೆ. ಆದರೆ ಭಿಕ್ಷುಕನಿಗೆ ಅಂತಹ ಶ್ರೇಷ್ಠ ಉದ್ದೇಶ ಇರುವುದಿಲ್ಲ. ಅವನು ತಾನಾಗಿಯೇ ತನ್ನನ್ನು ಪೋಷಿಸಿಕೊಳ್ಳಲು ಅಸಮರ್ಥನಾಗಿ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

    ಇಲ್ಲಿ ಒಂದು ವಿಷಯವನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ದೌರ್ಬಲ್ಯ ಎಂದರೆ ಕೇವಲ ಒಂದು ಕೈಯನ್ನೋ ಅಥವಾ ಕಾಲನ್ನೋ ಕಳೆದುಕೊಂಡಿರುವುದಲ್ಲ. ನೀವು ಬದುಕಿನ ಕುರಿತು ಹೇಗೆ ಯೋಚಿಸುವಿರೋ ಅಥವಾ ಭಾವಿಸುವಿರೋ, ಅಲ್ಲಿಯೂ ನೀವು ಅಶಕ್ತರಾಗಬಹುದು. ವಾಸ್ತವದಲ್ಲಿ ಹೆಚ್ಚಿನಾಂಶದ ಜನರು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಅಂಗವಿಕಲರಾಗಿದ್ದಾರೆ. ಏಕೆಂದರೆ, ಜೀವನದ ಕುರಿತ ಅವರ ಆಲೋಚನೆಗಳು ಮತ್ತು ಭಾವನೆಗಳ ವಿಧಾನವು ಆ ರೀತಿಯದಾಗಿ ಇರುತ್ತದೆ. ಹಾಗೆಯೇ ಭಿಕ್ಷುಕನು ಸಹ, ಜೀವನಕ್ಕಾಗಿ ‘ಭಿಕ್ಷೆ ಬೇಡುವುದೇ’ ಸುಲಭಮಾರ್ಗವೆಂದು ಯೋಚಿಸುತ್ತಾನೆ.

    ಒಬ್ಬ ಆಧ್ಯಾತ್ಮಿಕ ವ್ಯಕ್ತಿಯು ಎಲ್ಲದರಿಂದ ತನ್ನನ್ನು ಮುಕ್ತಿಗೊಳಿಸಿಕೊಳ್ಳುವುದಕ್ಕಾಗಿ ಯಾಚಿಸುತ್ತಾನೆ. ‘ನಾನು ನನ್ನದೇ ಸ್ವಂತ ಮನೆಗಾಗಿ ಸಂಪಾದಿಸುತ್ತೇನೆ’ ಎನ್ನುವುದು ನಿಮ್ಮ ಅಹಂನ ಒಂದು ದೊಡ್ಡ ಭಾಗವಾಗಿದೆ. ಒಂದು ದಿನ ಗೌತಮಬುದ್ಧನ ಬಳಿ ಒಬ್ಬ ಅತಿಥಿಯು ಸ್ವಲ್ಪ ಹೂಗಳನ್ನು ತೆಗೆದುಕೊಂಡು ಬಂದ. ನಮ್ಮ ಸಂಸ್ಕೃತಿಯ ಒಂದು ಭಾಗವೆಂದರೆ, ಜನರು ಅವರ ಗುರುಗಳನ್ನು ಭೇಟಿ ಮಾಡಲು ಹೋಗುವಾಗ ಅವರಿಗೆ ಅರ್ಪಿಸಲು ಹೂಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆ ವ್ಯಕ್ತಿ ಬಂದಾಗ ಗೌತಮನು ಅವನನ್ನು ನೋಡಿ, ‘ಅದನ್ನು ಕೆಳಗೆ ಹಾಕು’ ಎಂದನು. ಆ ವ್ಯಕ್ತಿ ಸುತ್ತಲೂ ನೋಡುತ್ತ, ‘ಏನನ್ನು ಕೆಳಗೆ ಹಾಕಲಿ?’ ಎಂದು ಕೇಳಿದ. ಅವನು ಪುಷ್ಪಗಳನ್ನು ಕೆಳಗೆ ಹಾಕಬೇಕೆಂದುಕೊಂಡು, ಅವನ್ನು ಕೆಳಗೆ ಹಾಕಿದನು. ನಂತರ ನಿಧಾನವಾಗಿ, ‘ನಾನು ನಿಮಗಾಗಿ ಇದನ್ನು ತೆಗೆದುಕೊಂಡು ಬಂದಿದ್ದೇನೆ’ ಎಂದನು. ಗೌತಮನು ಮತ್ತೊಮ್ಮೆ, ‘ಅದನ್ನು ಕೆಳಗೆ ಹಾಕು’ ಎಂದನು. ಆ ವ್ಯಕ್ತಿಯು, ‘ನಾನು ಪುಷ್ಪಗಳನ್ನು ಕೆಳಗೆ ಹಾಕಿದ್ದೇನೆ. ಅವುಗಳನ್ನು ನಾನು ನಿಮಗಾಗಿ ಉಡುಗೊರೆಯಾಗಿ ತಂದಿದ್ದೆ, ಆದರೆ ನೀವು ಅದನ್ನು ಕೆಳಗೆ ಹಾಕೆಂದಿರಿ, ನಾನು ಹಾಗೆಯೇ ಮಾಡಿದ್ದೇನೆ, ನಾನು ಇನ್ನೇನನ್ನು ಕೆಳಗೆ ಹಾಕಲಿ?’ ಎಂದು ಕೇಳಿದ. ಅದಕ್ಕೆ ಗೌತಮನು, ‘ಇಲ್ಲ, ನೀನು ನಿನ್ನನ್ನೇ ಮೊದಲಿಗೆ ಕೆಳಗೆ ಹಾಕಿಕೊಳ್ಳಬೇಕು, ಹೂಗಳು ಸಮಸ್ಯೆಯಲ್ಲ. ನೀನು ನನಗಾಗಿ ಕೊಯ್ದುಕೊಂಡು ಬಂದಿದ್ದೀಯೆ, ಅದು ಸರಿಯೆ, ನಾನು ಅವುಗಳನ್ನು ಸ್ವೀಕರಿಸುತ್ತೇನೆ, ಆದರೆ ನೀನು ನಿನ್ನನ್ನು ಕೆಳಗೆ ಹಾಕಬೇಕು(‘ನಾನು’ ಎಂಬ ಅಹಂ ತೊರೆಯಬೇಕು)’ ಎಂದನು.

