Thursday, 20th September 2018  

Vijayavani

Breaking News

ಜನರಿಗೆ ತೈಲ ಬರೆ, ಕಾಂಗ್ರೆಸ್ ಅಸಮಾಧಾನ

Sunday, 08.07.2018, 3:04 AM       No Comments

ಡಿಸಿಎಂ ಪರಮೇಶ್ವರ್ ಬಳಿ ದೂರಿದ ಮುಖಂಡರು | ಸಮನ್ವಯ ಸಮಿತಿ ಸಭೆಯಲ್ಲಿ ರ್ಚಚಿಸಲು ಒತ್ತಾಯ

ಬೆಂಗಳೂರು: ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಡೀಕರಣ ಸಲುವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತೆರಿಗೆ ವಿಧಿಸಿರುವ ಕ್ರಮಕ್ಕೆ ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷ ಕಾಂಗ್ರೆಸ್​ನಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮರುಪರಿಶೀಲನೆ ಮಾಡುವಂತೆ ಒತ್ತಡ ಹೆಚ್ಚಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೈಲಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಭಾಗಿಯಾಗಿರುವ ಸರ್ಕಾರದಲ್ಲಿಯೇ ತೆರಿಗೆ ವಿಧಿಸಿದರೆ ದೇಶಾದ್ಯಂತ ಬೆಲೆ ಏರಿಕೆ ವಿರುದ್ಧ ದನಿ ಎತ್ತುವುದು ಹೇಗೆ ಎಂದು ಕೈ ಮುಖಂಡರು ಪ್ರಶ್ನಿಸುತ್ತಿದ್ದಾರೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ಮಾಡಿರುವ ಪಕ್ಷದ ಮುಖಂಡರು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ತೆರಿಗೆ ರದ್ದು ಮಾಡಿಸುವಂತೆ ಒತ್ತಾಯಿಸಿದ್ದಾರೆ. ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿಯೂ ಈ ಬಗ್ಗೆ ದನಿ ಎತ್ತಬೇಕು. ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡದೇ ಬೆಲೆ ಏರಿಕೆ ನಿರ್ಧಾರಗಳನ್ನು ಘೋಷಣೆ ಮಾಡದಂತೆ ಮುಖ್ಯಮಂತ್ರಿ ಅವರಿಗೆ ಸೂಚನೆ ನೀಡಬೇಕೆಂದು ಮುಖಂಡರು ಪರಮೇಶ್ವರ್​ಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖಂಡರ ಮನವಿ ಆಲಿಸಿದ ಪರಮೇಶ್ವರ್, ಈ ಬಗ್ಗೆ ಮುಂದಿನ ಸಮನ್ವಯ ಸಮಿತಿ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಒಪ್ಪಿಗೆ ಪಡೆಯಲಾಗಿದೆ

ಬಜೆಟ್ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹಾಕುವ ವಿಚಾರದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಒತ್ತಡ ಹೆಚ್ಚಾದರೆ ಮರು ಪರಿಶೀಲನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಆಪ್ತಮೂಲಗಳು ಹೇಳುತ್ತವೆ. ಪೆಟ್ರೋಲ್ ಪ್ರತಿ ಲೀ.ಗೆ 1.14 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್​ಗೆ 1.12 ರೂ. ತೆರಿಗೆ ಹಾಕಲಾಗಿದೆ. ಇದರಿಂದ 1,000 ಕೋಟಿ ರೂ. ತೆರಿಗೆ ಬರಬಹುದೆಂದು ಅಂದಾಜು ಮಾಡಲಾಗಿದೆ.

ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಯದ್ವಾತದ್ವಾ ಬೆಲೆ ಏರಿಕೆ ಮಾಡಿದರೂ ಮಾತನಾಡದ ಬಿಜೆಪಿ ನಾಯಕರು ಡೀಸೆಲ್ ದರ ಒಂದು ರೂಪಾಯಿ ಹೆಚ್ಚಳ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾಲ್ಕು ದಿನದಲ್ಲಿ ಟೀಕೆಗೆಲ್ಲ ಉತ್ತರಿಸುತ್ತೇನೆ.

| ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ

ವಿಧಾನಮಂಡಲ ಉಭಯ ಸದನಗಳ ಕಾರ್ಯಕಲಾಪಗಳಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಕಡ್ಡಾಯವಾಗಿ ಹಾಜರಿರಬೇಕು. ಸ್ಪೀಕರ್ ಹಾಗೂ ಸಭಾಪತಿ ಸಚಿವರ ಗೈರು ಹಾಜರಿ ಬಗ್ಗೆ ಪದೇಪದೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಸದನಕ್ಕೆ ಬನ್ನಿ.

| ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ

ರೈತರ, ವಿದ್ಯಾರ್ಥಿಗಳ ನಿಲ್ಲದ ಆಕ್ರೋಶ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ‘ಸಮ್ಮಿಶ್ರ’ ಬಜೆಟ್​ನಲ್ಲಿ ರೈತರ ಸಾಲಮನ್ನಾ, ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ಗೊಂದಲ, ಉತ್ತರ ಕರ್ನಾಟಕ ಮತ್ತು ಕರಾವಳಿಯ ಹಲವು ಭಾಗಗಳಿಗೆ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬ ಆಕ್ರೋಶ ಶನಿವಾರವೂ ಮುಂದುವರಿದಿದೆ.

ವಿದ್ಯಾರ್ಥಿಗಳಿಗೆ ಲಾಠಿ ಏಟು: ತುಮಕೂರಿನಲ್ಲಿ ಉಚಿತ ಬಸ್​ಪಾಸ್​ಗಾಗಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ರಸ್ತೆ ತಡೆಗೆ ಮುಂದಾದ ವೇಳೆ ತಡೆಯಲು ಯತ್ನಿಸಿ ಸಂಯಮ ಕಳೆದುಕೊಂಡ ಪೊಲೀಸರು, ಲಾಠಿ ಬೀಸಿ ಚದುರಿಸಲು ಯತ್ನಿಸಿದರು. ವಿದ್ಯಾರ್ಥಿಗಳು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದಾಗ ಸಿಟ್ಟಾದ ಪೊಲೀಸರು, ಮುಖಂಡರ ಕೊರಳಪಟ್ಟಿ ಹಿಡಿದು ಎಳೆದಾಡಿದರು. ಆಕ್ರೋಶಗೊಂಡ ವಿದ್ಯಾರ್ಥಿಗಳು ರಸ್ತೆ ಮಧ್ಯೆ ನುಗ್ಗಲು ಯತ್ನಿಸಿ, ಪೊಲೀಸರು ಲಾಠಿ ಬೀಸಿದಾಗ ಸ್ಥಳದಿಂದ ಕಾಲ್ಕಿತ್ತರು. ಪ್ರಕರಣ ಸಂಬಂಧ ಪಿಎಸ್ಸೈ ರಾಘವೇಂದ್ರ ಹಾಗೂ ಗುಪ್ತಮಾಹಿತಿ ಸಂಗ್ರಹಣೆ ಸಿಬ್ಬಂದಿ ಸದಾನಂದ್ ಅವರನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ.

ತೆರಿಗೆ ಹೆಚ್ಚಿಸಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಯೇ ಬೇಕಿಲ್ಲ, ಇಂಥ ಕಾರ್ಯಕ್ಕೆ ಗುಮಾಸ್ತ ಸಾಕು. ನಾವು ಕುಮಾರಸ್ವಾಮಿ ಕುಟುಂಬದ ವೈಯಕ್ತಿಕ ವಿಚಾರ ವನ್ನೇನೂ ಪ್ರಶ್ನಿಸುತ್ತಿಲ್ಲ. ಬಜೆಟ್ ಅನ್ಯಾಯ ಪ್ರಶ್ನಿಸುತ್ತಿದ್ದೇವೆ. ಈ ಕುರಿತು ಸದನದಲ್ಲಿ ಹಾಗೂ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ.

| ಕೆ.ಎಸ್.ಈಶ್ವರಪ್ಪ ಶಾಸಕ

ನಾಳೆ ಬೆಂಗಳೂರಿನ ಧರಣಿ: ರೈತ ಮುಖಂಡರ ಸಭೆಯಲ್ಲಿ ಕೊಟ್ಟ ಮಾತಿನಂತೆ ರೈತರ ಎಲ್ಲ ರೀತಿಯ ಸಾಲಮನ್ನಾಗೆ ಆಗ್ರಹಪಡಿಸಿ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಜು.9ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದೆಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸಂಘಟನಾತ್ಮಕ ಹೋರಾಟ: ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ನೀಡಲು ಸಾಧ್ಯವಾಗುವುದಾದರೆ, ಕರಾವಳಿ ಜಿಲ್ಲೆಯ ನೀರಾವರಿಗೆ ಸಾವಿರ ಕೋಟಿ ರೂ. ಮಂಜೂರುಗೊಳಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಸರ್ಕಾರದ ಈ ತಾರತಮ್ಯ ನೀತಿ ವಿರುದ್ಧ ಕರಾವಳಿ ಶಾಸಕರು ಸಂಘಟನಾತ್ಮಕ ಹೋರಾಟಕ್ಕೆ ಇಳಿದಿದ್ದು, ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ವಿಧಾನಪರಿಷತ್​ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ

ದಶಕಗಳಿಂದ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದ್ದು, ಬಜೆಟ್​ನಲ್ಲಿ ಆದ್ಯತೆ ನೀಡಿಲ್ಲ ಎಂಬ ವಿಷಯ ಮುಂದಿಟ್ಟುಕೊಂಡು ಪ್ರತ್ಯೇಕ ರಾಜ್ಯದ ಕೂಗು ಹಾಕುವುದು ಸರಿಯಲ್ಲ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಬೆಳಗಾವಿಯಲ್ಲಿ ತಿಳಿಸಿದ್ದಾರೆ. ಕೆಲವರು ಸ್ವಾರ್ಥ ಸಾಧನೆಗಾಗಿ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top