    ಯಾಚನೆಯು ನಿಮ್ಮನ್ನು ನೀವು ತೊರೆದುಕೊಳ್ಳುವುದಕ್ಕೆ ಒಂದು ಸಾಧನವಾಗಿ ಉಪಯೋಗಿಸಲ್ಪಡುತ್ತಿತ್ತು. ಏಕೆಂದರೆ, ಜೀವನೋಪಾಯಕ್ಕಾಗಿ ನೀವು ನಿಮ್ಮನ್ನೇ ಶೇಖರಿಸಿಕೊಳ್ಳುತ್ತೀರಿ. ಆದರೆ ಮತ್ತೊಬ್ಬರ ಮುಂದೆ ಕೈ ಚಾಚಿದಾಗ ನೀವು ನಿಮ್ಮನ್ನು ತೊರೆದುಕೊಳ್ಳುತ್ತೀರಿ. ನಿಮಗೆ ಜೀವನ ನಿರ್ವಹಣೆಗಾಗಿ ಸಂಪಾದನೆ ಮಾಡುವ ಸಾಮರ್ಥ್ಯವಿದೆ, ರಾಜ್ಯವನ್ನು ಆಳುವ ಸಾಮಾರ್ಥ್ಯವಿದೆ ಎಂದು ತಿಳಿದಿದ್ದರೂ ಸಂಪೂರ್ಣ ಪ್ರಜ್ಞಾಯುತರಾಗಿ ನೀವು ಯಾಚನೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ಮಾನವನಲ್ಲಿ ಅದೊಂದು ಅದ್ಭುತವಾದ ಬದಲಾವಣೆ. ಆದ್ದರಿಂದ ನಮ್ಮ ಸಂಸ್ಕೃತಿಯಲ್ಲಿ ವರ್ಷಕ್ಕೊಮ್ಮೆಯಾದರೂ ನೀವು ಭಿಕ್ಷೆ ಬೇಡಲು ಹೋಗಬೇಕು, ಆಗ ನೀವು ನಿಮ್ಮನ್ನು ದೊಡ್ಡವನೆಂದು ಯೋಚಿಸುವುದಿಲ್ಲ. ಜನರು ನಿಮಗೆ ಆಹಾರ ನೀಡಬಹುದು ಅಥವಾ ಹೋಗೆಂದು ಹೇಳಬಹುದು. ಆದರೂ ಪರವಾಗಿಲ್ಲ, ಭಿಕ್ಷುಕನು ಅಲ್ಪಮನುಷ್ಯನಲ್ಲ.

    ಕರೊನಾ ವೈರಸ್​ ಶ್ರೀಮಂತರ ರೋಗ: ವಿದೇಶದಿಂದ ಹೊತ್ತು ತಂದಿದ್ದಾರೆಂದ ತಮಿಳುನಾಡು ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts